ಸೋಮವಾರ, ಮೇ 23, 2022
30 °C

ಗಿರಿಜಮ್ಮನ ‘ತಿಂಡಿ’ ಕಾಯಕ

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

ಸಂಪಂಗಿ ರಾಮನಗರ. ಬೆಳಿಗ್ಗೆ 7 ಗಂಟೆಯ ಸಮಯ. ಕಬ್ಬಿಣದ ಟೇಬಲ್,  ಬಿಸಿಬಿಸಿ ಇಡ್ಲಿ ತುಂಬಿರುವ ದೊಡ್ಡ ಹಾಟ್ ಬಾಕ್ಸ್, ಘಮಘಮಿಸುವ ಫಲಾವ್, ಚಿತ್ರಾನ್ನದ ಪಾತ್ರೆಗಳನ್ನು ಜೋಡಿಸಿಡುತ್ತಾ ಅಂದಿನ ಕಾಯಕಕ್ಕೆ ಅಣಿಯಾಗುತ್ತಾರೆ ಎಪ್ಪತ್ತಾರರ ಹರೆಯದ ಗಿರಿಜಾ...

ಬೆಳ್ಳಂಬೆಳಿಗ್ಗೆಯೇ ಶಾಲೆಗೆ ಹೋಗುವ ಮಕ್ಕಳಿಗೆ, ಉದ್ಯೋಗಸ್ಥರಿಗೆ, ಬೇಗ ಎದ್ದು ತಿಂಡಿ ಮಾಡಲಾಗದ ಗೃಹಿಣಿಯರ ಪಾಲಿಗೆ ಗಿರಿಜಾ ಅವರ ಪುಟ್ಟ ಮೊಬೈಲ್ ಹೋಟೆಲ್ ವರದಾನ. ಕಡಿಮೆ ದರದಲ್ಲಿ ಆರೋಗ್ಯಕರವಾಗಿ ದೊರೆಯುವ ತಿಂಡಿಗಳು ಹೊಟ್ಟೆ ತುಂಬಿಸುತ್ತವೆ. ಗಿರಿಜಾ ಅವರ ಬಳಿ ನಾಲ್ಕು ಇಡ್ಲಿಗೆ ₹ 20, ನಾಲ್ಕು ವಡೆಗೆ ₹ 10, ಫಲಾವ್, ಚಿತ್ರಾನ ಒಂದು ಪ್ಲೇಟ್‌ಗೆ ₹ 25

ಮಳೆಯಿರಲಿ, ಚಳಿಯಿರಲಿ, ಬಿಸಿಲಿರಲಿ 40 ವರ್ಷಗಳಿಂದ ಗಿರಿಜಾ ಅವರ ತಿಂಡಿ ಮಾರುವ ಕಾಯಕಕ್ಕೆ ತುಸುವೂ ಚ್ಯುತಿ ಬಂದಿಲ್ಲ. ಭಾನುವಾರ ಹೊರತುಪಡಿಸಿ ನಿತ್ಯವೂ ಬೆಳಿಗ್ಗೆ 7ರಿಂದ 10ರವರೆಗೆ ಈ ಕಾಯಕದಲ್ಲೇ ಬದುಕು ಕಟ್ಟಿಕೊಂಡಿದ್ದಾರೆ ಅವರು. ಇದೇ ಉದ್ಯೋಗದಲ್ಲೇ ಐವರು ಹೆಣ್ಣುಮಕ್ಕಳು ಹಾಗೂ ಒಬ್ಬ ಮೊಮ್ಮಗಳ ಮದುವೆಯನ್ನೇ ಮಾಡಿದ್ದಾರೆ.

ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಪತಿ ರಾಜಣ್ಣ ಆರಂಭದ ದಿನಗಳಲ್ಲಿ ನೆರವು ನೀಡುತ್ತಿದ್ದರು. ಈಗ ಮೊಮ್ಮಗನ ಸಹಾಯರಿಂದ ಬೆಳಿಗ್ಗೆ ಕೆಲಸಕ್ಕೆ ಬೇಕಾಗುವ ಸಾಮಗ್ರಿಗಳನ್ನು ಫುಟ್‌ಪಾತ್‌ ಮೇಲೆ ಜೋಡಿಸಿಕೊಂಡು ಬರುವ ಗ್ರಾಹಕರಿಗೆ ಅಕ್ಕರೆಯಿಂದ ತಿಂಡಿ ಕೊಡುತ್ತಾರೆ ಗಿರಿಜಾ. ಸಂಪಂಗಿ ರಾಮನಗರದ 4ನೇ ಮುಖ್ಯರಸ್ತೆಯ 10ನೇ ಕ್ರಾಸ್‌ನ ಫುಟ್‌ಪಾತೇ ಇವರ ನಿತ್ಯದ ಸ್ಥಳ.

ಹುಟ್ಟಿ ಬೆಳೆದಿದ್ದು ಕರಗಪ್ಪ ಗಾರ್ಡನ್. ಮದುವೆಯಾಗಿದ್ದು ಪಕ್ಕದ ಸಂಪಂಗಿ ರಾಮನಗರದಲ್ಲಿ. ಕುಟುಂಬ ನಿರ್ವಹಣೆಗೆ ಬೇರೆ ದಾರಿ ಕಾಣದಿದ್ದಾಗ ಅಡುಗೆ–ತಿಂಡಿ ಕಾಯಕ ಶುರು ಮಾಡಿದೆ ಅನ್ನುತ್ತಾರೆ ಗಿರಿಜಾ. ಆಗ ಸಂಪಂಗಿ ರಾಮನಗರದಲ್ಲಿ ಇಷ್ಟೊಂದು ಕಟ್ಟಡಗಳೂ ಇರಲಿಲ್ಲ. ಆಗ ಡಬ್ಬಲ್ ರೋಡ್‌ನ ಫ್ಲೈ ಓವರ್ ಅಗುತ್ತಿತ್ತು. ಅಲ್ಲಿನ ಕೂಲಿಕಾರ್ಮಿಕರು ನಮ್ಮ ಬಳಿಯೇ ಬಂದು ಮಧ್ಯಾಹ್ನದ ಊಟ ಮಾಡುತ್ತಿದ್ದರು.  ಕಡಿಮೆ ದರಕ್ಕೆ ಅನ್ನ–ಸಾಂಬಾರ್‌ ಕೊಡುತ್ತಿದ್ದೆವು. ಅಂತೆಯೇ ಸಿಂಧಿ ಆಸ್ಪತ್ರೆ ಕಟ್ಟುತ್ತಿದ್ದಾಗ ಮತ್ತು ಈಗಿನ ಅದ್ವೈತ್ ಹುಂಡೈ ಷೋರೂಂ ಇದ್ದ ಜಾಗದಲ್ಲಿದ್ದ ಗಾರ್ಮೆಂಟ್ ಫ್ಯಾಕ್ಟರಿಯ ಕಾರ್ಮಿಕರು ನಮ್ಮ ಗ್ರಾಹಕರಾಗಿದ್ದರು ಎಂದು ನೆನಪಿನ ಬುತ್ತಿ ಬಿಚ್ಚಿಡುತ್ತಾರೆ ಅವರು.  

ಬೆಳಿಗ್ಗೆ ಐದಕ್ಕೇ ಎದ್ದು ಅಂದಿನ ತಿಂಡಿಗೆ ಬೇಕಾದ ತಾಜಾ ತರಕಾರಿ ಹಚ್ಚಿಕೊಳ್ಳುತ್ತೇನೆ. ಮಗಳೂ ಸಹಾಯ ಮಾಡುತ್ತಾಳೆ. ಏಳು ಗಂಟೆ ಹೊತ್ತಿಗೆ ಬಿಸಿಬಿಸಿ ಇಡ್ಲಿ, ಚಟ್ನಿ, ಸಾಂಬಾರ್, ಕಡ್ಲೆಬೇಳೆ ವಡೆ, ಚಿತ್ರಾನ್ನ, ಫಲಾವ್ ಇವಿಷ್ಟೂ ರೆಡಿಯಾಗಿರುತ್ತೆ.  ಮೊಮ್ಮಗನ ಸಹಾಯದಿಂದ ಟೇಬಲ್ ಮೇಲೆ ಅವುಗಳನ್ನೆಲ್ಲಾ ಜೋಡಿಸಿಕೊಂಡು ನಿತ್ಯದ ಕಾಯಕ ಆರಂಭಿಸಿದರೆ ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ ಅಂತ ನಗುತ್ತಾರೆ ಈ ಹಿರಿಯ ಕಾಯಕ ಜೀವಿ. 

ಸಂಪಂಗಿರಾಮನಗರದ 13ನೇ ಕ್ರಾಸ್‌ನ ಬಾಡಿಗೆ ಮನೆಯಲ್ಲಿರುವ ಗಿರಿಜಾ ಅವರಿಗೆ ವಯಸ್ಸು 76 ಆದರೂ, ಬಿ.ಪಿ., ಸಕ್ಕರೆ ಕಾಯಿಲೆಯ ಸುಳಿವಿಲ್ಲ. ಇಂದಿಗೂ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡು ಬಂದಿರುವ ಅವರು ಗಂಟೆಗಟ್ಟಲೇ ನಿಂತು ಬರುವ ಗ್ರಾಹಕರಿಗೆ ಪ್ರೀತಿಯಿಂದ ತಿಂಡಿ ಬಡಿಸುವುದು, ಪಾರ್ಸೆಲ್ ಕಟ್ಟಿಕೊಡುತ್ತಾರೆ. 

‘ಈ ಏರಿಯಾದಲ್ಲಿ 42 ವರ್ಷದಿಂದ ಇದ್ದೇನೆ. ಗಿರಿಜಮ್ಮ ಮಾಡುವ ತಿಂಡಿ ದೊಡ್ಡ ಹೋಟೆಲ್‌ಗಿಂತ ಚೆನ್ನಾಗಿರುತ್ತೆ. ಅಷ್ಟೇ ಅಲ್ಲ ಬೆಲೆಯೂ ಕಡಿಮೆ. ಸರಳವಾಗಿ ಅಡುಗೆ ಮಾಡಿಕೊಂಡು ಬರ್ತಾರೆ, ರುಚಿ ಚೆನ್ನಾಗಿರುತ್ತೆ.  ಹಾಗಾಗಿ, ನಿತ್ಯವೂ ಇಲ್ಲಿಯೇ ತಿಂಡಿ ತಿನ್ತೀನಿ. ನಾನು ಕಂಡಂತೆ ಗಿರಿಜಮ್ಮ ಅವರ ಬಳಿ ನಿತ್ಯವೂ 25ರಿಂದ 30 ಮಂದಿ ತಿಂಡಿಗೆ ಬರುತ್ತಾರೆ’ ಅಂತ ತಮ್ಮ ಅನುಭವ ಹೇಳಿಕೊಳ್ಳುತ್ತಾರೆ ಎಳನೀರು ವ್ಯಾಪಾರಿ ರಿಯಾಜ್ ಅಹಮದ್. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.