ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೀರಾಸ್ ಬೀಗರೂಟ’ದ ಸಿಗ್ನೇಚರ್‌ ತಿನಿಸುಗಳು

Last Updated 16 ಜೂನ್ 2018, 10:59 IST
ಅಕ್ಷರ ಗಾತ್ರ

ಮಂಡ್ಯ, ಮೈಸೂರು ಮತ್ತು ಹಾಸನಭಾಗದ ನಾಟಿ ಶೈಲಿಯ ಮಾಂಸಾಹಾರ ಉಣಬಡಿಸಲು ಪ್ರಸಿದ್ಧಿ ಪಡೆದಿದೆ, ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ‘ಮೀರಾಸ್‌ ಬೀಗರ ಊಟ’ ರೆಸ್ಟೊರೆಂಟ್‌. ಮಧು ಈ ಹೋಟೆಲ್‌ನ ಮಾಲೀಕರು. ಇವರು ಈ ರೆಸ್ಟೊರಾದ ಮಾಲೀಕರಷ್ಟೇ ಅಲ್ಲ; ಅದ್ಭುತ ಕೈರುಚಿ ಇರುವ ಬಾಣಸಿಗರೂ ಹೌದು.

ಚಿಕ್ಕಂದಿನಿಂದಲೂ ಅಡುಗೆ ಮಾಡುವುದನ್ನೇ ಹವ್ಯಾಸವಾಗಿ ರೂಢಿಸಿಕೊಂಡಿದ್ದ ಮಧು, ತಮ್ಮ ರೆಸ್ಟೊರೆಂಟ್‌ನಲ್ಲಿ ತಯಾರಿಸುವ ಎಲ್ಲ ಮಾಂಸಾಹಾರ ಖಾದ್ಯಗಳಿಗೆ ಬಳಸುವುದು ಮನೆಯಲ್ಲಿ ತಯಾರಿಸಿದ ಮಸಾಲ ಪದಾರ್ಥಗಳನ್ನೇ. ಹಾಗಾಗಿಯೇ, ಇಲ್ಲಿನ ಮಾಂಸಾಹಾರ ಖಾದ್ಯಗಳಿಗೆ ಅಮ್ಮನ ಕೈರುಚಿಯ ಗುಣವಿದೆ. ಇಂತಿಪ್ಪ ಮಧು ತಮ್ಮ ರೆಸ್ಟೊರೆಂಟ್‌ನ ನಾಲ್ಕು ಸಿಗ್ನೇಚರ್‌ ತಿನಿಸುಗಳ ರೆಸಿಪಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.

*
ಪುದೀನಾ ಚಿಕನ್‌ ಗ್ರೇವಿ
ಬೇಕಾಗುವ ಸಾಮಗ್ರಿಗಳು: ಚಿಕನ್‌ – 1/2ಕೆ.ಜಿ., ದಪ್ಪಗೆ ಕತ್ತರಿಸಿದ ಈರುಳ್ಳಿ – 2, ಹಸಿರು ಮೆಣಸಿನಕಾಯಿ – 10, ಕಾಳುಮೆಣಸು – 2ಟೇಬಲ್‌ ಸ್ಪೂನ್‌ , ಗಸಗಸೆ – 2ಟೇಬಲ್‌ ಸ್ಪೂನ್‌, ಹುರಿಗಡಲೆ – 25ಗ್ರಾಂನಷ್ಟು, ಕಾಯಿತುರಿ – ಒಂದು ಚಿಕ್ಕ ಹೋಳು , ಪುದಿನಾ – 1ಕಟ್ಟು , ಕೊತ್ತಂಬರಿ – ಅರ್ಧಕಟ್ಟು , ಚಕ್ಕೆ – ಸ್ವಲ್ಪ , ಲವಂಗ, ಧನಿಯಾ – 2ಚಮಚ , ಅರಿಸಿನ – 2ಚಮಚ, ಶುಂಠಿ–ಬೆಳ್ಳುಳ್ಳಿ, ಎಣ್ಣೆ, ಸಣ್ಣಗೆ ಕತ್ತರಿಸಿಟ್ಟುಕೊಂಡ ಈರುಳ್ಳಿ – 2 ಮತ್ತು ಒಂದು ಟೊಮೊಟೊ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಮೊದಲಿಗೆ ಸ್ಟೌ ಹಚ್ಚಿ ಬಾಣಲೆಯನ್ನು ಒಲೆಯ ಮೇಲಿಟ್ಟು ಕಾಳುಮೆಣಸು ಮತ್ತು ಗಸಗಸೆಯನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು (ಎಣ್ಣೆ ಹಾಕಬಾರದು). ನಂತರ ಅದನ್ನು ತೆಗೆದು ಪಕ್ಕಕ್ಕೆ ಇಟ್ಟುಕೊಳ್ಳಬೇಕು. ನಂತರ ಅದೇ ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಹಸಿರು ಮೆಣಸಿನಕಾಯಿ, ದಪ್ಪಗೆ ಕತ್ತರಿಸಿದ ಎರಡು ಈರುಳ್ಳಿ, ಪುದಿನಾ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ನಂತರ ಅದಕ್ಕೆ ಕಾಯಿತುರಿ ಹಾಕಿ ಹುರಿದುಕೊಳ್ಳಬೇಕು. ಹೀಗೆ ಫ್ರೈ ಮಾಡಿ ತೆಗೆದಿಟ್ಟ ಪದಾರ್ಥಗಳಿಗೆ ಶುಂಠಿ ಬೆಳ್ಳುಳ್ಳಿ, ಚಕ್ಕೆ, ಲವಂಗ, ಹುರಿಗಡಲೆ ಹಾಕಿಕೊಂಡು ತರಿತರಿ ಆಗಿರುವಂತೆಯೇ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.

ನಂತರ, ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಸಣ್ಣಗೆ ಕತ್ತರಿಸಿಟ್ಟುಕೊಂಡ ಈರುಳ್ಳಿಯನ್ನು ಫ್ರೈ ಮಾಡಿ ನಂತರ ಅದಕ್ಕೆ ಚಿಕನ್‌ ಹಾಕಿಕೊಳ್ಳಬೇಕು. ಆಮೇಲೆ ಅದಕ್ಕೆ ಅರಿಸಿನ, ಉಪ್ಪು ಹಾಕಿ ಬೇಯಿಸುವುದನ್ನು ಮುಂದುವರಿಸಬೇಕು. ಆಗ ಚಿಕನ್‌ನಲ್ಲಿರುವ ನೀರಿನಂಶ ಬಿಟ್ಟುಕೊಳ್ಳುತ್ತಾ ಹೋಗುತ್ತದೆ. ಆ ನೀರು ಡ್ರೈ ಆಗುವವರೆಗೂ ಚೆನ್ನಾಗಿ ಬೇಯಿಸುತ್ತಿರಬೇಕು. ಹೀಗೆ ಮಾಡುವುದರಿಂದ ಚಿಕನ್‌ನಲ್ಲಿರುವ ಕೆಟ್ಟ ವಾಸನೆ ಹೋಗಿ ಒಳ್ಳೇ ಸ್ವಾದ ಬರುತ್ತದೆ. ಇಷ್ಟರಲ್ಲಾಗಲೇ ಚಿಕನ್‌ ಶೇ 60 ಬೆಂದಿರುತ್ತದೆ. ನಂತರ ಅದಕ್ಕೆ ರುಬ್ಬಿಟ್ಟುಕೊಂಡ ಮಸಾಲೆ ಹಾಕಬೇಕು. ಆಮೇಲೆ, ಅದಕ್ಕೆ ಸಣ್ಣಗೆ ಕತ್ತರಿಸಿಟ್ಟುಕೊಂಡ ಟೊಮೊಟೊ ಹಾಕಬೇಕು. ಗ್ರೇವಿ ಖಾರ ಇರಬೇಕು ಅಂದರೆ ಸ್ವಲ್ಪ ಪೆಪ್ಪರ್‌ ಪೌಡರ್‌ ಹಾಕಿಕೊಳ್ಳಬಹುದು. ಇದು ಚಪಾತಿ, ಪರೋಟಕ್ಕೆ ಒಳ್ಳೆಯ ಕಾಂಬಿನೇಷನ್‌.

*


ನಾಟಿ ಶೈಲಿಯ ಬಂಗುಡೆ ಫಿಶ್‌ ಫ್ರೈ
ಬೇಕಾಗುವ ಸಾಮಗ್ರಿಗಳು:
ಸ್ವಚ್ಛಗೊಳಿಸಿದ ಬಂಗುಡೆ ಮೀನು, ಚಿಲ್ಲಿ ಪೌಡರ್‌ – 2ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ – ಸ್ವಲ್ಪ, ಅಡುಗೆ ಕೊಬ್ಬರಿ ಎಣ್ಣೆ, ರಿಫೈಂಡ್‌ ಆಯಿಲ್‌ ಮತ್ತು ಉಪ್ಪು.

ತಯಾರಿಸುವ ವಿಧಾನ: ಮೊದಲಿಗೆ ಸ್ವಚ್ಛಗೊಳಿಸಿದ ಬಂಗುಡೆ ಮೀನಿಗೆ ಸ್ವಲ್ಪ ಉಪ್ಪು, ನಿಂಬೆರಸ ಹಚ್ಚಿ ಪಕ್ಕಕ್ಕೆ ಇಟ್ಟುಕೊಳ್ಳಬೇಕು. ನಂತರ ಚಿಲ್ಲಿಪೌಡರ್‌, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಗೂ ಉಪ್ಪು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಂಡ ಮಸಾಲೆಯನ್ನು ಸೀಳಿದ ಬಂಗುಡೆ ಮೀನಿಗೆ ಹಚ್ಚಿ ಅರ್ಧ ಗಂಟೆ ನೆನೆಸಲು ಇಡಬೇಕು. ಆಮೇಲೆ, ಸ್ಟೌ ಹಚ್ಚಿ ಅದರ ಮೇಲೆ ಪ್ಯಾನ್‌ ಇಟ್ಟು ಬಿಸಿಯಾದ ನಂತರ ಅಡುಗೆಯ ಕೊಬ್ಬರಿ ಎಣ್ಣೆ ಮತ್ತು ರಿಫೈಂಡ್‌ ಆಯಿಲ್‌ ಹಾಕಿ ಚೆನ್ನಾಗಿ ನೆನೆದ ಬಂಗುಡೆ ಮೀನು ಇಟ್ಟು ಬೇಯಿಸಬೇಕು. ಎರಡೂ ಕಡೆ ಬೇಯಿಸಿದ ನಂತರ ಘಮಘಮಿಸುವ ಬಂಗುಡೆ ಮೀನಿನ ಫ್ರೈ ಸವಿಯಲು ಸಿದ್ಧ.

*


ಚಿಕನ್‌ ಕ್ಷತ್ರಿಯ ಕಬಾಬ್‌
ಬೇಕಾಗುವ ಸಾಮಗ್ರಿಗಳು:
ಚಿಕನ್‌ ಡ್ರಮ್‌ಸ್ಟಿಕ್‌ – ಅರ್ಧ ಕೆ.ಜಿ., ಹಸಿರು ಮೆಣಸಿನಕಾಯಿ –10ರಿಂದ 12, ಶುಂಠಿ, ಬೆಳ್ಳುಳ್ಳಿ, ಕಾರ್ನ್‌ಪ್ಲೋರ್‌, ಅರಿಸಿನ – ಅರ್ಧ ಚಮಚ, ಲೆಮೆನ್‌ ಎಲ್ಲೊ ಕಲರ್‌ – ಮೂರು ಚಿಟಿಕೆ, ಮೊಟ್ಟೆ –ಎರಡು, ನಿಂಬೆಹಣ್ಣು, ಜೀರಿಗೆ ಪೌಡರ್‌ – ಅರ್ಧ ಚಮಚ ಮತ್ತು ಗರಂ ಮಸಾಲ, ಉಪ್ಪು, ಕರಿಬೇವು.

ತಯಾರಿಸುವ ವಿಧಾನ: ಮೊದಲಿಗೆ ಚೆನ್ನಾಗಿ ತೊಳೆದಿಟ್ಟುಕೊಂಡ ಚಿಕನ್‌ ಡ್ರಮ್‌ಸ್ಟಿಕ್‌ ಅನ್ನು ಅಡ್ಡಡ್ಡ ಸೀಳಬೇಕು. ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳ ಜತೆಗೆ ಚಿಕನ್‌ ಹಾಕಿ ನಂತರ ಕಾರ್ನ್‌ಪ್ಲೋರ್‌, ಮೊಟ್ಟೆ ಹಾಕಿ ಚೆನ್ನಾಗಿ ಕಲಸಿ ಅರ್ಧ ಗಂಟೆ ನೆನಸಬೇಕು. ನಂತರ ಸ್ಟೌ ಹಚ್ಚಿ ಬಾಣಲೆಗೆ ಎಣ್ಣೆ ಬಿಟ್ಟು ಅದು ಕಾದ ನಂತರ ಸಣ್ಣ ಹುರಿಯಲ್ಲಿ ಚಿಕನ್‌ ಅನ್ನು ಕರಿಯಬೇಕು. ಬೆಂದ ನಂತರ ಎಣ್ಣೆಯಿಂದ ತೆಗೆಯಬೇಕು. ಆಗ ಹಳದಿ ಬಣ್ಣದ ಗರಿಗರಿ ಕ್ಷತ್ರಿಯ ಚಿಕನ್‌ ಸವಿಯಲು ಸಿದ್ಧ.

*


ಮಟನ್‌ ಕೀಮಾ ವಡೆ
ಬೇಕಾಗುವ ಸಾಮಗ್ರಿಗಳು:
ಮಟನ್‌ ಕೀಮಾ – ಅರ್ಧ ಕೆ.ಜಿ., ಹೋಳು ಮಾಡಿಟ್ಟುಕೊಂಡ ಈರುಳ್ಳಿ – 1, ಹಸಿರು ಮೆಣಸಿನಕಾಯಿ – 5–6 , ಕಾಳುಮೆಣಸು – ಅರ್ಧ ಚಮಚ, ಚಕ್ಕೆ – ನಾಲ್ಕು, ಲವಂಗ, ಶುಂಠಿ ಬೆಳ್ಳುಳ್ಳಿ – ಸ್ವಲ್ಪ , ಪುದಿನಾ, 100 ಗ್ರಾಂ ಕಡ್ಲೆಹಿಟ್ಟು, ಸಣ್ಣಗೆ ಕತ್ತರಿಸಿಟ್ಟುಕೊಂಡ ಈರುಳ್ಳಿ – 2 ಮತ್ತು ಸಬ್ಬಕ್ಕಿ ಸೊಪ್ಪು, ಧನಿಯಾ ಪುಡಿ – ಒಂದೂವರೆ ಚಮಚ, ಮೊಟ್ಟೆ – ಎರಡು, ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಮೊದಲಿಗೆ ಫ್ರೈ ಪ್ಯಾನ್‌ನಲ್ಲಿ ಒಂದು ಚಮಚ ಎಣ್ಣೆ ಹಾಕಿಕೊಂಡು ನಾಲ್ಕು ಹೋಳು ಮಾಡಿದ ಒಂದು ಈರುಳ್ಳಿ, ಆರು ಹಸಿರು ಮೆಣಸಿನಕಾಯಿ, ಕಾಳುಮೆಣಸು ಮತ್ತು ಪುದಿನಾ ಈ ನಾಲ್ಕನ್ನೂ ಚೆನ್ನಾಗಿ ಫ್ರೈ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಬೇಕು. ನಂತರ ಹುರಿದುಕೊಂಡ ಪದಾರ್ಥಕ್ಕೆ ದನಿಯಾಪುಡಿ, ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಆಮೇಲೆ, ರುಬ್ಬಿಟ್ಟುಕೊಂಡ ಮಸಾಲೆಗೆ ಮಟನ್‌ ಕೀಮಾ, ಉಪ್ಪು ಹಾಕಿ ಮಿಶ್ರಣ ಮಾಡಿ ಅದನ್ನು ಮಿಕ್ಸಿಯಲ್ಲಿ ಲೈಟಾಗಿ ಒಂದು ರೌಂಡ್‌ ಆಡಿಸಿಕೊಳ್ಳಬೇಕು. ನೀರು ಹಾಕಿಕೊಳ್ಳದೇ ರುಬ್ಬಿಕೊಳ್ಳಬೇಕು, ಇದು ಗಮನದಲ್ಲಿರಲಿ.

ನಂತರ ಮೇಲಿನ ಮಿಶ್ರಣವನ್ನು ಸಣ್ಣಗೆ ಕತ್ತರಿಸಿಕೊಟ್ಟುಕೊಂಡ ಈರುಳ್ಳಿ, ಸಬ್ಬಕ್ಕಿ ಸೊಪ್ಪು, ಕಡ್ಲೆಹಿಟ್ಟು ಹಾಗೂ ಎರಡು ಮೊಟ್ಟೆ ಜತೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್‌ ಮಾಡಿ ಹತ್ತು ನಿಮಿಷ ಹಾಗೆಯೇ ಬಿಡಬೇಕು. ನಂತರ ಅದನ್ನು ವಡೆ ಆಕಾರ ಮಾಡಿ ಸ್ಟೌ ಹಚ್ಚಿ ಅದರ ಮೇಲೆ ಫ್ರೈ ಪ್ಯಾನ್‌ ಇಟ್ಟು ಎಣ್ಣೆ ಹಚ್ಚಿ ಬೇಯಿಸಬೇಕು. ಬೇಕಿದ್ದಲ್ಲಿ ಇದನ್ನು ಎಣ್ಣೆಗೆ ಬಿಟ್ಟು ಕೂಡ ಕರಿಯಬಹುದು. ಅಲ್ಲಿಗೆ ಗರಿಗರಿಯಾದ ಮಟನ್‌ ಕೀಮಾ ವಡೆ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT