ಪ್ಲಾಸ್ಟಿಕ್‌ ಪಳಗಿಸಿ!

7

ಪ್ಲಾಸ್ಟಿಕ್‌ ಪಳಗಿಸಿ!

Published:
Updated:

ಗಗನದಲ್ಲಿ ಹಾರುವ ವಿಮಾನದಿಂದ ಹಿಡಿದು ಹೃದಯದೊಳಗಿನ ಕೃತಕ ಕವಾಟದವರೆಗೆ ‘ನಾನಿಲ್ಲದೆ ನಿಮ್ಮ ಬದುಕೇ ಇಲ್ಲ’ ಎನ್ನುವಂತೆ ಮಾನವನ ಬದುಕಿನ ಎಲ್ಲವನ್ನೂ ಆವರಿಸಿಬಿಟ್ಟಿದೆ ಪ್ಲಾಸ್ಟಿಕ್‌. ಸಾವಿಲ್ಲದ ಮನೆಯ ಸಾಸಿವೆಯನ್ನು ತರುವುದು ಹೇಗೆ ಸಾಧ್ಯವಿಲ್ಲವೋ ಹಾಗೆಯೇ, ಪ್ಲಾಸ್ಟಿಕ್‌ ಇಲ್ಲದ ಮನೆಯಿಂದ ಸಾಸಿವೆಯನ್ನು ತರುವುದು ಕೂಡಾ ಅಸಾಧ್ಯವೇ.

ಇವತ್ತು ಪ್ಲಾಸ್ಟಿಕ್‌ ಸರ್ವಾಂತರ್ಯಾಮಿ. ನೇರವಾಗಿ ನೀವು ಪ್ಲಾಸ್ಟಿಕ್‌ಅನ್ನು ಬೇಡ ಎಂದರೂ, ನಿಮಗೇ ಗೊತ್ತಿಲ್ಲದಂತೆ ಅದು ನಿಮ್ಮ ಮನೆಯೊಳಗೆ ನುಸುಳಿಬಿಟ್ಟಿರುತ್ತದೆ! ಪ್ಲಾಸ್ಟಿಕ್‌ ನಿಷೇಧಿಸಿ ಎಂದು ಎಷ್ಟೇ ಕೂಗಾಡಿದರೂ, ಅದನ್ನು ನಿಷೇಧಿಸುವುದು ಸಾಧ್ಯವಿಲ್ಲ. ಏಕೆಂದರೆ ಅದು ಮಾರುವೇಷದಲ್ಲಿ ನಿಮ್ಮ ಸನಿಹವೇ ಇರುತ್ತದೆ.

ಯಾರಿಗೆ ಗೊತ್ತು? ಯಾವತ್ತೋ ನೀವು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿ ತರಿಸಿದ ಮೊಬೈಲ್‌ ಫೋನ್‌ನ ಪ್ಯಾಕ್‌ ಮೇಲಿದ್ದ ಪ್ಲಾಸ್ಟಿಕ್‌ ಸ್ಟಿಕ್ಕರ್‌, ಇವತ್ತು ನೀವು ಧರಿಸಿದ ಪಾಲಿಸ್ಟರ್ ಶರ್ಟ್‌ ಆಗಿ ಬಂದಿರಬಹುದು! ಹಾಗೆಯೇ  ಎಂದೋ ಬಸ್ಸಿನ ಕಿಟಕಿಯಿಂದ ಬಿಸಾಡಿದ ಪ್ಲಾಸ್ಟಿಕ್‌ನ ಕ್ಯಾರಿ ಬ್ಯಾಗ್‌, ಇನ್ನೆಂದಾದರೂ ನೀವು ಅದೇ ಬಸ್‌ ಏರಿದಾಗ, ಅದರ ಇಂಧನದ ಟ್ಯಾಂಕ್‌ನಲ್ಲಿ ಪೆಟ್ರೋಲ್‌ ರೂಪದಲ್ಲಿ ಬಂದು ಸೇರಿರಬಹುದು!

ಹೌದು, ಪ್ಲಾಸ್ಟಿಕ್‌ಅನ್ನು ಸಂಪೂರ್ಣ ನಿಷೇಧಿಸುವ ಕ್ರಿಯೆಯಲ್ಲಿ ನಾವು ವಿಫಲರಾಗಿದ್ದೇವೆ. ಆದರೆ ಅದನ್ನು ಪಳಗಿಸುವ ಕ್ರಿಯೆಯಲ್ಲಿ ಯಶಸ್ಸು ಕಾಣುತ್ತಿದ್ದೇವೆ. ಜೈವಿಕ ಕ್ರಿಯೆಯಲ್ಲಿ ಕರಗಲಾರೆ ಎನ್ನುವ ಪ್ಲಾಸ್ಟಿಕ್‌ ಮೇಲೆ ಎಲ್ಲರೂ ಕೋಪ ಮಾಡಿಕೊಳ್ಳುವವರೇ. ಆದರೆ, ಪ್ರತಿಸಲ ನಿಷೇಧದ ಬಾಣ ಬಿಟ್ಟಾಗಲೂ ರಕ್ತ ಬೀಜಾಸುರನಂತೆ ಪ್ಲಾಸ್ಟಿಕ್‌ ಬಳಕೆ ಹತ್ತಕ್ಕೆ ನೂರಾಗಿ, ನೂರಕ್ಕೆ ಸಾವಿರವಾಗಿ ಬೆಳೆಯುತ್ತಲೇ ಇದೆ. ಅದಕ್ಕೇ ಈಗ ಹೊಸ ಘೋಷಣೆ– ಪ್ಲಾಸ್ಟಿಕ್‌ ಪಳಗಿಸಿ! 

ಪ್ಲಾಸ್ಟಿಕ್‌ನಲ್ಲಿ ಮುಖ್ಯವಾಗಿ ಎರಡು ವಿಧ. ಒಂದು, ಎಂಜಿನಿಯರಿಂಗ್‌;  ಇನ್ನೊಂದು ಕಮಾಡಿಟಿ (ಪದಾರ್ಥ) ಪ್ಲಾಸ್ಟಿಕ್‌. ಎಂಜಿನಿಯರಿಂಗ್ ಪ್ಲಾಸ್ಟಿಕ್‌ ಅತ್ಯುನ್ನತ ಗುಣಮಟ್ಟದ್ದು (ವಿಮಾನ, ಎಲೆಕ್ಟ್ರಾನಿಕ್‌ ಉಪಕರಣಗಳಲ್ಲಿ ಬಳಕೆಯಾಗುತ್ತದೆ). ಪದಾರ್ಥ ಪ್ಲಾಸ್ಟಿಕ್‌ನಲ್ಲಿ ಸಿಕ್ಕಾಪಟ್ಟೆ ವಿಧಗಳಿದ್ದು, ಕಡಿಮೆ ಮೈಕ್ರಾನ್‌ನ ಕಳಪೆ ಬ್ಯಾಗ್‌ನಿಂದ ಹಿಡಿದು, ಗುಣಮಟ್ಟದ ಪಾಲಿಮರ್‌ ಸರಕಿನವರೆಗೆ ಎಲ್ಲವೂ  ಸೇರಿವೆ. 

ಎಲ್ಲೆಲ್ಲಿ ಪ್ಲಾಸ್ಟಿಕ್‌ ಬಳಕೆ?
ಅತ್ಯಧಿಕ ಪ್ರಮಾಣದ ಪ್ಲಾಸ್ಟಿಕ್‌ ಬಳಕೆ ಮಾಡುತ್ತಿರುವ ಕ್ಷೇತ್ರಗಳಲ್ಲಿ ಪ್ಯಾಕೇಜಿಂಗ್‌ ವಲಯಕ್ಕೆ ಅಗ್ರಸ್ಥಾನ. ನೀವು ದೊಡ್ಡ ಮಾಲ್‌ನಿಂದ ಇಲ್ಲವೇ ಗಲ್ಲಿ ಅಂಗಡಿಯಿಂದ ತರುವ ಎಲ್ಲ ಸಾಮಗ್ರಿಗಳು ಪ್ಲಾಸ್ಟಿಕ್‌ನಿಂದಲೇ ಪ್ಯಾಕ್‌ ಆಗಿರುತ್ತವೆ. ಸರಕು ಘನರೂಪದಲ್ಲಿರಲಿ ಅಥವಾ ದ್ರವರೂಪದಲ್ಲಿರಲಿ, ಅದು ಜಿಗುಟು ಪದಾರ್ಥವಾಗಿರಲಿ ಇಲ್ಲವೆ ಗಾಳಿಯ ಸಂಪರ್ಕಕ್ಕೆ ಬಂದೊಡನೆ ಆವಿಯಾಗುವ ಸೂಕ್ಷ್ಮ ಸ್ಥಿತಿಯಲ್ಲಿರಲಿ – ಆಯಾ ಸರಕಿಗೆ ತಕ್ಕಂತಹ ಪ್ಯಾಕಿಂಗ್‌ ಸೌಲಭ್ಯ ಪ್ಲಾಸ್ಟಿಕ್‌ನಿಂದ ಮಾತ್ರ ಸಾಧ್ಯ. ತನ್ನ ಹೊದಿಕೆಯಲ್ಲಿ ಬೆಚ್ಚಗೆ ಕುಳಿತಿರುವ ಸರಕನ್ನು ತುಂಬಾ ನಾಜೂಕಿನಿಂದ ಕಾಯುವ ಗುಣದಿಂದಾಗಿ ಪ್ಲಾಸ್ಟಿಕ್‌, ಪ್ಯಾಕೇಜಿಂಗ್‌ ವಲಯದ ಅವಿಭಾಜ್ಯ ಅಂಗವಾಗಿದೆ.

ಹೆಚ್ಚಿನ ಶುದ್ಧತೆ ಕಾಪಾಡಿಕೊಳ್ಳಬೇಕಾದ (ಹೈಜಿನ್‌) ಆಹಾರ ಹಾಗೂ ಔಷಧಿ ಪದಾರ್ಥಗಳ ಪ್ಯಾಕಿಂಗ್‌ಗೂ ಪ್ಲಾಸ್ಟಿಕ್‌ ಬೇಕೇ ಬೇಕು. ಲಘು ತೂಕದ ಕಾರಣ ಸರಕುಗಳ ಸಾಗಾಟವನ್ನೂ ಅದು ಸುಲಭಗೊಳಿಸಿದೆ. ಎಲ್ಲ ಕಾಲಕ್ಕೂ ತನ್ನೊಳಗಿನ ಪದಾರ್ಥ ಕೆಡದಂತೆ ತಡೆಯುವ ತಾಕತ್ತು ಹಾಗೂ ಸರಕಿನ ಆಕಾರಕ್ಕೆ ತಕ್ಕಂತೆ ಪ್ಯಾಕಿಂಗ್‌ ಮಾಡಲು ಸಾಧ್ಯವಿರುವ ಸ್ಥಿತಿಸ್ಥಾಪಕ ಗುಣ ಅದರ ಹೆಗ್ಗಳಿಕೆ. ಪ್ಯಾಕೇಜಿಂಗ್‌ ಸಾಮಗ್ರಿಯನ್ನು ಸಂಪೂರ್ಣವಾಗಿ ಮರುಬಳಕೆ ಮಾಡಲು ಸಾಧ್ಯವಿರುವುದು ಅದರ ಪರಿಸರಸ್ನೇಹಿ ಗುಣಕ್ಕೆ ಸಾಕ್ಷಿ. 

ಭಾರ ತಾಳುವಿಕೆ, ದೀರ್ಘ ಬಾಳಿಕೆ ಹಾಗೂ ಕಡಿಮೆ ವೆಚ್ಚದ ಕಾರಣದಿಂದ ಪ್ಲಾಸ್ಟಿಕ್‌ ಸಾಮಗ್ರಿಗಳನ್ನು ನಿರ್ಮಾಣ ಕ್ಷೇತ್ರ ಸಹ ಪ್ರೀತಿಯಿಂದ ಅಪ್ಪಿಕೊಳ್ಳುವಂತೆ ಮಾಡಿದೆ. ಕಟ್ಟಡ ನಿರ್ಮಾಣದಲ್ಲಿ ಅಗತ್ಯವಾದ ಕಿಟಕಿ, ಬಾಗಿಲು, ಪೈಪ್‌, ಕೇಬಲ್‌ ವ್ಯವಸ್ಥೆಗೆ ಈಗೀಗ ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗಿದೆ. ಕಟ್ಟಿಗೆಯ ಲಭ್ಯತೆ ಕಡಿಮೆಯಾಗುತ್ತಿದ್ದು, ದರ ಹೆಚ್ಚುತ್ತಿದೆ. ಹೀಗಾಗಿ ಕಿಟಕಿ, ಬಾಗಿಲು, ಚೌಕಟ್ಟುಗಳಲ್ಲೂ ಪ್ಲಾಸ್ಟಿಕ್‌ ತನ್ನ ಮೂಗು ತೂರಿಸಿದೆ. 

ತುಕ್ಕು ಹಿಡಿಯುವುದಿಲ್ಲ, ಬಣ್ಣ ಹಚ್ಚಬೇಕಿಲ್ಲ, ಒಂದೆಡೆಯಿಂದ ಇನ್ನೊಂದೆಡೆ ಸಾಗಿಸಲು ಹೆಚ್ಚಿನ ಪ್ರಯಾಸಪಡಬೇಕಿಲ್ಲ – ಈ ಗುಣಗಳು ಕಟ್ಟಡದ ಎಂಜಿನಿಯರ್‌ಗಳ ಕಣ್ಣುಗಳು ಪ್ಲಾಸ್ಟಿಕ್‌ನತ್ತ ಹೊರಳಲು ಕಾರಣವಾಗಿವೆ. ಕಟ್ಟಡಕ್ಕೆ ನೀರಿನ ಹಾಗೂ ಚರಂಡಿ ಸಂಪರ್ಕ ಕಲ್ಪಿಸಲು ಲೋಹದ ಪೈಪ್‌ಗಳ ಬಳಕೆ ಈಗ ನಿಂತೇಹೋಗಿದೆ ಎನ್ನುವಷ್ಟು ತಗ್ಗಿದೆ. ಅದರ ಬದಲು ಪಿವಿಸಿ (ಪ್ಲಾಸ್ಟಿಕ್‌) ಪೈಪ್‌ಗಳ ಉಪಯೋಗ ಹೆಚ್ಚಾಗಿದೆ. 

ಎಲ್ಲೆಲ್ಲಿ ಎಲೆಕ್ಟ್ರಿಕ್‌ ಸಾಮಗ್ರಿಗಳಿವೆಯೋ ಅಲ್ಲೆಲ್ಲ ಪ್ಲಾಸ್ಟಿಕ್‌ ಇದ್ದೇ ಇರುತ್ತದೆ. ರೆಫ್ರಿಜರೇಟರ್‌, ವಾಶಿಂಗ್‌ ಮಷಿನ್‌, ಮೈಕ್ರೊ ವೇವ್‌ ಓವನ್‌, ಟಿ.ವಿ, ಕಂಪ್ಯೂಟರ್‌, ಅಷ್ಟೇ ಏಕೆ, ನಿಮ್ಮ ಕೈಯಲ್ಲಿರುವ ಮೊಬೈಲ್‌... ಎಲ್ಲದರಲ್ಲೂ ಪ್ಲಾಸ್ಟಿಕ್‌ ಇದೆ. ಒಮ್ಮೆ ಊಹಿಸಿ ನೋಡಿ, ಮನೆಯಲ್ಲಿ ಎಳೆದ ವೈರ್‌ ಮೇಲೆ ಒಂದುವೇಳೆ ಪ್ಲಾಸ್ಟಿಕ್‌ ಹೊದಿಕೆ ಇಲ್ಲದಿದ್ದರೆ ಏನಾಗುತ್ತಿತ್ತು ಎಂದು. ವಿದ್ಯುತ್‌ ಪ್ರವಹಿಸುವ ಲೋಹದ ತಂತಿಗಳು ಹೊದಿಕೆಗಳಿಲ್ಲದೆ ಮುಕ್ತವಾಗಿ ಇದ್ದಿದ್ದರೆ ನಾವುಗಳೆಲ್ಲ ಸುರಕ್ಷಿತವಾಗಿರಲು ಸಾಧ್ಯವಿತ್ತೇ?
ಕಡಿಮೆ ವೆಚ್ಚದ ಹಾಗೂ ಹೆಚ್ಚು ಸುರಕ್ಷಿತವಾದ ಸಾರಿಗೆ ಸಾಧನಗಳಿಗಾಗಿ ವಾಹನ ಉತ್ಪಾದಕ ಕಂಪನಿಗಳು ಕೂಡ ಪ್ಲಾಸ್ಟಿಕ್‌ ಮೇಲೆ ಹೆಚ್ಚಾಗಿ ಅವಲಂಬನೆಯಾಗಿವೆ. ವಾಹನಗಳ ವೇಗವೃದ್ಧಿಗೆ ಲಘುತೂಕದ ಸಾಮಗ್ರಿಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದ್ದು, ಪ್ಲಾಸ್ಟಿಕ್‌ನಿಂದಾಗಿ ಈಗಿನ ಕಾರುಗಳು ‘ತೂಕ ಇಳಿಸಿಕೊಂಡಿವೆ’. ಯಾವುದೇ ವಾಹನ ಓಡಲು ಇಂಧನ ಬೇಕೇಬೇಕು. ವಾಹನದ ಭಾರ ಹೆಚ್ಚಾಗಿದ್ದಷ್ಟೂ ಬಳಕೆಯಾಗುವ ಇಂಧನದ ಪ್ರಮಾಣ ಕೂಡ ಅಧಿಕವಾಗುತ್ತದೆ. ಎಲ್ಲ ವಿಧದ ವಾಹನಗಳು (ರೈಲು ಸಹ) ಪ್ಲಾಸ್ಟಿಕ್‌ನಿಂದ ತೂಕ ಕಳೆದುಕೊಳ್ಳುತ್ತಿರುವ ಕಾರಣ ಇಂಧನ ಬಳಕೆಯ ಕ್ಷಮತೆ ಹೆಚ್ಚಾಗುತ್ತಿದೆ. ಕಾರಿನ ಉದಾಹರಣೆಯನ್ನೇ ತೆಗೆದುಕೊಂಡರೆ ಹಿಂದೆ ಅದರ ನಿರ್ಮಾಣಕ್ಕಾಗಿ ಸಾವಿರ ಕೆ.ಜಿ. ಲೋಹ ಬಳಕೆ ಆಗುತ್ತಿತ್ತು. ಅದೇ ಕಾರನ್ನು ಈಗ 105 ಕೆ.ಜಿ ಪ್ಲಾಸ್ಟಿಕ್‌ ಬಳಸಿ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಇದರಿಂದ ಶೇ 7.5ರಷ್ಟು ಇಂಧನ ಉಳಿತಾಯ ಮಾಡಲಾಗುತ್ತಿದೆ.

ವಿಮಾನಗಳ ಹಾರಾಟದಲ್ಲಿ ಏರೋಡೈನಾಮಿಕ್‌ ತಂತ್ರಜ್ಞಾನದ ಪ್ರತೀ ಅಗತ್ಯಕ್ಕೆ ಸ್ಪಂದಿಸುವುದು ಮುಖ್ಯ. ಬಯಸಿದಂತಹ ವಿಮಾನದ ವಿನ್ಯಾಸವನ್ನು ಪ್ಲಾಸ್ಟಿಕ್‌ನಿಂದ ಮಾತ್ರ ಮಾಡಲು ಸಾಧ್ಯ. ಲಘುತೂಕದ ಕಾರಣ ವೈಮಾನಿಕ ಕ್ಷೇತ್ರದಲ್ಲೂ ಪ್ಲಾಸ್ಟಿಕ್‌ ಬೇಡಿಕೆಯನ್ನು ಹೆಚ್ಚಿಸಿದೆ. ಜಪಾನ್‌, ಚೀನಾ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಶರವೇಗದಲ್ಲಿ ಓಡುವ ರೈಲುಗಳು ಸಹ ಪ್ಲಾಸ್ಟಿಕ್‌ಮಯವಾಗಿವೆ. ಸಬ್‌ಮರೀನ್‌ಗಳ ನಿರ್ಮಾಣದಲ್ಲೂ ಕೂಡ ಪ್ಲಾಸ್ಟಿಕ್‌ ತಂತ್ರಜ್ಞಾನ ಅಡಿಯಿಟ್ಟಿದೆ.
ಬೆಂಗಳೂರು, ಮುಂಬೈ, ನವದೆಹಲಿ, ಕೋಲ್ಕತ್ತ ಸೇರಿದಂತೆ ದೇಶದ ಯಾವುದೇ ಮಹಾನಗರವನ್ನು ನೋಡಿ, ಎಲ್ಲೆಡೆ ಈಗ ತ್ಯಾಜ್ಯ ವಿಲೇವಾರಿ ಸಮಸ್ಯೆ. ಈ ತ್ಯಾಜ್ಯದಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳ ಹಾವಳಿ ಹೆಚ್ಚು ಎನ್ನುವ ದೂರು ಸಾಮಾನ್ಯ. ಕಳಪೆ ಬ್ಯಾಗ್‌ಗಳಿಂದ ಪರಿಸರದ ಮೇಲೆ ದುಷ್ಪರಿಣಾಮ ಆಗುತ್ತಿರುವುದು ನಿಜ. ಆದರೆ, ಮಿಕ್ಕ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್‌ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಅಲ್ಲದೆ, ಅದನ್ನು ಪರಿಸರಕ್ಕೆ ಪೂರಕವಾಗಿ ಬಳಕೆ ಮಾಡುವಂತೆ ಒಗ್ಗಿಸುವ ಪ್ರಯತ್ನಗಳು ಸಹ ಜೋರಾಗಿ ನಡೆದಿವೆ.

ನಮ್ಮ ರಸ್ತೆಗಳಿಗೆ ನೀರು ಕಂಡರೆ ಎಷ್ಟೊಂದು ಭಯವೆಂದರೆ ಹಾಕಿದ ದಪ್ಪ ಗಾತ್ರದ ಟಾರು ಒಂದೇ ಮಳೆಗೆ ಕಿತ್ತು ಹೋಗುತ್ತದೆ. ಮಳೆ ನೀರು ರಸ್ತೆಯ ಒಡಲೊಳಗೆ ಇಳಿದು ಅಡಿ ಅಡಿಗೂ ಗುಂಡಿಗಳು ಏಳುತ್ತವೆ. ರಸ್ತೆಗಳ ಈ ನೀರಿನ ‘ಭಯ’ ಹೋಗಲಾಡಿಸಲು ಪ್ಲಾಸ್ಟಿಕ್‌ ರಸವೇ ಉತ್ತಮ ‘ಔಷಧಿ’ ಎನ್ನುವುದು ತಜ್ಞರ ಅಭಿಪ್ರಾಯ. ರಾಜ್ಯದ ಕೆಲವು ರಸ್ತೆಗಳಲ್ಲಿ ಈಗಾಗಲೇ ಟಾರಿನ ಜತೆ ಪ್ಲಾಸ್ಟಿಕ್‌ ದ್ರವವನ್ನು ಮಿಶ್ರಣ ಮಾಡಿ ಬಳಸಲಾಗಿದೆ. ಕಾಂಕ್ರೀಟ್‌ ಹಾಕುವ ಮುನ್ನ ನೆಲದ ಮೇಲೆ ಪ್ಲಾಸ್ಟಿಕ್‌ ಕಾರ್ಪೆಟ್‌ ಹರಡುವ ಪರಿಪಾಠವೂ ಬೆಳೆದಿದೆ. ಶಿರಾಡಿ ಘಾಟ್‌ನಲ್ಲಿ ರಸ್ತೆಯನ್ನು ಉನ್ನತ ದರ್ಜೆಗೆ ಏರಿಸುವ ಪ್ರಕ್ರಿಯೆ ಈಗ ಮುಕ್ತಾಯದ ಹಂತದಲ್ಲಿದ್ದು, ಆ ರಸ್ತೆಯಲ್ಲಿ ಒಂದೊಂದು ಪದರ ಹಾಕುವಾಗಲೂ ಅಡಿಪಾಯದಲ್ಲಿ ಪ್ಲಾಸ್ಟಿಕ್‌ನ ಹಾಳೆಯಿದೆ.
ಎಲ್ಲಿ ಪ್ಲಾಸ್ಟಿಕ್‌ ಬೀಜಾಸುರ ಭಸ್ಮಾಸುರನಾಗಿ ನಮ್ಮನ್ನೇ ಹಾಳು ಮಾಡುವನೋ ಎನ್ನುವ ಚಿಂತೆಯಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಉದ್ದಿಮೆದಾರರು ಅದರ ಮರುಬಳಕೆಗೆ ಹಲವು ವಿನೂತನ ವಿಧಾನ ಕಂಡುಕೊಂಡಿದ್ದಾರೆ. ಹೌದು, ಇದು ಭಸ್ಮಾಸುರನನ್ನೇ ಭಸ್ಮ ಮಾಡುವ ತಂತ್ರಜ್ಞಾನ.

ಬೆಂಗಳೂರಿನ ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ನೂರಾರು ಘಟಕಗಳು ಈಗ ಬಳಕೆಯಾದ ಪ್ಲಾಸ್ಟಿಕ್‌ ಬ್ಯಾಗ್ ಮತ್ತು ಬಾಟಲಿಗಳನ್ನು ವಿವಿಧ ರೂಪದಲ್ಲಿ ಮರು ಬಳಕೆಗೆ ಸನ್ನದ್ಧಗೊಳಿಸುತ್ತಿವೆ. ಗಿರಣಿಯಂತಹ ಯಂತ್ರಗಳಿಗೆ ಒಂದೆಡೆಯಿಂದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸುರಿಯುವ ಇಲ್ಲಿನ ಕಾರ್ಮಿಕರು, ಇನ್ನೊಂದೆಡೆಯಿಂದ ಪೈಪು, ಬ್ಯಾಗ್‌, ವೈರ್‌, ತೈಲವನ್ನು ಜಾದೂಗಾರರಂತೆ ತೆಗೆದು ತೋರಿಸುತ್ತಾರೆ.

ಪ್ಲಾಸ್ಟಿಕ್‌ನಿಂದ ನೂಲು ತೆಗೆಯುವ ಯಂತ್ರ ಇನ್ನೂ ಬೆಂಗಳೂರಿಗೆ ಬಂದಿಲ್ಲ. ಆದರೆ, ಪೀಣ್ಯದಲ್ಲಿ ತ್ಯಾಜ್ಯವನ್ನು ಸಿಪ್ಪೆಯಂತೆ ಸುಲಿದು ನೂಲು ತೆಗೆಯಲು ಹೈದರಾಬಾದ್‌ ಮತ್ತು ಮುಂಬೈ ಘಟಕಗಳಿಗೆ ಕಳುಹಿಸಿ ಕೊಡಲಾಗುತ್ತದೆ.
200 ಡಿಗ್ರಿ ಸೆಲ್ಸಿಯಸ್‌ ಶಾಖದಲ್ಲಿ ಪ್ಲಾಸ್ಟಿಕ್‌ ಕರಗುತ್ತದೆ. ಅದೇ 400 ಡಿಗ್ರಿ ಸೆಲ್ಸಿಯಸ್‌ ಶಾಖ ಕೊಟ್ಟಾಗ ನೀರಾಗಿ ಹರಿಯಲು ಆರಂಭಿಸುತ್ತದೆ. ಆ ಶಾಖವನ್ನೇ ದ್ವಿಗುಣಗೊಳಿಸಿದಾಗ (800 ಡಿಗ್ರಿ ಸೆಲ್ಸಿಯಸ್‌) ಅನಿಲವಾಗಿ ಮಾರ್ಪಡುತ್ತದೆ. ಪ್ಲಾಸ್ಟಿಕ್‌ ಕರಗಿಸಿ ಉಂಡೆ ಮಾಡುವ, ನೀರಾಗಿಸಿ ಹೊಸ ಸಾಮಗ್ರಿ ತಯಾರಿಸುವ, ಅನಿಲವಾಗಿಸಿ ಇಂಧನ ಟ್ಯಾಂಕರ್‌ ತುಂಬುವ ಎಲ್ಲ ವಿಧದ ಕೈಗಾರಿಕೆಗಳು ಇಲ್ಲಿ ತಳವೂರಿವೆ.

ಮರುಬಳಕೆ ಹೇಗೆ?
ನಾವು–ನೀವೆಲ್ಲ ಬಳಸಿ ಬಿಸಾಡಿದ ಪ್ಲಾಸ್ಟಿಕ್‌ ಪದಾರ್ಥಗಳು –ವಿಶೇಷವಾಗಿ ಬಾಟಲ್‌ ಮತ್ತು ಬ್ಯಾಗ್‌ಗಳು– ತ್ಯಾಜ್ಯದೊಳಗೆ ಸೇರುತ್ತವೆ; ಇಲ್ಲದಿದ್ದರೆ ಹಾರುತ್ತಾ ಹೋಗಿ ಚರಂಡಿಯೊಳಗೆ ಬಿದ್ದು ಹೂಳು ಹೆಚ್ಚಾಗಲು ಕಾರಣವಾಗುತ್ತವೆ. ಚಿಂದಿ ಆಯುವವರು ಅಂತಹ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಆಯ್ದು ಸಗಟು ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಕಾರರಿಗೆ ಮಾರಾಟ ಮಾಡುತ್ತಾರೆ. ಬೆಂಗಳೂರು ನಗರವೊಂದರಲ್ಲೇ 50 ಸಾವಿರ ಚಿಂದಿ ಆಯುವವರು ಇದ್ದಾರೆ ಎಂಬ ಲೆಕ್ಕಾಚಾರವಿದೆ.

ಚರಂಡಿಯಲ್ಲಿ ಬಿದ್ದ ಕಳಪೆ ಗುಣಮಟ್ಟದ ಪ್ಲಾಸ್ಟಿಕ್‌ ಬ್ಯಾಗ್‌ಗೆ ಕೋಲು ಹಾಕಿ ತೆಗೆಯುವುದು ತುಸು ಕಷ್ಟ. ಅಲ್ಲದೆ, ತೂಕವೇ ಇಲ್ಲದಷ್ಟು ಹಗುರವಾಗಿರುವ ಇಂತಹ ಕಡಿಮೆ ಮೈಕ್ರಾನ್‌ ಬ್ಯಾಗ್‌ಗಳಿಂದ ಚಿಂದಿ ಆಯುವವರಿಗೆ ಹೆಚ್ಚಿನ ಆದಾಯವೂ ಸಿಗುವುದಿಲ್ಲ. ಆದ್ದರಿಂದಲೇ ಬಾಟಲಿ–ದಪ್ಪ ಗಾತ್ರದ ಬ್ಯಾಗ್‌ ಕಡೆಗೆ ಅವರ ಕೋಲು ಹೊರಳುತ್ತದೆ.

ಗುಣಮಟ್ಟದ ಶ್ರೇಣಿಗೆ ತಕ್ಕಂತೆ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಪ್ರತ್ಯೇಕ ಮಾಡಲಾಗುತ್ತದೆ. ಎಲ್ಲ ವಿಧದ ಪ್ಲಾಸ್ಟಿಕ್‌ ಒಟ್ಟುಗೂಡಿಸಿ ಶಾಖ ಕೊಟ್ಟರೆ ಒಂದು ಶ್ರೇಣಿ ಕರಗುವಾಗ ಮತ್ತೊಂದು ನೀರಾಗಿ ಹರಿಯಲು ಆರಂಭಿಸುತ್ತದೆ. ಅಂತಹ ಮಿಶ್ರಣ ಯಾವುದಕ್ಕೂ ಪ್ರಯೋಜನವಿಲ್ಲ. ಪ್ರತ್ಯೇಕಿಸಿದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮೊದಲು ತೊಳೆದು ಒಣಗಿಸಲಾಗುತ್ತದೆ. ಬಳಿಕ ಅವುಗಳ ಶ್ರೇಣಿಗೆ ತಕ್ಕಂತೆ ಯಂತ್ರದ ಗಿರಣಿಗೆ ಹಾಕಿ ಬಿಲ್ಲೆ ಮಾಡುವ ಅಥವಾ ಹೊಸ ಪದಾರ್ಥ ತಯಾರಿಸುವ ಕಾರ್ಯ ನಡೆಯುತ್ತದೆ.
ಬೆಂಗಳೂರು ನಗರ ಒಂದರಲ್ಲೇ ಪ್ಲಾಸ್ಟಿಕ್‌ ಪುನರ್‌ಬಳಕೆ ಕ್ಷೇತ್ರದಲ್ಲಿ ತೊಡಗಿರುವ 1,200 ಸಂಘಟಿತ ಕೈಗಾರಿಕೆಗಳಿದ್ದರೆ, ಏಳು ಸಾವಿರಕ್ಕೂ ಅಧಿಕ ಅಸಂಘಟಿತ ಘಟಕಗಳಿವೆ. ಬೆಂಗಳೂರಿನ ಘನತ್ಯಾಜ್ಯದಲ್ಲಿ ಶೇ 11ರಷ್ಟು ಪ್ಲಾಸ್ಟಿಕ್‌ ಇದೆ. ರಾಜ್ಯದ ಸರಾಸರಿ ತೆಗೆದುಕೊಂಡರೆ ತ್ಯಾಜ್ಯದಲ್ಲಿ ಪ್ಲಾಸ್ಟಿಕ್‌ ಪ್ರಮಾಣ ಶೇ 5ಕ್ಕಿಂತ ಕಡಿಮೆ ಇದೆ.

ತ್ಯಾಜ್ಯ ಕೊಟ್ಟು, ಕಾಸು ಪಡೆಯಿರಿ!
‘ಪ್ಲಾಸ್ಟಿಕ್‌ ಬೇರ್ಪಡಿಸಿ ಕೊಟ್ಟರೆ ಅದು ಎಷ್ಟೇ ಪ್ರಮಾಣದಲ್ಲಿದ್ದರೂ ಖರೀದಿಸಲು ನಾವು ಸಿದ್ಧರಿದ್ದೇವೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಪ್ಲಾಸ್ಟಿಕ್‌ ಸಂಘದ  ಸುರೇಶ್‌ ಸಾಗರ. ‘ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಒಂದೊಂದು ಘಟಕ ಹಾಕಲು ನಾವು ನೆರವು ನೀಡಲಿದ್ದೇವೆ. ಅಲ್ಲಿ ಉತ್ಪಾದನೆಯಾಗುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಅದೇ ಅಪಾರ್ಟ್‌ಮೆಂಟ್‌ನ ಆವರಣದಲ್ಲಿ ಪುಡಿಯಾಗಿಸಿ, ತೂಕಮಾಡಿ, ಹಣಕೊಟ್ಟು ತರುತ್ತೇವೆ’ ಎಂದು ಅವರು ಹೇಳುತ್ತಾರೆ.

‘ಪ್ಲಾಸ್ಟಿಕ್‌ ಮರುಬಳಕೆ ಕೈಗಾರಿಕೆ ಸ್ಥಾಪನೆಗೆ ಮೂಲಸೌಕರ್ಯ ಕಲ್ಪಿಸಬೇಕು. ಘಟಕ ಹಾಕುವವರಿಗೆ ಸಬ್ಸಿಡಿ ಕೊಡಬೇಕು. ಮರುಬಳಕೆ ಉತ್ಪನ್ನಗಳ ಮೇಲಿನ ತೆರಿಗೆ ರದ್ದುಗೊಳಿಸಬೇಕು. ಇದಿಷ್ಟೇ ನಮ್ಮ ಬೇಡಿಕೆ. ರಾಜ್ಯದ ಬೊಕ್ಕಸಕ್ಕೆ ನಮ್ಮಿಂದ ಪ್ರತಿವರ್ಷ ₹120 ಕೋಟಿ ತೆರಿಗೆ ಹೋಗುತ್ತದೆ’ ಎಂದು ಸುರೇಶ್‌ ವಿವರಿಸುತ್ತಾರೆ.

ಉತ್ಕೃಷ್ಟ ಗುಣಮಟ್ಟದ ಪ್ಲಾಸ್ಟಿಕ್‌ ತ್ಯಾಜ್ಯದಿಂದ –ವಿಶೇಷವಾಗಿ ನೀರಿನ ಬಾಟಲಿಯಿಂದ– ಪಾಲಿಸ್ಟರ್‌ ನೂಲು ತೆಗೆಯಲಾಗುತ್ತದೆ. ಈ ವಿಧದ ಪ್ಲಾಸ್ಟಿಕ್‌ ಶೇಕಡಾ ನೂರರಷ್ಟು ಮರು ಬಳಕೆ ಆಗುತ್ತದೆ. ಎರಡು ಲೀಟರ್‌ನ ಐದು ಬಾಟಲಿಗಳಿಂದ ತೆಗೆದ ನೂಲಿನಿಂದ ಮೂರು ಚದರ ಅಡಿಗಳಿಗೆ ಆಗುವಷ್ಟು ಕಾರ್ಪೆಟ್‌ ತಯಾರಿಸಲು ಸಾಧ್ಯ.

ಒಂದು ಟನ್‌ ಪ್ಲಾಸ್ಟಿಕ್‌ ಬಾಟಲಿಗಳನ್ನು ಕರಗಿಸಿದರೆ 3.8 ಬ್ಯಾರಲ್‌ಗಳಷ್ಟು ತೈಲ ಸಿಗುತ್ತದೆ. ಅಲ್ಲದೆ, ಅಷ್ಟೊಂದು ದೊಡ್ಡ ಪ್ರಮಾಣದ ತ್ಯಾಜ್ಯ ಸಂಗ್ರಹ ಪ್ರದೇಶ ಬೇರೆ ಉದ್ದೇಶಗಳಿಗೆ ಬಳಸಲು ಲಭ್ಯವಾಗುತ್ತದೆ. ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಸಿಕ್ಕಾಪಟ್ಟೆ ಬೇಡಿಕೆಯಿದೆ. ಬೇಡಿಕೆಗೆ ತಕ್ಕಷ್ಟು ತ್ಯಾಜ್ಯ ಸಿಗದೆ ಹಲವು ಘಟಕಗಳು ಕಾರ್ಯಾಚರಣೆ ಬಂದ್‌ ಮಾಡಬೇಕಾದ ಸ್ಥಿತಿ ಒದಗಿದೆ. ಪ್ಲಾಸ್ಟಿಕ್‌ ತ್ಯಾಜ್ಯ ಸಂಸ್ಕರಣೆಯ ಗಿರಣಿಗಳದ್ದು ಬಕಾಸುರನ ಹೊಟ್ಟೆ. ಎಷ್ಟು ಹಾಕಿದರೂ ಹಸಿವು ಇಂಗುವುದಿಲ್ಲ. ಹೀಗಾಗಿ ಪಕ್ಕದ ಗೋವಾ ರಾಜ್ಯದಿಂದಲೂ ಪ್ಲಾಸ್ಟಿಕ್ ತ್ಯಾಜ್ಯ ಹೊತ್ತ ಲಾರಿಗಳು ಬೆಂಗಳೂರಿನ ಘಟಕಗಳಿಗೆ ಧಾವಿಸಿ ಬರುತ್ತವೆ.

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳ ಪ್ರಮುಖ ಸಮಸ್ಯೆ ಎಂದರೆ ತ್ಯಾಜ್ಯವನ್ನು ಮೂಲದಲ್ಲೇ ಪ್ರತ್ಯೇಕ ಮಾಡದೇ ಇರುವುದು. ಹೀಗಾಗಿ ಹೇರಳ ಪ್ರಮಾಣದ ಪ್ಲಾಸ್ಟಿಕ್‌, ತ್ಯಾಜ್ಯದಲ್ಲೇ ಉಳಿಯುತ್ತಿದೆ. ಮಂಡೂರಿನಂತಹ ಸಮಸ್ಯೆಗಳು ಉದ್ಭವವಾಗುವುದು ಇಂತಹದ್ದೇ ಕಾರಣದಿಂದ. ನೂರಾರು ಅನಧಿಕೃತ ಘಟಕಗಳು ಬೆಂಗಳೂರಿನ ಸಂದಿ–ಗೊಂದಿಗಳಲ್ಲಿ, ಚರಂಡಿಗಳ ದಂಡೆಯಲ್ಲಿ ತಲೆ ಎತ್ತಿದ್ದು, ಕಳಪೆ ಗುಣಮಟ್ಟದ ಪ್ಲಾಸ್ಟಿಕ್‌ ತಯಾರಿಸುತ್ತಿವೆ. ಈ ಘಟಕಗಳಿಗೆ ಮೂಲಸೌಕರ್ಯ ನೀಡದ ಸರ್ಕಾರ, ಮರುಬಳಕೆ ಉತ್ಪನ್ನಗಳ ಮೇಲೂ ದೊಡ್ಡ ಪ್ರಮಾಣದ ತೆರಿಗೆ ಹಾಕುವುದರಿಂದ ಲಾಭ ಗಿಟ್ಟುವುದಿಲ್ಲ. ಹೀಗಾಗಿ ಇಂತಹ ಅಡ್ಡಮಾರ್ಗ ಹಿಡಿಯಲಾಗುತ್ತದೆ ಎನ್ನುವ ವಾದ ಕೇಳಿಬಂದಿದೆ. 

‘ಬೆಂಗಳೂರಿನಲ್ಲಿ ಚಿಂದಿ ಆಯುವವರನ್ನು ಸಂಘಟಿಸಿ, ಅವರಿಗೆ ಕನಿಷ್ಠ ವೇತನ ಗೊತ್ತುಮಾಡಿ, ಪ್ಲಾಸ್ಟಿಕ್‌ ಆಯ್ದುತಂದ ಪ್ರಮಾಣಕ್ಕೆ ತಕ್ಕಂತೆ ಹಣ ನೀಡುವ ಯೋಜನೆಯನ್ನು ಸಹ ರೂಪಿಸಲಾಗಿತ್ತು. ಹಲವು ಸ್ವಯಂಸೇವಾ ಸಂಸ್ಥೆಗಳು ಕೈಜೋಡಿಸಲು ಮುಂದೆ ಬಂದಿದ್ದವು. ಆದರೆ, ಬಿಬಿಎಂಪಿ ಅಸಹಕಾರದಿಂದ ಯೋಜನೆ ಬಿದ್ದುಹೋಯಿತು’ ಎನ್ನುತ್ತಾರೆ ಪ್ಲಾಸ್ಟಿಕ್‌ ಸಂಘದ ಮತ್ತೊಬ್ಬ ಪ್ರತಿನಿಧಿ ಚಂದ್ರಮೋಹನ್‌.

‘ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಕಾಗದದ ಚೀಲ ಬಳಕೆ ಮಾಡುವ ಮಾತುಗಳನ್ನು ಆಡಲಾಗುತ್ತದೆ. ಅದರಿಂದ ಅರಣ್ಯ ನಾಶವಾಗುವುದಿಲ್ಲವೇ’ ಎಂದು ಅವರು ಪ್ರಶ್ನಿಸುತ್ತಾರೆ. ‘ಗ್ರಾಹಕರಿಗೆ ಕೊಡುವ ಪ್ಲಾಸ್ಟಿಕ್‌ ಬ್ಯಾಗ್‌ಗೆ ಅಂಗಡಿಕಾರರು ದರ ವಿಧಿಸಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಎಸೆಯದಂತೆ ಜನಜಾಗೃತಿ ಉಂಟು ಮಾಡಬೇಕು. ಬೇಕಾಬಿಟ್ಟಿಯಾಗಿ ಪ್ಲಾಸ್ಟಿಕ್‌ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ.

ಪ್ಲಾಸ್ಟಿಕ್‌ ಸಂಘವೂ ಶಾಲೆಗಳಲ್ಲಿ ಜಾಗೃತಿ ಆಂದೋಲನ ನಡೆಸಲು ಉದ್ದೇಶಿಸಿದೆ. ಪಣಜಿ ನಗರದ ಶಾಲೆಗಳಲ್ಲಿ ಮಕ್ಕಳಿಂದ ಪ್ಲಾಸ್ಟಿಕ್‌ ಸಂಗ್ರಹಿಸಿ ಹಣ ನೀಡಲಾಗುತ್ತಿದೆ. ಸರ್ಕಾರ ಕೈಜೋಡಿಸಿದರೆ ಅಂತಹ ಯೋಜನೆಯನ್ನು ಬೆಂಗಳೂರಿನಲ್ಲೂ ತರುವ ಆಸಕ್ತಿ ಸಂಘಕ್ಕಿದೆ.

ಮರುಬಳಕೆ ಮಾಡುತ್ತ ಹೋದರೆ ಮಾತ್ರ ಪ್ಲಾಸ್ಟಿಕ್‌ ತ್ಯಾಜ್ಯದ ಹಾವಳಿ ನಿಯಂತ್ರಿಸಲು ಸಾಧ್ಯ. ಭಸ್ಮಾಸುರ, ಬೀಜಾಸುರನಾಗಿ ಬೆಳೆಯದಂತೆ ಇರುವ ದಾರಿ ಕೂಡ ಇದೊಂದೇ!

ವೈದ್ಯ ಲೋಕದಲ್ಲಿ ಪ್ಲಾಸ್ಟಿಕ್‌
 ಹೆಲ್ತ್‌ಕೇರ್‌ ವಲಯವನ್ನು ಪ್ಲಾಸ್ಟಿಕ್‌ ಇಲ್ಲದೆ ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ವೈದ್ಯಕೀಯ ಲೋಕದಲ್ಲಿ ಬಳಕೆಯಾಗುತ್ತಿರುವ ಬಹುತೇಕ ಉಪಕರಣಗಳು ಪ್ಲಾಸ್ಟಿಕ್‌ನಿಂದಲೇ ರೂಪುಗೊಂಡಂಥವು. ಅದು ಮಾನವ ದೇಹವನ್ನೇ ತನ್ನೊಳಕ್ಕೆ ಬಿಟ್ಟುಕೊಂಡು ದೇಹದ ಪ್ರತಿಯೊಂದು ಭಾಗವನ್ನು ಸ್ಕ್ಯಾನ್‌ ಮಾಡುವ ಎಂಆರ್‌ಐ ಯಂತ್ರವೇ ಆಗಿರಬಹುದು ಇಲ್ಲವೆ ದೇಹದೊಳಕ್ಕೆ ತೂರಿಸುವ ಸಣ್ಣ ಟ್ಯೂಬೇ ಆಗಿರಬಹುದು. ಪ್ಲಾಸ್ಟಿಕ್‌ ಉಪಕರಣಗಳು ಸುರಕ್ಷತೆಯನ್ನು ಹೆಚ್ಚಿಸಿದ್ದು, ನೋವಿನ ಪ್ರಮಾಣವನ್ನೂ ಕಡಿಮೆ ಮಾಡಿವೆ ಎಂದು ವೈದ್ಯಲೋಕವೇ ಹೇಳುತ್ತದೆ. ಬಳಸಿ ಬಿಸಾಡುವ ಸಿರಿಂಜ್‌ಗಳು, ರಕ್ತ ಸಂಗ್ರಹಿಸಿಡುವ ಬ್ಯಾಗ್‌ಗಳು, ಬೈಪಾಸ್‌ ಶಸ್ತ್ರ ಚಿಕಿತ್ಸೆಗೆ ಒಳಗಾದವರ ಹೃದಯದ ಬಡಿತವನ್ನು ಖಚಿತಪಡಿಸುವ ವಾಲ್ವ್‌ಗಳು ಪ್ಲಾಸ್ಟಿಕ್‌ನಿಂದಲೇ ತಯಾರಾಗಿವೆ. ಕನ್ನಡಕಗಳ ಭಾರವನ್ನೂ ಪ್ಲಾಸ್ಟಿಕ್‌ ಹಗುರ ಮಾಡಿದೆ.

   ಕೃತಕ ಮಂಡಿಚಿಪ್ಪು, ನಿತಂಬಗಳ ತಯಾರಿಕೆಯಲ್ಲೂ ಪ್ಲಾಸ್ಟಿಕ್‌ ಮೂಲ ಸರಕು. ಈ ಹಿಂದೆ ವೈದ್ಯಕೀಯ ಕ್ಷೇತ್ರದಲ್ಲಿ ಲೋಹ, ಗ್ಲಾಸ್‌, ಸೆರಾಮಿಕ್‌ಗಳ ಬಳಕೆ ಹೆಚ್ಚಿತ್ತು. ಈಗ ಬಹುತೇಕ ಚಿಕಿತ್ಸೆಗಳಲ್ಲಿ ಆ ಎಲ್ಲ ವಸ್ತುಗಳನ್ನು ಪಾಲಿಮರ್‌ ಆಕ್ರಮಿಸಿಬಿಟ್ಟಿದೆ. ದೇಹದ ನಿರ್ದಿಷ್ಟ ಭಾಗಗಳಲ್ಲಿ ಆಗುವ ರಕ್ತಸ್ರಾವವನ್ನು ತಡೆಯಲು ಪ್ಲಾಸ್ಟಿಕ್‌ ಪಿಲ್‌ ಕೇಸಿಂಗ್‌ಗಳನ್ನು ಬಳಕೆ ಮಾಡಲಾಗುತ್ತದೆ. ಪಾಲಿಮರ್‌ನಲ್ಲಿ ತಯಾರಾದ ಈ ಪಿಲ್‌ ಕೇಸಿಂಗ್‌ಗಳು ನಿಧಾನವಾಗಿ ಒಡೆಯುವುದರಿಂದ ದೇಹದ ನಿರ್ದಿಷ್ಟ ಭಾಗಕ್ಕೆ ಔಷಧಿ ‘ತಲುಪಿಸುವುದು’ ಸಾಧ್ಯವಾಗಿದೆ. ಇಂತಹ ‘ನಿರ್ದಿಷ್ಟ ಗುರಿ ಔಷಧಿ’ ಪದ್ಧತಿಯಿಂದ ರೋಗಿಯು ಅನಗತ್ಯವಾಗಿ ಅಧಿಕ ಪ್ರಮಾಣದ ಔಷಧಿ ನುಂಗುವ ಅಪಾಯ ಇಲ್ಲವಾಗುತ್ತದೆ. ಪಿಲ್‌ ಕೇಸಿಂಗ್‌ಗಳು ನಿಗದಿತವಾಗಿ ಔಷಧಿಯನ್ನು ಬಿಡುಗಡೆ ಮಾಡುವುದರಿಂದ ಚಿಕಿತ್ಸೆ ಪರಿಣಾಮಕಾರಿ ಆಗಿರುತ್ತದೆ ಎಂದು ಹೇಳಲಾಗುತ್ತದೆ. 

ಶ್ರವಣ ದೋಷ ನಿವಾರಣೆ ಯಂತ್ರಗಳು ಸಹ ಪ್ಲಾಸ್ಟಿಕ್‌ನಿಂದಲೇ ತಯಾರು ಆಗಿರುವಂಥವು. ಬೆಡ್‌ ಪ್ಯಾನ್‌ಗಳು, ಇನ್ಸುಲಿನ್‌ ಪೆನ್‌ಗಳು, ಐವಿ ಟ್ಯೂಬ್‌ಗಳು, ಕಪ್‌ಗಳು, ಡಯಾಲಿಸಿಸ್‌ ಟ್ಯೂಬ್‌ಗಳು, ಕೈ ಹಾಗೂ ಮುಖ ಗವಸುಗಳು... ಲೆಕ್ಕ ಹಾಕುತ್ತಾ ಹೋದರೆ ಆಸ್ಪತ್ರೆಗಳಲ್ಲಿ ಬಳಕೆಯಾಗುತ್ತಿರುವ ಪ್ಲಾಸ್ಟಿಕ್‌ಮಯ ಸಾಮಗ್ರಿಗಳಿಗೆ ಕೊನೆಯೇ ಇಲ್ಲ. 

ದೇಹದ ಅವಯವಗಳ 3–ಡಿ ಪ್ರಿಂಟ್‌ಗಳನ್ನು ಸೃಷ್ಟಿಸುವ ಪ್ರಯತ್ನಗಳಿಗೆ ಮಾಧ್ಯಮವಾಗಿದ್ದೂ ಇದೇ ಪ್ಲಾಸ್ಟಿಕ್‌. ಹೃದಯ, ಮೂತ್ರ ಕೋಶ, ರಕ್ತನಾಳ, ಚರ್ಮ, ಎಲುಬು ಮತ್ತು ಕೀಲು ಮೊದಲಾದವನ್ನು 3–ಡಿ ಪ್ರಿಂಟ್‌ ತಂತ್ರಜ್ಞಾನದ ಮೂಲಕ ಯಥಾವತ್ತಾಗಿ ಸೃಷ್ಟಿಸಿ ಸಂಕೀರ್ಣ ಹಾಗೂ ಕಠಿಣ ಶಸ್ತ್ರ ಚಿಕಿತ್ಸೆಗೆ ಮುನ್ನ ಅಭ್ಯಾಸ ಮಾಡಲು ಅವುಗಳನ್ನು ಬಳಕೆ ಮಾಡಲಾಗುತ್ತದೆ. ಸರ್ವಂತರ್ಯಾಮಿಯಾದ ಪ್ಲಾಸ್ಟಿಕ್‌ ಸದ್ದಿಲ್ಲದೆ ಬದುಕನ್ನು ಸಹನೀಯಗೊಳಿಸಿದೆ.

ಗುಣಮಟ್ಟದ ಮೇಲೆ ಶ್ರೇಯಾಂಕ
ಪ್ರತಿಯೊಂದು ವಿಧದ ಪ್ಲಾಸ್ಟಿಕ್‌ನ ಗುಣಮಟ್ಟಕ್ಕೆ ತಕ್ಕಂತೆ ಅವುಗಳಿಗೆ 1ರಿಂದ 7ರವರೆಗೆ ಶ್ರೇಯಾಂಕ ಸಂಖ್ಯೆ ನೀಡಲಾಗುತ್ತದೆ. ಯಾವುದೇ ಪ್ಲಾಸ್ಟಿಕ್‌ ಸಾಮಗ್ರಿ ಸಿದ್ಧಪಡಿಸಿದಾಗ ಈ ಶ್ರೇಯಾಂಕ ಸಂಖ್ಯೆ ಹಾಕುವುದು ಕಡ್ಡಾಯ. ಜನಸಾಮಾನ್ಯರು ಆ ಸಂಖ್ಯೆಗಳನ್ನು ನೋಡಿ ಮನೆಯಲ್ಲಿಯೇ ಪ್ಲಾಸ್ಟಿಕ್‌ ತ್ಯಾಜ್ಯ ಪ್ರತ್ಯೇಕಗೊಳಿಸಲು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ಈ ಸಂಖ್ಯೆ ನೀಡಲಾಗುತ್ತದೆ. ಆಯಾ ಶ್ರೇಯಾಂಕದಲ್ಲಿ ಸಾಮಾನ್ಯವಾಗಿರುವ ಸರಕುಗಳ ಮಾಹಿತಿ ಇಲ್ಲಿದೆ:

4ನಂ. 1 ಪಾಲಿಥಿಲಿನ್ ಟೆರೆಪ್ಯಾಥ್ಲೇಟ್‌ (ಪಿಇಟಿ)
ನೀರು, ತಂಪುಪಾನೀಯ ಹಾಗೂ ಬೀರ್‌ ಬಾಟಲಿಗಳು, ಅಡುಗೆ ಎಣ್ಣೆ ಕಂಟೇನರ್‌ಗಳು, ಓವನ್‌ನಲ್ಲಿ ಬಳಕೆ ಮಾಡುವ ಟ್ರೇಗಳು

4ನಂ. 2 ದಟ್ಟ ಸಾಂದ್ರತೆಯುಳ್ಳ ಪಾಲಿಥಿಲಿನ್‌ (ಎಚ್‌ಡಿಪಿಇ)
ಜ್ಯೂಸ್‌ ಬಾಟಲಿಗಳು, ಫಿನಾಯಿಲ್‌–ಶ್ಯಾಂಪು ಕಂಟೇನರ್‌ಗಳು, ಮೋಟಾರ್‌ ಆಯಿಲ್‌ ಬಾಟಲಿಗಳು

4ನಂ. 3 ಪಾಲಿವಿನೈಲ್‌ ಕ್ಲೋರೈಡ್‌ (ಪಿವಿಸಿ)
ಆಹಾರದ ಪ್ಯಾಕಿಂಗ್‌ ಸಾಮಗ್ರಿಗಳು, ವೈರ್‌ ಜಾಕೆಟ್‌ಗಳು, ವೈದ್ಯಕೀಯ ಉಪಕರಣಗಳು, ಪೈಪ್‌ಗಳು

4ನಂ. 4 ಕಡಿಮೆ ಸಾಂದ್ರತೆಯುಳ್ಳ ಪಾಲಿಥಿಲಿನ್‌ (ಎಲ್‌ಡಿಪಿಇ)
    ಬ್ಯಾಗ್‌ಗಳು, ಪೀಠೋಪಕರಣಗಳು, ಕಾರ್ಪೆಟ್‌ಗಳು

4ನಂ. 5 ಪಾಲಿಪ್ರೊಪೆಲಿನ್‌ (ಪಿಪಿ)
ಸಿರಪ್‌ ಮತ್ತು ಕೆಚಪ್‌ ಬಾಟಲಿಗಳು, ಕ್ಯಾಪ್‌ಗಳು, ಸ್ಟ್ರಾಗಳು, ಔಷಧಿ ಬಾಟಲಿಗಳು

4ನಂ. 6 ಪಾಲಿಸ್ಟೆರಿನ್‌ (ಪಿಎಸ್‌)
ಪ್ಲೇಟ್‌ಗಳು, ಕಪ್‌ಗಳು, ಮಾಂಸದ ಟ್ರೇಗಳು, ಕಾಂಪ್ಯಾಕ್ಟ್‌ ಡಿಸ್ಕ್‌ಗಳು

4ನಂ. 7 ಇತರೆ:
ಸನ್‌ಗ್ಲಾಸ್‌ಗಳು, ಡಿವಿಡಿಗಳು, ಐಪಾಡ್‌ಗಳು, ಕಂಪ್ಯೂಟರ್‌ ಕೇಸ್‌ಗಳು.
 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !