ಮಂಗಳವಾರ, ಅಕ್ಟೋಬರ್ 20, 2020
21 °C

ಕೈದೋಟದ ಅಂದ ಹೆಚ್ಚಿಸಲು ಮರುಬಳಕೆ ವಸ್ತುಗಳಿರಲಿ..

ರೇಷ್ಮಾ Updated:

ಅಕ್ಷರ ಗಾತ್ರ : | |

ಕೈದೋಟ ಅಥವಾ ಗಾರ್ಡನಿಂಗ್‌ ಮಾಡುವುದು ಹಲವರ ನೆಚ್ಚಿನ ಹವ್ಯಾಸ. ಕೊರೊನಾ ಬಂದು ಮನೆಯಲ್ಲೇ ಹೆಚ್ಚು ಸಮಯ ಕಳೆಯುತ್ತಿರುವ ಜನರು ಒತ್ತಡ ನಿವಾರಣೆಯ ಕಾರಣದಿಂದಲೂ ಗಾರ್ಡನಿಂಗ್‌‌ ಮೇಲೆ ಹೆಚ್ಚು ಒಲವು ತೋರುತ್ತಿದ್ದಾರೆ. ನಿಮಗೆ ಗಾರ್ಡನಿಂಗ್ ಮೇಲೆ ಆಸಕ್ತಿಯಿದ್ದರೆ ಮನೆಯಲ್ಲಿ ಬಳಸಿ ಎಸೆಯುವ ವಸ್ತುಗಳಿಂದ ನಿಮ್ಮ ಗಾರ್ಡನ್‌ಗೆ ಇನ್ನಷ್ಟು ಮೆರುಗು ಸಿಗುವಂತೆ ಮಾಡಬಹುದು. ಅವುಗಳನ್ನು ಭಿನ್ನವಾಗಿ ಬಳಸುವ ಮೂಲಕ ಗಾರ್ಡನ್‌ನ ನೋಟವನ್ನೇ ಬದಲಿಸಬಹುದು. 

ಪ್ಲಾಸಿಕ್ ಪೈಪ್‌, ಹಳೆಯ ಬಕೆಟ್‌ಗಳು, ಸಿಡಿಗಳು, ಮರದ ಹಲಗೆಗಳು ಸೇರಿದಂತೆ ಅನೇಕ ವಸ್ತುಗಳನ್ನು‌ ಎಸೆಯುವ ಬದಲು ಅವುಗಳನ್ನು ಬಳಸಿಕೊಂಡು ಗಾರ್ಡನ್‌ ಅಂದವನ್ನು ಹೆಚ್ಚಿಸಬಹುದು. ಕೆಲವೊಂದು ವಸ್ತುಗಳನ್ನು ಎಸೆದು ಪರಿಸರವನ್ನು ಹಾಳು ಮಾಡುವ ಬದಲು ಗಾರ್ಡನ್‌ನಲ್ಲಿ ಮರುಬಳಕೆ ಮಾಡಿಕೊಂಡು ನಿಮ್ಮ ಕ್ರಿಯಾಶೀಲತೆಯನ್ನು ತೋರಬಹುದು.

ಪ್ಯಾಲೆಟ್ (ಮರದ ಹಲಗೆಗಳು): ಮನೆಯಲ್ಲಿ ಅರ್ಧಂಬರ್ಧ ತುಂಡಾದ ಮರದ ಹಲಗೆಗಳಿದ್ದರೆ ಅವುಗಳನ್ನು ಜೋಡಿಸಿ ಪೆಟ್ಟಿಗೆ ತಯಾರಿಸಿ ಕಾಂಪೋಸ್ಟ್ ತಯಾರಿಸಲು ಬಳಸಬಹುದು. ತುಂಡರಿಸಿದ ಹಲಗೆಗಳನ್ನು ಪೆಟ್ಟಿಗೆಯಂತೆ ಜೋಡಿಸಿ ಮೊಳೆ ಹೊಡೆಯಿರಿ. ಕಳೆಗೆ ಅಗಲವಾದ ಒಂದು ಮರದ ತುಂಡು ಜೋಡಿಸಿ. ನಡುವೆ ಕಿಂಡಿಗಳಿದ್ದರೆ ಚಿಂತಿಸಬೇಡಿ. ಕಾಂಪೋಸ್ಟ್ ತಯಾರಾಗಲು ಗಾಳಿ ಅವಶ್ಯ. ಇದರಲ್ಲಿ ಮಣ್ಣಿನೊಂದಿಗೆ ಮನೆಯಲ್ಲಿ ಬಳಸುವ ತರಕಾರಿ ಸಿಪ್ಪೆ, ಕೊಳೆತ ತರಕಾರಿ ಎಲ್ಲವನ್ನೂ ಹಾಕಿ ಬೆಡ್‌ನಂತೆ ಮತ್ತೆ ಮಣ್ಣು ಮುಚ್ಚಬೇಕು. ಇದರಲ್ಲಿ ಬಹಳ ದಿನಗಳವರೆಗೆ ಕಾಂಪೋಸ್ಟ್ ಕೆಡದಂತೆ ಇಡಬಹುದು.  

ಬಾಥ್‌ಟಬ್‌, ಬಕೆಟ್‌ಗಳು: ಮನೆಗಳಲ್ಲಿ ಬಳಸಿ ಎಸೆಯುವ ಬಕೆಟ್‌ ಹಾಗೂ ಮಗ್‌ಗಳಲ್ಲಿ ಮಣ್ಣು ತುಂಬಿಸಿ ಗಿಡ ನೆಡಬಹುದು. ಅವು ಬಣ್ಣಗೆಟ್ಟು ಗಲೀಜಾಗಿದ್ದರೆ ಸಮಯ ಇದ್ದಾಗ ಅದಕ್ಕೆ ಹೊರಗಿನಿಂದ ನಿಮಗೆ ಇಷ್ಟಬಂದ ರೀತಿಯಲ್ಲಿ ಪೇಂಟ್ ಮಾಡಿ. ಆಮೇಲೆ ಒಳಗೆ ಮಣ್ಣು ತುಂಬಿಸಿ ಗಿಡ ನೆಡಿ. ಗಿಡ ಹಾಗೂ ಬಕೆಟ್‌ನ ಪೇಂಟ್ ಎರಡೂ ಗಾರ್ಡನ್‌ನ ಅಂದ ಹೆಚ್ಚಿಸುತ್ತವೆ. 

ಟೈರ್: ಟೈರ್‌ ಅನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಅವುಗಳಿಗೆ ಬಣ್ಣ ಬಳಿದು ಗಿಡ ಬೆಳೆಸಿ ನೇತು ಹಾಕಬಹುದು. ಟೈರ್ ತುಂಡುಗಳಲ್ಲಿ ತುಂಬಾ ಸುಂದರವಾಗಿ ವರ್ಟಿಕಲ್ ಗಾರ್ಡನ್‌ ನಿರ್ಮಿಸಬಹುದು. 

ಹಳೆಯ ವೈರ್ ಹಾಗೂ ತಂತಿಗಳು: ಮನೆಯಲ್ಲಿ ಬಳಸಿ ಎಸೆಯುವ ವೈರ್ ಹಾಗೂ ತಂತಿಗಳನ್ನು ಗಾರ್ಡನ್‌ ಅಂದ ಹೆಚ್ಚಿಸಲು ಬಳಸಬಹುದು. ಬಾಟಲ್‌ಗಳಲ್ಲಿ ಬೆಳೆಸಿದ ಗಿಡಗಳನ್ನು ನೇತು ಹಾಕಲು, ಬೇಲಿ ನಿರ್ಮಾಣ ಮಾಡಲು ಬಳಸಬಹುದು. 

ಪ್ಲಾಸ್ಟಿಕ್ ಬಾಟಲ್‌ಗಳು: ಪ್ಲಾಸ್ಟಿಕ್ ಬಾಟಲ್‌ಗಳನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬಳಸುತ್ತಾರೆ. ಆದರೆ ಅದನ್ನು ಎಸೆಯುವ ಬದಲು ಭಿನ್ನ ಆಕಾರಕ್ಕೆ ಕತ್ತರಿಸಿ ಗಿಡಗಳನ್ನು ಬೆಳೆಸಲು ಬಳಸಬಹುದು. ಅಲ್ಲದೇ ಪೇಂಟ್ ಮಾಡಿ ಕೂಡ ಬಳಸಬಹುದು. ‌ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಮಣ್ಣು ತುಂಬಿಸಿ ಅವುಗಳಲ್ಲಿ ಗಿಡ ಬೆಳೆಸಿ ಬೇಕಾದ ಆಕಾರಕ್ಕೆ ನೇತು ಹಾಕಿ. 

ಸಿ.ಡಿ, ಡಿವಿಡಿ: ತರಕಾರಿ ಹಾಗೂ ಹಣ್ಣಿನ ಗಿಡಗಳನ್ನು ಬೆಳೆಸಿದಾಗ ಪಕ್ಷಿಗಳ ಕಾಟ ಸಾಮಾನ್ಯ. ಇದನ್ನು ತಪ್ಪಿಸಲು ಸಿಡಿ ಹಾಗೂ ಡಿವಿಡಿಗಳನ್ನು ಭಿನ್ನವಾಗಿ ದಾರದಲ್ಲಿ ಜೋಡಿಸಿ ನೇತು ಹಾಕಿ. ಇದು ಗಾರ್ಡನ್‌ ಅಂದ ಹೆಚ್ಚಿಸುವುದಲ್ಲದೇ ಪಕ್ಷಿಗಳು ಗಿಡಗಳ ಬಳಿ ಬರದಂತೆ ತಡೆಯಲು ಸಹಕಾರಿ. ಗಾಳಿಗೆ ಹಾರಾಡುವಾಗ ಅವು ಶಬ್ದ ಮಾಡುವುದರಿಂದ ಪಕ್ಷಿಗಳು ಗಿಡಗಳ ಹತ್ತಿರ ಬರಲು ಹೆದರುತ್ತವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು