ಭಾನುವಾರ, ಸೆಪ್ಟೆಂಬರ್ 15, 2019
23 °C

ಮದುವೆ–ಮುಂಜಿಯಲ್ಲಿ ಇರಲಿ ಪರಿಸರ ಕಾಳಜಿ

Published:
Updated:
Prajavani

ಹೊರಗೆ ರಣಗುಟ್ಟುವ ಬಿಸಿಲನ್ನು ಕಂಡೊಡನೆಯೇ ಮದುವೆ, ಮುಂಜಿ ವಿವಿಧ ಸಮಾರಂಭಗಳನ್ನು ಮಾಡುವವರಿಗೆಲ್ಲ ಹುರುಪು. ಬಡವರು ಸಾಲ ಮಾಡಿಯಾದರೂ ಸಮಾರಂಭಕ್ಕೆ ಅದ್ಧೂರಿತನದ ಸ್ಪರ್ಶ ನೀಡಲು ಯತ್ನಿಸುತ್ತಾರೆ. ಮಧ್ಯಮ ವರ್ಗದವರು ತಮ್ಮ ಅಂತಸ್ತು ಮೀರಿ ಖರ್ಚು ಮಾಡಿ ಶ್ರೀಮಂತರಂತೆ ತೋರಿಸಿಕೊಳ್ಳಲೆತ್ನಿಸುತ್ತಾರೆ. ಶ್ರೀಮಂತರು ತಮ್ಮ ಪ್ರತಿಷ್ಠೆಯನ್ನು ಪ್ರದರ್ಶನಕ್ಕಿಡಲು ಸಮಾರಂಭಗಳು ಸದಾವಕಾಶ ಎಂದುಕೊಳ್ಳುತ್ತಾರೆ. ಊಟ ಉಪಚಾರಗಳಲ್ಲಿ ಬಳಕೆಯಾಗುವ ವಸ್ತುಗಳಲ್ಲಿ ಪ್ಲಾಸ್ಟಿಕ್ ಬಳಕೆ
ಯನ್ನು ನೋಡಿದರೆ ಗಾಬರಿಯಾಗುತ್ತದೆ.

ಹಿಂದೆಲ್ಲ ಸಮಾರಂಭಗಳಾದರೆ ಬಾಡಿಗೆಗೆ ಸ್ಟೀಲ್ ಲೋಟಗಳನ್ನು ತಂದು ಕುಡಿಯಲು ಇಡುತ್ತಿದ್ದರು. ನೀರು ಕುಡಿದ ಲೋಟಗಳಾದರೆ ಬರಿಯ ನೀರಿನಿಂದ ಗಲಬರಿಸಿದರೆ ಸಾಕು; ಸ್ವಚ್ಛವಾಗುತ್ತಿದ್ದವು. ಬಾಳೆ ಎಲೆಗಳಲ್ಲಿ ಅಥವಾ ಮುತ್ತುಗದ ಎಲೆಗಳಲ್ಲಿ ಊಟಕ್ಕೆ ನೀಡುತ್ತಿದ್ದರು. ಊಟ ಮುಗಿದ ನಂತರ ಅವುಗಳನ್ನು ಹಸುಗಳ ಮುಂದೆ ಎಸೆದರೆ ಆಹಾರವಾಗುತ್ತಿತ್ತು. ತಿಪ್ಪೆಗೆ ಎಸೆದರೆ ಗೊಬ್ಬರವಾಗುತ್ತಿತ್ತು. ಮದುವೆ ಮುಂಜಿಯ ಮಂಟಪಗಳಿಗೆ ಬಳಕೆಯಾಗುವ ಬಾಳೇಮರ, ಮಾವಿನ ತೋರಣಗಳು ಕೂಡ 
ಕಳಿತು ಗೊಬ್ಬರವಾಗುವಂತವುಗಳೇ ಇರುತ್ತಿದ್ದವು. ಈಗ ಎಲ್ಲವೂ ಪ್ಲಾಸ್ಟಿಕ್‌ಮಯ.

ಇತ್ತೀಚೆಗೆ ಸಮಾರಂಭಗಳಲ್ಲಿ ರುಚಿ ರುಚಿಯಾದ ಬಿಸಿ ಅಡುಗೆ ಮಾಡಿಸಿ ಪ್ಲಾಸ್ಟಿಕ್‌ನ ಬಣ್ಣ ಬಣ್ಣದ ತಾಟುಗಳಲ್ಲಿ ಹಾಕಿ ಕೊಡುತ್ತಾರೆ. (ತಾಟಿನೊಂದಿಗೆ ಎಷ್ಟು ತೊಳೆದರೂ ಹೋಗದ ಎಣ್ಣೆ ಜಿಡ್ಡು ಉಚಿತ)ಅದರೊಂದಿಗೆ ತೆಳ್ಳಗಿನ ಉಳ್ಳಾಗಡ್ಡೆ ಸಿಪ್ಪೆಯಂತಹ ಪೇಪರನ್ನೂ ಕೊಡುತ್ತಾರೆ. ಅದರಲ್ಲಿ ತಾಟನ್ನು ಉಜ್ಜಿ ಉಜ್ಜಿ ಎಣ್ಣೆ ಅಂಶ ಹೋಯಿತು ಎಂದು ಮನವ ಸಂತೈಸಿ, ಬಿಸಿ ಬಿಸಿ ಖಾದ್ಯ ಪ್ಲಾಸ್ಟಿಕ್ಕಿನ ತಾಟಿನಲ್ಲಿ ತಿಂದರೆ ಕೆಡುಕಲ್ಲವೇ ಎಂಬ ಪಶ್ನೆಯನ್ನು ಮೆದುಳ ಮೂಲೆಗೆ ಸರಿಸಿ ಉಣ್ಣಲೇ ಬೇಕು. ಆಯ್ಕೆಗಳಿರುವುದಿಲ್ಲ. (ಬಿಸಿ ಅಡುಗೆಯೊಂದಿಗೆ ಹೊಟ್ಟೆಗೆ ಸೇರುವ ಪ್ಲಾಸ್ಟಿಕ್ ಅಂಶವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಮನುಷ್ಯರ ಜೀರ್ಣಾಂಗ ವ್ಯವಸ್ಥೆಯಲ್ಲಿರುವುದೇ ಇಲ್ಲ). ಊಟ ಮುಗಿದ ನಂತರ ಒಂದೇ ಗುಟುಕು ನೀರು ಕುಡಿದರೂ ಒಂದು ಪ್ಲಾಸ್ಟಿಕ್ ಕಪ್ ಎಸೆಯಲೇಬೇಕು. ಅಲ್ಲಿಯೂ ಆಯ್ಕೆಗಳಿರುವುದಿಲ್ಲ.

ಸಾವಿರ ಜನ ಸೇರಿದ ಸಮಾರಂಭದಲ್ಲಿ ತಂಪು ಪಾನೀಯ, ನೀರಿನ ಲೋಟ, ಚಹಾ ಕಪ್ ಸೇರಿದರೆ ಮೂರು ಸಾವಿರಕ್ಕಿಂತ ಹೆಚ್ಚು ಪ್ಲಾಸ್ಟಿಕ್ ಗ್ಲಾಸುಗಳು ತ್ಯಾಜ್ಯವಾಗಿ ಭೂಮಿಯೊಡಲು ಸೇರುತ್ತವೆ. ಬೇಸಿಗೆಯಲ್ಲಿ ಪ್ರತಿ ದಿನವೂ ಇಂತಹ ತ್ಯಾಜ್ಯಗಳು ಹಲವಾರು ಟನ್ನಿನಷ್ಟು ವ್ಯರ್ಥವಾಗುತ್ತವೆ. ಅವು ಮರು ಬಳಕೆಗೆ ಯೋಗ್ಯವಾಗುವಂತೆ ಮಾಡುವ ಕೆಲಸಗಳು ಆಗುವುದೇ ಇಲ್ಲ. ನಗರಪಾಲಿಕೆಯವರು ತಂದು ನಿಲ್ಲಿಸುವ ಕಸದ ಗಾಡಿಯಲ್ಲಿ ಎಸೆದರೆ ಅವರು ನಗರದ ಹೊರವಲಯದಲ್ಲಿಯೋ ಜಲಮೂಲಗಳಾದ ನದಿ ಅಥವಾ ಕೆರೆಗಳ ಪಕ್ಕದಲ್ಲಿಯೋ ಸುರಿದು ಭೂಮಿಗೆ ಭಾರವಾಗಿಸುತ್ತಾರೆ. ಸಾಂಕ್ರಾಮಿಕ ರೋಗಗಳು ಹುಟ್ಟಿಕೊಳ್ಳಲು ಕಾರಣವಾಗಿಸುತ್ತಾರೆ. ಕೆಲವೊಮ್ಮೆ ಸುಟ್ಟು ಗಾಳಿಯನ್ನು ಮಲಿನವಾಗಿಸುತ್ತಾರೆ. ಆಹಾರ ಪದಾರ್ಥಗಳೊಂದಿಗೆ ಎಸೆಯುವ ಪ್ಲಾಸ್ಟಿಕ್‌ ಪ್ರಾಣಿ ಪಕ್ಷಿಗಳ ಜೀವಕ್ಕೂ ಕುತ್ತು ತಂದಿಡುತ್ತವೆ.

ನಾವು ಮನೋಭಾವ ಬದಲಿಸಿಕೊಂಡರೆ ಪರಿಹಾರವಿಲ್ಲವೇ? ಖಂಡಿತಾ ಇದೆ. ಊಟಕ್ಕೆ ಸ್ಟೀಲ್ ತಾಟು, ಲೋಟ ಅಥವಾ ವಾಟೆಯನ್ನೇ ಬಳಸಿ. ಪಾತ್ರೆ ತೊಳೆಯುವವರಿಗೆ ಸಂಬಳ ಕೊಟ್ಟರೆ ಬಡವರ ಮನೆಯ ಹೊತ್ತಿನ ಕೂಳಿಗೆ ನೆರವಾಗುತ್ತದೆ. ಕೆಲಸದವರ ಕೊರತೆ ಇದ್ದರೆ ಎಲ್ಲರೂ ಊಟ ಮಾಡಿದ ತಾಟುಗಳನ್ನು ತೊಳೆದಿಟ್ಟು ಹೋಗಬೇಕು ಎಂಬ ಬೋರ್ಡ್‌ ಹಾಕಿ ಅದಕ್ಕೆ ಅಗತ್ಯವಾದ ಸೋಪು ಸ್ಕೃಬ್ಬರ್‌ಗಳನ್ನು ಸಿಂಕಿನ ಬಳಿ ಇಡಬೇಕು. (ಕೆಲವು ಶಾಲೆಗಳು, ಆಫೀಸುಗಳು, ಹಾಸ್ಟೆಲ್‌ಗಳಲ್ಲಿ, ಸ್ವಯಂ ಸೇವಾಸಂಸ್ಥೆಗಳಲ್ಲಿ ಈ ಪ್ರಯೋಗ ಯಶಸ್ವಿಯಾದದ್ದನ್ನು ನೋಡಿದ್ದೇನೆ) ಇದು ಅಸಾಧ್ಯ ಎನ್ನಿಸಿದರೆ ಪರಿಸರಸ್ನೇಹಿಯಾದ ಅಡಿಕೆ ಹಾಳೆಯ ತಟ್ಟೆಗಳನ್ನೋ, ಪೇಪರ್ ಪ್ಲೇಟುಗಳನ್ನೋ, ಕಪ್‌ಗಳನ್ನೋ ಬಳಸಿದರೆ ನಮ್ಮ ಆರೋಗ್ಯಕ್ಕೂ ಹಿತ ಭೂಮಿಗೂ ಹಿತ.

ಪ್ಲಾಸ್ಟಿಕ್ ಹಾಗೂ ಪೇಪರಿನಿಂದ ತಯಾರಿಸುತ್ತಿದ್ದ ಮಂಟಪಕ್ಕೆ ವಿದಾಯ ಹೇಳಿ. ಉತ್ತರ ಕನ್ನಡದಲ್ಲಿ ಪರಿಸರಸ್ನೇಹಿಯಾದ ಮದುವೆ ಮಂಟಪಗಳನ್ನು ಕೆಲ ಕಲಾವಿದರು ನಿರ್ಮಿಸುತ್ತಿದ್ದಾರೆ. ಹೂವು, ಬಾಳೆ ದಿಂಡು, ಕ್ರೋಟಾನು, ರಾಗಿ ಹುಲ್ಲುಗಳನ್ನು ಬಳಸಿ ಮಾಡುವ ಮಂಟಪ ನೋಡಲು ಬಲು ಸೊಗಸು. 

ಪ್ಲಾಸ್ಟಿಕ್ ಬ್ಯಾನ್ ಮಾಡಲು ಆಡಳಿತ ಯಂತ್ರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದೇ ಇಲ್ಲ. ಆಗಾಗ ಆ ಮಾತುಗಳು ಕೇಳಿ ಬಂದರೂ ಪ್ಲಾಸ್ಟಿಕ್ ನಿಷೇಧದ ಕಲ್ಪನೆ ಕ್ಯಾರಿಬ್ಯಾಗಿನಿಂದಾಚೆ ಹೋಗುವುದೂ ಇಲ್ಲ. ಪ್ಲಾಸ್ಟಿಕ್ಕಿಗೆ ಪರ್ಯಾಯವಾದ ಪರಿಸರ ಸ್ನೇಹಿಯಾದ, ಮಡಕೆ ಕುಡಿಕೆಗಳು, ಬಾಳೆಎಲೆ, ಮುತ್ತುಗದೆಲೆಗಳು, ಬೆತ್ತದ ಬುಟ್ಟಿಗಳು, ಬಟ್ಟೆಯ ಚೀಲಗಳತ್ತ ಗ್ರಾಹಕರು ಒಲವು ತೋರಿಸುವಂತಾಗಬೇಕು. ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಪರಿಕರಗಳ ಮಾರಾಟವನ್ನೇ ನಿಷೇಧಿಸಿದರೆ ಮಾತ್ರ ಜನರ ಒಲವು ಬದಲಾದೀತು. ಅದಿಲ್ಲವಾದರೆ ಬೇಸಿಗೆಯಲ್ಲೆಸೆದ ಪ್ಲಾಸ್ಟಿಕ್ ಕಸ ಮಳೆಗಾಲದಲ್ಲಿ ಚರಂಡಿಯ ನೀರು ಹರಿವಿಗೆ ಅಡ್ಡಗೋಡೆ ಹಾಕಿ ರಸ್ತೆಯನ್ನು ತಾತ್ಕಾಲಿಕ ಹಳ್ಳವನ್ನಾಗಿಸುತ್ತವೆ.

ಸಾವಯವ ತ್ಯಾಜ್ಯಗಳನ್ನು ಗೊಬ್ಬರ ತಯಾರಿಕೆಗೆ ಬಳಸಬಹುದು. ತ್ಯಾಜ್ಯಗಳನ್ನು ನಿಯಂತ್ರಿಸುವುದು ನಮ್ಮ ಕೈಯಲ್ಲೇ ಇದೆಯಲ್ಲವೇ? ಭೂಮಿಯ ಮರುಸೃಷ್ಟಿ ನಮ್ಮಿಂದಾಗದ ಕಾರ್ಯ. ಇರುವ ಭೂಮಿಯ ಸ್ವಾಸ್ಥ್ಯ ಕೆಡಿಸದಂತಿರುವುದು ನಮ್ಮಿಂದಾಗುವ ಕಾರ್ಯ ಅಲ್ಲವೇ?

ಆಹಾರವನ್ನು ತ್ಯಾಜ್ಯವಾಗಿಸಬೇಡಿ

ಕೆಲವರು ಮಾಡಿದ ಅಡುಗೆಯನ್ನೆಲ್ಲವನ್ನು ಸವಿಯುವ ಉತ್ಸಾಹದಲ್ಲಿ ತಾಟಿನ ತುಂಬ ಹಾಕಿಸಿಕೊಂಡು ಇಷ್ಟವಾಗದಿರುವುದನ್ನೆಲ್ಲ ಬಿಡುತ್ತಾರೆ. ಅದರ ಬದಲು ಎಲ್ಲವನ್ನು ಸ್ವಲ್ಪ ಸ್ವಲ್ಪವೇ ಹಾಕಿ ಎಂದು ವಿನಂತಿಸಿಕೊಳ್ಳಬೇಕು. ರುಚಿ ನೋಡಿದ ನಂತರ ಇಷ್ಟವಾದ ವ್ಯಂಜನಗಳನ್ನು ನಮಗೆ ಅಗತ್ಯವಿರುವಷ್ಟನ್ನು ಹಾಕಿಸಿಕೊಂಡರೆ ಖಾದ್ಯಗಳು ವ್ಯರ್ಥವಾಗುವುದಿಲ್ಲ. ಅನೇಕರು ಊಟದ ತಟ್ಟೆಯಲ್ಲಿ ಉಳಿಸುವುದನ್ನು ದೊಡ್ಡಸ್ತಿಕೆ ಎಂದುಕೊಳ್ಳುತ್ತಾರೆ. ಕೆಲವೊಮ್ಮೆ ಸಮಾರಂಭದಲ್ಲಿ ತಡವಾಗಿ ಬಂದವರಿಗೆ ಊಟಕ್ಕೆ ನೀಡುವವರಿಗೆ ಅಡುಗೆ ಉಳಿಯುವುದೇ ಇಲ್ಲ. ಒಂದೆಡೆ ಆಹಾರಧಾನ್ಯ ಬೆಳೆಯುವವರು ಕಡಿಮೆಯಾಗುತ್ತಿದ್ದಾರೆ ಎಂಬ ಕಳವಳವಿದೆ. ಎಷ್ಟೋ ಜನರು ಹೊತ್ತಿನ ಕೂಳಿಗೂ ಗತಿ ಇಲ್ಲದೇ ಕಳೆಯುವ ವ್ಯಥೆ ಇದೆ. ಇನ್ನೊಂದೆಡೆ ಸಮಾರಂಭದ ಊಟದಲ್ಲಿ ಅಗತ್ಯಕ್ಕೆ ಮೀರಿ ಹೆಚ್ಚು ಅಡುಗೆ ಮಾಡಿ ತಿಪ್ಪೆಗೆ ಸೇರಿಸುವ ಕೆಲಸವೂ ಆಗುತ್ತಿದೆ. ನೀವೇ ಸಮಾರಂಭದ ನೇತೃತ್ವ ವಹಿಸಿದ್ದಾಗಿದ್ದರೆ, ಆಹಾರ ಪದಾರ್ಥ ಉಳಿದರೆ ಸುಸ್ಥಿತಿಯಲ್ಲಿರುವಾಗಲೇ ಅಗತ್ಯ ಇರುವವರಿಗೆ ತಲುಪಿಸಿ ಅಂತಹುದೊಂದು ಫೋನ್ ನಂ. 9243022309

(ಧಾರವಾಡದ ಅನಾಥಾಲಯ- ಆನಂದ ಗುರೂಜಿ).

Post Comments (+)