ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಿಶೇಪ್ ನೇಷನ್’ ಫಿಟ್‌ನೆಸ್ ಮಂತ್ರ

Last Updated 4 ಜೂನ್ 2019, 20:01 IST
ಅಕ್ಷರ ಗಾತ್ರ

ಲಾಲ್‌ಬಾಗ್ ಉದ್ಯಾನದಲ್ಲೊಂದು ಸಮಾನ ಮನಸ್ಕರ ಗುಂಪು. ಶಾರ್ಟ್ಸ್, ಟೀಶರ್ಟ್ ತೊಟ್ಟ ಎಲ್ಲರ ಮೊಗದಲ್ಲೂ ಹುರುಪು. ದೇಹವನ್ನು ಗಟ್ಟಿಗೊಳಿಸುವ, ಆರೋಗ್ಯ ವರ್ಧಿಸುವ ಶಪಥ.ಮುಂಜಾವಿನ ಹೊತ್ತು ವಾಕಿಂಗ್ ಹೋಗುವವರಿಗಿಂತ ಮೊದಲೇ ಈ ತಂಡ ಅಲ್ಲಿ ಹಾಜರಿ ಹಾಕಿರುತ್ತದೆ.

‘ರಿಶೇಪ್ ನೇಷನ್’ ಹೆಸರಿನಡಿ ಒಂದಿಷ್ಟು ಜನರು ನಗರದ 12 ಪಾರ್ಕ್‌ಗಳಲ್ಲಿ ನಿತ್ಯವೂ ವ್ಯಾಯಾಮ ಮಾಡುತ್ತಾರೆ. ಸೋಮವಾರ ಹೊರತುಪಡಿಸಿದರೆ ಉಳಿದೆಲ್ಲ ದಿನಗಳಲ್ಲಿಯೂ ಇವರ ಕಸರತ್ತು ಮುಂದುವರಿದಿರುತ್ತದೆ. ಎಚ್‌ಎಸ್‌ಆರ್ ಲೇಔಟ್, ಬಿಟಿಎಂ ಲೇಔಟ್, ಜೆಪಿ ನಗರ, ಐಟಿಐ ಲೇಕ್‌ಪಾರ್ಕ್, ನ್ಯಾಷನಲ್ ಗೇಮ್ಸ್ ವಿಲೇಜ್‌ ಪಾರ್ಕ್, ಇಂದಿರಾನಗರ, ಮಲ್ಲೇಶಪಾಳ್ಯ ಸೇರಿದಂತೆ 12 ಕಡೆ ನಿತ್ಯವೂ ಇವರ ಚಟುವಟಿಕೆ ಇರುತ್ತದೆ.ಪ್ರತಿ ಶನಿವಾರ ಕಬ್ಬನ್‌ಪಾರ್ಕ್‌ನಲ್ಲಿ ಎಲ್ಲರೂ ಸೇರುತ್ತಾರೆ. ಯೋಗ ತರಬೇತಿಯೂ ಲಭ್ಯ. ಎಲ್ಲ ವರ್ಕ್‌ಔಟ್‌ಗಳಲ್ಲಿ ಯಾರು ಬೇಕಾದರೂ ಭಾಗಿಯಾಗಬಹುದು. ಸ್ಥೂಲಕಾಯ ಕಡಿಮೆಗೊಳಿಸುವ ತರಬೇತಿಗೆ ಮಾತ್ರ ಶುಲ್ಕವಿದೆ.

ಸಮರ್‌ಜಿತ್ ಕನಸು

ಅಸ್ಸಾಮ್‌ನವರಾದ ಸಮರ್‌ಜಿತ್ ಚೌಧರಿ ಅವರು ಕುಟುಂಬದ ಜೊತೆ ಸ್ವಿಟ್ಜರ್ಲೆಂಡ್ ಪ್ರವಾಸ ಕೈಗೊಂಡಿದ್ದರು. ಅಲ್ಲಿ ಯಾವ ವ್ಯಕ್ತಿಗೂ ಬೊಜ್ಜು ಇರಲಿಲ್ಲ. ಎಲ್ಲರಗೂ ಗಟ್ಟಿಮುಟ್ಟಾಗಿ, ಆರೋಗ್ಯಪೂರ್ಣರಾಗಿ ಕಾಣುತ್ತಿದ್ದರು. ಬೆಂಗಳೂರಿನಲ್ಲಿ ಈಗ ನಾವು ಕಾಣುತ್ತಿರುವ ಜನರಿಗಿಂತ ಅವರೆಲ್ಲರೂ ಭಿನ್ನ ಎಂದು ಸಮರ್‌ಜಿತ್ ಅವರಿಗೆ ಅನ್ನಿಸತೊಡಗಿತು. ಅಲ್ಲಿನ ಸಂಸ್ಕೃತಿಯೇ ಹಾಗಿದೆ. ಫಿಟ್‌ನೆಸ್‌ಗೆ ಸ್ವಿಸ್ ಜನರು ಹೆಚ್ಚಿನ ಮಹತ್ವ ನೀಡುತ್ತಾರೆ. ಕಚೇರಿಗೆ ಹೋಗುವವರು ಸೈಕಲ್‌ನಲ್ಲಿಯೇ ತೆರಳುತ್ತಾರೆ. ನಮ್ಮ ರೀತಿ ಬಸ್‌, ಬೈಕ್ ಅಥವಾ ಕಾರ್‌ ಮೇಲೆ ಅವಲಂಬಿತರಾಗಿಲ್ಲ. ಇನ್ನೂ ಕೆಲವರು ನಡೆದುಕೊಂಡೇ ಕಚೇರಿ ತಲುಪುತ್ತಾರೆ. ಇದು ಮಾಲಿನ್ಯವನ್ನು ಕಡಿತಗೊಳಿಸುವ ಜೊತೆಗೆ ಜನರ ಆರೋಗ್ಯವೂ ತಾನಾಗಿಯೇ ವೃದ್ಧಿಸುತ್ತದೆ.

ಬೆಂಗಳೂರಿನಲ್ಲಿ 19 ವರ್ಷದಿಂದ ನೆಲೆಸಿರುವ ಸಮರ್‌ಜಿತ್ ಅವರುಸ್ವಿಸ್‌ ಮಾದರಿಯನ್ನು ಇಲ್ಲಿಯೂ ಜಾರಿಗೊಳಿಸಲು ನಿರ್ಧರಿಸಿದರು. ಅವರ ಕನಸಿನ ಕೂಸು ‘ರಿಶೇಪ್ ನೇಷನ್’ ಜನ್ಮತಾಳಿತು. ಕಳೆದ ಜುಲೈನಲ್ಲಿ ಸುಮಾರು 25 ಸದಸ್ಯರಿಂದ ಆರಂಭಗೊಂಡ ಈ ಗುಂಪಿನಲ್ಲಿ ಈಗ 300ಕ್ಕೂ ಹೆಚ್ಚು ಸಕ್ರಿಯ ಸದಸ್ಯರಿದ್ದಾರೆ. ಪುಣೆ, ಕೋಲ್ಕತ್ತದಲ್ಲೂ ಈ ಸಮುದಾಯದ ಸಕ್ರಿಯವಾಗಿದೆ. ತಮ್ಮ ಪಾಡಿಗೆ ತಾವು ಮುಂಜಾನೆ ಹೊತ್ತು ಪಾರ್ಕ್‌ಗಳಲ್ಲಿ ಸೇರುತ್ತಾರೆ. ವ್ಯಾಯಾಮ ಮಾಡುತ್ತಾರೆ. ಆರೋಗ್ಯ ವೃದ್ಧಿ ಕುರಿತು ಸಂವಾದ ನಡೆಸುತ್ತಾರೆ. ಇದು ಸದ್ದಿಲ್ಲದೇ ನಡೆಯುತ್ತಿರುವ ಚಟುವಟಿಕೆ. ಆಸಕ್ತಿರು ಯಾರು ಬೇಕಾದರೂ ಸೇರಿಕೊಳ್ಳಬಹುದು. ಸಾಮಾಜಿಕ ಜಾಲತಾಣದಲ್ಲಿ 17 ಸಾವಿರಕ್ಕೂ ಹೆಚ್ಚು ಜನರು ಈ ಸಂಘಟನೆಯ ಹಿಂಬಾಲಕರಿದ್ದಾರೆ.

ವ್ಯಾಯಾಮವೇ ಮದ್ದು

ಸ್ಥೂಲಕಾಯ ಎಂಬುದು ನಗರದ ಜನರ ಭಾಗವೇ ಆಗಿಹೋಗಿದೆ. ಇದನ್ನು ಕರಗಿಸಲು ಜನರು ಪಡುವ ಕಷ್ಟ ಅಷ್ಟಿಷ್ಟಲ್ಲ. ವರ್ಕ್‌ಔಟ್,ಔಷಧಗಳ ಮೊರೆ ಹೋಗುತ್ತಾರೆ. ಆದರೆ ಪರಿಹಾರ ಮಾತ್ರ ಅಲ್ಪ ಪ್ರಮಾಣದ್ದು. ಇದಕ್ಕೆ ರಿಶೇಪ್ ನೇಷನ್‌ನಲ್ಲಿ ಪರಿಹಾರವಿದೆ ಎನ್ನುತ್ತಾರೆ ಸಮರ್‌ಜಿತ್. ‘ನಾವು ನೇರವಾಗಿ ಬೊಜ್ಜು ಕರಗಿಸುತ್ತೇವೆ ಎಂದು ಹೋಗಬಾರದು. ನಾವು ಆರೋಗ್ಯದಿಂದ ಇರಲು ಏನು ಮಾಡಬೇಕೋ ಅದನ್ನು ಮಾಡಿದರೆ ಸಾಕು, ಬೊಜ್ಜು ತಾನಾಗಿಯೇ ಕರಗುತ್ತದೆ’ ಎನ್ನುತ್ತಾರೆ ಅವರು. ಆರೋಗ್ಯದಿಂದ ಇರಬೇಕಾದರೆ ವೈಜ್ಞಾನಿಕವಾಗಿ ವ್ಯಾಯಾಮ ಮಾಡಬೇಕು ಎನ್ನುತ್ತಾರೆ ಅವರು. ತಂಡದಲ್ಲಿ 50ಕ್ಕೂ ಹೆಚ್ಚು ವ್ಯಾಯಾಮದ ತರಬೇತಿ ಪಡೆದಿದ್ದಾರೆ. ಯೋಗ ಕಲಿತವರೂ ಇದ್ದಾರೆ. ಈ ತಂಡದ ಸದಸ್ಯರು ಮೊನ್ನೆ ನಡೆದ 10ಕೆ ಮ್ಯಾರಥಾನ್‌ನಲ್ಲಿ ಭಾಗಿಯಾಗಿದ್ದರು. ಮುಂದಿನ ತಿಂಗಳು ಡೆಕಥ್ಲಾನ್ ಜೊತೆ ಮ್ಯಾರಥಾನ್‌ನಲ್ಲಿ ಓಡಲು ಸಜ್ಜಾಗಿದ್ದಾರೆ. ಈ ಮೂಲಕ ಆರೋಗ್ಯ ಕುರಿತು ನಗರದ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

https://www.facebook.com/ReshapeNation/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT