ಉಸಿರು ಉಸಿರಿಗೂ ಪರದಾಟ ಹೃದಯಕ್ಕೆ ಹೊಗೆಯದೇ ಕಾಟ

ಮಂಗಳವಾರ, ಮಾರ್ಚ್ 19, 2019
28 °C

ಉಸಿರು ಉಸಿರಿಗೂ ಪರದಾಟ ಹೃದಯಕ್ಕೆ ಹೊಗೆಯದೇ ಕಾಟ

Published:
Updated:

ತುಂಬು ಗರ್ಭಿಣಿ ಸಂಗೀತಾ ಅವರಿಗೆ ಮೊದಲೇ ಉಸಿರಾಟದ ತೊಂದರೆ ಇತ್ತು. ಅವರು ವಾಸವಾಗಿರುವ ಕೋರಮಂಗಲ ಭಾಗದಲ್ಲಿ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ನಿರ್ಮಾಣಗೊಳ್ಳುತ್ತಿರುವುದರಿಂದ ವಿಪರೀತ ದೂಳು. ಈಚೆಗೆ ಚೊಚ್ಚಲ ಹೆರಿಗೆಯಲ್ಲಿ ಅವರಿಗೆ ಜನಿಸಿದ ಗಂಡು ಮಗುವಿಗೆ ಅಸ್ತಮಾ ಕಾಣಿಸಿಕೊಂಡಿತು. ಬಡಾವಣೆ ಬದಲಾಯಿಸುವಂತೆ ವೈದ್ಯರು ಸಲಹೆ ನೀಡಿದರು.

ಮೈಸೂರು ರಸ್ತೆ ರಾಜರಾಜೇಶ್ವರಿ ನಗರದ ಸುಮಾ ಹತ್ತು ವರ್ಷಗಳ ನಂತರ ಗರ್ಭವತಿಯಾದರು. ಅವರ ಸಂತೋಷಕ್ಕೆ ಪಾರವೇ ಇಲ್ಲ. ಕುಟುಂಬ ಸದಸ್ಯರಿಂದ ವಿಶೇಷ ಆರೈಕೆ ಮತ್ತು ಪ್ರೀತಿ. ಒಮ್ಮೆ ಉಸಿರಾಟದಲ್ಲಿ ಕೊಂಚ ಏರುಪೇರು‌ ಆಯಿತು. ಭಯಭೀತರಾಗಿ ವೈದ್ಯರ ಬಳಿ ಹೋದಾಗ ಮನೆಯಲ್ಲಿ ಇದ್ದರೂ ದೂಳಿನಿಂದ ರಕ್ಷಣೆ ಪಡೆಯಲು ಮಾಸ್ಕ್‌ ಧರಿಸುವಂತೆ ಸಲಹೆ ಸಿಕ್ಕಿತು.

ಕೆ.ಆರ್‌.ಪುರಂ ಟಿನ್‌ಫ್ಯಾಕ್ಟರಿ ನಿವಾಸಿ ಯೂಸಫ್‌ ಮೂವತ್ತು ವರ್ಷದ ಯುವಕ. ವೃತ್ತಿಯಲ್ಲಿ ಆಟೊ ಡ್ರೈವರ್. ಒಂದು ಮಧ್ಯಾಹ್ನ ಆಟೊ ಚಲಾಯಿಸುವಾಗಲೇ ದಿಢೀರನೇ ಎದೆನೋವು ಕಾಣಿಸಿಕೊಂಡಿತು. ದಾರಿಹೋಕರ ಸಹಾಯದಿಂದ ಜಯದೇವ ಹೃದ್ರೋಗ ಆಸ್ಪತ್ರೆ ಸೇರಿದರು. ವೈದ್ಯರು ಎಲ್ಲಾ ರೀತಿಯಲ್ಲೂ ಪರೀಕ್ಷೆ ಮಾಡಿದಾಗ ಹೃದಯಾಘಾತಕ್ಕೆ ಮಾಲಿನ್ಯ ಕಾರಣ ಎಂಬ ಅಂಶ ಹೊರ ಬಿದ್ದಿತು.

ದೇಶದ ಅತಿ ಮಾಲಿನ್ಯಪೀಡಿತ ಆರು ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನ ಪಡೆದಿದೆ. ಇಲ್ಲಿನ ಗರ್ಭಿಣಿಯರು, ಮಕ್ಕಳು, ವೃದ್ಧರು, ಆಟೊ, ಟ್ಯಾಕ್ಸಿ ಚಾಲಕರು ಹೆಚ್ಚು ಮಾಲಿನ್ಯದಿಂದ ಬಳಲುತ್ತಿದ್ದಾರೆ. ಅಲ್ಲದೆ, ನಗರದ ಹೊರವಲಯದಲ್ಲಿ ಹೆಚ್ಚುತ್ತಿರುವ ಬೃಹತ್‌ ಕೈಗಾರಿಕೆಗಳು ಹಾಗೂ ಡೀಸೆಲ್‌ ಆಧಾರಿತ ಜನರೇಟರ್‌ಗಳಿಂದ ವಾಯುಮಾಲಿನ್ಯ ವಿಪರೀತವಾಗಿದೆ ಎಂದು ‘ಕ್ಲೀನ್‌ ಏರ್‌ ಪ್ಲಾಟ್‌ಫಾರಂ’ಸಂಸ್ಥೆಯ ಸಮೀಕ್ಷೆ ತಿಳಿಸಿದೆ.

ದಿನದಿಂದ ದಿನಕ್ಕೆ ನಗರ ಮಾಲಿನ್ಯದಿಂದ ತತ್ತರಿಸಿ ಹೋಗುತ್ತಿದೆ. ಕೆನಡಾದಲ್ಲಿ ಎಂಟು ವರ್ಷಗಳಲ್ಲಿ ದಾಖಲಾದ ಹೃದಯಾಘಾತ ಪ್ರಕರಣಗಳು ಬೆಂಗಳೂರಿನಲ್ಲಿ ಕೇವಲ ಎಂಟು ತಿಂಗಳಲ್ಲಿ ದಾಖಲಾಗಿವೆ. ಕೆನಡಾದಲ್ಲಿ ಎಂಟು ವರ್ಷಗಳಲ್ಲಿ 1,100 ಪ್ರಕರಣಗಳು ಕಂಡು ಬಂದಿದ್ದರೆ ಬೆಂಗಳೂರಿನಲ್ಲಿ ಎಂಟು ತಿಂಗಳಲ್ಲಿ 1,127 ಪ್ರಕರಣಗಳು ನೋಂದಣಿಯಾಗಿವೆ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ಮೂಲಗಳು ತಿಳಿಸಿವೆ.

ವಾಹನಗಳು ಉಗುಳುತ್ತಿರುವ ಹೊಗೆ ಹೃದಯಾಘಾತ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಈ ಮೊದಲು ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಿಂದ ಹೃದಯಾಘಾತವಾಗಿ ಸಾವನ್ನಪ್ಪುತ್ತಿದ್ದರು. ಈಗ ವಾಯುಮಾಲಿನ್ಯದಿಂದಲೂ ಹೃದಯಾಘಾತವಾಗುತ್ತದೆ ಎಂಬ ಅಂಶವನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ.

ವಾಯುಮಾಲಿನ್ಯ ಹೇಗೆ ಕಾರಣ
ಹಿಂದಿನ ವರ್ಷ 1,200 ರೋಗಿಗಳನ್ನು ಪ್ರಾಯೋಗಿಕವಾಗಿ ತೆಗೆದುಕೊಳ್ಳಲಾಯಿತು. ಇದರಲ್ಲಿ ಶೇ10ರಷ್ಟು ಮಂದಿ ಅಧಿಕ ರಕ್ತದೊತ್ತಡ, ಶೇ10ರಷ್ಟು ಮಧುಮೇಹದಿಂದ ಬಳಲುತ್ತಿದ್ದರು. ಇನ್ನುಳಿದ ಶೇ 80ರಷ್ಟು ಪ್ರಕರಣಗಳಲ್ಲಿ ಹೃದಯಾಘಾತದಿಂದ ಸಾವಿಗೀಡಾದ ಆಟೊ, ಟ್ಯಾಕ್ಸಿ ಚಾಲಕರಾಗಿದ್ದರು. ದಿನದ ಬಹುತೇಕ ಸಮಯ ಸಂಚಾರ ದಟ್ಟಣೆಯಲ್ಲೇ ಕಾಲ ಕಳೆಯುತ್ತಿದ್ದರು. ವಾಹನಗಳಿಂದ ಹೊರ ಸೂಸುವ ಹೊಗೆ ಶರೀರ ಪ್ರವೇಶ ಮಾಡುತ್ತದೆ. ಇದರಿಂದ ಹೃದಯಾಘಾತ ಸಂಭವಿಸುತ್ತದೆ ಎಂಬುದನ್ನು ವೈದ್ಯಲೋಕವೇ ದೃಢಪಡಿಸಿದೆ ಎಂದು ‘ಕ್ಲೀನ್‌ ಏರ್‌ ಪ್ಲಾಟ್‌ಫಾರಂ’ ಸಂಸ್ಥೆ ಸಿಇಒ ಯೋಗೇಶ್‌ ರಂಗನಾಥ್‌ ಮಾಹಿತಿ ನೀಡಿದರು.

ಇತರ ಕಾಯಿಲೆಗಳು ಹೆಚ್ಚು
ವಾಯುಮಾಲಿನ್ಯದಿಂದ ಹೃದಯಾಘಾತದ ಜತೆಗೆ ಮಧುಮೇಹ, ಆಟಿಸಂ, ಬುದ್ಧಿಮಾಂದ್ಯತೆ ಮತ್ತಿತರರ ಕಾಯಿಲೆಗಳ ಪ್ರಮಾಣವೂ ಏರಿಕೆಯಾಗಿದೆ. ಶೇ25ರಷ್ಟು ಮಕ್ಕಳು ಅಸ್ತಮಾದಿಂದ ಬಳಲುತ್ತಿದ್ದಾರೆ. ವಾಯುಮಾಲಿನ್ಯ ಎಲ್ಲ ವಯೋಮಾನದವರಿಗೂ ಹಾನಿ ಮಾಡುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದಿದರೆ ಧೂಮಪಾನ ಮಾಡಬಾರದು ಎಂದು ತಾಕೀತು ಮಾಡುತ್ತೇವೆ. ಆದರೆ, ಸಿಗರೇಟ್‌ನಂತೆ ಕಾರ್ಖಾನೆಗಳ ಹೊಗೆಯೂ ಹಾನಿ ಮಾಡುತ್ತದೆ. ಈ ಬಗ್ಗೆ ಮಾತನಾಡುವವರೆಷ್ಟು ಮಂದಿ? ಬಹಳ ಕಡಿಮೆ. ವಾಯುಮಾಲಿನ್ಯ ಎಷ್ಟು ಅಪಾಯಕಾರಿ ಎಂದರೆ ಭ್ರೂಣದಲ್ಲಿರುವ ಮಗುವಿಗೂ ಹಾನಿ ಉಂಟು ಮಾಡಬಲ್ಲದು. 

ಮಕ್ಕಳಿಗೆ ಹೆಚ್ಚು ತೊಂದರೆ
ಮಕ್ಕಳು ಅತಿ ವೇಗವಾಗಿ ಉಸಿರಾಡುತ್ತಾರೆ. ಹಾಗಾಗಿ ಹೆಚ್ಚು ಗಾಳಿ ಸೇವಿಸುತ್ತಾರೆ. ಇದರ ಜತೆಗೆ ಮಾಲಿನ್ಯಕಾರಕ ಕಣಗಳು ದೇಹದೊಳಗೆ ಪ್ರವೇಶಿಸುತ್ತವೆ. ಉಸಿರಾಟ ಮತ್ತು ಹೃದಯಕ್ಕೆ ಸಂಬಂಧಿಸಿದ ಅಂಗಗಳು ಶಾಶ್ವತವಾಗಿ ಹಾನಿಗೆ ಒಳಗಾಗುತ್ತವೆ. ಗ್ರಹಿಕೆ ಸಾಮರ್ಥ್ಯ ಕಡಿಮೆಯಾಗುತ್ತದೆ. ದೇಹದ ಪ್ರಮುಖ ಅಂಗಗಳ ಬೆಳವಣಿಗೆಯಲ್ಲಿ ವ್ಯತ್ಯಾಸ ಉಂಟಾಗಬಹುದು. ದೇಶದ ರಾಜಧಾನಿ ದೆಹಲಿಯಲ್ಲಿ ಒಂದು ದಿನ ಉಸಿರಾಡುವುದು ಎಂದರೆ 20 ಸಿಗರೇಟ್‌ ಸೇದಿದಂತೆ. ಮುಂದಿನ ದಿನಗಳಲ್ಲಿ ಬೆಂಗಳೂರಿಗೂ ಈ ಪರಿಸ್ಥಿತಿ ಬರಲಿದೆಯೇ? ಕಾಲ ಸನ್ನಿಹಿತವಾಗಿದೆ ಎನ್ನುವುದು ತಜ್ಞರ ಕಳವಳ.

ಟ್ರಾಫಿಕ್ ಆಗದಂತೆ ನೋಡಿಕೊಳ್ಳುವುದೇ ಪರಿಹಾರ
ಹೃದಯಾಘಾತಕ್ಕೆ ದೂಳು ಹೊಸ ಕಾರಣವಾಗಿ ಬೆಳೆದುಕೊಂಡಿದೆ. ವಾತಾವರಣದಲ್ಲಿ ಸೃಷ್ಟಿಯಾಗುವ ದೂಳಿಗಿಂತ ವಾಹನಗಳ ಹೊಗೆ ಹೆಚ್ಚು ಮಾರಕ.

ಮಧುಮೇಹ, ರಕ್ತದೊತ್ತಡವು ಹೃದಯಾಘಾತಕ್ಕೆ ಎಷ್ಟರ ಮಟ್ಟಿಗೆ ಕಾರಣವಾಗಿದೆಯೋ ಅಷ್ಟೇ ಪ್ರಮಾಣದಲ್ಲಿ ವಾಹನಗಳ ಹೊಗೆ ಕೂಡ ಕಾರಣವಾಗಿದೆ. 

ಟ್ರಾಫಿಕ್‌ ಆಗದಂತೆ ನೋಡಿಕೊಳ್ಳುವುದೇ ಇದಕ್ಕೆ ಪರಿಹಾರ. ಹೆಚ್ಚು ಹೊತ್ತು ವಾಹನಗಳು ಒಂದೆಡೆ ನಿಲ್ಲದಂತೆ ನೋಡಿಕೊಳ್ಳಬೇಕು. ನಗರದಲ್ಲಿ ಹೆಚ್ಚು ಮೇಲ್ಸೇತುವೆಗಳು ಆಗದಂತೆ ತಡೆಯುವವರು ಇದರ ಬಗ್ಗೆಯೂ ಚಿಂತಿಸಬೇಕು. 

ವಾಹನಗಳ ಹೊಗೆಯಿಂದ ಮನುಷ್ಯನಿಗೆ ಮಾತ್ರ ತೊಂದರೆ ಆಗುತ್ತಿದೆ ಎನ್ನುವುದು ತಪ್ಪು. ಮರಗಳೂ ಇದರಿಂದ ನಾಶ ಆಗುತ್ತಿವೆ. ಮಧ್ಯ ಪ್ರಾಚ್ಯ ದೇಶಗಳಲ್ಲಿ ಮರಗಳು ಇಲ್ಲದಿದ್ದರೂ ವಾತಾವರಣದ ಗುಣಮಟ್ಟ ಚೆನ್ನಾಗಿದೆ. ಆದರೆ ಇಲ್ಲಿ ಮರಗಳು ಇದ್ದರೂ ವಾಯುಮಾಲಿನ್ಯ ಹೆಚ್ಚುತ್ತಿದೆ. 

ಹೊಗೆಯು ರಕ್ತನಾಳದಲ್ಲಿ ಸೇರಿಕೊಂಡು ರಕ್ತ ಸಂಚಲನಕ್ಕೆ ತೊಂದರೆ ಉಂಟುಮಾಡುತ್ತದೆ. ಇದರಿಂದ ಹೃದಯಾಘಾತವಾಗುತ್ತದೆ. ನಮ್ಮ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಶೇ 20ರಷ್ಟು ರೋಗಿಗಳು ಟ್ಯಾಕ್ಸಿ, ಆಟೊ ಸೇರಿದಂತೆ ವಾಹನಗಳ ಚಾಲಕರೇ ಇರುತ್ತಾರೆ. ಇದರಲ್ಲಿ ಟ್ರಾಫಿಕ್‌ ಪೊಲೀಸರೂ ಸೇರಿದ್ದಾರೆ. ವಾಹನ ದಟ್ಟಣೆಯಿಂದ ಆಗುವ ಮಾನಸಿಕ ಒತ್ತಡದ ಜೊತೆ ದೈಹಿಕವಾಗಿಯೂ ಇರುವ ತೊಂದರೆಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.

ಹೆಚ್ಚಿನ ಮಾರ್ಗಗಳಲ್ಲಿ ಮೆಟ್ರೊ ರೈಲನ್ನು ವಿಸ್ತರಿಸಬೇಕು. ವಿದ್ಯುತ್‌ಚಾಲಿತ ವಾಹನಗಳ ಸಂಚಾರ ಹೆಚ್ಚಾಗಬೇಕು ಆಗ ಮಾಲಿನ್ಯದ ಪ್ರಮಾಣ ಕಡಿಮೆಯಾಗಲಿದೆ.
–ಸಿ.ಎನ್‌.ಮಂಜುನಾಥ್‌, ನಿರ್ದೇಶಕರು, ಜಯದೇವ ಹೃದ್ರೋಗ ಸಂಸ್ಥೆ

***
ವಾಹನಗಳಿಂದ ಬರುವ ಹೊಗೆ ಶರೀರ ಪ್ರವೇಶಿಸುತ್ತದೆ. ಇದರಿಂದ ಹೃದಯಾಘಾತ ಸಂಭವಿಸುತ್ತದೆ ಎಂಬುದನ್ನು ವೈದ್ಯಲೋಕವೇ ದೃಢಪಡಿಸಿದೆ.
–ಯೋಗೇಶ್ ರಂಗನಾಥ್, ಸಿಇಒ, ಕ್ಲೀನ್ ಏರ್ ಪ್ಲಾಟ್‌ಫಾರಂ

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !