ಪರಿಸರ ಜಾಗೃತಿಗೆ ‘ಪರಿಕ್ರಮ’ ಪಯಣ

7

ಪರಿಸರ ಜಾಗೃತಿಗೆ ‘ಪರಿಕ್ರಮ’ ಪಯಣ

Published:
Updated:
aq

ನಾಲ್ವರು ಯುವಕರು. ಆರುನೂರು ಕಿಲೋ ಮೀಟರ್ ಸೈಕಲ್ ಪಯಣ. ಭೇಟಿಕೊಟ್ಟ ತಾಣಗಳಲ್ಲಿ ಕಾಡು ಮರಗಳ ಬೀಜ ಬಿತ್ತನೆ. ಇಲ್ಲಿವರೆಗೂ ಬಿತ್ತಿದ ಬೀಜಗಳ ಸಂಖ್ಯೆ ಅಂದಾಜು ಆರು ಸಾವಿರ. ಈ ಪರಿಸರ ಸಂರಕ್ಷಣೆ ಜಾಗೃತಿ ತಂಡದ ಹೆಸರು ‘ಪರಿಕ್ರಮ’..!

ಬೆಂಗಳೂರಿನ ಜೈನ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಧೀರಜ್, ಎಂಜಿನಿಯರಿಂಗ್ ವಿದ್ಯಾರ್ಥಿ ಉದಯ್, ಎಂಕಾಂ ವಿದ್ಯಾರ್ಥಿ ಭರತ್, ಐಐಟಿಯಲ್ಲಿ ಎಂಜಿನಿಯರಿಂಗ್ ಮಾಡುತ್ತಿರುವ ಚಂದನ್, ‘ಪರಿಕ್ರಮ ಪಯಣ’ದ ಸದಸ್ಯರು. ತಮ್ಮ ನಿತ್ಯದ ಕೆಲಸದ ಬಿಡುವಿನ ವೇಳೆಯಲ್ಲಿನ ಒಂದಷ್ಟು ಸಮಯವನ್ನು ಪರಿಸರ ಜಾಗೃತಿಗಾಗಿ ಮೀಸಲಿಟ್ಟಿದ್ದಾರೆ. ಆ ಕಾರ್ಯಕ್ರಮದ ಭಾಗವೇ ಸೈಕ್ಲಿಂಗ್‌ನೊಂದಿಗೆ ಪರಿಸರ ಪಯಣ.

2011ರಲ್ಲಿ ಸಮಾನ ಮನಸ್ಕ ಸ್ನೇಹಿತರು ಸೇರಿ ‘ಪರಿಕ್ರಮ’ ಎಂಬ ಹೆಸರಿನ ತಂಡ ಕಟ್ಟಿದರು. ಇದರ ಮೂಲಕ ಪ್ರತಿ ವರ್ಷ ವಿಶ್ವ ಪರಿಸರ ದಿನದಂದು ನವೀನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಅದರಲ್ಲಿ ಸೈಕ್ಲಿಂಗ್‌ನೊಂದಿಗೆ ಪರಿಸರ ಜಾಗೃತಿ ಮೂಡಿಸುವುದು ಒಂದು. ಏಳು ವರ್ಷಗಳ ಹಿಂದೆ ಆರಂಭವಾದ ಈ ತಂಡದಲ್ಲಿ ಸದಸ್ಯರ ಸಂಖ್ಯೆ 50 ತಲುಪಿದೆ.

ವಿಶ್ವ ಪರಿಸರ ದಿನದ ವಿಶೇಷ...: ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ಪರಿಸರ ದಿನದಂದು ಏನಾದರೂ ವಿಶೇಷ ಯೋಜನೆ ಹಾಕಿಕೊಳ್ಳಬೇಕೆಂದು ಯೋಚಿಸುತ್ತಿದ್ದ ಈ ತಂಡಕ್ಕೆ ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯ ಪರಿಸರ ಅಧ್ಯಯನ ವರದಿಯೊಂದು ಸೆಳೆಯಿತು. ಆ ವರದಿಯಲ್ಲಿದ್ದ ‘ಒಬ್ಬ ಮನುಷ್ಯ ಬದುಕಲು 7 ಮರಗಳ ಬೇಕು. ಒಂದು ಮನೆಯಲ್ಲಿ ನಾಲ್ವರು ಸದಸ್ಯರಿದ್ದರೆ ಅವರಿರುವ ಪರಿಸರದಲ್ಲಿ 28 ಮರಗಳಿರಬೇಕು. ಆದರೆ, ಇಂದು ಬಹುತೇಕ ನಗರಗಳಲ್ಲಿ ಮರಗಳ ಸಂಖ್ಯೆಯೇ ಕ್ಷೀಣಿಸುತ್ತಿದೆ’ ಎಂಬ ಅಂಶಗಳು ತಂಡದ ಸದಸ್ಯರನ್ನು ಬಹುದೊಡ್ಡ ಪ್ರಮಾಣದಲ್ಲಿ ಸಸಿ ನಡೆಬೇಕೆಂಬ ನಿರ್ಧಾರಕ್ಕೆ ಬರುವಂತೆ ಮಾಡಿತು. ಮಾತ್ರವಲ್ಲ ಈ ಬಾರಿಯ ವಿಶ್ವಪರಿಸರ ದಿನದ ಅಂಗವಾಗಿ ಜೂನ್‌1 ರಿಂದ 10ರವರೆಗೆ ಸೈಕಲ್‌ನಲ್ಲಿ ರಾಜ್ಯದ ವಿವಿಧೆಡೆ ಸಂಚರಿಸಿ, ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಜತೆಗೆ, ಸಸಿಗಳನ್ನು ನೆಡಲು ತಂಡದ ಸದಸ್ಯರು ನಿರ್ಧರಿಸಿದರು.

ಬೀಜ ಬಿತ್ತುವ ಕೆಲಸ: ಸೈಕಲ್ ಪಯಣದಲ್ಲಿ ಸಸಿ ನೆಡುವ ವಿಚಾರವನ್ನು ಗೆಳೆಯೊರಡನೆ ಚರ್ಚಿಸಿದಾಗ, ‘ಸಸಿ ನೆಡುವುದೇನೋ ಸರಿ. ಆದರೆ, ಸೈಕಲ್ ಮೇಲೆ ಕೊಂಡೊಯ್ಯುವುದು ಹೇಗೆ ?’ – ಎಂಬ ಪ್ರಶ್ನೆಗಳು ಎದುರಾದವು. ‘ಸಸಿ ಇಲ್ಲದಿದ್ದರೇನು. ಸಸಿಯಾಗಿ ಬೆಳೆಯುವ ಬೀಜ ಬಿತ್ತಬಹುದಲ್ಲ’ – ಎಂಬ ಸಲಹೆಯೂ ಬಂತು. ಈ ಸಲಹೆಗೆ ನಾಲ್ವರೂ ಒಪ್ಪಿದರು. ಬೀಜ ಬಿತ್ತುವುದಕ್ಕೆ ಸಿದ್ಧತೆಗಳು ಆರಂಭವಾದವು. ಈ ಹಂತದಲ್ಲಿ ‘ಯಾವ ಬೀಜ ಬಿತ್ತುವುದು. ಅಷ್ಟು ಬೀಜಗಳು ಎಲ್ಲಿ ಸಿಗುತ್ತವೆ. ಆರೈಕೆ ಇಲ್ಲದೇ ಬೆಳೆಯುವ ಬೀಜಗಳು ಯಾವುವು..’ ಹೀಗೆ ಮತ್ತಷ್ಟು ಪ್ರಶ್ನೆಗಳು ಸೃಷ್ಟಿಯಾದವು. ಆಗ ನೆನಪಿಗೆ ಬಂದಿದ್ದು ಅರಣ್ಯ ಇಲಾಖೆ. ‘ಇಲಾಖೆಯವರ ಬಳಿ ಯೋಜನೆಯ ಉದ್ದೇಶ ಹೇಳಿದಾಗ, ಅವರು ಬೇವು, ಹೊಂಗೆ, ಮುತ್ತುಗ ಸೇರಿದಂತೆ, ಆರೈಕೆ ಇಲ್ಲದಿದ್ದರೂ ಬೆಳೆಯುವಂತಹ ಸುಮಾರು 10 ಸಾವಿರ ಬೀಜಗಳನ್ನು ಉಚಿತವಾಗಿ ನೀಡುವ ಜತೆಗೆ, ಪ್ರಯಾಣದ ವೇಳೆ ವಾಸ್ತವ್ಯಕ್ಕೂ ನೆರವಾದರು’ ಎಂದು ತಂಡದವರಲ್ಲೊಬ್ಬರದಾ ಧೀರಜ್, ಅರಣ್ಯ ಇಲಾಖೆ ಸಹಾಯವನ್ನು ನೆನಪಿಸಿಕೊಳ್ಳುತ್ತಾರೆ.

ಪರಿಸರ ಸೈಕಲ್ ಪಯಣ: ಸೈಕಲ್‌ ಕ್ಯಾರಿಯರ್‌ನಲ್ಲಿ ಬೀಜದ ಚೀಲ ಹೊತ್ತ ಈ ನಾಲ್ವರು ಗೆಳೆಯರು ಜೂನ್ 1ರಂದು ಬೆಂಗಳೂರಿನಿಂದ ಪರಿಸರ ಪಯಣ ಆರಂಭಿಸಿದರು. ಮಾರ್ಗ ಮಧ್ಯೆ ಸಿಗುವ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುತ್ತಾ, ಶಾಲೆಯ ವಿದ್ಯಾರ್ಥಿಗಳೊಂದಿಗೆ ಪರಿಸರ ಸಂರಕ್ಷಣೆ ಕುರಿತು ಮಾಹಿತಿ ನೀಡುತ್ತಾ, ಚರ್ಚೆ, ಸಂವಾದ ನಡೆಸುತ್ತಾ ಅವರ ಕುತೂಹಲದ ಪ್ರಶ್ನಗಳಿಗೆ ಉತ್ತರಿಸುತ್ತಾ, ಪಯಣ ಮುಂದುವರಿಸಿದರು. ಇದು ತುಮಕೂರು, ಶಿರಾ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ದಾಂಡೇಲಿವರೆಗೂ ಮುಂದುವರಿಯಿತು. ಬೆಳಿಗ್ಗೆ 6 ಗಂಟೆ ಆರಂಭವಾಗುತ್ತಿದ್ದ ಪಯಣ, ಸೂರ್ಯ ಮುಳುಗುವವರೆಗೂ ಸಾಗುತ್ತಿತ್ತು. ಶಿರಾ, ಚಿತ್ರದುರ್ಗ, ದಾವಣಗೆರೆ, ಹಾವೇರಿಗಳಲ್ಲಿ ಶಾಲೆ ಮಕ್ಕಳಿಂದಲೂ ಸಸಿ ನಡೆಸಿದ ತಂಡ, ಬೀಜಗಳನ್ನು ಬಿತ್ತನೆ ಮಾಡಿಸಿತು. ಸಸಿ ನೆಡುವುದಕ್ಕೆ ಮಕ್ಕಳು ಹೆಚ್ಚು ಆಸಕ್ತಿ ತೋರಿದರು. ವಿಶ್ವಪರಿಸರ ಮುನ್ನಾದಿನ ದಾಂಡೇಲಿ ತಲುಪಿದರು.

ದಾಂಡೇಲಿಯಲ್ಲಿ ಪರಿಸರ ದಿನ: ಜೂನ್‌ 5 ರಂದು ದಾಂಡೇಲಿಯ ಅರಣ್ಯ ಇಲಾಖೆ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಮುಂದೆ ಸೈಕಲ್‌ ಮೂಲಕವೇ ಗೋವಾ ಮತ್ತು ಕಾರವಾರದವರೆಗೆ ಹೊರಟರು. ಭಾರಿ ಮಳೆ, ಗಾಳಿಯಿಂದಾಗಿ, ಮುಂದಿನ ಪ್ರಯಾಣವನ್ನು ಮೊಟಕುಗೊಳಿಸ ಬೇಕಾಯ್ತು ಎಂದು ಧೀರಜ್ ಹೇಳಿದರು. ಪರಿಸರ ಸೈಕಲ್ ಪಯಣಕ್ಕೆ ಅರಣ್ಯ ಇಲಾಖೆ ಕೊಟ್ಟ ಬೀಜಗಳಲ್ಲಿ, ಸುಮಾರು ಆರು ಸಾವಿರ ಬೀಜ ಮಾತ್ರ ಬಿತ್ತಲು ಸಾಧ್ಯವಾಯಿತು. ’ನೀರು ಇಂಗಿ, ತೇವವಾಗಿರುವ ಭೂಮಿಯಲ್ಲೇ ಬೀಜಗಳನ್ನು ಹಾಕಿದ್ದೇವೆ. ಒಂದೊಂದು ಗುಂಡಿಯಲ್ಲಿ ನಾಲ್ಕೈದು ಬೀಜಗಳನ್ನು ನಾಟಿ ಮಾಡಿದ್ದೇವೆ. ಒಂದು ವಾರ ಮಳೆಯ ಸೂಚನೆ ಇದ್ದಿದ್ದರಿಂದ, ನೆಟ್ಟ ಬೀಜಗಳು ಹುಟ್ಟಬಹುದೆಂಬ ವಿಶ್ವಾಸವಿದೆ. ಆದರೂ ಇಲಾಖೆ ಕೊಟ್ಟ ಅಷ್ಟೂ ಬೀಜಗಳನ್ನು ನೆಡಲಿಲ್ಲ. ನಮ್ಮ ಗುರಿ ಈಡೇರಲಿಲ್ಲ ಎಂಬ ಬೇಸರವೂ ಇದೆ’ ಎಂದು ಪರಿಕ್ರಮ ತಂಡದ ಸದಸ್ಯರು ಅಭಿಪ್ರಾಯಪಟ್ಟರು.

ನೆಟ್ಟಿರುವ ಬೀಜಗಳು ಸಸಿಯಾಗಿ ಬೆಳೆಯುತ್ತವೆಯೋ ಇಲ್ಲವೋ ಎಂಬುದನ್ನು ನೋಡುವ ಬಗ್ಗೆ ಇವರಿಗೆ ಕಾತುರವೂ ಇದೆ. ಅದರೆ, ಅದಕ್ಕೆ ಅವಕಾಶವಾಗುತ್ತದೋ ಇಲ್ಲವೋ ಎಂಬ ಸಣ್ಣ ಅಳಕು ಇದೆ. ಏನಾದರೂ ಆಗಲಿ, ಮುಂದೆ ಪ್ರತಿ ಭಾನುವಾರ ಬೆಂಗಳೂರು ಸುತ್ತಲಿನ ಸರ್ಕಾರಿ ಜಾಗ ಆಯ್ಕೆ ಮಾಡಿಕೊಂಡು ಗಿಡಗಳನ್ನು ನೆಡಬೇಕೆಂಬ ಯೋಜನೆಯನ್ನು ಈ ಯುವಕರು ಹಾಕಿಕೊಂಡಿದ್ದಾರೆ. ಜತೆಗೆ, ಬೆಂಗಳೂರು ಜ್ಞಾನ ಭಾರತಿ ಕ್ಯಾಂಪಸ್‌ನಲ್ಲಿರುವ ಕನ್ನಡ ಅಧ್ಯಯನ ವಿಭಾಗದ ವಿದ್ಯಾರ್ಥಿ ಮತ್ತು ಉಪನ್ಯಾಸಕರು ರಚಿಸಿಕೊಂಡಿರುವ ‘ತೇಜಸ್ವಿ ಕೂಟ’ದೊಂದಿಗೆ ಸೇರಿ ಕ್ಯಾಂಪಸ್‌ನಲ್ಲಿರುವ ಸಾಹಿತ್ಯವನದಲ್ಲಿ ಪ್ರತಿ ಭಾನುವಾರ ಸಸಿ ನೆಡುವ ಯೋಚನೆ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !