ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಭವನದಲ್ಲಿ ಮತ್ತೆ ‘ಚುಕು ಬುಕು...’

Last Updated 28 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಜವಾಹರ ಬಾಲಭವನದಲ್ಲಿ ಪುಟಾಣಿ ರೈಲು ಮತ್ತೆ ಓಡಾಟ ಆರಂಭಿಸಲಿದೆ.ಕಬ್ಬನ್ ಉದ್ಯಾನದಲ್ಲಿ ಪುಟಾಣಿಗಳ ಆಕರ್ಷಣೆಯ ಕೇಂದ್ರ ವಾಗಿದ್ದ ರೈಲುಓಡಾಟ ಕೆಲ ತಾಂತ್ರಿಕ ಕಾರಣಗಳಿಂದ ಜನವರಿಯಿಂದ ಸ್ಥಗಿತವಾಗಿತ್ತು. ಪರೀಕ್ಷೆ ಮುಗಿಯುವ ಹೊತ್ತಿಗೆ ರೈಲು ಓಡುವ ನಿರೀಕ್ಷೆ ಇದೆ.

‘ರೈಲ್ವೆ ಇಲಾಖೆಯ ಎಂಜಿನಿಯರ್ ವಿಭಾಗದವರು ಎಂಜಿನ್ ಬದಲಾಯಿಸಿ, ಓಡಾಟದ ಟ್ರಯಲ್ ನಡೆಸಿದ್ದಾರೆ. ಟ್ರ್ಯಾಕ್‌ನಲ್ಲಿ ಹಾಕಿರುವ ಜೆಲ್ಲಿ ಕಲ್ಲು ಗಳು ಸೆಟ್ಲ್ ಆಗಬೇಕಿದ್ದು, ರೈಲು ಅಲುಗಾಡುತ್ತಿರುವುದರಿಂದ ಸದ್ಯಕ್ಕೆ ಮಕ್ಕಳಿಗೆ ಪ್ರಯಾಣಿಸಲು ಸಾಧ್ಯವಾಗದು. ವಾರದಷ್ಟೊತ್ತಿಗೆ ರೈಲು ಓಡಲಿದೆ’ ಎನ್ನುತ್ತಾರೆ ಜವಾಹರ ಬಾಲಭವನ ಸೊಸೈಟಿಯ ಕಾರ್ಯದರ್ಶಿ ರತ್ನಾ ಬಿ. ಕಲಂದಾನಿ.

ಪುಟಾಣಿ ರೈಲಿನ ಜತೆಗೆ ಮೇರಿ ಕೋಲಂಬಸ್, ಸಣ್ಣ ರೈಲು ಮತ್ತು ಬ್ರೇಕ್ ಡಾನ್ಸ್ ಮೋಜಿನ ಮನೋರಂಜನಾ ವ್ಯವಸ್ಥೆ ಇದೆ. ಜಾರು ಬಂಡೆ, ಉಯ್ಯಾಲೆಯಲ್ಲಿ ಮಕ್ಕಳು ಆಟವಾಡಬಹುದು. ಆಟಿಕೆಗಳೂ ಇವೆ. ಮಕ್ಕಳಿಗಾಗಿಯೇ 425 ಆಸನ ಸಾಮರ್ಥ್ಯದ ಬಯಲು ಲಿಟ್ಲ್ ಥಿಯೇಟರ್ ಮತ್ತೊಂದು ಆಕರ್ಷಣೆ.

ಟ್ರಾಫಿಕ್ ಪಾರ್ಕ್
ಮಕ್ಕಳಿಗೆ ಸಾರಿಗೆ ವ್ಯವಸ್ಥೆ, ಸಂಚಾರದ ಅರಿವು ಮತ್ತು ಮಾರ್ಗ ದರ್ಶನ ನೀಡಲು ಟ್ರಾಫಿಕ್ ಪಾರ್ಕ್ ಸ್ಥಾಪಿಸಲಾಗಿದೆ. ಸಿಬ್ಬಂದಿಯ ಕೊರತೆಯ ಕಾರಣ ಈ ಪಾರ್ಕ್ ಚಟುವಟಿಕೆ ಸ್ಥಗಿತವಾಗಿದೆ. ಸಂಬಂಧಿಸಿದ ಇಲಾಖೆಗೆ ಬಾಲಭವನದ ಕಾರ್ಯದರ್ಶಿ ಪತ್ರ ಬರೆದಿದ್ದು, ಶೀಘ್ರದಲ್ಲೇ ಟ್ರಾಫಿಕ್ ಪಾರ್ಕ್ ಕಾರ್ಯನಿರ್ವಹಿಸಲಿದೆ.

ಪರಿಸರ ಮಾಲಿನ್ಯ ತಡೆಗೆ ಮಕ್ಕಳು ಸೈಕಲ್ ಬಳಸುವುದನ್ನು ಉತ್ತೇಜಿಸಲು ಟ್ರಾಫಿಕ್ ಪಾರ್ಕ್‌ನಲ್ಲಿ ಸೈಕಲ್ ವ್ಯವಸ್ಥೆ ಮಾಡಲಾಗಿದೆ. ಶಿಬಿರದಲ್ಲಿ ಪರಿಸರ ಜಾಗೃತಿಯ ಜತೆಗೆ ಸೈಕಲ್ ಸವಾರಿಯ ಮಹತ್ವದ ತಿಳಿವಳಿಕೆ ನೀಡಲಾಗುತ್ತಿದೆ.

ಬೋಟಿಂಗ್‌ಗೆ ಮರುಜೀವ?
ಆವರಣದಲ್ಲಿರುವ ಕೆರೆಯಲ್ಲಿ ಈ ಹಿಂದೆ ಮಕ್ಕಳಿಗಾಗಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಕೆರೆಯಲ್ಲಿ ಹೂಳು ತುಂಬಿದ್ದರಿಂದ ಬೋಟಿಂಗ್ ನಡೆಸುತ್ತಿಲ್ಲ. ಈ ಬೇಸಿಗೆಯಲ್ಲಿ ಹೂಳೆತ್ತುವ ನಿರೀಕ್ಷೆಯಿದೆ.

ಬೇಸಿಗೆ ಶಿಬಿರದ ಆಕರ್ಷಣೆ
ಈ ಬಾರಿ ಏಪ್ರಿಲ್ 12ರಿಂದ ಮೇ 12ರವರೆಗೆ ಬೇಸಿಗೆ ಶಿಬಿರ ನಡೆಯಲಿದೆ. ಮೂರು ವರ್ಷ ವಯೋಮಾನದ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು. 5ರಿಂದ 7 ವರ್ಷ, 8ರಿಂದ 14 ವರ್ಷ, 14ರಿಂದ 16 ವರ್ಷದವರೆಗಿನ ಮಕ್ಕಳಿಗೆ ಶಿಬಿರದಲ್ಲಿ ಅವಕಾಶವಿದೆ.

ಬೇಸಿಗೆ ಶಿಬಿರದಲ್ಲಿ ಚಿತ್ರಕಲೆ, ಜೇಡಿನ ಮಣ್ಣಿನ ಕಲೆ, ಸಮೂಹ ನೃತ್ಯ, ಯೋಗ, ಕೀಬೋರ್ಡ್‌, ತಬಲಾ, ರಂಗತರಬೇತಿ, ಜ್ಯುವೆಲರಿ ಮೇಕಿಂಗ್ ಮತ್ತು ಮೆಹಂದಿ, ಯಕ್ಷಗಾನ, ಏರೋ ಮಾಡೆಲಿಂಗ್, ಕ್ಯಾನ್ವಾಸ್ ಕ್ಲಾತ್ ಪೇಂಟಿಂಗ್, ಪಾಟ್ ಪೇಂಟಿಂಗ್ ಕಲಿಸಲಾಗುತ್ತದೆ. ಈ ಬಾರಿ ಶಿಬಿರದಲ್ಲಿ ಸಾಹಸ ಕ್ರೀಡೆಗಳಿಗೂ ಅವಕಾಶ ಕಲ್ಪಿಸಿರುವುದು ವಿಶೇಷ.

ಶಿಬಿರದಲ್ಲಿ 300 ಮಕ್ಕಳಿಗೆ ಭಾಗವಹಿಸಲು ಅವಕಾಶವಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಶಿಬಿರದ ಶುಲ್ಕದಲ್ಲಿ ಶೇ 50ರಷ್ಟು ರಿಯಾಯ್ತಿ. ವಿಕಲಚೇತನ ಮಕ್ಕಳಿಗೆ ಪ್ರವೇಶ ಶುಲ್ಕವಿಲ್ಲ. 5ರಿಂದ 7 ವರ್ಷದ ಮಕ್ಕಳಿಗೆ ₹ 750, 8ರಿಂದ 14 ವರ್ಷದ ಮಕ್ಕಳಿಗೆ ₹ 1 ಸಾವಿರ, 14ರಿಂದ 16ವರ್ಷದ ಮಕ್ಕಳಿಗೆ ₹ 1,500 ಶಿಬಿರ ಶುಲ್ಕವಿದೆ.

ಮಕ್ಕಳ ಸದಸ್ಯತ್ವ
5ರಿಂದ 16ವರ್ಷದೊಳಗಿನ ಮಕ್ಕಳಿಗೆ ಬಾಲಭವನದ ಸದಸ್ಯತ್ವ ಪಡೆಯಲು ಅವಕಾಶವಿದೆ. ಒಮ್ಮೆ ₹ 1 ಸಾವಿರ ಶುಲ್ಕ ಪಾವತಿಸಿ ಸದಸ್ಯತ್ವ ಪಡೆದರೆ, ಮಗು 16ವರ್ಷವಾಗುವ ತನಕ ಸದಸ್ಯತ್ವದ ಅರ್ಹತೆ ಹೊಂದಿರುತ್ತದೆ. 5ರಿಂದ 6 ವರ್ಷದವರೆಗೆ ₹ 1 ಸಾವಿರ, 7ರಿಂದ 11 ವರ್ಷದವರೆಗೆ ₹ 750, 12ರಿಂದ 16 ವರ್ಷದವರೆಗಿನ ಮಕ್ಕಳಿಗೆ ₹ 500 ಸದಸ್ಯತ್ವ ಶುಲ್ಕವಿದೆ. ಸದಸ್ಯತ್ವ ಪಡೆದ ಮಕ್ಕಳಿಗೆ ಗ್ರಂಥಾಲಯ, ಒಳಾಂಗಣ ಆಟಗಳು, ಪುಟಾಣಿ ರೈಲು ಸವಾರಿ (ತಿಂಗಳಿಗೆ ಒಮ್ಮೆ ಮಾತ್ರ ಉಚಿತ), ಚಿತ್ರಪ್ರದರ್ಶನ, ಹೊರ ಸಂಚಾರ, ಯೋಗ ತರಬೇತಿ, ಬೇಸಿಗೆ–ವಾರ್ಷಿಕ ಶಿಬಿರದಲ್ಲಿ ರಿಯಾಯ್ತಿ. ಪೋಷಕರಿಗೆ ಬಾಲಭವನಕ್ಕೆ ಉಚಿತ ಪ್ರವೇಶ.

ಮಾಹಿತಿಗೆ: 080–2286 4189, 2286 1423.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT