ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸೆಪ್ಟೆಂಬರ್‌ ಬಂದರೆ ಹಸಿರಾಗುವ ತುಂಗೆ!

Last Updated 15 ಸೆಪ್ಟೆಂಬರ್ 2020, 0:30 IST
ಅಕ್ಷರ ಗಾತ್ರ

ಹೊಸಪೇಟೆ: ಸೆಪ್ಟೆಂಬರ್‌ ಬಂದರೆ ಈ ಭಾಗದ ಜೀವನಾಡಿ ತುಂಗೆ ಹಸಿರಾಗುವಳು!

ಹೌದು, ಕೇಳಲು ಸ್ವಲ್ಪ ಆಶ್ಚರ್ಯ ಅನಿಸಬಹುದು. ಆದರೆ, ಇದು ನಿಜ. ಸೆಪ್ಟೆಂಬರ್‌ ತಿಂಗಳು ಆರಂಭವಾಗುತ್ತಿದ್ದಂತೆ ತುಂಗಭದ್ರೆ ಸಂಪೂರ್ಣ ಹಸಿರಾಗುತ್ತಾಳೆ. ಅದೆಷ್ಟು ಹಸಿರೆಂದರೆ ಆಕೆಯ ಒಡಲಲ್ಲಿರುವ ನೀರು ಥೇಟ್‌ ಹಸಿರು ಬಣ್ಣದಂತೆ ಗೋಚರಿಸಲು ಶುರು ಮಾಡುತ್ತದೆ. ದಿನ ಕಳೆದಂತೆ ಅದು ಸಂಪೂರ್ಣ ಹಸಿರಾಗಿಯೇ ಬದಲಾಗುತ್ತದೆ. ಅದರ ಸುತ್ತಮುತ್ತಲಿನ ಹಸಿರಿನ ಪರಿಸರ ಮೀರುವಷ್ಟು ಅದರ ಬಣ್ಣ ಕಡು ಹಸಿರಾಗುತ್ತದೆ.

ಅಕ್ಟೋಬರ್‌ ಕೊನೆಯ ವಾರದ ವರೆಗೂ ತುಂಗಭದ್ರೆ ಹಸಿರಿನ ಬಣ್ಣದಿಂದ ಹೊರಬರುವುದಿಲ್ಲ. ನವೆಂಬರ್‌ ಆರಂಭವಾಗುತ್ತಿದ್ದಂತೆ ತನ್ನ ಬಣ್ಣ ಕಳಚಿಕೊಂಡು ಮೂಲ ಸ್ವರೂಪಕ್ಕೆ ತಿರುಗುತ್ತಾಳೆ. ಇತ್ತೀಚಿನ ಕೆಲವು ವರ್ಷಗಳಿಂದ ಇದು ನಿರಂತರವಾಗಿ ನಡೆದುಕೊಂಡು ಬರುತ್ತಿದೆ.

ಅಂದಹಾಗೆ, ಇದು ಪ್ರಕೃತಿಯ ವಿಸ್ಮಯವಲ್ಲ. ಮಾನವನಿಂದ ಪ್ರಕೃತಿಯ ಮೇಲೆ ಆಗುತ್ತಿರುವ ಗದಾಪ್ರಹಾರದ ಒಂದು ಭಾಗ. ತುಂಗಭದ್ರಾ ಜಲಾಶಯವೂ ಮಲೆನಾಡನ್ನು ಅವಲಂಬಿಸಿದೆ. ಅಲ್ಲಿ ಮಳೆಯಾದರಷ್ಟೇ ಈ ಅಣೆಕಟ್ಟೆಗೆ ನೀರು ಹರಿದು ಬರುತ್ತದೆ.

ಅದರಲ್ಲೂ ತುಂಗಾ ಮತ್ತು ಭದ್ರಾ ಜಲಾಶಯದಿಂದ ನೀರು ಬಿಟ್ಟರೆ ಇಲ್ಲಿಗೆ ಹರಿದು ಬರುತ್ತದೆ. ಈ ಎರಡೂ ಜಲಾಶಯಗಳಿಂದ ನೀರು ಹರಿದು ಬರುವ ಭಾಗ, ಜಲಾನಯನ ಪ್ರದೇಶದುದ್ದಕ್ಕೂ ಕಾಫಿ, ತೆಂಗು, ಅಡಿಕೆ ತೋಟಗಳಿವೆ. ಸಕ್ಕರೆ ಸೇರಿದಂತೆ ವಿಷಕಾರಕ ರಸಾಯನಿಕ ತ್ಯಾಜ್ಯ ನದಿಗೆ ಬಿಡುವ ಅನೇಕ ಕೈಗಾರಿಕೆಗಳಿವೆ.

ಹೊಲ ಗದ್ದೆ, ಕೈಗಾರಿಕೆಗಳ ವಿಷ ತ್ಯಾಜ್ಯ ನೀರಿನೊಂದಿಗೆ ಸೇರಿಕೊಂಡು ಅಣೆಕಟ್ಟೆಗೆ ಬರುತ್ತದೆ. ಅದರಿಂದ ಬ್ಯಾಕ್ಟಿರಿಯಾಗಳು ಹುಟ್ಟಿಕೊಳ್ಳುತ್ತವೆ. ಇಡೀ ಜಲಾಶಯದ ನೀರನ್ನು ಆ ಬ್ಯಾಕ್ಟಿರಿಯಾಗಳು ಹಸಿರು ಬಣ್ಣಕ್ಕೆ ತಿರುಗಿಸುತ್ತವೆ ಎನ್ನುತ್ತಾರೆ ಪರಿಸರ, ವನ್ಯಜೀವಿ ತಜ್ಞರು.

‘ಮಲೆನಾಡಿನ ತೋಟಗಳಲ್ಲಿ ಯಥೇಚ್ಛವಾಗಿ ರಸಾಯನಿಕ ಗೊಬ್ಬರ ಬಳಸುತ್ತಾರೆ. ನದಿ ದಂಡೆಯಲ್ಲಿರುವ ಹಲವು ಕೈಗಾರಿಕೆಗಳು ಶುದ್ಧಿಕರಿಸದೇ ನೀರನ್ನು ನದಿಗೆ ಬಿಡುತ್ತವೆ. ಮಳೆ ಬಂದಾಗ ತೋಟ, ಕೈಗಾರಿಕೆಗಳ ನೀರು ಅದರೊಂದಿಗೆ ಅಣೆಕಟ್ಟೆಗೆ ಹರಿದು ಬರುತ್ತದೆ. ರಸಾಯನಿಕಗಳಲ್ಲಿರುವ ಫಾಸ್ಪೆಟ್‌, ನೈಟ್ರೇಟ್‌, ಕ್ಲೋರಿಟ್‌, ಸಲ್ಫೆಟ್‌ ಸಸ್ಯ ಪೋಷಕಾಂಶಗಳು. ಸೆಪ್ಟೆಂಬರ್‌ ತಿಂಗಳಲ್ಲಿ ಆಗಾಗ ಮೋಡ ಮುಸುಕಿದ ವಾತಾವರಣ ಇರುತ್ತದೆ. ಬಳಿಕ ಏಕಾಏಕಿ ಭಾರಿ ಬಿಸಿಲು ಬರುತ್ತದೆ. ಈ ಸಂದರ್ಭದಲ್ಲಿ ಸಸ್ಯ ಪೋಷಕಾಂಶಗಳಿಂದ ‘ಸಯಾನೋ’ (ಬ್ಲೂ ಗ್ರೀನ್‌ ಆಲ್ಗಿ) ಎಂಬ ಬ್ಯಾಕ್ಟಿರಿಯಾಗಳು ಹುಟ್ಟಿಕೊಂಡು, ಬಹಳ ಕಡಿಮೆ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತವೆ. ಇಡೀ ಜಲಾಶಯದ ನೀರನ್ನು ಹಸಿರಾಗಿಸುತ್ತವೆ’ ಎನ್ನುತ್ತಾರೆ ಪರಿಸರ ತಜ್ಞ ಸಮದ್‌ ಕೊಟ್ಟೂರು.

‘ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ಸಾಮಾನ್ಯವಾಗಿ ಮಳೆ ಇರುತ್ತದೆ. ಒಂದುವೇಳೆ ಮಳೆ ಇರದಿದ್ದರೂ ಮೋಡ ಮುಸುಕಿದ ವಾತಾವರಣ ಇರುತ್ತದೆ. ಆಗಾಗ ಬಿಸಿಲು ಬೀಳುತ್ತದೆ. ಈ ಸಂದರ್ಭದಲ್ಲಿ ‘ಸಯಾನೋ’ ತನ್ನ ಕಬಂಧಬಾಹುಗಳನ್ನು ಎಲ್ಲೆಡೆ ಚಾಚಿಕೊಳ್ಳುತ್ತದೆ. ನವೆಂಬರ್‌ನಿಂದ ಒಂದೇ ರೀತಿಯ ವಾತಾವರಣ ಇರುತ್ತದೆ. ಬಿಸಿಲು ಹೆಚ್ಚಾಗುತ್ತಿದ್ದಂತೆ ಈ ಬ್ಯಾಕ್ಟಿರಿಯಾಗಳು ಸತ್ತು ಹೋಗಿ ನೀರು ಮೊದಲಿನ ಸ್ವರೂಪಕ್ಕೆ ಹಿಂತಿರುಗುತ್ತದೆ’ ಎಂದರು.

ನೀರು ಆರೋಗ್ಯಕ್ಕೆ ಮಾರಕ:

‘ನೀರು ಹಸಿರಾದಾಗ ಯಾರು ಸಹ ನೇರವಾಗಿ ಅದನ್ನು ಕುಡಿಯಬಾರದು. ಅಷ್ಟೇ ಅಲ್ಲ, ಜಾನುವಾರುಗಳಿಗೂ ಕುಡಿಸಬಾರದು. ನೀರಿನಲ್ಲಿ ಈಜು ಕೂಡ ಆಡಬಾರದು. ಒಂದುವೇಳೆ ನೀರು ಸೇವಿಸಿ, ಈಜಾಡಿದರೆ ಚರ್ಮರೋಗ ಸೇರಿದಂತೆ ನಾನಾ ಕಾಯಿಲೆಗಳು ಬರುತ್ತವೆ. ಈ ಬಗ್ಗೆ ಸಾಮಾನ್ಯ ಜನರಲ್ಲಿ ತಿಳಿವಳಿಕೆ ಕೊರತೆ ಇದೆ’ ಎಂದು ಸಮದ್‌ ಹೇಳಿದರು.

‘ಇದುವರೆಗೆ ನಡೆದ ಸಂಶೋಧನೆಗಳಿಂದ ಈ ಬ್ಯಾಕ್ಟಿರಿಯಾಗಳಿಂದ ಜಲಚರಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿದು ಬಂದಿದೆ. ಆದರೆ, ಇದೇ ರೀತಿ ಅಧಿಕ ಪ್ರಮಾಣದಲ್ಲಿ ರಸಾಯನಿಕ ಬಂದರೆ ಬ್ಯಾಕ್ಟಿರಿಯಾಗಳು ಬೇರೆ ಸ್ವರೂಪಕ್ಕೆ ತಿರುಗಿ ಗಂಡಾಂತರ ಸೃಷ್ಟಿಸಬಲ್ಲವು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ನದಿ ಅಕ್ಕಪಕ್ಕದ ಕೈಗಾರಿಕೆಗಳು ಅಶುದ್ಧ ನೀರು ನದಿಗೆ ಹರಿಸದಂತೆ ಕ್ರಮ ತೆಗೆದುಕೊಳ್ಳಬೇಕು. ರೈತರು ರಸಾಯನಿಕ ಬದಲು ಸಾವಯವ ಕೃಷಿ ಮಾಡಲು ಉತ್ತೇಜಿಸಬೇಕು. ಆಗ ಸಮಸ್ಯೆಗೆ ಪರಿಹಾರ ಸಿಗಬಹುದು. ಇಲ್ಲವಾದರೆ ಗಂಡಾಂತರ ಕಾದಿದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT