ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲೈಂಬಿಂಗ್ ಎಂದರೆ ಫಿಟ್‌ನೆಸ್‌ಗೆ ವಿಳಾಸ

Last Updated 3 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳಬೇಕೆಂದರೆ, ನಿತ್ಯಕಸರತ್ತು ನಡೆಸಬೇಕು, ಜಿಮ್‌ನಲ್ಲಿ ಬೆವರು ಹರಿಸಿ,ದೇಹ ದಂಡಿಸಬೇಕು ಎಂಬುದು ಹಲವರ ಅಭಿಪ್ರಾಯ.ಆದರೆ ಜಿಮ್‌ಗೆ ಹೋಗದೆಯೇ, ಫಿಟ್‌ನೆಸ್ ಕಾಪಾಡಿಕೊಳ್ಳುವ ಮಾರ್ಗಗಳೂ ಇವೆ.

ಸಾಹಸ ಪ್ರವೃತ್ತಿ ಇರುವವರಿಗೆ ಕ್ಲೈಂಬಿಂಗ್ (ಆರೋಹಣ) ಕ್ರೀಡೆಗೆ ಬಗ್ಗೆ ಗೊತ್ತಿರುತ್ತದೆ. ಇತರೆ ಕ್ರೀಡೆಗಳಿಗೆ ಹೋಲಿಸಿದರೆ ಇದು ತುಂಬಾ ಭಿನ್ನ. ಹೀಗಾಗಿಯೇ ಇದು ವಿಶ್ವದಾದ್ಯಂತ ಜನಪ್ರಿಯವಾಗುತ್ತಿದೆ.

ಅಂತರರಾಷ್ಟ್ರೀಯ ಕ್ಲೈಂಬಿಂಗ್ ಕ್ರೀಡೆಯ ಒಕ್ಕೂಟವು (IFSC) ಪ್ರತಿ ವರ್ಷ ವಿಶ್ವಮಟ್ಟದ ಸ್ಪರ್ಧೆಗಳನ್ನೂ ಆಯೋಜಿಸುತ್ತಿದೆ. ಇದರ ಜನಪ್ರಿಯತೆ ಹೆಚ್ಚುತ್ತಿರುವುದರಿಂದ ಇದರಲ್ಲಿ ಭಾಗವಹಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ.

2020ರಲ್ಲಿ ಜಪಾನ್‌ನಲ್ಲಿ ನಡೆಯುವ ಟೊಕ್ಯೊ ಒಲಿಂಪಿಕ್ಸ್‌ನಲ್ಲೂ ಈ ಕ್ರೀಡೆಗೆ ಅವಕಾಶ ಸಿಕ್ಕಿದ್ದು, ಇದರ ಜನಪ್ರಿಯತೆ ಹಿಡಿದ ಕನ್ನಡಿ.

ಇದು ಮಾನಸಿಕ ಮತ್ತು ದೈಹಿಕ ಫಿಟ್‌ನೆಸ್‌ ಹೆಚ್ಚಿಸುವಂತಹ ವಿಶೇಷ ಕ್ರೀಡೆ. ಈ ಕ್ರೀಡೆಯಲ್ಲಿ ಭಾಗವಹಿಸಿದರೆ ದೇಹಕ್ಕಷ್ಟೇ ಅಲ್ಲ, ಮೆದುಳಿಗೂ ಕಸರತ್ತು ದೊರೆಯುತ್ತದೆ. ಸ್ಪರ್ಧಿಯ ಆಲೋಚನೆ, ಸಾಮರ್ಥ್ಯ ಎಲ್ಲವನ್ನೂ ಪರೀಕ್ಷಿಸುವ ಈ ಕ್ರೀಡೆಯಲ್ಲಿ ಪ್ರತಿಯೊಂದು ಹೆಜ್ಜೆಯೂ ಮುಖ್ಯವಾಗಿರುತ್ತದೆ. ಭಯ, ಆತಂಕದಂತಹ ಸಮಸ್ಯೆಗಳನ್ನೂ ದೂರ ಮಾಡುತ್ತದೆ ಈ ಕ್ರೀಡೆ. ಹೀಗಾಗಿಯೇ ಈ ಕ್ರೀಡೆಯನ್ನು ಬಹುತೇಕ ದೇಶಗಳು ಸೈನಿಕರಿಗೆ ತರಬೇತಿ ನೀಡಲು ಉತ್ತಮ ಕ್ರೀಡೆಯಾಗಿ ಬಳಸಿಕೊಳ್ಳುತ್ತಿದ್ದಾರೆ.

ಈ ಕ್ರೀಡೆಗೆ ಉತ್ತೇಜನ ನೀಡುವುದಕ್ಕಾಗಿಯೇ ದೇಶದಾದ್ಯಂತ 150 ಕ್ಲೈಬಿಂಗ್ ವಾಲ್‌ಗಳನ್ನು ನಿರ್ಮಿಸಲಾಗಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲೂ ಕ್ಲೈಂಬಿಂಗ್ ವಾಲ್‌ಗಳಿದ್ದು, ದೇಹವನ್ನು ಫಿಟ್‌ಆಗಿ ಇಟ್ಟುಕೊಳ್ಳಬೇಕು ಎನ್ನುವವರು ಭಾಗವಹಿಸಬಹುದು. ಮಹಿಳೆಯರು ಮತ್ತು ಪುರುಷರು ಇಬ್ಬರೂ ಇದರಲ್ಲಿ ಭಾಗವಹಿಸಬಹುದು.

ಹೇಗಿರುತ್ತದೆ ಈ ಆಟ?

ಒಂದು ಅಥವಾ ಎರಡು ಗುರಿಗಳನ್ನು ಇಟ್ಟುಕೊಂಡು, ದುರ್ಗಮವಾದ ಬೆಟ್ಟ ಅಥವಾ ಪರ್ವತವನ್ನು ಏರುವುದನ್ನೇ ಕ್ಲೈಂಬಿಂಗ್ ಎನ್ನುತ್ತಾರೆ. ಇಲ್ಲಿ ಏರಬೇಕಾದ ಪರ್ವತದಲ್ಲಿ ಕೊಕ್ಕೆಗಳನ್ನು ಸಿಕ್ಕಿಸಿ ಅವುಗಳಿಗೆ ಹಗ್ಗ ಬಿಗಿದು, ಅವುಗಳ ನೆರವಿನಿಂದ ಪರ್ವತವನ್ನು ಏರಬೇಕಾಗುತ್ತದೆ. ಇದರಲ್ಲಿ ಮೂರು ವಿಧಗಳಿವೆ.

ಲೀಡ್ ಕ್ಲೈಂಬಿಂಗ್: ಇದು ಸಾಹಸ ಪ್ರವೃತ್ತಿ ಇರುವವರು ಇಷ್ಟಪಡುವ ಪ್ರಮುಖ ವಿಧಾನ. ಆದರೆ ತುಂಬಾ ತ್ರಾಸದಾಯಕ. ಈ ಆಟದಲ್ಲಿ ಸ್ಪರ್ಧಿಯು 15ರಿಂದ 20 ಮೀಟರ್‌ ಎತ್ತರದ ಪರ್ವತಗಳನ್ನು ಏರಬೇಕಾಗುತ್ತದೆ.

ಚುರುಕುತನ, ಸಾಮರ್ಥ್ಯ ಈ ಕ್ರೀಡೆಗೆ ಬೇಕಾದ ಮುಖ್ಯ ಅಂಶಗಳು. ಸ್ಪರ್ಧಿಯು ಆಯ್ಕೆ ಮಾಡಿಕೊಳ್ಳುವ ಪಥ ಮತ್ತು ಗುರಿ ತಲುಪಲು ತೆಗೆದುಕೊಂಡ ಅವಧಿಯನ್ನು ಆಧರಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಸ್ಪರ್ಧೆ ಆರಂಭವಾಗುವ 30 ನಿಮಿಷಗಳ ಮುನ್ನ ಸ್ಪರ್ಧಿಗಳನ್ನು ಬೇರ್ಪಡಿಸಿ, ಪರ್ವತವನ್ನು ಏರುವ ಪಥವನ್ನು ಆಯ್ಕೆ ಮಾಡಿಕೊಳ್ಳಲು ಹೇಳುತ್ತಾರೆ. ಸ್ಪರ್ಧಿಗಳು 5 ನಿಮಿಷದಲ್ಲಿ ಪಥವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಪ್ರತಿ ಪಥದಲ್ಲೂ ಎರಡು ‘ಕ್ರಕ್ಸ್‌’ ಪಾಯಿಂಟ್‌ಗಳು ಇರುತ್ತವೆ. ಇವನ್ನು ತಲುಪಿದರೆ ಬೋನಸ್ ಪಾಯಿಂಟ್‌ಗಳು ಸಿಗುತ್ತವೆ.

ಬೌಲ್ಡ್ರಿಂಗ್‌: ಇಲ್ಲಿ ಕೇವಲ ಕೈಗಳ ಸಹಾಯದಿಂದಲೇ ಗುರಿ ತಲುಪ ಬೇಕಾಗುತ್ತದೆ. ಗುರಿಯು 5ರಿಂದ 8 ಹೆಜ್ಜೆಗಳಿಗೆ ಸೀಮತವಾಗಿರುತ್ತದೆ. ಆದರೆ ಅತಿ ಕಡಿಮೆ ಅವಧಿಯಲ್ಲಿ ಗುರಿ ತಲುಪವವರು ಜಯಶಾಲಿಗಳಾಗುತ್ತಾರೆ. ಆದ್ದರಿಂದ ಇಲ್ಲಿ ದೈಹಿಕ ಸಾಮರ್ಥ್ಯ ಅಗತ್ಯ. ಇಲ್ಲೂ ಸಹ ಲೀಡ್ ಕ್ಲೈಂಬಿಂಗ್‌ನಂತೆ ಸ್ಪರ್ಧೆ ಆರಂಭಕ್ಕೂ 30 ನಿಮಷಗಳಿಗೆ ಮುನ್ನ ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಿ ಗುರಿ ತಲುಪಬೇಕಾದ ಪಥವನ್ನು ಆಯ್ಕೆ ಮಾಡಿಕೊಳ್ಳಲು 30 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಇಲ್ಲೂ ಸಹ ಕೆಲವು ನಿರ್ದಿಷ್ಟ ಪ್ರದೇಶಗಳನ್ನು ಮುಟ್ಟಿದರೆ ಬೋನ್ ಪಾಯಿಂಟ್‌ಗಳನ್ನು ನೀಡಲಾಗುತ್ತದೆ.

ಸ್ಪರ್ಧಿಗಳು ಒಂದು ವೇಳೆ ಜಾರಿದರೆ ಮತ್ತೆ ಆಡುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಆಟದಲ್ಲಿ ಭಾಗವಹಿಸುವುದರಿಂದ ಯೋಚನಾ ಶಕ್ತಿ ಬೆಳೆಯುವುದರ ಜತೆಗೆ ಕೈಗಳೂ ದೃಢವಾಗುತ್ತವೆ. ದೇಹದ ಮಾಂಸಖಂಡಗಳು ಬಲಿಷ್ಠವಾಗುತ್ತವೆ.

ಸ್ಪೀಡ್ ಕ್ಲೈಂಬಿಂಗ್‌: ಇದು ಲೀಡಿಂಗ್ ಮತ್ತು ಬೌಲ್ಡ್ರಿಂಗ್‌ಗಿಂತ ತುಂಬಾ ಭಿನ್ನವಾದುದು. ಇಲ್ಲಿ ಸ್ಪರ್ಧಿಯು ಎಷ್ಟು ವೇಗವಾಗಿ ಗುರಿ ತಲುಪುತ್ತಾನೆ ಎಂಬುದೇ ಮುಖ್ಯವಾಗುತ್ತದೆ. ಇಲ್ಲಿ ತಲುಪಬೇಕಾದ ಗುರಿಯು 15 ಮೀಟರ್ ಅಥವಾ 50 ಅಡಿ ಎತ್ತರ ಇರುತ್ತದೆ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT