ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಬಿಸಾಕುವವರೇ ಸಿಸಿ ಕ್ಯಾಮೆರಾ ಇದೆ ಹುಷಾರ್‌!

Last Updated 22 ಜನವರಿ 2019, 20:00 IST
ಅಕ್ಷರ ಗಾತ್ರ

ಆ ವಾರ್ಡಿನ ಯಾವ ರಸ್ತೆಗಳನ್ನೂ ನೋಡಿದರೂ ಅಲ್ಲಿ ಸ್ವಚ್ಛತೆ ಎದ್ದು ಕಾಣುತ್ತಿತ್ತು. ಕಸ ಹಾಕಲು ನಿಗದಿ ಪಡಿಸಿದ್ದ ಸ್ಥಳಗಳೂ ಸ್ವಚ್ಛವಾಗಿದ್ದವು. ರಸ್ತೆಗಳ ಎಂಡ್ ಪಾಯಿಂಟ್‌ನ ನಾಲ್ಕೂ ದಿಕ್ಕುಗಳ ಮೇಲೆ ನಿಗಾವಹಿಸಲು ಸಿ.ಸಿ. ಟಿ.ವಿ ಕ್ಯಾಮೆರಾಗಳನ್ನು ಹಾಕಲಾಗಿತ್ತು. ಆ ವಾರ್ಡ್ ಬಹುತೇಕ ಕಸಮುಕ್ತವಾಗಿತ್ತು.

ಇದು ಗೋವಿಂದರಾಜನಗರ ವಾರ್ಡಿನ ಸ್ಥಿತಿ. ಬೆಳಿಗ್ಗೆ 9.30ರ ಸುಮಾರಿಗೆ ಇಡೀ ವಾರ್ಡಿನ ಪ್ರಮುಖ ರಸ್ತೆಗಳನ್ನು ಸುತ್ತಾಡಿದರೂ ಒಂದೇ ಒಂದು ಕಸದ ರಾಶಿಯೂ ಕಣ್ಣಿಗೆ ಕಾಣಲಿಲ್ಲ. ಇದಕ್ಕೆ ಕಾರಣ ಕಾಲಕಾಲಕ್ಕೆ ಕಸದ ವಿಲೇವಾರಿಯನ್ನು ಇಲ್ಲಿ ಸಮರ್ಪಕವಾಗಿ ನಿರ್ವಹಿಸುತ್ತಿರುವುದು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಪಣ ತೊಟ್ಟಿರುವ ಇಲ್ಲಿನ ಶಾಸಕ ವಿ.ಸೋಮಣ್ಣ ಅವರು ಮೊದಲ ಹಂತವಾಗಿ ವಾರ್ಡಿನಲ್ಲಿ (ವಾರ್ಡ್‌ ನಂ. 104) ಕಸ ವಿಲೇವಾರಿ ಸಮಸ್ಯೆಯನ್ನು ಬಹುತೇಕ ದೂರ ಮಾಡಿದ್ದಾರೆ. ಅದಕ್ಕೆ ಇಲ್ಲಿನ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ಸಹ ಕೈಗೂಡಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾವೇರಿಪುರ ವಾರ್ಡ್, ಗೋವಿಂದರಾಜ ನಗರ ವಾರ್ಡ್‌, ಅಗ್ರಹಾರ ದಾಸರಹಳ್ಳಿ ವಾರ್ಡ್‌, ಡಾ.ರಾಜಕುಮಾರ್ ವಾರ್ಡ್, ಮಾರೇನಹಳ್ಳಿ ವಾರ್ಡ್, ಮಾರುತಿ ಮಂದಿರ ವಾರ್ಡ್, ಮೂಡಲಪಾಳ್ಯ ವಾರ್ಡ್, ನಾಗರಬಾವಿ ವಾರ್ಡ್ ಹಾಗೂ ನಾಯಂಡಹಳ್ಳಿ ವಾರ್ಡ್‌ಗಳಿವೆ.

ಕಸ ನಿಯಂತ್ರಣಕ್ಕೆ ಸಿ.ಸಿ.ಟಿ.ವಿ ಕ್ಯಾಮೆರಾ

ಕೆಲ ತಿಂಗಳುಗಳ ಹಿಂದೆ ಗೋವಿಂದರಾಜನಗರ ವಾರ್ಡಿನಲ್ಲಿ ಕಸದ ಸಮಸ್ಯೆ ಹೆಚ್ಚಾಗಿತ್ತು. ಸಾರ್ವಜನಿಕರು ಕಸವಿಂಗಡಣೆ ಮಾಡದೆಯೇ ಎಲ್ಲಂದರಲ್ಲಿ ಕಸವನ್ನು ಎಸೆದು ಹೋಗುತ್ತಿದ್ದರು. ಅದನ್ನು ವಿಲೇವಾರಿ ಮಾಡುವುದೂ ಪೌರಕಾರ್ಮಿಕರಿಗೂ ತೊಂದರೆಯಾಗಿತ್ತು. ಹೀಗಾಗಿ, ಕಸ ಎಸೆಯುವವರ ಮೇಲೆ ನಿಗಾ ವಹಿಸಲೆಂದೇ ಸಿ.ಸಿ.ಟಿ.ವಿ ಕ್ಯಾಮೆರಾಗಳ ಮೊರೆ ಹೋಗಿ, ವಾರ್ಡಿನ ಎಲ್ಲೆಡೆ ಸಿ.ಸಿ. ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

‘ಬಿಬಿಎಂಪಿ ಅನುದಾನದಡಿ ಸುಮಾರು ₹ 80 ಲಕ್ಷ ವೆಚ್ಚದಲ್ಲಿ ವಾರ್ಡಿನ ಪ್ರಮುಖ ರಸ್ತೆಗಳ ಎಂಡ್ ಪಾಯಿಂಟ್‌ನ ನಾಲ್ಕು ದಿಕ್ಕುಗಳ ದೃಶ್ಯಗಳು ಸೆರೆಹಿಡಿಯುವಂತೆ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ. ದಿನದ 24 ಗಂಟೆಯೂ ಅವು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗಿದೆ’ ಎಂದು ಮಾಹಿತಿ ನೀಡಿದರು ಶಾಸಕ ವಿ.ಸೋಮಣ್ಣ.

ಎಲ್ಲೆಂದರಲ್ಲಿ ಕಸ ಎಸೆದರೆ ದಂಡ

‘ಕಸ ಎಸೆಯುವವರ ಮೇಲೆಸಿ.ಸಿ.ಟಿ.ವಿಗಳ ಮೂಲಕ ನಿಗಾ ಇಡಲು ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಲಾಗಿದೆ. ವಾರ್ಡಿನ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸವನ್ನು ಎಸೆಯುವ ಸಾರ್ವಜನಿಕರಿಗೆ ತಕ್ಷಣವೇ ದಂಡ ವಿಧಿಸುತ್ತೇವೆ. ಸಿ.ಸಿ. ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿದ ಬಳಿಕ ಸುಮಾರು 150ಕ್ಕೂ ಅಧಿಕ ಮಂದಿಗೆ ದಂಡ ವಿಧಿಸಿದ್ದೇವೆ. ಕಸವನ್ನು ನಿಗದಿತ ಸ್ಥಳದಲ್ಲೇ ಹಾಕುವಂತೆ ವಾರ್ಡಿನ ನಿವಾ→ಸಿಗಳಲ್ಲಿ ಜಾಗೃತಿ ಮೂಡಿಸಿದ್ದೇವೆ. ಇದು ಬಹುತೇಕ ಫಲ ನೀಡಿದೆ’ ಎನ್ನುತ್ತಾರೆ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ.

ಮಾದಕವಸ್ತು ಮಾರಾಟಕ್ಕೂ ಕಡಿವಾಣ

‘ವಾರ್ಡಿನ ವ್ಯಾಪ್ತಿಯಲ್ಲಿ ಈ ಹಿಂದೆ ಮಾದಕ ವಸ್ತುಗಳ ಮಾರಾಟವು ಇತ್ತು. ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿದ ಬಳಿಕ ಅದಕ್ಕೂ ಕಡಿವಾಣ ಬಿದ್ದಿದೆ. ಸರಗಳ್ಳತನ, ಮನೆಗಳ್ಳತನ ಪ್ರಕರಣಗಳು ಕಡಿಮೆಯಾಗಿವೆ. ಸರಗಳ್ಳತನ, ಮನೆಗಳ್ಳತನದ ನೂರಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಈ ಕ್ಯಾಮೆರಾಗಳು ನೆರವಾಗಿವೆ. ಜೊತೆಗೆ ಆ್ಯಕ್ಟ್ ನೆಟ್‌ವರ್ಕ್ ಸಂಸ್ಥೆ ವತಿಯಿಂದ ವಾರ್ಡಿನಲ್ಲಿ ಉಚಿತವಾಗಿ ವೈ–ಫೈ ಸೇವೆಯನ್ನು ಕಲ್ಪಿಸಿದ್ದೇವೆ’ ಎನ್ನುವ ಸೋಮಣ್ಣ, ಗೋವಿಂದರಾಜನಗರ ವಾರ್ಡಿನಂತೆ ಇಡೀ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಈಗಾಗಲೇ ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆ ಹಾಗೂ ವೈ–ಫೈ ಸೇವೆ ಕಲ್ಪಿಸುವ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

‘ತ್ಯಾಜ್ಯ ನಿರ್ವಹಣೆಗಾಗಿ ಕಾವೇರಿಪುರ ವಾರ್ಡಿನಲ್ಲಿ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ಅತಿ ಹೆಚ್ಚು ಒಳಚರಂಡಿ, ರಾಜಕಾಲುವೆಗಳಿರುವುದು ನನ್ನ ಕ್ಷೇತ್ರದಲ್ಲಿ. ಇಲ್ಲಿನ ರಾಜಕಾಲುವೆಗಳಿಗೆ ಕಸ ಸುರಿಯುವುದು ಎಗ್ಗಿಲ್ಲದೆ ನಡೆಯುತ್ತಿತ್ತು. ಜೊತೆಗೆ ಕೋಳಿ, ಕುರಿ ಮಾಂಸದಂಗಡಿಗಳ ತ್ಯಾಜ್ಯವನ್ನು ಕಾಲುವೆಗಳಿಗೆ ಎಸೆಯಲಾಗುತ್ತಿತ್ತು. ಅದೆಲ್ಲವನ್ನೂ ಈಗ ತಡೆಗಟ್ಟಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT