ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 23–1–1968

Last Updated 22 ಜನವರಿ 2018, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳ ಮೇಲೆ ಬೆದರುಗುಂಡು, ಲಾಠಿ ಪ್ರಹಾರ, ಅಶ್ರುವಾಯು
ಬೆಂಗಳೂರು, ಜ. 22–
‘ಕಲ್ಲೆಸೆತದಲ್ಲಿ ತೊಡಗಿದ್ದ’ ಹಿಂದಿ ವಿರೋಧಿ ವಿದ್ಯಾರ್ಥಿಗಳ ಗುಂಪನ್ನು ವಿಶ್ವವಿದ್ಯಾನಿಲಯ ಆವರಣದಿಂದ ಚದುರಿಸಲು ಪೊಲೀಸರು ‘ಆಕಾಶದತ್ತ’ ಆರು ರೌಂಡ್ ಗುಂಡು ಹಾರಿಸಿದರು. ಲಾಠಿ ಪ್ರಹಾರ ಮಾಡಿದರು, 200 ಅಶ್ರುವಾಯು ಷೆಲ್ ಪ್ರಯೋಗಿಸಿದರು. ಇಂದಿನ ಗಲಭೆಯಲ್ಲಿ 112 ಮಂದಿ ಪೊಲೀಸರೂ, 24 ಮಂದಿ ಇತರರೂ ಗಾಯಗೊಂಡರು.

ಉದ್ಭವವಾದ ಪ್ರಕ್ಷುಬ್ಧ ವಾತಾವರಣವನ್ನನುಸರಿಸಿ ನಗರದ ಎಲ್ಲ 36 ಕಾಲೇಜುಗಳನ್ನೂ ಮುಂದಿನ ಸೋಮವಾರದವರೆಗೆ ಮುಚ್ಚುವಂತೆ ವಿಶ್ವವಿದ್ಯಾನಿಲಯವು ಆದೇಶ ನೀಡಿದೆ.

ಚಲನಚಿತ್ರ ಉದ್ದಿಮೆ ಬೆಳವಣಿಗೆಗೆ ಕಾರ್ಪೊರೇಷನ್ 
ಬೆಂಗಳೂರು, ಜ. 22– ರಾಜ್ಯದಲ್ಲಿ ಆಧುನಿಕ ಚಲನಚಿತ್ರ ಸ್ಟುಡಿಯೋ ನಿರ್ಮಿಸಿ, ಚಿತ್ರೋದ್ಯಮದ ಬೆಳವಣಿಗೆಗೆ ಸೌಲಭ್ಯ ಕಲ್ಪಿಸಲು ಒಂದು ಕೋಟಿ ರೂಪಾಯಿಗಳ ಅಧಿಕೃತ ಬಂಡವಾಳದ ಮೈಸೂರು ರಾಜ್ಯ ಚಲನಚಿತ್ರೋದ್ಯಮ ಅಭಿವೃದ್ಧಿ ಕಾರ್ಪೊರೇಷನ್ ರಚಿತವಾಗಿದೆ.

‘ಕೊಠಡಿ ನುಗ್ಗಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ’ ಗೋಕಾಕ್
ಬೆಂಗಳೂರು, ಜ. 22–
‘ವಿಶ್ವ ವಿದ್ಯಾಲಯದ ಗ್ರಂಥಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಾಗೂ ಕನ್ನಡ ಮತ್ತು ಭೂಗರ್ಭ ಶಾಸ್ತ್ರ ವಿಭಾಗದ ಕೊಠಡಿಗಳಲ್ಲಿದ್ದ ಸಿಬ್ಬಂದಿಯ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು’ ಎಂದು ಉಪಕುಲಪತಿ ಪ್ರೊ. ವಿ.ಕೃ. ಗೋಕಾಕ್ ಅವರು ಹೇಳಿದ್ದಾರೆ.

‘ಸೆಂಟ್ರಲ್ ಕಾಲೇಜಿನ ಪ್ರಿನ್ಸಿಪಾಲರನ್ನು ಅವರು ಕೋಣೆಯೊಳಗೆ ನುಗ್ಗಿ ಥಳಿಸಿದರು’ ಎಂದು ಆಪಾದಿಸಿದ ಉಪಕುಲಪತಿಗಳು ‘ನನ್ನ ಅನುಮತಿಯಿಲ್ಲದೆ ಪೊಲೀಸರು ವಿಶ್ವವಿದ್ಯಾಲಯದ ಆವರಣ ಪ್ರವೇಶಿಸಬಾರದಾಗಿತ್ತು, ಇದನ್ನು ನಾನು ಒಳಾಡಳಿತ ಸಚಿವರ ಗಮನ ಸೆಳೆದಿದ್ದೇನೆ’ ಎಂದು ತಿಳಿಸಿದರು.

‘ಪರಿಸ್ಥಿತಿ ಶಾಂತವಾಗಿತ್ತು, ಮಧ್ಯಾಹ್ನ 2.15ಕ್ಕೆ ನಾನು ಮನೆಗೆ ಹೋಗಿ, 2–35ಕ್ಕೆ ವಾಪಸ್ಸು ಬರುವುದರೊಳಗೆ ಇದೆಲ್ಲ (ಪೊಲೀಸರಿಂದ ಆವರಣ ಪ್ರವೇಶ) ನಡೆದು ಹೋಗಿತ್ತು. ‘ಉದ್ವೇಗ ದುಃಖದಿಂದ ಉಪಕುಲಪತಿಗಳ ತುಟಿ ನಡುಗಿತು. ಒಂದು ನಿಮಿಷ ಮಾತು ನಿಂತಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT