ಪ್ರಾಂಶುಪಾಲರ ದೂರದೃಷ್ಟಿಯ ಪರಿಸರ ಪ್ರೀತಿ

ಸೋಮವಾರ, ಜೂನ್ 17, 2019
31 °C
ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಕಾಲೇಜು ಆವರಣದಲ್ಲಿ ಬೆಳೆದಿರುವ ವೃಕ್ಷಗಳು

ಪ್ರಾಂಶುಪಾಲರ ದೂರದೃಷ್ಟಿಯ ಪರಿಸರ ಪ್ರೀತಿ

Published:
Updated:
Prajavani

ಯಳಂದೂರು: ‘ನಿಸರ್ಗ ಉಳಿಸಿ ಬೆಳೆಸಬೇಕು’ ಎಂಬ ಭಾಷಣ ವೇದಿಕೆಗಳಿಗೆ ಮಾತ್ರ ಶೋಭೆ ತರುತ್ತದೆ. ಒಂದಷ್ಟು ಸಸಿ ನೆಟ್ಟು ಫೋಟೊಕ್ಕೆ ನಿಂತು ಕೈತೊಳೆದರೆ ಮುಗಿಯಿತು ಎನ್ನುವ ಮನೋಭಾವ ಪ್ರಚಾರ ಪ್ರಿಯರದ್ದು. ಇದನ್ನು ಕಾರ್ಯಗತ ಮಾಡುವವರು ಅಪರೂಪ. 

ತಾಲ್ಲೂಕಿನ ಗುಂಬಳ್ಳಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಕಾಲೇಜು ಆವರಣದಲ್ಲಿ ಈಗ ತಂಪಿನ ತೋಪು ತಲೆ ಎತ್ತಿದೆ. ನೂರಾರು ಗಿಡಗಳಿಂದ ಕಂಗೊಳಿಸುತ್ತಿದೆ. ಸದಾ ಹಸಿರಿನಿಂದ ನಳನಳಿಸುವ ವನವನ್ನು ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳ
ಸಹಭಾಗಿತ್ವದಲ್ಲಿ ‌ಅಭಿವೃದ್ಧಿಪಡಿಸಿದ್ದಾರೆ ಪ್ರಾಂಶುಪಾಲ ದೊಡ್ಡಸುಬ್ಬಯ್ಯ. 

ಅರಣ್ಯ ಇಲಾಖೆ ಮತ್ತು ಬಿಆರ್‌ಟಿಯಿಂದ ಗಿಡಗಳನ್ನು ತಂದು ಸ್ವತಃ ಗುಂಡಿ ತೋಡಿ ಬೇಲಿ ನಿರ್ಮಿಸಿ ಬೆಳೆಸಿದ್ದಾರೆ. ಜಾನುವಾರುಗಳಿಗೆ ಆಹಾರದ ಮೂಲವಾಗದಂತೆ ಕಾಯ್ದಿದ್ದಾರೆ. ನೂರೈವತ್ತಕ್ಕೂ ಹೆಚ್ಚಿನ ದೊಡ್ಡ ಮರಗಳನ್ನು ಇಲ್ಲಿ ಈಗ ಕಾಣಬಹುದು.

12 ವರ್ಷಗಳಿಂದ ಸಸಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಒಣಗುತ್ತಿದ್ದಾಗ ಕೊಳವೆ ಮತ್ತು ಕಾಲುವೆಯಲ್ಲಿ ಹರಿಯುವ ನೀರು ತಂದು ಹಾಕಿದ್ದಾರೆ. ಈಗ ಈ ಸಸಿಗಳು ವೃಕ್ಷಗಳಾಗಿವೆ.

‘ನಿತ್ಯ ಬೆಳಿಗ್ಗೆಯಿಂದಲೇ ಪ್ರವಾಸಿಗರು ಮತ್ತು ಸ್ಥಳೀಯರು ಕೆಲವೊತ್ತು ವಿಶ್ರಮಿಸಿ ಹೋಗುವುದನ್ನು ಕಂಡಾಗ ಸಂತಸವಾಗುತ್ತದೆ’ ಎನ್ನುತ್ತಾರೆ ಸುಬ್ಬಯ್ಯ.

ಏನೇನಿದೆ: ಬಿಳಿಗಿರಿರಂಗನಬೆಟ್ಟದಲ್ಲಿ 1995ರಲ್ಲಿ ವಿಜಿಕೆಕೆ ಪದವಿಪೂರ್ವ ಕಾಲೇಜು ಸ್ಥಾಪನೆಯಾಯಿತು. 2000ನೇ ವರ್ಷದಲ್ಲಿ ಉಪ್ಪಿನಮೋಳೆಗೆ ಸ್ಥಳಾಂತರವಾಯಿತು. ಪರಿಸರ ದಿನದಂದು ಅರಣ್ಯ ಇಲಾಖೆ ಗಿಡ ನೆಡಲು ನೆರವಾಗುತ್ತದೆ. ಇದು ಪುಟ್ಟ ಕಾನನವಾಗಿ ವಿಸ್ತಾರವಾಗುತ್ತಲೇ ಸಾಗಿದೆ.

ತೇಗ, ನೀಲಗಿರಿ, ಬೇವು, ಸೋರೆ, ನೇರಳೆ, ಹೊಂಗೆ, ಸಿಲ್ವರ್ ಸೇರಿದಂತೆ ನೂರಾರು ಮರಗಳಿವೆ. ಜೇನು, ಹತ್ತಾರು ಬಗೆಯ ಚಿಟ್ಟೆ, ನೂರಾರು ಪ್ರಭೇದದ ಪಕ್ಷಿಗಳನ್ನು ಪ್ರತಿದಿನ ಕಾಣಬಹುದು. ಹಳೆಯ ವಿದ್ಯಾರ್ಥಿಗಳು ಮತ್ತೆ ಕಾಲೇಜಿಗೆ ಬಂದಾಗ ತಾವು ಬೆಳೆಸಿದ ಮರಗಳನ್ನು ಕಂಡು ಸಂಭ್ರಮಿಸುತ್ತಾರೆ. 

ಜನರಿಗೆ ನೆರಳಿನಾಸರೆ: ‘2002ರಿಂದಲೇ ಕಾಲೇಜು ಸುತ್ತಲೂ ವಿದ್ಯಾರ್ಥಿಗಳ ನೆರವಿನೊಡನೆ ಸಸಿ ಬೆಳೆಸಲು ಆರಂಭಿಸಿದೆವು. ಮುಖ್ಯರಸ್ತೆಯಿಂದ ಕಾಲೇಜು ಪ್ರವೇಶಿಸುತ್ತಿದ್ದಂತೆ ದಟ್ಟ ವೃಕ್ಷಗಳ ಸಾಲು ಜನರನ್ನು ಸ್ವಾಗತಿಸುತ್ತವೆ. ಆಸ್ಪತ್ರೆ, ಮಹಿಳಾ ತರಬೇತಿ ಕೇಂದ್ರ ಹಾಗೂ ಕಾಲೇಜಿಗೆ ಹೊಂದಿಕೊಂಡಂತೆ ತಂಪಾದ ಹವೆ ಇಲ್ಲಿ ವಿಸ್ತರಿಸಿದೆ. ಬಿಸಿಲಿನ ಬೇಗೆಗೆ ಬಸವಳಿದವರು ಕೆಲ ಹೊತ್ತು ಕುಳಿತು ಸಾಗುತ್ತಾರೆ. ಮರದ ನೆರಳಿನಲ್ಲಿ ಮಕ್ಕಳು ಕುಳಿತು ಊಟ ಮಾಡುವುದನ್ನು ನೋಡಿದಾಗ ಸಂತಸವಾಗುತ್ತದೆ’ ಎಂದು ಹೇಳುತ್ತಾರೆ ಪ್ರಾಂಶುಪಾಲ ಸುಬ್ಬಯ್ಯ.

ವನವೇ ಬಹುಮಾನ!

‘ನೂರಾರು ಗಿಡಗಳನ್ನು ನೆಟ್ಟು ಬೆಳೆಸಿರುವ ಸುಬ್ಬಯ್ಯ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲು
ದಾಖಲೆ ಕೇಳುತ್ತಾರೆ. ಆದರೆ, ಪ್ರಶಸ್ತಿಗಾಗಿ ಅರ್ಜಿ ಹಾಕದ ಅವರು ಗಿಡ–ಮರಗಳಿಂದ ಆವೃತವಾದ ವನವೇ ನನಗೆ ಬಹುಮಾನ ಎನ್ನುತ್ತಾರೆ. ಇಂತಹವರ ಸಂಖ್ಯೆ ಹೆಚ್ಚಾಗಬೇಕು’ ಎಂದು ಯಳಂದೂರು ನಿವಾಸಿ ಡಿ.ಸಂತೋಷ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !