ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇನ್ನೊಣ ಇಲ್ಲದಿದ್ದರೆ ನಾವಿಲ್ಲ!

Honey mela-Gkvk
Last Updated 31 ಜನವರಿ 2019, 19:45 IST
ಅಕ್ಷರ ಗಾತ್ರ

ಒಂದು ವೇಳೆ ಪ್ರಪಂಚದಲ್ಲಿ ಜೇನ್ನೊಣಗಳ ಸಂತತಿ ನಾಶವಾದರೆ, ಕೇವಲ ನಾಲ್ಕೇ ವರ್ಷಗಳಲ್ಲಿ ಇಡೀ ಮನುಕುಲವೇ ನಾಶವಾಗಲಿದೆ...

–ಇದು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಅವರ ಮುನ್ನೆಚ್ಚರಿಕೆಯ ಮಾತುಗಳು.

ಕೊಬ್ಬು ಕರಗಿಸಲು ಜೇನುತುಪ್ಪದ ಜತೆಗೆ ಬಿಸಿನೀರು, ನಿಂಬೆರಸ ಬೆರೆಸಿ ಕುಡಿಯುವುದು ಈಗ ನಗರವಾಸಿಗಳಜೀವನಶೈಲಿ. ಯಾವುದು ಶುದ್ಧ ಜೇನುತುಪ್ಪ, ಜೇನುತುಪ್ಪ ಹೇಗೆ ತಯಾರಾಗುತ್ತದೆ?ಫೆಬ್ರುವರಿ 1ರಂದು ಜಿಕೆವಿಕೆಯಲ್ಲಿ ರಾಜ್ಯಮಟ್ಟದ ಜೇನುಕೃಷಿ ತಾಂತ್ರಿಕ ವಿಚಾರ ಸಂಕಿರಣ ಮತ್ತು ಮಧುಮೇಳ ಆಯೋಜನೆಯಾಗುತ್ತಿದೆ. ಒಮ್ಮೆ ಭೇಟಿ ನೀಡಿ.

ಜೇನ್ನೊಣಗಳು ನಡೆಸುವ ಪರಾಗಸ್ಪರ್ಶದ ಅನುಕೂಲಗಳನ್ನು ಆಹಾರ ಉತ್ಪಾದನೆಯಲ್ಲಿ ಪರಿಗಣಿಸಿ, ಮೌಲ್ಯಮಾಪನ ಮಾಡಿದರೆ ಆಹಾರ ಮೌಲ್ಯ ಕೋಟ್ಯಂತರ ರೂಪಾಯಿಗಳನ್ನು ಮೀರುತ್ತದೆ.

ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ರಾಸಾಯನಿಕಗಳ ಸಿಂಪಡಣೆಯಿಂದಾಗಿ ಬಹೋಪಯೋಗಿ ಜೇನ್ನೊಣಗಳ ಸಂತತಿ ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷಿ ವಿಶ್ವವಿದ್ಯಾಲಯ, ಅಖಿಲ ಭಾರತ ಸುಸಂಘಟಿತ ಜೇನ್ನೊಣ ಮತ್ತು ಪರಾಗಸ್ಪರ್ಶಿಗಳ ಸಂಶೋಧನೆ ಪ್ರಾಯೋಜಕತ್ವ, ರಾಜ್ಯ ತೋಟಗಾರಿಕೆ ಇಲಾಖೆ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಮಧುಮೇಳವನ್ನು ಆಯೋಜಿಸಿದೆ.

‘ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮಧುಮೇಳ ಆಯೋಜಿಸಲಾಗಿದ್ದು, ಮೇಳದಲ್ಲಿ 500ಕ್ಕೂ ಹೆಚ್ಚು ಜೇನುಕೃಷಿಕರು ಪಾಲ್ಗೊಳ್ಳುತ್ತಿದ್ದಾರೆ. ‘ಅಧಿಕ ಬೆಳೆ ಇಳುವರಿ ಮತ್ತು ಸುಸ್ಧಿರ ಆದಾಯಕ್ಕಾಗಿ ಜೇನುಕೃಷಿ’ ಎಂಬುದು ಧ್ಯೇಯವಾಕ್ಯ. ಜೇನುಕೃಷಿ ಬಗ್ಗೆ ಆಸಕ್ತಿ ಇರುವವರು, ವಿಜ್ಞಾನಿಗಳು, ಉದ್ದಿಮೆದಾರರು ಮತ್ತು ಗ್ರಾಹಕರು ಪಾಲ್ಗೊಳ್ಳುತ್ತಿರುವುದು ವಿಶೇಷ’ ಎನ್ನುತ್ತಾರೆ ಜಿಕೆವಿಕೆಯ ಅಖಿಲ ಭಾರತ ಸುಸಂಘಟಿತ ಜೇನ್ನೊಣಗಳು ಮತ್ತು ಪರಾಗಸ್ಪರ್ಶಿಗಳು ಸಂಶೋಧನಾ ಪ್ರಾಯೋಜನೆಯ ಪರಿಶೋಧಕ ಮತ್ತು ಯೋಜನಾ ಮುಖ್ಯಸ್ಥ
ಡಾ.ಕೆ.ಟಿ. ವಿಜಯಕುಮಾರ್.

ಜೇನುಕೃಷಿಕರಿಗೆ ಮಾಹಿತಿ ನೀಡುತ್ತಿರುವ ವಿಜಯಕುಮಾರ್
ಜೇನುಕೃಷಿಕರಿಗೆ ಮಾಹಿತಿ ನೀಡುತ್ತಿರುವ ವಿಜಯಕುಮಾರ್

ಮೇಳದ ಅಧಿವೇಶನ–1ರಲ್ಲಿ ಜೇನ್ನೊಣಗಳ ಸಂರಕ್ಷಣೆ, ಅಧಿವೇಶ–2ರಲ್ಲಿ ಪರಾಗಸ್ಪರ್ಶ ಮತ್ತು ಜೇನು ಉತ್ಪನ್ನಗಳು, ಅಧಿವೇಶನ–3ರಲ್ಲಿ ಜೇನುಕೃಷಿಕರ ಮತ್ತು ಮಾರಾಟಗಾರರ ಅನುಭವಗಳು ವಿಷಯ ಕುರಿತು ತಜ್ಞರು ವಿಷಯ ಮಂಡಿಸುವರು. ಜೇನುತುಪ್ಪ ಮತ್ತು ಇತರ ಉತ್ಪನ್ನಗಳ ಉತ್ಪಾದನೆ, ಮಾರುಕಟ್ಟೆ, ಹೆಜ್ಜೇನು ಸಂರಕ್ಷಣೆ, ಸುಸ್ಥಿರ ಕೊಯ್ಲು, ಜೇನುಕೃಷಿ ಕ್ಷೇತ್ರದಲ್ಲಾಗುವ ನವ ಆವಿಷ್ಕಾರಗಳ ಕುರಿತು ಚರ್ಚೆ ನಡೆಯಲಿದೆ.

ಕರ್ನಾಟಕ ಸರ್ಕಾರ ಜೇನುಕೃಷಿಗೆ ಆದ್ಯತೆ ನೀಡುತ್ತಿದ್ದು, ಜೇನುಕೃಷಿ ಪರಿಕರಗಳನ್ನು ಖರೀದಿಸಲು ಸಾಮಾನ್ಯರಿಗೆ ಶೇ 40ರಷ್ಟು, ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ 90ರಷ್ಟು ಸಹಾಯ ಧನ ಒದಗಿಸುತ್ತಿದೆ. ಮೇಳದಲ್ಲಿ ಈ ಬಗ್ಗೆ ಮಾಹಿತಿ ದೊರೆಯಲಿದೆ. ವಿಡಿಯೊ, ಸ್ಲೈಡ್‌ ಷೋಗಳ ಮೂಲಕವೂ ಜೇನುಕೃಷಿಕರಿಗೆ ಮಾರ್ಗದರ್ಶನ ನೀಡಲಾಗುವುದು. ಜಿಕೆವಿಕೆ ಆವರಣದ ಮಧುವನದಲ್ಲಿ ಪ್ರಾತ್ಯಕ್ಷಿಕೆಯ ವಿವರಗಳೂ ದೊರೆಯಲಿವೆ. ಮುಖ್ಯವಾಗಿ ಜೇನುಕೃಷಿಕರಿಗೆ ಮೇಳದಲ್ಲಿ ಮಳಿಗೆಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ನಗರದ ಗ್ರಾಹಕರು ಇಲ್ಲಿ ವಿವಿಧ ರೀತಿಯ ಜೇನುತುಪ್ಪಗಳನ್ನು ಸವಿದು, ಖರೀದಿಸುವ ಅವಕಾಶವಿದೆ.

ನಗರವಾಸಿಗಳ ಬದಲಾದ ಜೀವನಶೈಲಿಯಲ್ಲಿ ಜೇನುತುಪ್ಪ ಇದ್ದೇ ಇರುತ್ತದೆ. ಕೊಬ್ಬು ಕರಗಿಸಲು ಜೇನುತುಪ್ಪದ ಜತೆಗೆ ಬಿಸಿನೀರು, ನಿಂಬೆರಸ ಬೆರೆಸಿ ಕುಡಿಯುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಯಾವುದು ಶುದ್ಧ ಜೇನುತುಪ್ಪ, ಜೇನುತುಪ್ಪ ಹೇಗೆ ತಯಾರಾಗುತ್ತದೆ ಇತ್ಯಾದಿ ಕುರಿತು ಗ್ರಾಹಕರ ಜಾಗೃತಿ ಕಾರ್ಯಕ್ರಮವೂ ಮೇಳದಲ್ಲಿ ನಡೆಯಲಿದೆ.

ನಗರ ಜೇನುಕೃಷಿ: ‘ಯಲಹಂಕ, ವಿಜಯನಗರ, ವಿದ್ಯಾರಣ್ಯಪುರ, ವಿಶ್ವವಿದ್ಯಾಲಯ ಸುತ್ತಮುತ್ತಲಿನ ಸ್ಥಳಗಳಲ್ಲಿ ಜೇನು ಕೃಷಿಕರಿದ್ದಾರೆ. ನಗರದಲ್ಲಿ ತಾರಸಿ ಕೈತೋಟ ಮಾಡುವವರೂ ಈಗ ಜೇನುಕೃಷಿಯತ್ತ ಒಲವು ತೋರುತ್ತಿದ್ದಾರೆ. ಇದರಿಂದ ಅವರ ತರಕಾರಿ ಬೆಳೆಗಳು ಮತ್ತು ತೋಟಗಾರಿಕಾ ಬೆಳೆಗಳ ಇಳುವರಿ ಹೆಚ್ಚುತ್ತಿದೆ’ ಎನ್ನುತ್ತಾರೆ ವಿಜಯಕುಮಾರ್.

ಸುಸ್ಥಿರ ಕೃಷಿ, ಆದಾಯದ ಮೂಲ: ‘ಜೇನ್ನೊಣಗಳ ಪರಾಗಸ್ಪರ್ಶ ಕ್ರಿಯೆಯಿಂದ ಸಸ್ಯಗಳಲ್ಲಿ ಹೂವು, ಕಾಯಿ ಕಟ್ಟುವುದು ಸುಲಭವಾಗುತ್ತದೆ. ಇಲ್ಲದಿದ್ದರೆ ರೈತರು ತಮ್ಮ ಕೈಯಾರೆ ಪರಾಗಸ್ಪರ್ಶ ಮಾಡಬೇಕಾಗುತ್ತದೆ. ಕೂಲಿಯಾಳುಗಳು ಬೇಕಾಗುತ್ತಾರೆ. ಇದು ಕಷ್ಟ. ರೈತರು ಜೇನುಕೃಷಿ ಕೈಗೊಂಡರೆ ಹೊಲಗಳಲ್ಲಿ ಪರಾಗಸ್ಪರ್ಶವೂ ನಡೆಯುತ್ತದೆ, ಜೇನುತುಪ್ಪದ ಮೂಲಕ ಪರ್ಯಾಯ ಆದಾಯವೂ ದೊರೆಯುತ್ತದೆ’ ಎನ್ನುತ್ತಾರೆ.

ಜೇನುಗೂಡಿಗೆ ಕೈಹಾಕದಿರಿ: ನಗರದ ಅಪಾರ್ಟ್‌ಮೆಂಟ್ ಮತ್ತು ಕಟ್ಟಡಗಳಲ್ಲಿ ಹೆಜ್ಜೇನು ಗೂಡು ಕಟ್ಟುವುದು ಸಾಮಾನ್ಯ. ಕೆಲವರು ಇವುಗಳನ್ನು ಹೊಡೆದೋಡಿಸಲು ರಾಸಾಯನಿಕ ಸಿಂಪಡಿಸುತ್ತಾರೆ. ಇದರಿಂದಾಗಿ ಹೆಜ್ಜೇನುಗಳ ಸಂತತಿ ಕ್ಷಿಣಿಸುತ್ತಿದೆ. ನಾಗರಿಕರು ತಾವೇ ಹೆಜ್ಜೇನು ಓಡಿಸುವ ಸಾಹಸಕ್ಕೆ ಕೈಹಾಕದಿರುವುದು ಉತ್ತಮ ಎನ್ನುತ್ತಾರೆ ಜೇನುತಜ್ಞರು.

ಇಂಥ ಸಂದರ್ಭಗಳಲ್ಲಿ ಜಿಕೆವಿಕೆ, ಲಾಲ್‌ಬಾಗ್, ಬೆಂಗಳೂರು ವಿಶ್ವವಿದ್ಯಾಲಯವನ್ನು ಸಂಪರ್ಕಿಸಿದರೆ ಜೇನ್ನೊಣ ಹೊಡೆದೋಡಿಸುವ ತಜ್ಞ ಸಿಬ್ಬಂದಿ ನೆರವಿಗೆ ಬರುತ್ತಾರೆ. ಜೇನ್ನೊಣಗಳ ಹಾವಳಿಯಿಂದ ನಾಗರಿಕರೂ ಸುಲಭವಾಗಿ ಮುಕ್ತಿ ಪಡೆಯಬಹುದು ಎನ್ನುತ್ತಾರೆ ಜಿಕೆವಿಕೆ ಅಧಿಕಾರಿಗಳು.

**
ರಾಜ್ಯದಲ್ಲಿರುವ 5 ಜಾತಿ ಜೇನ್ನೊಣಗಳು

1.ಹೆಜ್ಜೇನು

2. ಕೋಲ್ ಜೇನು

3.ನೆಲ್ಲಿಸರ ಜೇನು

4. ತುಡವೆ ಜೇನು

5. ನಸರು ಜೇನು

ಇವುಗಳಲ್ಲಿ ಹೆಜ್ಜೇನು, ಕೋಲ್‌ಜೇನು ಹೊರತುಪಡಿಸಿ ಉಳಿದ ಜೇನ್ನೊಣಗಳು ಸಾಕಲು ಯೋಗ್ಯ.

**
ಅಧಿಕ ಬೆಳೆ ಇಳುವರಿ ಮತ್ತು ಸುಸ್ಥಿರ ಆದಾಯಕ್ಕಾಗಿ ಜೇನುಕೃಷಿ, ಮಧುಮೇಳ: ಉದ್ಘಾಟನೆ–ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ, ಅತಿಥಿಗಳು–ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ, ಡಾ.ಪಿ.ಕೆ.ಚಕ್ರವರ್ತಿ, ವೈ.ಎಸ್. ಪಾಟೀಲ, ಪಿ.ನಲ್ಲಮುತ್ತು. ಅಧ್ಯಕ್ಷತೆ–ಡಾ.ಎಸ್. ರಾಜೇಂದ್ರ ಪ್ರಸಾದ್. ಆಯೋಜನೆ–ಕೃಷಿ ವಿಶ್ವವಿದ್ಯಾಲಯ. ಸ್ಥಳ–ಜಿಕೆವಿಕೆ, ನಾರ್ತ್ ಬ್ಲಾಕ್ ಸಭಾಂಗಣ. ಬೆಳಿಗ್ಗೆ 9.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT