7

ಕ್ಷಣಕ್ಷಣದ ಮಾಲಿನ್ಯ ಪ್ರಮಾಣ ಆನ್‌ಲೈನ್‌ನಲ್ಲಿ ಲಭ್ಯ

Published:
Updated:

ಬೆಂಗಳೂರು: ನಗರದಲ್ಲಿ ಎಲ್ಲೆಲ್ಲಿ ಎಷ್ಟು ಮಾಲಿನ್ಯವಾಗುತ್ತಿದೆ ಎಂಬ ಕ್ಷಣಕ್ಷಣದ ಮಾಹಿತಿ ಆನ್‌ಲೈನ್‌ನಲ್ಲಿ ಜನರಿಗೆ ಸಿಗಲಾರಂಭಿಸಿದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್‌ಸೈಟ್‌ಗೆ ಪ್ರವೇಶಿಸಿದರೆ, ನಗರದ ಯಾವ ಯಾವ ಪ್ರದೇಶಗಳಲ್ಲಿ ಗಾಳಿಯಲ್ಲಿ ತೇಲಾಡುವ ದೂಳಿನ ಕಣ, ಎಸ್ಓ 2 (ಗಂಧಕದ ಡೈ ಆಕ್ಸೈಡ್) ಮತ್ತು ಎನ್ಓ2 (ಸಾರಜನಕದ ಡೈ ಆಕ್ಸೈಡ್), ಕಾರ್ಬನ್‌ ಮೊನಾಕ್ಸೈಡ್‌ ಯಾವ ಪ್ರಮಾಣದಲ್ಲಿದೆ ಮತ್ತು ಓಜೋನ್‌ ಯಾವ ಸ್ಥಿತಿಯಲ್ಲಿದೆ ಎನ್ನುವ ಮಾಹಿತಿ ದೊರಕುತ್ತಿದೆ.

ಮೈಸೂರು ರಸ್ತೆ ಬಳಿಯ ಕವಿಕಾ ಕಟ್ಟಡದಲ್ಲಿ, ಜಯನಗರ 5ನೇ ಹಂತದಲ್ಲಿ, ನಿಮ್ಹಾನ್ಸ್‌, ಸಿಲ್ಕ್‌ ಬೋರ್ಡ್‌ ಹಾಗೂ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿ ಸ್ವಯಂಚಾಲಿತ ಮಾಪನ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಈ 5 ಕೇಂದ್ರಗಳಿಗೆ ಆನ್‌ಲೈನ್‌ ಸಂಪರ್ಕ ಕಲ್ಪಿಸಿದ್ದು, ಒಂದು ವಾರದಿಂದ ಮಾಹಿತಿ ಕ್ರೋಡೀಕರಿಸಿ ವೆಬ್‌ಸೈಟ್‌ನಲ್ಲಿ ದಾಖಲಿಸಲಾಗುತ್ತದೆ.

ಸ್ವಯಂಚಾಲಿತ ಮಾಪಕ ಅಳವಡಿಸಿರುವ ಕೇಂದ್ರಗಳಲ್ಲಿ ಮಾಲಿನ್ಯ ಪ್ರಮಾಣ ಪ್ರತಿ 10 ನಿಮಿಷಗಳಿಗೆ ಸ್ವಯಂ ಚಾಲಿತವಾಗಿ ದಾಖಲಾದರೆ, ಗಾಳಿಯ ಗುಣಮಟ್ಟವನ್ನು ಗಂಟೆ ಗಂಟೆಗೂ ಅಳೆದು ದಾಖಲಿಸಲಾಗುತ್ತದೆ. ರೇಖಾಚಿತ್ರ ಸಹಿತ ಅಂಕಿಅಂಶ ವೆಬ್‌ಸೈಟ್‌ನಲ್ಲಿ ಲಭಿಸಲಿದೆ. ಈ ಕೇಂದ್ರಗಳಲ್ಲಿ ಸ್ವಯಂಚಾಲಿತವಾಗಿ ದಾಖಲಾಗುವ ಮಾಹಿತಿಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಜತೆಗೂ ಹಂಚಿಕೊಳ್ಳಲಾಗುವುದು. ಸಾರ್ವಜನಿಕರಿಗೂ ಮುಕ್ತವಾಗಿ ದೊರಕುವಂತೆ ಮಾಡಲಾಗುವುದು ಎನ್ನುತ್ತಾರೆ ಮಂಡಳಿ ಅಧಿಕಾರಿಗಳು.

‘ನಗರದಲ್ಲಿ ಗಾಳಿಯ ಗುಣಮಟ್ಟ ಅಳೆಯುವ ಎಲ್ಲ 29 ಕೇಂದ್ರಗಳಲ್ಲಿ 2018ರ ಮಾರ್ಚ್‌ ಒಳಗೆ ಸ್ವಯಂಚಾಲಿತ ಮಾಪಕಗಳನ್ನೂ ಅಳವಡಿಸಿ, ಕ್ಷಣಕ್ಷಣದ ಮಾಹಿತಿ ಆನ್‌ಲೈನ್‌ ಲಭಿಸುವಂತೆ ಮಾಡಲು ಮಂಡಳಿ ಗಡುವು ನೀಡಿದೆ. ಇದರಲ್ಲಿ ಮಾನವ ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 14 ಕೇಂದ್ರಗಳನ್ನು ಸ್ವಯಂಚಾಲಿತ ಮಾಪಕ ಕೇಂದ್ರಗಳಾಗಿ ಬದಲಿಸುವ ದೊಡ್ಡ ಸವಾಲು ನಮ್ಮ ಮುಂದಿದೆ’ ಎನ್ನುತ್ತಾರೆ ಅಧಿಕಾರಿಗಳು.

2ನೇ ಹಂತದಲ್ಲಿ 8 ಕೇಂದ್ರಗಳನ್ನು ಹಾಗೂ 3ನೇ ಹಂತದಲ್ಲಿ 13 ಕೇಂದ್ರಗಳನ್ನು ಸ್ವಯಂಚಾಲಿತ ಮಾಪಕಗಳಾಗಿ ಪರಿವರ್ತಿಸಲು ಮಂಡಳಿ ಯೋಜನೆ ಹಾಕಿಕೊಂಡಿದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಮೊದಲೇ ನಗರದ ರೈಲು ನಿಲ್ದಾಣ ಮತ್ತು ಬಸವೇಶ್ವರ ನಗರದ ಎಸ್‌.ಜಿ.ಹಳ್ಳಿಯಲ್ಲಿ ಸ್ವಯಂಚಾಲಿತ ಮಾಪಕ ಕೇಂದ್ರಗಳು ಸ್ಥಾಪಿಸಿತ್ತು. ಪೀಣ್ಯ, ಕಾಡಬೀಸನಹಳ್ಳಿ, ಬಿಟಿಎಂ ಬಡಾವಣೆಗಳಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸ್ವಯಂಚಾಲಿತ ಮಾಪಕ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry