ತಮಿಳು ರಾಜಕಾರಣದ ನಿರಂತರ ಕಾರ್ಯತಂತ್ರ

7
ರಾಜೀವ್‌ ಹಂತಕರ ಬಿಡುಗಡೆಗೆ ಒತ್ತಡ

ತಮಿಳು ರಾಜಕಾರಣದ ನಿರಂತರ ಕಾರ್ಯತಂತ್ರ

Published:
Updated:
ರಾಜೀವ್‌ ಗಾಂಧಿ

ರಾಜೀವ್‌ ಗಾಂಧಿ ಹಂತಕರ ಜೈಲು ಶಿಕ್ಷೆ ತಮಿಳುನಾಡಿನಲ್ಲಿ ಭಾವನಾತ್ಮಕ ವಿಚಾರ. ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಈ ವಿಚಾರ ಪ್ರಸ್ತಾಪವಾಗುತ್ತದೆ. ಅಲ್ಲಿನ ಎಲ್ಲ ಪಕ್ಷಗಳೂ ಹಂತಕರ ಬಗ್ಗೆ ಮೃದು ಧೋರಣೆ ಹೊಂದಿವೆ. ರಾಜೀವ್‌ ಹಂತಕರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ರಾಜ್ಯಪಾಲರಿಗೆ ತಮಿಳುನಾಡು ಸಚಿವ ಸಂಪುಟ ಭಾನುವಾರ ಶಿಫಾರಸು ಮಾಡಿದೆ. ಹಾಗಾಗಿ ಈ ವಿಷಯ ಮತ್ತೆ ಚರ್ಚೆಗೆ ಬಂದಿದೆ.
ಈ ಶಿಫಾರಸಿನ ಬಗ್ಗೆ ರಾಜ್ಯಪಾಲರು ಸ್ಪಷ್ಟನೆ ಕೇಳಬಹುದೇ ಹೊರತು ಅದನ್ನು ತಿರಸ್ಕರಿಸಲು ಅವಕಾಶ ಇಲ್ಲ ಎಂಬುದು ಸರ್ಕಾರದ ನಿಲುವು.
ರಾಜೀವ್‌ ಗಾಂಧಿ ಹಂತಕರನ್ನು ಬಿಡುಗಡೆ ಮಾಡಲು ಅನುಮೋದನೆ ನೀಡುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಹಾಗಾಗಿ ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌ ಅವರು ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಜತೆ ಸಮಾಲೋಚನೆ ನಡೆಸಲೇಬೇಕಿದೆ ಎಂದು ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.
ಆದರೆ, ಸಿಬಿಐ ಅಥವಾ ಕೇಂದ್ರ ಸರ್ಕಾರದ ಯಾವುದೇ ಸಂಸ್ಥೆ ತನಿಖೆ ನಡೆಸಿದ ಪ್ರಕರಣದ ಅಪರಾಧಿಗಳ ಬಿಡುಗಡೆಗೆ ಕೇಂದ್ರದ ಅನುಮತಿ ಬೇಕೇಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
2014ರಲ್ಲಿ ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಏಳು ಮಂದಿಯನ್ನು ಬಿಡುಗಡೆ ಮಾಡಲು ಪ್ರಯತ್ನಿಸಿದ್ದರು.

ಜೈಲಿನಲ್ಲಿರುವ ಹಂತಕರು

ಪೇರ್‌ಅರಿವಾಳನ್‌, ಮುರುಗನ್‌, ಶಾಂತನು, ನಳಿನಿ ಶ್ರೀಹರನ್‌, ರಾಬರ್ಟ್‌ ಪಯಸ್‌, ಜಯಕುಮಾರ್‌, ರವಿಚಂದ್ರನ್‌

* ಸಿಬಿಐನ ವಿಶೇಷ ನ್ಯಾಯಾಲಯವು 26 ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿತ್ತು

* ಮುರುಗನ್‌, ಶಾಂತನ್‌, ಪೇರ್‌ಅರಿ ವಾಳನ್‌ ಮತ್ತು ನಳಿನಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು 1999ರ ಮೇಯಲ್ಲಿ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿಯಿತು

* ರಾಬರ್ಟ್‌ ಪಯಸ್‌, ಜಯಕುಮಾರ್‌, ರವಿಚಂದ್ರನ್‌ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಜೀವಾವಧಿ ಶಿಕ್ಷೆಗೆ ಇಳಿಸಿತು

* 19 ಮಂದಿಯನ್ನು ಖುಲಾಸೆ ಮಾಡಲಾಯಿತು

* ಗರ್ಭಿಣಿ ನಳಿನಿ ಜೈಲಿನಲ್ಲಿಯೇ ಮಗುವಿಗೆ ಜನ್ಮವಿತ್ತಳು. ನಳಿನಿಯ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸುವಂತೆ ತಮಿಳುನಾಡು ಸರ್ಕಾರ 2000ನೇ ಇಸವಿ ಏಪ್ರಿಲ್‌ನಲ್ಲಿ ಶಿಫಾರಸು ಮಾಡಿತು. ರಾಜೀವ್‌ ಪತ್ನಿ ಸೋನಿಯಾ ಗಾಂಧಿ ಅವರೂ ನಳಿನಿಯನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡುವಂತೆ ಮನವಿ ಮಾಡಿದ್ದರು.

* ಉಳಿದ ಮೂವರ ಗಲ್ಲು ಶಿಕ್ಷೆಯನ್ನು ಕೂಡ ಸುಪ್ರೀಂ ಕೋರ್ಟ್‌ 2014ರ ಫೆಬ್ರುವರಿಯಲ್ಲಿ ಜೀವಾವಧಿ ಶಿಕ್ಷೆಗೆ ಇಳಿಸಿತು.

ಕರ್ನಾಟಕದ ನಂಟು

* ಹಂತಕರಲ್ಲಿ ಹಲವರು ಕರ್ನಾಟಕದ ವಿವಿಧೆಡೆ ಅಡಗಿಕೊಂಡಿದ್ದರು. ನಳಿನಿ ಮತ್ತು ಮುರುಗನ್‌ ಕೆಲ ಕಾಲ ದಾವಣಗೆರೆಯಲ್ಲಿ ಅಡಗಿಕೊಂಡಿದ್ದರು. ಬಳಿಕ ಅಲ್ಲಿಂದ ಅವರು ಮದುರೈ ಸಮೀಪದ ವಿಲ್ಲುಪುರಂಗೆ ಹೋಗಿದ್ದರು. ಕೊನೆಗೆ, ಚೆನ್ನೈಯಲ್ಲಿ ಅವರಿಬ್ಬರು ಪೊಲೀಸರಿಗೆ ಸೆರೆ ಸಿಕ್ಕರು.

*  ಹತ್ಯೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವರಸನ್‌, ಶುಭಾ ಮತ್ತು ನೇರು ಚೆನ್ನೈಯಿಂದ ತಪ್ಪಿಸಿಕೊಂಡು ಬೆಂಗಳೂರು ತಲುಪುವ ವ್ಯವಸ್ಥೆ ಮಾಡಿದವನು ಶಾಂತನು.

* ವಿಕ್ಕಿ ಅಲಿಯಾಸ್‌ ವಿಘ್ನೇಶ್ವರನ್‌ನನ್ನು ಕೊಯಮತ್ತೂರಿನಲ್ಲಿ ಬಂಧಿಸಲಾಯಿತು. ಶಿವರಸನ್‌ನ ಬೆನ್ನು ಬಿದ್ದಿದ್ದ ಎನ್‌ಎಸ್‌ಜಿ ಕಮಾಂಡೊಗಳು, ವಿಕ್ಕಿ ನೀಡಿದ ಸುಳಿವಿನಂತೆ ಬೆಂಗಳೂರಿನಲ್ಲಿ ಎರಡು ಮನೆಗಳ ಮೇಲೆ ದಾಳಿ ನಡೆಸಿದ್ದರು. ಆದರೆ, ಕಮಾಂಡೊಗಳು ಬಂಧಿಸುವ ಮುನ್ನವೇ, ಈ ಮನೆಗಳಲ್ಲಿ ಇದ್ದ ಎಲ್‌ಟಿಟಿಇಯ ಇಬ್ಬರು ಉಗ್ರರು ಸೈನೈಡ್‌ ತಿಂದು ಸತ್ತರು

* ಮಂಡ್ಯ ಜಿಲ್ಲೆಯ ಮುತ್ತತ್ತಿ ಗ್ರಾಮದ ಮನೆಗಳಲ್ಲಿ ಎಲ್‌ಟಿಟಿಇಯ 12 ಕಾರ್ಯಕರ್ತರು ಅಡಗಿಕೊಂಡಿದ್ದರು. ಅವರೆಲ್ಲರೂ ಗಾಯಗೊಂಡಿದ್ದರು. 1991ರ ಆಗಸ್ಟ್‌ 17ರಂದು ಈ ಮನೆಗಳಿಗೆ ಪೊಲೀಸರು ದಾಳಿ ನಡೆಸಿದರು. ಪೊಲೀಸರು ಮನೆಯ ಒಳಗೆ ಪ್ರವೇಶಿಸುವ ಮುನ್ನವೇ ಅವರೆಲ್ಲರೂ ಸೈನೈಡ್‌ ಕ್ಯಾಪ್ಯೂಲ್‌ ತಿಂದು ಮೃತಪಟ್ಟರು

* ಶಿವರಸನ್‌, ಶುಭಾ ಮತ್ತು ಇತರರು ಬೆಂಗಳೂರಿನ ಕೋಣನಕುಂಟೆಯ ಮನೆಯೊಂದರಲ್ಲಿ ಅಡಗಿದ್ದರು. ಈ ಮನೆಯನ್ನು ಪೊಲೀಸರು ಸುತ್ತುವರಿದರು. ಆದರೆ,‘ಒಳಗಿರುವ ಎಲ್ಲರನ್ನೂ ಜೀವಂತವಾಗಿ ಹಿಡಿಯಬೇಕಿರುವ ಕಾರಣ ವಿಶೇಷ ಕಮಾಂಡೊಗಳು ಬರಲಿದ್ದಾರೆ. ಹಾಗಾಗಿ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಬಾರದು’ ಎಂಬ ಆದೇಶ ಸಿಬಿಐ ಕೇಂದ್ರ ಕಚೇರಿಯಿಂದ ಬಂತು. 36 ತಾಸಿನ ಬಳಿಕ ಕಮಾಂಡೊಗಳು ಕಾರ್ಯಾಚರಣೆಗೆ ಇಳಿದರು. 1991ರ ಆಗಸ್ಟ್‌ 19ರಂದು ಕಮಾಂಡೊಗಳು ಮನೆ ಪ್ರವೇಶಿಸಿದಾಗ ಒಳಗಿದ್ದ ಏಳೂ ಮಂದಿ ಸೈನೈಡ್‌ ಕಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿಯಿತು.

 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !