ಚಾಮರಾಜನಗರ: ಇಲ್ಲೊಬ್ಬ ಸಾಲು ಗಿಡಗಳ ವೆಂಕಟೇಶ್!

ಮಂಗಳವಾರ, ಜೂನ್ 18, 2019
24 °C
ಸ್ವಂತ ಖರ್ಚಿನಲ್ಲಿ ಗಿಡ ನೆಡುವ ಕಾರ್ಯ, ಇದುವರೆಗೆ ₹ 12 ಲಕ್ಷ ವೆಚ್ಚ, 3,000 ಗಿಡಗಳು, ₹ 10 ಲಕ್ಷ ಸಾಲ

ಚಾಮರಾಜನಗರ: ಇಲ್ಲೊಬ್ಬ ಸಾಲು ಗಿಡಗಳ ವೆಂಕಟೇಶ್!

Published:
Updated:
Prajavani

ಚಾಮರಾಜನಗರ: ‘ಪರಿಸರ ರಕ್ಷಿಸಬೇಕು, ಗಿಡ ಮರಗಳನ್ನು ನೆಟ್ಟರೆ ಜನರಿಗೆ ಸಾಕಷ್ಟು ಆಮ್ಲಜನಕ ಸಿಗುತ್ತದೆ... ಎಂಬುದರ ಬಗ್ಗೆ ನಾನು ಯೋಚನೆ ಮಾಡಿದವನೇ ಅಲ್ಲ. ನಗರಕ್ಕೆ ಬರುವ ಜನರಿಗೆ, ರಸ್ತೆ ಬದಿ ವ್ಯಾಪಾರಿಗಳಿಗೆ ನೆರಳು ಸಿಗಬೇಕು ಎಂಬುದಷ್ಟೇ ನನ್ನ ಉದ್ದೇಶ ಆಗಿತ್ತು. ಈಗ ಪರಿಸರ ಸಂರಕ್ಷಣೆ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಿದ್ದೇನೆ’

– ಇದು ಚಾಮರಾಜನಗರದ ಪರಿಸರಪ್ರೇಮಿ ಸಿ.ಎಂ.ವೆಂಕಟೇಶ್ ಅವರ ಪ್ರಾಮಾಣಿಕ ಮಾತುಗಳು.

ವೃತ್ತಿಯಲ್ಲಿ ಲೆಕ್ಕಪರಿಶೋಧಕರಾಗಿರುವ ಅವರು ಎರಡು ವರ್ಷ ಗಳಿಂದ ನಗರದ ಸುತ್ತಮುತ್ತ 3,000ಕ್ಕೂ ಹೆಚ್ಚು ಗಿಡಗಳನ್ನು ಸ್ವಂತ ಖರ್ಚಿನಿಂದ ನೆಟ್ಟಿದ್ದಾರೆ. ಇವುಗಳಲ್ಲಿ 2,500ಕ್ಕೂ ಅಧಿಕ ಗಿಡಗಳು ಚೆನ್ನಾಗಿ ಬೆಳೆದಿವೆ. ತಮ್ಮ ಜೇಬಿನಿಂದಲೇ ದುಡ್ಡು ಹಾಕಿ ಮಾಡಿ ಪೋಷಣೆಯನ್ನೂ ಮಾಡುತ್ತಿದ್ದಾರೆ. ಗಿಡಗಳನ್ನು ನೆಡಲು ಆರಂಭಿಸಿದಲ್ಲಿಂದ ಇಲ್ಲಿಯವರೆಗೆ ₹ 12 ಲಕ್ಷ ಖರ್ಚು ಮಾಡಿದ್ದಾರೆ. ಗಿಡ ನೆಡುವ ಹುಚ್ಚು, ₹ 10 ಲಕ್ಷದಷ್ಟು ಸಾಲದ ಭಾರವನ್ನೂ ಅವರ ಮೇಲೆ ಹೊರಿಸಿದೆ. 

ರೈಲ್ವೆ ನಿಲ್ದಾಣದ ರಸ್ತೆ, ನಂಜನಗೂಡು ರಸ್ತೆ, ನ್ಯಾಯಾಲಯಕ್ಕೆ ಹೋಗುವ ರಸ್ತೆ, ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ರಸ್ತೆ, ಡಾ.ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣ, ಮಾದಾಪುರದಲ್ಲಿ ಕೇಂದ್ರೀಯ ವಿದ್ಯಾಲಯಕ್ಕೆ ಹೋಗುವ ರಸ್ತೆ, ವಿವಿಧ ಬಡಾವಣೆಗಳಲ್ಲಿ ವೆಂಕಟೇಶ್‌ ಅವರು ನೆಟ್ಟ ಗಿಡಗಳು ಈಗ ಹಸಿರಿನಿಂದ ನಳನಳಿಸುತ್ತಿವೆ.

‘ಅಭಿವೃದ್ಧಿಯ ಬೆನ್ನು ಬಿದ್ದಿರುವ ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳಿಗೆ ಈಗ ಕಾಂಕ್ರೀಟ್‌, ಟಾರು ಬಿದ್ದಿವೆ. ಬಿ.ರಾಚಯ್ಯ ಜೋಡಿರಸ್ತೆ, ಕೋರ್ಟ್‌ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿಗೂ ದೊಡ್ಡ ದೊಡ್ಡ ಮರಗಳು ಇದ್ದವು. ಗ್ರಾಮೀಣ ಪ್ರದೇಶಗಳಿಂದ ಬರುತ್ತಿದ್ದ ಜನರು, ಬೀದಿ ಬದಿ ವ್ಯಾಪಾರಿಗಳು ಇಲ್ಲಿ ಮರಗಳ ನೆರಳಿನಡಿಯಲ್ಲಿ ಆಶ್ರಯ ಪಡೆಯುತ್ತಿದ್ದರು. ರಸ್ತೆ ವಿಸ್ತರಣೆಗಾಗಿ ನೆರಳು ನೀಡುತ್ತಿದ್ದ ಮರಗಳಿಗೆ ಕೊಡಲಿ ಏಟು ಬಿದ್ದಿದ್ದವು. ಇಲ್ಲಿ ಮತ್ತೆ ನೆರಳು ಇರುವಂತಾಗಬೇಕು. ಪಕ್ಷಿಗಳ ಚಿಲಿಪಿಲಿ ಕೇಳಿಬರಬೇಕು ಎಂಬ ಉದ್ದೇಶದಿಂದ ಗಿಡ ನೆಡಲು ಆರಂಭಿಸಿದೆ’ ಎಂದು ಹೇಳುತ್ತಾರೆ ವೆಂಕಟೇಶ್‌. 

2017ರ ಏಪ್ರಿಲ್‌ 24ರಂದು ವರನಟ ಡಾ.ರಾಜಕುಮಾರ್‌ ಅವರ ಹುಟ್ಟುಹಬ್ಬದ ಅಂಗವಾಗಿ ಮೊದಲ ಬಾರಿಗೆ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಗಿಡಗಳನ್ನು ನೆಡಲು ವೆಂಕಟೇಶ್‌ ಆರಂಭಿಸಿದರು. ಅಲ್ಲಿಂದ ರಾಷ್ಟ್ರದ ಮಹನೀಯರ, ಚಿತ್ರ ತಾರೆಯರ ಹುಟ್ಟುಹಬ್ಬಗಳನ್ನು ವಿವಿಧ ಕಡೆಗಳಲ್ಲಿ ಗಿಡಗಳನ್ನು ಅವರು ನೆಡುತ್ತಾ ಬಂದಿದ್ದಾರೆ. 

‘ಈ ಕೆಲಸವನ್ನು ನಾನೊಬ್ಬನೇ ಮಾಡಿದಂತೆ ಆಗಬಾರದು. ಸಾಮೂಹಿಕ ಸಹಭಾಗಿತ್ವ ಇರಬೇಕು ಎಂಬ ಉದ್ದೇಶದಿಂದ ಗಿಡ ನೆಡುವುದು, ಅವುಗಳ ನಿರ್ವಹಣೆಗೆ ಪ್ರಾಯೋಜಕತ್ವ ಪಡೆಯಲು ಶ್ರಮಿಸುತ್ತೇನೆ. ಗಣ್ಯರನ್ನು ಕರೆದು ಅವರ ಮೂಲಕ ಗಿಡ ನೆಡುವ ಕೆಲಸ ಮಾಡುತ್ತಿದ್ದೇನೆ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮೂಲಕವೂ ಪ್ರಚಾರ ಮಾಡುತ್ತಿದ್ದೇನೆ’ ಎಂದು ಹೇಳುತ್ತಾರೆ ವೆಂಕಟೇಶ್‌. 

ಪೋಷಣೆ ಸವಾಲು: ಗಿಡ ನೆಡುವುದು ದೊಡ್ಡ ಕೆಲಸ ಅಲ್ಲ. ಅವುಗಳು ಒಂದು ಹಂತಕ್ಕೆ ಬೆಳೆಯುವವರೆಗೆ ಪೋಷಣೆ ಮಾಡುವುದು ಸವಾಲಿನ ಕೆಲಸ. ಗಿಡಗಳು ಗಾಳಿ, ಮಳೆಗೆ ಬಾಗುತ್ತವೆ. ಜಾನುವಾರುಗಳು ತಿಂದು ಹಾಕುತ್ತವೆ. ಅವುಗಳಿಂದ ರಕ್ಷಿಸಲು ಗಿಡಗಳ ಸುತ್ತ ಬೇಲಿ ನಿರ್ಮಿಸಬೇಕು. ಗಿಡಗಳು ಬಾಗದಂತೆ ತಡೆಯಲು ಇಟ್ಟಿದ್ದ ಮರದ ಕಂಬಗಳನ್ನು ಹೊತ್ತೊಯ್ಯುವವರೂ ಇದ್ದಾರೆ. ಭವಿಷ್ಯದಲ್ಲಿ ಮರದಿಂದ ತಮಗೆ ತೊಂದರೆಯಾಗುತ್ತದೆ ಎಂದುಕೊಂಡು ಗಿಡವನ್ನು ಕಿತ್ತು ಎಸೆಯುವವರೂ ಇದ್ದಾರೆ. 

ನೆಟ್ಟ ಗಿಡಗಳನ್ನು ಪೋಷಿಸುವ ಜವಾಬ್ದಾರಿಯೂ ವೆಂಕಟೇಶ್‌ ಅವರದ್ದೆ. ಬೇಸಿಗೆಯಲ್ಲಿ ನೀರುಣಿಸುವುದು, ಬಾಗದಂತೆ ತಡೆಯುವುದು, ಹುಳ ಹಿಡಿದರೆ ಔಷಧ ಬಿಡುವುದು... ಹೀಗೆ ಎಲ್ಲ ಕೆಲಸವನ್ನು ಅವರೇ ಮಾಡುತ್ತಾರೆ. ಅವರಿಂದ ಸಾಧ್ಯವಾಗದಿದ್ದರೆ ಆಳುಗಳನ್ನು ಹಿಡಿದು ಮಾಡಿಸುತ್ತಾರೆ.

ಬೇಸಿಗೆ ಕಾಲದಲ್ಲಿ ಗಿಡಗಳಿಗೆ ನೀರು ಹಾಯಿಸಲು ವೆಂಕಟೇಶ್‌ ಅವರು ಪ್ರಾಯೋಜಕರನ್ನು ಹಿಡಿಯುತ್ತಾರೆ. ಯಾರಾದರೂ ಹುಟ್ಟುಹಬ್ಬ ಆಚರಿಸುತ್ತಿದ್ದರೆ, ಅವರ ಜನ್ಮದಿನದಂದು ಗಿಡಗಳಿಗೆ ನೀರು ಹಾಕಿಸಲು ಮನವೊಲಿಸುತ್ತಾರೆ. 

‘ಸದ್ಯ, ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಗಿಡಗಳನ್ನು ನೆಡುವ ಗುರಿ ಇಟ್ಟುಕೊಂಡಿದ್ದೇನೆ. ಒಟ್ಟು 800 ಗಿಡಗಳು ಬೇಕು. ಮಳೆ ಆರಂಭವಾಗಿರುವುದರಿಂದ ಈಗ ನೆಡಲು ಸಕಾಲ. ಇದೊಂದು ಕೆಲಸ ಮುಗಿದರೆ, ನಗರದಲ್ಲಿ ಎಲ್ಲ ಕಡೆ ಗಿಡಗಳನ್ನು ನೆಟ್ಟಂತೆ ಆಗುತ್ತದೆ’ ಎಂದು ತಮ್ಮ ಮುಂದಿನ ಯೋಜನೆಯನ್ನು ವೆಂಕಟೇಶ್‌ ವಿವರಿಸುತ್ತಾರೆ. 

ಏಕಾಂಗಿ ಪ್ರಯತ್ನ

ಸಿ.ಎಂ.ವೆಂಕಟೇಶ್‌ ಅವರು ಇದುವರೆಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವುದನ್ನು ತಮ್ಮ ಮನೆಯ ಕೆಲಸ ಎಂಬಂತೆ ಮಾಡಿಕೊಂಡು ಬಂದಿದ್ದಾರೆ. ಯಾರ ಸಹಾಯವನ್ನೂ ಅವರು ನಿರೀಕ್ಷಿಸಿಲ್ಲ. ಜನರು, ಸಂಘ ಸಂಸ್ಥೆಗಳು, ಜಿಲ್ಲಾಡಳಿತ, ಅರಣ್ಯ ಇಲಾಖೆ ಕೂಡ ಇದರಲ್ಲಿ ಭಾಗಿಯಾಗಬೇಕು ಎಂಬ ಆಶಯ ಅವರಿಗೆ ಇದೆ. ಹಾಗೆಂದು, ಅವರು ಯಾರ ಬಳಿಯೂ ಹೋಗಿ ನೆರವಾಗುವಂತೆ ಕೇಳಿಲ್ಲ. 

ಹೊಂಗೆ, ಕಾಡು ಬಾದಾಮಿ, ಹೆಬ್ಬೇವು, ಬೇವು, ಜಂಬು ನೇರಳೆ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ಅವರು ನೆಟ್ಟಿದ್ದಾರೆ. ನರ್ಸರಿಗೆ ಬಾಡಿಗೆ ಕೊಟ್ಟು ಗಿಡಗಳನ್ನು ಬೆಳೆಸುತ್ತಿದ್ದಾರೆ.

‘ಕೊನೆ ಕ್ಷಣದಲ್ಲಿ ಗಿಡಗಳ ಕೊರತೆಯಾದರೆ ಅರಣ್ಯ ಇಲಾಖೆಗೆ ಮನವಿ ಮಾಡಿ ಗಿಡಗಳನ್ನು ಪಡೆಯುತ್ತೇನೆ. ಅದು ಬಿಟ್ಟರೆ ಬೇರೆಲ್ಲ ಗಿಡಗಳನ್ನು ನಾನೇ ಸಂಗ್ರಹಿಸುತ್ತೇನೆ’ ಎಂದು ವೆಂಕಟೇಶ್‌ ಅವರು ಮಾಹಿತಿ ನೀಡಿದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !