ಆದಿವಾಸಿಗಳ ಆರೋಗ್ಯಕ್ಕಾಗಿ ಟೊಂಕಕಟ್ಟಿ ನಿಂತಿರುವ ಆಮ್ಟೆ ದಂಪತಿ ಜೊತೆ ಕಾಡು–ಹರಟೆ

7

ಆದಿವಾಸಿಗಳ ಆರೋಗ್ಯಕ್ಕಾಗಿ ಟೊಂಕಕಟ್ಟಿ ನಿಂತಿರುವ ಆಮ್ಟೆ ದಂಪತಿ ಜೊತೆ ಕಾಡು–ಹರಟೆ

Published:
Updated:
Deccan Herald

ಭೂಮಿ ಮಾತನಾಡುವುದಿಲ್ಲ. ಫಲ ಕೊಡುವುದಷ್ಟೇ ಅದರ ಮಾತು. ಗಿಡ, ಮರಗಳೂ ಮಾತನಾಡುವುದಿಲ್ಲ. ಹೂವು, ಹಣ್ಣುಗಳೇ ಅವುಗಳ ಮಾತುಗಳು. ನೀರೂ ಮಾತನಾಡುವುದಿಲ್ಲ. ಬಾಯಾರಿಕೆ ನೀಗುವುದೇ ಅದರ ಮಾತು. ಹಾಗೆಯೇ ಡಾ.ಪ್ರಕಾಶ ಆಮ್ಟೆ ಕೂಡ ಹೆಚ್ಚು ಮಾತನಾಡುವುದಿಲ್ಲ. ಸೇವೆ ಸಲ್ಲಿಸುವುದಷ್ಟೇ ಅವರ ಮಾತು. ‘ಮೌನಕ್ಕಿಂತ ಮಾತು ಹೆಚ್ಚು ಅರ್ಥ ಕೊಡುತ್ತದೆ ಎನ್ನುವುದು ಖಾತ್ರಿಯಾದರೆ ಮಾತ್ರ ಮಾತನಾಡು’ ಎಂಬ ಮಾತೊಂದಿದೆ. ಅದಕ್ಕೆ ಅನ್ವರ್ಥದಂತೆ ಇದ್ದಾರೆ ಪ್ರಕಾಶ ಆಮ್ಟೆ.

ಡಾ.ಪ್ರಕಾಶ ಆಮ್ಟೆ ಮತ್ತು ಡಾ.ಮಂದಾಕಿನಿ ಆಮ್ಟೆ ಜೊತೆ ಒಂದು ಇಡೀ ದಿನ ಕಳೆದರೂ ಅವರು ಆಡಿದ್ದು ಕೆಲವೇ ಮಾತುಗಳು ಅಷ್ಟೆ. ಅದರಲ್ಲಿ ಹೆಚ್ಚಿನವು ಕಾಡಿನ ಕುರಿತ ಮಾತುಗಳು. ಇನ್ನಷ್ಟು ಆದಿವಾಸಿಗಳ ಕುರಿತದ್ದು. ಗೆಳೆಯ ಜಯರಾಮ ಪಾಟೀಲ ಜೊತೆಗೆ ಇದ್ದಿದ್ದರಿಂದ ಒಂದಿಷ್ಟು ಹೊತ್ತು ಹರಟೆಗೆ ಅವಕಾಶವಾದರೂ ಹೆಚ್ಚು ಮಾತನಾಡಿದ್ದು ನಾವು ಮಾತ್ರ. ಉಳಿದಂತೆ ಆಮ್ಟೆ ದಂಪತಿ ಮುಗುಳ್ನಗು, ಕೇಳಿದ್ದಕ್ಕೆ ಒಂದಿಷ್ಟು ಉತ್ತರಗಳು ಅಷ್ಟೆ.
ಪ್ರಕಾಶ ಆಮ್ಟೆ ನಿಸರ್ಗದ ಜೊತೆ ಮಾತನಾಡುತ್ತಾರೆ. ಪ್ರಾಣಿಗಳ ಜೊತೆ ಮಾತನಾಡುತ್ತಾರೆ. ಕಾಡು ಜನರ ಜೊತೆ ಮಾತನಾಡುತ್ತಾರೆ. ಮನುಷ್ಯನ ಜೊತೆ ಮಾತನಾಡುವುದಕ್ಕಿಂತ ನಿಸರ್ಗದ ಜೊತೆ ಮಾತನಾಡುವುದು ಹೆಚ್ಚು ಅನುಕೂಲ ಮತ್ತು ಅಗತ್ಯ ಎಂದು ಅವರು ವಾದಿಸುತ್ತಾರೆ. ಅದಕ್ಕೆ ಆಮ್ಟೆ ಜೊತೆಗಿನ ಮಾತುಕತೆ ಎಂದರೆ ಅದು ಕಾಡು– ಹರಟೆ.

ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯ ಹೇಮಲಕಸಾ ಎಂಬ ಕಗ್ಗಾಡಿನಲ್ಲಿ ಮುಂಡಾ ಬುಡಕಟ್ಟು ಜನಾಂಗದ ಹಕ್ಕಿಗಾಗಿ, ಆರೋಗ್ಯಕ್ಕಾಗಿ, ಶಿಕ್ಷಣಕ್ಕಾಗಿ, ಆರೋಗ್ಯಕ್ಕಾಗಿ ದುಡಿಯುತ್ತಿರುವ ಪ್ರಕಾಶ ಆಮ್ಟೆ ಇತ್ತೀಚೆಗೆ ಮೈಸೂರಿಗೆ ಬಂದಾಗ ಜಯರಾಮ ಪಾಟೀಲರ ಮನೆಯಲ್ಲಿ ತಂಗಿದ್ದರು. ಒಂದು ಇಡೀ ದಿನ ಅವರ ಜೊತೆ ಕಳೆಯುವ ಯೋಗ ನನಗೂ ಸಿಕ್ಕಿತ್ತು. ಆಗ ಕಷ್ಟಪಟ್ಟು ಅವರ ಬಾಯಿಯಿಂದ ಒಂದಿಷ್ಟು ಮಾತುಗಳನ್ನು ಹೊರಡಿಸಿದಾಗ ಬಿಚ್ಚಿಕೊಂಡ ಕತೆಗಳು ಇವು.

ಮುಂಡಾ ಬುಡಕಟ್ಟು ಜನಾಂಗದವರ ಭಾಷೆ ಬೇರೆ. ಅವರ ಮಾತುಗಳು ಇವರಿಗೆ ಅರ್ಥವಾಗುತ್ತಿರಲಿಲ್ಲ. ಅನಕ್ಷರತೆ, ಮೂಢನಂಬಿಕೆಗಳ ಕೂಪದಲ್ಲಿ ಸಿಲುಕಿದ್ದ ಈ ಜನಾಂಗದವರಿಗೆ ಅಪೌಷ್ಟಿಕಾಂಶದ ಸಮಸ್ಯೆ ವಿಪರೀತವಾಗಿತ್ತು. ದುಡಿಯುವ, ಬೇಸಾಯ ಮಾಡುವ ಕಲ್ಪನೆಯೇ ಇರಲಿಲ್ಲ. ನಾಗರಿಕತೆಯ ಸೋಂಕು ತಗಲಿರಲಿಲ್ಲ. ಅವರ ಆರೋಗ್ಯ ಸುಧಾರಣೆಗೆ ಟೊಂಕಕಟ್ಟಿ ನಿಂತ ಆಮ್ಟೆ ದಂಪತಿಗೆ ಆ ಆದಿವಾಸಿ ಜನಾಂಗದವರೇ ಬದುಕು ಕಲಿಸಿದ್ದಾರೆ. ಆದಿವಾಸಿಗಳು ಬಟ್ಟೆ ತೊಡುತ್ತಿರಲಿಲ್ಲ. ಅದಕ್ಕೇ ಇವರೂ ಕನಿಷ್ಠ ಬಟ್ಟೆ ತೊಡುವುದನ್ನು ರೂಢಿಸಿಕೊಂಡರು. ಈಗಲೂ ಆಮ್ಟೆ ಅವರ ವಸ್ತ್ರ ಎಂದರೆ ಒಂದು ಚಡ್ಡಿ, ಬನಿಯನ್ ಮಾತ್ರ.

ಆದಿವಾಸಿಗಳಿಗೆ ಅನ್ನ ತಿನ್ನುವುದನ್ನು ಇವರು ಕಲಿಸಿದರು. ಕಂದಮೂಲ ತಿನ್ನುವುದನ್ನು ಇವರು ಕಲಿತರು. ಪೌಷ್ಟಿಕಾಂಶದ ಔಷಧಿಯನ್ನು ಅವರಿಗೆ ಕೊಟ್ಟರು. ನೋವು ಸಹಿಸುವ ಶಕ್ತಿಯನ್ನು ಅವರಿಂದ ಕಡ ಪಡೆದುಕೊಂಡರು. ಇವರು ಹೇಮಲಕಸಾಕ್ಕೆ ಹೋದಾಗ ಅಲ್ಲಿ ರಸ್ತೆ ಇರಲಿಲ್ಲ. ವಿದ್ಯುತ್ ಇರಲಿಲ್ಲ. ಅದಕ್ಕಾಗಿ ಸಂಜೆಯೇ ಊಟ ಮಾಡುತ್ತಿದ್ದರು. ಈಗಲೂ ಅದನ್ನು ಅವರು ಮುಂದುವರಿಸಿದ್ದಾರೆ. ಆಗ ಊಟಕ್ಕೆ ಅನ್ನ ಮಾತ್ರ. ಜೊತೆಗೆ ಒಂದಿಷ್ಟು ಮೆಣಸಿನಕಾಯಿ. ಈಗಲೂ ಅವರಿಗೆ ಊಟಕ್ಕೆ ಹಸಿ ಮೆಣಸಿನಕಾಯಿ ಬೇಕೇ ಬೇಕು.

ಒಮ್ಮೆ ಹೀಗೆಯೇ ಆಯ್ತಂತೆ. ರಾತ್ರಿ ಹೊತ್ತು. ಕರಡಿಯಿಂದ ಹಲ್ಲೆಗೆ ಒಳಗಾಗಿದ್ದ ವ್ಯಕ್ತಿ ಒಬ್ಬ ಇವರ ಬಳಿಗೆ ಬಂದ. ಆ ಮನುಷ್ಯನ ತಲೆ ಒಡೆದಿತ್ತು. ಕಣ್ಣು ಹಾಳಾಗಿತ್ತು. ಅವನು ರಕ್ತಸಿಕ್ತನಾಗಿದ್ದ. ಮುಖದ ಸ್ವರೂಪವೇ ಬದಲಾಗಿತ್ತು. ಆ ಮನುಷ್ಯನ ಮುಖವನ್ನು ನೋಡಿದರೇ ನಮ್ಮ ಮೈಮೇಲೆ ಮುಳ್ಳುಗಳು ಏಳುತ್ತಿದ್ದವು. ಅಷ್ಟು ಭೀಕರವಾಗಿದ್ದ. ಇದೇ ಸ್ಥಿತಿಯಲ್ಲಿ ಸಾಕಷ್ಟು ದೂರದಿಂದ ಆತ ನಡೆದುಕೊಂಡೇ ಬಂದಿದ್ದ. ಆತನಿಗೆ ಪ್ರಜ್ಞೆ ಇತ್ತು. ಮಾತನ್ನೂ ಆಡುತ್ತಿದ್ದ. ಕರಡಿಯ ದಾಳಿಯನ್ನೂ ವಿವರಿಸುತ್ತಿದ್ದ. ಮುಖ ಛಿದ್ರವಾಗಿರುವಾಗ, ತಲೆ ಬುರುಡೆ ಒದೆದಾಗ, ಕಣ್ಣು ಕುರುಡಾಗಿರುವಾಗ ಆ ಮನುಷ್ಯ ಮಾತನಾಡುತ್ತಿದ್ದ ಎನ್ನುವುದೇ ಅಚ್ಚರಿ.

ಮುಖ ಹರಿದು ಛಿದ್ರವಾಗಿದ್ದರಿಂದ ಹೊಲಿಗೆ ಹಾಕಬೇಕಿತ್ತು. ಆದರೆ, ಆಗ ಅನಸ್ತೇಶಿಯಾ ಇರಲಿಲ್ಲ. ಅರಿವಳಿಕೆ ಇಲ್ಲದೆ ಹೊಲಿಗೆ ಹಾಕಲು ಯತ್ನಿಸಿದೆ. ಆತ ನೋವು ತಡೆದುಕೊಳ್ಳುತ್ತಾನೋ ಇಲ್ಲವೇ ಎಂದು ನೋಡಲು ಒಂದು ಹೊಲಿಗೆ ಹಾಕಿದೆ. ಅವನು ಹಾಕಿ ಎಂದ. ನಂತರ ನೂರೈವತ್ತಕ್ಕೂ ಹೆಚ್ಚು ಹೊಲಿಗೆಯನ್ನು ಹಾಗೆಯೇ ಹಾಕಿದೆ. ಆತ ಕಮಕ್ಕಿಮಕ್ ಎನ್ನಲಿಲ್ಲ. ಜೀವನದ ಸಂಘರ್ಷದಲ್ಲಿ ನಮಗೆ ಆಯ್ಕೆಗಳಿರುತ್ತವೆ. ಆದರೆ, ಆದಿವಾಸಿಗಳಿಗೆ ಆಯ್ಕೆಗಳಿಲ್ಲ. ಅದಕ್ಕೇ ಅವರಲ್ಲಿ ತಾಳ್ಮೆ ಹೆಚ್ಚು. ಅದು ನನಗೂ ಒಂದು ಪಾಠವಾಯಿತು. ನನಗೆ ಗಾಯವಾದಾಗ ನಾನೂ ಅರಿವಳಿಕೆ ಇಲ್ಲದೆ ಹೊಲಿಗೆ ಹಾಕಿಸಿಕೊಂಡೆ. ನೋವು ಸಹಿಸುವ ಶಕ್ತಿಯನ್ನು ಗಳಿಸಿಕೊಂಡೆ. ನನ್ನ ಮಗನಿಗೂ ಗಾಯವಾದಾಗ ಅವನಿಗೂ ಅರಿವಳಿಕೆ ಇಲ್ಲದೆ ಹೊಲಿಗೆ ಹಾಕಿದೆ. ಅವನೂ ಸಹಿಸಿಕೊಂಡ. ಇದು ಆದಿವಾಸಿಗಳು ನನಗೆ ಕಲಿಸಿದ ಪಾಠ ಎಂದರು ಅವರು.


ಡಾ.ಪ್ರಕಾಶ ಆಮ್ಟೆ

ಆದಿವಾಸಿಗಳ ಕತೆ ಹೇಳುವುದು ಅವರಿಗೆ ಖುಷಿ. ಇಂಥದೇ ಇನ್ನೆರಡು ಕತೆ ಹೇಳಿದರು. ಹೇಮಲಕಸಾದಿಂದ 15 ಕಿ.ಮೀ. ದೂರದಲ್ಲಿ ಒಂದು ಹಳ್ಳಿ. ಅಗ್ಗಿಷ್ಟಿಕೆಯ ಹತ್ತಿರ ಒಂದು ಕುಟುಂಬ ಮಲಗಿತ್ತು. ಒಂದು ಹಾವು ಒಬ್ಬ ಹುಡುಗಿಯ ಬಳಿ ಬಂತು. ಹಾವಿನ ತಣ್ಣನೆಯ ಸ್ಪರ್ಶದಿಂದ ಹುಡುಗಿ ಮಿಸುಕಾಡಿದಳು. ಅದು ಅವಳಿಗೆ ಕಚ್ಚಿತು. ಆಕೆ ಕೈ ಝಾಡಿಸಿದಳು. ಅದು ಪಕ್ಕದಲ್ಲಿ ಮಲಗಿದ್ದ ಇನ್ನೊಂದು ಹುಡುಗಿಯ ಮೈಮೇಲೆ ಬಿತ್ತು. ಆಕೆಗೂ ಕಚ್ಚಿತು. ಆಕೆಯೂ ಕೈ ಝಾಡಿಸಿದಳು. ಅದು ಆಕೆಯ ತಂದೆಯ ಮೈಮೇಲೆ ಬಿತ್ತು. ಅವನಿಗೂ ಕಚ್ಚಿತು. ಒಬ್ಬಳು ಸ್ಥಳದಲ್ಲಿಯೇ ಸತ್ತಳು. ಇನ್ನೊಬ್ಬ ಮಗಳು ಆಸ್ಪತ್ರೆಯಲ್ಲಿ ಸತ್ತಳು. ಅಪ್ಪ ಮಾತ್ರ ಬದುಕಿದ. ಇಬ್ಬರು ಮಕ್ಕಳನ್ನು ಕಳೆದುಕೊಂಡ ದುಃಖ ಅವನಲ್ಲಿ ಇರಲಿಲ್ಲ. ಯಾಕೆಂದರೆ ದುಃಖ ಪಡಲು ಅವರಿಗೆ ಪುರುಸೊತ್ತು ಇಲ್ಲ. ಬದುಕಿ ಉಳಿದವರನ್ನು ಉಳಿಸಿಕೊಳ್ಳುವ ಅವಸರ ಅವರಿಗೆ ಇತ್ತು. ನಮ್ಮ ದುಃಖಕ್ಕೂ ಅವರ ದುಃಖಕ್ಕೂ ವ್ಯತ್ಯಾಸ ಇದೆ ಎನ್ನುವುದು ಆಗಲೇ ನನಗೆ ಅರಿವಿಗೆ ಬಂತು.

ಒಂದು ವರ್ಷ ಆ ಪ್ರದೇಶದಲ್ಲಿ ಕಾಲರಾ ವಿಪರೀತವಾಗಿತ್ತು. ನೂರಾರು ಜನರು ಸತ್ತು ಹೋದರು. ಒಂದು ದಿನ ಒಬ್ಬ ಮಹಿಳೆ ಒಂದು ಚಿಕ್ಕ ಮಗುವನ್ನು ಕರೆದುಕೊಂಡು ಬಂದಳು. ಆಸ್ಪತ್ರೆಯಲ್ಲಿ ಉಪಚರಿಸಿದಾಗ ಆ ಮಗು ಸ್ವಲ್ಪ ಚೇತರಿಸಿಕೊಂಡಿತು. ಆಗ ಆ ಮಹಿಳೆ ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಹೊರಟಳು. ಆಸ್ಪತ್ರೆಯ ಕಾರ್ಯಕರ್ತನೊಬ್ಬ ಆಕೆಯನ್ನು ತಡೆದು ‘ಮಗುವನ್ನು ಏಕಾಏಕಿ ಬಿಟ್ಟು ಯಾಕೆ ಹೋಗುತ್ತೀಯಾ? ಅದರ ಬಳಿಯೇ ಕುಳಿತಿರು. ಅದು ಸುಧಾರಿಸಿಕೊಂಡ ನಂತರ ಹೋಗುವಿಯಂತೆ’ ಎಂದ. ಅದಕ್ಕೆ ಅವಳು ‘ಕಾಲರಾದಿಂದ ನನ್ನ ಗಂಡ ನಿನ್ನೆ ಸತ್ತಿದ್ದಾನೆ. ಇಬ್ಬರು ಮಕ್ಕಳಿಗೂ ವಾಂತಿ– ಭೇದಿ ಶುರುವಾಗಿತ್ತು. ಅದಕ್ಕೆ ಅವರನ್ನು ಇಲ್ಲಿಗೆ ಕರೆದುಕೊಂಡು ಬರುತ್ತಿದ್ದೆ. ರಸ್ತೆಯಲ್ಲಿಯೇ ಒಂದು ಮಗು ಸತ್ತು ಹೋಯಿತು. ಅದನ್ನು ಅಲ್ಲಿಯೇ ಮರದ ಬುಡದಲ್ಲಿ ಇಟ್ಟು ಬಂದಿದ್ದೇನೆ. ಇವನನ್ನು ಇಲ್ಲಿಗೆ ಕರೆ ತಂದೆ. ಈಗ ಇವನು ಚೇತರಿಸಿಕೊಳ್ಳುತ್ತಿದ್ದಾನೆ. ಅವನು ಸುಧಾರಿಸಿಕೊಳ್ಳುವುದರೊಳಗೆ ಆ ಮಗನಿಗೆ ಮಣ್ಣು ಮಾಡಿ ಬಂದು ಬಿಡುತ್ತೇನೆ’ ಎಂದಾಗ ನಮಗೆಲ್ಲಾ ಕಣ್ಣೀರು ಬಂತು. ಆದರೆ, ಆಕೆಯ ಕಣ್ಣಲ್ಲಿ ನೀರು ಬತ್ತಿ ಹೋಗಿತ್ತು.

ಪ್ರಕಾಶ ಆಮ್ಟೆ ಒಬ್ಬ ಸಾಮಾನ್ಯ ಎಂ.ಬಿ.ಬಿ.ಎಸ್ ವೈದ್ಯ. ಆದರೆ, ಅಗತ್ಯಕ್ಕೆ ತಕ್ಕಂತೆ ಅವರು ಶಸ್ತ್ರಚಿಕಿತ್ಸಕರಾದರು. ದಂತ ವೈದ್ಯರೂ ಆದರು. ಕಣ್ಣು, ಕಿವಿ, ಗಂಟಲು ವೈದ್ಯರೂ ಆದರು. ಸ್ತ್ರೀರೋಗ ತಜ್ಞರೂ ಆದರು. ಎಲೆಕ್ಟ್ರಿಷಿಯನ್, ಪಂಪ್‌ಸೆಟ್ ದುರಸ್ತಿ ಕಲಿತರು. ಮುಂಡಾ ಆದಿವಾಸಿಗಳ ಸಹವಾಸದಿಂದ ಪ್ರಾಣಿ ವೈದ್ಯರೂ ಆದರು. ಇವೆಲ್ಲದರಿಂದ ಸಾಕಷ್ಟು ಬಾರಿ ಅವರು ಇಕ್ಕಟ್ಟಿಗೂ ಸಿಲುಕಿದರು. ಆದರೆ, ಕೊನೆಗೆ ಅವರೇ ಗೆದ್ದರು. ಅವರ ಆಶ್ರಮದಲ್ಲಿ ಪ್ರಾಣಿಗಳ ನಂದನವನವೇ ಇದೆ. ಅಲ್ಲಿ ಹುಲಿ, ಚಿರತೆ, ಸಿಂಹ, ಕರಡಿ, ಮೊಸಳೆ, ಹಾವು ಹೀಗೆ ಹಲವಾರು ಪ್ರಾಣಿಗಳಿವೆ. ಕಾಡಿನಲ್ಲಿ ಅತ್ಯಂತ ದ್ವೇಷದಿಂದ ಕಿಡಿಕಾರುವ ಪ್ರಾಣಿಗಳು ಇಲ್ಲಿ ಸ್ನೇಹಿತರಂತೆ ಇವೆ. ಹಾವು ಮುಂಗುಸಿಗಳೂ ಒಟ್ಟಾಗಿವೆ. ಹುಲಿ, ಚಿರತೆ ಜಿಂಕೆಗಳೂ ಒಂದಾಗಿವೆ. ಅಲ್ಲಿ ಅವು ಪರಸ್ಪರ ಮಾತನಾಡುತ್ತವೆ. ಆಮ್ಟೆ ಅವರ ಜೊತೆಗೂ ಮಾತನಾಡುತ್ತವೆ. ಯಾವ ಪ್ರಾಣಿಗಳನ್ನೂ ಅಲ್ಲಿ ಕಟ್ಟಿ ಹಾಕಿಲ್ಲ. ಎಲ್ಲವಕ್ಕೂ ಸ್ವಾತಂತ್ರ್ಯವಿದೆ. ಪ್ರಾಣಿಗಳನ್ನು ಕಟ್ಟಿ ಹಾಕಿ ಬುದ್ಧಿ ಕಲಿಸುವ ವಿಧಾನದಲ್ಲಿ ಅವರಿಗೆ ನಂಬಿಕೆ ಇಲ್ಲ. ಪ್ರೀತಿಯೊಂದೇ ಸಾಕು ಎಲ್ಲ ಪ್ರಾಣಿಗಳನ್ನು ನಿಯಂತ್ರಿಸಲು ಎಂಬುದು ಅವರ ಅನುಭವದ ನುಡಿ.

ಹಾವು ಅವರಿಗೆ ಕಚ್ಚಿದೆ. ಹುಲಿ ಅವರ ಕೈಯನ್ನು ಪರಚಿದೆ. ಆದರೆ, ಇದರಲ್ಲಿ ಅವುಗಳ ತಪ್ಪು ಏನೇನೂ ಇಲ್ಲ ಎನ್ನುವುದು ಅವರ ನಂಬಿಕೆ. ನಾವು ನೋವು ಮಾಡಿದರಷ್ಟೇ ಅವು ಕೆರಳುತ್ತವೆ. ನಾವು ಪ್ರೀತಿ ತೋರಿದರೆ ಅವು ನೂರು ಪಟ್ಟು ಪ್ರೀತಿಯನ್ನು ತೋರುತ್ತವೆ. ಈ ನಿಸರ್ಗದಲ್ಲಿ ವಿಷವೂ ಇದೆ. ಅಮೃತವೂ ಇದೆ. ಆಯ್ಕೆ ನಮ್ಮ ಕೈಯಲ್ಲಿಯೇ ಇದೆ. ಪ್ರೀತಿಯಿಂದ ಅಮೃತ ಉಣ್ಣಬಹುದು. ದ್ವೇಷದಿಂದ ವಿಷ ಕಕ್ಕಬಹುದು. ಆಯ್ಕೆ ನಮಗೇ ಬಿಟ್ಟಿದ್ದು ಎನ್ನುತ್ತಾರೆ ಅವರು.

ಒಮ್ಮೆ ಡಾ.ಶಿವರಾಮ ಕಾರಂತರಿಗೆ ಯಾರೋ ಕೇಳಿದರಂತೆ ‘ಕಲೆ, ಸಾಹಿತ್ಯ ಎಲ್ಲ ಅನುವಂಶೀಯವೇ?’ ಎಂದು. ಅದಕ್ಕೆ ಕಾರಂತರು ಸಿಟ್ಟಿನಲ್ಲಿ ‘ರೋಗವೊಂದೇ ಅನುವಂಶೀಯ’ ಎಂದು ಉತ್ತರಿಸಿದ್ದರಂತೆ. ಆಮ್ಟೆ ಕುಟುಂಬದ ಮಟ್ಟಿಗೆ ಈ ಮಾತು ಸುಳ್ಳಾಗಿದೆ.

ಪ್ರಕಾಶ ಆಮ್ಟೆ ಅವರ ತಂದೆ ಬಾಬಾ ಆಮ್ಟೆ ಕುಷ್ಠರೋಗಿಗಳ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟವರು. 1958ರಲ್ಲಿಯೇ ಅವರಿಗೆ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಬಂದಿತ್ತು. ಅವರ ಒಬ್ಬ ಮಗ ಡಾ.ವಿಲಾಸ ಆಮ್ಟೆ ಈಗ ಆ ಕಾರ್ಯವನ್ನು ಮುಂದುವರಿಸಿದ್ದಾರೆ. ಅವರ ಇನ್ನೊಬ್ಬ ಮಗ ಡಾ.ಪ್ರಕಾಶ ಆಮ್ಟೆ ಮುಂಡಾ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಅವರಿಗೆ 2008ರಲ್ಲಿ ಮ್ಯಾಗ್ಸೆಸ್ಸೆ ಪ್ರಶಸ್ತಿ ಬಂದಿದೆ. ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರಕಾಶ ಆಮ್ಟೆ ಅವರ ಪುತ್ರರೂ ಸೇವೆಯನ್ನು ಮುಂದುವರಿಸಿದ್ದಾರೆ. ಅಲ್ಲಿಗೆ ಆಮ್ಟೆ ಕುಟುಂಬಕ್ಕೆ ಸೇವೆ ಎನ್ನುವುದು ಅನುವಂಶೀಯವೇ ಆಯಿತಲ್ಲ?

ಪ್ರಕಾಶ ಆಮ್ಟೆ ಆತ್ಮಚರಿತ್ರೆ ‘ಪ್ರಕಾಶ ಮಾರ್ಗ’ ಕನ್ನಡದಲ್ಲಿಯೂ ಪ್ರಕಟವಾಗಿದೆ. ಚಂದ್ರಕಾಂತ ಪೋಕಳೆ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಿಸಂ ಬುಕ್ಸ್ ಪ್ರಕಟಿಸಿದೆ. ಇದೊಂದು ನಿಸರ್ಗ ಸಂಧಾನ.

‘ಹೇಮಲಕಸಾದ ದಟ್ಟಾರಣ್ಯದಲ್ಲಿ ಮುಂಡಾ ಬುಡಕಟ್ಟು ಜನಾಂಗದ ಸೇವೆಯನ್ನು ನಾವು ಕೈಗೊಂಡಾಗ ರಾಮ, ಸೀತೆಯರು ಕಾಡಿಗೆ ಹೋದ ಉಪಮೆಯನ್ನು ಜನ ನಮಗೆ ನೀಡುತ್ತಿದ್ದರು. ರಾಮಾಯಣದ ಸೀತೆಗೆ ಚಿನ್ನದ ಜಿಂಕೆಯ ಮೋಹವಾದರೂ ಇತ್ತು. ಆದರೆ ಮಂದಾಳಿಗೆ ಯಾವ ಮೋಹವೂ ಕಾಡಲಿಲ್ಲ. ಮೌನವಾಗಿ ಮತ್ತು ಅಷ್ಟೇ ದಿಟ್ಟತನದಿಂದ ಇಡೀ ಬದುಕನ್ನು ಸೇವೆಗೆ ಅರ್ಪಿಸಿದಳು’ ಎಂದು ಹೇಳುವಾಗ ಅವರ ಮೊಗದಲ್ಲಿ ಧನ್ಯತೆಯ ಭಾವ; ಡಾ.ಮಂದಾಕಿನಿ ಮುಖದಲ್ಲಿ ಮುಗುಳ್ನಗೆ ಇತ್ತು. ಅದಕ್ಕೆ ಎಲ್ಲವನ್ನೂ ಗೆಲ್ಲುವ ತಾಕತ್ತು ಇತ್ತು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !