ಫೈಬರ್‌ ಗಣಪ ಬರುತ್ತಿದ್ದಾನೆ!

7

ಫೈಬರ್‌ ಗಣಪ ಬರುತ್ತಿದ್ದಾನೆ!

Published:
Updated:
Deccan Herald

ಈ ಬಾರಿ ಗಣೇಶನ ಹಬ್ಬಕ್ಕೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಮೂರ್ತಿಗಳನ್ನು ಬಳಸಲೇಕೂಡದು ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟೆಚ್ಚರಿಕೆ ನೀಡಿದೆ. ಇದರಿಂದ ಮೂರ್ತಿ ತಯಾರಕರು ಮತ್ತು ಮಾರಾಟಗಾರರು ವಿಚಲಿತರಾಗಿದ್ದಾರೆ. ಅಲ್ಲದೆ, ನಾಲ್ಕು ಅಡಿಗೂ ಹೆಚ್ಚು ಎತ್ತರದ ಮೂರ್ತಿಗಳ ಬಳಕೆಯನ್ನೂ ಅದು ನಿಷೇಧಿಸಿದೆ.

‘ಪಿಒಪಿ ಮೂರ್ತಿಗಳನ್ನು ನಿಷೇಧಿಸುವುದು ಸಾಧ್ಯವೇ ಇಲ್ಲ. ಯಾಕೆಂದರೆ ಗುಣಮಟ್ಟ, ಅಂದಚಂದ ಮತ್ತು ಬಾಳ್ವಿಕೆ ದೃಷ್ಟಿಯಿಂದ ಪಿಒಪಿಗೂ, ಮಣ್ಣಿಗೂ ತುಲನೆ ಮಾಡಲು ಸಾಧ್ಯವೇ ಇಲ್ಲ. ಮಣ್ಣಿನ ಮೂರ್ತಿಗಳನ್ನು ಹೆಚ್ಚೆಂದರೆ ಎರಡು ಅಡಿಯಷ್ಟು ದೊಡ್ಡದಾಗಿ ತಯಾರಿಸಬಹುದು. ಅದಕ್ಕಿಂತ ಹೆಚ್ಚು ಎತ್ತರವಾದರೆ ತುಂಡಾಗಿ ಬೀಳುವುದು ಖಚಿತ’ ಎಂಬುದು ಮೂರ್ತಿ ತಯಾರಕರು ಮತ್ತು ಮಾರಾಟಗಾರರ ವಾದ. ಗಾಂಧಿ ಬಜಾರ್‌, ಮಲ್ಲೇಶ್ವರ, ಮಾವಳ್ಳಿ, ಆರ್.ವಿ. ರಸ್ತೆಯಲ್ಲಿ ದಶಕಗಳಿಂದ ಗಣೇಶನ ಮೂರ್ತಿಗಳ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿಕೊಂಡಿರುವ ವ್ಯಾಪಾರಿಗಳ ಖಚಿತ ನುಡಿಯಿದು. 

‘ನಮ್ಮ ತಾತನ ಕಾಲದಿಂದಲೂ ಗಣೇಶನ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇವೆ. ಪಿಒ‍ಪಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದ ಬಳಿಕ ಮುಂಬೈನಿಂದ ತರಿಸಿಕೊಳ್ಳಲಾರಂಭಿಸಿದೆವು. ಪ್ರತಿ ವರ್ಷವೂ ನೂರಾರು ಮೂರ್ತಿಗಳು ದಾಸ್ತಾನಿನಲ್ಲಿ ಉಳಿಯುತ್ತವೆ. ಈಗಲೂ ನಮ್ಮಲ್ಲಿ ಸಾಕಷ್ಟು ಸಂಗ್ರಹವಿದೆ. ಕಳೆದ ವರ್ಷವೇ ಪಿಒಪಿ ಮೂರ್ತಿಗಳಿಗೆ ನಿಷೇಧವಿದ್ದರೂ ವಿನಾಯಿತಿ ಕೊಟ್ಟಿದ್ದರು. ಈ ಬಾರಿ ಸಮಸ್ಯೆಯನ್ನು ಎದುರುಹಾಕಿಕೊಳ್ಳಲು ನಾವು ರೆಡಿ ಇಲ್ಲ. ಅದಕ್ಕಾಗಿ ಮಣ್ಣು ಮತ್ತು ಕಾಗದದ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇವೆ’ ಎನ್ನುತ್ತಾರೆ, ಮಲ್ಲೇಶ್ವರ ಗಣೇಶ ದೇವಸ್ಥಾನ ಬೀದಿಯ ವ್ಯಾಪಾರಿ ಕೆ.ಶಂಕರ್‌.


ಕೆ.ಶಂಕರ್‌

ಈ ರಸ್ತೆಯಲ್ಲಿರುವ ವಿಜಯ ಜನರಲ್‌ ಸ್ಟೋರ್ಸ್‌ನ ದಂಡಪಾಣಿ, ಕೆ. ಶಂಕರ್‌ ಮತ್ತು ಬಾಬು ಸಹೋದರರು ಮಲ್ಲೇಶ್ವರದ ಪ್ರಮುಖ ಮೂರ್ತಿ ಮಾರಾಟಗಾರರು. ಬಾಬು ಅವರ ಪ್ರಕಾರ, ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಒಂದು ಅಡಿ, ಎರಡು ಅಡಿ ಎತ್ತರದ ಮೂರ್ತಿಗಳನ್ನು ಯಾರೂ ಕೂರಿಸುವುದಿಲ್ಲ. ಅಲ್ಲಿ 10ರಿಂದ 20 ಅಡಿ ಎತ್ತರದ ಮೂರ್ತಿಗಳಿಗೇ ಬೇಡಿಕೆ ಇರುವುದು. ಮಣ್ಣಿನ ಮೂರ್ತಿಗಳು ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಕೂರಿಸಲು ಸೂಕ್ತ. 

ಫೈಬರ್‌ ಗಣಪತಿ!

ಪಿಒಪಿ ಗಣಪನ ಬಳಕೆಗೆ ನಿಷೇಧವಿದೆ, ಮಣ್ಣಿನ ಮೂರ್ತಿ ಬಾಳ್ವಿಕೆ ಬರುವುದಿಲ್ಲ. ಹಾಗಿದ್ದರೆ ಇವೆರಡಕ್ಕೂ ಪರ್ಯಾಯವೇನು? ಆರ್.ವಿ.ರಸ್ತೆಯ ಮೂರ್ತಿ ದಾಸ್ತಾನುಗಾರ, ವ್ಯಾಪಾರಿ ಎಂ.ಶ್ರೀನಿವಾಸ್‌ ಈ ಸಮಸ್ಯೆಗೆ ಕಂಡುಕೊಂಡಿರುವ ಪರಿಹಾರ ‘ಫೈಬರ್‌ ಗಣಪತಿ’!


ಶ್ರೀನಿವಾಸ್‌

‘ಹೆಲ್ಮೆಟ್‌ ತಯಾರಿಯಲ್ಲಿ ಬಳಸುವ ಫೈಬರ್‌ನಿಂದ ಮೂರ್ತಿಗಳನ್ನು ತಯಾರಿಸುವ ಪ್ರಯೋಗವನ್ನು ಈ ಬಾರಿ ಮಾಡಿದ್ದೇವೆ. ಇದೂ ನೀರಿನಲ್ಲಿ ಕರಗುವುದಿಲ್ಲ. ಆದರೆ ಪಿಒಪಿಯಷ್ಟೇ ಗಟ್ಟಿಮುಟ್ಟಾಗಿರುತ್ತದೆ. ಫೈಬರ್‌ ಮೂರ್ತಿ ತಯಾರಿಕೆಗೆ ಅವಕಾಶ ಸಿಕ್ಕಿದಲ್ಲಿ ಈ ಮೂರ್ತಿಗಳ ಬಳಕೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬಹುದು’ ಎಂಬುದು ಶ್ರೀನಿವಾಸ್‌ ಕೊಡುವ ವಿವರಣೆ.

ಮಣ್ಣಿನ ಮೂರ್ತಿಗಳು ಪಿಒಪಿಯಷ್ಟು ಆಕರ್ಷಕ ಮತ್ತು ವರ್ಣರಂಜಿತವಾಗಿರುವುದಿಲ್ಲ. ಫೈಬರ್‌ನ ಮೂರ್ತಿಗಳು ಯಾವುದೇ ಬಗೆಯ ಅಲಂಕಾರಕ್ಕೂ ಒಗ್ಗುತ್ತವೆ ಎಂದೂ ಅವರು ಹೇಳುತ್ತಾರೆ. ಪ್ರಯೋಗಾರ್ಥ ತಯಾರಿಸಿರುವ ಫೈಬರ್ ಮೂರ್ತಿಗಳಿಗೆ ಬೆಲೆ ನಿಗದಿ ಮಾಡಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯೊಂದಿಗೆ ಚರ್ಚಿಸಿ ಅನುಮತಿ ಪಡೆದ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸುವ ಉದ್ದೇಶ ಅವರದು.

ಮಣ್ಣು ಸಿಗುತ್ತಿಲ್ಲ, ಬೆಲೆ ಹೆಚ್ಚಿಸುವಂತಿಲ್ಲ!

ಮಾವಳ್ಳಿಯ ವ್ಯಾಪಾರಿ ತೀರ್ಥಪ್ಪ, ‘ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶ ನಮ್ಮ ವ್ಯಾಪಾರಕ್ಕೆ ಕಲ್ಲು ಹಾಕಿದೆ’ ಎಂದು ಆರೋಪಿಸುತ್ತಾರೆ.


ಬಾಬು, ಮಲ್ಲೇಶ್ವರ

‘ಮೂರ್ತಿ ತಯಾರಿಸಲು ಮಣ್ಣು ಹುಡುಕಿಕೊಂಡು ಪಕ್ಕದ ಜಿಲ್ಲೆಗಳಿಗೂ ಹೋಗಿಬಂದೆ. ಕೆರೆಯ ಮಣ್ಣು ಇಲ್ಲವೆ ಜೇಡಿ ಮಣ್ಣು ಮೂರ್ತಿ ಮಾಡಲು ಸೂಕ್ತ. ಮಣ್ಣಿನ ಮೂರ್ತಿಗಳಿಗೆ ಬೆಲೆಯೂ ಕಡಿಮೆ. ಬೇರೆ ಕಡೆಯಿಂದ ತರಿಸಿಕೊಳ್ಳುವುದೆಂದರೆ ಸಾಗಾಟ ದುಬಾರಿಯಾಗುತ್ತದೆ. ಹಾಗಂತ ಮಣ್ಣಿನ ಮೂರ್ತಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುವುದಿಲ್ಲ ಎಂದು ಅವರು ಸಮಸ್ಯೆಗಳನ್ನು ವಿವರಿಸುತ್ತಾರೆ.

ಮಣ್ಣಿನ ಲಭ್ಯತೆಯ ಸಮಸ್ಯೆ ಒಂದೆಡೆ, ಮಣ್ಣಿನ ಮೂರ್ತಿಗಳು ಸುರಕ್ಷಿತವಲ್ಲ ಎಂಬ ವಾದ ಮತ್ತೊಂದೆಡೆ, ಪಿಒಪಿ ಮೂರ್ತಿಯೇ ಬೇಕು ಎಂಬ ಬೇಡಿಕೆ ಇನ್ನೊಂದೆಡೆ. ಇವೆಲ್ಲದರ ಮಧ್ಯೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬೀಸುತ್ತಿರುವ ಕಾನೂನುಕ್ರಮ ಜರುಗಿಸುವ ಚಾಟಿ...ಅಂತೂ ಇಂತೂ ಈ ಬಾರಿ ಗಣೇಶೋತ್ಸವದಲ್ಲಿ ಯಾವ ಮಾದರಿಯ ಗಣಪ ಪೂಜೆಗೊಳ್ಳುತ್ತಾನೆ ಎಂಬುದನ್ನು ಕಾದು ನೋಡಬೇಕಷ್ಟೇ.

ಈ ಪರ್ಯಾಯ ಮಾರ್ಗಗಳಿಗೆ ಅವಕಾಶ ಸಿಕ್ಕೀತೇ?

ಪಿಒಪಿ ಮೂರ್ತಿಯನ್ನು ಜಲಮಾಲಿನ್ಯವಾಗದಂತೆ ವಿಲೇವಾರಿ ಮಾಡುವ ಕೆಲವು ಉಪಾಯಗಳನ್ನು ಆರ್.ವಿ.ರಸ್ತೆಯ ಎಂ.ಶ್ರೀನಿವಾಸ್‌ ಮತ್ತು ಮಲ್ಲೇಶ್ವರದ ವಿಜಯ ಜನರಲ್‌ ಸ್ಟೋರ್ಸ್‌ನ ಕೆ.ಶಂಕರ್‌ ಮುಂದಿಟ್ಟಿದ್ದಾರೆ.

1. ಬಾಡಿಗೆಗೆ ಕೊಡುವುದು 2. ತಮ್ಮಲ್ಲಿ ಖರೀದಿಸಿದ ಮೂರ್ತಿಗಳನ್ನು ಪೂಜೆ ಮತ್ತು ಮೆರವಣಿಗೆಯ ನಂತರ ತಮಗೇ ಮರಳಿಸುವುದು, 3. ಕೆರೆಗಳಲ್ಲಿ ವಿಸರ್ಜಿಸಿದ ಮೂರ್ತಿಗಳನ್ನು ವ್ಯಾಪಾರಿಗಳು ತಮ್ಮದೇ ಖರ್ಚಿನಲ್ಲಿ ಸಂಗ್ರಹಿಸಿ ಕ್ರಶರ್‌ನಿಂದ ಪುಡಿ ಮಾಡುವುದು 4. ಪಿಒಪಿ ಪುಡಿಯಿಂದ ಹಾಲೋ ಬ್ಲಾಕ್ಸ್‌ ತಯಾರಿಸುವುದು.

‘ಪಿಒಪಿ ಗಣೇಶ ಮೂರ್ತಿಗಳನ್ನು ದಿನದ ಬಾಡಿಗೆ ಲೆಕ್ಕದಲ್ಲಿ ಬಾಡಿಗೆಗೆ ನೀಡುತ್ತೇವೆ. ಜೊತೆಗೆ ಮಣ್ಣಿನ ಮೂರ್ತಿಯನ್ನೂ ಕೊಡುತ್ತೇವೆ. ಪಿಒಪಿ ಮೂರ್ತಿ ಅಲಂಕಾರ, ಮತ್ತು ಮೆರವಣಿಗೆಯ ಆಕರ್ಷಣೆಗೆ ಮೀಸಲಿರಲಿ. ಮಣ್ಣಿನ ಮೂರ್ತಿಯನ್ನು ಪೂಜಿಸಿ ವಿಸರ್ಜಿಸಲಿ. ಪಿಒಪಿ ಮೂರ್ತಿಗಳನ್ನು ಬಾಡಿಗೆಗೆ ಪಡೆದಿರುವ ಕಾರಣ ನಮಗೇ ಹಿಂತಿರುಗಿಸಲಿ. ಇದರಿಂದ ನಮ್ಮಲ್ಲಿರುವ ಪಿಒಪಿ ಮೂರ್ತಿಗಳು ವ್ಯರ್ಥವಾಗುವುದು ತಪ್ಪುತ್ತದೆ’ ಎಂಬುದು ಈ ಇಬ್ಬರು ವ್ಯಾಪಾರಿಗಳ ಲೆಕ್ಕಾಚಾರ.

‘ಪಿಒಪಿ ಮೂರ್ತಿಗಳ ಬಳಕೆಗೆ ಈ ಬಾರಿ ಅನುಮತಿ ವಿಸ್ತರಿಸಿದರೆ ತಾವು ಕ್ರಶ್‌ ಮಾಡಿ ಆ ಪುಡಿಯಿಂದ ಹಾಲೋ ಬ್ಲಾಕ್‌ ಮಾಡಿಕೊಳ್ಳುವ ಚಿಂತನೆ ನಡೆಸಿದ್ದೇನೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈ ಪ್ರಸ್ತಾವವನ್ನು ಪರಿಗಣಿಸಬೇಕು’ ಎಂದು ಶ್ರೀನಿವಾಸ್‌ ಮನವಿ ಮಾಡುತ್ತಾರೆ.

**

ಕಳೆದ ವರ್ಷ ಪಿಒಪಿ ಮೂರ್ತಿಗಳಿಗೆ ವಿನಾಯಿತಿ ನೀಡಿದ್ದೆವು. ದಾಸ್ತಾನು ಮಳಿಗೆಗಳು ಮತ್ತು ಮಾರಾಟಗಾರರ ಅಂಗಡಿಗಳ ತಪಾಸಣೆಗೆ ಅಧಿಕಾರಿಗಳ ತೆಂಡ ರಚಿಸಿದ್ವೆದೇವೆ. ಈ ಬಾರಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸುತ್ತೇವೆ.

–ಲಕ್ಷ್ಮಣ, ಅಧ್ಯಕ್ಷರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !