ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಟ್ಟ ಕಾಡಿನ ಬೆರಗು; ಕಾಳಿನದಿಯ ಸೆರಗು

ಜೋಯಿಡಾ: ಪ್ರವಾಸದ ಹೊಸ ಗುರುತು ನೋಡಾ!
Last Updated 25 ಏಪ್ರಿಲ್ 2019, 3:51 IST
ಅಕ್ಷರ ಗಾತ್ರ

ಎಲ್ಲೆಡೆ ರಣಬಿಸಿಲು. ಮನಸ್ಸು–ದೇಹ ಎರಡೂ ತಂಪನ್ನು ಬಯಸುತ್ತಿದ್ದರೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ದಟ್ಟ ಕಾಡಲ್ಲಿ ಶೃಂಗಾರದ ಹೊಂಗೆ ಮರ ಹೂ ಬಿಟ್ಟು ಕೈ ಬೀಸಿ ಕರೆಯುತ್ತದೆ. ಕಾಳಿಯ ಒಡಲಲ್ಲಿ ರ‍್ಯಾಫ್ಟಿಂಗ್‌, ಎಲ್ಲ ತಲೆಬಿಸಿಗಳನ್ನು ಮರೆತು ಟಿಂಬರ್‌ ಡಿಪೋದ ಹಕ್ಕಿಗಳ ಕಿಚಪಿಚ, ಕ್ಯಾಸಲ್‌ ರಾಕ್‌ನ ದಿವ್ಯ ನೀರವತೆ, ಕಾಳಿ ಹಿನ್ನೀರಿನ ದೋಣಿ ವಿಹಾರ... ಹೀಗೆ ಕಂಪ್ಲೀಟ್‌ ಪ್ಯಾಕೇಜ್‌ ಪ್ರವಾಸಿಗರನ್ನು ಸಂತುಷ್ಟಗೊಳಿಸುತ್ತದೆ. ಇಕೋ ಟೂರಿಸಂನ ಹೊಸ ಹೆಗ್ಗುರುತಾದ ಜೋಯಿಡಾದ ಕಾಡಲ್ಲೊಂದು ಸುತ್ತು ಹಾಕಿ ಬರೋಣ.

ಕಾಡುವ ಕಾಡು!:

ಜೋಯಿಡಾ, ದಾಂಡೇಲಿ ಅಂದಾಕ್ಷಣ ತಟ್ಟನೆ ನೆನಪಾಗೋದು ದಟ್ಟ ಕಾಡು. ಇಲ್ಲಿಗೆ ಬರುವವರಿಗೆ ಮುಖ್ಯವಾಗಿ ನೀರು–ನೆರಳು–ನೆಮ್ಮದಿ ಮೂರೂ ಲಭ್ಯ. ಐವತ್ತು ಕಿಲೋಮೀಟರ್‌ ಸುತ್ತಳತೆಯಲ್ಲಿ ಬಯಸಿ ಬಂದದ್ದೆಲ್ಲವೂ ಸಿಕ್ಕರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ ಹೇಳಿ! ಅದಕ್ಕೇ ಮತ್ತೆ ಮತ್ತೆ ಮನಸು ಜೋಯಿಡಾವನ್ನು ಕನವರಿಸುವುದು. ಪ್ರಕೃತಿಯ ಸೊಬಗಿನ ಜತೆಗೆ ಜೀವವೈವಿಧ್ಯ ಕಣ್ತುಂಬಿಸಿಕೊಳ್ಳಬಹುದು. ರೋಮಾಂಚನಗೊಳಿಸುವ ಆಟಗಳನ್ನಾಡಬಹುದು. ಸೈಟ್‌ ಸೀಯಿಂಗ್, ವೈಲ್ಡ್‌ ಲೈಫ್‌ ಸಫಾರಿ, ಬೋಟಿಂಗ್, ರ‍್ಯಾಫ್ಟಿಂಗ್, ಕಯಾಕಿಂಗ್‌, ಜಾಕೋಜಿ ಸೇರಿದಂತೆ ಇತರ ವಾಟರ್‌ ಗೇಮ್‌ಗಳು, ಟ್ರೆಕಿಂಗ್, ಕೆನೋಯಿಂಗ್, ಮೌಂಟೇನ್‌ ಬೈಕಿಂಗ್, ಬರ್ಡ್‌ ವಾಚಿಂಗ್‌ ಇಲ್ಲಿನ ಹೈಲೈಟ್ಸ್‌. ಬರುವ ಪ್ರವಾಸಿಗರಿಗೆ ಉಪಚಾರ ಮಾಡಲಿಕ್ಕೆಂದೇ ಹಲವು ಹೋಂ ಸ್ಟೇಗಳು, ರೆಸಾರ್ಟ್‌ಗಳು ಇಲ್ಲಿವೆ. ಕಾನ್ಸೆಪ್ಟ್‌ ಬೇಸ್ಡ್‌ ಹೋಂ ಸ್ಟೇಗಳ ಅನುಭವವೇ ವಿಭಿನ್ನ.

ಏನೇನಿವೆ?:

ಉಳವಿಯ ಆಕಳಗವಿ, ಬಾಪೇಲಿಯ ವ್ಯೂ ಪಾಯಿಂಟ್, ಪಣಸೋಲಿಯ ವೈಲ್ಡ್‌ ಲೈಫ್‌ ಸಫಾರಿ, ಕುಳಗಿಯ ನೇಚರ್‌ ಕ್ಯಾಂಪ್‌, ನಿಂತಲ್ಲೇ ಮೂರು ತಾಲ್ಲೂಕುಗಳ ಭೂಪ್ರದೇಶವನ್ನು ತೋರಿಸುವ ಎಸ್‌. ಆರ್‌. ಭಾಗ್ವತ್‌ ಪಾಯಿಂಟ್‌, ಹಾರ್ನ್‌ಬಿಲ್‌ ಭವನ, ಕಾರ್ಟೂನ್‌ ಪಾರ್ಕ್‌, ಕ್ರೋಕೊಡೈಲ್‌ ಪಾರ್ಕ್‌, ಮಾಲಂಗಿ ಇಕೋ ಪಾರ್ಕ್‌, ಹ್ಯಾಂಗಿಂಗ್‌ ಬ್ರಿಜ್, ಕ್ಯಾಸಲ್‌ರಾಕ್‌, ದೂದ್‌ ಸಾಗರ್, ವಜ್ರ ಫಾಲ್ಸ್‌, ಸುಪಾ ಡ್ಯಾಂ, ಕಾಳಿ ಬ್ಯಾಕ್‌ ವಾಟರ್‌ – ಪಟ್ಟಿ ಹೀಗೆ ಬೆಳೆಯುತ್ತದೆ.

ವನ್ಯಜೀವಿ ಧಾಮ ಸಫಾರಿ:

ಹೆಸರೇ ಹೇಳಿವಂತೆ ವನ್ಯಜೀವಿಗಳನ್ನು ನೋಡುವುದಿದ್ದರೆ ಇಲ್ಲಿಗೆ ಬರಬೇಕು. ಹುಲಿ, ಆನೆ, ಚಿರತೆ, ಮೊಸಳೆ ಅಷ್ಟೇ ಅಲ್ಲದೇ ಅಪರೂಪದ ಹಕ್ಕಿಗಳನ್ನೂ ಇಲ್ಲಿ ವೀಕ್ಷಿಸಬಹುದು. ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಇಲ್ಲಿ ಬಂದು ವಿಹರಿಸಬಹುದು.

ಶುಲ್ಕ: ₹ 40 , ₹ 80

ದೂರ: ದಾಂಡೇಲಿ ಬಸ್‌ ನಿಲ್ದಾಣದಿಂದ 14 ಕಿ.ಮೀ.

ರ‍್ಯಾಫ್ಟಿಂಗ್‌:

ವಿಶಾಲವಾಗಿ ಹಬ್ಬಿ ಹರಿಯುತ್ತಿರುವ ಕಾಳಿ ನದಿಯಲ್ಲಿ ರ‍್ಯಾಫ್ಟಿಂಗ್‌ ಮಾಡಲು ಅವಕಾಶವಿದೆ. ದಾಂಡೇಲಿ ಹಾಗೂ ಜೋಯಿಡಾ ತಾಲೂಕಿನ ಗಣೇಶಗುಡಿಯಲ್ಲಿ ರ‍್ಯಾಫ್ಟಿಂಗ್‌ ಮಾಡಬಹುದು. ತಜ್ಞರು ಜತೆಗಿರುತ್ತಾರೆ. ಲೈಫ್‌ ಜಾಕೆಟ್‌ ಇರುತ್ತದೆ. ಗಣೇಶಗುಡಿ ಸಮೀಪ ಇರುವ ಹಾರ್ನ್‌ಬಿಲ್‌ ರೆಸಾರ್ಟ್‌ ಈ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತದೆ. ಯಾವುದೇ ಹಾನಿ ಆಗದಂತೆ ಕಡು ಬೇಸಿಗೆಯ ಸುಡು‌ಬಿಸಿಲಿನಲ್ಲಿ ನೀರಾಟದ ಸಖ್ಯದ ಮೋಜು ಅನುಭವಿಸಬಹುದು.

ಕಾವಳಾ ಗುಹೆ:

‘ಕಾವಳಾ’, ‘ಸಿದ್ಧ’ ಸೇರಿದಂತೆ ಬೇರೆ ಬೇರೆ ಹೆಸರುಗಳಿಂದ ಕರೆಯುವ ಸುಂದರ ಗುಹೆ ‘ಕಾವಳಾ ಗುಹೆ’. ಒಳಗೆ ರುದ್ರಾಕ್ಷಿಯ ಹೊರಮೈಯನ್ನು ಹೋಲುವ ಶಿವಲಿಂಗವಿದೆ. ಶಿವರಾತ್ರಿಯ ದಿನ ವಿಶೇಷ ಜಾತ್ರೆ ನಡೆಯುತ್ತದೆ. ಅರಣ್ಯ ಇಲಾಖೆಯವರ ಪರವಾನಗಿ ಇದ್ದರೆ ಉಳಿದ ದಿನಗಳಲ್ಲಿಯೂ ಇಲ್ಲಿಗೆ ಹೋಗಿ ಬರಬಹುದು. ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಇಲ್ಲಿಗೆ ಹೋಗಲು ಪ್ರಶಸ್ತ ಸಮಯ. ಗುಹೆಯ ಮುಂದೆ ನಿಂತರೆ ಕಾಣುವ ಕಾಳಿ ನದಿ, ನಾಗಝರಿ ಪವರ್‌ ಹೌಸ್‌ ಈ ಸ್ಥಳದ ಬೋನಸ್!

ದೂರ: ದಾಂಡೇಲಿ ಬಸ್‌ ನಿಲ್ದಾಣದಿಂದ 26 ಕಿ.ಮೀ.

ಮೌಲಂಗಿ ಪಾರ್ಕ್‌:

ಸುತ್ತ ಹಬ್ಬಿದ ಹಸಿರು ಮೌಲಂಗಿ ಪಾರ್ಕ್‌ನ ವಿಶೇಷ. ಬಿದಿರುಮೆಳೆಗಳೇ ತುಂಬಿರುವ ಮೌಲಂಗಿ ಬಹಳ ಹಿತವಾದ ಪಿಕ್‌ನಿಕ್‌ ಸ್ಪಾಟ್‌. ಕಡಿದಾದ ಇಳಿಜಾರಲ್ಲಿ ಇಳಿಯುವುದು, ಬಂಡೆಗಳನ್ನು ಹತ್ತಿಳಿಯುವ ಸಾಹಸದ ಆಟಗಳನ್ನು ಇಲ್ಲಿ ಆಡಬಹುದು. ಅಪರೂಪದ ಸಸ್ಯಸಂಕುಲಗಳೂ ಇಲ್ಲಿವೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಪಾರ್ಕ್‌ ತೆರೆದಿರುತ್ತದೆ.

ದೂರ: ದಾಂಡೇಲಿಯಿಂದ 7 ಕಿ.ಮೀ.

ಸೈಕ್‌ ವ್ಯೂ ಪಾಯಿಂಟ್‌:

ಮಲೆನಾಡಿನ ಸಮೃದ್ಧ ಕಾಡನ್ನು ನೋಡಬೇಕು ಅಂದರೆ ಸೈಕ್‌ ಪಾಯಿಂಟ್‌ಗೆ ಬರಬೇಕು. ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಕಾಡು, ಪರ್ವತ ಶ್ರೇಣಿಗಳ ಜೊತೆಗೆ ಕಾಳೀ ಕಣಿವೆಯ ಸಂಜೆ ಮನಮೋಹಕವಾಗಿರುತ್ತದೆ.

ವರ್ಣಮಯ ಸೂರ್ಯಾಸ್ತ ಇಲ್ಲಿನ ಹೈಲೈಟ್‌. ಚಾರಣಕ್ಕೂ ಆಸ್ಪದವಿದೆ. ಬೆಳಿಗ್ಗೆ 5ರಿಂದ ಸಂಜೆ 7 ಗಂಟೆವರೆಗೂ ಇಲ್ಲಿಗೆ ಬರಬಹದು. ಅಂಬಿಕಾನಗರದಿಂದ ಬೊಮ್ಮನಳ್ಳಿಗೆ ಹೋಗುವ ಮಾರ್ಗದಲ್ಲಿ ಇದು ಸಿಗುತ್ತದೆ. ವೀಕ್ಷಣಾಗೋಪುರವೂ ಇದೆ.

ದಟ್ಟ ಕಾಡಿನ ನಡುವೆ ಹರಿಯುತ್ತಿರುವ ಕಾಳಿಯ ಜಲಮುಖ
ದಟ್ಟ ಕಾಡಿನ ನಡುವೆ ಹರಿಯುತ್ತಿರುವ ಕಾಳಿಯ ಜಲಮುಖ

ಸುಪಾ ಡ್ಯಾಂ:

ಜೋಯಿಡಾಕ್ಕೆ ಬಂದರೆ ಗಣೇಶಗುಡಿ ಬಳಿ ಇರುವ ಸುಪಾ ಡ್ಯಾಂ ನೋಡದೇ ವಾಪಸ್ ಹೋಗುವಂತಿಲ್ಲ. ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಜಲಾಶಯ ಇಡೀ ಸುಪಾವನ್ನು ಮುಳುಗಿಸಿದ್ದರೂ, ಗಣೇಶಗುಡಿ ಎಂಬ ಸುಂದರ ಪುಟಾಣಿ ಊರನ್ನು ಸೃಷ್ಟಿಸಿದೆ. ಜೋರು ಮಳೆಗಾಲದಲ್ಲಿ ಡ್ಯಾಂನ ಗೇಟು ತೆಗೆಯುತ್ತಾರೆ. ಧುಮ್ಮಿಕ್ಕುವ ನೀರಿನ ರಭಸ ನೋಡುವುದೇ ಸೊಗಸು. ಹಿನ್ನೀರಿನ ಅಗಾಧ ಸೊಬಗನ್ನೂ ಆಸ್ವಾದಿಸಬಹುದು.

ಸಿಂಥೇರಿ ರಾಕ್ಸ್:

ದಟ್ಟ ಕಾಡಿನ ಮಧ್ಯೆ ಕಡಿದಾದ ಕಣಿವೆಯಲ್ಲಿರುವ ಸಿಂಥೇರಿ ರಾಕ್ಸ್‌ ನಿರ್ಮಾಣವಾಗಿದ್ದು ಲಕ್ಷಾಂತರ ವರ್ಷಗಳ ಹಿಂದೆ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಿಂದ. ಇದು ಜೋಯಿಡಾದ ಇನ್ನೊಂದು ಪ್ರಸಿದ್ಧ ಪ್ರವಾಸೀ ಆಕರ್ಷಣೆ. ಗೋಡೆಯಂತಹ ಹೆಬ್ಬಂಡೆ, ಜುಳು ಜುಳು ಹರಿಯುವ ಪುಟ್ಟ ತೊರೆ, ಬಂಡೆಗುಂಟ ಇರುವ ಜೇನುಗೂಡುಗಳು ಇಲ್ಲಿನ ಪ್ರಮುಖ ಆಕರ್ಷಣೆಗಳು.

ದೂರ: ದಾಂಡೇಲಿ ಬಸ್‌ ನಿಲ್ದಾಣದಿಂದ ಕೇವಲ 2 ಕಿ.ಮೀ.

ಮೊಸಳೆ ಪಾರ್ಕ್‌:

ಸರ್ಕಾರದ ಅಧೀನದಲ್ಲಿರುವ ಮೊಸಳೆ ಪಾರ್ಕ್‌ ದಾಂಡೇಲಿಯ ಪ್ರಮುಖ ಆಕರ್ಷಣೆ. ದಾಂಡೇಲಿಯಿಂದ ಕೇವಲ ಮೂರು ಕಿ.ಮೀ. ಅಂತರದಲ್ಲಿದೆ. ಮೊಸಳೆಗಳನ್ನು ನೋಡುವುದರ ಜೊತೆಗೆ ವಿಹಾರಕ್ಕೂ ಹೇಳಿ ಮಾಡಿಸಿದ ಜಾಗ ಇದು.

ಆತಿಥ್ಯ ಎಲ್ಲಿ?:

ಪ್ರವಾಸಿಗರ ಅನುಕೂಲದ ದೃಷ್ಟಿಯಿಂದ ಜೋಯಿಡಾ, ದಾಂಡೇಲಿ ಎರಡೂ ಕಡೆಗಳಲ್ಲಿ 50ಕ್ಕೂ ಹೆಚ್ಚು ಹೋಂ ಸ್ಟೇ, ರೆಸಾರ್ಟುಗಳಿವೆ. ಪ್ರವಾಸಿ ತಾಣಗಳದ್ದೊಂದು ಹದವಾದರೆ ಇಲ್ಲಿನ ಊಟ ಉಪಚಾರ ವಸತಿಗಳದ್ದೇ ಇನ್ನೊಂದು ಹದ. ಇವತ್ತಿಗೂ ಜೋಯಿಡಾದ ‘ಕಾಡುಮನೆ’ ಹೋಂ ಸ್ಟೇಯ ವೆಲ್‌ಕಮ್‌ ಡ್ರಿಂಕಿನ ಸ್ವಾದ ನಾಲಿಗೆ ತುದಿಯಲ್ಲಿದೆ. ಹೊಟ್ಟೆ ತುಂಬಾ ಊಟ, ರುಚಿ ಜೊತೆಗೆ ಶುಚಿ. ಸ್ಥಳೀಯ ವಿಶೇಷಗಳಾದ ತಂಬುಳಿ, ಅಪ್ಪೆಹುಳಿ ಹಾಗೂ ಹಲವು ಹತ್ತೆಂಟು ಬಗೆಯ ತಿನಿಸುಗಳು ಪ್ರವಾಸಿಗರ ನಾಲಿಗೆ ಚಪಲ ತಣಿಸುತ್ತವೆ. ಹರ್ಬಲ್‌ ಸ್ನಾನ, ಹಬೆಸ್ನಾನ ಹಾಗೂ ಆರೋಗ್ಯಕ್ಕೆ ಉಪಯುಕ್ತವಾದ ಪೇಯಗಳು ಪ್ರವಾಸಿಗರ ನೆನೆಪಿನ ಬುತ್ತಿ ಸೇರುತ್ತವೆ. ಉತ್ತಮ ಆತಿಥ್ಯಕ್ಕೆ ಹೆಸರಾದವುಗಳೆಂದರೆ, ದಾಂಡೇಲಿಯಿಂದ 12 ಕಿ.ಮೀ. ದೂರದಲ್ಲಿರುವ ಹಕ್ಕಿಮನೆ, ಕಾಡುಮನೆ (ನರಸಿಂಹ ಭಟ್‌: 9480085707), ಪಣಸೋಲಿಯಲ್ಲಿರುವ ದಾಂಡೇಲಿ ಕಾಳಿ ಜಂಗಲ್‌ ಸ್ಟೇ (ರಾಹುಲ್‌: 9845301361) ಪ್ರಸಿದ್ಧವಾದ ವಸತಿ ಕಲ್ಪಿಸುವ ತಾಣಗಳಾಗಿವೆ. ಹೋಂ ಸ್ಟೇಗಳಲ್ಲಿ ವಸತಿಯ ವ್ಯವಸ್ಥೆ ಅಷ್ಟೇ ಅಲ್ಲದೆ ನಿಮ್ಮ ಸುತ್ತಾಟದ ಯೋಜನೆಗಳನ್ನೂ ಹಾಕಿಕೊಡುತ್ತಾರೆ. (ಹೆಚ್ಚಿನ ವಿವರಗಳಿಗಾಗಿ: 8762329546)

ಕಾನ್ಸೆಪ್ಟ್‌ ಬೇಸ್ಡ್‌ ಟೂರಿಸಂ:

ಸಾಂಪ್ರದಾಯಿಕ ಊಟ, ವಸತಿ, ಉಪಚಾರದಾಚೆಗೆ ಜೋಯಿಡಾದಲ್ಲಿ ಕಾನ್ಸೆಪ್ಟ್‌ ಬೇಸ್ಡ್‌ ಟೂರಿಸಂ ಕೂಡ ಬೆಳೆಯುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಜೋಯಿಡಾ ತಾಲೂಕು ಕೇಂದ್ರದಿಂದ ಸ್ವಲ್ಪವೇ ದೂರ ಇರುವ ಹನಿಪಾರ್ಕ್‌! ಕಾಡುಮನೆ, ಹಕ್ಕಿಮನೆ ಎಂಬೆರಡು ಪ್ರಸಿದ್ಧ ಹೋಂ ಸ್ಟೇ ನಡೆಸುತ್ತಿರುವ ನರಸಿಂಹ ಭಟ್‌ ಅವರ ಕನಸಿನ ಕೂಸು. ವಿಶ್ವದ ನಾನಾ ಪ್ರದೇಶಗಳಲ್ಲಿರುವ ವಿಶಿಷ್ಟ ಪ್ರಬೇಧಗಳ ಜೇನುಗಳನ್ನು ಇಲ್ಲಿ ಕಾಣಬಹುದು. ತಾಜಾ ಜೇನು ತುಪ್ಪ ಸವಿಯಬಹುದು. ಅಷ್ಟೇ ಅಲ್ಲ, ಜೇನು ಸಾಕುವ ಆಸಕ್ತಿ ಇದ್ದರೆ ಕಲಿಸಿಕೊಡುತ್ತಾರೆ ಕೂಡ. ಹಾರ್ನ್‌ಬಿಲ್‌ ರೆಸಾರ್ಟ್‌ – ಕಾಳಿ ನದಿಯ ಪಕ್ಕದಲ್ಲೇ ಇರುವ ಇನ್ನೊಂದು ಚೆಂದ ಜಾಗ. ನದಿಯಂಚಿನ ಎತ್ತರದ ಮರಗಳಲ್ಲಿ ಬಂದು ಕೂರುವ ನೂರಾರು ಹಾರ್ನ್‌ಬಿಲ್‌ಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ವನ್ಯಜೀವಿ ಪೋಟೊಗ್ರಾಫರ್‌ಗಳು ಮತ್ತು ಪಕ್ಷಿ ಫೋಟೊಗ್ರಾಫರ್‌ ಸಲುವಾಗಿಯೇ ವಿಶೇಷವಾದ ಸ್ಥಳವೊಂದು ಸಿದ್ಧವಾಗುತ್ತಿದೆ.

ಹಕ್ಕಿ ಹುಡುಗಿ ರಜನಿ!:

ರಜನಿ
ರಜನಿ

ಹಕ್ಕಿಗಳೆಂದರೆ ಯಾರಿಗೆ ತಾನೇ ಪ್ರೀತಿಯಲ್ಲ! ಅದರಲ್ಲೂ ದಾಂಡೇಲಿ, ಜೋಯಿಡಾ ವ್ಯಾಪ್ತಿಯಲ್ಲಿ ಅಪರೂಪದ ಪಕ್ಷಿಸಂಕುಲಗಳಿವೆ. ಪ್ಲೈಯಿಂಗ್‌ ಟೈಗರ್‌ ಎಂದೇ ಕರೆಸಿಕೊಳ್ಳುವ ಮಲಬಾರ್‌ ಗ್ರೇಟ್‌ ಹಾರ್ನ್‌ಬಿಲ್‌ಗಳು ಇಲ್ಲಿನ ಪ್ರಮುಖ ಆಕರ್ಷಣೆ. ಪ್ರತೀವರ್ಷ ಸರ್ಕಾರವೇ ಇಲ್ಲಿ ಹಾರ್ನ್‌ಬಿಲ್‌ ಹಬ್ಬವನ್ನು ಆಚರಿಸುತ್ತದೆ. ಇದೆಲ್ಲದರ ಜೊತೆಗೆ ನಿತ್ಯವೂ ಪ್ರವಾಸಿಗರಿಗೆ ಪಕ್ಷಿಗಳನ್ನು ತೋರಿಸುತ್ತಾ ಅವುಗಳ ಜೀವನಕ್ರಮ, ಆಹಾರ ಕೂಗು, ಹಾರಾಟಗಳ ಬಗ್ಗೆ ಅಥೆಂಟಿಕ್‌ ಮಾಹಿತಿಯನ್ನು ನೀಡುತ್ತಿರುವವರು ರಜನಿರಾವ್‌. ವೃತ್ತಿಯಲ್ಲಿ ಶಿಕ್ಷಕಿ. ಈಗ ಪ್ರವಾಸಿಗರ ಪಾಲಿಗೆ ‘ಹಕ್ಕಿ ಹುಡುಗಿ’! ಇತ್ತೀಚೆಗೆ ಬರ್ಡ್‌ವಾಚಿಂಗ್‌ ಇವೆಂಟ್‌ ಕೂಡ ಶುರು ಮಾಡಿದ್ದಾರೆ. ಅಪರೂಪದ ಪಕ್ಷಿಗಳನ್ನು ಪರಿಚಯಿಸುತ್ತಾ, ಅವರ ಲೋಕಕ್ಕೆ ಕರೆದೊಯ್ಯುವ ರಜನಿಯವರನ್ನು ಮಾತಾಡಿಸುವುದಿದ್ದರೆ, 9481723612 ನಂಬರ್‌ಗೆ ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT