ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಿಕಾ ವನವಾಯ್ತು ಕೆರೆಯಂಗಳ

ಯುನೈಟೆಡ್ ವೇ ಆಫ್‌ ಬೆಂಗಳೂರು ಸಹಯೋಗ
Last Updated 7 ನವೆಂಬರ್ 2018, 19:31 IST
ಅಕ್ಷರ ಗಾತ್ರ

ಬೆಂಗಳೂರು ಕೆರೆಗಳ ನಗರದ ಎನಿಸಿಕೊಂಡಿತ್ತು. ನಗರೀಕರಣದ ಭರಾಟೆಗೆ ಸಿಲುಕಿ ಅನೇಕ ಕೆರೆಗಳ ಮಾಯವಾಗಿರುವುದು ಇತಿಹಾಸ. ಕೆರೆಗಳ ನಾಶದಿಂದ ಮಳೆ ಪ್ರಮಾಣ ಕಡಿಮೆಯಾಯಿತು, ಅಂತರ್ಜಲ ಪಾತಾಳಕ್ಕಿಳಿಯಿತು. ಮುಚ್ಚಿದ ಕೆರೆಗಳಲ್ಲಿ ಬಡಾವಣೆಗಳು ತಲೆಯೆತ್ತಿವೆ. ಅಪಾರ್ಟ್‌ಮೆಂಟ್‌ಗಳೂ ನಿರ್ಮಾಣವಾಗಿವೆ. ಇವೆಲ್ಲದರ ಪರಿಣಾಮ ಮಳೆಗಾಲದಲ್ಲಿ ನೀರು ಹರಿಯಲು ಜಾಗ ಇಲ್ಲದೇ, ಅಪಾರ್ಟ್‌ಮೆಂಟ್‌ಗಳು ಮುಳುಗಡೆಯಾಗುವ ಸ್ಥಿತಿ ನಿರ್ಮಾಣವಾಗಿದೆ.

ಮತ್ತೀಗ ಇರುವ ಕೆರೆಗಳ ರಕ್ಷಣೆಗೆ ಪರಿಸರವಾದಿಗಳು, ಸ್ವಯಂಸೇವಾ ಸಂಸ್ಥೆಗಳು, ಬಿಬಿಎಂಪಿ, ಸರ್ಕಾರ ಎಲ್ಲರೂ ಟೊಂಕ ಕಟ್ಟಿ ನಿಂತಿದ್ದಾರೆ. ಅದರ ಪರಿಣಾಮವಾಗಿ ಕೆರೆಗಳ ರಕ್ಷಣೆಗೆ ಸಂಬಂಧಿಸಿದಂತೆ ಹೊಸ ಬಗೆಯ ಆಲೋಚನೆಗಳಿಗೆ ಮನ್ನಣೆ ಸಿಗುತ್ತಿದೆ. ಕೆರೆಗಳ ಸುತ್ತ ಸಿಮೆಂಟು ಹಾಕಿ ಉದ್ಯಾನ ನಿರ್ಮಾಣ ಮಾಡುವುದು, ವಾಯು ವಿಹಾರಿಗಳಿಗೆ ವಾಕಿಂಗ್‌ ಪಾತ್, ಬೆಂಚು ಇತ್ಯಾದಿ ವ್ಯವಸ್ಥೆ ಕಲ್ಪಿಸುವುದು ಇಷ್ಟೇ ಆದರೆ ಸಾಲದು. ಅಲ್ಲೊಂದು ಆಹ್ಲಾದಕರ ಮತ್ತು ಆರೋಗ್ಯಪೂರ್ಣ ಜಗತ್ತು ನಿರ್ಮಾಣವಾಗಬೇಕು ಎಂಬ ಉದ್ದೇಶದೊಂದಿಗೆ‘ಯುನೈಟೆಡ್‌ ವೇ ಆಫ್‌ ಬೆಂಗಳೂರು’ ಎಂಬ ಸ್ವಯಂಸೇವಾ ಸಂಸ್ಥೆ ಬೆಂಗಳೂರಿನ ಕೆರೆಗಳ ನಿರ್ವಹಣೆಗೆ ಬಿಬಿಎಂಪಿ ಜೊತೆ ಕೈಜೋಡಿಸಿದೆ.

ಏಳೆಂಟು ವರ್ಷಗಳಿಂದ ಬೆಂಗಳೂರಿನ ಪ್ರಮುಖ ಕೆರೆಗಳ ನಿರ್ವಹಣೆಯ ಜವಾಬ್ದಾರಿ ಹೊತ್ತ ಈ ಸಂಸ್ಥೆ ಕೆರೆಗಳ ಸುತ್ತ ಔಷಧೀಯ ಸಸ್ಯಗಳನ್ನು ಬೆಳೆಸುತ್ತಿದೆ. ಕೆರೆ ದಂಡೆಗಳಲ್ಲಿ ಸಹಜವಾಗಿ ಬೆಳೆಯಬಲ್ಲ ಗಿಡ ಮರಗಳನ್ನು ಬೆಳೆಸಲಾಗಿದೆ. ಇದರಿಂದಾಗಿ ಕೆರೆಗಳ ಸುತ್ತ ಜೀವವೈವಿಧ್ಯ ಸಂರಕ್ಷಣೆ ಸಾಧ್ಯವಾಗಿದೆ. ನಗರದ ಪ್ರಮುಖ ಕೆರೆಗಳಾದ ಕೆಂಪಾಂಬುಧಿ, ವೈಟ್‌ಫೀಲ್ಡ್‌ನ ಶೀಲವಂತ ಕೆರೆ, ದೇವಸಂದ್ರ ಕೆರೆ, ಕೌಡೇನಹಳ್ಳಿಕೆರೆ, ಕಸವನಹಳ್ಳಿ, ಕುಂದನಹಳ್ಳಿ, ಮುನಿಕೊಳಲು, ರಾಚೇನಹಳ್ಳಿ, ದಾಸರಹಳ್ಳಿ, ಕೈಕೊಂಡ್ರಳ್ಳಿ, ಮಹದೇವಪುರ ಕೆರೆ, ಬಸವನಪುರ, ನಂದಿಬೆಟ್ಟದ ಬುಡದಲ್ಲಿರುವ ನಂದಿಕೆರೆಗಳ ಸುತ್ತ ‘ಮೂಲಿಕಾ ವನ’ಗಳನ್ನು ನಿರ್ಮಿಸಲಾಗಿದೆ.

‘ಜೀವವೈವಿಧ್ಯ ರಕ್ಷಣೆ ನಮ್ಮ ಮುಖ್ಯ ಉದ್ದೇಶ. ಹಾಗಾಗಿ ಹೂವಿನ ಗಿಡ, ಬಳ್ಳಿ, ಔಷಧೀಯ ಸಸ್ಯದ ಜೊತೆಗೆ ಎತ್ತರ ಬೆಳೆಯುವ ಮರಗಳನ್ನು ಬೆಳೆಸಲಾಗುತ್ತಿದೆ. ಸುಮಾರು 50 ಜಾತಿಯ ಸಸ್ಯಗಳನ್ನು ಬೆಳೆಸಿದ್ದೇವೆ. ನಗರದ ಕೆರೆಗಳಿಗೆ ಸಹಜವಾಗಿ ತ್ಯಾಜ್ಯ ನೀರು ಹರಿದುಬರುತ್ತಿದೆ. ಹಾಗಾಗಿ ಕೆರೆ ನೀರು ಶುದ್ಧ ಮಾಡುವುದು ಸಾಧ್ಯವಿಲ್ಲ. ಆದರೆ, ನಾವು ಕರೆಯಂಗಳವನ್ನು ಕಾಪಾಡುವ ಕೆಲಸ ಮಾಡುತ್ತಿದ್ದೇವೆ. ಅಲ್ಲಿ ಜೀವವೈವಿಧ್ಯ ಉಳಿಸುವುದು, ಒತ್ತುವರಿಯಾಗದಂತೆ ತಡೆಯುವುದು, ಕೆರೆ ರಕ್ಷಣೆಯ ಬಗ್ಗೆ ಸಮುದಾಯವನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಯುನೈಟೆಡ್‌ ವೇ ಆಫ್‌ ಬೆಂಗಳೂರು ಸಂಸ್ಥೆಯ ಜನರಲ್‌ ಮ್ಯಾನೇಜರ್‌ ಡೇವಿಡ್‌ ಹೇಳುತ್ತಾರೆ.

ಈಗ ಅನೇಕ ಬಗೆಯ ಪಕ್ಷಿಗಳು, ಲೆಕ್ಕವಿಲ್ಲದಷ್ಟು ಚಿಟ್ಟೆಗಳು ಕೆರೆಗಳ ಬಳಿ ಬರುತ್ತಿವೆ. ವಾಯು ವಿಹಾರಿಗಳ ಸಂಖ್ಯೆ ಹೆಚ್ಚಿದೆ. ಅಲ್ಲಿ ಒಂದಷ್ಟು ಚಟುವಟಿಕೆಗಳನ್ನು ನಡೆಸುವ ಕಾರಣದಿಂದಾಗಿ ಸ್ಥಳೀಯರಲ್ಲಿ ಜಾಗೃತಿ ಮೂಡಿದೆ ಎನ್ನುತ್ತಾರೆ ಅವರು.

‘ಪರಿಸರವಾದಿ ಯಲ್ಲಪ್ಪರೆಡ್ಡಿ ಅವರ ಮಾರ್ಗದರ್ಶನದಲ್ಲಿ ಈ ಮೂಲಿಕಾ ವನ ನಿರ್ಮಾಣವಾಗಿದೆ.ಕೆರೆದಂಡೆಗಳಲ್ಲಿಶ್ರೀತುಳಸಿ, ಕೃಷ್ಣತುಳಸಿ, ಕಾಮಕಸ್ತೂರಿ, ಶಂಖಪುಷ್ಟ, ದೊಡ್ಡಪತ್ರೆ, ಒಂದೆಲಗ ಮುಂತಾದ ಸಸ್ಯಗಳನ್ನು ಬೆಳೆಸಲಾಗಿದೆ. ಇನ್ನು ಕೆರೆಯಲ್ಲಿಯೇ ಬೆಳೆಯುವ ಕೆಲವು ಸಸ್ಯಗಳನ್ನೂ ಬೆಳೆಸಲಾಗಿದೆ’ ಎಂದು ಮೂಲಿಕಾ ವನದ ನಿರ್ವಹಣೆ ಮಾಡುತ್ತಿರುವಇಂಡಸ್‌ ಹರ್ಬ್ಸ್‌ನ ರವೀಂದ್ರ ಹೇಳುತ್ತಾರೆ.

ಮನೆ ಮದ್ದಿನ ಗಿಡಗಳ ಪರಿಚಯ

ಉದ್ಯಾನಗಳಲ್ಲಿ ಚಂದಕ್ಕೆಂದು ಹುಲ್ಲು, ಕ್ರೋಟನ್‌ ಗಿಡಗಳನ್ನು ನೆಡುತ್ತಾರೆ. ಆದರೆ, ಅವುಗಳಿಂದ ಜನರ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ. ಅದರ ಬದಲು, ಶ್ರೀತುಳಸಿ, ಕೃಷ್ಣತುಳಸಿ, ಕಾಮಕಸ್ತೂರಿ, ಶಂಖಪುಷ್ಟದಂಥ ಮನೆಮದ್ದಿನ ಸಸ್ಯಗಳನ್ನು ನೆಡುವುದರಿಂದ ವಾಯುವಿಹಾರಿಗಳಿಗೆ ಅಲ್ಲಿನ ಗಾಳಿ ಸೇವನೆಯಿಂದಲೇ ಆರೋಗ್ಯ ವೃದ್ಧಿಸಲಿದೆ. ಔಷಧೀಯ ಸಸ್ಯಗಳು ಸುಲಭವಾಗಿ ಸಿಗುವಂತಾದರೆ ಜನ ಅದನ್ನು ಬಳಸಲು ಶುರು ಮಾಡುತ್ತಾರೆ.

–ರವೀಂದ್ರ, ಇಂಡಸ್‌ ಹರ್ಬ್ಸ್‌

***

ಜಾಗೃತಿಗಾಗಿ ಕೆರೆಹಬ್ಬ, ದೀಪೋತ್ಸವ

ಕೆರೆಗಳ ರಕ್ಷಣೆಯಲ್ಲಿ ಸ್ಥಳೀಯರ ಪಾತ್ರ ಮಹತ್ವದ್ದು. ನಾವು ಮೂರ್ನಾಲ್ಕು ವರ್ಷ ನೋಡಿಕೊಳ್ಳಬಹುದು. ನಂತರ ಸ್ಥಳೀಯರು ಅದನ್ನು ಮುಂದುವರಿಸಿಕೊಂಡು ಹೋಗುವುದು ಮುಖ್ಯ. ಅದಕ್ಕಾಗಿ ನಾವು ಸ್ಥಳೀಯರನ್ನು ಒಟ್ಟುಗೂಡಿಸಿ ಅರಿವು ಮೂಡಿಸುತ್ತಿದ್ದೇವೆ. ವಾಕರ್ಸ್‌ ಕ್ಲಬ್‌, ಮಕ್ಕಳ ಕ್ಲಬ್‌ಗಳನ್ನು ಸ್ಥಾಪಿಸಿದ್ದೇವೆ. ಕೆರೆಹಬ್ಬಗಳನ್ನು ಆಯೋಜಿಸುತ್ತಿದ್ದೇವೆ. ಕಾರ್ಮಿಕ ಸಮುದಾಯಗಳಿಗೆ ಕೆರೆಯ ಮಹತ್ವ, ಕೆರೆಗೆ ತ್ಯಾಜ್ಯಗಳನ್ನು ಸುರಿಯದಂತೆ ಜಾಗೃತಿ ಮೂಡಿಸುತ್ತೇವೆ. ನವೆಂಬರ್‌ ಪೂರ್ತಿ 19 ಕೆರೆಗಳಲ್ಲಿ ದೀಪೋತ್ಸವ ಆಚರಿಸುತ್ತಿದ್ದೇವೆ. ಈ ಮೂಲಕ ಕೆರೆಗಳ ಬಗ್ಗೆ ಸ್ಥಳೀಯರಿಗೆ ಭಾವನಾತ್ಮಕ ಸಂಬಂಧ ಬೆಸೆಯುವಂತೆ ಮಾಡುತ್ತಿದ್ದೇವೆ.

–ಡೇವಿಡ್‌, ಯುನೈಟೆಡ್‌ ವೇ ಆಫ್‌ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT