ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ.ಜಿ ಸುರಕ್ಷತೆ, ಶುಲ್ಕ.. ಇತ್ಯಾದಿ

Last Updated 28 ಜನವರಿ 2019, 20:15 IST
ಅಕ್ಷರ ಗಾತ್ರ

ಒಂಟಿಯಾಗಿರುವುದು ಬೋರು ಅನ್ನೋ ಜಮಾನಾ ಮುಗಿದು ಹೋಯಿತು. ಒಂಟಿ ಜೀವಕ್ಕೆ ಶಹರು ಜೀವನ ಹೇಳಿ ಮಾಡಿಸಿದ ಪ್ರದೇಶ. ವಾಸ್ತವ್ಯ ಇಂದಿನ ದಿನಮಾನಗಳಲ್ಲಿ ಸಮಸ್ಯೆಯೇ ಅಲ್ಲ. ನಗರದ ಮೂಲೆ ಮೂಲೆಗಳಲ್ಲಿ ಪಿ.ಜಿ ಎನ್ನುವ ವಾಸ್ತವ್ಯ ತಾಣಗಳು ದೊಡ್ಡ ಬಿಸಿನೆಸ್‌ನಂತೆ ಹಬ್ಬಿ ಕೊಂಡಿವೆ. ಉನ್ನತ ಶಿಕ್ಷಣವೇ ಇರಬಹುದು; ಶಿಕ್ಷಣದ ಬಳಿಕ ಉದ್ಯೋಗ ಸೇರುವಿಕೆಯೇ ಇರಬಹುದು– ನಗರ ಸೇರಬೇಕಾಗಿ ಬಂದಾಗ ನೆನಪಾಗುವುದೇ ಪೇಯಿಂಗ್‌ ಗೆಸ್ಟ್‌ (ಪಿ.ಜಿ).

ಹುಡುಕಾಟ ಹೇಗೆ: ಈಚಿನ ದಿನಗಳಲ್ಲಿ ಮಹಾ ನಗರಗಳಲ್ಲಿ ಪೇಯಿಂಗ್‌ ಗೆಸ್ಟ್‌ ವ್ಯವಸ್ಥೆ ಉದ್ಯಮವಾಗಿ ಬೆಳೆಯುತ್ತಿದೆ. ಪ್ರತಿಯೊಂದು ಪ್ರದೇಶದಲ್ಲೂ ಅತಿಥಿ ಉಪಚಾರದ ಇಂಥ ಹಲವು ಗೃಹಗಳು ಕಾಣಸಿಗುತ್ತವೆ. ಉದ್ಯೋಗದಲ್ಲಿರುವ ಪುರುಷ– ಮಹಿಳೆಯರನ್ನು ಗಮನದಲ್ಲಿ ಇಟ್ಟುಕೊಂಡು ಕೆಲವರು ಪೇಯಿಂಗ್‌ ಗೆಸ್ಟ್‌ ತೆರೆದರೆ ಇನ್ನೂ ಹಲವರು ಶಾಲೆ, ಕಾಲೇಜುಗಳ ಸಮೀಪದಲ್ಲಿ ಪಿ.ಜಿಗಳನ್ನು ಆರಂಭಿಸುತ್ತಾರೆ.

ಪೇಯಿಂಗ್‌ ಗೆಸ್ಟ್‌ ಎಂದು ಗೂಗಲ್‌ ಮಾಡಿದರೆ ಆಯಾ ಪ್ರದೇಶದ ಇಂಥ ಸಂಸ್ಥೆಗಳ ವಿವರ ಸಿಗುತ್ತದೆ ಎನ್ನುತ್ತಾರೆ ಕೋರಮಂಗಲ ಅಮೃತಾ.

ಅವರದೇ ಒಂದು ಅನುಭವದಿಂದು ಹೆಕ್ಕಿದ ಸಣ್ಣ ಸಂಗತಿಗಳಿವು.

ಆಯ್ಕೆಯದೇ ಸಮಸ್ಯೆ: ಎಷ್ಟು ದರ ವಿಧಿಸುತ್ತಾರೆ, ಪ್ರತಿ ಕೊಠಡಿಗೆ ಎಷ್ಟು ಜನರನ್ನು ಸೇರಿಸುತ್ತಾರೆ ಎಂಬಲ್ಲಿಂದ ಆರಂಭಿಸಿ ಎಷ್ಟು ದೂರದಲ್ಲಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಆಯ್ಕೆ ನಡೆಸಬೇಕಾಗುತ್ತದೆ. ಬಹಳಷ್ಟು ಪಿ.ಜಿಯಲ್ಲಿ ಮೂಲ ಸೌಕರ್ಯದ್ದೇ ಕೊರತೆ. ಹತ್ತಿಪ್ಪತ್ತು ಜನರಿಗೆ ಒಂದು ವಾಷ್‌ ರೂಂ ಇರುತ್ತದೆ. ಹಾಗಿದ್ದರೆ ಬೆಳಿಗ್ಗೆ ಸಕಾಲಕ್ಕೆ ಹೋಗುವುದು ಹೇಗೆ ಎಂಬ ಪ್ರಶ್ನೆ ಬಸವೇಶ್ವರನಗರದ ಸುಪ್ರೀತಾ ಅವರದು.

ನಗರದ ಪಿ.ಜಿ ಒಂದರಲ್ಲಿ ಸೇರಿಕೊಂಡೆ. ಮೊದಲೇ ಜಿರಲೆ ಎಂದರೆ ಭಯ ನನಗೆ. ಅನಿವಾರ್ಯವಾಗಿ ಕೆಲ ದಿನ ಅಲ್ಲಿದ್ದೆ. ಹದಿನೈದಕ್ಕೂ ಹೆಚ್ಚು ಜನರಿಗೆ ಒಂದು ಬಾತ್‌ ರೂಂ ನೋಡಿ ಅಲ್ಲಿಂದ ಹೊರ ತೆರಳುವುದು ಅನಿವಾರ್ಯವಾಯಿತು. ರೇಷನ್‌ ನೆಪದಲ್ಲಿ ಮೊದಲೇ ಪಡೆದಿದ್ದ ₹ 4,500 ವಾಪಸ್‌ ಸಿಗಲಿಲ್ಲ. ಭದ್ರತಾ ಠೇವಣಿ ಮೊತ್ತದ ರಶೀದಿ ಭದ್ರವಾಗಿ ಇರಬೇಕು ಎಂದು ಹೇಳಿದ್ದರು. ಅದು ಕೈಯಲ್ಲಿ ಇದ್ದ ಕಾರಣ ₹3 ಸಾವಿರ ಸಿಕ್ಕಿತು ಎಂದು ಹೇಳುತ್ತಾರೆ ವಿಜಯನಗರದ ಆಶಿತಾ.ಈಚೆಗಷ್ಟೇ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದೆ. ಒಂದೇ ಪಿ.ಜಿ ನೋಡಿದ್ದರಿಂದ ಹೀಗಾಯಿತು ಎನ್ನಲು ಅವರು ಮರೆಯಲಿಲ್ಲ.

ಸೌಕರ್ಯಗಳು: ಬೆಳಿಗ್ಗೆ ಟಿಫಿನ್‌, ಮಧ್ಯಾಹ್ನ ಊಟ, ಸಂಜೆ ಚಹಾ ಅಥವಾ ಕಾಫಿ, ರಾತ್ರಿ ಊಟದ ವ್ಯವಸ್ಥೆ ಇರುತ್ತದೆ. ಬಹುತೇಕ ಕಡೆಗಳಲ್ಲಿ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಸಹಜ. ಹೊಸದಾಗಿ ಪಿ.ಜಿ ಆರಂಭಿಸುವವರು ವೈಫೈ ವ್ಯವಸ್ಥೆಯನ್ನೂ ಕಲ್ಪಿಸಿ ಕೊಡುತ್ತಾರೆ.

**

ದರ ಎಷ್ಟು?

ಒಬ್ಬರೇ ಇರುವುದಾದರೆ ಏಳೆಂಟು ಸಾವಿರ ರೂಪಾಯಿ ವಿಧಿಸುತ್ತೇವೆ. ಇಬ್ಬರು ಶೇರ್‌ ಮಾಡುವುದಿದ್ದರೆ ದರ ಸ್ವಲ್ಪ ಕಡಿಮೆ ಆಗುತ್ತದೆ. ಮೂವರು, ನಾಲ್ವರು ಇದ್ದಾಗ ಈ ದರ ಇಳಿಸುತ್ತೇವೆ ಎಂದು ಪಿಜಿ ಮಾಲಕಿ ವಿನುತಾ ವಿವರಣೆ.

ಸುಲಭದ ಕೆಲಸ ಇದಲ್ಲ. ಒಳಗೆ ಸೇರಿಕೊಂಡವರಲ್ಲಿ ಕದಿಯುವವರು, ಕೆಟ್ಟ ಚಾಳಿಯವರು ಇದ್ದರೆ ಸಮಸ್ಯೆ ಎದುರಾಗುತ್ತದೆ. ಕಳವು ಮಾಲಿನ ಸಹಿತ ಹಿಡಿದರೆ ಮಾತ್ರ ಅಂಥವರನ್ನು ಹೊರ ಕಳಿಸಲು ಸಾಧ್ಯ ಎಂದು ತಾವು ಎದುರಿಸಿದ ಸಮಸ್ಯೆಯೊಂದನ್ನು ಅವರು ಬಿಚ್ಚಿಟ್ಟರು.

ಹೋಟೆಲ್‌ ನಡೆಸುವವರು ಎದುರಿಸುವ ಕಷ್ಟವನ್ನೇ ನಾವು ಎದುರಿಸುತ್ತಿದ್ದೇವೆ. ಕೆಲಸಕ್ಕೆ ಜನ ಸಿಗುವುದಿಲ್ಲ ಎನ್ನುತ್ತಾರೆ ಇನ್ನೊಂದು ಪಿಜಿ ಮಾಲಕಿ ಮಮತಾ.

ಸ್ವಂತ ಮನೆ ಪಕ್ಕದಲ್ಲೇ ಪಿಜಿ ಇದ್ದರೆ ಒಳಿತು. ಮಹಿಳೆಯರಿಗಾಗಿ ಆರಂಭಿಸುವುದಾದರೆ ಸೆಕ್ಯುರಿಟಿ ಬಗ್ಗೆ ಮೊದಲು ವಿಚಾರಿಸುತ್ತಾರೆ. ಮಹಿಳಾ ಪಿಜಿ ಒಳಗೆ ಪುರುಷರನ್ನು ಬಿಡುವುದಿಲ್ಲ ಎಂಬ ನಿಯಮಾವಳಿ ಹಾಕುತ್ತೇವೆ. ಆರಂಭ ಮಾಡಿದ ನಂತರ ಸಮಸ್ಯೆ ಆಗುವುದು ಬೇಡ ಎಂಬ ದೃಷ್ಟಿಯಿಂದ ಬಿಬಿಎಂಪಿಯಿಂದ ಲೈಸನ್ಸ್‌ ಪಡೆದಿದ್ದೇವೆ ಎನ್ನುವ ಮಾಹಿತಿ ಸ್ನೇಹಲತಾ ಅವರದು.

ಸಂಡೇ ಸ್ಪೆಷಲ್‌ ಎಂದು ಮಾಂಸಾಹಾರ ಮಾಡುತ್ತೇವೆ. ಆದರೆ, ಭಾನುವಾರ ಹೊರ ಹೋಗಿ ತಿನ್ನುವವರೇ ಹೆಚ್ಚು. ಉಳಿದ ಆಹಾರವನ್ನು ತ್ಯಾಜ್ಯಕ್ಕೆ ಎಸೆಯಬೇಕಾಗುತ್ತದೆ ಎನ್ನುವ ನೋವಿನ ನುಡಿಯೂ ಅವರಿಂದ ಕೇಳಿಸಿತು.

ಒಂದಿಷ್ಟು ಟಿಪ್ಸ್

* ಪಿ.ಜಿ ಸೇರುವುದಿದ್ದರೆ ಕೆಲಸ ಅಥವಾ ವ್ಯಾಸಂಗಕ್ಕೆ ಸೇರುವ ಒಂದೆರಡು ದಿನ ಮೊದಲೇ ನಗರಕ್ಕೆ ಭೇಟಿ ಕೊಡಿ. ಕೆಲಸಕ್ಕೆ ಸೇರುವ ಸಂಸ್ಥೆ ಅಥವಾ ಶಿಕ್ಷಣ ಸಂಸ್ಥೆಯವರ ಸಲಹೆ ಪಡೆದು ಸುತ್ತಲಿನ ಹಲವು ಪಿ.ಜಿಗಳಿಗೆ ಭೇಟಿ ನೀಡಿ. ಕೊನೆಗೆ ಒಂದನ್ನು ಆಯ್ಕೆ ಮಾಡಿ.

* ಭದ್ರತಾ ಠೇವಣಿ ಎಷ್ಟು? ರೇಷನ್‌ಗೆ ಮುಂಗಡ ಹಣ ಕೊಡಬೇಕೇ? ಒಂದು ಕೊಠಡಿಯಲ್ಲಿ ಎಷ್ಟು ಜನರಿಗೆ ಅವಕಾಶ? ವಾಷಿಂಗ್‌ ಮೆಷಿನ್‌ ಸೌಕರ್ಯ ಇದೆಯೇ? ಇದ್ದರೆ ಅದಕ್ಕಾಗಿ ವಿಧಿಸುವ ಪ್ರತ್ಯೇಕ ದರ ಎಷ್ಟು?... ಹೀಗೆ ಹತ್ತು ಹಲವು ಸಂದೇಹ ಸಹಜ. ಅವುಗಳನ್ನು ಕೇಳಿ ತಿಳಿದುಕೊಳ್ಳಿ.

* ಮೂಲ ಸೌಕರ್ಯದ ಕಡೆ ಮೊದಲು ಗಮನಿಸಿ. ಮಹಿಳೆಯರನ್ನು ಸೇರಿಸುವುದಿದ್ದರೆ ಭದ್ರತಾ ವ್ಯವಸ್ಥೆ ಹೇಗಿದೆ ಎಂಬುದೂ ಗಮನದಲ್ಲಿರಲಿ.

* ಹೆಚ್ಚು ನಗದನ್ನು ಇಟ್ಟುಕೊಳ್ಳದಿರಿ. ಕೈಯಲ್ಲಿ ಎಟಿಎಂ ಕಾರ್ಡ್‌ ಇರಲಿ.

* ಹೆಚ್ಚಿನ ಕಲಿಯುವಿಕೆಗಾಗಿ ಬಂದಿದ್ದರೆ ನಿಮ್ಮದೇ ಕಾಲೇಜಿನ ಅಥವಾ ನಿಮ್ಮ ತರಗತಿಯಲ್ಲೇ ಓದುತ್ತಿರುವವರು ಜತೆಗಿದ್ದರೆ ಸೂಕ್ತ. ಉದ್ಯೋಗದಲ್ಲಿ ಇರುವವರು ಮತ್ತು ವ್ಯಾಸಂಗಕ್ಕಾಗಿ ಬಂದವರು ಜತೆಗಿದ್ದರೆ ಸಂಘರ್ಷಕ್ಕೆ ಕಾರಣವಾದೀತು. ಕ್ರಮಿಸಬೇಕಾದ ದೂರವನ್ನು ಯೋಚಿಸಿ. ಬಸ್‌, ಮೆಟ್ರೊ ಸಂಪರ್ಕದಂಥ ಸಾರಿಗೆ ಸೌಕರ್ಯದ ಕುರಿತು ಗಮನಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT