ಪರಿಸರ ಕಾನೂನಿಗೊಂದು ಕಣ್ಗಾವಲು

ಸೋಮವಾರ, ಮಾರ್ಚ್ 18, 2019
31 °C
ಪರಿಸರ ಕಾನೂನನ್ನು ಎಗ್ಗಿಲ್ಲದೇ ಮುರಿಯುವವರ ಕೈಕಟ್ಟಿ ಹಾಕುತ್ತದೆ ಹಸಿರು ನ್ಯಾಯಮಂಡಳಿ

ಪರಿಸರ ಕಾನೂನಿಗೊಂದು ಕಣ್ಗಾವಲು

Published:
Updated:
Prajavani

ಈ ಬಾರಿಯ ಲೋಕಸಭಾ ಚುನಾವಣೆಯ ದಿನಾಂಕ ಮತ್ತು ವಿಧಿವಿಧಾನಗಳ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಸುನಿಲ್ ಅರೋರ ಅವರು ವಿವರ ಕೊಡುವಾಗ ‘ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಬ್ಯಾನರ್- ಫ್ಲೆಕ್ಸ್ ಬಳಸಬೇಕಾದರೆ, ಅವು ಪರಿಸರಸ್ನೇಹಿ ಆಗಿರಬೇಕೆಂದು ಮೊದಲ ಬಾರಿಗೆ ಚುನಾವಣಾ ಆಯೋಗ ಸೂಚಿಸುತ್ತದೆ’ ಎಂದು ಹೇಳಿದ್ದು ನಿರೀಕ್ಷಿತವೇ ಆಗಿತ್ತು. ಹಸಿರು ನ್ಯಾಯಮಂಡಳಿ ಈ ಮಾರ್ಚ್ 5ರಂದು ಚುನಾವಣಾ ಆಯೋಗಕ್ಕಷ್ಟೇ ಅಲ್ಲ, ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ಸಚಿವಾಲಯಕ್ಕೂ ಯುಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿತ್ತು.

ಬೆಂಗಳೂರಿನ ನಾಗರಿಕರು ಇನ್ನೂ ಮರೆತಿಲ್ಲ. ನಗರದ ಎಲ್ಲೆಂದರಲ್ಲಿ ಅನಧಿಕೃತ ಬ್ಯಾನರ್‌ಗಳು, ಫ್ಲೆಕ್ಸ್‌ಗಳನ್ನು ಕಂಡಾಗ, ಕರ್ನಾಟಕ ಹೈಕೋರ್ಟ್‌ ಒಂದು ವಾರ ಗಡುವು ಕೊಟ್ಟಿತು. ಬೆಂಗಳೂರು ಮಹಾನಗರ ಪಾಲಿಕೆ ಹಗಲೂ ರಾತ್ರಿಯೆನ್ನದೆ ಕಳೆದ ಆಗಸ್ಟ್ 18ರಂದು 21,000 ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಕಿತ್ತುಹಾಕಿತು. ಅರ್ಥವಿಷ್ಟೇ, ಜಡ್ಡುಗಟ್ಟಿದ ಸಂಸ್ಥೆಗಳು ಕೆಲಸ ಮಾಡಬೇಕಾದರೆ ಕಾನೂನಿನ ಲಾಠಿಯೇ ಬೇಕು. ಇಂಥ ಸಂದರ್ಭಗಳಲ್ಲೇ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಲವು ಮಹತ್ವದ ತೀರ್ಮಾನಗಳನ್ನು ಕೊಡುತ್ತಲೇ ಬಂದಿದೆ. ಕಾನೂನು ಮೀರಿದವರ ಕೈಕಟ್ಟುತ್ತದೆ.

ಮಾಲಿನ್ಯಕ್ಕೂ ರಾಜಧಾನಿಯಾಗಿರುವ ದೆಹಲಿಯಲ್ಲಿ ಹದಿನೈದು ವರ್ಷ ಹಳೆಯದಾದ ಪೆಟ್ರೋಲ್ ವಾಹನಗಳು ಮತ್ತು ಹತ್ತು ವರ್ಷಗಳಷ್ಟು ಹಳೆಯದಾದ ಡೀಸೆಲ್ ವಾಹನಗಳನ್ನು ಬ್ಯಾನ್ ಮಾಡಿ ಎಂದು ಸುಪ್ರೀಂ ಕೋರ್ಟ್ ಕಳೆದ ಅಕ್ಟೋಬರ್‌ನಲ್ಲೇ ಆಜ್ಞೆ ಹೊರಡಿಸಿತ್ತು. ಇದಾದ ನಂತರವೂ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸೂಚಿ ಮೊನ್ನೆ ಡಿಸೆಂಬರ್‌ನಲ್ಲಿ 450 ಅಂಕ ಮುಟ್ಟಿತ್ತು. ಅದು ಅತ್ಯಂತ ಅಪಾಯಕಾರಿ ಎಂಬುದು ದೆಹಲಿಯ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಗೊತ್ತಿಲ್ಲದ ವಿಷಯವೇನಲ್ಲ.

ಗಾಳಿಯ ಗುಣಮಟ್ಟ ಸೂಚಿ 100 ಮೀರಿದರೆ, ಅದು ಅಪಾಯ. ಇಂಥ ಸಂದರ್ಭದಲ್ಲಿ ದೆಹಲಿಯಲ್ಲಿ ‘ಫೋಕ್ಸ್‌ವ್ಯಾಗನ್’ ಎಂಬ ಜರ್ಮನಿಯ ಕಂಪನಿ ತಾನು ಮಾರುವ ಡೀಸೆಲ್ ಕಾರುಗಳು ನಿಗದಿಪಡಿಸಿರುವ ಮಟ್ಟಕ್ಕಿಂತ ಕಡಿಮೆ ಹೊಗೆಯನ್ನು ಸೂಸುತ್ತವೆ ಎಂದು ವಾದಿಸಿದಾಗ, ಹಸಿರು ನ್ಯಾಯಮಂಡಳಿ ಆ ಕಂಪನಿ ತನ್ನ ವಾಹನಗಳಿಗೆ ವಂಚನೆಯ ತಂತ್ರಾಂಶಗಳನ್ನು ಅಳವಡಿಸಿದೆ ಎಂಬುದನ್ನು ಪತ್ತೆಹಚ್ಚಿ ₹ 500 ಕೋಟಿ ದಂಡ ವಿಧಿಸಿದೆ.

ಹರಿಯಾಣವು ಭಾರತದಲ್ಲೇ ಕಡಿಮೆ ಅರಣ್ಯ ಪ್ರಮಾಣ ಹೊಂದಿರುವ ರಾಜ್ಯ- ಕೇವಲ ಶೇ 3.69. ರಾಷ್ಟ್ರೀಯ ಅರಣ್ಯ ಕಾಯ್ದೆ ಪ್ರಕಾರ, ಎಲ್ಲ ರಾಜ್ಯಗಳಲ್ಲೂ ಶೇ 33 ಭಾಗ ಅರಣ್ಯವಿರಬೇಕು. ಇತ್ತೀಚೆಗೆ ಫರೀದಾಬಾದ್ ಬಳಿ 52 ಎಕರೆ ಜಾಗವನ್ನು ಹರಿಯಾಣ ಸರ್ಕಾರವು ರಿಯಲ್ ಎಸ್ಟೇಟ್ ಸಂಸ್ಥೆಯೊಂದಕ್ಕೆ ನೀಡಿ ಅಲ್ಲಿ ವಸತಿ ಕಟ್ಟಡಗಳನ್ನು ಕಟ್ಟಲು ಪರವಾನಗಿ ನೀಡಿತ್ತು. ಇದು ಕೇಂದ್ರ ಪರಿಸರ ಇಲಾಖೆಯ ಗಮನಕ್ಕೂ ಬಂದಿತ್ತು. 2017ರಲ್ಲೇ ರಿಯಲ್ ಎಸ್ಟೇಟ್ ಏಜೆನ್ಸಿ ಅಲ್ಲಿ 6,000 ಮರಗಳ ಹನನ ಮಾಡಿತ್ತು.

ಹಸಿರು ನ್ಯಾಯಮಂಡಳಿ ಖುದ್ದಾಗಿ ಮೋಜಣಿ ಮಾಡಿಸಿ ‘ಇದು ಪರಿಭಾವಿಸಿದ ಅರಣ್ಯ (ಡೀಮ್ಡ್ ಫಾರೆಸ್ಟ್) ವರ್ಗಕ್ಕೆ ಬರುತ್ತದೆ, ಇದನ್ನು ಬಳಸಕೂಡದು’ ಎಂದು ಎಚ್ಚರಿಸಿತು. ಪ್ರತಿ ಹೆಕ್ಟೇರ್‌ನಲ್ಲಿ 50ಕ್ಕಿಂತಲೂ ಹೆಚ್ಚು ಸ್ವಾಭಾವಿಕವಾಗಿ ಬೆಳೆದ ಸಸ್ಯ ಸಂಪತ್ತಿದ್ದರೆ, ಕನಿಷ್ಠ 30 ಸೆಂಟಿ ಮೀಟರ್ ಎತ್ತರವಿದ್ದರೆ, ಅದನ್ನು ‘ಪರಿಭಾವಿಸಿದ ಅರಣ್ಯ’ ಎನ್ನಲಾಗುತ್ತದೆ. ಈಗ ಹರಿಯಾಣ ಸರ್ಕಾರ ಎಷ್ಟು ಕೋಟಿ ರೂಪಾಯಿ ದಂಡ ಕಟ್ಟಬೇಕೋ ಎಂಬ ಊಹೆಯಲ್ಲೇ ನಡುಗಿಹೋಗಿದೆ.

ಈ ವರ್ಷದ ಫೆಬ್ರುವರಿಯಲ್ಲಿ ಬೆಂಗಳೂರಿನ ವೈಟ್‍ಫೀಲ್ಡ್ ನಿವಾಸಿಗಳು ನೆಮ್ಮದಿಯ ಉಸಿರಾಡುವಂತಾಯಿತು. ಇಲ್ಲಿ ಗ್ರಾಫೈಟ್ ಇಂಡಿಯಾ ಕಾರ್ಖಾನೆಯು ನೆಲ, ಗಾಳಿ ಎರಡನ್ನೂ ಮಾಲಿನ್ಯ ಮಾಡಿ ಸ್ಥಳೀಯರನ್ನು ಕಂಗೆಡಿಸಿತ್ತು. ಇದು 50 ವರ್ಷಗಳ ಸಂಕಟ ಸ್ಥಳೀಯರಿಗೆ. ಮಾಲಿನ್ಯ ನಿಯಂತ್ರಣ ಮಂಡಳಿ ಈ ಕಂಪನಿಯನ್ನು ಮುಚ್ಚಬೇಕೆಂದು 2012ರಲ್ಲೇ ಸೂಚಿಸಿದ್ದರೂ ಕಂಪನಿ ಜಗ್ಗಲಿಲ್ಲ. ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದಾಗ ಈ ಕಂಪನಿಗೆ ₹50 ಲಕ್ಷ ದಂಡವನ್ನು ವಿಧಿಸಿತ್ತು. ಅಂತಿಮವಾಗಿ ಹಸಿರು ನ್ಯಾಯಮಂಡಳಿ ಈ ಘಟಕವನ್ನು ಶಾಶ್ವತವಾಗಿ ಮುಚ್ಚಿಸಿತು.

2016ರಲ್ಲಿ ‘ಆರ್ಟ್ ಆಫ್ ಲಿವಿಂಗ್ ಸಂಸ್ಥೆ’ ದೆಹಲಿಯ ಯಮುನಾ ನದಿಯ ದಡದಲ್ಲಿ ವಿಶ್ವ ಸಂಸ್ಕೃತಿ ಉತ್ಸವವನ್ನು ಆಚರಿಸಿದಾಗ ಅಲ್ಲಿ ನೆರೆದವರು ವಿದೇಶಿಯರೂ ಸೇರಿದಂತೆ 35 ಲಕ್ಷ ಮಂದಿ. ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಷರತ್ತಿನ ಅನುಮತಿ ನೀಡಿತ್ತು. ಜೀವವೈವಿಧ್ಯಕ್ಕೆ ಹಾನಿ ಹಿನ್ನೆಲೆಯಲ್ಲಿ ಪರಿಹಾರವಾಗಿ ₹5 ಕೋಟಿ ದಂಡ ಪಾವತಿಸಲು ನಿರ್ದೇಶಿಸಿತ್ತು. ಇದು ದಂಡವಲ್ಲ, ಅಲ್ಲಿನ ಪರಿಸರ ಉಳಿಸಲು ಆರ್ಟ್ ಆಫ್ ಲಿವಿಂಗ್ ಕೊಟ್ಟ ದೇಣಿಗೆ ಎಂದು ಹೇಳಿತಾದರೂ, ಕಾರ್ಯಕ್ರಮದ ನಂತರ ಯಮುನಾ ನದಿಯ ನೈಸರ್ಗಿಕ ಪ್ರವಾಹ ಬಯಲಿಗೆ ಧಕ್ಕೆಯಾಗಿದೆಯೇ ಎಂದು ಪರೀಕ್ಷಿಸಲು ಒಂದು ತಂಡವನ್ನೇ ನೇಮಿಸಿತು. ಧಕ್ಕೆಯಾಗಿರುವುದು ನಿಜ ಎಂದು ಸಮೀಕ್ಷೆ ತಿಳಿಸಿದ ಮೇಲೆ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿಕೆ ನೀಡಿದ್ದರು.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸ್ಥಾಪನೆಯಾದುದು 2010ರಲ್ಲಿ. ಈವರೆಗೆ 25,447 ಮೊಕದ್ದಮೆಗಳನ್ನು ಇತ್ಯರ್ಥ ಮಾಡಿರುವುದು ಈ ಸಂಸ್ಥೆಗಿರುವ ಜವಾಬ್ದಾರಿಯ ಸಂಕೇತ. ಇದರಲ್ಲಿ ಅಧ್ಯಕ್ಷರೂ ಸೇರಿದಂತೆ ಐದು ಮಂದಿ ಸದಸ್ಯರಿದ್ದಾರೆ. ಇವರೆಲ್ಲ ನ್ಯಾಯಮೂರ್ತಿಗಳಾಗಿ ಕೆಲಸ ಮಾಡಿದ ಅನುಭವ ಇರುವವರು. ಜೊತೆಗೆ ಪರಿಸರದ ಬಗ್ಗೆ ವಿಶೇಷ ಪರಿಣತಿ ಇರುವ, ಕಾನೂನು ಬಲ್ಲ ತಜ್ಞರೂ ಇದಕ್ಕೆ ನೆರವಾಗುತ್ತಿದ್ದಾರೆ. ದೆಹಲಿಯಲ್ಲಿ ಮುಖ್ಯ ಕಚೇರಿ ಇದೆ. ಭೋಪಾಲ್, ಪುಣೆ, ಕೋಲ್ಕತ್ತ ಮತ್ತು ಚೆನ್ನೈನಲ್ಲಿ ಪ್ರಾಂತೀಯ ಕೇಂದ್ರಗಳಿವೆ.

ಪರಿಸರ ಎನ್ನುವುದು ವಿಶಾಲವ್ಯಾಪ್ತಿಯದು. ಅರಣ್ಯ ಪರಿಸರ, ಜೈವಿಕ ವೈವಿಧ್ಯ, ನೆಲ-ನೀರು-ಬಾನಿನ ಮಾಲಿನ್ಯದ ಮೇಲಿನ ನಿಗಾ, ಸಂಸ್ಥೆಗಳು ಮಾಡುವ ಪರಿಸರ ವಿರೋಧಿ ಚಟುವಟಿಕೆಗಳು- ಇವೆಲ್ಲವನ್ನೂ ನಿಭಾಯಿಸುವುದು ಸುಲಭದ ಮಾತಲ್ಲ. ಎಷ್ಟೋ ವೇಳೆ ಸರ್ಕಾರದ ಕ್ರಮದ ವಿರುದ್ಧವೇ ತೀರ್ಪು ಕೊಡಬೇಕಾಗುತ್ತದೆ. ಇಂಥ ಸಂದರ್ಭಗಳು ಅನೇಕವಿವೆ.

ವಿಚಿತ್ರವೆಂದರೆ, ಅತಿ ಮಾಲಿನ್ಯಕಾರಕ ದೇಶ ಎಂದು ಹೆಸರಾಗಿರುವ ಚೀನಾದಲ್ಲಾಗಲೀ, ಅತಿ ಹೆಚ್ಚು ಉಷ್ಣವರ್ಧಕ ಅನಿಲಗಳನ್ನು ವಿಸರ್ಜಿಸುತ್ತಿರುವ ಅಮೆರಿಕದಲ್ಲಾಗಲೀ, ಕಾನೂನು ಪ್ರಕಾರ ರಚಿತವಾದ, ಪರಿಸರಕ್ಕೇ ಸೀಮಿತವಾದ ನ್ಯಾಯಮಂಡಳಿ ಇಲ್ಲ. ಆದರೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‍ಗಳಲ್ಲಿ ನಮ್ಮಲ್ಲಿರುವಂತೆ ಹಸಿರು ನ್ಯಾಯಮಂಡಳಿ ಇದೆ. ಈಗಿನ ಕಾನೂನಿನ ಪ್ರಕಾರ, ಹಸಿರು ನ್ಯಾಯಮಂಡಳಿ ಕೊಡುವ ತೀರ್ಪುಗಳು ಅಂತಿಮವಲ್ಲ. ಇವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶ ಇದೆ.

ಬೆಂಗಳೂರು ಕೆರೆಗಳ ರಕ್ಷಿತ ವಲಯ (ಬಫರ್ ಜೋನ್), ಕೆರೆಯಿಂದ 75 ಮೀಟರ್‌ವರೆಗೆ ಇರಬೇಕೆಂದು ಹಸಿರು ನ್ಯಾಯಮಂಡಳಿ 2016ರಲ್ಲಿ ನಿರ್ದೇಶನ ನೀಡಿದಾಗ, ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಕಳೆದ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಎನ್‌ಜಿಟಿ ಆದೇಶಕ್ಕೆ ಮೊದಲು ಜಾರಿಯಲ್ಲಿದ್ದ ಬಫರ್‌ ವಲಯದ ನಿಯಮವನ್ನು ಪಾಲಿಸುವುದಾಗಿ ರಾಜ್ಯ ಸರ್ಕಾರ ಮನವಿ ಮಾಡಿಕೊಂಡ ಬಳಿಕವಷ್ಟೇ ಸುಪ್ರೀಂ ಕೋರ್ಟ್‌ ಆ ಮನವಿಯನ್ನು ಪುರಸ್ಕರಿಸಿತು.

ಇದೀಗ, ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿರುವ ಪೆರಿಫೆರಲ್‌ ವರ್ತುಲ ರಸ್ತೆಯ ನಿರ್ಮಾಣ ಯೋಜನೆಗೆ, ಅಸಂಖ್ಯಾತ ಮರಗಳು ಧರೆಗುರುಳುವ ಕಾರಣಕ್ಕೆ ಹಸಿರು ನ್ಯಾಯಮಂಡಳಿ ತಡೆ ನೀಡಿದೆ. ತನಗಿರುವ ಕಾನೂನು ವ್ಯಾಪ್ತಿಯ ಮಿತಿಯಲ್ಲೇ ಹಸಿರು ಎನ್‌ಜಿಟಿ ಮಹತ್ತರವಾದ ತೀರ್ಪುಗಳನ್ನು ನೀಡಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !