ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಬಿಸಿಲ ಧಗೆಯಲ್ಲಿ ಕೂಲ್‌ ಕೂಲ್‌ ಖಾದಿ

Last Updated 30 ಮಾರ್ಚ್ 2021, 13:33 IST
ಅಕ್ಷರ ಗಾತ್ರ

ಈಚೆಗೆ ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ ಪಡೆ (ಐಟಿಬಿಪಿ) ₹ 8.73 ಕೋಟಿ ವೆಚ್ಚದ ಖಾದಿ ಮ್ಯಾಟ್‌ಗಳ ಖರೀದಿಗಾಗಿ ಕೆವಿಐಸಿ (ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗ)ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಖಾದಿಗೆ ದಿನದಿನಕ್ಕೂ ಮಾನ್ಯತೆ ಹೆಚ್ಚುತ್ತಿರುವ ನೂತನ ಉದಾಹರಣೆಯಿದೆ.

ಏಳೆಂಟು ದಶಕಗಳ ಹಿಂದೆ ಸ್ವಾತಂತ್ರ್ಯ ಹೋರಾಟದ ಸಂಕೇತದಂತಿದ್ದ ಖಾದಿ ವಸ್ತ್ರ ಈಗ ಫ್ಯಾಷನ್ ಲೋಕದಲ್ಲಿ ಅದರದ್ದೇ ಆದ ಮಹತ್ವ ಪಡೆದು ದಶಕವೇ ಆಗಿದೆ. ಖಾದಿಯ ವಿವಿಧ ವಸ್ತುಗಳಿಗೆ ಬೇಡಿಕೆ ವರ್ಷವರ್ಷವೂ ಹೆಚ್ಚಳವಾಗುತ್ತಿರುವುದು ಖಾದಿ ಹಾಗೂ ಕೈಮಗ್ಗದ ಉತ್ಪಾದಕರಲ್ಲಿ ಸಂತಸ ಉಂಟುಮಾಡಿದೆ.

ಖಾದಿ ಧರಿಸುವುದು ಕೆಲವರಿಗೆ ಸ್ವದೇಶಿ ಪರಿಕಲ್ಪನೆಯ ಮೂರ್ತ ರೂಪ ಎನಿಸಿದ್ದರೆ, ಕೆಲವರಿಗೆ ಪ್ರತಿಷ್ಠೆಯ ವಿಷಯ. ರಾಜಕಾರಣಿಗಳಂತೂ ಸಮವಸ್ತ್ರದಂತೆಯೇ ಆಗಿಬಿಟ್ಟಿದೆ. ದುಬಾರಿ ಹಾಗೂ ನಿರ್ವಹಣೆಗೆ ತುಸು ಕಷ್ಟ ಎನಿಸುವ ಈ ವಸ್ತ್ರ ಈಚೆಗೆ ಸಾಮಾನ್ಯ ಜನರ ಜೀವನದಲ್ಲೂ ಹಾಸು ಹೊಕ್ಕಾಗಿದೆ. ಉರಿ ಬೇಸಿಗೆಯಲ್ಲಿ ಬಿಸಿಲಿನ ಧಗೆ ಹೆಚ್ಚುತ್ತಲೇ ಹತ್ತಿ ಹಾಗೂ ಖಾದಿ ವಸ್ತ್ರಗಳನ್ನು ಧರಿಸಿ ಕೂಲ್‌ ಆಗಿರಲು ಬಯಸುವವರೇ ಹೆಚ್ಚು.

ಮೊದಲೆಲ್ಲ ತಿಳಿವರ್ಣದ ಖಾದಿ ಜನಪ್ರಿಯವಾಗಿದ್ದರೆ, ಈಗ ಇವುಗಳಲ್ಲೇ ಗಾಢವರ್ಣಗಳ ಬಟ್ಟೆಗಳೂ ಜನಮೆಚ್ಚುಗೆ ಗಳಿಸಿವೆ. ಖಾದಿ ವಸ್ತ್ರಗಳ ಮೇಲೆ ಕಸೂತಿ, ಸಾಂಪ್ರದಾಯಿಕ ಹಾಗೂ ಆಧುನಿಕ ಪ್ರಿಂಟ್‌ಗಳ ಬಳಕೆಯಿಂದ ಸಾಮಾನ್ಯವೆನಿಸುಂಥ ಬಟ್ಟೆಗಳೂ ಕಲಾತ್ಮಕ ಹಾಗೂ ಹಬ್ಬಗಳಿಗೆ ಧರಿಸುವ ವಸ್ತ್ರಗಳ ಲುಕ್ ನೀಡುವುದರಿಂದ ಹಲವು ಉಡುಪು ಕಂಪನಿಗಳು ಖಾದಿಯದ್ದೇ ಪ್ರತ್ಯೇಕ ಸೀರೀಸ್‌ಗಳನ್ನು ತರಲು ಆರಂಭಿಸಿವೆ. ರೇಷ್ಮೆ ಹಾಗೂ ಖಾದಿ ಮಿಶ್ರಣದ ವಸ್ತ್ರಗಳಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ. ಖಾದಿ ಆಭರಣಗಳು, ಚೀಲಗಳು, ಗೃಹಾಲಂಕಾರದ ವಸ್ತುಗಳೂ ಈಚೆಗೆ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿವೆ. ಆನ್‌ಲೈನ್‌ ಮಾರುಕಟ್ಟೆಯಲ್ಲಿ ಖಾದಿಯ ಬಹುತೇಕ ಎಲ್ಲ ಬಗೆಯ ವಸ್ತುಗಳೂ ಸಿಗುತ್ತಿವೆ.

ಕೈಗಾರಿಕೆಗಳಿಂದ ಮಾಲಿನ್ಯ ಉಂಟಾಗುವುದು ಸಹಜ. ಆದರೆ ವಸ್ತ್ರೋದ್ಯಮದಲ್ಲೂ ಮಾಲಿನ್ಯ ಕಡಿಮೆ ಮಾಡಲು ಖಾದಿಯೇ ಅತ್ಯುತ್ತಮ ಪರಿಹಾರವಾಗಿ ನಿಂತಿದೆ. ಇದು ನಿಸರ್ಗಸ್ನೇಹಿ ಉತ್ಪನ್ನವಾಗಿರುವುದರಿಂದ ಪರಿಸರಪ್ರಿಯರ ನೆಚ್ಚಿನ ಉತ್ಪನ್ನವಾಗಿದೆ. ಹೀಗಾಗಿ ಹೊಸ ತಲೆಮಾರಿನವರಲ್ಲಿ ಖಾದಿ ಬಗ್ಗೆ ವಿಶೇಷ ಆಸ್ಥೆ ಕಾಣುತ್ತಿದೆ.

ಹಬ್ಬಗಳಲ್ಲಿ, ವಿಶೇಷ ಸಮಾರಂಭಗಳಿಗೆ ಭಾರಿ ರೇಷ್ಮೆ ವಸ್ತ್ರವನ್ನು ಧರಿಸಲು ಇಷ್ಟಪಡದವರೂ ಖಾದಿಯೆಡೆಗೆ ಹೊರಳಿದ್ದಾರೆ. ಇದರಲ್ಲಿ ಬಂದಿರುವ ಹಲವು ವಿನ್ಯಾಸಗಳ ಬಟ್ಟೆಗಳು ಮಾಡರ್ನ್‌ ಲುಕ್‌ಗೆ ತಕ್ಕವಾಗಿರುವುದರಿಂದ ಯುವಜನರ ಆಯ್ಕೆಯ ಉಡುಪುಗಳಾಗಿವೆ.

ಗುಣಮಟ್ಟದ ಡೆನಿಮ್‌

ಖಾದಿ ಡೆನಿಮ್‌ಗಳೇ ಈಗ ಹೆಚ್ಚು ಬೇಡಿಕೆಯಲ್ಲಿರುವ ವಸ್ತ್ರಗಳು ಎಂಬ ಸಂಗತಿಯೂ ಈಚೆಗೆ ವರದಿಯಾಗಿದೆ. ಖಾದಿಯಲ್ಲೇ ಗುಣಮಟ್ಟದ ಜೀನ್ಸ್‌ ಉತ್ಪಾದನೆ ಸಾಧ್ಯ ಎಂದೂಕೆವಿಐಸಿ ಪ್ರತಿಪಾದಿಸಿದೆ. ಪ್ರಖ್ಯಾತ ರೈಮಂಡ್ಸ್‌ ಕಂಪನಿಯಿಂದ ಹಿಡಿದು ಹಲವು ಕಂಪನಿಗಳು ಕೆವಿಐಸಿಯೊಂದಿಗೆ ಒಪ್ಪಂದ ಮಾಡಿಕೊಂಡು ಖಾದಿ ವಸ್ತ್ರಗಳನ್ನು ಖರೀದಿಸುತ್ತಿವೆ.

ಖಾದಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದಲೇ 2018ರಲ್ಲಿ ದೇಶದಲ್ಲಿ ಖಾದಿ ಮಾರಾಟ ಶೇ 32ರಷ್ಟು ಹೆಚ್ಚಳವಾಗಿದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ತಿಳಿಸಿದೆ. ದೇಶದಲ್ಲಿ ಕೆವಿಐಸಿ ನೋಂದಣಿ ಹೊಂದಿರುವ ಒಟ್ಟು 2,563 ಸಂಸ್ಥೆಗಳಿವೆ. ಇವುಗಳಲ್ಲಿ ರಾಜ್ಯದ 151 ಸಂಸ್ಥೆಗಳು ಕೆಲಸ ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT