ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 27 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಎಂ.ಬಿ. ಶಿವಮೂರ್ತಿ

* ಪ್ರಶ್ನೆ: ನಾನು ನಿವೃತ್ತ ಪೋಸ್ಟ್‌ ಮಾಸ್ಟರ್‌. ವಯಸ್ಸು 70. ನಾನು ಷೇರು ಮಾರುಕಟ್ಟೆಯಲ್ಲಿ ₹ 2 ಲಕ್ಷ ಓರ್ವ ಬ್ರೋಕರ್‌ಗೆ ಕೊಟ್ಟು ದಿನದ ವಹಿವಾಟು (Intra day) ಮಾಡಲು ಹೇಳಿದ್ದೆ. ಅವರು ದುರುಪಯೋಗ ಪಡಿಸಿಕೊಂಡು ಹಣ ಕಳೆದುಕೊಳ್ಳುವಂತೆ ಮಾಡಿದರು. Mid cap Sma* * cap–ಮ್ಯೂಚುವಲ್‌ ಫಂಡ್‌ನಲ್ಲಿ ಎಸ್‌ಐಪಿ ಮಾಡುತ್ತಿದ್ದೇನೆ, ಉತ್ತಮ ವರಮಾನ ತರುವ ಷೇರು (ಸ್ಟಾಕ್‌) ಇದ್ದರೆ ತಿಳಿಸಿರಿ. ₹ 5,000 ತಿಂಗಳಿಗೆ ಹಣ ಹೂಡಲು ನನಗೆ ಸಾಧ್ಯವಿದೆ. ದಯಮಾಡಿ ಮಾರ್ಗದರ್ಶನ ಮಾಡಿರಿ.

ಉತ್ತರ: ನಿಮ್ಮ ವಯಸ್ಸು ಪರಿಗಣಿಸುವಾಗ ನಿಮಗೆ ಷೇರು ಮಾರುಕಟ್ಟೆ ವ್ಯವಹಾರ ತರವಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಷೇರು ಮಾರುಕಟ್ಟೆ ವ್ಯವಹಾರ ಒಂದು ರೀತಿಯಲ್ಲಿ ಊಹಾಪೋಹಗಳಿಂದ ಕೂಡಿರುತ್ತದೆ. ಇಲ್ಲಿ ಲಾಭ ಅಥವಾ ನಷ್ಟ ಯಾವಾಗ ಆಗುತ್ತದೆ ಎನ್ನುವುದನ್ನು ಈ ಮಾರ್ಗದಲ್ಲಿಯೇ ಪಳಗಿದ ವ್ಯಕ್ತಿಗಳಿಗೂ ಮುಂದಾಗಿ ತಿಳಿಯಲು ಸಾಧ್ಯವಿಲ್ಲ. ಷೇರಿನ ಬೆಲೆ ಇಳಿದಾಗ ಕೊಂಡು, ಏರಿದಾಗ ಮಾರಾಟ ಮಾಡುವುದು ಜಾಣತನವಾದರೂ, ಇಲ್ಲಿ ಕೂಡಾ ಸರಿಯಾದ ನಿರ್ಣಯ ತೆಗೆದುಕೊಳ್ಳಲು ಕಷ್ಟವಾಗುತ್ತದೆ. ನೀವು SIPನಲ್ಲಿ Mid cap ಅಥವಾ Sma* * capನಲ್ಲಿ ಹಣ ಹೂಡುವುದಕ್ಕಿಂತ Debt-equity ಫಂಡ್‌ಗಳಲ್ಲಿ ಅಲ್ಪ ಸ್ವಲ್ಪ ಹಣ ಹೂಡಿಕೆ ಮಾಡಿ.

⇒ಆರ್‌.ಕೃಷ್ಣ, ಬೆಂಗಳೂರು

* ಪ್ರಶ್ನೆ: ನಾನು ನಿವೃತ್ತ ಸರ್ಕಾರಿ ಉದ್ಯೋಗಿ. ನನ್ನ ವಯಸ್ಸು 80. ನನ್ನ ಮಗ ಎನ್‌ಆರ್‌ಇ. ನನ್ನ ಹೆಸರಿನಲ್ಲಿ ಠೇವಣಿ ₹ 9 ಲಕ್ಷ ಇರಿಸಿದ್ದು ಅದರ ಬಡ್ಡಿಯನ್ನು ನಾನು ಬಳಸದೆ, ಕಾಲ ಕಾಲಕ್ಕೆ ನವೀಕರಿಸುತ್ತಿದ್ದೇನೆ. ಅದು ಈಗ ₹ 11 ಲಕ್ಷವಾಗಿದೆ. ನನಗೆ ಆದಾಯ ತೆರಿಗೆ ಬರುವುದೇ ಹಾಗೂ ರಿಟರ್ನ್‌ ಸಲ್ಲಿಸಬೇಕೇ ತಿಳಿಸಿರಿ.

ಉತ್ತರ: ನಿಮ್ಮ ಮಗ ಅನಿವಾಸಿ ಭಾರತಿಯರು (Non Resident Indian) ಆದರೂ ಅದರ ಹೆಸರಿನಲ್ಲಿ NRE ಅಥವಾ FENR A/C ನಲ್ಲಿ ಭಾರತದಲ್ಲಿ ಎಷ್ಟು ಹಣವಾದರೂ ಉಳಿತಾಯ ಖಾತೆ ಅಥವಾ ಅವಧಿ ಠೇವಣಿಗಳಲ್ಲಿ ಇರಿಸಿದರೆ ಅವರಿಗೆ ಆದಾಯ ತೆರಿಗೆ ಅನ್ವಯವಾಗುವುದಿಲ್ಲ. ಇದೇ ವೇಳೆ ಅವರು ಸ್ವದೇಶಕ್ಕೆ ಮರಳಿ ಇಲ್ಲಿಯೇ ವಾಸಿಸುವ ಸಂದರ್ಭದಲ್ಲಿ ಸ್ವದೇಶಕ್ಕೆ ಬಂದಿರುವ ತಾರೀಕಿನಿಂದ ಅವರ ಎಲ್ಲಾ ಠೇವಣಿಗಳ ಮೇಲಿನ ಬಡ್ಡಿ ವರಮಾನಕ್ಕೆ ತೆರಿಗೆ ಕೊಡಬೇಕಾಗುತ್ತದೆ. ನಿಮ್ಮ ಹೆಸರಿನಲ್ಲಿರುವ ಠೇವಣಿ ನಿಮ್ಮ ಮಗನು ಕಳಿಸಿದ ಹಣವಾದರೂ, ಒಮ್ಮೆ ಅವರ ಹೆಸರು ಬಿಟ್ಟು ಬೇರೆಯವರ ಹೆಸರಿನಲ್ಲಿ ಠೇವಣಿ ಮಾಡಿದರೆ, ಯಾರ ಹೆಸರಿನಲ್ಲಿ ಠೇವಣಿ ಇದೆಯೋ, ಅವರು ತೆರಿಗೆ ಸಲ್ಲಿಸಬೇಕಾಗುತ್ತದೆ. ನಿಮಗೆ 80 ವರ್ಷ ದಾಟಿದಲ್ಲಿ, ನಿಮ್ಮ ಪಿಂಚಣಿ ಹಣ, ಠೇವಣಿ ಬಡ್ಡಿ ಹಾಗೂ ಇತರೆ ಆದಾಯ (ಕೃಷಿ ಆದಾಯ ಹೊರತುಪಡಿಸಿ) ₹ 5 ಲಕ್ಷ ದಾಟಿದಲ್ಲಿ, 5 ಲಕ್ಷ ದಾಟಿದ ಮೊತ್ತಕ್ಕೆ ತೆರಿಗೆ ನೀವೇ ಸಲ್ಲಿಸಬೇಕು ಹಾಗೂ ಕಡ್ಡಾಯವಾಗಿ ರಿಟರ್ನ್‌ ಸಲ್ಲಿಸಲೇಬೇಕು.

⇒ಪ್ರಸಾದ್‌, ಮೈಸೂರು

ಪ್ರಶ್ನೆ: ನಾನು ಕೇಂದ್ರ ಸರ್ಕಾರಿ ಕಂಪನಿಯ ನಿವೃತ್ತ ನೌಕರ, 2017 ರಲ್ಲಿ ನಿವೃತ್ತಿಯಾಗಿರುವೆ. ನನ್ನ ವಾರ್ಷಿಕ ಪಿಂಚಣಿ ₹ 3.25 ಲಕ್ಷ. ನನ್ನ ವರಮಾನದಂತೆ ಬ್ಯಾಂಕಿನಲ್ಲಿ ಠೇವಣಿಗೆ 15H ಕೊಡಲು ಬರುವುದಿಲ್ಲ ಎಂಬುದಾಗಿ ಬ್ಯಾಂಕಿನಲ್ಲಿ ತಿಳಿಸಿರುತ್ತಾರೆ. ನಾನು 80C ಮುಖಾಂತರ ರಿಯಾಯ್ತಿ ಪಡೆದು ತೆರಿಗೆ ಲೆಕ್ಕ ಹಾಕಿದರೆ, ಟಿ.ಡಿ.ಎಸ್‌.ಗಿಂತ ₹ 47,100 ಕಡಿಮೆ ಆಗುತ್ತದೆ. ನಾನು ₹ 47,100 ತೆರಿಗೆ ಕಟ್ಟಿ ₹ 17,900 ರಿಫಂಡ್‌ ಪಡೆಯಬೇಕಾಗುತ್ತದೆ. ಬ್ಯಾಂಕ್‌ 15H ನಿರಾಕರಿಸುವುದು ಸರಿಯೇ. ದಯಮಾಡಿ ತಿಳಿಸಿರಿ.

ಉತ್ತರ: 15H ಅಥವಾ 15G ನಮೂನೆ ಫಾರಂನಲ್ಲಿ ಠೇವಣಿದಾರ ತಾನು ಆದಾಯ ತೆರಿಗೆಗೆ ಒಳಗಾಗುವುದಿಲ್ಲ ಎಂಬುದಾಗಿ ದೃಢೀಕರಣ ಕೊಡಬೇಕಾಗುತ್ತದೆ. ಈ ಕಾರಣದಿಂದ, ಆದಾಯ ತೆರಿಗೆಗೆ ಒಳಗಾಗುವವರು 15H–15G ನಮೂನೆ ಫಾರಂ, ಬಡ್ಡಿ ಮೂಲದಲ್ಲಿ ತೆರಿಗೆ ಮುರಿಯದಂತೆ ಬ್ಯಾಂಕಿಗೆ (TDS) ಕೊಡಲು ಬರುವುದಿಲ್ಲ.15H–15G ಸಲ್ಲಿಸದೇ ರಿಟರ್ನ್‌ ತುಂಬಿ, ರಿಫಂಡ್‌ ಪಡೆಯಬೇಕಾಗುತ್ತದೆ. ಬ್ಯಾಂಕ್‌ನಲ್ಲಿ ತಿಳಿಸಿರುವುದು ಸರಿ ಇರುತ್ತದೆ. ನಿಮ್ಮ ಪ್ರಶ್ನೆಯಿಂದ ಹಲವರಿಗೆ ಉತ್ತರ ಸಿಕ್ಕಿದಂತಾಗಿದೆ ಧನ್ಯವಾದಗಳು.

⇒ಊರು–ಹೆಸರು ಬೇಡ

* ಪ್ರಶ್ನೆ: ನಾನು ಖಾಸಗಿ ಉದ್ಯೋಗ
ದಲ್ಲಿದ್ದೇನೆ. ವಯಸ್ಸು 47. ನನ್ನ ಹೆಂಡತಿ ಪ್ರಾಥಮಿಕ ಶಾಲಾ ಶಿಕ್ಷಕಿ. ಸಂಬಳ ₹ 32,000. ಎಲ್ಲಾ ಕಡಿತದ ನಂತರ ₹ 20,000 ತಿಂಗಳಿಗೆ ಕೈಗೆ ಬರುತ್ತದೆ. ನಾನು ನನ್ನ ಹೆಸರಿನಲ್ಲಿರುವ 30X40 ಅಳತೆ ನಿವೇಶನದಲ್ಲಿ ಎಸ್‌ಬಿಐನಿಂದ ₹ 10.60 ಲಕ್ಷ ಗೃಹ ಸಾಲ ಪಡೆದಿದ್ದೇನೆ. ನನ್ನ ಸಾಲಕ್ಕೆ ನನ್ನ ಹೆಂಡತಿ ಜಾಮೀನು ಹಾಕಿರುತ್ತಾಳೆ ಹಾಗೂ ಕಂತು ಬಡ್ಡಿ ಅವಳೇ ಕಟ್ಟುತ್ತಾಳೆ. ಅವಳಿಗೆ ಗೃಹಸಾಲದ ಕಂತು ಬಡ್ಡಿಯಿಂದ ಆದಾಯ ತೆರಿಗೆ ವಿನಾಯ್ತಿ ಪಡೆಯಬಹುದೇ ತಿಳಿಸಿರಿ. ಬಹಳ ವರ್ಷಗಳಿಂದ ನಿಮ್ಮ ಪ್ರಶ್ನೋತ್ತರ ಓದುತ್ತಿದ್ದೇನೆ. ಜನ ಸಾಮಾನ್ಯರಿಗೆ ಆಡಿಟರ್‌, ಲಾಯರ್‌ ಹತ್ತಿರ ಪರಿಹಾರ ಪಡೆಯಲಾಗದ ಸಮಸ್ಯೆಗಳಿಗೆ ನೀವು ಮನೆ ಬಾಗಿಲಿಗೇ ಉತ್ತರ ತಲುಪಿಸಿದ್ದೀರಿ. ನಿಮಗೆ ಧನ್ಯವಾದಗಳು.

ಉತ್ತರ: ಗೃಹಸಾಲದ ಅಸಲು ಬಡ್ಡಿಯಲ್ಲಿ ಕ್ರಮವಾಗಿ ಸೆಕ್ಷನ್‌ 80C ಹಾಗೂ ಸೆಕ್ಷನ್‌ 24(B) ಆಧಾರದ ಮೇಲೆ ರಿಯಾಯ್ತಿ ಪಡೆಯಬಹುದು. ನಿಮ್ಮ ವಿಚಾರದಲ್ಲಿ ನಿವೇಶನ ಹಾಗೂ ಸಾಲ ನಿಮ್ಮ ಹೆಸರಿನಲ್ಲಿದ್ದು, ಜಾಮೀನು ಹಾಕಿರುವ ನಿಮ್ಮ ಹೆಂಡತಿಗೆ ತೆರಿಗೆ ವಿನಾಯ್ತಿ ಪಡೆಯುವುದು ಕಷ್ಟವಾದೀತು. EMI ಅವರೇ ಕಟ್ಟುವುದಕ್ಕೆ ಬ್ಯಾಂಕಿನಿಂದ ಲಿಖಿತ ಪತ್ರ ಪಡೆದು, ಆಡಿಟರ್‌ ಮುಖಾಂತರ ಆದಾಯ ತೆರಿಗೆ ಕಚೇರಿಯಲ್ಲಿ ವಿಚಾರಿಸಿರಿ. ‘ಪ್ರಜಾವಾಣಿ’ ಪತ್ರಿಕೆ ಜನಸಾಮಾನ್ಯರ ಆರ್ಥಿಕ ಸಂಕಷ್ಟ ನಿವಾರಿಸಲು ಪ್ರಾರಂಭಿಸಿದ ಈ ಪ್ರಶ್ನೋತ್ತರ ಅಂಕಣ ಓದಿ ನೀವು ಬರೆದಿರುವ ವಿಷಯ ನನಗೆ ಖುಷಿ ತಂದಿದೆ.

⇒ಊರು–ಹೆಸರು ಬೇಡ

* ಪ್ರಶ್ನೆ:  ನಾನು ಹಿರಿಯ ನಾಗರಿಕ. ವಯಸ್ಸು 68. ನನ್ನ ಆದಾಯ ಬಾಡಿಗೆ ₹ 2 ಲಕ್ಷ, ವಾಣಿಜ್ಯ ಕಟ್ಟಡದ ಬಾಡಿಗೆ ₹ 1.10 ಲಕ್ಷ, FD ಬಡ್ಡಿ ₹ 9,000. ಶೇ 30 ಬಾಡಿಗೆಯಲ್ಲಿ ಕಳೆದಾಗ ನನ್ನ ಆದಾಯ ₹ 3 ಲಕ್ಷ ದೊಳಗೆ ಬರುತ್ತದೆ. ನಾನು ತೆರಿಗೆ ರಿಟರ್ನ್‌ ಸಲ್ಲಿಸಬೇಕೇ ತಿಳಿಸಿರಿ.

ಉತ್ತರ: 2011 ರಲ್ಲಿ ಅಂದಿನ ಸರ್ಕಾರ, ಓರ್ವ ವ್ಯಕ್ತಿಯ ಒಟ್ಟು ಆದಾಯ (Gross Income) ಆತನ ವಯಸ್ಸಿಗನುಗುವಾಗಿ ತೆರಿಗೆ ವಿನಾಯ್ತಿ ಪಡೆಯುವ ಮಿತಿ (₹ 2.50 ಲಕ್ಷ, ₹ 3 ಲಕ್ಷ, ₹ 5 ಲಕ್ಷ) ದಾಟಿದರೂ, ಬೇರೆ ಬೇರೆ ಸೆಕ್ಷನ್‌ಗಳ ಆಧಾರದ ಮೇಲೆ ಪಡೆಯುವ ವಿನಾಯತಿ ಪಡೆದು, ಆದಾಯ ತೆರಿಗೆಗೆ ಒಳಗಾಗದಿರುವಲ್ಲಿ, ರಿಟರ್ನ್‌ ತುಂಬುವ ಅವಶ್ಯವಿಲ್ಲ ಎಂಬುದಾಗಿ ಘೋಷಣೆ ಮಾಡಿತ್ತು. ಆದರೆ ಸದ್ಯದ ಆದಾಯ ತೆರಿಗೆ ಕಾನೂನಿನಂತೆ ಓರ್ವ ವ್ಯಕ್ತಿಯ ಒಟ್ಟು ಆದಾಯ, ಆತನ ತೆರಿಗೆ ಮಿತಿ ದಾಟಿದಲ್ಲಿ, ಬೇರೆ ಬೇರೆ ಸೆಕ್ಷನ್‌ಗಳ ಆಧಾರದ ಮೇಲೆ, ತೆರಿಗೆ ವಿನಾಯತಿ ಪಡೆದರೂ ರಿಟರ್ನ್‌ ತುಂಬಲೇ ಬೇಕು. ಸರ್ಕಾರ ಈ ವಿಚಾರ ಮತ್ತೊಮ್ಮೆ ಗಮನಿಸಿ ಇಂತಹ ಸಂದರ್ಭದಲ್ಲಿ ರಿಟರ್ನ್‌ ತುಂಬದಿರಲು ಆದೇಶ ನೀಡಲು ಎಂದು ಆಶಿಸುತ್ತೇನೆ. ಒಟ್ಟಿನಲ್ಲಿ ನೀವು ರಿಟರ್ನ್‌ ಸಲ್ಲಿಸಬೇಕು.

⇒ಸಂತೋಷ್‌ ಕುಮಾರ್‌, ಕೊಪ್ಪಳ

* ಪ್ರಶ್ನೆ: ನಾನೊಬ್ಬ ಪ್ರಾಥಮಿಕ ಶಾಲಾ ಶಿಕ್ಷಕ. ನನ್ನ ಪತ್ನಿ ಕೃಷಿ ಇಲಾಖೆಯಲ್ಲಿ SDA ನೌಕರಳು. ನಮಗೆ ಒಬ್ಬಳು ಮಗಳಿದ್ದಾಳೆ. 2014 ರಲ್ಲಿ ಮದುವೆಯಾಗಿದೆ. ತಂದೆ ತಾಯಿ ನಮ್ಮೊಡನಿದ್ದಾರೆ. 2010–11 ರಲ್ಲಿ SBHನಲ್ಲಿ ₹ 5 ಲಕ್ಷ ಗೃಹಸಾಲ ಪಡೆದು. ಮನೆ ಸಾಲ ತೀರಿಸಲು ಮೊದಲೆರಡು ವರ್ಷ ₹ 5–6 ಸಾವಿರ ನಂತರ ಈಗ ಒಂದು ವರ್ಷದಿಂದ ₹ 8 ಸಾವಿರ ಕಟ್ಟುತ್ತಾ ಬಂದಿದ್ದೇವೆ. ಇಷ್ಟಾದರೂ ₹ 3.23 ಲಕ್ಷ ಸಾಲಬಾಕಿ ಇದೆ. ಹೀಗಾದರೆ ನಾವು ಯಾವಾಗ ಸಾಲ ತೀರಿಸುವುದು ತಿಳಿಯಲಿಲ್ಲ. ನಮ್ಮೊಬ್ಬರ ಒಟ್ಟು ಸಂಬಳ ಕಡಿತದ ನಂತರ ಉಳಿಯುವ ಹಣ 30,000 ಅದರಲ್ಲಿ ಮನೆ ಖರ್ಚು ₹ 8000, P* I ₹ 355 ಸುಕನ್ಯಾ ₹ 2000, ಬ್ಯಾಂಕ್‌ ಸಾಲ ₹ 8000 ಎಲ್ಲಾ ತೆೆದು ₹ 11,600 ಉಳಿಯುತ್ತದೆ. ಬ್ಯಾಂಕ್‌ ಸಾಲ ತೀರಿಸಲು ಸುಲಭದ ದಾರಿ ತಿಳಿಸಿ.

ಉತ್ತರ: ಗೃಹಸಾಲದಲ್ಲಿ ಪ್ರಥಮ ಕೆಲವು ವರ್ಷಗಳು ತುಂಬುವ ಹಣ ಬಡ್ಡಿಗೆ ಜಮಾ ಆಗುವುದರಿಂದ ಸಾಲ ತೀರಿಸಿದಂತೆ ಕಾಣುವುದಿಲ್ಲ. ಮುಂದಿನ ವರ್ಷಗಳಲ್ಲಿ ಗಣನೀಯವಾಗಿ ಕಡಿಮೆ ಆಗುತ್ತದೆ. ಈಗ ಉಳಿದಿರುವ ₹ 3.23 ಲಕ್ಷಕ್ಕನುಗುಣವಾಗಿ, ಸಾಧ್ಯವಾದರೆ, ಸಾಲ ತೀರಿಸುವ ಅವಧಿ ನಿರ್ಧರಿಸಿ, ಹೆಚ್ಚಿನ EMI (ಕಂತು ಬಡ್ಡಿ) ಕಟ್ಟಲು ಪ್ರಾರಂಭಿಸಿರಿ. ಇದರಿಂದ ಸ್ವಲ್ಪ ಬೇಗ ಸಾಲ ತೀರುತ್ತದೆ. ನಿಮ್ಮ ಚಿಕ್ಕ ಕಂದನ ಸಲುವಾಗಿ ಒಂದು ವರ್ಷದ ಆರ್.ಡಿ. ₹ 3,000 ದಿಂದ ಪ್ರಾರಂಭಿಸಿ, ವರ್ಷಂತ್ಯಕ್ಕೆ ಬಂಗಾರದ ನಾಣ್ಯ ಕೊಂಡುಕೊಳ್ಳಿ. ಈ ಪ್ರಕ್ರಿಯೆ ಮಗುವಿನ ಮದುವೆ ತನಕ ನಿಲ್ಲಿಸಬೇಡಿ. ಗೃಹಸಾಲ ಸಾಲವೆಂದು ತಿಳಿಯದೆ, ಅದೊಂದು ಹೂಡಿಕೆ ಎಂತ ಭಾವಿಸಿ, ಸಾಲ ತೀರುತ್ತಲೇ ಹೆಚ್ಚಿನ ಆರ್‌.ಡಿ. ದೀರ್ಘಾವಧಿಗೆ ಮಾಡಿರಿ. ಇದರಿಂದ ನಿಮ್ಮ ಜೀವನದ ಸಂಜೆ ಸುಖಮಯವಾಗುತ್ತದೆ.

⇒ಹೆಸರು–ಊರು ಬೇಡ

* ಪ್ರಶ್ನೆ: ನಾನು ಸರ್ಕಾರಿ ನಿವೃತ್ತ ನೌಕರ. ಪಿಂಚಣಿ ₹ 21,282 ನನಗೆ ಎರಡು ಕಾಂಪ್ಲೆಕ್ಸ್‌ಗಳಿದ್ದು, ಬಾಡಿಗೆ ಎಸ್‌ಬಿಐಗೆ ಜಮಾ ಆಗುತ್ತದೆ. ನನ್ನ ನಿವೃತ್ತ ವೇತನ ಬಾಡಿಗೆ ಸೇರಿ ವಾರ್ಷಿಕ ₹ 3,34,584 ಆಗುತ್ತದೆ. ನಾನು ತೆರಿಗೆ ಕೊಡಬೇಕೇ ತಿಳಿಸಿರಿ.

ಉತ್ತರ: ನೀವು ಹಿರಿಯ ನಾಗರಿಕರಾದ್ದರಿಂದ ನಿಮ್ಮ ಒಟ್ಟು ಆದಾಯದಲ್ಲಿ ₹ 3 ಲಕ್ಷ ಕಳೆದು ಉಳಿದ  ₹ 34,584ಕ್ಕೆ ಮಾತ್ರ ತೆರಿಗೆ ಸಲ್ಲಿಸಬೇಕು. ನಿಮ್ಮ ಒಟ್ಟು ಆದಾಯದಲ್ಲಿ ಪಿಂಚಣಿ ಕಳೆದಾಗ ಬರುವ ಮೊತ್ತ ₹ 79,200 ಇದು ಬಾಡಿಗೆ ಆದಾಯ. ಇದರಲ್ಲಿ ಸೆಕ್ಷನ್‌ 24(ಎ) ಆಧಾರದ ಮೇಲೆ ಶೇ 30 ರಿಯಾಯಿತಿ ಇದೆ.  ಇದರಿಂದಾಗಿ ನಿಮ್ಮ ಬಾಡಿಗೆ ಆದಾಯ ₹ 55,440 ಇಳಿಯುತ್ತದೆ. ನಿಮ್ಮ ಒಟ್ಟು ಆದಾಯ ವಾರ್ಷಿಕ ₹ 3,10,824 (ಪಿಂಚಣಿ ₹ 2,55,834+ ಬಾಡಿಗೆ ₹ 55,440=3,10,824) ಸೆಕ್ಷನ್‌ 87 ಆಧಾರದ ಮೇಲೆ ಸಿಗುವ ತೆರಿಗೆ ರಿಯಾಯತಿ ಪರಿಗಣಿಸುವಾಗ ನಿಮಗೆ ಆದಾಯ ತೆರಿಗೆ ಬರುವುದಿಲ್ಲ. ಆದರೆ ರಿಟರ್ನ್‌ ಸಲ್ಲಿಸಬೇಕಾಗುತ್ತದೆ.

⇒ಎಸ್.ಬಿ. ಪಾಟೀಲ, ಮುಂಡರಗಿ

* ಪ್ರಶ್ನೆ: ನಾನು ನಿವೃತ್ತ ನೌಕರ. ವಾರ್ಷಿಕ ಪಿಂಚಣಿ–ಆದಾಯ ₹ 3 ಲಕ್ಷಕ್ಕೂ ಹೆಚ್ಚಿಗೆ ಇದ್ದು, ತೆರಿಗೆ ಉಳಿಸಲು ಸಿಂಡಿಕೇಟ್ ಬ್ಯಾಂಕಿನಲ್ಲಿ 5 ವರ್ಷಗಳ ಠೇವಣಿ ನೀವು ತಿಳಿಸಿದಂತೆ ಮಾಡುತ್ತಾ ಬಂದಿದ್ದೇನೆ. ಬಡ್ಡಿ ದರ ಶೇ 5.5. ಹೊಸ ಪಿಂಚಣಿ ಯೋಜನೆ ‘ಪ್ರಧಾನ ಮಂತ್ರಿ ವಯಾ ವಂದನಾ ಯೋಜನೆ’ ಬರುವ ಸಾಲಿನಲ್ಲಿ ಪಡೆಯಲು ವಿವರಣೆ ನೀಡಿರಿ.

ಉತ್ತರ: ಸೆಕ್ಷನ್ 80ಸಿ ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಉಳಿಸಿ, ಆದಾಯ ತೆರಿಗೆ ಕಡಿಮೆ ಮಾಡಿಕೊಳ್ಳಬಹುದು. ನೀವು ಅದೇ ರೀತಿ ಸಿಂಡಿಕೇಟ್ ಬ್ಯಾಂಕಿನಲ್ಲಿ 5 ವರ್ಷಗಳ ಠೇವಣಿ ಇರಿಸಿರಬೇಕು. ಪ್ರಶ್ನೆಯಲ್ಲಿ ಬಡ್ಡಿದರ ಶೇ 5.5 ಎಂದು ತಿಳಿಸಿದ್ದೀರಿ. ಸಿಂಡಿಕೇಟ್ ಬ್ಯಾಂಕಿನಲ್ಲಿ ಶೇ 6ಕ್ಕೂ ಕಡಿಮೆ 5 ವರ್ಷಗಳ ಅವಧಿ ಠೇವಣಿಗೆ ಇರುವುದಿಲ್ಲ. ದಯಮಾಡಿ ವಿಚಾರಿಸಿರಿ. ನೀವು ನಿವೃತ್ತರಾದ್ದರಿಂದ ಹೊಸ ಪಿಂಚಣಿ ಯೋಜನೆ ನಿಮಗೆ ಅನ್ವಯವಾಗುವುದಿಲ್ಲ. ಪ್ರಾಯಶಃ ನೀವು ಶೇ 8 ಬಡ್ಡಿ ಬರುವ ಪ್ರಧಾನ ಮಂತ್ರಿಯವರು ಹಿರಿಯ ನಾಗರಿಕರಿಗೆ ಸಾದರ ಪಡಿಸಿದ ಯೋಜನೆಯ ವಿಚಾರ ಬರೆದಿರಬೇಕು. ಇದೊಂದು 10 ವರ್ಷಗಳ ಯೋಜನೆಯಾಗಿದ್ದು, ಇಲ್ಲಿ ಬರುವ ಬಡ್ಡಿಗೆ ತೆರಿಗೆ ವಿನಾಯಿತಿ ಇರುವುದಿಲ್ಲ.

⇒ಕುಸುಮಾ.ಜಿ. ಹಾವೇರಿ

* ಪ್ರಶ್ನೆ: ನಾನು ಪ್ರಾಥಮಿಕ ಶಾಲಾ ಶಿಕ್ಷಕಿ. ಇನ್ನೂ 8 ವರ್ಷಗಳ ಸೇವಾವಧಿ ಇದೆ. ಮನೆ ಖರ್ಚು ಕಳೆದು ತಿಂಗಳಿಗೆ ₹ 12,000 ಉಳಿಯುತ್ತದೆ. ನನಗೆ 30’X40’ ನಿವೇಶನವಿದೆ. ಇದರಲ್ಲಿ ₹ 20 ಲಕ್ಷ ಖರ್ಚು ಮಾಡಿ ಮನೆ ಕಟ್ಟಿಸುವ ವಿಚಾರವಿದೆ. ಪ್ರಧಾನ ಮಂತ್ರಿಯವರ ವಾರ್ಷಿಕ ₹ 6 ಲಕ್ಷದೊಳಗಿನ ಆದಾಯವಿರುವವರಿಗೆ ಶೇ 4 ಬಡ್ಡಿ ದರದಲ್ಲಿ ₹ 8, 10, 12 ಲಕ್ಷ ವೆಚ್ಚದ ಮನೆ ನಿರ್ಮಿಸಲು ಅನುಕೂಲ ಮಾಡಿಕೊಟ್ಟಿರುವುದರಿಂದ ನನಗೆ ₹ 10ರಿಂದ ₹ 12 ಲಕ್ಷ ಬ್ಯಾಂಕಿನಿಂದ ಸಿಗುವುದೇ? ಸಿಕ್ಕಿದರೆ ಬಡ್ಡಿ ಅಸಲು ಎಷ್ಟು ಕಟ್ಟಬೇಕು. ಇದು ಹೊರತುಪಡಿಸಿ GPF ನಿಂದ ಸಾಲ ಪಡೆದು ಮನೆ ನಿರ್ಮಿಸುವುದು ಸೂಕ್ತವೇ ದಯಮಾಡಿ ತಿಳಿಸಿರಿ.

ಉತ್ತರ: ನೀವು ಪ್ರಧಾನ ಮಂತ್ರಿ ಆವಾಸ್ ಯೋಜನಾ (PMAY) ವಿಚಾರ ತಿಳಿಸಿರಬೇಕು. ಈ ಯೋಜನೆಯಲ್ಲಿ ₹ 12 ಲಕ್ಷ ವಾರ್ಷಿಕ ಆದಾಯದೊಳಗಿರುವವರು, ಶೇ 4 ಅನುದಾನಿತ ಬಡ್ಡಿಗೆ ಅರ್ಹರಾಗುತ್ತಾರೆ. ನೀವು ತಿಳಿಸಿದಂತೆ ಸಾಲದ ಬಡ್ಡಿ ದರ ಶೇ 4 ಇರುವುದಿಲ್ಲ. ನಿಮಗೆ ಬ್ಯಾಂಕಿನಲ್ಲಿ ಈ ಸಾಲ ದೊರೆಯುತ್ತದೆ. (ಆದರೆ ನೀವು ಬಯಸಿದಂತೆ ನಿಮ್ಮ ಉಳಿತಾಯ ಉಪಯೋಗಿಸಿ ದೊಡ್ಡಮನೆ ಕಟ್ಟುವಂತಿಲ್ಲ. ನಿಮ್ಮ ಆದಾಯಕ್ಕೆ 90 ಚದರ ಮೀಟರ್ ಒಳಗೆ ಮನೆ ಕಟ್ಟಿಸಬೇಕು). ಬಡ್ಡಿ ದರ ಆಯಾ ಬ್ಯಾಂಕುಗಳು ನಿರ್ಧರಿಸಿದಂತೆ ಇರುತ್ತದೆ. ಅದರಲ್ಲಿ ಶೇ 4 ಅನುದಾನಿತ ಬಡ್ಡಿ ಸಿಗುತ್ತದೆ. ಸಾಲ ತೀರಿಸಲು 20 ವರ್ಷ ಅವಧಿ ಇದ್ದರೂ, ನಿಮಗೆ ಸೇವಾವಧಿ ಕಡಿಮೆ ಇರುವುದರಿಂದ, ಅವಧಿಯನ್ನು ಬ್ಯಾಂಕು ನಿರ್ಧರಿಸುತ್ತದೆ.  GPF ಸಾಲಕ್ಕಿಂತ PMAY ಅನುಕೂಲ.

***

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತ) ಪತ್ರದಲ್ಲಿ ಬರೆದು ಕಳುಹಿಸಿ.ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–56001. ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT