ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪುಟ್ನಿಕ್‌ ನೆನಪು

Last Updated 30 ಮಾರ್ಚ್ 2019, 19:46 IST
ಅಕ್ಷರ ಗಾತ್ರ

* 1957ರ ಅಕ್ಟೋಬರ್‌ ತಿಂಗಳಲ್ಲಿ ನಡೆದ ಮಹತ್ವದ ವಿದ್ಯಮಾನ ಏನು?
62 ವರ್ಷಗಳ ಹಿಂದೆ, ಅಂದರೆ 1957ರ ಅಕ್ಟೋಬರ್ 4ರಂದು ಮನುಕುಲದ ಪ್ರಥಮ ಕೃತಕ ಉಪಗ್ರಹವನ್ನು ಕಕ್ಷೆಗೆ ಕಳುಹಿಸಲಾಯಿತು. ಅಲ್ಲಿಯವರೆಗೆ ಭೂಮಿಗೆ ಇದ್ದಿದ್ದು ಚಂದ್ರ ಎಂಬ ಒಂದೇ ಒಂದು ನೈಸರ್ಗಿಕ ಉಪಗ್ರಹ. ಮೊದಲ ಕೃತಕ ಉಪಗ್ರಹದ ಹೆಸರು ಸ್ಪುಟ್ನಿಕ್‌–1. ಇದನ್ನು ಹಾರಿಬಿಟ್ಟಿದ್ದು ಹಿಂದಿನ ಸೋವಿಯತ್ ಒಕ್ಕೂಟ (ಇಂದಿನ ರಷ್ಯಾ). ಸ್ಪುಟ್ನಿಕ್ ಅಂದರೆ ರಷ್ಯನ್ ಭಾಷೆಯಲ್ಲಿ ‘ಸಹಯಾತ್ರಿಕ’ ಎನ್ನುವ ಅರ್ಥವಿದೆ.

* ಆ ಉ‍ಪಗ್ರಹ ಎಷ್ಟು ದೊಡ್ಡದಿತ್ತು?
ಅದು ಒಂದು ಬಾಸ್ಕೆಟ್‌ಬಾಲ್‌ ಗಾತ್ರದ್ದಾಗಿತ್ತು. ಅದರ ತೂಕ 83.6 ಕೆ.ಜಿ. 1958ರ ಜನವರಿ 4ರವರೆಗೂ ಕಕ್ಷೆಯಲ್ಲಿದ್ದ ಸ್ಪುಟ್ನಿಕ್‌, ಭೂಮಿಯತ್ತ ಮರಳಿ, ವಾತಾವರಣ ಪ್ರವೇಶಿಸುತ್ತಿದ್ದಂತೆಯೇ ಉರಿದು ಬೂದಿಯಾಯಿತು.

* ಈ ಸಾಧನೆಗೆ ವಿಶ್ವದ ಪ್ರತಿಕ್ರಿಯೆ ಹೇಗಿತ್ತು?
ಇದು ವಿಶ್ವವನ್ನು ಆಶ್ಚರ್ಯಕ್ಕೆ ನೂಕಿತ್ತು. ಮನುಷ್ಯ ಕಡೆಗೂ ಭೂಮಿಯ ಭೀಮ ಹಿಡಿತದಿಂದ ತಪ್ಪಿಸಿಕೊಂಡಿದ್ದ. ಆದರೆ, ಇದನ್ನು ಕಂಡು ಅಮೆರಿಕನ್ನರು ಆಘಾತಕ್ಕೆ ಒಳಗಾದಂತಿದ್ದರು. ತಾವೇ ಒಂದು ಉಪಗ್ರಹವನ್ನು ಹಾರಿಬಿಡುವ ಆಲೋಚನೆಯಲ್ಲಿ ಇದ್ದ ಅಮೆರಿಕನ್ನರು, ತಮಗಿಂತ ಮೊದಲು ಈ ಕೆಲಸವನ್ನು ರಷ್ಯನ್ನರು ಮಾಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ.

* ನಂತರದ ತಿಂಗಳಿನಲ್ಲಿ ಅಮೆರಿಕನ್ನರಿಗೆ ಕಾದಿದ್ದ ಇನ್ನೊಂದು ಆಘಾತ ಏನು?
ಅಮೆರಿಕನ್ನರು ಅವಸರಲ್ಲಿ ತಮ್ಮ ಉಪಗ್ರಹ ಹಾರಿಬಿಡುವ ಯೋಜನೆ ಸಿದ್ಧಪಡಿಸಿದರು. ಅದು ಡಿಸೆಂಬರ್‌ನಲ್ಲಿ ಉಡಾವಣೆ ಆಗಬೇಕಿತ್ತು. ಆದರೆ ನವೆಂಬರ್‌ 3ರಂದು ಇನ್ನೊಂದು ಕೃತಕ ಉಪಗ್ರಹವನ್ನು ರಷ್ಯನ್ನರು ಉಡಾವಣೆ ಮಾಡಿದರು. ಇದಕ್ಕೆ ಅವರು ಸ್ಪುಟ್ನಿಕ್‌–2 ಎಂದು ಹೆಸರಿಟ್ಟಿದ್ದರು. ಅಲ್ಲದೆ, ಅದರಲ್ಲಿ ಒಂದು ನಾಯಿಯನ್ನು (ಅದರ ಹೆಸರು ಲಾಯ್ಕಾ) ಕೂಡ ಬಾಹ್ಯಾಕಾಶಕ್ಕೆ ಕಳುಹಿಸಿದ್ದರು.

* ಇದೊಂದು ಮೈಲಿಗಲ್ಲು ಎಂದು ಪರಿಗಣಿತವಾಗಿದ್ದು ಏಕೆ?
ಸ್ಪುಟ್ನಿಕ್‌ ಉಪಗ್ರಹ ಉಡಾವಣೆ ಮಾಡಿದ್ದು ಬಾಹ್ಯಾಕಾಶ ಯುಗದ ಆರಂಭಕ್ಕೆ ನಾಂದಿ ಹಾಡಿತು. ಇದು ರಷ್ಯನ್ನರ ತಾಂತ್ರಿಕ ಮುನ್ನಡೆಯನ್ನು ಹೊರಜಗತ್ತಿಗೆ ತೋರಿಸಿದ ಕಾರಣ, ಇದು ಅವರ ಪಾಲಿಗೆ ದೊಡ್ಡ ವಿಜಯ ಕೂಡ ಆಗಿತ್ತು. ಇದಾದ ನಾಲ್ಕು ವರ್ಷಗಳ ನಂತರ, ಅಂದರೆ 1961ರ ಏಪ್ರಿಲ್‌ 12ರಂದು, ರಷ್ಯಾದ ಗಗನಯಾನಿ ಮೇಜರ್ ಯೂರಿ ಗಾಗರಿನ್ ಅವರು ಭೂಮಿಯ ಸುತ್ತ ಒಂದು ಸುತ್ತು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT