ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ದಾರಿ ತಪ್ಪುತ್ತಿದ್ದಾರೆ ‘ಕಾಡಿನ ಮಕ್ಕಳು’

ಅರಣ್ಯ ಅಪರಾಧ ಚಟುವಟಿಕೆಗಳಲ್ಲಿ ಭಾಗಿ, ಗಾಂಜಾ ಸೇವನೆ, ಕುಡಿತದ ಚಟಕ್ಕೆ ಜೀವನ ಬಲಿ
Last Updated 23 ಸೆಪ್ಟೆಂಬರ್ 2020, 5:00 IST
ಅಕ್ಷರ ಗಾತ್ರ
ADVERTISEMENT
""

‌ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದ ಅಧಿಕಾರಿಗಳು ಇತ್ತೀಚೆಗೆ ಎರಡು ಪ್ರಮುಖ ಅರಣ್ಯ ಅಪರಾಧಗಳನ್ನು ಪತ್ತೆ ಹಚ್ಚಿದರು.‌‌

ಒಂದು, ಬಿಳಿಗಿರಿರಂಗನಬೆಟ್ಟ ದೇವಾಲಯದ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಸೇರಿದಂತೆ ಇತರ ವನ್ಯಪ್ರಾಣಿಗಳನ್ನು ಬೇಟೆಯಾಡಿ, ಅವುಗಳ ಮೂಳೆ, ಉಗುರು, ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಯುವಕರನ್ನು ಬಂಧಿಸಿದ್ದು. ಇನ್ನೊಂದು, ವಾರದ ಹಿಂದೆ ಶ್ರೀಗಂಧ ಮರ ಕಳ್ಳತನ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬರನ್ನು 16 ಕೆಜಿ ಗಂಧದ ತುಂಡುಗಳ ಸಮೇತ ಬಂಧಿಸಿದ ಪ್ರಕರಣ.

ಕಳೆದ ವಾರ ಜಿಲ್ಲೆಯ ಪೊಲೀಸರು ಚಾಮರಾಜನಗರ ತಾಲ್ಲೂಕಿನ ಬೆಲವೆತ್ತ ಗ್ರಾಮದಲ್ಲಿ ಜಮೀನೊಂದರಲ್ಲಿ ಗಾಂಜಾ ಗಿಡ ಬೆಳೆದಿದ್ದ ಆರೋಪಿಯೊಬ್ಬರನ್ನು ಬಂಧಿಸಿದ್ದರು. ₹3 ಲಕ್ಷ ಮೌಲ್ಯದ 26 ಕೆಜಿ ಗಾಂಜಾ ಸೊಪ್ಪು ಅನ್ನು ವಶಪಡಿಸಿಕೊಂಡಿದ್ದರು.

ಈ ಮೂರೂ ಪ್ರಕರಣಗಳಲ್ಲಿ ಒಂದು ವಿಚಾರ ಸಮಾನವಾಗಿತ್ತು. ಬಂಧನಕ್ಕೆ ಒಳಗಾದವರೆಲ್ಲರೂ ಸೋಲಿಗ ಸಮುದಾಯದವರು. 25ರಿಂದ 40 ವರ್ಷ ವಯಸ್ಸಿನವರು. ಗಂಧ ಕಳ್ಳತನ, ಮಾರಾಟ ಯತ್ನ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಆರೋಪಿಗೆ, ದುಷ್ಕೃತ್ಯ ಎಸಗಲು ಆತನ ಅಪ್ಪನೇ ಮಾರ್ಗದರ್ಶಕ! ಹಲವು ವರ್ಷಗಳಿಂದ ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂಬ ಸಂಗತಿಯೂ ತನಿಖೆಯಿಂದ ಬಯಲಾಗಿದೆ. ‌

ಅರಣ್ಯದ ಮೂಲವಾಸಿಗಳು, ಕಾಡಿನ ಮಕ್ಕಳು ಎಂದೆಲ್ಲ ಕರೆಯಿಸಿಕೊಳ್ಳುವ ಸೋಲಿಗರು ಪ್ರಕೃತಿಯ ಆರಾಧಕರು. ವಿಶಿಷ್ಟ ಬುಡಕಟ್ಟು ಪರಂಪರೆ, ಸಂಸ್ಕೃತಿಯನ್ನು ಹೊಂದಿರುವ ಸೋಲಿಗರಿಗೆ ಪರಿಸರವೇ ಜೀವನ. ರಾಜ್ಯದಲ್ಲಿಯೇ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಳಿಗಿರಿರಂಗನಬೆಟ್ಟ, ಮಲೆಮಹದೇಶ್ವರ ಬೆಟ್ಟ, ಬಂಡೀಪುರದ ಸುತ್ತಮುತ್ತಲಿನ ಪ್ರದೇಶದ ಅರಣ್ಯ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಜಿಲ್ಲೆಯಲ್ಲಿ ಸೋಲಿಗರ 148 ಪೋಡುಗಳಿವೆ. 37 ಸಾವಿರ ಸೋಲಿಗರು ಇದ್ದಾರೆ.

ಸಣ್ಣ ಮಟ್ಟಿನ ಕೃಷಿ, ಅರಣ್ಯದ ಉತ್ಪನ್ನಗಳನ್ನು ಸಂಗ್ರಹಿಸಿ ಅವುಗಳ ಮಾರಾಟದಿಂದ ಜೀವನ ನಡೆಸುತ್ತಿದ್ದ ಸೋಲಿಗರು ಈಗ ಆಧುನಿಕ ಜಗತ್ತಿಗೆ ತೆರೆದುಕೊಂಡಿದ್ದಾರೆ. ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿದ್ದ ಸೋಲಿಗರ ಅಭಿವೃದ್ಧಿಗಾಗಿ ಸ್ವಯಂ ಸೇವಾ ಸಂಸ್ಥೆಗಳು (ಎನ್‌ಜಿಒ), ಸರ್ಕಾರ ಕೂಡ ಶ್ರಮಿಸುತ್ತಿವೆ. ಆದರೆ, ಆಧುನಿಕತೆಗೆ ತೆರೆದುಕೊಂಡ ಸೋಲಿಗರ ಯುವ ಜನಾಂಗ ದಾರಿ ತಪ್ಪುತ್ತಿದೆ. ದಿಢೀರ್‌ ಹಣ ಮಾಡುವ ಆಸೆಗೆ ಬಿದ್ದು ಯುವಕರು ಅಪರಾಧ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಸಮುದಾಯದ ಕೆಲವರು ಹಿರಿಯರು ಯುವಕರಿಗೆ ಇಂತಹ ಕೃತ್ಯಗಳನ್ನು ಎಸಗಲು ಪ್ರಚೋದನೆ, ಮಾರ್ಗದರ್ಶನವನ್ನೂ ನೀಡುತ್ತಿದ್ದಾರೆ.

ಮೂಲತಃ ಹಿಂಜರಿಕೆ ಸ್ವಭಾವದವರಾದ ಸೋಲಿಗರು ಹೊರಗಿನ ಜನರೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ. ತಮ್ಮ ಪಾಡಿಗೆ ತಾವು ಎಂಬಂತೆ ಇರುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಹೊರ ಜಗತ್ತಿನೊಂದಿಗೆ ಅವರು ತೆರೆದುಕೊಂಡಿದ್ದಾರೆ. ಟಿವಿ, ಮೊಬೈಲ್ ಸೇರಿದಂತೆ ಎಲ್ಲ ತಂತ್ರಜ್ಞಾನಕ್ಕೂ ಅವರು ಒಗ್ಗಿಕೊಂಡಿದ್ದಾರೆ. ಈಗೀಗ ಅವರು ಹೆಚ್ಚು ಹೆಚ್ಚು ಜನರ ಸಂಪರ್ಕಕ್ಕೆ ಬರುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ಸ್ನೇಹವನ್ನೂ ಕೆಲವರು ಸಂಪಾದಿಸಿದ್ದಾರೆ. ಮಾಫಿಯಾದವರು ಒಡ್ಡುವ ಹಣದ ಆಮಿಷಕ್ಕೆ ಬಲಿಯಾಗಿ,ಅವರಿಗೆ ಬೇಕಾದ ಗಾಂಜಾ, ವನ್ಯಜೀವಿಗಳ ಅಂಗಾಂಗಗಳು, ಗಂಧ ಸೇರಿದಂತೆ ಬೆಲೆ ಬಾಳುವ ಮರಗಳನ್ನು ಪೂರೈಕೆ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ (ಇತ್ತೀಚೆಗೆ ಪತ್ತೆಯಾದ ವನ್ಯಜೀವಿಗಳ ಅಂಗಾಂಗಗಳ ಸಂಗ್ರಹ ಹಾಗೂ ಮಾರಾಟ ಯತ್ನದಲ್ಲಿ ದೊಡ್ಡ ಜಾಲವೇ ಇದೆ ಎಂಬುದು ತನಿಖೆಯಿಂದ ಗೊತ್ತಾಗಿದ್ದು, ಅರಣ್ಯ ಅಧಿಕಾರಿಗಳು ಅದರ ಬೆನ್ನ ಹಿಂದೆ ಬಿದ್ದಿದ್ದಾರೆ). ಗಾಂಜಾ ಬೆಳೆ ಬೆಳೆಯುವುದು, ಕಳ್ಳಬೇಟೆ, ಮರಗಳ ಕಳ್ಳತನ ಸೇರಿದಂತೆ ಸಮುದಾಯದ ಕೆಲವರು ನಡೆಸುವ ಅಕ್ರಮ ಚಟುವಟಿಕೆಗಳಿಗೆ ಮೂಲ ಕಾರಣಗಳೇ ಇವು.

ಸೋಲಿಗ ಸಮುದಾಯದವರೊಂದಿಗೆ ಮುಖಂಡರ ಸಂವಾದ

ಶಿಕ್ಷಣದ ಕೊರತೆ: ಸೋಲಿಗ ಯುವ ಜನಾಂಗವನ್ನು ಶಿಕ್ಷಣದ ಕೊರತೆ ಕಾಡುತ್ತಿದೆ. ಸಮುದಾಯದ ಜನರು, ಇತರರಂತೆ ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಮಕ್ಕಳಿಗೆ ಶಿಕ್ಷಣ ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ. ಪೋಡುಗಳಲ್ಲಿ ಅಂಗನವಾಡಿ, ಕಿರಿಯ ಪ್ರಾಥಮಿಕ ಶಾಲೆಗಳು, ನಂತರದ ಶಿಕ್ಷಣಕ್ಕೆ ಆಶ್ರಮ ಶಾಲೆಗಳು, ಉನ್ನತ ಶಿಕ್ಷಣಕ್ಕೆ ಹಾಸ್ಟೆಲ್‌ಗಳನ್ನು ಸರ್ಕಾರ ತೆರೆದಿದೆ. ಆದರೆ, ಬಹುತೇಕ ಸೋಲಿಗ ಮಕ್ಕಳ ಶಿಕ್ಷಣ ಪ್ರಾಥಮಿಕ ಇಲ್ಲವೇ ಪ್ರೌಢ ಹಂತದಲ್ಲಿ ಮೊಟಕಾಗುತ್ತಿದೆ. ಪೋಡುಗಳ ಬಳಿ ಶಾಲೆ ಇದ್ದರೆ ಮಾತ್ರ ಪೋಷಕರು ಮಕ್ಕಳನ್ನು ಕಳುಹಿಸುತ್ತಾರೆ. ದೂರದ ಊರಿಗೆ, ಹಾಸ್ಟೆಲ್‌ಗಳಿಗೆ ಮಕ್ಕಳನ್ನು ಕಳುಹಿಸಲು ಒಪ್ಪುತ್ತಿಲ್ಲ. ಹಾಗಾಗಿ, ಉನ್ನತ ಶಿಕ್ಷಣ ಪಡೆಯುವ ಮಕ್ಕಳು ಕಡಿಮೆ.

ಚಟಗಳಿಗೆ ದಾಸ: ಕಾನೂನು ಬಾಹಿರ ಚಟುವಟಿಕೆ ಒಂದೆಡೆಯಾದರೆ, ಸಮುದಾಯವನ್ನು ಕಾಡುತ್ತಿರುವ ಇನ್ನೊಂದು ಪೆಡಂಭೂತ ಎಂದರೆ ಮದ್ಯ ಹಾಗೂ ಮಾದಕ ದ್ರವ್ಯಗಳು. ಸೋಲಿಗರ ಯುವ ಜನತೆ ಮದ್ಯ ಹಾಗೂ ಮಾದಕ ದ್ರವ್ಯಗಳಿಗೆ ದಾಸರಾಗುತ್ತಿದ್ದಾರೆ. ಪೋಡುಗಳ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ಸಾಗಿದೆ. ಯುವಕರು, ವಯಸ್ಕರು ಕೆಲಸಕ್ಕೂ ಹೋಗದೆ ದಿನಪೂರ್ತಿ ಮದ್ಯ ಸೇವನೆ ಮಾಡಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.

ಸೋಲಿಗರ ಸಂಘಟನೆ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಶಿಕ್ಷಣ ಪಡೆಯುವ ಅಗತ್ಯದ ಬಗ್ಗೆ ಹಾಗೂ ಕುಡಿತ ಹಾಗೂ ಮಾದಕ ದ್ರವ್ಯ ಸೇವನೆಯಿಂದ ಆಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನ ಪಟ್ಟರೂ ದೊಡ್ಡ ಯಶಸ್ಸು ಸಿಕ್ಕಿಲ್ಲ.

ಸ್ವಯಂ ಸೇವಾ ಸಂಸ್ಥೆಗಳ ಕುಮ್ಮಕ್ಕು

ಸಮುದಾಯದ ಕೆಲವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಲು ಕೆಲವು ಸ್ವಯಂ ಸೇವಾ ಸಂಸ್ಥೆಗಳ ಕುಮ್ಮಕ್ಕು ಕಾರಣ ಎಂದು ನೇರ ಆರೋಪ ಮಾಡುತ್ತಾರೆ ಸೋಲಿಗರ ಮುಖಂಡ ಡಾ.ಸಿ.ಮಾದೇಗೌಡ.

‘ಅರಣ್ಯದಲ್ಲಿ ವಾಸಿಸುತ್ತಿರುವ ಸೋಲಿಗರನ್ನು ಒಕ್ಕಲೆಬ್ಬಿಸಬೇಕು ಎಂಬ ಏಕೈಕ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣಕಾಸು ನೆರವು ಪಡೆಯುವ ಕೆಲವು ಎನ್‌ಜಿಒಗಳು ಸಮುದಾಯದ ಕೆಲವರಿಗೆ ಹಣದ ಆಮಿಷವೊಡ್ಡಿ ಕಳ್ಳಬೇಟೆ ನಡೆಸುವಂತೆ ಪ್ರಚೋದನೆ ನೀಡುತ್ತಿವೆ. ಅರಣ್ಯ ಅಧಿಕಾರಿಗಳು ಬೇಟೆಯಾಡಿದವರನ್ನು ಬಂಧಿಸುತ್ತಾರೆ. ಆದರೆ, ಅದಕ್ಕೆ ಪ್ರೇರಣೆ ನೀಡಿದವರಿಗೆ ಏನೂ ಮಾಡುವುದಿಲ್ಲ’ ಎಂದು ಹೇಳುತ್ತಾರೆ ಅವರು.

ಸಮುದಾಯದ ಕೆಲ ಯುವಕರು ಕುಡಿತ ಹಾಗೂ ಮಾದಕ ದ್ರವ್ಯ ಸೇವನೆ ಚಟಕ್ಕೆ ಬಲಿಯಾಗುತ್ತಿರುವುದನ್ನು ಅವರು ಒಪ್ಪಿಕೊಳ್ಳುತ್ತಾರೆ. ‘ಇತ್ತೀಚೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರೊಂದಿಗೆ ಇದೇ ವಿಚಾರವಾಗಿ ಸಭೆ ನಡೆಸಿದ್ದೇವೆ. ಅಕ್ರಮ ಮದ್ಯ ಎಲ್ಲೆಲ್ಲಿ ಪೂರೈಕೆಯಾಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡಿದ್ದೇವೆ. ಕ್ರಮ ಕೈಗೊಳ್ಳುವ ಭರವಸೆಯನ್ನು ಎಸ್‌ಪಿಯವರು ನೀಡಿದ್ದಾರೆ’ ಎಂದು ಹೇಳುತ್ತಾರೆ ಮಾದೇಗೌಡ.

ಸೋಲಿಗರ ಅಭಿವೃದ್ಧಿ ಸಂಘ, ಏಟ್ರೀ, ಅರಣ್ಯ ಇಲಾಖೆಯ ಸಹಯೋಗದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು, ಮದ್ಯ ಸೇವನೆ ವಿರುದ್ಧ ಸಮುದಾಯದ ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಪ್ರತಿಪಾದಿಸುತ್ತಾರೆ.

‘ಜಿಲ್ಲೆಯಲ್ಲಿ 37 ಸಾವಿರದಷ್ಟು ಸೋಲಿಗರಿದ್ದಾರೆ. ಬೆರಳೆಣಿಯಷ್ಟು ಮಂದಿ ಮಾಡುವ ತಪ್ಪಿಗೆ ಇಡೀ ಸಮುದಾಯದವರು ಕಳ್ಳರು, ಕೆಟ್ಟವರು ಎಂಬಂತೆ ಬಿಂಬಿಸಲಾಗುತ್ತಿದೆ. ಇದು ತಪ್ಪು. ಬೇರೆ ಸಮುದಾಯಗಳಲ್ಲೂ ಕೆಟ್ಟವರು ಇಲ್ಲವೇ’ ಎಂಬ ಕಳಕಳಿಯನ್ನು ಮಾದೇಗೌಡ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT