ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜ ಸ್ವಾಸ್ಥ್ಯ: ಸುಸ್ಥಿರ ದಾರಿ ತೋರುವ ಡಾ. ಟೀನ್‌

Last Updated 17 ಜನವರಿ 2019, 19:30 IST
ಅಕ್ಷರ ಗಾತ್ರ

ಡಾ.ಟೀನ್ ಹ್ಯುನ್ ಅವರು ಆಸ್ಟ್ರೇಲಿಯಾದ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರು. ಸುಸ್ಥಿರ ಪರಿಸರ ಇವರ ಆಯ್ಕೆಯ ಕ್ಷೇತ್ರ.2017ರಲ್ಲಿ ‘ಸೂಪರ್‌ಸ್ಟಾರ್ ಆಫ್ ಸ್ಟೆಮ್’ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮೆಥಮೆಟಿಕ್ಸ್) ಎಂಬ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸ್ಪರ್ಧೆಯಲ್ಲಿದ್ದ 30 ಮಹಿಳಾ ವಿಜ್ಞಾನಿಗಳ ಪೈಕಿ ಡಾ.ಟೀನ್ ಅವರ ಸಂಶೋಧನೆಗಳು ಎಲ್ಲರನ್ನೂ ಚಕಿತಗೊಳಿಸಿದವು.

ಮಹಿಳಾ ವಿಜ್ಞಾನಿಗಳನ್ನು ಗುರುತಿಸುವುದು ಹಾಗೂ ಅವರ ಸಂಶೋಧನೆಗಳನ್ನು ಪ್ರಚುರಪಡಿಸುವುದು ಈ ಪ್ರಶಸ್ತಿ ನೀಡುವ ಆಸ್ಟ್ರೇಲಿಯಾದ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಉದ್ದೇಶ.ದೇಹವನ್ನು ಸ್ವಸ್ಥವಾಗಿಡುವ ಸರಳ ಔಷಧೀಯ ಸಸ್ಯಗಳ ಮೇಲೆ ಡಾ.ಟೀನ್ ಸಂಶೋಧನೆ ನಡೆಸುತ್ತಿದ್ದಾರೆ.

ಕ್ಯಾನ್ಸರ್ ಕುರಿತು ಸಂಶೋಧನೆ

ಡಾ.ಟೀನ್ ಹ್ಯುನ್ ಆಸ್ಟ್ರೇಲಿಯಾದ ಆರ್‌ಎಂಐಟಿ ವಿಶ್ವವಿದ್ಯಾಲಯದಲ್ಲಿ ಜೈವಿಕ ವಿಜ್ಞಾನ ಮತ್ತು ಆಹಾರ ತಂತ್ರಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕಿ. ವಿಯಟ್ನಾಂನಲ್ಲಿ ಸಾಮಾನ್ಯವಾಗಿ ಕಂಡುಬರುವ ರೆಡ್ ಗ್ಯಾಕ್ (ಮೊಮೊರ್ಡಿಕಾ ಕೊಚಿನ್‍ಚಿನೆನ್‍ಸಿಸ್) ಎಂಬ ಹಣ್ಣಿನ ಮೇಲೆ ನಡೆಸಿದ ಸಂಶೋಧನೆ ಅವರಿಗೆ ಹೆಸರು ತಂದುಕೊಟ್ಟಿತು. ಇದು ಅತ್ಯಧಿಕ ಪೌಷ್ಟಿಕಾಂಶಯುಕ್ತ ಹಾಗೂ ಬೇರಾವ ಸಸ್ಯವೂ ಹೊಂದಿರದಷ್ಟು ಕೆರೋಟಿಯಾನ್ಡ್ಸ್‌ ಹೊಂದಿದೆ. ಅಂದರೆ ಟೊಮೆಟೊಗಿಂತ 200 ಪಟ್ಟು ಹೆಚ್ಚು ಲೈಕೊಪಿನ್ ಮತ್ತು ಕ್ಯಾರೆಟ್‍ಗಿಂತ 50 ಪಟ್ಟು ಹೆಚ್ಚು ಬೀಟಾ ಕೆರೋಟಿನ್ ಹೊಂದಿದೆ.

ಮೆಲ್ಬರ್ನ್‍ನ ಗ್ರೀನ್‍ಹೌಸ್‍ನಲ್ಲಿ ಅವರು ಗಂಟೆಗಟ್ಟಲೆ ಹಾಕಿದ ಶ್ರಮ ಫಲ ನೀಡಿತು. ಈ ಹಣ್ಣು ಕ್ಯಾನ್ಸರ್ ವಿರುದ್ಧ ಹೋರಾಡುವ ಅಂಶಗಳನ್ನು ಹೊಂದಿದೆ ಎಂದು ಟೀನ್ ಅವರ ಸಂಶೋಧನೆ ತೋರಿಸಿಕೊಟ್ಟಿತು. ‘ಕಾರ್ಸಿನೊಮಾ, ಮೆಲನೋಮಾ ಹಾಗೂ ಸ್ತನ ಕ್ಯಾನ್ಸರ್ ಮೇಲೆ ಪರಿಣಾಮಕಾರಿ ಸಂಶೋಧನೆ ನಡೆಸಿದ್ದೇವೆ. ಶೇ 80ರಿಂದ 98ರಷ್ಟು ಕ್ಯಾನ್ಸರ್ ಕಣಗಳು ನಾಶವಾಗುತ್ತವೆ’ ಎನ್ನುತ್ತಾರೆ ಟೀನ್.

ರೆಡ್ ಗ್ಯಾಕ್ ಹಣ್ಣಿನ ಅತ್ಯುತ್ತಮ ತಳಿಗಳನ್ನು ಬೆಳೆಯುವಂತೆ ವಿಯೆಟ್ನಾಂ ರೈತರಿಗೆ ಟೀನ್ ಅವರು ಮಾರ್ಗದರ್ಶನ ನೀಡುತ್ತಿದ್ದಾರೆ. ಮಧುಮೇಹವನ್ನು ಕಡಿಮೆ ಮಾಡುವ ಗುಣ ಹೊಂದಿರುವ ಹಾಗಲಕಾಯಿ ಮೇಲೆ ಇನ್ನಷ್ಟು ಸಂಶೋಧನೆ ನಡೆಸಲು ಅವರು ತಮ್ಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಬಯಲು ವಾತಾವರಣಕ್ಕೆ ಹೋಲಿಸಿದರೆ,ನಿಯಂತ್ರಿತ ವಾತಾವರಣದಲ್ಲಿ ಸಸ್ಯಗಳಿಗೆ ವೈರಸ್ ಬಾಧೆ ಇರದು. ಹೀಗಾಗಿ ಸಸ್ಯಗಳನ್ನು ಬೆಳೆಯಲು ಅವರು ಅಂಗಾಂಶ ಕೃಷಿ ಅವಲಂಬಿಸಿದ್ದಾರೆ.

ಭತ್ತದ ಸಿಪ್ಪೆಯ ಇಟ್ಟಿಗೆ!

ಮರದ ಹೊಟ್ಟಿನಿಂದ ಜೈವಿಕ ಇಂಧನ ಉತ್ಪಾದಿಸುವ ಮತ್ತೊಂದು ಆವಿಷ್ಕಾರ ಇವರದ್ದೇ. ನಿರುಪಯುಕ್ತ ಎಂದು ಎಸೆಯುವ ಬದಲು ಅದನ್ನು ಮರುಬಳಕೆ ಮಾಡಿ ಇಂಧನ ಉತ್ಪಾದಿಸುವಲ್ಲಿ ಇವರು ಯಶ ಕಂಡಿದ್ದಾರೆ. ಭತ್ತದ ಸಿಪ್ಪೆಯಿಂದ ತಯಾರಿಸಿದ ಇಟ್ಟಿಗೆ ಇವರ ಮತ್ತೊಂದು ಸಂಶೋಧನೆ. ಸಾಂಪ್ರದಾಯಿಕ ಇಟ್ಟಿಗೆಗಳಿಗೆ ಹೋಲಿಸಿದರೆ ಶೇ 30ರಷ್ಟು ಕಡಿಮೆ ವೆಚ್ಚದ ಇವು, ನೀರು ಹಾಗೂ ಬೆಂಕಿಯಿಂದ ಸುರಕ್ಷಿತ. ಸಾಮರ್ಥ್ಯದಲ್ಲೂ ಗಟ್ಟಿಮುಟ್ಟು. ಇದು ಕೂಡ ಮರುಬಳಕೆಯ ಮತ್ತೊಂದು ಉದಾಹರಣೆ.

ಮಹಿಳೆಯರಿಗೆ ಆದ್ಯತೆ

ಆಸ್ಟ್ರೇಲಿಯಾದಲ್ಲಿ ಮಹಿಳಾ ವಿಜ್ಞಾನಿಗಳ ಸಂಖ್ಯೆ ಶೇ 15 ಮಾತ್ರ. ಮದುವೆ, ಮನೆ ಜವಾಬ್ದಾರಿ ಮೊದಲಾದ ಕಾರಣಗಳಿಂದ ಮಹಿಳೆಯರು ವೈಜ್ಞಾನಿಕ ಸಂಶೋಧನೆಯ ಕಡೆ ಬರುತ್ತಿಲ್ಲ. ಏಷ್ಯಾದಲ್ಲೂ ಇಂತಹ ಸ್ಥಿತಿ ಇದೆ. ಹೀಗಾಗಿ ವಿಜ್ಞಾನ ಮತ್ತು ಸಂಶೋಧನೆಯತ್ತ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಇವರದ್ದು. ಏಷ್ಯಾದ ಹೆಣ್ಣುಮಕ್ಕಳು ವಿಜ್ಞಾನದಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಇವರದ್ದು. ಶ್ರೀಲಂಕಾದ ಪಿಎಚ್.ಡಿ ವಿದ್ಯಾರ್ಥಿನಿಯೊಬ್ಬರಿಗೆ ತಮ್ಮ ಮನೆಯಲ್ಲೇ ಆಶ್ರಯ ನೀಡಿ, ಅಧ್ಯಯನದಲ್ಲಿ ತೊಡಗಲು ನೆರವು ನೀಡಿದ್ದನ್ನು ಟೀನ್ ನೆನಪಿಸಿಕೊಳ್ಳುತ್ತಾರೆ.

ಈಗಿನ ಯುವಜನತೆ ಸಾಕಷ್ಟು ಬ್ಯುಸಿ. ಅವರಿಗೆ ಸಿದ್ಧ ರೀತಿಯಲ್ಲೇ ಎಲ್ಲವೂ ಬೇಕು. ಆದರೆ ಸಂಶೋಧನೆ, ಸತತ ಅಧ್ಯಯನದಲ್ಲಿ ತೊಡಗಿಸಿಕೊಂಡರೆ ಇನ್ನಷ್ಟು ಹೊಸ ಆವಿಷ್ಕಾರಗಳು ಸಾಧ್ಯ ಎನ್ನುತ್ತಾರೆ ಟೀನ್.

ಇಂಗ್ಲಿಷ್ ಗೊತ್ತಿರಲಿಲ್ಲ!

ಡಾ. ಟೀನ್ ಅವರು ತಮ್ಮ ಐದನೇ ವಯಸ್ಸಿನಲ್ಲಿ ವಿಯೆಟ್ನಾಂ ಯುದ್ಧದ ವೇಳೆ ಆಸ್ಟ್ರೇಲಿಯಾ ದೇಶಕ್ಕೆ ತಮ್ಮ ತಾಯಿ ಜೊತೆ ವಲಸೆ ಹೋದವರು. ಆಗ ಉಟ್ಟಿದ್ದ ಬಟ್ಟೆ ವಿನಾ ಅವರ ಬಳಿ ಏನೂ ಇರಲಿಲ್ಲ. ಇಂಗ್ಲಿಷ್ ಕೂಡಾ ಬರುತ್ತಿರಲಿಲ್ಲ.

ಕಾಲೇಜು ಅಧ್ಯಯನದ ವೇಳೆ ಸಸ್ಯಗಳು ಹಾಗೂ ಮೂಲ ವಿಜ್ಞಾನದೆಡೆಗೆ ಆಸಕ್ತಿ ಬೆಳೆಯಿತು. ಅವರು ಅದನ್ನೊಂದು ಪ್ಯಾಷನ್ ಆಗಿ ತೆಗೆದುಕೊಂಡರು. ಸತತ ಅಧ್ಯಯನದಿಂದ ಅವರೊಬ್ಬ ಶ್ರೇಷ್ಠ ಸಸ್ಯವಿಜ್ಞಾನ ಸಂಶೋಧಕಿಯಾಗಿ ಹೊರಹೊಮ್ಮಿದ್ದಾರೆ.

ಮರುಬಳಕೆಯ ಸುಸ್ಥಿರ ಸಿದ್ಧಾಂತ

ಟೀನ್ ಅವರದ್ದು ಮರುಬಳಕೆಯ ಸುಸ್ಥಿರ ಸಿದ್ಧಾಂತ. ಆಹಾರ ಪದಾರ್ಥ, ವಾಣಿಜ್ಯ ಬೆಳೆಗಳಲ್ಲಿ ತ್ಯಾಜ್ಯವೇ ಹೆಚ್ಚು. ಮರುಬಳಕೆ ಆಗುವ ಪ್ರಮಾಣ ಕಡಿಮೆ. ಉದಾಹರಣೆಗೆ ಕಾಫಿಬೀಜ ಸುಲಿದ ಬಳಿಕ ಉಳಿಯುವ ಸಿಪ್ಪೆ ಹಾಗೂ ಕಾಫಿಯನ್ನು ಸೋಸಿ ಉಳಿಯುವ ಪುಡಿಯನ್ನುಮೌಲ್ಯವರ್ಧಿಸಿ, ಗಾಯಗಳಿಗೆ ಔಷಧಿಯಾಗಿ ಬಳಸಿಕೊಳ್ಳಬಹುದು. ಈ ತಾಜ್ಯಗಳು ಉತ್ತಮ ಗೊಬ್ಬರವೂ ಆಗುತ್ತವೆ ಎನ್ನುತ್ತದೆ ಟೀನ್ ಅವರ ಸಂಶೋಧನೆ.

ತಾಜ್ಯ ಎಂದು ತಿಪ್ಪೆಗೆ ಎಸೆಯುವ ಎಷ್ಟೋ ವಸ್ತುಗಳನ್ನು ಬಳಸಿಕೊಳ್ಳುವ ವಿಧಾನದಲ್ಲಿ ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಹಣ್ಣುಗಳ ಸಿಪ್ಪೆ ಬಳಸಿ ಸೌಂದರ್ಯವರ್ಧಕ ಕ್ರೀಮ್‌ಗಳನ್ನೂ ತಯಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT