ಸಿರಿಗೆರೆ ನ್ಯಾಯಪೀಠದಲ್ಲಿ ಸಭೆ ಜು.2ಕ್ಕೆ

7
ಶಾಂತಿಸಾಗರ ಒತ್ತುವರಿ ತೆರವು, ಹೂಳು ತೆಗೆಸಲು ಒತ್ತಾಯ

ಸಿರಿಗೆರೆ ನ್ಯಾಯಪೀಠದಲ್ಲಿ ಸಭೆ ಜು.2ಕ್ಕೆ

Published:
Updated:

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರ (ಸೂಳೆಕೆರೆ) ಒತ್ತುವರಿ ತೆರವುಗೊಳಿಸಲು ಮತ್ತು ಹೂಳು ತೆಗೆಸುವ ವಿಷಯಕ್ಕೆ ಸಂಬಂಧಿಸಿದಂತೆ ಜುಲೈ 2ರಂದು ಬೆಳಿಗ್ಗೆ 10.30ಕ್ಕೆ ಸಿರಿಗೆರೆಯ ತರಳಬಾಳು ಬೃಹನ್ಮಠದ ನ್ಯಾಯಪೀಠದಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಖಡ್ಗ ಸ್ವಯಂ ಸೇವಕರ ಸಂಘದ ಮುಖ್ಯಸ್ಥ ರಘು ಬಿ.ಆರ್‌., ‘ಶಾಂತಿಸಾಗರ ಅಭಿವೃದ್ಧಿಗಾಗಿ ಸಂಸ್ಥೆಯು ಸಮಗ್ರ ಯೋಜನಾ ವರದಿಯನ್ನು (ಡಿ.ಪಿ.ಆರ್‌.) ಸಿದ್ಧಪಡಿಸಿದೆ. ಸರ್ಕಾರದ ಅನುದಾನ ಇಲ್ಲದೇ ಹೂಳು ತೆಗೆಸಲು ಸಾಧ್ಯವಿದೆ. ಆದರೆ, ಕೆರೆಗೆ ಬಂಡು ಹಾಕಲು ಮಾತ್ರ ಸರ್ಕಾರದಿಂದ ಅನುದಾನ ಬೇಕು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಹೇಳಿದರು.

‘ಚನ್ನಗಿರಿ ತಾಲ್ಲೂಕಿನ ಹಲವು ಹಳ್ಳಿಗಳಿಂದ ಸುಮಾರು ಎರಡು ಸಾವಿರ ರೈತರು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬಹುಭಾಷಾ ನಟ ಕಿಶೋರ್‌, ನಟಿ ರೂಪಾ ಅಯ್ಯರ್‌ ಅವರೂ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಲವು ಜನಪ್ರತಿನಿಧಿಗಳೂ ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದರು.

‘ಸಂಸ್ಥೆಯ ಕೋರಿಕೆ ಮೇರೆಗೆ ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರು ಶಾಂತಿಸಾಗರ ಒತ್ತುವರಿ ತೆರವುಗೊಳಿಸಲು ಸರ್ವೆ ನಡೆಸಿ, ಕೆರೆಯ ಸರಹದ್ದನ್ನು ಗುರುತಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಂಸ್ಥೆಯು ನೂರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೆರೆಯ ಉಳಿವು ಹಾಗೂ ಅಭಿವೃದ್ಧಿಗಾಗಿ ಈಗಾಗಲೇ ಜಾಥಾ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕೆರೆ ಬಗ್ಗೆ ಪತ್ರ ಬರೆಯಲಾಗಿತ್ತು. ಪ್ರಧಾನಿ ಕಚೇರಿಯು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದೆ’ ಎಂದು ತಿಳಿಸಿದರು.

ಕಟ್ಟಡ ನಿರ್ಮಾಣಕ್ಕೆ ವಿರೋಧ:

‘ಪ್ರವಾಸಿಗರನ್ನು ಸೆಳೆಯಲು ₹ 50 ಲಕ್ಷ ಅನುದಾನದಲ್ಲಿ ಕೆರೆಯ 10 ಎಕರೆ ಜಾಗ ಪಡೆದು ಕಟ್ಟಡ ನಿರ್ಮಿಸಲು ಯೋಜನೆ ರೂಪಿಸುತ್ತಿರುವ ಬಗ್ಗೆ ಚನ್ನಗಿರಿ ಶಾಸಕ ಮಾಡಾಳ್‌ ವೀರೂಪಾಕ್ಷಪ್ಪ ಅವರು ಈಚೆಗೆ ಹೇಳಿಕೆ ನೀಡಿದ್ದಾರೆ. ಕೆರೆಯಲ್ಲಿ ಕಟ್ಟಡ ನಿರ್ಮಿಸುವುದಕ್ಕೆ ನಮ್ಮ ವಿರೋಧವಿದೆ. ಅದೇ ಅನುದಾನದಲ್ಲಿ ಮೊದಲು ಒತ್ತುವರಿ ತೆರವುಗೊಳಿಸಿ, ಹೂಳು ಎತ್ತಿಸುವ ಕೆಲಸವನ್ನು ಮಾಡಲಿ’ ಎಂದು ರಘು ಒತ್ತಾಯಿಸಿದರು.

ಸಂಘದ ನಿರ್ದೇಶಕ ಚಂದ್ರಹಾಸ ಬಿ. ಲಿಂಗದಹಳ್ಳಿ, ‘ಕೆರೆಯ ಜಾಗದಲ್ಲಿ ಯಾವುದೇ ರೀತಿಯ ಕಟ್ಟಡ ನಿರ್ಮಿಸಲು ಬಿಡುವುದಿಲ್ಲ. 10 ಎಕರೆ ಜಾಗದಲ್ಲಿ ಹೂಳು ತೆಗೆಸಿದರೆ ಹತ್ತಾರು ಹಳ್ಳಿಗಳಿಗೆ ನೀರು ಕೊಡಬಹದು’ ಎಂದು ಅಭಿಪ್ರಾಯಪಟ್ಟರು. ಸಂಘದ ಮುಖಂಡ ಕೆ.ಸಿ. ಬಸವರಾಜ್‌ ಮಾತನಾಡಿ, ‘ಚಿತ್ರದುರ್ಗ ಜಿಲ್ಲೆಯ ಜನ ಕೆರೆಯ ನೀರನ್ನು ಹೆಚ್ಚು ಬಳಸುತ್ತಿದ್ದಾರೆ. ನಮ್ಮ ಹೋರಾಟಕ್ಕೆ ಅವರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಕುಬೇಂದ್ರಸ್ವಾಮಿ ಟಿ., ನಿರ್ದೇಶಕರಾದ ಎಂ.ಬಿ. ವೀರಭದ್ರಪ್ಪ, ಮನೋಜ್‌ ಚನ್ನಗಿರಿ ಇದ್ದರು. 

‘ಸಾಲಮನ್ನಾ ಬದಲು ನೀರು, ವಿದ್ಯುತ್‌ ಕೊಡಿ’

‘ರಾಜ್ಯ ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದು ಬೇಡ. ಅದರ ಬದಲು ರೈತರಿಗೆ 24 ಗಂಟೆ ನೀರು, ವಿದ್ಯುತ್‌ ಹಾಗೂ ಬೆಳೆಗೆ ವೈಜ್ಞಾನಿಕ ಬೆಲೆ ಕೊಡುವ ವ್ಯವಸ್ಥೆಯನ್ನು ಮಾಡಲಿ’ ಎಂದು ಚಂದ್ರಹಾಸ ಬಿ. ಲಿಂಗದಹಳ್ಳಿ ಅಭಿಪ್ರಾಯಪಟ್ಟರು.

ರೈತರ ₹ 58 ಸಾವಿರ ಕೋಟಿ ಸಾಲಮನ್ನಾ ಮಾಡುವ ಬದಲು ಆ ಹಣದಲ್ಲಿ ರಾಜ್ಯದ ಎಲ್ಲ ಕೆರೆಗಳ ಹೂಳೆತ್ತಿಸಲಿ. ರೈತರಿಗೆ ನೀರು, ವಿದ್ಯುತ್‌ ಕೊಟ್ಟರೆ ಮುಂದಿನ ಎರಡು– ಮೂರು ವರ್ಷಗಳಲ್ಲಿ ಅವರು ಎಲ್ಲ ಸಾಲವನ್ನೂ ಮರುಪಾವತಿಸುತ್ತಾರೆ. ಸಾಲಮನ್ನಾ ಮಾಡಿ ರೈತರನ್ನು ಸೋಮಾರಿಗಳನ್ನಾಗಿ ಮಾಡಬೇಡಿ ಎಂದು ರಘು ಬಿ.ಆರ್‌. ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !