ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರದಲ್ಲಿ ಏನೆಲ್ಲಾ ಇದೆ...

ಬಿಸಿಲ ಧಗೆ ಸಾಕಾಯಿತ? ಕರೆಯುತಿದೆ ಜಲಪಾತ...
Last Updated 25 ಏಪ್ರಿಲ್ 2019, 4:00 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಗೆ ‘ಜಲಪಾತಗಳ ಸ್ವರ್ಗ’ ಎನ್ನುವ ವಿಶೇಷಣ. ಈ ಬಿರುದಿಗೆ ಜಿಲ್ಲೆಯನ್ನು ಅರ್ಹಗೊಳಿಸಿದ್ದರಲ್ಲಿ ಯಲ್ಲಾಪುರ ತಾಲ್ಲೂಕಿನ ಪಾತ್ರ ಹಿರಿದು. ಈ ತಾಲ್ಲೂಕಿನ ಹಲವು ಜಲಪಾತಗಳು ಬೇಸಿಗೆಯಲ್ಲಿ ನಿಮ್ಮನ್ನು ಹಗುರಾಗಿಸುತ್ತವೆ.

ಬಿಸಿಲಿನಿಂದ ತಪ್ಪಿಸಿಕೊಂಡು ಎಲ್ಲಾದರೂ ಕಳೆದುಹೋಗಬೇಕು ಎಂದು ಯೋಚಿಸುತ್ತಿದ್ದರೆ ನೇರ ಯಲ್ಲಾಪುರಕ್ಕೆ ಎರಡು ದಿನದ ಮಟ್ಟಿಗಾದರೂ ಬರುವುದು ಸೂಕ್ತ. ಬೆಂಗಳೂರು ಅಥವಾ ರಾಜ್ಯದ ಇನ್ನಿತರ ನಗರಗಳಿಂದ ಯಲ್ಲಾಪುರಕ್ಕೆ ಬಸ್ ಸಂಪರ್ಕವಿದೆ. ಯಲ್ಲಾಪುರದಲ್ಲಿ ವಸತಿಗೆ ಉತ್ತಮ‌ ಹೊಟೇಲ್‌ಗಳು ಸಹ ಲಭ್ಯವಿವೆ.

ಸಿರ್ಸಿಯ ಸಮೀಪದ ಸಣ್ಣ ಝರಿ
ಸಿರ್ಸಿಯ ಸಮೀಪದ ಸಣ್ಣ ಝರಿ

ಸಾತೊಡ್ಡಿಯ ಜಲಸುಗ್ಗಿ
ಯಲ್ಲಾಪುರದಲ್ಲಿಯೇ ತಿಂಡಿತಿಂದು ಅವಶ್ಯಕತೆಯಿದ್ದಷ್ಟೇ ಲಗೇಜನ್ನು ತೆಗೆದುಕೊಂಡು ಹೊರಟರೆ ಸಾತೊಡ್ಡಿ ಜಲಪಾತ ನಿಮ್ಮನ್ನೇ ಎದುರುನೋಡುತ್ತಿರುತ್ತದೆ.ಯಲ್ಲಾಪುರದಿಂದ ಹುಬ್ಬಳ್ಳಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ 3 ಕಿ.ಮೀ.ನಷ್ಟು ಮುಂದೆ ಸಾಗಿದರೆ ಅಲ್ಲಿ ಸಾತೊಡ್ಡಿ ಫಾಲ್ಸ್‌ಗೆ ಹೋಗುವ ದಾರಿ ಎಂಬ ಬೋರ್ಡ್‌ ಕಾಣಿಸುತ್ತದೆ. ಅಲ್ಲಿ ಎಡಕ್ಕೆ ತಿರುಗಿ 25 ಕಿ.ಮೀ. ಸಾಗಿದರೆ ಸಾತೋಡಿ ಜಲಪಾತ ಸಿಗುತ್ತದೆ. ಹಾ, ಜಲಪಾತದ ಬುಡದವರೆಗೂ ವಾಹನದಲ್ಲಿ ತೆರಳಲು ಸಾಧ್ಯವಿಲ್ಲ. 2 ಕಿ.ಮೀ.ನಷ್ಟು ಹಿಂದೆ ಗಾಡಿ ನಿಲ್ಲಿಸಿ, ಕಚ್ಚಾರಸ್ತೆಯಲ್ಲಿ ನಡೆದು ಜಲಪಾತದ ಬುಡವನ್ನು ತಲುಪಬೇಕು.

ಯಲ್ಲಾಪುರದಲ್ಲಿ ಬೆಳಗಿನ ಉಪಾಹಾರ ಸೇವಿಸಿಯೇ ಸಾತೊಡ್ಡಿಗೆ ತೆರಳುವುದು ಉತ್ತಮ. ದೇಹಳ್ಳಿ, ಬಳಗಾರ್ ಬಸ್ಸುಗಳ ಮೂಲಕ ಸಾತೊಡ್ಡಿಯನ್ನು ತಲುಪಬಹುದಾದರೂ ಬಸ್ಸುಗಳನ್ನೇ ನಂಬಿಕೊಳ್ಳುವಂತಿಲ್ಲ.

ಸಾತೊಡ್ಡಿಯ ದಾರಿಯಲ್ಲಿ ಪುರಾತನ ಗಣೇಶಗುಡಿ ಸಿಗುತ್ತದೆ. ಗಣೇಶನಿಗೊಂದು ಕೈಮುಗಿದು ಕ್ಷೇಮಕರ ಪ್ರವಾಸಕ್ಕಾಗಿ ಪ್ರಾರ್ಥಿಸಿ. ಏಕೆಂದರೆ ರಸ್ತೆಯ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲ! ಸಳಸಳ ಹರಿಯುವ ಹಾವಿನ ಮೈಯಂತೆ ತಿರುವುಗಳಲ್ಲೇ ತೆರೆದುಕೊಳ್ಳುತ್ತ ಹೋಗುವ ರಸ್ತೆಯಲ್ಲಿ ಸಾಗುವಾಗ ಪಶ್ಚಿಮ‌ ಘಟ್ಟದ ಹೊಟ್ಟೆಯೊಳಗೆ ಚಲಿಸುತ್ತಿರುವಂತೆ ಅನಿಸುತ್ತದೆ. ಜಲಪಾತಕ್ಕೆ ಹತ್ತಿರವಾದಂತೆ ಕಣ್ಣು ಹಾಯಿಸಿದಷ್ಟೂ ಕೊಡಸಳ್ಳಿಯ ಹಿನ್ನೀರಿನ ರಾಶಿ. ದಟ್ಟ ಅಡವಿಯ ನಡುವೆ ಪುಟ್ಟ ಕಾಲ್ದಾರಿ. ದೂರದಲ್ಲೆಲ್ಲೊ ಭೋ ಎಂಬ ಶಬ್ದ. ಜಲಪಾತದ ಬಳಿಗೆ ಕಲ್ಲು ದಿಬ್ಬಗಳಲ್ಲಿ ಎಚ್ಚರಿಕೆಯಿಂದ ಕಾಲಿಡುತ್ತ ನಡೆಯವಾಗ ಹಿತವಾದ ತಂಪಿನ‌ ಸಿಂಚನ. ಸುಮಾರು 15 ಮೀಟರ್‌ ಎತ್ತರದಿಂದ ಧುಮುಕುವ ಜಲಪಾತದ ಮರ್ಮರವನ್ನು ಆಲಿಸುವುದೇ ಒಂದು ಧ್ಯಾನ. ಸಾತೊಡ್ಡಿ ಜಲಪಾತದ ಬುಡ ತಲುಪಲು ಹಳ್ಳದ ಹರಿವಿನಲ್ಲೇ ಒಂದಿಷ್ಟು ದೂರ ನಡೆಯಬೇಕು. ಎಚ್ಚರಿಕೆಯ ಹೆಜ್ಜೆಗಳನ್ನಿಡದಿದ್ದರೆ ಅಪಾಯ ಖಚಿತ.

ಜೇನುಕಲ್ಲು ಗುಡ್ಡದ ಅದ್ಭುತ ಮುಂಜಾವು
ಜೇನುಕಲ್ಲು ಗುಡ್ಡದ ಅದ್ಭುತ ಮುಂಜಾವು

ಸಾಮಾನ್ಯವಾಗಿ ಅಲ್ಲಿಗೆ ತೆರಳಿ ನೀರಲ್ಲಿ ಆಟವಾಡುವಷ್ಟರಲ್ಲಿ ಮಧ್ಯಾಹ್ನವಾಗುತ್ತದೆ. ಹೊಟ್ಟೆಯೊಳಗಿಂದ ಹಸಿವಿನ ಸುದ್ದಿ ಪ್ರಕಟಗೊಳ್ಳಲು ಶುರುವಾಗುತ್ತದೆ. ನೀರಿನಲ್ಲಾಡಿ ದಣಿದವರಿಗೆ ಅನತಿ ದೂರದಲ್ಲಿಯೇ ಹವ್ಯಕ ಮಾರ್ಟ್‌ ಇದೆ. ಇಲ್ಲಿ ಊಟ ಮಾಡಲು ಬಯಸುವವರು ಮುಂಗಡವಾಗಿ ಊಟಕ್ಕೆ ಆರ್ಡರ್ ಮಾಡಿರಬೇಕು. (ಹವ್ಯಕ ಮಾರ್ಟಿನ ಸಂಪರ್ಕ: ನಾಗೇಂದ್ರ ಆನಗೋಡ್ 98448 56556)

ನೀರ ಜಾಡಿನಲ್ಲಿ ಟ್ರೆಕ್ಕಿಂಗ್‌ ಮೋಡಿ
ಸಾತೊಡ್ಡಿಯ ನೆತ್ತಿಯ ಮೇಲೆ ಅಷ್ಟಾಗಿ ಪರಿಚಿತವಲ್ಲದ ಇನ್ನೊಂದು ಜಲಪಾತವಿದೆ. ಅದು ದಬ್ಬೇಸಾಲ್‌. ದಬ್ಬೇಸಾಲ್ ಜಲಪಾತ ಒಟ್ಟು ಎಂಟು ಹಂತಗಳಲ್ಲಿ ಸುರಿಯುತ್ತದೆ. ದಬ್ಬೇಸಾಲಿನಿಂದ ಸಾತೊಡ್ಡಿಗೆ ಹಳ್ಳದ ಅಂಚಿನಲ್ಲಿ ಕಲ್ಲುಬಂಡೆಗಳ ಮೇಲೆ ನಾಜೂಕಿನಿಂದ ಕಾಲಿಡುತ್ತ ಸಾಹಸಮಯ ಟ್ರೆಕಿಂಗ್ ಮಾಡಬಹುದು. ಮಳೆಗಾಲದಲ್ಲಿ ಮಾತ್ರ ಕಡುಕೆಂಪು ನೀರು ರೌದ್ರಾವತಾರವಾಗಿ ಧುಮ್ಮಿಕ್ಕುವುದರಿಂದ ಹೋಗಲಸಾಧ್ಯ. (ಟ್ರೆಕಿಂಗ್ ಮತ್ತು ವಸತಿಗಾಗಿ ದತ್ತಾತ್ರೇಯ ಗಾಂವ್ಕರ ದಬ್ಬೇಸಾಲ 08419242518 ಇವರನ್ನು ಸಂಪರ್ಕಿಸಬಹುದು)

ಸಾತೊಡ್ಡಿಯಿಂದ ಹಿಂತಿರುಗುವಾಗ ಶಿವಪುರ ತೂಗುಸೇತುವೆ ಕಾಣುತ್ತದೆ. ಕಾಳಿ ಹೊಳೆಗೆ ಕಟ್ಟಲಾದ ಸೇತುವೆ‌ಯ ಮೇಲಿಂದ ತಂಪು ಗಾಳಿ ಸೇವಿಸುತ್ತ ಹಿನ್ನೀರನ್ನು ಕಣ್ಣಲ್ಲಿ ತುಂಬಿಕೊಳ್ಳುವಾಗ ಹಿತವಾದ ಆನಂದ ಪ್ರಾಪ್ತಿಯಾಗುತ್ತದೆ.

ಮಾಗೋಡಿಗೆ ಹೋಗಲು ಮರೆಯದಿರಿ
ಸಾತೊಡ್ಡಿಯಿಂದ ಮರಳಿ ಬಂದು ಯಲ್ಲಾಪುರದಲ್ಲಿ ಒಮ್ಮೆ ಫ್ರೆಶ್‌ಅಪ್ ಆಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರವಾರದ ಕಡೆ ಹೊರಟರೆ ಮಾಗೋಡ್ ಕ್ರಾಸ್ ಸಿಗುತ್ತದೆ. ಅಲ್ಲಿಂದ ಸುಮಾರು 7 ಕಿ.ಮೀ. ಹೋಗಿ ಎಡಕ್ಕೆ ತಿರುಗಿದರೆ ಅನತಿ ದೂರದಲ್ಲಿಯೇ ಕೌಡಿಕೆರೆ. ವಿಶಾಲವಾದ ಕೆರೆಯ ದಡದಲ್ಲಿ ದೇವಿಯ ದೇಗುಲವಿದೆ. ಪುರಾಣಗಳ ಪ್ರಕಾರ ಇಲ್ಲಿ ಭೀಮನು ದೇವಿಯ ಮಂದಿರ ನಿರ್ಮಿಸಿದನೆಂದು ಪ್ರತೀತಿ. ಕೆರೆಯನ್ನು ಸುತ್ತುವರೆದಿರುವ‌ ಹಸಿರು ಕಾನನದಲ್ಲಿ ಕ್ಷಣ ಬಿಡುವಿಲ್ಲದೆ ಚಿಲಿಪಿಲಿಗುಡುವ ಹಕ್ಕಿಗಳ ದನಿ ಕೇಳುತ್ತಾ ಒಮ್ಮೆ ಕೆರೆಯನ್ನು‌ ಸುತ್ತು ಹಾಕುವುದು ಚಂದದ ಅನುಭವ. ಆಕಾಶಕ್ಕೆ ಕನ್ನಡಿ ಹಿಡಿದಂಥ ದೊಡ್ಡ ಕೆರೆ! ಮೋಡದೊಟ್ಟಿಗೇ ಓಡುವ ಮೋಡದ ನೆರಳು. ಹಿತವಾದ ತಂಗಾಳಿ. ಆಗಾಗ ಕೆರೆಯಲ್ಲಿ ತೇಲುತ್ತ ಪಟಕ್ಕನೆ ಮೀನು ಹಿಡಿದು ಹಾರುವ ಬಕಪಕ್ಷಿಗಳನ್ನು ನೋಡುತ್ತ ಕೆರೆಯನ್ನು ಸುತ್ತು ಹಾಕಲು ಪ್ರಾರಂಭಿಸಿದರೆ ಸಮಯದ ಪರಿವೆಯೇ ಇರದು!

ಈ ಹಸಿರ ಸಿರಿಯಲಿ... ಹಂತ ಹಂತವಾಗಿ ಇಳಿದು ಕಣಿವೆಯಲ್ಲಿ ಸಾಗುವ ಮಾಗೋಡ್‌ ಜಲಪಾತ
ಈ ಹಸಿರ ಸಿರಿಯಲಿ... ಹಂತ ಹಂತವಾಗಿ ಇಳಿದು ಕಣಿವೆಯಲ್ಲಿ ಸಾಗುವ ಮಾಗೋಡ್‌ ಜಲಪಾತ

ಅಲ್ಲಿಂದ ಮುಂದೆ 15 ಕಿ.ಮೀ. ದೂರ ತೆರಳಿದರೆ ರಮಣೀಯ ಮಾಗೋಡು ಫಾಲ್ಸ್ 200 ಮೀಟರ್ ಎತ್ತರದಿಂದ ಎರಡು ಹಂತದಲ್ಲಿ ಧುಮುಕುತ್ತದೆ. ಪಶ್ಚಿಮ ಘಟ್ಟದ ಸೆರಗಿನ ಮಧ್ಯೆ ಬೇಡ್ತಿ ಅಷ್ಟು ಎತ್ತರದಿಂದ ಜಿಗಿಯುವುದನ್ನು ನೋಡುವುದೇ ಚಂದ. ಜಲಪಾತದ ಆಳ ಬುಡಕ್ಕೆ ಹೋಗಲು ಸಾಧ್ಯವಾಗದಿದ್ದರೂ ಆಗುವ ಖುಷಿಗೇನು ಕಡಿಮೆಯಿಲ್ಲ. ಇಲ್ಲೊಂದು ಚಿಕ್ಕ ಪ್ರವಾಸಿ ಮಂದಿರವೂ ಇದೆ.

ಮಾಗೋಡು ಫಾಲ್ಸ್ ನೋಡಿ ಹಿಂತಿರುಗುವಾಗ ಒಮ್ಮೆ ಸಮಯ‌ ನೋಡಿಕೊಳ್ಳಿ. ಸೂರ್ಯಾಸ್ತವಾಗಲು ಇನ್ನೂ ತಡವಿದೆಯೆಂದಾದರೆ ಬರುವ ದಾರಿಯಲ್ಲಿ 8 ಕಿ.ಮೀ. ದೂರದಲ್ಲಿ ಮತ್ತೊಂದು ಚಿಕ್ಕ ಜಲಪಾತವಿದೆ. ಅದೇ ಕುಳಿ ಮಾಗೋಡು. ಹಳ್ಳದ ಹರಿವಿನಲ್ಲೇ ನಡೆದು ಜಲಪಾತವನ್ನು ತಲುಪಬೇಕು. ಮಾಗೋಡು ಜಲಪಾತದಲ್ಲಿ ನೀವು ದೂರದಿಂದ ಖುಷಿ ಪಡೆದರೆ ಕುಳಿಮಾಗೋಡಿನಲ್ಲಿ ಜಲಪಾತದಡಿಯೇ ತೆರಳಬಹುದು. ಮೈಯೊದ್ದೆ ಮಾಡಿಕೊಂಡು ಬಿಸಿಲನ್ನು ದೂರ ತಳ್ಳಬಹುದು.

ಹೆಚ್ಚು ತಡಮಾಡಬೇಡಿ! ನೀವು ಸೂರ್ಯಾಸ್ತದ ವೀಕ್ಷಣೆಗೆ ಹತ್ತಿರದಲ್ಲೇ ಇರುವ ಜೇನುಕಲ್ಲುಗುಡ್ಡಕ್ಕೆ ತಲುಪಲೇಬೇಕು.

ಸೂರ್ಯಾಸ್ತಕ್ಕೆ ಜೇನ ಸವಿ!
ಸಮುದ್ರಮಟ್ಟದಿಂದ 450 ಮೀಟರ್ ಎತ್ತರದಲ್ಲಿರುವ ಜೇನುಕಲ್ಲುಗುಡ್ಡದಲ್ಲಿ ಸೂರ್ಯಾಸ್ತ ನಯನ ಮನೋಹರ. ಕಣ್ಣು ಹಾಯಿಸಿದಷ್ಟೂ ವಿಶಾಲ ಹಸಿರಿನ ಬಯಲು. ನಡುವೆ ಇಂಚು ಪಟ್ಟಿಯಲ್ಲಿ ಗೆರೆ ಎಳೆದ ಹಾಗೆ ಹರಿದ ಬೇಡ್ತಿ. ಘಟ್ಟದ ಮತ್ತೊಂದು ಪಾರ್ಶ್ವದಿಂದ ಹರಿದು ಬರುವ ಬಿಳಿಹೊಳೆಯು ಬೇಡ್ತಿಗೆ ಸೇರಿ ಮುಂದೆ ಗಂಗಾವಳಿಯಾಗಿ ಹರಿಯುತ್ತದೆ. ಸಂಗಮ ಸೂರ್ಯಾಸ್ತಗಳೆರಡು ಕೂಡಿ ಸುಂದರ ಹಾಡು ಹಾಡುತ್ತವೆ. ಜೇನುಕಲ್ಲು ಗುಡ್ಡದ ಹೆಸರಿಗೆ ಅನ್ವರ್ಥವಾಗುವಂಥ ನೋಟವೊಂದನ್ನು ನೀವು ಆಸ್ವಾದಿಸಬಹುದು.

ಈ ಎಲ್ಲ ತಾಣಗಳಿಗೂ ಮೊಟ್ಟೆಗದ್ದೆ ಎನ್ನುವ ಜಾಗವೇ ಜಂಕ್ಷನ್. ಇಲ್ಲಿಂದ ಮಾಗೋಡು ಜಲಪಾತ ಎರಡೂವರೆ, ಜೇನುಕಲ್ಲು ಗುಡ್ಡ ಮೂರು ಮತ್ತು ಕುಳಿಮಾಗೋಡು ಅಜಮಾಸು ನಾಲ್ಕು ಕಿ.ಮೀ. ದೂರವಾಗುತ್ತದೆ.

ಉಂಚಳ್ಳಿ ಜಲಪಾತದ ತಾಳಕ್ಕೆ ಕಾಮನಬಿಲ್ಲಿನ ಮೇಳ
ಉಂಚಳ್ಳಿ ಜಲಪಾತದ ತಾಳಕ್ಕೆ ಕಾಮನಬಿಲ್ಲಿನ ಮೇಳ

(ಮಾಗೋಡು, ಕುಳಿಮಾಗೋಡು ಜಲಪಾತ ಮತ್ತು ಜೇನುಕಲ್ಲು ಗುಡ್ಡಗಳ ತಿರುಗಾಟಕ್ಕೆ ಜೊತೆಯಾಗಲು ಇವರನ್ನು ಸಂಪರ್ಕಿಸಬಹುದು. ಸತೀಶ್‌ ಮಾಗೋಡು: 89707 41424)

ಈ ಎಲ್ಲ ಜಲಪಾತಗಳು ಅಡವಿಯ ನಡುವೆ ಇರುವುದರಿಂದ ಬಹುತೇಕ ಎಲ್ಲೂ ಮೊಬೈಲ್ ಸಿಗ್ನಲ್ ದೊರಕುವುದಿಲ್ಲ. ಸಿಕ್ಕರೂ ಅಲ್ಲಲ್ಲಿ ಬಿ.ಎಸ್.ಎನ್.ಎಲ್. ಮಾತ್ರ. ಜಗದ ಚಿಂತೆ ಮರೆತುಬಿಡುವುದೇ ಸರಿ.

ಸೂರ್ಯಾಸ್ತ ನೋಡಿದ ತರುವಾಯ ಆದಷ್ಟೂ ಬೇಗ ಹೊರಡುವುದು ಉತ್ತಮ. ಯಲ್ಲಾಪುರಕ್ಕೆ ತಲುಪಿ‌ ರೂಮಿನಲ್ಲಿ ವಿಶ್ರಾಂತಿ ಪಡೆಯಿರಿ. ಚಹಾದ ಜೊತೆ ಪೇಟೆಯಲ್ಲಿ ಮಲೆನಾಡಿನ ಅಪ್ಪೆಹುಳಿ, ತಂಬುಳಿ ಊಟವನ್ನು ಸವಿಯಲು ಮರೆಯದಿರಿ. ಹುಳಿ‌ ಮಾವಿನಕಾಯಿಯ ಚಟ್ನಿ, ಹಲಸಿನಕಾಯಿಯ ಹುಳಿಯನ್ನೂ ಸಹ ಊಟದ ತಟ್ಟೆಯಲ್ಲಿ ಸೇರಿಸಿಕೊಳ್ಳಿ. ಮಲೆನಾಡಿನ ಸ್ವಾದಿಷ್ಟ ಭೋಜನ ಒಳ್ಳೆಯ ನಿದ್ದೆ ತರಿಸುತ್ತದೆ. ದಿನವಿಡೀ ಪ್ರವಾಸದ ಮಾತು ಕಥೆಯ ಜೊತೆಗೆ ತೆಗೆದ ಖುಷಿಯ ಕ್ಷಣಗಳ ಚಿತ್ರಗಳನ್ನು ನೋಡುತ್ತ ಸುಖವಾದ ನಿದ್ದೆಗೆ ಜಾರಿಬಿಡಿ. ಮರುದಿನ ಎದ್ದು ಯಲ್ಲಾಪುರದಲ್ಲಿಯೇ ಬೆಳಗಿನ ತಿಂಡಿ ಮುಗಿಸಿ ಮತ್ತೆ ಕಾಡ ಮಡಿಲಿಗೆ ದಾಂಗುಡಿಯಿಡಲು ಸಿದ್ಧರಾಗಿ. ಇಂದು ಮೊದಲು ನೋಡಬೇಕಾಗಿದ್ದು ಕಾನೂರು ಜಲಪಾತ.

ಕಾನನದ ನಡುವೆ ಕಾನೂರು ಜೋಗ
ಆಚೀಚೆ ಬೆಟ್ಟದ ನಡುವೆ ಅಗಲವಾದ ಹಳ್ಳ, ಹಳ್ಳದ ದಾರಿಯಲ್ಲಿ ದೊಡ್ಡದೊಡ್ಡ ಕಲ್ಲುಗಳನ್ನು ಹತ್ತಿಳಿಯುತ್ತ ಸಾಗಿದರೆ ಪಶ್ಚಿಮ ಘಟ್ಟದ ಬೆಟ್ಟಗಳ ಸರಣಿ ಥಟ್ಟನೆ ಕೊನೆಗೊಳ್ಳುತ್ತದೆ. ಆ ಪ್ರಪಾತದಲ್ಲಿ ಅಚ್ಚರಿಯಂತೆ ಹುಟ್ಟಿಕೊಳ್ಳುವ ಜಲಪಾತ, ಹೆಸರು ಕಾನೂರು ಜೋಗ.

ಕಾನೂರು ಜಲಪಾತಕ್ಕೆ ಯಲ್ಲಾಪುರದಿಂದ ಕೈಗಾ ಮಾರ್ಗವಾಗಿ ದೂರ ಸಾಗಿದರೆ ಬಾಸಲ್. ಮುಂದೆ ಸ್ವಲ್ಪ ದೂರದಲ್ಲಿ ಬಲಕ್ಕೆ ಕಾನೂರಿಗೆ ಹೋಗುವ ಅಡ್ಡರಸ್ತೆ.‌ ಅಲ್ಲಿಂದ ಮುಂದೆ ಉಬ್ಬು ಹೊಂಡಗಳಿರುವ ಕಚ್ಚಾರಸ್ತೆಯಲ್ಲಿ ತೆರಳಿದರೆ ರಸ್ತೆ ಅಂತ್ಯವಾಗುತ್ತದೆ.‌ ಅಲ್ಲೇ ವಾಹನವಿಟ್ಟು ಅಲ್ಲಿಂದ ಮುಂದೆ ಕಾಲ್ದಾರಿಯಲ್ಲಿ ಹೋಗುತ್ತಿದ್ದಂತೆ ಸಿಗುವ ಹಳ್ಳವೇ ಮುಂದೆ ಪ್ರಪಾತಕ್ಕೆ ಜಿಗಿಯುತ್ತದೆ. ಹರಿಯುವ ಹಳ್ಳದಲ್ಲಿ ಕಲ್ಬಂಡೆಯ ತೀರ ಅಂಚಿಗೆ ನಿಂತು ಕಣ್ ಚೂಪು ಮಾಡಿ ನೋಡಿದರೆ ಮಾತ್ರ ಜಲಪಾತ ನೆಲ ಮುಟ್ಟುವುದು ಕಾಣುತ್ತದೆ. ಮಳೆಗಾಲದಲ್ಲಿ ಇಲ್ಲಿ ತೆರಳಲು ಸಾಧ್ಯವೇ ಇಲ್ಲ.

ವಿಭೂತಿ ಜಲಪಾತ
ವಿಭೂತಿ ಜಲಪಾತ

ಸಮೀಪದಲ್ಲಿ ಯಾವುದೇ ಮನೆಗಳಿಲ್ಲ. ಜನಸಂಚಾರವೂ ಇಲ್ಲ. ಆದ್ದರಿಂದ ಗುಂಪಿನಲ್ಲಿ ಹೋಗುವುದು ಉತ್ತಮ. ಹೆಚ್ಚು ಕೇಕೆ ಗಲಾಟೆಗಳಿಗೆ ಆಸ್ಪದ ಕೊಡಬೇಡಿ. ವನ್ಯಜೀವಿಗಳಿಗೆ ಕಿರಿಕಿರಿಯಾಗಿ ದಾಳಿಯಿಡಬಹುದು. ಅಲ್ಲದೇ ಪ್ಲಾಸ್ಟಿಕ್ ಬಳಕೆ ಮತ್ತು ಮದ್ಯಪಾನ ಇಲ್ಲಿ ನಿಷಿದ್ಧ. ಮಲವಳ್ಳಿ, ಕಳಚೆ ಬಸ್‌ಗಳು ಕಾನೂರು ಕ್ರಾಸಿನವರೆಗೆ ಸಿಗುವುದಾದರೂ ಅವುಗಳನ್ನೇ ನಂಬಿಕೂರುವಂತಿಲ್ಲ. ಸ್ವಂತ ವಾಹನದಲ್ಲೇ ತೆರಳಿ. ಸ್ಥಳೀಯರ ಸಂಪರ್ಕ ಮಾಡಿಕೊಂಡು ಕಾನೂರು ಜಲಪಾತಕ್ಕೆ ತೆರಳುವುದು ಒಳ್ಳೆಯದು. (ಸಂಪರ್ಕ: ರವಿ ಪೂಜಾರಿ- 8277531147)

ಕಾನೂರು ಜಲಪಾತ ನೋಡಿ ತಿರುಗಿ ಬರುವಾಗ ನಿಮ್ಮ ರಸ್ತೆ ರಾಷ್ಟ್ರೀಯ ಹೆದ್ದಾರಿ ಸೇರುವ ಜಾಗದ ಹೆಸರು ಚಿನ್ನಾಪುರ. ಇಲ್ಲಿ ಎಡಕ್ಕೆ ತಿರುಗಿಕೊಂಡರೆ ಬಂದ ಹಾದಿಯಲ್ಲಿಯೇ ಯಲ್ಲಾಪುರಕ್ಕೆ ಸಾಗುತ್ತೀರಿ. ಬದಲಿಗೆ ಬಲಕ್ಕೆ ಹೊರಳಿಕೊಳ್ಳಿ. ಅಲ್ಲಿ ಇನ್ನೊಂದು ಸ್ನಿಗ್ಧ ಸೌಂದರ್ಯದ ನೀರಝರಿ ನಿಮಗಾಗಿ ಕಾಯುತ್ತಿದೆ.

ಶಿರ್ಲೆಯ ಜಲಚೆಲುವೆ
ಇತ್ತೀಚೆಗಷ್ಟೇ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವ ಇನ್ನೊಬ್ಬಳು ಜಲಚೆಲುವೆ ಶಿರ್ಲೆ ಜಲಪಾತ. ಯಲ್ಲಾಪುರದಿಂದ ಕಾರವಾರದ ಹಾದಿಯಲ್ಲಿ ಇಡಗುಂದಿ ದಾಟಿದ ತಕ್ಷಣ ಅರಬೈಲ್‌ ಘಾಟಿ ಆರಂಭವಾಗುತ್ತದೆ. ಅಲ್ಲಿಂದ ಮುಂದೆ ಎರಡು ಕಿ.ಮೀ. ದೂರದಲ್ಲಿ‌ ಎಡಕ್ಕೆ ಶಿರ್ಲೆ ಜಲಪಾತಕ್ಕೆ ದಾರಿ ಕವಲೊಡೆಯುತ್ತದೆ. ಯಲ್ಲಾಪುರದಿಂದ ಇಲ್ಲಿಗೆ ಒಟ್ಟು 12 ಕಿ.ಮೀ. ಶಿರ್ಲೆಯ ಚಿಕ್ಕ ಬಸ್ ನಿಲ್ದಾಣದ ಬಳಿ ವಾಹನ ನಿಲ್ಲಿಸಿ‌ ಗ್ರಾಮ ಅರಣ್ಯ ಸಮಿತಿಗೆ ಶುಲ್ಕ ಪಾವತಿಸಿ ಇಳಿಜಾರಿನ ರಸ್ತೆಯಲ್ಲಿ ಸುಮಾರು ನಾಲ್ಕು ಕಿ.ಮೀ. ದೂರ ಸಾಗಬೇಕು. ವಾಹನಗಳನ್ನು ಕೆಳಗೆ ಒಯ್ಯುವ ಹಾಗಿಲ್ಲ. ಸ್ಥಳೀಯರ ಮನೆ ದಾಟಿ ಮುಂದೆ ಅಡಿಕೆ ತೋಟದಲ್ಲಿ ಇಳಿದಂತೆಲ್ಲ ಜಲಪಾತ ಹತ್ತಿರವಾಗುತ್ತದೆ.

ದೊಡ್ಡವೂ ಅಲ್ಲದ ಚಿಕ್ಕದೂ ಅಲ್ಲದ ಶಿರ್ಲೆ ಸಹಜವಾಗಿ ಎಲ್ಲರಿಗೂ ಇಷ್ಟವಾಗುತ್ತದೆ.‌ ಕಣಿವೆಯ ಆಳದಲ್ಲಿ ಹಸಿರಿನ ಮಡಿಲಲ್ಲಿ‌ ನೀರು ಬಿನ್ನಾಣವಾಡುತ್ತದೆ. ಇದೂ ಸಹ ವರ್ಷಾವಧಿ ನೀರಿರುವ ಜಲಪಾತವೇ. ಹಳ್ಳದಲ್ಲಿ ನೀರಾಡಬಹುದು. ಚಿಕ್ಕ ಚಿಕ್ಕ ಸಮತಟ್ಟಿ‌ನ ಕಲ್ಲುಗಳನ್ನು ಬೀಸಿ ಎಸೆದು ಕಪ್ಪೆಗಳಂತೆ ಹಾರಿಸಬಹುದು. ಕಪ್ಪೆಗಳ ಪೂರ್ವಾಶ್ರಮವಾದ ಮಂಡೂಕಗಳು ನೀರಗುಂಡಿಗಳಲ್ಲಿ ಅಲ್ಲಲ್ಲಿ ಈಜಾಡುತ್ತವೆ. ಹೆಚ್ಚು ಆಳವಿರದ ಕಡೆ ಹಗೂರ ನೀರಿಗಿಳಿದರೆ ತಂಪೋ ತಂಪು. ಜಲಪಾತದ ಅನತಿ ದೂರದಲ್ಲಿ ಚಿಕ್ಕದೊಂದು ಅಂಗಡಿಯಿದೆ. ವಸತಿಗೆ ಯಲ್ಲಾಪುರಕ್ಕೆ ಬರಬೇಕು.

ಹಾಗೆಯೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರವಾರದ ಕಡೆಗೆ ಹೊರಟರೆ ಹೆಗ್ಗರಣಿಯಲ್ಲಿ ಎಡಕ್ಕೆ ಹೊರಳಿಕೊಂಡು ಯಾಣಕ್ಕೂ ಹೋಗಿಬರಬಹುದು. ಬಿಸಿಲಲ್ಲಿ ಹೊಳೆಯುವ ಯಾಣದ ಕಲ್ಲು ನೋಡಿ ಇಳಿಯುವಾಗ ಅಲ್ಲಿ ವಿಭೂತಿ ಜಲಪಾತವಿದೆ. ಕಾಡ ನಡುವೆ ನೊರೆಯುಕ್ಕಿಸುತ್ತ ಹರಿವ ಈ ಜಲಪಾತದಲ್ಲಿ ಮನದಣಿಯೆ ನೀರಾಟ ಆಡಿ ಯಲ್ಲಾಪುರಕ್ಕೆ ಮರಳಬಹುದು.

ಚಿತ್ರಗಳು: ಅಶ್ವಿನಿ ಕುಮಾರ್‌ ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT