ಮಂಗಳವಾರ, ನವೆಂಬರ್ 19, 2019
22 °C

ಮೊಟ್ಟೆಗಳಲ್ಲ... ಹಿಮಗಡ್ಡೆಗಳು!

Published:
Updated:
Prajavani

ಅಪರೂಪಕ್ಕೊಮ್ಮೆ ವಿಸ್ಮಯ ಮೂಡಿಸುವ ಘಟನೆಗಳು ನಡೆಯುತ್ತವೆ. ಫಿನ್‌ಲೆಂಡ್‌ನಲ್ಲೂ ಈಚೆಗೆ ರೋಮಾಂಚನ ಮೂಡಿಸುವ ಘಟನೆಯೊಂದು ನಿಸರ್ಗ ಪ್ರಿಯರನ್ನು ಬೆರಗಾಗಿಸಿದೆ.

ಫಿನ್ಲೆಂಡ್‌ ನಿವಾಸಿ ರಿಸ್ಟೊ ಮ್ಯಾಟಿಲಾ ಈಚೆಗಷ್ಟೇ ಹೈಲ್ಯೂಟೊ ದ್ವೀಪ ಪ್ರದೇಶದಲ್ಲಿ ಮರ್ಜಾನೀಮಿ ಕಡಲ ತೀರದಲ್ಲಿ ವಾಯು ವಿಹಾರಕ್ಕೆ ಹೊರಟಿದ್ದರು. ತೀರದ ಒಂದು ಭಾಗದಲ್ಲಿ ರಾಶಿಗಟ್ಟಲೆ ಹಿಮಗಡ್ಡೆಗಳು ಬಿದ್ದಿದ್ದವು. ನೋಡಿದ ಕೂಡಲೇ ಹಕ್ಕಿಗಳೆಲ್ಲಾ ಒಂದೇ ಕಡೆ ಮೊಟ್ಟೆ ಇಟ್ಟಂತೆ ಅವರಿಗೆ ಭಾಸವಾಗಿತ್ತು. ಕಾರಣ ಆ ಗಡ್ಡೆಗಳೆಲ್ಲಾ ಮೊಟ್ಟೆಯಕಾರದಲ್ಲೇ ಇದ್ದವು.ಕೆಲವು ಗಡ್ಡೆಗಳಂತೂ ಫುಟ್‌ಬಾಲ್‌ ಗಾತ್ರದಷ್ಟು ಇದ್ದವು.

ತಡಮಾಡದೇ ಫಿನ್‌ಲೆಂಡ್‌ನ ಹವಾಮಾನ ಇಲಾಖೆಯ ತಜ್ಞರನ್ನು ಸಂಪರ್ಕಸಿದಾಗ ವಿಜ್ಞಾನದ ಬಗೆಗಿನ ಸ್ವಾರಸ್ಯಕರ ಸಂಗತಿಗಳು ಹೊರಬಿದ್ದವು.

ಈ ಗಡ್ಡೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ ಜೌನಿ ವಯಿನೊ ಎಂಬ ವಿಜ್ಞಾನಿ, ‘ಇಂತಹ ಗಡ್ಡೆಗಳು ನಿರ್ದಿಷ್ಟ ವಾತಾವರಣದಲ್ಲಿ ಅಪರೂಪಕ್ಕೊಮ್ಮೆ ರೂಪುಗೊಳ್ಳುತ್ತವೆ. ಪ್ರಕೃತಿಯಲ್ಲಿ ನಡೆಯುವ ವಿಸ್ಮಯಗಳಲ್ಲಿ ಇದೂ ಒಂದು’ ಎಂದು ತಿಳಿಸಿದ್ದಾರೆ.

‘ಒಂದೇ ಸಮನಾಗಿ ಉತ್ತಮವಾಗಿ ಗಾಳಿ ಬೀಸುತ್ತಿರಬೇಕು ಈ ಅವಧಿಯಲ್ಲಿ ಅಲ್ಲಿನ ವಾತಾವರಣ ಶೂನ್ಯಕ್ಕಿಂತ ಕಡಿಮೆ ಇರಬೇಕು. ಆದರೆ ಅತಿ ಶೀತ ವಾತವರಣ ಇರಬಾರದು. ಜೊತೆಗೆ ನೀರಿನ ಉಷ್ಣಾಂಶವೂ ಶೂನ್ಯಕ್ಕಿಂತ ಕಡಿಮೆ ಇದ್ದು, ಹಿಮಗಡ್ಡೆ ರೂಪುಗೊಳ್ಳಲು ನೆರವಾಗುವಂತೆ ಇರಬೇಕು. ಇದಷ್ಟೇ ಅಲ್ಲದೇ ಸಮುದ್ರಕ್ಕೆ ಅಪ್ಪಳಿಸುವ ಅಲೆಗಳ ವೇಗವೂ ನಿಧಾನವಾಗಿರಬೇಕು. ಇಂತಹ ವಾತಾವರಣ ಎಲ್ಲ ಕಡೆ, ಎಲ್ಲ ಸಮಯದಲ್ಲಿ ರೂಪುಗೊಳ್ಳಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ.

‘ಇಂತಹ ವಾತಾವರಣದಲ್ಲಿ ಅಲೆಗಳ ಸುರುಳಿಯಾಕಾರದ ನಿಧಾನವಾದ ಚಲನೆಯೇ ಪುಟ್ಟ ಪುಟ್ಟ ಹಿಮಗಡ್ಡೆಗಳನ್ನು ಒಂದೆಡೆ ಕೂಡಿಸುತ್ತಾ ದೊಡ್ಡ ಗಾತ್ರಕ್ಕೆ ಬದಲಿಸುತ್ತಾ ಹೋಗುತ್ತದೆ. ಹೀಗೆ ಈ ಹಿಮಗಡ್ಡೆಗಳು ರೂಪುಗೊಂಡಿವೆ. ಇಂತಹ ವಾತಾವರಣ ಹೆಚ್ಚು ಹೊತ್ತು ಇದ್ದಷ್ಟೂ ಹಿಮಗಡ್ಡೆಗಳ ಗಾತ್ರ ಹಿಗ್ಗುತ್ತಾ ಹೋಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಇಂತಹ ಹಿಮಗಡ್ಡೆಗಳು ರೂಪುಗೊಳ್ಳುತ್ತವೆ ಎಂದು ಇಲ್ಲಿನಿಯಸ್ ಸ್ಟೇಟ್ ಯೂನಿವರ್ಸಿಟಿಯ ಪ್ರಾಧ್ಯಪಕ ಡಾ. ಜೇಮ್ಸ್ ಕಾರ್ಟರ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)