ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಗಿಡಮರವಷ್ಟೇ ಅಲ್ಲ; ಸ್ವಚ್ಛ ಗಾಳಿಯೂ ಇರಲಿ

Last Updated 18 ಜುಲೈ 2019, 7:41 IST
ಅಕ್ಷರ ಗಾತ್ರ

ಪರಿಸರ ದಿನ ಸಂದರ್ಭದಲ್ಲಿ ಪರಿಸರ ಕಾಳಜಿ ಹಾಗೂ ರಕ್ಷಣೆ ಕಾರ್ಯಗಳು ಹೆಚ್ಚಾಗಿ ಆರಂಭವಾಗುತ್ತವೆ. ಇಂತಹ ಕಾರ್ಯಗಳನ್ನು ನೆನಪಿಸುವ ಉದ್ದೇಶವೂ ಈ ದಿನಾಚರಣೆಗಳದ್ದಾಗಿದೆ. ಆದರೆ, ಪರಿಸರ ಎಂದ ಕೂಡಲೇ ಗಿಡಮರಗಳಿಗೆ ಮಾತ್ರ ಸೀಮಿತವಾಗಿರುವುದು ಪರಿಸರ ಕಾಳಜಿಗೇ ಮಾರಕ. ಇಂತಹ ಕ್ರಿಯೆ
ಗಳನ್ನೇ ಗಮನಿಸಿ ವಿಶ್ವಸಂಸ್ಥೆ ಪ್ರತಿಯೊಂದು ವರ್ಷವೂ ಒಂದೊಂದು ಥೀಮ್‌ ನೀಡಿ, ಅವುಗಳ ರಕ್ಷ
ಣೆಗೂ ಗಮನ ನೀಡಿ ಎಂದು ಮನವಿ ಮಾಡುತ್ತದೆ. ಈ ಬಾರಿಯ ಥೀಮ್‌ ‘ವಾಯು ಮಾಲಿನ್ಯ’.

ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವೇ ಗಾಳಿಯದ್ದು. ಅದನ್ನು ಸ್ವಚ್ಛವಾಗಿಟ್ಟು ಕೊಳ್ಳುವುದೇ ಆದ್ಯ ಕರ್ತವ್ಯವಾಗಬೇಕು. ಗಾಳಿ ಸ್ವಚ್ಛವಾಗಿಲ್ಲದಿದ್ದರೆ ಗಿಡ–ಮರಗಳನ್ನು ಹೊಂದಿರುವ ಪರಿಸರಕ್ಕಷ್ಟೇ ಅಲ್ಲ, ಮಾನವನಿಗೂ ಮಾರಕ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದೇ ಈ ಮಾಲಿನ್ಯ. ವಾಯು ಮಾಲಿನ್ಯದಿಂದ ಈಗಾಗಲೇ ನಾವು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಚಿಕ್ಕ ಮಕ್ಕಳಿಗೆ ಆಸ್ತಮಾ
ದಂತಹ ಕಾಯಿಲೆಗಳು ಅಂಟಿಕೊಳ್ಳುತ್ತಿವೆ. ಹುಬ್ಬಳ್ಳಿ–
ಧಾರವಾಡ ಸೇರಿದಂತೆ ಪ್ರಮುಖ ನಗರಗಳಲ್ಲಿ ಮೂಗಿಗೆ ಮಾಸ್ಕ್ ಧರಿಸಿಕೊಂಡು ಓಡಾಡುವವ
ರನ್ನು ಸಾಕಷ್ಟು ಕಂಡಿದ್ದೇವೆ. ಸ್ವಚ್ಛ ಗಾಳಿಯಲ್ಲಿ ನಾವು ಉಸಿರಾಡುತ್ತಿಲ್ಲ ಎಂಬುದೇ ಇದೆಲ್ಲದರ ಪ್ರತೀಕ.

ವಾಯು ಮಾಲಿನ್ಯ ಎಂಬುದು ರಸ್ತೆಯಲ್ಲಷ್ಟೇ ಅಥವಾ ಹೊರಾಂಗಣದಲ್ಲಿ ಮಾತ್ರವಲ್ಲ; ಒಳಾಂಗಣದಲ್ಲೂ ಇದ್ದೇ ಇರುತ್ತದೆ. ನಾವು ಉಸಿರಾಡುವ ಸಂದರ್ಭದಲ್ಲಿ ಗಾಳಿ ಹೇಗಿದೆ ಎಂಬುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಒಂದು ವಾಹನ ಹೋದಾಗ ಅದರಿಂದ ಬರುವ ಹೊಗೆ ಹೆಚ್ಚಾದರೆ, ದಾರಿಯಲ್ಲಿ ಹೋಗುವಾಗ ತ್ಯಾಜ್ಯದ ದುರ್ವಾಸನೆ ಬಂದರೆ ಕರವಸ್ತ್ರದಿಂದ ಮೂಗು ಮುಚ್ಚಿಕೊಳ್ಳುತ್ತೇವೆ. ಅಷ್ಟೇ, ಅಲ್ಲಿಗೆ ನಮ್ಮ ಉಸಿರಾಟದ ಬಗ್ಗೆ ಕಾಳಜಿ ಮುಗಿಯುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಾಯು ಮಾಲಿನ್ಯ ವಿಶ್ವದಲ್ಲಿ ಪ್ರತಿ ವರ್ಷ ಸುಮಾರು 7ದಶಲಕ್ಷ ಜನರ ಜೀವವನ್ನು ಬಲಿ ಪಡೆಯುತ್ತಿದೆ. ಇದು ಪರಿಸರಕ್ಕೆ ಅತ್ಯಂತ ದೊಡ್ಡ ಮಾರಕ ಅಂಶ. ಪಾರ್ಶ್ವವಾಯು, ಶ್ವಾಸಕೋಶದ ದೀರ್ಘ ಸಮಸ್ಯೆಗಳಿಂದ ಮೃತಪಡುವ ಮೂವರಲ್ಲಿ ಒಬ್ಬರು ವಾಯುಮಾಲಿನ್ಯಕ್ಕೆ ಸಂಬಂಧಿಸಿದರು.ಅಡುಗೆ ಮನೆಯಲ್ಲಿನ ಸ್ಟೌಗಳ ಹೊಗೆಯಿಂದ ಪ್ರತಿ ವರ್ಷ 3.8 ದಶಲಕ್ಷ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂಬುದು ನಮ್ಮ ಜೀವನಶೈಲಿಯ ಅವ್ಯವಸ್ಥೆಗೆ ಹಿಡಿದ ಕನ್ನಡಿ. ವಾಯು ಮಾಲಿನ್ಯ ನಮ್ಮ ವಾತಾವರಣವನ್ನು ಬದಲಿಸುತ್ತಿದ್ದು, ಭೂಮಿಯ ಮೇಲಿನ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅದರಲ್ಲೂ ಮಕ್ಕಳ ಮೇಲೆ ಅತಿ ಹೆಚ್ಚು ದುಷ್ಪರಿಣಾಮ ಬೀರುತ್ತಿದೆ.

ವಾಯು ಮಾಲಿನ್ಯಕ್ಕೆ ಹಲವು ಮೂಲಗಳಿವೆ. ಅಡುಗೆ ಸ್ಟೌ, ಸೀಮೆಎಣ್ಣೆಯ ದೀಪ, ವಾಹನಗಳ ಹೊಗೆ, ಕೈಗಾರಿಕೆಗಳ ತ್ಯಾಜ್ಯ, ಮರಳು, ಮಣ್ಣಿನ ದೂಳು, ಕಾಡ್ಗಿಚ್ಚುಗಳು ಮಾಲಿನ್ಯಕ್ಕೆ ಕಾರಣ. ವಾಯು ಮಾಲಿನ್ಯದ ಸಮಸ್ಯೆ ಅತಿ ಹೆಚ್ಚಾಗಿರುವುದು ನಗರ ಪ್ರದೇಶಗಳಲ್ಲಿ. ವಿಶ್ವದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಶೇ 98ರಷ್ಟು ನಗರಗಳಲ್ಲಿನ ವಾಯು ಗುಣಮಟ್ಟ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳಿಗಿಂತ ಸಾಕಷ್ಟು ಕೆಳಗಿರುವುದು ಆತಂಕಕಾರಿ. ಅಷ್ಟೇ ಅಲ್ಲ, ವಿಶ್ವದಲ್ಲಿರುವ ಜನಸಂಖ್ಯೆಯಲ್ಲಿ ಶೇ 91ರಷ್ಟು ಮಂದಿ ಗುಣಮಟ್ಟದ ಗಾಳಿಯಿಂದ ಉಸಿರಾಡುತ್ತಿಲ್ಲ. ಅವರು ತೆಗೆದುಕೊಳ್ಳುವ ಗಾಳಿ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನು ತಲುಪುತ್ತಿಲ್ಲ. ಇಂತಹ ದುಃಸ್ಥಿತಿಯ ಸಂದರ್ಭದಲ್ಲಿ ನಗರಗಳಲ್ಲಿರುವ ಪ್ರತಿಯೊಬ್ಬರೂ ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂಬುದು ವಿಶ್ವ ಸಂಸ್ಥೆಯ ಉದ್ದೇಶ. ವಾಯುಮಾಲಿನ್ಯ ತಡೆಗೆ ಜಾಗೃತಿ ಕಾರ್ಯಕ್ರಮಗಳು, ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಜೊತೆಗೆ, ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕೆಂದೂ ಹೇಳಲಾಗಿದೆ. ವಾಯು ಮಾಲಿನ್ಯ ಮತ್ತು ವಾತಾವರಣ ಬದಲಾವಣೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಾತಾವರಣದ ಬದಲಾವಣೆಯಲ್ಲಿ ವಾಯು ಮಾಲಿನ್ಯ ಅತ್ಯಂತ ಹೆಚ್ಚಿನ ಕೊಡುಗೆ ನೀಡುತ್ತಿದೆ.

ವಿಶ್ವ ಸಂಸ್ಥೆ ಈ ವಾಯು ಮಾಲಿನ್ಯವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಸ್ವಚ್ಛ ಇಂಧನ ಹಾಗೂ ವಾಹನಗಳ ಹೊಗೆ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದು, ಎಲ್ಲ ತಯಾರಿಕಾ ಸಂಸ್ಥೆಗಳಿಗೆ ಮಾರ್ಗಸೂಚಿಗಳನ್ನೂ ನೀಡಿದೆ. ಇದಕ್ಕಾಗಿ ಅಗತ್ಯವಿರುವ ತಂತ್ರಜ್ಞಾನಗಳನ್ನು ಕೂಡಲೇ ಅಳವಡಿಸಿಕೊಳ್ಳಬೇಕೆಂದು ತಾಕೀತೂ ಮಾಡಿದೆ. ಅಲ್ಲದೆ, ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯ ತಡೆಗೆ ಸಾಧನಗಳನ್ನು ಅಳವಡಿಸಿಕೊಳ್ಳುವ ಬಗ್ಗೆಯೂ ತಂತ್ರಜ್ಞರಲ್ಲಿ ಮನವಿ ಮಾಡಿಕೊಂಡಿದೆ. ನಗರ ಹಾಗೂ ದೇಶಗಳಲ್ಲಿ ಜನರನ್ನು ಒಂದುಗೂಡಿಸಿ, ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿ
ನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 2030ರೊಳಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ
ಯಂತೆ ವಾಯುಗುಣಮಟ್ಟವನ್ನು ಕಾಯ್ದುಕೊಳ್ಳುವ ಸಂಕಲ್ಪ ಹೊಂದಲಾಗಿದೆ. ಇದಕ್ಕೆ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸುವುದು ಅಗತ್ಯ.

ಹುಬ್ಬಳ್ಳಿಗೆ 5, ಧಾರವಾಡಕ್ಕೆ 9ನೇ ಸ್ಥಾನ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮೀಕ್ಷೆ (2017–18) ಪ್ರಕಾರ, ವಾಯು ಮಾಲಿನ್ಯ ಅತಿ ಹೆಚ್ಚಿರುವ ನಗರಗಳಲ್ಲಿ ಹುಬ್ಬಳ್ಳಿ ಐದನೇ ಸ್ಥಾನದಲ್ಲಿದೆ. ಧಾರವಾಡ ನಗರ ಒಂಬತ್ತನೇ ಸ್ಥಾನದಲ್ಲಿದೆ. ಅವಳಿನಗರಗಳಲ್ಲಿ ಹುಬ್ಬಳ್ಳಿಯಲ್ಲಿ ಮಾತ್ರ ಹೆಚ್ಚು ಮಾಲಿನ್ಯ, ಧಾರವಾಡ ಮಲೆನಾಡು ಎನ್ನುವವರಿಗೂ ಈ ಸಮೀಕ್ಷೆ ಬಿಸಿ ಮುಟ್ಟಿಸಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ದಾಖಲಾಗಿರುವ ವಾಯು ಮಾಲಿನ್ಯದ ಪ್ರಮಾಣ 89.2 (ಪಿಎಚ್‌10). ಧಾರವಾಡದಲ್ಲಿ 67.2. ವಾಯುಮಾಲಿನ್ಯದ ಸಮಸ್ಯೆಗೆ ಸಾಕಷ್ಟು ಕ್ರಮಗಳನ್ನು ಅವಳಿನಗರದಲ್ಲಿ ಕೈಗೊಳ್ಳಬೇಕಾಗಿರುವ ಅಗತ್ಯ ಹೆಚ್ಚಿದೆ ಎಂಬುದು ಈ ಸಮೀಕ್ಷೆ ಎಚ್ಚರಿಸುತ್ತದೆ. ಕೋಟ್ಯಂತರ ಗಿಡಗಳನ್ನು ನೆಟ್ಟರೆ ಪರಿಸರ ದಿನವಾಯಿತು ಅಥವಾ ಗಿಡ ಬೆಳೆಸಿದ ಕೂಡಲೇ ಕಾರ್ಬನ್‌ ಡೈಆಕ್ಸೈಡ್‌ ಎಲ್ಲವನ್ನೂ ಅವು ಹೀರಿಕೊಳ್ಳುತ್ತದೆ. ವಾಯು ಸ್ವಚ್ಛವಾಗುತ್ತದೆ ಎಂದು ತಮ್ಮನ್ನು ತಾವೇ ಸಮಾಧಾನ ಮಾಡಿಕೊಂಡರೆ ಯಾವುದೇ ಉಪಯೋಗವಿಲ್ಲ. ವಾಯು ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ಪ್ರತಿನಿತ್ಯವೂ
ತೆಗೆದುಕೊಂಡರಷ್ಟೇ, ಅವುಗಳನ್ನು ಅಳವಡಿಸಿಕೊಂಡರಷ್ಟೇ ಸ್ವಚ್ಛ ಉಸಿರಾಟ ಸಾಧ್ಯವಾಗುತ್ತದೆ.

ಅವಳಿನಗರದಲ್ಲಿ ವಾಯು ಮಾಲಿನ್ಯಕ್ಕೆ ಅತಿ ಹೆಚ್ಚಿನ ಕೊಡುಗೆ ನೀಡುತ್ತಿರುವುದು ವಾಹನಗಳು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಧಾರವಾಡ ಘಟಕದ ವರದಿಯ ಪ್ರಕಾರ, ಈ ವರ್ಷದ
ವಾಯು ಮಾಲಿನ್ಯಕ್ಕೆ ಕಾರಣವಾಗಿರುವ ಆರು ಅಂಶಗಳಲ್ಲಿ ಪ್ರಥಮ ಸ್ಥಾನದಲ್ಲಿರುವುದು ವಾಹನಗಳು. ನಂತರದ ಸ್ಥಾನ ರಸ್ತೆ ದೂಳು.ವಾಯುಮಾಲಿನ್ಯದಲ್ಲಿ ಶೇ 42ರಷ್ಟು ಪಾಲು ವಾಹನಗಳದ್ದಾಗಿದ್ದರೆ, ರಸ್ತೆ ದೂಳಿನ ಪ್ರಮಾಣ ಶೇ 20ರಷ್ಟಾಗಿದೆ. ಕೈಗಾರಿಕೆ ಹಾಗೂ ಕಟ್ಟಡ ನಿರ್ಮಾಣದಿಂದ ಉಂಟಾಗುತ್ತಿರುವ ವಾಯುಮಾಲಿನ್ಯದ ಪ್ರಮಾಣ ತಲಾ ಶೇ 14. ಡೀಸೆಲ್‌ ಜನರೇಟರ್‌ಗಳ ಮಾಲಿನ್ಯ ಶೇ 7ರಷ್ಟಿದ್ದರೆ, ಗೃಹ ಮಾಲಿನ್ಯದ ಕೊಡುಗೆ ಶೇ 3.

ಆ್ಯಸಿಡ್‌ ಮಳೆಗೆ ಕಾರಣವಾಗುವ ಸಲ್ಫರ್‌ ಡೈಆಕ್ಸೈಡ್‌ ಅನ್ನು ಅತಿ ಹೆಚ್ಚು ಹೊರಸೂಸುತ್ತಿರುವುದು ಕೈಗಾರಿಕೆಗಳು (ಶೇ 56.2). ನಂತರದ ಸ್ಥಾನ ಡೀಸೆಲ್‌ ಜನರೇಟರ್‌ (ಶೇ 23)ಗಳದ್ದಾಗಿದೆ. ಇನ್ನು ಶ್ವಾಸಕೋಶದ ಮೇಲೆ ನೇರವಾಗಿ ದುಷ್ಪರಿಣಾಮ ಬೀರುವ ನೈಟ್ರೊಜೆನ್‌ ಆಕ್ಸೈಡ್‌ (ಶೇ 67) ವಾಹನಗಳ ಮಾಲಿನ್ಯದಿಂದಲೇ ಅವಳಿನಗರದಲ್ಲಿ ಅತಿ ಹೆಚ್ಚಿದೆ. ಇದರ ನಂತರ ಡೀಸೆಲ್‌ ಜನರೇಟರ್‌ಗಳು (ಶೇ 23.3) ಕೊಡುಗೆ ನೀಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT