ಕ್ಷುದ್ರಗ್ರಹಗಳಲ್ಲಿ ಗಣಿಗಾರಿಕೆ ಮಾಡುವ ಕಾಲ

ಸೋಮವಾರ, ಜೂನ್ 17, 2019
22 °C
ಅಂತರಿಕ್ಷ ಕೌತುಕ

ಕ್ಷುದ್ರಗ್ರಹಗಳಲ್ಲಿ ಗಣಿಗಾರಿಕೆ ಮಾಡುವ ಕಾಲ

Published:
Updated:
Prajavani

ನಾವು ವಾಸಿಸುವ ಭೂಮಿ ತನ್ನ ಅಂತರಾಳದಲ್ಲಿ ಬೆಲೆಬಾಳುವ ಅದಿರುಗಳನ್ನು ಇಟ್ಟುಕೊಂಡಿದೆ. ಆ ಅದಿರುಗಳಲ್ಲಿ ಚಿನ್ನ,ಬೆಳ್ಳಿ, ಪ್ಲಾಟಿನಂ,ತಾಮ್ರ, ಕಬ್ಬಿಣ ಅಲ್ಯೂಮಿನಯಂನತಹ ಹಲವು ಲೋಹಗಳ ನಿಕ್ಷೇಪವಿದೆ.

ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಮತ್ತು ನಾವು ನಿತ್ಯ ಬಳಸುವ ವಾಹನಗಳ ಚಲನೆಗೆ ಶಕ್ತಿ ನೀಡುವಂತಹ ಪೆಟ್ರೋಲಿಯಂ ಉತ್ಪನ್ನಗಳಿಗೂ ಭೂಮಿಯೇ ಆಶ್ರಯ ತಾಣ. ಇಂಧನ ಮೂಲಗಳಲ್ಲಿ ಒಂದಾದ ಕಲ್ಲಿದ್ದಲು ಕೂಡ ಭೂಮಿಯ ಒಡಲಾಳದಲ್ಲಿದೆ.

ಅಪಾರ ಪ್ರಮಾಣದ ಇಂಧನ ಮತ್ತು ನಿಕ್ಷೇಪಗಳು ಇದ್ದರೂ ಮಾನವ ತನ್ನ ದುರಾಸೆ ಮತ್ತು ಲಾಲಸೆಗಳಿಂದ ಎಲ್ಲ ನಿಕ್ಷೇಪಗಳನ್ನು ಹೊರತೆಗೆದು ಭೂಮಿಯ ಒಡಲನ್ನು ಬರಿದು ಮಾಡುತ್ತಿರುವುದು ದುರಂತ. ಕೆಲವು ಬಗೆಯ ಇಂಧನ ಮತ್ತು ಖನಿಜಗಳನ್ನು ಒಮ್ಮೆ ಮಾತ್ರ ಉಪಯೋಗಿಸಬಹುದು. ಭೂಮಿಯಿಂದ ನಿಕ್ಷೇಪಗಳನ್ನು ಹೊರತೆಗೆದ ನಂತರ, ಮತ್ತೆ ಆ ಜಾಗದಲ್ಲಿ ಅವು ಉತ್ಪತ್ತಿಯಾಗುವುದಿಲ್ಲ.

ಉಕ್ಕು, ಬ್ಯಾಟರಿಗಳು, ವಾಹನದ ಬಿಡಿಭಾಗಗಳು, ಮತ್ತು ಆಭರಣಗಳ ತಯಾರಿಕೆಯಲ್ಲಿ ನಿಕ್ಕಲ್, ಕೋಬಾಲ್ಟ್, ಚಿನ್ನ ಮತ್ತು ಕಬ್ಬಿಣದಂತಹ ಲೋಹಗಳನ್ನು ಬಳಸಲಾಗುತ್ತಿದೆ. ಕಬ್ಬಿಣದ ನಿಕ್ಷೇಪಗಳು ಭೂಮಿಯ ಆಳದಲ್ಲಿ ಹೆಚ್ಚಾಗಿವೆ. ಆದರೆ ಅದನ್ನು ಹೊರತೆಗೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅತಿಯಾದ ಒತ್ತಡ ಮತ್ತು ಉಷ್ಣತೆಗಳು ಗಣಿಗಾರಿಕೆಗೆ ಅಡ್ಡಿಯಾಗುತ್ತಿವೆ. ಈ ನಿಟ್ಟಿನಲ್ಲಿ ರಷ್ಯಾದವರು ವಿಫಲ ಪ್ರಯತ್ನ ಮಾಡಿ ಕೈಸುಟ್ಟುಕೊಂಡಿದ್ದು ಇತಿಹಾಸ. ಭೂಮಿಯಲ್ಲಿನ ನಿಕ್ಷೇಪಗಳಿಗಿಂತ ಬೇರೆ ಬೇರೆ ಕ್ಷೇತ್ರಗಳಲ್ಲಿ ಲೋಹಗಳಿರುವ ಅದಿರುಗಳನ್ನು ಪತ್ತೆಹಚ್ಚಲಾಗಿದೆ. ಇವುಗಳಲ್ಲಿ ಖಗೋಳ ವಿಜ್ಞಾನಿಗಳು ಪತ್ತೆ ಮಾಡಿರುವ ಕ್ಷುದ್ರಗ್ರಹಗಳೂ ಇವೆ.

ನಮ್ಮ ಸೌರವ್ಯೂಹದಲ್ಲಿ ಮಂಗಳ ಮತ್ತು ಗುರುಗ್ರಹದ ನಡುವೆ 50 ಸಾವಿರಕ್ಕಿಂತಲೂ ಹೆಚ್ಚು ಕ್ಷುದ್ರಗ್ರಹಗಳಿವೆ ಎಂದು ಗೊತ್ತಾಗಿದೆ. ಇವು ಸಹ ಸೂರ್ಯನ ಸುತ್ತ ತಮ್ಮದೇ ಆದ ಗೊತ್ತು ಗುರಿಯಿಲ್ಲದ ಕಕ್ಷೆಯಲ್ಲಿ ಸುತ್ತುತ್ತಿವೆ ಎಂದು ತಿಳಿದುಬಂದಿದೆ. ಈ ಕ್ಷುದ್ರಗ್ರಹಗಳಲ್ಲಿ ‘ಸಿರಿಯಸ್’ ಎಂಬುದು ಅತ್ಯಂತ ದೊಡ್ಡ ಗಾತ್ರದ ಕ್ಷುದ್ರಗ್ರಹ.

300ಕ್ಕೂ ಹೆಚ್ಚು ಕ್ಷುದ್ರಗ್ರಹಗಳು 100 ಕಿ.ಮೀ.ಗಳಿಗಿಂತ ಹೆಚ್ಚಿನ ವ್ಯಾಸವನ್ನು ಹೊಂದಿವೆ. ಇವೆಲ್ಲವನ್ನೂ ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ಅನೇಕ ಕ್ಷುದ್ರಗ್ರಹಗಳಿಗೆ ವಿವಿಧ ಅನ್ವೇಷಕರ ಹೆಸರುಗಳನ್ನು ಇಡಲಾಗಿದೆ. ಬೆನ್ನು, ಟೊರೊ, ಜೂನೋ, ಪಲ್ಲಾಸ್, ಇಡಾ, ಡಾಕ್ಟಿಲ್ ಮತ್ತು ಸಿರಿಯಸ್‌ನಂತಹವು ಪ್ರಮುಖ ಕ್ಷುದ್ರಗ್ರಹಗಳು. ರಾತ್ರಿಯಲ್ಲಿ ಆಕಾಶವನ್ನು ನೋಡಿದಾಗ ಪಾರಿಜಾತ ಪುಷ್ಪದಂತೆ ಭೂಮಿಯ ಕಡೆಗೆ ಧಾವಿಸುವ ಬೆಳಕಿನ ಗೆರೆಗಳಂತೆ ಬೀಳುತ್ತಿವೆಯೇನೋ ಎಂಬಂತೆ ಕಾಣುತ್ತವೆ.

ಸಿರಿಯಸ್, ರಿಯಾ, ಬೆನ್ನು, ಎಂಎಲ್‌ಗಳಂತಹ ಕ್ಷುದ್ರಗ್ರಹಗಳಲ್ಲಿ ಹಲವು ನಿಕ್ಷೇಪಗಳನ್ನು ಪತ್ತೆ ಮಾಡಲಾಗಿದ್ದು, ಇಲ್ಲಿ ಗಣಿಗಾರಿಕೆ ಮಾಡುವುದು ಲಾಭದಾಯಕ ಎಂದೂ ತಿಳಿದು ಬಂದಿದೆ. ಈ ಕ್ಷುದ್ರಗ್ರಹಗಳು ಈಗಾಗಲೇ ಅಧ್ಯಯನಕ್ಕೆ ಒಳಪಟ್ಟಿವೆ.

2016ರ ಸೆಪ್ಟೆಂಬರ್ 8 ರಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಕೇಪ್ ಕೆನೆವರಾಟ್ ಉಡಾವಣಾ ಕೇಂದ್ರದಿಂದ ‘ಒಸಿರಿಸ್ ರೆಕ್ಸ್’ ಎಂಬ ಶೋಧಕವನ್ನು ಈಗಾಗಲೇ ಉಡಾಯಿಸಿದೆ. ಒಂದೂವರೆ ವರ್ಷಗಳ ಕಾಲ ಈ ಶೋಧಕವು ಸೂರ್ಯನ ಸುತ್ತಲೂ ಸುತ್ತುತ್ತಾ ‘ಬೆನ್ನು’ ಎಂಬ ಕ್ಷುದ್ರಗ್ರಹದ ಕಡೆಗೆ ಪ್ರಯಾಣ ಮಾಡಿ, ಅದರ ಚಿತ್ರಗಳನ್ನು ತೆಗೆದು, ಸಮೀಕ್ಷೆ ನಡೆಸುತ್ತದೆ. 2020ರ ಜುಲೈ ನಲ್ಲಿ ಇದರ ಮೇಲೆ ಇಳಿದು ಅದರ ದ್ರವ್ಯದ ಮಾದರಿಯನ್ನು ಸಂಗ್ರಹಿಸುತ್ತದೆ.

2021ರ ಮಾರ್ಚ್ ಹೊತ್ತಿಗೆ ಶೋಧಕ ಯಂತ್ರ ವಾಪಾಸ್ ಪ್ರಯಾಣ ಶುರು ಮಾಡುತ್ತದೆ. 2023ರ ಸೆಪ್ಟೆಂಬರ್ ಹೊತ್ತಿಗೆ ಭೂಮಿಗೆ ವಾಪಾಸ್ ಬರಲಿದೆ. ಅಲ್ಲಿಂದ ಬರುವಾಗ ಒಂದು ಕ್ಯಾಪ್ಸೂಲ್‌ನಲ್ಲಿ ಕ್ಷುದ್ರಗ್ರಹದ ದ್ರವ್ಯವನ್ನು ಸಂಗ್ರಹಿಸಿ, ಭೂಮಿಗೆ ತಲುಪಿಸುತ್ತದೆ. ನಂತರ ಸಂಗ್ರಹಿಸಿದ ದ್ರವ್ಯದ ವಿಶ್ಲೇಷಣೆ ನಡೆಸಿ, ಮುಂದಿನ ಕಾರ್ಯಾಚರಣೆ ರೂಪಿಸಲಾಗುತ್ತದೆ. ಆಗ  ಬಾಹ್ಯಾಕಾಶದಲ್ಲಿ ಗಣಿಗಾರಿಕೆ ಪ್ರಾರಂಭವಾಗಬಹುದು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !