ರಾಜ್ಯದಲ್ಲಿ ವರ್ಗಾವಣೆ ದಂಧೆ–ಈಶ್ವರಪ್ಪ ಆರೋಪ

7

ರಾಜ್ಯದಲ್ಲಿ ವರ್ಗಾವಣೆ ದಂಧೆ–ಈಶ್ವರಪ್ಪ ಆರೋಪ

Published:
Updated:
Deccan Herald

ಚಾಮರಾಜನಗರ: ‘ರಾಜ್ಯದಲ್ಲಿ ಆಡಳಿತ ಸಂಪೂರ್ಣ ಹದಗೆಟ್ಟಿದೆ. ಸರ್ಕಾರವು ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ. ಭ್ರಷ್ಟಾಚಾರ ಬಿಟ್ಟು ಬೇರೇನೂ ನಡೆಯುತ್ತಿಲ್ಲ’ ಎಂದು ಬಿಜೆಪಿಯ ಹಿರಿಯ ಮುಖಂಡ, ಶಾಸಕ ಕೆ.ಎಸ್‌. ಈಶ್ವರಪ್ಪ ಗುರುವಾರ ಆರೋಪಿಸಿದರು.

 ‘ಇಷ್ಟು ಭ್ರಷ್ಟಾಚಾರ ನಡೆಸುತ್ತಿರುವ ಸರ್ಕಾರವನ್ನು ನಾನು ನೋಡಿಲ್ಲ. ಸರ್ಕಾರ ಇರುವಷ್ಟು ದುಡ್ಡು ಮಾಡೋಣ ಎಂಬ ಧೋರಣೆ ಆಡಳಿತಗಾರರಲ್ಲಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ದೂರಿದರು.

‘ಒಬ್ಬನೇ ಒಬ್ಬ ಸಚಿವ ರಾಜ್ಯ ಪ್ರವಾಸ ಮಾಡುತ್ತಿಲ್ಲ. ಇಡೀ ರಾಜ್ಯದಲ್ಲಿ ಸರ್ಕಾರ ಇಲ್ಲದಿರುವ ಪರಿಸ್ಥಿತಿ ಇದೆ’ ಎಂದರು.

ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಅವರು, ‘ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಅವರು ಈ ರಾಜ್ಯದ ಕೊನೆಯ ಮುಖ್ಯಮಂತ್ರಿ ಎಂದು ನಾವು ಹೇಳುತ್ತಾ ಬಂದಿದ್ದೆವು. ಅದೇ ರೀತಿ ಆಗಿದೆ. ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಚಾಂಪಿಯನ್ನರು ಎಂದು ಹೇಳಿಕೊಳ್ಳುತ್ತಲೇ ಕಾಂಗ್ರೆಸ್‌ ಸರ್ಕಾರ ಅವರನ್ನು ತಾತ್ಸಾರ ಮಾಡಿತು. ಹಿಂದೂ ಕಾರ್ಯಕರ್ತರ ಕಗ್ಗೊಲೆಯನ್ನೂ ಮಾಡಿತು. ಧರ್ಮಗಳನ್ನು ಒಡೆಯಲು ಯತ್ನಿಸಿತು. ಅದೆಲ್ಲದರ ಪರಿಣಾಮವಾಗಿ ಜನರು ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ಅವರನ್ನು ತಿರಸ್ಕರಿಸಿದ‌ರು’ ಎಂದು ವ್ಯಂಗ್ಯವಾಡಿದರು.

‘ಹೀಗಿದ್ದರೂ, 37 ಶಾಸಕರು ಇರುವ ಜೆಡಿಎಸ್‌ಗೆ ಹಿಂಭಾಗ‌ಲಿನಿಂದ ಬೆಂಬಲಕೊಟ್ಟು ಸರ್ಕಾರದಲ್ಲಿ ಪಾಲುದಾರನಾಗಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಕಿಡಿ ಕಾರಿದರು.

ಮತ್ತೆ ಮೋದಿ ಅಧಿಕಾರಕ್ಕೆ: ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಾಲ್ಕು ವರ್ಷಗಳಲ್ಲಿ ಉತ್ತಮ ಆಡಳಿತ ನಡೆಸಿದೆ. ದೇಶದ ಎಲ್ಲ ವರ್ಗದ ಜನರು ಸಂತಸಗೊಂಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಬೇರೆ ದೇಶಗಳ ಪ್ರೀತಿ ವಿಶ್ವಾಸ ಗಳಿಸಿ ಭಾರತದ ಗೌರವ ಹೆಚ್ಚುವಂತೆ ಪ್ರಧಾನಿ ಅವರು ಮಾಡಿದ್ದಾರೆ’ ಎಂದು ಈಶ್ವರಪ್ಪ ಹೇಳಿದರು.

‘ಮೋದಿ ಸರ್ಕಾರ ಹಿಂದುಳಿದ ವರ್ಗಗಳು, ದಲಿತರ ವಿರೋಧಿ ಎಂದು ಸಿದ್ದರಾಮಯ್ಯ ಅವರು ಹೇಳಿದ್ದರು. ಆದರೆ, ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆಗೆ ರಾಜ್ಯಸಭೆಯಲ್ಲಿ ರಾಜ್ಯಸಭೆ ಬೆಂಬಲ ನೀಡಿರಲಿಲ್ಲ’ ಎಂದರು.

‘ಈಗ ಮಸೂದೆ ಅಂಗೀಕೃತವಾಗಿದ್ದು, ದೇಶದ ಹಿಂದುಳಿದ ವರ್ಗಗಳು ಮೋದಿ ಸರ್ಕಾರದ ಕ್ರಮ ಸಂತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಇತ್ತೀಚೆಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. ಇದರಿಂದ ದೇಶದ ರೈತರಿಗೂ ಸಂತೋಷವಾಗಿದೆ. ಮುಂದಿನ ಚುನಾವಣೆಯಲ್ಲಿ  ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರೈತ ಮೋರ್ಚಾದ ಅಧ್ಯಕ್ಷ ಲಕ್ಷ್ಮಣ ಸವದಿ, ಕೆ.ನಾರಾಯಣ ಸ್ವಾಮಿ, ಗುಂಡ್ಲುಪೇಟೆ ಶಾಸಕ ಸಿ.ಎಸ್‌. ನಿರಂಜನ ಕುಮಾರ್‌, ಬಿಜೆ‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನಪ್ಪ ಇದ್ದರು.

‘ಹುಲಿಗಳು ನಾವು, ಬೇರೆಯವರನ್ನು ಹಿಂಬಾಲಿಸುವುದಿಲ್ಲ’
ಬಿಜೆಪಿಯ ಶಾಸಕರು ಕಾಂಗ್ರೆಸ್‌ನ ಸಂಪರ್ಕದಲ್ಲಿದ್ದಾರೆ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ‘ನಾವು 104 ಶಾಸಕರು ಒಂದಾಗಿದ್ದೇವೆ. ನಮ್ಮವರು ಹುಲಿಗಳು ಇದ್ದ ಹಾಗೆ, ಬೇರೆಯವರನ್ನು ಹಿಂಬಾಲಿಸುವುದಿಲ್ಲ’ ಎಂದು ಈಶ್ವರಪ್ಪ ಹೇಳಿದರು.

20ಕ್ಕೂ ಹೆಚ್ಚು ಸ್ಥಾನ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿಯು 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂದು ಕೇಳಿದಾಗ, ‘ನಮ್ಮದು ವ್ಯಕ್ತಿ ಕೇಂದ್ರಿತ ಪಕ್ಷ ಅಲ್ಲ. ಪಕ್ಷವೇ ಮುಖ್ಯ ವಿನಾ ಅಭ್ಯರ್ಥಿ ಅಲ್ಲ’ ಎಂದರು.

‘ಪಕ್ಷದಲ್ಲಿ ಕೆಲವು ಕಡೆ ಗುಂಪುಗಾರಿಗೆ ಇದೆ ಎಂಬುದನ್ನು ಒಪ್ಪುತ್ತೇನೆ. ಆದರೆ, ವೈಚಾರಿಕವಾಗಿ ಭಿನ್ನಾಭಿಪ್ರಾಯ ಇಲ್ಲ. ಕಾರ್ಯ ಚಟುವಟಿಗಳ ಬಗ್ಗೆ ಗೊಂದಲ ಉಂಟಾದಾಗ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !