ಎಳೆಯರ ವೈಜ್ಞಾನಿಕ ಆಸಕ್ತಿ ಮತ್ತು ಆವಿಷ್ಕಾರಕ್ಕೆ ವೇದಿಕೆ‘ಅಲ್‌ಕೆಮಿ-2019’

ಬುಧವಾರ, ಏಪ್ರಿಲ್ 24, 2019
33 °C
Me23pg06science

ಎಳೆಯರ ವೈಜ್ಞಾನಿಕ ಆಸಕ್ತಿ ಮತ್ತು ಆವಿಷ್ಕಾರಕ್ಕೆ ವೇದಿಕೆ‘ಅಲ್‌ಕೆಮಿ-2019’

Published:
Updated:
Prajavani

‘ಬೆಳೆಯುವ ಪೈರು ಮೊಳಕೆಯಲ್ಲಿ’ ನಾಣ್ಣುಡಿಗೆ ತಕ್ಕಂತೆ ರೂಪುಗೊಳ್ಳುತ್ತಿರುವ ಬಾಲ ವಿಜ್ಞಾನಿಗಳು, ತಂತ್ರಜ್ಞಾನಿಗಳ ಆವಿಷ್ಕಾರಗಳನ್ನು ಕಣ್ಣಾರೆ ನೋಡಬೇಕೆ, ಅವರ ಆವಿಷ್ಕಾರಗಳ ಬಗೆಗಿನ ಮಾಹಿತಿ, ಎಳೆಯರ ಸಾಧನೆಯನ್ನು ಕಿವಿಯಾರೆ ಕೇಳಬೇಕೆ. ಹಾಗಾದರೆ ಇನ್ನು ತಡವೇಕೆ, ಬಿಡುವು ಮಾಡಿಕೊಂಡು ನಿಯಾಸ್‌ನತ್ತ ನಿಮ್ಮ ಪಾದ ಬೆಳೆಸಿ!

ಆಬಾಲರಾದಿಯಾಗಿ ಎಲ್ಲರಿಗೂ ವೈಜ್ಞಾನಿಕ ಕ್ಷೇತ್ರದ ಕುತೂಹಲ ತಣಿಸುವ ಉದ್ದೇಶದಿಂದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಶನಿವಾರ (ಮಾರ್ಚ್ 23) ಮುಕ್ತ ಪ್ರವೇಶ ಕಲ್ಪಿಸುತ್ತಿದೆ. ಐಐಎಸ್‌ಸಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ವರ್ಷಕ್ಕೊಮ್ಮೆ ಸಂಸ್ಥೆಯಲ್ಲಿ ಮುಕ್ತ ದಿನ ಆಚರಿಸುತ್ತಿದೆ. ಇದಕ್ಕೆ ಪೂರಕವಾಗಿ ಈ ಸಂಸ್ಥೆಯ ಕ್ಯಾಂಪಸ್‌ನಲ್ಲೇ ಇರುವ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ (ನಿಯಾಸ್‌) ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆ ಹೊಂದಿರುವ ಮಕ್ಕಳ ಪ್ರಯೋಗಗಳ ಪ್ರದರ್ಶನಕ್ಕೆ ವೇದಿಕೆ ಒದಗಿಸಲು ಇದೇ ದಿನ (ಶನಿವಾರ) ಮೊದಲ ಬಾರಿಗೆ ‘ಅಲ್‌ಕೆಮಿ–2019’ ಕಾರ್ಯಕ್ರಮ ಆಯೋಜಿಸಿದೆ.

 ಐಐಎಸ್ಸಿ ಕ್ಯಾಂಪಸ್‌ನಲ್ಲಿರುವ ನಿಯಾಸ್‌ನ ಬೋಧಕರ ವಿಭಾಗದಲ್ಲಿ (ಫ್ಯಾಕಲ್ಟಿ ಬ್ಲಾಕ್‌) ಬೆಳಿಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಈ ವಿಜ್ಞಾನ–ತಂತ್ರಜ್ಞಾನ ಮಾದರಿಗಳ ಪ್ರದರ್ಶನ ಕಣ್ತುಂಬಿಕೊಳ್ಳಬಹುದು. ವಿಜ್ಞಾನ–ತಂತ್ರಜ್ಞಾನ ಆಸಕ್ತರು ಕುತೂಹಲ ತಣಿಸಿಕೊಳ್ಳಬಹುದು, ಹೊಸ ಪ್ರಯೋಗಗಳ ಚಿಂತನೆಗೆ ಮಕ್ಕಳು ತಮ್ಮನ್ನು ಒಡ್ಡಿಕೊಳ್ಳಲೂ ಇದು ನೆರವು ಆಗಬಹುದು.

ನಿಯಾಸ್‌ನ ಅಡ್ವಾನ್ಸ್‌ ಲರ್ನಿಂಗ್‌ ಸೆಂಟರ್‌ನಿಂದ ತರಬೇತಿಗೊಂಡ 13 ಮಕ್ಕಳು ಆವಿಷ್ಕರಿಸಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಮಾದರಿಯನ್ನು ಪ್ರದರ್ಶಿಸಲಿದ್ದಾರೆ. ಮಕ್ಕಳ ಈ ಪ್ರಾಜೆಕ್ಟ್‌ಗಳಿಗೆ ಕೇಂದ್ರ ಸರ್ಕಾರ ಸೇರಿದಂತೆ ಐ.ಟಿ ಕ್ಷೇತ್ರದ ಮುಂಚೂಣಿ ಕಂಪನಿಗಳು ಪ್ರಾಯೋಜಕತ್ವ ನೀಡಿವೆ.

ಬೆಂಗಳೂರಿನ ನವ್‌ಕಿಸ್‌ ಎಜುಕೇಷನಲ್‌ ಸೆಂಟರ್‌ನ 9ನೇ ತರಗತಿಯ ವಿದ್ಯಾರ್ಥಿನಿ ಮಧುರ ಕುಮಾರ್ ಆವಿಷ್ಕರಿಸಿರುವ ‘ಶಬ್ದ ಮಾಲಿನ್ಯ ಮಾಪಕ’ ಮಾದರಿಯು ಈ ಪ್ರದರ್ಶನದಲ್ಲಿ ವಿಜ್ಞಾನಾಸಕ್ತರ ಗಮನ ಸೆಳೆಯಲಿದೆ. ಈ ವಿದ್ಯಾರ್ಥಿನಿ ತಾನು ಆವಿಷ್ಕರಿಸಿರುವ ಮಾದರಿಯನ್ನು ಈಗಾಗಲೇ ಐರಿಷ್‌ನಲ್ಲಿ ನಡೆದ ಅಲ್ಲಿನ ರಾಷ್ಟ್ರೀಯ ವಿಜ್ಞಾನ ಮೇಳ ಮತ್ತು ಅಮೆರಿಕದಲ್ಲಿ ನಡೆದ 2019ರ ಇಂಟೆಲ್‌ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲೂ ಪ್ರದರ್ಶಿಸಿ, ಸೈ ಎನಿಸಿಕೊಂಡಿದ್ದಾಳೆ. 

ದೆಹಲಿ ಪಬ್ಲಿಕ್‌ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಚರಣ್‌ ರೆಡ್ಡಿ ಆವಿಷ್ಕರಿಸಿರುವ ನೀರಿನಲ್ಲಿ ತೇಲುವ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ‘ವಾಟರ್‌ ಕ್ಲೀನಿಂಗ್‌ ರೋಬೊಟ್‌’, ನ್ಯಾಷನಲ್‌ ಅಕಾಡೆಮಿಯ 7ನೇ ತರಗತಿ ವಿದ್ಯಾರ್ಥಿ ರಿಷಭ್‌ ಪ್ರಶೋಭ್‌ ರೂಪಿಸಿರುವ ರೈತನ ಜಮೀನು ಮತ್ತು ಬೆಳೆ ಮೇಲೆ ಕಣ್ಗಾವಲು ಇಡುವ ಕೃಷಿ ಉಪಯೋಗಿ ಡ್ರೋನ್‌, ಹೈದರಾಬಾದ್‌ನ ಸಿಲ್ವರ್‌ ಓಕ್ಸ್‌ ಇಂಟರ್‌ನ್ಯಾಷನಲ್‌ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಸಾಯ್‌ ಸೋಹಮ್‌ ಮಾಶೆಟ್ಟಿ ರೂಪಿಸಿರುವ ರೋಬೊ ಹೊಸ ಸಾಧ್ಯತೆಗಳನ್ನು ತೆರೆದಿಡಲಿವೆ.

ಆಯ್ದ ಮಾದರಿಗಳ ಪ್ರದರ್ಶನ

13 ವಿದ್ಯಾರ್ಥಿಗಳು ಆವಿಷ್ಕರಿಸಿರುವ ಮಾದರಿಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ನಿಯಾಸ್‌ ನಡೆಸಿದ ಪ್ರತಿಭಾ ಶೋಧದಲ್ಲಿ ಆಯ್ಕೆಯಾದ 250 ವಿದ್ಯಾರ್ಥಿಗಳು ಕಳೆದ ಒಂದೂವರೆ ವರ್ಷದಿಂದ ಅಡ್ವಾನ್ಸ್‌ ಲರ್ನಿಂಗ್‌ ಸೆಂಟರ್‌ನಿಂದ ತರಬೇತಿ ಪಡೆಯುತ್ತಿದ್ದಾರೆ.  ಸಂಶೋಧನೆ ಮತ್ತು ಆವಿಷ್ಕಾರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳ ಪೈಕಿ ಆಯ್ದ ವಿದ್ಯಾರ್ಥಿಗಳ ಪ್ರಯೋಗ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಎನ್ನುತ್ತಾರೆ ನಿಯಾಸ್‌ನ ಸ್ಕೂಲ್‌ ಆಫ್‌ ಸೋಷಿಯಲ್‌ ಸೈನ್ಸ್‌ನ ಮುಖ್ಯಸ್ಥರಾದ ಪ್ರೊ.ಅನಿತಾ ಕುರುಪ್‌

 

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !