ಹಸಿರು ಪ್ರೇಮಿಗಳಿಗೆ ‘ರೆಡಿ ಟು ಪ್ಲಾಂಟ್’

7

ಹಸಿರು ಪ್ರೇಮಿಗಳಿಗೆ ‘ರೆಡಿ ಟು ಪ್ಲಾಂಟ್’

Published:
Updated:
Deccan Herald

ಕಂಪ್ಯೂಟರ್ ಹತ್ತಿರ ಅಲಂಕಾರಕ್ಕಾಗಿ ಹೂ ಕುಂಡ ಬೇಕಾಗಿತ್ತು. ಅಂಗಡಿಗೆ ಹೋಗುತ್ತೇವೆ. ತಾಜಾ ಹೂವನ್ನು ಹೋಲುವ ಪ್ಲಾಸ್ಟಿಕ್ ಹೂಗಳಿರುವ ಕುಂಡವನ್ನು ತರುತ್ತೇವೆ. ಒಂದಷ್ಟು ಸಮಯದ ಬಳಿಕ ಬಣ್ಣ ಮಾಸುತ್ತದೆ. ಕುಂಡ ಮೂಲೆ ಸೇರುತ್ತದೆ. ಪ್ಲಾಸ್ಟಿಕ್ ಹೂವು ತ್ಯಾಜ್ಯವಾಗುತ್ತದೆ.

ಪ್ಲಾಸ್ಟಿಕ್ ಹೂವನ್ನು ತಾಜಾ ಹೂವೆಂದು ಯಾಕೆ ಭ್ರಮಿಸಬೇಕು? ತಾಜಾ ಹೂವಿನ ಕುಂಡವೇ ಕಂಪ್ಯೂಟರ್ ಹತ್ತಿರ ಇಟ್ಟುಕೊಳ್ಳುವಂತಾದರೆ. ಆದರೆ ಏನಿಲ್ಲ. ಈ ಚಿಂತನೆ ಸಾಕಾರಗೊಳಿಸಲೆಂದೇ ‘ರೆಡಿ ಟು ಪ್ಲಾಂಟ್’ ತಯಾರಾಗಿದೆ. ಇದು ಪ್ಲಾಸ್ಟಿಕ್ ರಹಿತ. ಪರಿಸ್ನೇಹಿ!

ಉತ್ತರ ಕನ್ನಡ ಜಿಲ್ಲೆ ಶಿರಸಿಯ ‘ಇನ್ನೋಸೆಂಟರ್’ ಸಂಸ್ಥೆಯು ಮುಖ್ಯವಾಗಿ ನಗರದ ಹೂ ಮನಸ್ಸಿಗರಿಗಾಗಿ ರೆಡಿ ಪ್ಲಾಂಟ್ ಸಿದ್ಧಪಡಿಸಿದೆ. ಮಣ್ಣಿಲ್ಲ, ಜಾಗವಿಲ್ಲ, ಗಿಡ ಎಲ್ಲಿಂದ ತರಲಿ? ಇಂಥ ಯಾವುದೇ ಸಮಸ್ಯೆಯೇ ಇಲ್ಲ. ಪುಟ್ಟ ಕುಂಡದೊಳಗೆ ಗೊಬ್ಬರದ ಮಿಶ್ರಣವಿದೆ. ಕುಂಡದ ಹೊರಗೆ ಹೂವಿನ ಬೀಜಗಳ ಪ್ಯಾಕೆಟ್ ಇದೆ.

ನೀವು ಮಾಡಬೇಕಾದುದಿಷ್ಟೇ. ಕುಂಡದೊಳಗೆ ಬೀಜ ಹಾಕಿ ನೀರು ಉಣಿಸಿದರಾಯಿತು. ಒಳಗಿರುವ ಪೋಷಕಾಂಶ ಭರಿತ ಮಣ್ಣಿನಲ್ಲಿ ಬೀಜಗಳು ಮೊಳಕೆಯೊಡೆಯುತ್ತವೆ. ಸ್ವಲ್ಪ ನಿಗಾ ವಹಿಸಿದರೆ ಸಾಕು. ನೋಡಿ, ಕುಂಡದಲ್ಲಿ ತಾಜಾ ಹೂವಿನ ನಗು. ಕೃಷಿಯ ಅನುಭವ ಇಲ್ಲದವರಿಗೆ ಈ ವ್ಯವಸ್ಥೆ ಖುಷ್. ಹೂವು ಅಷ್ಟೇ ಅಲ್ಲ, ತರಕಾರಿ ಬೀಜವನ್ನೂ ಈ ಕುಂಡದಲ್ಲಿ ಊರಬಹುದು.

‘ಈಗಾಗಲೇ ಕೃಷಿಯಲ್ಲಿ ಬಳಸುತ್ತಿರುವ ಗೊಬ್ಬರವನ್ನು ರೈತರ ತೋಟ, ಗದ್ದೆಗಳ ತ್ಯಾಜ್ಯದಿಂದ ಮಾಡಲಾಗಿದ್ದು, ಜೊತೆಗೆ ಎರೆಗೊಬ್ಬರ, ತೆಂಗಿನ ನಾರಿನ ಪುಡಿ ಹಾಗೂ ಮರದ ಪುಡಿಯನ್ನು ಸಮ್ಮಿಶ್ರಮಾಡಿ ಬಳಸಿದ್ದೇವೆ’ ಎನ್ನುತ್ತಾರೆ ರೆಡಿ ಪ್ಲಾಂಟ್ ತಯಾರಿಸಿರುವ ಸೆಂಟರ್‌ನ ಮುಖ್ಯಸ್ಥ ಶಶಿ ಹೆಗಡೆ.

ಮನೆಯೊಳಗೆ ಹತ್ತಾರು ಕುಂಡಗಳಿದ್ದರೆ ಬಗೆಬಗೆಯ ಹೂಗಳ ಅಂದವನ್ನು ಸವಿಯಬಹುದು. ಮನೆಯ ಬಾಲ್ಕನಿ, ಕಿಟಕಿಗಳ ಅಂದವನ್ನು ಹೆಚ್ಚಿಸಬಹುದು. ಕಚೇರಿಯ ಮೇಜಿನ ಮೇಲೆ ಅಲಂಕಾರಕ್ಕಾಗಿ ಇಡಬಹುದು.  ನಮ್ಮ ಮನಸ್ಸಿನ ಸೌಂದರ್ಯದಂತೆ ವಿನ್ಯಾಸ ಮಾಡಬಹುದು.

‘ಕುಂಡದೊಳಗಿನ ಮಣ್ಣು ಪರೀಕ್ಷೆಗೆ ಒಳಪಟ್ಟಿದೆ. ಪ್ರತಿ ಮಿಶ್ರಣದ ಪೋಷಕಾಂಶಗಳ ಹಾಗೂ ರಸಸಾರ (ಪಿ.ಎಚ್) ಮೌಲ್ಯ ದೃಢೀಕರಿಲ್ಪಟ್ಟಿದೆ. ಬೇರೆ ಬೇರೆ ಬೆಳಕಿನ ಪರಿಸರಗಳಲ್ಲಿ ಮೊಳಕೆಯ ಪ್ರಮಾಣವನ್ನು ಪರೀಕ್ಷಿಸಿಯೇ ಬೀಜಗಳನ್ನು ಪೂರೈಸುತ್ತಿದ್ದೇವೆ. ಇದರೊಳಗಿನ ಮಣ್ಣಿನ ಫಲವತ್ತತೆಯು ಹದಿನೆಂಟು ತಿಂಗಳ ತಾಳಿಕೆ ಹೊಂದಿರುತ್ತದೆ’ ಎನ್ನುತ್ತಾರೆ ಅವರು.

ಕುಂಡವನ್ನು ಉಡುಗೊರೆಯಾಗಿ ನೀಡಬಹುದು. ಸಭೆ ಸಮಾರಂಭಗಳಲ್ಲಿ ಸ್ಮರಣಿಕೆಯಾಗಿ ನೀಡಲು ಸೂಕ್ತವಾಗಿದೆ. ಹೆಚ್ಚು ಶ್ರಮವಿಲ್ಲದೆ ಮನೆಯ ಜಗಲಿಯ ಸುತ್ತ, ಅಂಗಳ ಸುತ್ತ ಕುಂಡಗಳನ್ನಿಟ್ಟು ಹೂವು ಬೆಳೆಸಬಹುದು. ಬೇಕಾದರೆ ತರಕಾರಿ ಕೂಡಾ!

ಕುಂಡದ ಅಳತೆ 12 ಸೆಂ.ಮೀ X 12 ಸೆಂ.ಮೀ , ಎತ್ತರ 13 ಸೆಂಟಿಮೀಟರ್. ಬೆಲೆ ₹150. ‘ಇನ್ನೋಸೆಂಟರ್’ನಲ್ಲಿ ಶಶಿಯವರು ಚೀಫ್ ಎಕ್ಸಿಕ್ಯೂಟಿವ್‌ ಆದರೆ, ಹರ್ಷ ಮಾರುಕಟ್ಟೆ ಪರಿಣತ. ಇವರಿಬ್ಬರ ಯೋಚನೆ, ಯೋಜನೆಯಂತೆ ದೊಡ್ಡ ಗಾತ್ರದ ಕುಂಡಗಳು ನಿಕಟ ಭವಿಷ್ಯದಲ್ಲಿ ವಿನ್ಯಾಸ ಪಡೆಯುವ ಸಾಧ್ಯತೆ ಇದೆ. ಹೂವಿನ ಕುಂಡಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ : 9739903856

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !