ಪ್ರಕೃತಿ ಎದುರು ಮಾನವ ಸರ್ವಶ್ರೇಷ್ಠನಲ್ಲ

ಮಂಗಳವಾರ, ಜೂನ್ 18, 2019
26 °C
ವಿಶ್ವ ಪರಿಸರ ದಿನಾಚರಣೆಯಲ್ಲಿ ಡಾ.ಎಂ.ಪಿ.ರಾಘವೇಂದ್ರ ಅಭಿಮತ

ಪ್ರಕೃತಿ ಎದುರು ಮಾನವ ಸರ್ವಶ್ರೇಷ್ಠನಲ್ಲ

Published:
Updated:
Prajavani

ಚಾಮರಾಜನಗರ: ‘ನನ್ನಿಂದಲೇ ಎಲ್ಲವೂ ನಡೆಯುತ್ತದೆ ಎನ್ನುವ ಅಹಂ ಮನೋಭಾವದ ಮನುಷ್ಯ ಪ್ರಕೃತಿಯ ಎದುರು ಸರ್ವಶ್ರೇಷ್ಠನಲ್ಲ’ ಎಂದು ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸೂಕ್ಷ್ಮಜೀವ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಪಿ.ರಾಘವೇಂದ್ರ ಅವರು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಭಾಗಿತ್ವದಲ್ಲಿ ಶುಕ್ರವಾರ ನಗರದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯಾರು ತಮ್ಮ ದೇಹವನ್ನು‌ ಸರಿಯಾಗಿ ಅರ್ಥೈಸಿಕೊಂಡಿಲ್ಲವೋ ಅವರು ಪ್ರಕೃತಿಯಲ್ಲಿ ಅವಲಕ್ಷಣಗಳನ್ನು ಸೃಷ್ಟಿಸುತ್ತಾರೆ. ನಾವು ಈಗ ಅರ್ಥ ಮಾಡಿಕೊಂಡಿರುವ ವಿಜ್ಞಾನ ವಿಜ್ಞಾನವೇ ಅಲ್ಲ. ವಿಜ್ಞಾನಕ್ಕೂ ಮೀರಿದ ಹಲವು ವಿಷಯಗಳಿವೆ. ಸಂಶೋಧನೆ ಪ್ರಕಾರ, ಅತಿಹೆಚ್ಚು ಬಳಸಿದ ಆಮ್ಲಜನಕ ದೇಹಕ್ಕೆ ವಿಷಕಾರಕ; ಯಾರು ಕಡಿಮೆ ಉಸಿರಾಡುತ್ತಾರೋ ಅವರು ಹೆಚ್ಚುಕಾಲ ಬದುಕುತ್ತಾರೆ’ ಎಂದರು. 

‘ಈ ಜಗತ್ತಿನಲ್ಲಿ ನಾನೇನು ಅಲ್ಲ ಎನ್ನುವ ಮನೋಭಾವದಿಂದ ಮನುಷ್ಯ ಸರಳವಾಗಿ ಬದುಕುವುದನ್ನು ರೂಢಿಸಿಕೊಂಡರೆ ಪ್ರಕೃತಿ ಹೆಚ್ಚು ಕಾಲ ಉಳಿಯುತ್ತಾಳೆ. ನಮ್ಮ ಶರೀರವನ್ನು ಅರ್ಥೈಸಿಕೊಂಡರೆ ಆರೋಗ್ಯ ಸದೃಢವಾಗುವಂತೆ ಪ್ರಕೃತಿಯನ್ನು ಅರ್ಥ ಮಾಡಿಕೊಂಡು ಅದರಂತೆ ಬಿಡಬೇಕು. ಎಷ್ಟು ಅವಶ್ಯಕತೆ  ಇದೆಯೋ ಅಷ್ಟನ್ನು ಮಾತ್ರ ಸದ್ಬಳಕೆ ಮಾಡಿಕೊಂಡರೆ ಉಳಿದೆಲ್ಲವೂ ನ್ಯಾಯಬದ್ಧವಾಗಿ ನಡೆಯುತ್ತದೆ. ಪ್ರಕೃತಿ ಬಂದ ಮೇಲೆ ನಾವು ಬಂದಿರುವುದು ಎಂಬುದನ್ನು ನೆನೆಪಿನಲ್ಲಿ ಇಟ್ಟುಕೊಳ್ಳಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಸ್.ಲತಾಕುಮಾರಿ ಅವರು ಮಾತನಾಡಿ, ‘ನಾಗರಿಕತೆಯ ಹೆಸರಿನಲ್ಲಿ ಮನುಷ್ಯ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಪರಿಸರದಲ್ಲಿನ ಸೂಕ್ಷ್ಮ ಹಾಗೂ ಸಕಲ ಜೀವಿಗಳಿಗೂ ಅವಕಾಶ ಮಾಡಿಕೊಡಬೇಕು. ಇರುವುದೊಂದು ಭೂಮಿಯನ್ನು ಸಂರಕ್ಷಿಸಬೇಕು’ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜೆ.ವಿಶಾಲಾಕ್ಷಿ ಮಾತನಾಡಿ, ‘ಮನುಷ್ಯನಿಗಿಂತ ಅತಿ ಕ್ರೂರ ಪ್ರಾಣಿ ಮತ್ತೊಂದಿಲ್ಲ. ತನ್ನ ಸ್ವಾರ್ಥಕ್ಕೆ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ. ಆಧುನಿಕತೆಯ ಹೆಸರಿನಲ್ಲಿ ಮರಗಳನ್ನು ಕಡಿಯುತ್ತಿದ್ದಾನೆ. ಇದರಿಂದ ವಾತಾವರಣ ಏರುಪೇರಾಗುತ್ತಿದೆ. ಕಾಡನ್ನು ನಾಡು ಮಾಡಲು ಹೊರಟರೆ ಬಿಸಿಲ ಹಾಗೂ ಜಾಗತಿಕ ತಾಪಮಾನ ಹೆಚ್ಚುತ್ತದೆ. ಒಜೋನ್‌ ಪದರ ನಾಶವಾಗುತ್ತದೆ. ಹಸಿರು ಪರಿಸರ ಉಳಿಸಿಕೊಳ್ಳಲು ಕಷ್ಟವಾಗುತ್ತದೆ’ ಎಂದರು.

ಪರಿಸರ ದಿನಾಚರಣೆ ಅಂಗವಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. 

ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಪಿ.ಮಂಜುನಾಥ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಎಂ.ಜಿ.ರಘುರಾಂ ಇದ್ದರು. 

‘ಕಸ ಪ್ರಕೃತಿ ನಿಯಮದ ಪರಿವರ್ತನೆಯ ಭಾಗ’
‘ಮಾನವನ ಬಳಕೆಗೆ ಬಾರದ ವಸ್ತಗಳೆಲ್ಲವೂ ಕಸ. ಆದರೆ, ಪ್ರಕೃತಿಗೆ ಉಪಯೋಗಕ್ಕೆ ಬಾರದ ವಸ್ತುಗಳು ಎಂಬುದಿಲ್ಲ. ಕಸ ಪ್ರಕೃತಿ ನಿಯಮದ ಪರಿವರ್ತನೆಯ ಭಾಗ. ಅದು ಎಲ್ಲವನ್ನೂ ಉಪಯೋಗಿಸಿಕೊಳ್ಳುತ್ತಿದೆ. ದೇಹದಲ್ಲಿ ಉಸಿರಾಟ ಸ್ಥಗಿತವಾದರೆ ವಾಸನೆ ಬರುವ ಪ್ರಕ್ರಿಯೆ ಪರಿವರ್ತನೆ. ವಾತಾವರಣದಲ್ಲಿ ದೇಹ ಕೂಡ ವಿಲೀನವಾಗುತ್ತಿದೆ ಎನ್ನುವ ಸೂಚನೆ. ನಮ್ಮ ಸಾವು ಮತ್ತೊಂದು ಜೀವಕೋಶದ ಹುಟ್ಟಿಗೆ ಕಾರಣವಾಗುತ್ತದೆ. ಇಷ್ಟೇ ಪರಿವರ್ತನಾ ನಿಯಮ’ ಎಂದು ಡಾ.ಎಂ.ಪಿ.ರಾಘವೇಂದ್ರ ತಿಳಿಸಿದರು.

‘ದಯಮಾಡಿ ಏನನ್ನೂ ಸುಡಬೇಡಿ. ನಿಮಗೆ ಅಗತ್ಯವಿರುವುದನ್ನು ಮಾತ್ರವೇ ಬಳಸಿಕೊಳ್ಳಿ. ಹೆಚ್ಚು ಬಳಸಬೇಡಿ. ಇದರಿಂದ ವಾತಾವರಣ ಕಲುಷಿತಗೊಳ್ಳುತ್ತದೆ. ಗಾಳಿಗೆ ಯಾವುದೇ ಸೀಮೆ ಇಲ್ಲ. ಸುಟ್ಟ ಕಸ ಆರೋಗ್ಯಕರ ವಾತಾವರಣದಲ್ಲಿ ಸೇರಿ ವಾತಾವರಣವನ್ನು ಕಲುಷಿತಗೊಳಿಸುತ್ತದೆ. ಎಲ್ಲರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಪರಿಸರವು ಕಸದಿಂದಲೇ ತನ್ನ ಸಂಪನ್ಮೂಲದ ಶಕ್ತಿಯನ್ನು ತಾನೇ ಸದೃಢಗೊಳಿಸಿಕೊಳ್ಳುತ್ತದೆ. ಪ್ರತಿಯೊಬ್ಬರೂ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು’ ಎಂದು ಸಲಹೆ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !