ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive| ಬೆಳೆಯಲು ನೀರಷ್ಟೇ ಸಾಕು

Last Updated 29 ಡಿಸೆಂಬರ್ 2020, 7:04 IST
ಅಕ್ಷರ ಗಾತ್ರ

ಸುತ್ತಮುತ್ತ ನಳನಳಿಸುವ ಹಸಿರು ಸಸ್ಯಗಳಿದ್ದರೆ ಯಾರಿಗೆ ಖುಷಿಯಾಗದು? ಮನೆಯೊಳಗಿದ್ದರೂ ಹಸಿರಿನ ವಾತಾವರಣ ಬೇಕೆನ್ನುವವರು ಕೈತೋಟಗಳಿಗೆ ಮೊರೆ ಹೋಗುತ್ತಾರೆ. ಕೈತೋಟಗಳ ಆರೈಕೆಯೂ ಸಾಧ್ಯವಿಲ್ಲ, ಕೆಲಸದೊತ್ತಡ ಬಹಳ ಎನ್ನುವವರು ಮನೆಯೊಳಗೇ ಹೆಚ್ಚಿನ ಶ್ರಮವಿಲ್ಲದೇ ನೀರನಲ್ಲಿಯೇ ಬದುಕುವ ಸಸ್ಯಗಳನ್ನು ತರಬಹುದು.

ಮನೆಯೆದುರು ಬಾಗಿಲು, ಗೇಟ್‌ಗಳ ಬಳಿ ಮನಿ ಪ್ಲಾಂಟ್‌ ಸಸ್ಯಗಳನ್ನು ಹಾಕಿರುವವರ ಸಂಖ್ಯೆ ದೊಡ್ಡದಿದೆ. ಇದೇ ಮನಿ ಪ್ಲಾಂಟ್‌ ಗಿಡದ ಚಿಕ್ಕ ದಂಟನ್ನು ತಂದು ಬಾಟಲ್ ನೀರಿನಲ್ಲಿ ಹಾಕಿ ಮನೆಯೊಳಗೆ ಇಟ್ಟರೂ ಅದು ಬೆಳೆಯುತ್ತದೆ. ನೀರಿನಲ್ಲಿಯೇ ಬದುಕಿ ಮನೆಯ ಒಳಾಂಗಣವನ್ನೂ ಆಹ್ಲಾದಗೊಳಿಸುವ ಹಲವು ಸಸ್ಯಗಳಿವೆ.

ಒಳಾಂಗಣ ಕೈತೋಟ ಮಾಡಲು ಇಚ್ಛಿಸುವವರಿಗೆ ನೀರಿನಲ್ಲಿ ಬದುಕುವ ಸಸ್ಯಗಳು ಉತ್ತಮ ಆಯ್ಕೆ. ಕಾರಣ ಮನೆಯೊಳಗೆ ಹೂಕುಂಡದ ಮಣ್ಣು ಬೀಳುವ ಆತಂಕವಿಲ್ಲ. ಬೆಕ್ಕು–ನಾಯಿಗಳು ಮನೆಯೊಳಗಿದ್ದರೆ ಅವು ಗಿಡದ ಪಾಟ್‌ಗಳನ್ನು ಅಗೆದು ಹೊಲಸು ಮಾಡಬಹುದು ಎಂಬ ಚಿಂತೆಯಿಲ್ಲ. ದಿನವೂ ನೀರು ಹಾಕಲೇಬೇಕು ಎಂಬ ತುರ್ತು ಇಲ್ಲ. ಸಮಯವಿದ್ದಾಗ, ನೆನಪಾದಾಗ ನೀರು ಬದಲಿಸಬಹುದು. ಅಲ್ಪಸ್ವಲ್ಪ ಪೋಷಕಾಂಶ ಒದಗಿಸಬಹುದು.

ಗೊಂಚಲು ಗೊಂಚಲಾಗಿ ಎಲೆಗಳಾಗುವ, ವರ್ಷವಿಡೀ ಹೂಗಳನ್ನು ಬಿಡುವ ಬೆಗೊನಿಯಾ ಗಿಡಗಳನ್ನು ನೀರಿನಲ್ಲಿ ಬೆಳೆಯಬಹುದು. ಕಿಟಕಿಗಳ ಬಳಿ, ತೂಗು ಬ್ಯಾಸ್ಕೆಟ್‌ಗಳಲ್ಲಿ, ಕಂಟೇನರ್‌ಗಳಲ್ಲಿ ಬೆಳೆದು ಟೇಬಲ್‌ಗಳ ಮೇಲೆ ಇಡಲು ಸಹ ಬೆಗೊನಿಯಾ ಉತ್ತಮ ಸಸ್ಯ.

‘ಪೆಥೋಸ್‌’ ಸಸ್ಯ ಮನೆಯೊಳಗೆ ಸೂರ್ಯನ ಕಿರಣ ಬೀಳದಿದ್ದರೂ ಚೆನ್ನಾಗಿ ಬೆಳೆಯುತ್ತದೆ. ‘ಸ್ನೇಕ್‌ ಪ್ಲಾಂಟ್‌’ ನೀರಿನಲ್ಲಿ ಬದುಕಿ ಮನೆಯ ಒಳಾಂಗಣವನ್ನೂ ಹಚ್ಚ ಹಸಿರು ಮಾಡಬಲ್ಲದು. ‘ಲಕ್ಕಿ ಬಾಂಬೂ’ ಗಿಡಗಳನ್ನು ನಮ್ಮ ಸುತ್ತ ವಾಣಿಜ್ಯಿಕ ಸ್ಥಳಗಳಲ್ಲೂ ಬಹಳವಾಗಿ ಕಾಣುತ್ತಿದ್ದೇವೆ. ಕಾರಣ ಇದನ್ನು ನೀರಿನಲ್ಲಿ ಬೆಳೆಯುವುದು ಸುಲಭ. ಹೋಟೆಲ್‌, ಅಂಗಡಿಗಳು, ವ್ಯವಹಾರದ ಸ್ಥಳಗಳಲ್ಲೂ ಇವು ದರ್ಶನ ನೀಡುತ್ತಿವೆ. ಬಿದಿರಿನಂತೆ ಕಾಣುವುದರಿಂದ ಈ ಸಸ್ಯಕ್ಕೆ ಇಂಥ ಹೆಸರು ಬಂದಿದೆ. ಈ ಸಸ್ಯಗಳಿಗೆ ಆಧಾರವಾಗಿ ನೀರಿನ ಜೊತೆ ಚಿಕ್ಕ ಗುಂಡುಕಲ್ಲುಗಳನ್ನೂ ಹಾಕಬೇಕಾಗುತ್ತದೆ.

ನೀರಿನಲ್ಲಿ ಹಾಕಿಡಲು ಜನರು ಆರಿಸುವ ಮತ್ತೊಂದು ಪ್ರಮುಖ ಸಸ್ಯವೆಂದರೆ ‘ಸ್ಪೈಡರ್‌ ಪ್ಲಾಂಟ್‌’. ಒಂದು ಗ್ಲಾಸ್‌ ನೀರಿನಲ್ಲೇ ಸ್ಪೈಡರ್‌ ಪ್ಲಾಂಟ್‌ನ ಕಟಿಂಗ್‌ ಬೆಳೆದು ಸಸ್ಯವಾಗುತ್ತದೆ. ಇದು ವಾತಾವರಣವನ್ನು ಶುದ್ಧೀಕರಿಸುತ್ತದೆ ಎಂದು ನಾಸಾ ವರದಿಯಲ್ಲಿಯೂ ಉಲ್ಲೇಖಿತವಾಗಿದೆ.

ಕೆಲವು ಔಷಧೀಯ ಸಸ್ಯಗಳನ್ನೂ ನೀರಿನಲ್ಲಿ ಇಡಬಹುದು. ವಾಂಡರಿಂಗ್‌ ಜ್ಯೂ ಇದಕ್ಕೊಂದು ನಿದರ್ಶನ. ಇದು ಅಲಂಕಾರಿಕ ಸಸ್ಯವಾದರೂ ಔಷಧೀಯವೂ ಹೌದು. ಕೆಲವು ಸಸ್ಯಗಳು ನೀರಿನಲ್ಲಿ ಕೆಲವು ತಿಂಗಳುಗಳ ಕಾಲ ಇದ್ದು ನಂತರ ಬದುಕುವುದಿಲ್ಲ. ಅಂಥವುಗಳನ್ನು ಕೆಲ ಕಾಲದ ನಂತರ ಮಣ್ಣಿಗೆ ಸ್ಥಳಾಂತರಿಸಿ ಮನೆಯೊಳಗೆ ಇಡುವ ನೀರಿನಲ್ಲಿ ಗಿಡದ ಹೊಸ ಕಟಿಂಗ್‌ ಹಾಕಿಡಬಹುದು. ಫಿಡಲ್‌ ಲೀಫ್‌ ಪ್ಲಾಂಟ್‌ ಅಂಥ ಒಂದು ಸಸ್ಯ.

ಸ್ವೀಟ್‌ ಪೊಟಾಟೊ ವೈನ್‌, ಡ್ರ್ಯಾಗನ್‌ ವಿಂಗ್‌, ಕೋಲಿಯಸ್‌, ಮಾನ್‌ಸ್ಟೆರಾ ಡೆಲಿಸಿಯೊಸಾ, ಚೈನೀಸ್‌ ಎವರ್‌ಗ್ರೀನ್‌, ಇಂಗ್ಲಿಷ್‌ ಐವಿ ನೀರಿನಲ್ಲಿ ಹಾಕಿ ಇಡಬಹುದಾದ ಕೆಲವು ಸಸ್ಯಗಳು. ಇವೆಲ್ಲವೂ ಮಣ್ಣಿನಲ್ಲೂ ಇನ್ನೂ ಉತ್ತಮವಾಗಿ ಬೆಳೆಯುತ್ತವೆ. ಆದರೆ ಮನೆಯೊಳಗೆ ಸಸ್ಯಗಳ ಬಣ್ಣಗಳನ್ನು ತುಂಬಿಕೊಳ್ಳಲು ಬಯಸುವವರು ನೀರಿನಲ್ಲಿ ತಿಂಗಳುಗಟ್ಟಲೇ ಇವುಗಳನ್ನು ಹಾಕಿ ಇಡಬಹುದು. ರಬ್ಬರ್‌ ಸಸ್ಯವನ್ನೂ ನೀರಿನಲ್ಲಿ ವರ್ಷಗಟ್ಟಲೇ ಇಡಬಹುದು. ಇದು ದೊಡ್ಡ ಅಗಲ ಎಲೆಗಳನ್ನು ಬಿಡುವುದರಿಂದ ಒಳಾಂಗಣ ಸೌಂದರ್ಯ ಇಮ್ಮಡಿಸುತ್ತದೆ.

ನೀರಿನಲ್ಲಿ ಸಸಿಗಳನ್ನು ಬೆಳೆಸುವಾಗ ಗಾಜಿನ ಬಾಟಲುಗಳನ್ನು ಬಳಸುವುದೇ ಹೆಚ್ಚು ಸೂಕ್ತ ಎನ್ನುವುದು ಪರಿಣತರ ಅಭಿಮತ. ನೀರು ಕಡಿಮೆಯಾದರೆ ತಕ್ಷಣ ತಿಳಿಯುತ್ತದೆ ಎನ್ನುವುದೇ ಪ್ರಮುಖ ಕಾರಣ. ನೀರು ಸೋರದ ಯಾವುದೇ ಬಾಟಲ್‌, ಜಾರ್‌, ವಾಸ್‌ಗಳನ್ನು ಗಿಡ ಹಾಕಿಡಲು ಬಳಸಬಹುದು. ಮನೆಗೆ ತರುವ ದಿನಸಿ ಸಾಮಗ್ರಿಗಳ ಪ್ಯಾಕಿಂಗ್‌ನಲ್ಲಿ ಬರುವಂಥವುಗಳನ್ನು ಮರುಬಳಕೆ ಮಾಡುವ ಮನಸ್ಸಿದ್ದರೆ ಅವುಗಳನ್ನು ಒಳಾಂಗಣ ಅಲಂಕಾರದಲ್ಲಿ ಬಳಸಬಹುದು.

ಕೆಲವು ವಾರಗಳ ನಂತರ ನೀರು ಬದಲಿ‌‌‌ಸಿದರೆ ಒಳ್ಳೆಯದು. ನೀರು ಹೊಲಸಾದಂತೆ ಎನಿಸಿದರೆ ಹೊಸ ನೀರು ಹಾಕಬಹುದು. ದ್ರವರೂಪದ ಜೈವಿಕ ಗೊಬ್ಬರದ ಒಂದೆರಡು ಹನಿಗಳನ್ನು ಆಗಾಗ ಅಪರೂಪಕ್ಕೆಂಬಂತೆ ಹಾಕಬಹುದು. ಬಣ್ಣಬಣ್ಣದ ಗುಂಡುಕಲ್ಲುಗಳನ್ನು ಆರಿಸಿ ಇಟ್ಟುಕೊಂಡರೆ ಅವುಗಳನ್ನೂ ಗಾಜಿನ ಸೀಸೆಯಲ್ಲಿ ನೀರಿನೊಂದಿಗೆ ಹಾಕಿ ಇಟ್ಟರೆ ‘ಟೆರ್ರೇರಿಯಂ’ನಂತೆ ಕಂಗೊಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT