ಬಜಾರ್‌ನಲ್ಲಿ ಪಿಒಪಿ ಗಣಪನದ್ದೇ ದರ್ಬಾರ್..! ಕಾಟಾಚಾರಕ್ಕೆ ಆದೇಶ; ಅನುಷ್ಠಾನಕ್ಕಲ್ಲ

7
ಪತ್ರಿಕಾ ಪ್ರಕಟಣೆ–ಕಡತಕ್ಕಷ್ಟೇ ಸೀಮಿತಗೊಂಡ ಆದೇಶ; ಕಾಟಾಚಾರದ ಕಾರ್ಯಾಚರಣೆ

ಬಜಾರ್‌ನಲ್ಲಿ ಪಿಒಪಿ ಗಣಪನದ್ದೇ ದರ್ಬಾರ್..! ಕಾಟಾಚಾರಕ್ಕೆ ಆದೇಶ; ಅನುಷ್ಠಾನಕ್ಕಲ್ಲ

Published:
Updated:
Deccan Herald

ವಿಜಯಪುರ: ಬೆನಕನ ಅಮಾವಾಸ್ಯೆ ಮುಗಿದಿದೆ. ಭಾದ್ರಪದ ಮಾಸ ಆರಂಭಗೊಂಡಿದೆ. ಮೊದಲ ಹಬ್ಬ ಗೌರಿ–ಗಣೇಶ. ಮನೆ ಮನೆ, ಗಲ್ಲಿ–ಗಲ್ಲಿಯಲ್ಲೂ ಗಣಪನ ಪ್ರತಿಷ್ಠಾಪನೆಗೆ ಸಕಲ ತಯಾರಿ ನಡೆದಿದೆ.

ಗಜ ನಾಯಕನ ಪ್ರತಿಷ್ಠಾಪನೆಗಾಗಿ ಜನ ತಂಡೋಪ ತಂಡವಾಗಿ ನಗರವೂ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿನ ಬಜಾರ್‌ಗೆ ದಾಂಗುಡಿಯಿಟ್ಟು ‘ಗಣಪ’ ಖರೀದಿಗೆ ಮುಗಿಬಿದ್ದಿದೆ. ಆದರೆ ಎರಡು ವರ್ಷದ ಹಿಂದೆ ಪಿಒಪಿ ಮೂರ್ತಿಗಳನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದರೂ; ಜಿಲ್ಲೆಯ ಎಲ್ಲೆಡೆ ಎಗ್ಗಿಲ್ಲದೇ ಮಾರಾಟ ಮುಂದುವರೆದಿದೆ. ಪರಿಸರ ಕಾಳಜಿ ಎಂಬುದು ಹೇಳಿಕೆಗಷ್ಟೇ ಸೀಮಿತವಾಗಿದೆ ಎಂಬ ದೂರು ವ್ಯಾಪಕವಾಗಿದೆ.

‘ಪಿಒಪಿ ಗಣಪ ಮೂರ್ತಿ ತಯಾರಕರು, ಮಾರಾಟಗಾರರು, ಬಳಕೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾದ ಜಿಲ್ಲಾಡಳಿತ ಮಾತ್ರ ಜಾಣ ಕುರುಡುತನ ಪ್ರದರ್ಶಿಸಿದೆ. ಭಾನುವಾರ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟಣ್ಣವರ, ಪಾಲಿಕೆ ಆಯುಕ್ತ ಹರ್ಷಶೆಟ್ಟಿ ನೇತೃತ್ವದ ತಂಡ ‘ಮೆಗಾ ಗಣಪ ಡ್ರಾಮಾ’ದ ಶಾಸ್ತ್ರೋಕ್ತ ಕಾರ್ಯಾಚರಣೆ ನಡೆಸಿತು.

ಈ ಸಂದರ್ಭ ದಾರಿ ಬದಿ ಮಾರಾಟ ಮಾಡುತ್ತಿದ್ದ ಬಡ ಕುಂಬಾರಳ ಗಣಪ ಮೂರ್ತಿಗಳನ್ನು ಟ್ರಕ್‌, ಟ್ರ್ಯಾಕ್ಟರ್‌ಗೆ ತುಂಬಿಕೊಂಡ ಅಧಿಕಾರಿ ಸಮೂಹ, ನಗರದ ವಿಠ್ಠಲ ಮಂದಿರ ರಸ್ತೆ, ಆಜಾದ್‌ ರಸ್ತೆಯ ಮಳಿಗೆಗಳಲ್ಲಿ ಮಾರಾಟ ಮಾಡುತ್ತಿರುವ ವರ್ತಕರ ತಂಟೆಗೆ ಹೋಗದೆ, ಪಾಲಿಕೆ ಸದಸ್ಯ ರಾಹುಲ ಜಾಧವ ಪ್ರಭಾವಕ್ಕೆ ಮಣಿದು ವಾಪಸ್ಸಾಗಿದ್ದಕ್ಕೆ’ ನಗರದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕಾಟಾಚಾರಕ್ಕಷ್ಟೇ ಆದೇಶ; ಅನುಷ್ಠಾನಕ್ಕಲ್ಲ..!

‘ಪ್ಲಾಸ್ಟರ್ ಆಫ್ ಪ್ಯಾರಿಸ್, ಬಣ್ಣದ ಗಣೇಶ ಹಾಗೂ ರಾಸಾಯನಿಕ ಬಣ್ಣ ಲೇಪಿತ ಗಣಪ ವಿಗ್ರಹಗಳನ್ನು ಮಾರಾಟ ಮಾಡಬಾರದು. ಸಾರ್ವಜನಿಕವಾಗಿ, ಮನೆಗಳಲ್ಲೂ -ಸ್ಥಾಪಿಸದೆ ನೈಸರ್ಗಿಕ ಜೇಡಿ ಮಣ್ಣಿನ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಗಣೇಶ ಚತುರ್ಥಿ ಸಂದರ್ಭ ಬಳಸುವಂತೆ ವಿಜಯಪುರ ಮಹಾನಗರ ಪಾಲಿಕೆ ಆಡಳಿತ ಕಳೆದ ಜೂನ್‌ 12ರಂದು ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿತ್ತು.

ಇದೇ ಪ್ರಕಟಣೆಯಲ್ಲಿ ಪಿಒಪಿ ಗಣಪತಿ ವಿಗ್ರಹಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರವಾಗಿದ್ದು, ಪರಿಸರ ಅಧಿನಿಯಮ 1986ರಡಿ ದಂಡನಾರ್ಹ ಅಪರಾಧವಾಗಿರುತ್ತದೆ. ಸರ್ಕಾರ 2016ರಿಂದಲೂ ಈ ವಿಗ್ರಹಗಳನ್ನು ನಿಷೇಧಿಸಿದೆ. ಮಾರಾಟ–ಉಪಯೋಗ ಕಂಡು ಬಂದಲ್ಲಿ ಅಂತಹವರ ವಿರುದ್ಧ, ಪರಿಸರ ಅಧಿನಿಯಮದಂತೆ ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯ ಒಕ್ಕಣೆಯೂ ನಮೂದಾಗಿತ್ತು. ಆದರೆ ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆಯ ಚಿತ್ರಣವೇ ಬೇರೆಯಿದೆ’ ಎನ್ನುತ್ತಾರೆ ನಗರದ ನಿವಾಸಿ ಸುರೇಶ ಪರಗೊಂಡೆ.

‘ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಪಿಒಪಿ ಗಣಪ ಮೂರ್ತಿಗಳ ಕಾರುಬಾರೇ ಕಂಡುಬರುತ್ತಿದೆ. ಗಣೇಶನ ಹಬ್ಬಕ್ಕೆ ಬೆರಳೆಣಿಕೆ ದಿನವಿದೆ. ಈಗಾಗಲೇ ಸಹಸ್ರ, ಸಹಸ್ರ ಮೂರ್ತಿಗಳ ಮಾರಾಟವಾಗಿದೆ. ಜಿಲ್ಲಾಡಳಿತ ಕುಂಭಕರ್ಣ ನಿದ್ರೆಯಿಂದ ಇನ್ನೂ ಎಚ್ಚೆತ್ತುಕೊಂಡಿಲ್ಲ.

ಸ್ವಯಂ ಘೋಷಿತ ಪರಿಸರವಾದಿಗಳು, ಪರಿಸರ ಪ್ರೇಮಿಗಳು ಈ ಬಗ್ಗೆ ಚಕಾರ ಎತ್ತಿಲ್ಲ. ಗಣೇಶೋತ್ಸವ ಎಲ್ಲಾ ನಿಯಮಾವಳಿಗಳನ್ನು ಉಲ್ಲಂಘಿಸಿ ನಡೆಯುತ್ತಿವೆ. ಇದನ್ನು ತಡೆಗಟ್ಟಬೇಕಾದ ಅಧಿಕಾರಿ ಸಮೂಹ ಮಾತ್ರ ಕಾಟಾಚಾರದ ಕಾರ್ಯಾಚರಣೆ ನಡೆಸುತ್ತಿದೆ’ ಎಂದು ಅವರು ದೂರಿದರು.

ಪರ್ಯಾಯ ವ್ಯವಸ್ಥೆಯಿಲ್ಲ; ಅನಿವಾರ್ಯ

‘ಜಿಲ್ಲೆಯ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿಗೆ ಕನಿಷ್ಠ 1 ಲಕ್ಷ ಮೂರ್ತಿಗಳು ಬೇಕಿವೆ. 10% ಮಣ್ಣಿನ ಗಣಪ ಸಿಕ್ಕರೆ ಹೆಚ್ಚು. ಪರಿಸರ ಕಾಳಜಿ, ಸುಪ್ರೀಂಕೋರ್ಟ್‌ನ ತೀರ್ಪು ನಮಗೂ ಅರಿವಿದೆ. ಆದರೆ ಜನರ ಧಾರ್ಮಿಕ ಭಾವನೆಗೆ ಧಕ್ಕೆಯಾಗಬಾರದು ಎಂಬುದು ನಮ್ಮ ಆಶಯ’ ಎಂದು ಮಹಾನಗರ ಪಾಲಿಕೆ ಸದಸ್ಯ ರಾಹುಲ ಜಾಧವ ತಿಳಿಸಿದರು.

‘ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಮಾಡಬೇಕು. ಪಿಒಪಿ ಗಣಪ ಮೂರ್ತಿಗಳ ವಿಸರ್ಜನೆಗಾಗಿ ಕೃತಕ ಹೊಂಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸಬೇಕು. ಭಾವನೆಗೆ ಧಕ್ಕೆಯಾಗದಂತೆ ವಿಲೇವಾರಿ ನಡೆಸಬೇಕು’ ಎಂದು ಅವರು ಆಗ್ರಹಿಸಿದರು.

ಪರಂಪರೆ ಬಿಡಲಾಗದು; ಸಮಯ ಬೇಕಿದೆ

‘ಈಚೆಗೆ ಎಲ್ಲೆಡೆ ಪಿಒಪಿ ಮಯ. ಸರ್ಕಾರಿ ಕಚೇರಿಗಳಲ್ಲೂ ಪಿಒಪಿ ಬಳಸಿದ್ದಾರೆ. ಆದರೆ ಧಾರ್ಮಿಕ ವಿಷಯದಲ್ಲಿ ಮಾತ್ರ ಸಮಸ್ಯೆಯಿದೆ. ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು’ ಎನ್ನುತ್ತಾರೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವರುದ್ರ ಬಾಗಲಕೋಟ.

‘ನಮ್ಮ ಜಿಲ್ಲೆಯಲ್ಲಿ ಗಣಪ ಮೂರ್ತಿ ತಯಾರಿಕೆಗೆ ಅಗತ್ಯವಿರುವ ಮಣ್ಣು ಸಿಗಲ್ಲ. ಹೊರಗಿನಿಂದ ತರಿಸಿ ಮೂರ್ತಿ ಮಾಡುವುದು ದುಬಾರಿ. ಯಾರೊಬ್ಬರೂ ತುಟ್ಟಿ ಗಣಪ ಮೂರ್ತಿ ಖರೀದಿಸಲ್ಲ. ಇದರ ಜತೆಗೆ ಮಣ್ಣಿನ ಮೂರ್ತಿ ಬಿರುಕು ಬಿಡುತ್ತವೆ. ಹಿಂಗಾದರೆ ಅಪಶಕುನ ಎಂಬುದು ನಮ್ಮ ನಂಬಿಕೆ.

ಪಿಒಪಿಗೆ ಪರ್ಯಾಯವಾಗಿ ಮಣ್ಣಿನ ಮೂರ್ತಿ ಬಳಸಲು ಇನ್ನೂ ಸಮಯ ಬೇಕಿದೆ. ಜಾಗೃತಿ ಮೂಡಿಸುವ ಕೆಲಸ ನಡೆದಿದೆ. ಜಿಲ್ಲಾಡಳಿತ ಮಣ್ಣಿಗೆ ಸಬ್ಸಿಡಿ ನೀಡಿದರೆ, ಕುಂಬಾರರಿಗೆ ವರ್ಷ ಪೂರ್ತಿ ಕೆಲಸ ಸಿಕ್ಕಂತಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಆಲೋಚಿಸಬೇಕಿದೆ’ ಎಂದು ಶಿವರುದ್ರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !