ನಂಜಿಕೊಳ್ಳಲು ಹಾಸ್ಯ ನೋವಿನ ವ್ಯಂಜಕ ಚಟ್ನಿ

7

ನಂಜಿಕೊಳ್ಳಲು ಹಾಸ್ಯ ನೋವಿನ ವ್ಯಂಜಕ ಚಟ್ನಿ

Published:
Updated:
Prajavani

ಚಟ್ನಿ ಅಂದರೆ ನನಗೆ ಬಲು ಇಷ್ಟ. ನನಗೇನು ಬಂತು. ನಿಮಗೂ ಇಷ್ಟ ತಾನೆ? ಬೆಳಗಿನ ತಿಂಡಿಗೆಂದು ರೊಟ್ಟಿಯನ್ನೋ, ದೋಸೆಯನ್ನೋ, ಕಡುಬು ಉರುಫ್ ಇಡ್ಲಿಯನ್ನೋ ಅಥವಾ ಚಪಾತಿಯನ್ನೋ ತಿನ್ನಲು ಕುಳಿತಾಗ ಅದನ್ನು ನಂಜಿಕೊಳ್ಳಲು ಪಲ್ಯ, ಸಾಗು, ಕೂಟು, ಗೊಜ್ಜು, ಉಪ್ಪಿನಕಾಯಿ ಇತ್ಯಾದಿ ಏನೇ ಇದ್ದರೂ ಅವು ಯಾವುವೂ ಚಟ್ನಿಗೆ ಸಮವಲ್ಲ ಅನ್ನುವುದು ಖಚಿತ ತಾನೆ?

ಒಂದು ಹೋಳು ಕೊಬ್ಬರಿ ತುರಿ ಅಥವಾ ತೆಂಗಿನಕಾಯಿ ತುರಿ ಅಥವಾ ಯಾವ ಪದಾರ್ಥದ ಚಟ್ನಿ ಮಾಡಲು ಬಯಸುತ್ತೀರೋ ಅದು ಅಗತ್ಯಕ್ಕೆ ತಕ್ಕಷ್ಟು, ತಿನ್ನುವವರ ನಾಲಿಗೆ ಖಾರ ತಡೆಯುವಷ್ಟು ಹಸಿ ಮೆಣಸಿನಕಾಯಿ ಅಥವಾ ಕೆಂಪು ಒಣಮೆಣಸಿನಹಣ್ಣು, ಒಂದೆರಡು ದಳ ಕರಿಬೇವಿನ ಸೊಪ್ಪು, ಒಂದು ಕಿರಿಕಂತೆ ಕೊತ್ತುಂಬರಿ ಸೊಪ್ಪು, ಒಂದಿಷ್ಟು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಹುಣಿಸೆ ಹಣ್ಣು ಇವು ಸಾಮಾನ್ಯವಾಗಿ ಚಟ್ನಿ ಮಾಡಲು ಬೇಕಾಗುವ ಮೂಲ ಸಾಮಗ್ರಿಗಳು ಅನ್ನಿ. ಅವುಗಳನ್ನು ಹದವಾಗಿ ಹುರಿದು, ಕರಿದು, ಮುರಿದು, ಬೆರೆಸಿ ಮಾಡಿದ ಚಟ್ನಿಯೇ ಚಟ್ನಿ. ಆ ಚಟ್ನಿ ದೋಸೆಯೇ ಮೊದಲಾದ ಪದಾರ್ಥಗಳಿಗೆ ವ್ಯಂಜಕವಾಗಿ ಹೊಂದಿಕೊಳ್ಳುವ ಹಾಗೆ ಬೇರೆ ಯಾವ ವ್ಯಂಜಕ ಪದಾರ್ಥವೂ ಹೊಂದಿಕೊಳ್ಳುವುದಿಲ್ಲ ಅಂತ ನನ್ನ ನಾಲಿಗೆಯ ಅನುಭವ.

ನಿಮ್ಮ ನಾಲಿಗೆಯೂ ಅದಕ್ಕಿಂತ ಭಿನ್ನವಾಗಿಲ್ಲ ಅಂತ ನನ್ನ ಖಡಾಖಂಡಿತ ನಂಬಿಕೆ. ಈ ನನ್ನ ಪರಕಾಯ ಪ್ರವೇಶದ ನಾಲಿಗೆಯ ಬಗ್ಗೆ ನನಗಂತೂ ಸಂಪೂರ್ಣ ವಿಶ್ವಾಸವಿದೆ. ನನಗೆ ಗೊತ್ತು, ನಿಮಗೆ ನನ್ನ ಬಗ್ಗೆ ಯಾವತ್ತೂ ಅವಿಶ್ವಾಸ ಇಲ್ಲವೇ ಇಲ್ಲ ಅಂತ. ಹೆಣ್ಣುಮಕ್ಕಳು ಹಾಗೂ ಕೆಲವೊಮ್ಮೆ ಗಂಡುಮಕ್ಕಳು ಮ್ಯಾಚಿಂಗ್ ಕಲರ್ ಬಟ್ಟೆಬರೆ ಆರಿಸಿ, ಉಟ್ಟು-ತೊಟ್ಟು ಸಂಭ್ರಮಿಸುವುದಿಲ್ಲವೆ ಹಾಗೆ ರೊಟ್ಟಿಯೇ ಮೊದಲಾದ ತಿಂಡಿಗೂ ಚಟ್ನಿಗೂ ಮ್ಯಾಚಿಂಗ್ ಅಂತ ನಾನು ನಿರ್ಣಯಕ್ಕೆ ಬಂದುಬಿಟ್ಟಿದ್ದೇನೆ. ನಮ್ಮ ದೇಶಜನ್ಯ ಮೂಲವಾದ ಈ ಪರಿಕರ ಅಕ್ಕಪಕ್ಕದ ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಮೊದಲಾದ ಏಷ್ಯಾದ ದೇಶಗಳಲ್ಲಿ ಮಾತ್ರವಲ್ಲದೆ ಪಾಶ್ಚಾತ್ಯ ದೇಶಗಳ ತಿಂಡಿ- ಊಟದ ತಟ್ಟೆಗಳಲ್ಲೂ ಈಗೀಗ ತನಗೊಂದು ಸ್ಥಾನವನ್ನು ಖಾತ್ರಿ ಮಾಡಿಕೊಳ್ಳುತ್ತಿದೆ. ವಿಶ್ವ ಆಹಾರ ಸಂಸ್ಕೃತಿಗೆ ಭಾರತದ ಹೆಮ್ಮೆಯ ಕೊಡುಗೆಗಳಲ್ಲಿ ಇದೂ ಒಂದು ಅನ್ನುವುದರ ಬಗ್ಗೆ ದೂಸರಾ ಮಾತಿಲ್ಲ ಬಿಡಿ.

ಚಟ್ನಿಯಲ್ಲಿ ಎಷ್ಟೊಂದು ಬಗೆಗಳಿವೆ ಅನ್ನುತ್ತೀರೊ? ನಿಮಗೆ ಗೊತ್ತಿಲ್ಲವೆಂದಲ್ಲ. ಇನ್ನೊಮ್ಮೆ ನೆನಪಿಸುತ್ತಿದ್ದೇನೆ ಅಷ್ಟೆ. ತೆಂಗಿನಕಾಯಿ ಚಟ್ನಿ ಬಿಡಿ, ಮನೆ ಮನೆಗೂ ಗೊತ್ತಿರುವಂಥದೇ. ಅದಲ್ಲದೆ ಎಳ್ಳು ಚಟ್ನಿ, ಹುಚ್ಚೆಳ್ಳು ಚಟ್ನಿ, ಕಡ್ಲೆಕಾಯಿ ಬೀಜದ ಚಟ್ನಿ, ಹುರಿಗಡಲೆ ಚಟ್ನಿ, ಗಣಿಕೆ ಸೊಪ್ಪಿನ ಚಟ್ನಿ, ಹೀರೆಕಾಯಿ ತೊಕ್ಕಿನ ಚಟ್ನಿ, ಅವರೆಕಾಳಿನ ಚಟ್ನಿ, ಹುರುಳಿಕಾಳಿನ ಚಟ್ನಿ, ಈರುಳ್ಳಿ ಚಟ್ನಿ, ಬೆಳ್ಳುಳ್ಳಿ ಚಟ್ನಿ, ಕುಂಬಳಕಾಯಿ ಸಿಪ್ಪೆ ಮತ್ತು ತಿರುಳಿನ ಚಟ್ನಿ, ಬಾಳೆಹೂವಿನ ಚಟ್ನಿ, ಒಂದೆಲಗದ ಸೊಪ್ಪಿನ ಚಟ್ನಿ, ದೊಡ್ಡಪತ್ರೆ (ದೊಡ್ಡಸೊಪ್ಪಿನ ಪತ್ರೆ ಚಟ್ನಿ) ಈ ರೀತಿ ನಾನಾ ಬಗೆಯ ಶಾಖಾಹಾರಿ ಚಟ್ನಿ ನಿಮ್ಮ ತಟ್ಟೆಯೊಳಗೆ ಇದ್ದಾಗ, ಅದಕ್ಕೊಂದಿಷ್ಟು ಹಸನಾದ ಬೆಣ್ಣೆಯನ್ನೋ ಘಮಘಮಿಸುವ ಮರಳು ತುಪ್ಪವನ್ನೋ ಅಥವಾ ಒಂದೆರಡು ಗರಳೆ ಮೊಸರನ್ನೋ ಸೇರಿಸಿ, ಚಪ್ಪರಿಸಿಕೊಂಡು ನೀವು ತಿಂಡಿಯನ್ನು ಮೆಲ್ಲದೆ ಇರಲು ಸಾಧ್ಯವೆ?

ಈಗಿನ ಕಲಬೆರಕೆ ದಿನಗಳಲ್ಲೂ ಒಂದಿಷ್ಟಾದರೂ ತಾಜಾ ಅಂತ ಅನ್ನುವುದೊಂದಿದೆಯಲ್ಲಾ? ಮಾಂಸದ ಸವಿಗೆ ಒಗ್ಗಿಕೊಂಡಿರುವ ನಾಲಿಗೆಗಳಿಗೆ ಮೀನಿನ ಚಟ್ನಿ, ನಳ್ಳಿ ಚಟ್ನಿ(ಏಡಿ ಚಟ್ನಿ), ಸೀಗಡಿ ಚಟ್ನಿ ಇತ್ಯಾದಿ ಇದ್ದೇ ಇದೆಯಲ್ಲ? ‘ಲೋಕೊ ಭಿನ್ನ ರುಚಿಃ’ ಅನ್ನುವ ಹಾಗೆ ಲೋಕೊ ಭಿನ್ನ ನಾಲಿಗೆ ಎಂದರೆ ತಪ್ಪೇನಿಲ್ಲವಲ್ಲ?

ಹಿಂದಿನ ದಿನಗಳಲ್ಲಿ ಅಂದರೆ ಗ್ರೈಂಡರ್, ಮಿಕ್ಸರ್ ಬರುವುದಕ್ಕೆ ಮುಂಚೆ ಒರಳು ಕಲ್ಲಿನಲ್ಲೇ ಚಟ್ನಿ ತಯಾರಾಗುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಕೆಲವು ಕಡೆ ದೊಡ್ಡ ರುಬ್ಬುವ ಗುಂಡನ್ನು ಕಲ್ಲಿನ ಹಾಸಿನ ಮೇಲೆ ಉರುಳಿಸಿ ಚಟ್ನಿ ಅರೆಯುತ್ತಿದ್ದರು. ಆ ತಯಾರಿಕೆಯಲ್ಲೂ ಒಂದು ಸೊಗಸು ಎದ್ದು ಕಾಣುತ್ತಿತ್ತು. ನಾನು ಚಿಕ್ಕವನಾಗಿದ್ದಾಗ ಮನೆಯಲ್ಲಿ ನನ್ನ ಅಜ್ಜಿ ಚಟ್ನಿ ತಯಾರಿಸುವ ವಿಧಾನವನ್ನು ನಾನು ಕಣ್ಣೆವೆಯಿಕ್ಕದೆ ನೋಡುತ್ತಿದ್ದೆ. ಚಟ್ನಿ ರುಬ್ಬುವ ಒರಳು ಮತ್ತು ಗುಂಡುಕಲ್ಲು ಅಥವಾ ರುಬ್ಬುವ ಕಲ್ಲನ್ನು ಕೊಳದಪ್ಪಲೆಯಿಂದ ತಂದ ನೀರಿನಲ್ಲಿ ಚೆನ್ನಾಗಿ ತೊಳೆದು, ಆಮೇಲೆ ಸೌಟಿನಿಂದಲೋ ಅಥವಾ ಒಂದು ಸಣ್ಣ ಲೋಟದಿಂದಲೋ ಒರಳೊಳಗೆ ತುಂಬಿರುವ ನೀರನ್ನು ಹೊರಗೆ ಚೆಲ್ಲಿ, ಅದಕ್ಕೆಂದೇ ಮೀಸಲಿರಿಸಿದ್ದ ಶುಭ್ರ ಬಟ್ಟೆಯಿಂದ ಸ್ನಾನ ಮಾಡಿದ ಮಕ್ಕಳ ಮೈ ಒರೆಸುವಂತೆ ಚೆನ್ನಾಗಿ ಒರೆಸಿ, ಬಳಿಕ ಅಡುಗೆ ಮನೆಯಲ್ಲಿ ಘಮಘಮಿಸುವ ಹಾಗೆ ಹುರಿದ ಪರಿಕರಗಳನ್ನು ತಂದು ಒರಳುಕಲ್ಲಿಗೆ ಸುರಿದು, ಸ್ವಲ್ಪ ನೀರು ಸಿಂಪಡಿಸಿ, ಗುಂಡುಕಲ್ಲನ್ನು ಮೆಲ್ಲಗೆ ಒರಳಿಗೆ ಇಳಿಬಿಟ್ಟು, ಅದರ ನೆತ್ತಿಯ ಮೇಲೆ ತಮ್ಮ ಎಡಗೈಯನ್ನಿರಿಸಿ, ರುಬ್ಬಲು ಶುರುಮಾಡುತ್ತಿದ್ದರು.

ಅವರ ಎಡಗೈ ಗುಂಡುಕಲ್ಲಿನ ಸಮೇತ ವಾಮಪ್ರದಕ್ಷಿಣೆ ಮಾಡುತ್ತಿದ್ದರೆ, ಬಲಗೈ ಒರಳುಕಲ್ಲಿನ ಗುಳಿಯಿಂದಾಚೆ ಚೆಲ್ಲಿ ಬರುತ್ತಿದ್ದ ಪರಿಕರಗಳನ್ನು ಮತ್ತೆ ತುಂಬುವ ಕೆಲಸದಲ್ಲಿ ನಿರತವಾಗುತ್ತಿತ್ತು. ಆ ಎರಡೂ ಕೈಗಳು ಲಯಬದ್ಧವಾಗಿ ತಮ್ಮ ಪಾಲಿನ ಕೆಲಸ ಮಾಡುವುದನ್ನು ನೋಡುವುದೇ ನನಗೊಂದು ಸೊಗಸು ನೋಟವಾಗಿತ್ತು. ಗುಂಡುಕಲ್ಲಿನ ಲಯಕ್ಕೆ ಅನುಗುಣವಾಗಿ ನನ್ನ ತಲೆಯೂ ಕುಂತಲ್ಲೇ ಸುತ್ತುಹಾಕುತ್ತಿತ್ತು.

ಕೆಲವು ನಿಮಿಷಗಳು ರುಬ್ಬಿದ ನಂತರ, ಸಿದ್ಧವಾದ ಚಟ್ನಿಯನ್ನು ಒಂದು ಪುಟ್ಟ ಕಲ್ಲು ಮರಿಗೆಗೆ ತುಂಬಿ, ಮತ್ತೊಮ್ಮೆ ಒರಳುಕಲ್ಲು ಮತ್ತು ಗುಂಡುಕಲ್ಲನ್ನು ಶುದ್ಧಿ ಮಾಡಿ, ಸ್ವಸ್ಥಾನದಲ್ಲಿರಿಸಿ, ಆಮೇಲೆ ತಿಂಡಿ ಮಾಡಲು ಅಜ್ಜಿ ಅಡುಗೆ ಮನೆಗೆ ಹೋಗುತ್ತಿದ್ದರು. ಬಾಲಕನಾಗಿದ್ದ ನಾನು ತದೇಕ ಚಿತ್ತದಿಂದ ಗ್ರಹಿಸುತ್ತಿದ್ದ ಆ ಚಟ್ನಿ ರುಬ್ಬುವ ಜ್ಞಾನ, ಮುಂದೆ ನನ್ನ ಪ್ರಯೋಜನಕ್ಕೆ ಬಂದುದು ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ. ತಿಂಗಳು ಫೀಸು ಐದು ರೂಪಾಯಿಯನ್ನು ಕಟ್ಟಲಾಗದೆ, ತರಗತಿಯ ಮೇಷ್ಟ್ರಿಗೆ ಹೆದರಿ, ಬೆಂಗಳೂರಿಗೆ ಓಡಿಬಂದು ಕಲಾಸಿಪಾಳ್ಯದ ಒಂದು ಹೋಟೆಲಿನಲ್ಲಿ ಕೆಲಸಕ್ಕೆ ಸೇರಿದಾಗಲೆ. ಅಲ್ಲಿ ನನಗೆ ಸಿಕ್ಕ ಮೊದಲ ಕೆಲಸ ಚಟ್ನಿ ರುಬ್ಬುವುದು. ಯಜಮಾನ ಹೇಳಿದ್ದೂ ಅದೇ. ನಾನು ಬಯಸಿದ್ದೂ ಅದೇ. ನನ್ನ ಪಾಲಿಗೆ ಬಂದ ಆ ಕೆಲಸವನ್ನು ಬಹುಪಾಲು ಅಚ್ಚುಕಟ್ಟಾಗೇ ಮಾಡಿ ಮುಗಿಸಿದ ಮೇಲೆ ಕ್ರಮೇಣ ಕ್ಲೀನರ್, ಸಪ್ಲೈಯರ್ ಕೆಲಸಕ್ಕೆ ಬಡ್ತಿ ಪಡೆದೆನಾದರೂ, ಮೊದಲ ತಿಂಗಳ ಸಂಬಳ ಇಪ್ಪತ್ತು ರೂಪಾಯಿ ಕೈಗೆ ಸಿಗುತ್ತಿದ್ದ ಹಾಗೆ, ಮನೆಯ ಸೆಳೆತ, ಗೆಳೆಯರ ಎಳೆತ ಹೆಚ್ಚಾಗಿ ಮತ್ತೆ ಮೈಸೂರಿನ ರೈಲು ಗಾಡಿ ಹತ್ತಿದೆ.

ಮೈಸೂರಿನ ನಾವಿದ್ದ ಬಡಾವಣೆಯಲ್ಲಿ ಚಟ್ನಿಸುಬ್ಬ ಅಂತೊಬ್ಬನಿದ್ದ. ಅವನು ಮನೆಯಲ್ಲಾಗಲಿ, ಹೋಟೆಲ್ಲಿಗಾಗಲಿ ಹೋದರೆ ತಾನು ತಿನ್ನುವ ದೋಸೆ, ಇಡ್ಲಿ, ಚಪಾತಿಗೆ ಎರಡು ಪಟ್ಟು ಮೂರು ಪಟ್ಟು ಕೆಲವೊಮ್ಮೆ ಅನೇಕ ಪಟ್ಟು ಚಟ್ನಿ ತಿಂದು ಪೂರೈಸುತ್ತಿದ್ದ. ಅವನು ಮತ್ತು ಅವನಂಥವರು ಆಪಾಟಿ ಚಟ್ನಿ ತಿನ್ನುತ್ತಿದ್ದುದನ್ನು ನೋಡಿಯೇ ಏನೊ ಆಗ ಕೆಲವು ಹೋಟೆಲ್ಲಿನವರು ಮೂರನೆಯ ಬಾರಿ ಚಟ್ನಿ ಕೊಡುವುದಿಲ್ಲ ಅಂತ ಬೋರ್ಡು ಹಾಕಿದ್ದರು ಅಂತ ಕೇಳಿದ್ದೆ. ಒಂದು ಕಡೆ ನೋಡಿಯೂ ಇದ್ದೆ. ಚಟ್ನಿಗೆ ಸಂಬಂಧಪಟ್ಟ ಈ ಸಂದರ್ಭದಲ್ಲೇ ಚಿಕ್ಕಂದಿನಲ್ಲಿ ನಾನು ಕೇಳಿದ್ದ ಒಂದು ಹಾಸ್ಯ ಪ್ರಸಂಗವನ್ನು ಇಲ್ಲಿಯೇ ಹೇಳಿಬಿಡಬೇಕು. ಒಮ್ಮೆ ಗಿರಾಕಿಯೊಬ್ಬ ಹೋಟೆಲೊಂದಕ್ಕೆ ಹೋಗಿ 

ಗಿರಾಕಿ: ಸ್ವಾಮಿ, ದೋಸೆ ಇದೆಯೆ?

ಸಪ್ಲೈಯರ್: ಇದೆ.

ಗಿರಾಕಿ: ಎರಡು ಸಾದಾ ದೋಸೆಗೆಷ್ಟು ದುಡ್ಡು?

ಸಪ್ಲೈಯರ್: ಎರಡು ಸಾದಾ ದೋಸೆಗೆ ಒಂದು ಆಣೆ.

ಗಿರಾಕಿ: ಚಟ್ನಿಗೆ ಎಷ್ಟು ದುಡ್ಡು?

ಸಪ್ಲೈಯರ್: ಚಟ್ನಿಗೆ ದುಡ್ಡಿಲ್ಲ, ಹಾಗೆಯೇ.

ಗಿರಾಕಿ: ಹಾಗಾದ್ರೆ, ಒಂದು ಪ್ಲೇಟು ಚಟ್ನಿ ಕೊಡಿ.

ಅಂತ ಕೇಳಿದನಂತೆ. ಆ ಗಿರಾಕಿಯ ಮಾತು ಕೇಳಿಸಿಕೊಂಡ ಸಾಹುಕಾರ ಗದರಿಸಿ ಅವನನ್ನು ಹೋಟೆಲಿನಿಂದ ಆಚೆಗೆ ಕಳಿಸಿದನಂತೆ. ಬಹುಶಃ ಇಂಥ ಗಿರಾಕಿಗಳು ಸಿಕ್ಕುವುದು ಚಟ್ನಿಗೆ ಮಾತ್ರ ಅಂತ ನಾನು ನಂಬಿದ್ದೇನೆ. ಕನ್ನಡದ ಹೆಸರಾಂತ ಕವಿ
ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ ಅವರು ವಿಧಿಯು ತಮ್ಮ ಬಾಳಿನಲ್ಲಿ ಬಂದು ತಮ್ಮ ಬದುಕನ್ನು ಚಟ್ನಿ ಆಡಿಸಿದಂತೆ ಆಡಿಸಿತು ಎಂದು ಒಂದೆಡೆ ಹೇಳಿಕೊಂಡಿದ್ದಾರೆ. ‘ಸಂಸಾರದೊಳಗೆ ವಿಧಿ ರುಬ್ಬು ಗುಂಡಾಗಿ ಚಟ್ನಿ ಮಾಡಿದನೆನ್ನ ತಿರುವಿ’ ಎಂದು ನೋವಿನ ಸಾಲುಗಳನ್ನೂ ಬರೆದಿದ್ದಾರೆ. ಹೀಗೆ ಚಟ್ನಿ ವಿಷಯಕ್ಕೆ ಬಂದಾಗ ಹಾಸ್ಯದ ಜೊತೆಗೆ ನೋವಿನ ಲೇಪನವೂ ಉಂಟು. ಸದ್ಯಕ್ಕೆ ಈ ಸಂಗತಿಯನ್ನು ಇಲ್ಲಿಗೇ ನಿಲ್ಲಿಸಿ ನಾವು ಮತ್ತೆ ಚಟ್ನಿಗೆ ಬಾಯಿ ಹಾಕೋಣ.

ಈಗ್ಗೆ ಕೆಲವಾರು ವರ್ಷಗಳಿಂದ ಹೋಟೆಲ್‌ಗಳಲ್ಲಿ ಗಿರಾಕಿಗಳಿಗೆ ನೀಡುವ ಚಟ್ನಿ ಬಗ್ಗೆ ನೀವೇನಾದರೂ ಗಮನ ಹರಿಸಿದ್ದೀರಾ? ಅದನ್ನು ಚಟ್ನಿ ಅನ್ನುವ ಬದಲು ಚಟ್ನಿ ನೀರು ಅಂತ ಕರೆಯಬಹುದೆಂದು ನನ್ನ ಅಭಿಪ್ರಾಯ. ಅಪಭ್ರಂಶ ಸಾಹಿತಿಗಳಿರುವ ಹಾಗೆ ಇದು ಅಪಭ್ರಂಶ ಚಟ್ನಿ ಅಂಬೋಣ. ಬಹುಪಾಲು ನಿಮ್ಮದೂ ಇದೇ ಅಭಿಪ್ರಾಯವೆಂದು ನಾನು ನಂಬಿದ್ದೇನೆ. ಅದು ಎಷ್ಟು ನೀರಾಗಿರುತ್ತದೆಂದರೆ ಕೆಲವು ಸಲ ಚಟ್ನಿಯ ಕನಿಷ್ಠ ಸ್ವರೂಪವೂ ಅದಕ್ಕಿರುವುದಿಲ್ಲ. ಒಂದಿಷ್ಟು ಹುರಿಗಡ್ಲೆ, ಹಸಿಮೆಣಸಿನಕಾಯಿ, ಉಪ್ಪು ಬೆರೆಸಿ, ಮಿಕ್ಸರ್‌ನಲ್ಲಿ ಗರಗರ ಅಂತ ರುಬ್ಬಿ, ಒಂದಕ್ಕೆ ಐದರಷ್ಟೋ ಹತ್ತರಷ್ಟೋ ನೀರು ಸೇರಿಸಿ, ಅದನ್ನೇ ಗಿರಾಕಿಗಳಿಗೆ ಚಟ್ನಿ ಅಂತ ನೀಡುತ್ತಾರೆ. ಪಾಪ, ಗಿರಾಕಿಗಳು ತಮ್ಮ ಪಾಲಿಗೆ ಬಂದದ್ದೇ ಪರಮ ಚಟ್ನಿ ಅಂತ ದೋಸೆಗೋ, ಚಪಾತಿಗೋ ವ್ಯಂಜಕವಾಗಿ ಬಳಸಿಕೊಂಡು, ಬಿಲ್ಲು ಬಂದಷ್ಟು ದುಡ್ಡು ಪೀಕಿ, ಟಿಫಿನ್ ಆಯಿತೆಂಬ ಭ್ರಮೆಯಿಂದ ಹೊರಬರುತ್ತಾರೆ.

ಆದುದರಿಂದಲೇ, ನೀರು ಚಟ್ನಿ ತಿಂದೂ ತಿಂದೂ ನಗರಗಳ ಜನರ ಆಲೋಚನೆಯೆಲ್ಲ ನೀರಾಗಿ ಹೋಗಿದೆ ಎಂಬುದೇ ನನ್ನ ಅಭಿಮತ. ಯಾವತ್ತು ನಮ್ಮ ಜನ ಹೋಟೆಲಿನಲ್ಲಿ ಗಟ್ಟಿ ಚಟ್ನಿಯೇ ಬೇಕು ಅಂತ ಒತ್ತಾಯ ಮಾಡುತ್ತಾರೋ ಆಗ ನೋಡಿ ಈ ದೇಶದಲ್ಲಿ ಬದಲಾವಣೆಯ ಗಾಳಿ ಬೀಸತೊಡಗುತ್ತದೆ. ಸಾಹಿತಿ ಯು.ಆರ್. ಅನಂತಮೂರ್ತಿ ಅವರು ಆಗಾಗ್ಗೆ ಹೇಳುತ್ತಿದ್ದ ‘ಈ ನೆಲದ ಮಣ್ಣಿಗೆ ಕ್ರಾಂತಿಕಾರಕ ಗುಣವೇ ಇಲ್ಲ’ ಅನ್ನುವ ಮಾತು ಸುಳ್ಳಾಗುತ್ತದೆ ಎಂಬುದು ನನ್ನ ನಂಬಿಕೆ.

ನಾನಂತೂ ಯಾವುದೇ ಹೋಟೆಲಿಗೆ ಹೋದ್ರೂ ಸಪ್ಲೈಯರ್‌ಗೆ ‘ಗುರುವೆ, ಗಟ್ಟಿ ಚಟ್ನಿ ಇದ್ರೆ ಕೊಡು, ನೀರು ಚಟ್ನಿ ಬೇಡ’ ಅಂತ ಹೇಳುವುದು ಮಾಮೂಲು. ಅವನು ಸಪ್ಲೈಯರ್ ಆದರೂ, ಅವನನ್ನು ನಾನು ಗುರುವಿನ ಸ್ಥಾನದಲ್ಲಿರಿಸಿ ಸಂಬೋಧಿಸುವುದರ ಕಾರಣದಿಂದಲೋ ಏನೋ ಆ ಹೊತ್ತಿಗೆ ತನ್ನ ಶಿಷ್ಯನಾದ ನನ್ನ ಮೇಲೆ ವಾತ್ಸಲ್ಯ ಉಕ್ಕಿ, ಸಾಮಾನ್ಯವಾಗಿ ಅವನು ನನ್ನ ಆಸೆಯನ್ನು ಪೂರೈಸುವುದರ ಜೊತೆಗೆ, ನನ್ನ ಆಲೋಚನೆಯನ್ನೂ ಗಟ್ಟಿಗೊಳಿಸುತ್ತಾನೆ. ಆದುದರಿಂದಲೇ ನಾನು ಹೇಳುವುದು ನೀವು ಕೂಡ ಹೋಟೆಲಿಗೆ ಹೋದಾಗ ಗಟ್ಟಿ ಚಟ್ನಿಗಾಗಿ ಒತ್ತಾಯಿಸಿ. ನಿಮ್ಮ ತಟ್ಟೆಯಲ್ಲಿ ಗಟ್ಟಿ ಚಟ್ನಿ ಇದ್ದರೆ ನಿಮ್ಮ ಹೊಟ್ಟೆಯಲ್ಲಿರುವ ಚಿಂತನೆಗಳು ಗಟ್ಟಿಯಾಗಿ ಕ್ರಾಂತಿಕಾರಕ ಚಿಂತನೆಗಳಾಗುತ್ತವೆ ಅಂತ.

ಆಗಲೀಗ ಬಡತನ, ಜಾತಿ, ಮತ, ಧರ್ಮ, ಕೋಮು ಈ ಎಲ್ಲ ಬದುಕು- ಭಾವನೆಗಳ ಕಚ್ಚಾ ಭಾರತ ಹೋಗಿ ಸರ್ವೋದಯದ, ಸರ್ವಸಮಾನತೆಯ ಸ್ವಚ್ಛ ಮನಸ್ಸಿನ, ಸ್ವಚ್ಛ ಬದುಕಿನ, ಸ್ವಚ್ಛ ಭಾರತ ಉದಯವಾಗುತ್ತದೆ ಅಂತ ನನ್ನ ಅಚಲ ನಂಬಿಕೆ. ಯಾಕೆಂದರೆ ನಾನೊಬ್ಬ ಆಶಾಜೀವಿ.

ನಮ್ಮ ಹಿರೀಕರಾದ ಕುವೆಂಪು ಕೂಡ ಕೊನೆತನಕ ಒಬ್ಬ ಆಶಾಜೀವಿಯೇ ಆಗಿದ್ದರು ಎಂಬುದು ನಿಮಗೊಂದು ಮಾಹಿತಿ. ಈ ಎಲ್ಲದರ ಹಿಂದೆ ಗಟ್ಟಿ ಚಟ್ನಿ ಸ್ಥಾಯಿಯಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಮಾತ್ರ ಎಂದೂ ಮರೆಯಲಾಗುವುದಿಲ್ಲ.
ಇಂತೀ ಚಟ್ನಿ ಪುರಾಣಂ ಸಮಾಪ್ತಿ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !