ನಿದ್ದಿ ಮಾಡಲಿಬೇಕು ಜಗದೊಳಗ!

7

ನಿದ್ದಿ ಮಾಡಲಿಬೇಕು ಜಗದೊಳಗ!

Published:
Updated:
Deccan Herald

ಅಪ್ಪ ಪಕ್ಕಾ ಹಳ್ಳಿ ಮನುಷ್ಯ. ಹೊಟ್ಟೆ ತುಂಬ ಊಟ, ಕಣ್ತುಂಬ ನಿದ್ದಿ ಇಷ್ಟೇ ಆತನ ಜಗತ್ತು. ನಾನು ಹತ್ತನೇ ತರಗತಿಯಲ್ಲಿದ್ದಾಗ ಬೆಳಿಗ್ಗೆ ಓದಲು ಏಳಬೇಕಾದರೆ ಕುರಿ, ಕೋಣ ಬೀಳುತ್ತಿದ್ದವು. ಅಂಥ ನಿದ್ದೆಬಡುಕ ನಾನು. ಅಪ್ಪನಿಂದ ಈ ಗುಣ ನನಗೆ ಅನುವಂಶೀಯವಾಗಿ ಬಂದಿರಲಿಕ್ಕೂ ಸಾಕು! ಆದರೆ ಅಮ್ಮ ಹಾಗಲ್ಲ, ಮಹತ್ವಾಕಾಂಕ್ಷಿಯಾಕೆ. ನಾವು ಹೊದ್ದುಕೊಂಡಿರುತ್ತಿದ್ದ ಹೊದಿಕೆಯನ್ನು ನಿರ್ದಾಕ್ಷಿಣ್ಯವಾಗಿ ಕಿತ್ತೆಸೆದು, ನೀರು ಚಿಮುಕಿಸಿ, ತನ್ನ ನಿದ್ರಾ ನಿರ್ಮೂಲನಾ ಮಂತ್ರ ಪಠಿಸಿ, ಬೈದು ಬೆವರಿಳಿಸಿ, ರಮಿಸಿ ಆಸೆ ಹುಟ್ಟಿಸಿ ಒಟ್ಟಿನಲ್ಲಿ ‘ಧಿಗ್ಗನೆದ್ದು ಕೂರುವಂತೆ ಮಾಡುವಲ್ಲಿ ಸಫಲಳಾಗುತ್ತಿದ್ದಳು.

ಆದರೆ, ಅಪ್ಪ ತಾನು ಹೊದ್ದು ಮಲಗಿರುತಿದ್ದ ಚಾದರವನ್ನು ಎತ್ತಿ ನಮ್ಮನ್ನು ಸದ್ದಿಲ್ಲದೆ ಒಳಗೆಳೆದುಕೊಳ್ಳುತ್ತಿದ್ದ. ಅಪ್ಪನ ಬಿಸಿಯಪ್ಪುಗೆ, ಮೂಗಿಂದ ಬರುವ ಬೀಡಿಯ ಘಾಟು ಬೆರೆತ ಬಿಸಿಗಾಳಿ ನಮ್ಮನ್ನು ಮತ್ತೆ ನಿದ್ರಾದೇವತೆಯ ಲೋಕಕ್ಕೆಳೆಯುತ್ತಿದ್ದವು. ಕೆಲ ಹೊತ್ತಿನಲ್ಲೇ ಅಮ್ಮ ಮತ್ತೆ ಬಂದು ‘ಧಿಗ್ಗನೆ ಏಳಬೇಕೆಂದೂ, ಏಳದಿದ್ದರೆ ಚೆನ್ನಾಗಿ ಬೀಳುತ್ತವೆಂದೂ ಹೂಂಕರಿಸುತ್ತ ಸ್ವರ್ಗ ಸುಖದಲ್ಲಿ ತೇಲುತ್ತಿದ್ದ ನಮ್ಮನ್ನು ಪಾತಾಳಕ್ಕಿಳಿಸಿಬಿಡುತ್ತಿದ್ದಳು. ಆಗೆಲ್ಲ ಅಪ್ಪನು ಅಮ್ಮನಿಗೆ ಹೇಳುತ್ತಿದ್ದುದು ಒಂದೇ ವಾಕ್ಯ- ‘ಇರ್ಲಿ ಬುಡೇ. ಬೆಳಿಯ ಮಕ್ಕಳಿಗೆ ನಿದ್ದಿ ಸುಖಾನೇ ನಿಜವಾದ ಸುಖ’.

ಅಪ್ಪನಿಗೆ ಮಧ್ಯಾಹ್ನದ ಸಣ್ಣನಿದ್ದೆಯೆಂದರಂತೂ ಪಂಚಪ್ರಾಣ. ಹಗಲು ನಿದ್ದೆ ಬೊಜ್ಜಿಗೆ ದಾರಿ ಅಂತಾರೆ. ಆದರೆ, ಅದನ್ನು ನಿಯಮಿತವಾಗಿ ಪಾಲಿಸಿದ ಅಪ್ಪ ಸಾಯುವವರೆಗೂ ತೆಳ್ಳಗೆ ಚಾಕುವಿನಂತೆ ಇದ್ದ! ಊಟದ ನಂತರ ಇಬ್ಬರಿಗಾಗುವಷ್ಟು ಅಗಲ ಚಾಪೆ ಹಾಸಿ, ಬೆನ್ನು ನೆಲಕ್ಕೆ ಬಿಸಾಡಿ, ಕಾಲುಗಳನ್ನು ಅಗಲವಾಗಿ ಚಾಚಿ, ಎರಡೂ ಕೈಗಳ ದಿಂಬಿನ ಮೇಲೆ ಮಲಗುತ್ತಿದ್ದ ಅಪ್ಪನಿಗೆ ಇನ್ನೇನು ಕೆಲಸಕ್ಕೆ ಹೊರಡುವ ಸಮಯವಾಯ್ತು ಎಂದು ಅಮ್ಮ ‘ಧಿಗ್ಗನೇಳಲು ಕರೆ ಕೊಡುವಾಗ ಅದೇ ತಾನೇ ಜೋಂಪು ಹತ್ತುತ್ತಿರುತ್ತಿತ್ತು. ಕಿಂಕರ್ತವ್ಯಪ್ರೇರಿತನಾಗಿ ಆತ ಮನಸಿಲ್ಲದ ಮನಸಿನಿಂದ, ಆಸೆಯನ್ನು ಸಾಯಿಸಿಕೊಂಡು ಮುಖ ತೊಳೆದುಕೊಂಡು ಸಿದ್ಧನಾದಾಗ, ಆತನ ಕಣ್ಣುಗಳು ಅರೆಪೆಟ್ಟು ತಿಂದ ಹಾವಿನಂತೆ ಬೆಂಕಿಯುಗುಳುವ ಕೆಂಡಗಳಾಗಿರುತ್ತಿದ್ದವು. ಈಗ ನೆನೆಸಿಕೊಂಡರೆ ನಮ್ಮ ಹೊಟ್ಟೆ- ಬಟ್ಟೆಗಾಗಿ ಅಪ್ಪನ ಎಷ್ಟೊಂದು ಸಣ್ಣನಿದ್ದೆಗಳು ಸದ್ದಿಲ್ಲದೆ ಸತ್ತುಹೋದುವಲ್ಲ ಎಂದು ನೋವಾಗಿ ಹಿಂಡಿದಂತಾಗುತ್ತದೆ. ಹಾಗಾಗಿ, ನನ್ನ ಪಾಲಿಗೆ ಅಪ್ಪನೆಂದರೆ ಎಂದಿಗೂ ಮುಗಿಯದ ಒಂದು ಸುಖನಿದ್ದೆ ಅಥವಾ ಎಂದಿಗೂ ಮುಗಿಯದ ಸುಖನಿದ್ದೆಯ ಒಂದು ತೀರದ ಬಯಕೆ.

ನಾನು ಹಾಸ್ಟೆಲಿನಲ್ಲಿ ಪಿಯುಸಿಯೋ ಬಿಎಸ್ಸಿಯೋ ಇದ್ದಾಗ ಭೂಕಂಪವಾಗಿದ್ದ ಘಟನೆ ನೆನಪಾಗ್ತದೆ. ನಡುರಾತ್ರಿ ಭೂಕಂಪವಾಗ್ತಿದ್ದಂತೆ ಎಲ್ಲರೂ ಹೇಗಿದ್ದ ಸ್ಥಿತಿಯಲ್ಲಿ ಹಾಗೆ ಕಿತ್ತಿಕೊಂಡು ಓಡಿಹೋಗಿದ್ದರು. ಎರಡೂ ಕಾಲಿರದ ನಮ್ಮ ಗೆಳೆಯ ಕೂಡ ಊರುಗೋಲುಗಳನ್ನೂ ಕೇರು ಮಾಡದೆ ಅಂಗೈ ಮೇಲೆ ತೆವಳುತ್ತ ಹೊರಹೋಗಿಬಿಟ್ಟಿದ್ದ. ನನಗಿದ್ಯಾವುದೂ ಅರಿವಿಗೆ ಬಂದಿಲ್ಲ. ರೂಮಿನಲ್ಲಿ ಆರಾಮ ಮಲಗಿಬಿಟ್ಟಿದ್ದೆ. ರೂಮಿಂದ ಹೊರಬಂದ ಎಲ್ಲರೂ ಭಯಭೀತರಾಗಿ ಒಗ್ಗೂಡಿ ತಮ್ಮೊಳಗಿನ ಭಯವನ್ನು ಮೀರಲೆಂಬಂತೆ ದೊಡ್ಡದೊಡ್ಡ ದನಿ ಮಾಡುತ್ತ ಜೋರು ಗಲಾಟೆಯೆಬ್ಬಿಸಿದ್ದರು.

ಆ ಗಲಾಟೆ ನನ್ನನ್ನು ಒಂಚೂರು ಮಿಸುಕಾಡಿಸಿತು. ಏನೆಂದು ಮಲಗಿದಲ್ಲೇ ಎದ್ದು ನೋಡ್ತೇನೆ. ಕಿಟಕಿ ಬದಿಗಿಟ್ಟ ಸಾಮಾನುಗಳು ಧರಾಶಾಯಿಯಾಗಿವೆ. ಬಟ್ಟೆ ತೂಗುಹಾಕಿದ್ದ ಹ್ಯಾಂಗರುಗಳು ಮೊಳೆ ಕಿತ್ತುಕೊಂಡು ಜೋತಾಡುತ್ತಿವೆ. ಟ್ರಂಕುಗಳು ಸ್ಥಾನಪಲ್ಲಟಗೊಂಡು ದಾರಾದಿಕ್ಕಾಗಿವೆ. ಹಾಸಿಗೆ-ಹೊದಿಕೆಗಳು ಚೆಲ್ಲಾಪಿಲ್ಲಿಯಾಗಿವೆ. ರೂಮು ರಣಾಂಗಣವಾಗಿದೆ. ಸಾಲದ್ದಕ್ಕೆ ಹೊರಗೆ ಹುಯಿಲೆದ್ದಿದೆ. ನಾನು ಏನಾಯ್ತೆಂಬ ಗೊಂದಲದಲ್ಲಿ ರೂಮಿಂದ ಹೊರಗೆ ಬಂದಾಗಲೇ ಎಲ್ಲರಿಗೂ ನಾನು ಅಷ್ಟು ಹೊತ್ತೂ ರೂಮಲ್ಲಿ ಮಲಗೇ ಇದ್ದೆನೆಂಬುದು ಗೊತ್ತಾಗಿ, ಆಶ್ಚರ್ಯಗೊಂಡು ಬಿದ್ದು ಬಿದ್ದು ನಗತೊಡಗಿದರು. ರಾಮಕೃಷ್ಣ ಹೇಳಿದ- ‘ಆಹಾ ಸುಖಪುರುಷ! ಏನ್ ನಿದ್ದೆಪಾ ನಿಂದು?! ಏನ್ ಗಾಮಾ ಸ್ಟೇಜಿನ್ಯಾಗಿದ್ಯ ಅಥವ ಕೋಮಾ ಸ್ಟೇಜಿಗೇ ಹೋಗಿದ್ಯಪ ದೊಡ್ಮನುಷ್ಯಾ?’ ಅಂದ. ನಾನು ಪಿಳಿಪಿಳಿ ಕಣ್ಣುಬಿಟ್ಟೆ.

ನಿದ್ದೆಯಲ್ಲಿ ಮೂರು ಹಂತಗಳಿವೆಯಂತೆ- ಇದು ವೈಜ್ಞಾನಿಕ ಸತ್ಯವೋ ಅಲ್ಲವೋ ನನಗೊತ್ತಿಲ್ಲ. ಆದರೆ, ಇಂಟರೆಸ್ಟಿಂಗಂತೂ ಆಗಿದೆ. ಮೊದಲ ಹಂತ ಆಲ್ಫಾ. ಇದೊಂಥರಾ ಅರೆನಿದ್ದೆ- ಅರೆಎಚ್ಚರಗಳ ಮಿಸಳಭಾಜಿ. ಸುತ್ತ ನಡೆಯುತ್ತಿರುವುದೆಲ್ಲವೂ ಸುಪ್ತಪ್ರಜ್ಞೆಗೆ ಗೊತ್ತಾಗುತ್ತಿರುತ್ತೆ. ಆದರೂ, ದೇಹ ಸುಷುಪ್ತಿಯಲ್ಲಿರುತ್ತೆ. ಎರಡನೆಯದು ಬೀಟಾ- ಇದರಲ್ಲಿ ಸುತ್ತಲಿನದರ ಅರಿವಿರುವುದಿಲ್ಲ. ಆದರೆ, ಏನೋ ಬಿದ್ದರೆ ಗೊತ್ತಾಗುತ್ತದೆ, ಎಚ್ಚರಾಗುತ್ತದೆ. ಒಂದು ಸೊಳ್ಳೆ ಕಚ್ಚಿದರೆ, ಇರುವೆ ಓಡಾಡಿದರೆ, ಮಲಗಿಕೊಂಡಿರುವಂತೆಯೇ ‘ನಿದ್ರಾವೇಧಿ (ಶಬ್ದವೇಧಿಯಂತೆ!) ವಿದ್ಯೆ ಪ್ರಯೋಗಿಸಿ ಗುರಿಯಿಟ್ಟು ಹೊಡೆದುರುಳಿಸುತ್ತೇವೆ.

ಇನ್ನು ಮೂರನೆಯದು ಗಾಮಾ- ಇದು ನಿಜವಾದ ನಿದ್ದೆ. ನಿಮ್ಮ ಮೈಮೇಲೆ ಹಾವು ಹರಿದಾಡಿದರೂ ಅರಿವೇ ಆಗದಂಥ ಗಾಢನಿದ್ದೆ! ಗಾಮಾದ ನಂತರ ನಾಲ್ಕನೆಯದೆಂದು ಸೇರಿಸಬಹುದಾದರೆ ಅದು ಕೋಮಾವೇ ಇರಬಹುದು. ಯಾಕೆಂದರೆ ಈ ಹಂತದಲ್ಲಿ ಹಾವಲ್ಲ ಹಾವಿನ ಅಪ್ಪ- ಅಜ್ಜ ಅಷ್ಟೇಕೆ ಮುತ್ತಜ್ಜ ಹರಿದಾಡಿದರೂ ಗೊತ್ತಾಗುವುದಿಲ್ಲ. ಹಾಗಂತ ವ್ಯಕ್ತಿ ಸತ್ತೂ ಇರುವುದಿಲ್ಲ. ಕೋಮಾ ನಂತರದ್ದಂತೂ ನಿಮಗೆ ಗೊತ್ತೇ ಇದೆ ಸೀದಕ್ಕೆ ಸೀದಾ ಪೂರ್ಣವಿರಾಮ!

ಗಾಮಾ ಸ್ಟೇಜಿನ ನಿದ್ದೆಗೆ ಪಡೆದುಕೊಂಡು ಬಂದಿರಬೇಕು. ಪ್ರಾಪ್ತಿ ಇರಬೇಕು ಅಂತಾರೆ. ಅದಕ್ಕೆ ಮುದ್ದಿ- ಲದ್ದಿಗಳ ಕೆಲಸ ಬಾಹ್ಯಶಕ್ತಿಯ ಅಗತ್ಯವಿಲ್ಲದೆ ತನ್ನಂತಾನೇ ನಡೆಯುತ್ತಿರಬೇಕು. ಮನಸ್ಸು ನಿರಾಳ ಇರಬೇಕು. ಅಂಥವನಿಗೆ ನಿದ್ದೆ ಕಣ್ಮುಚ್ಚಿದರೆ ಸಾಕು ಬಂದುಬಿಡ್ತದೆ. ಅದಕ್ಕೆ ಹಾಸಿಗೆಯ ಹಂಗೇ ಇಲ್ಲ. ಅಷ್ಟಿಲ್ಲದೆ ಸುಮ್ಮನೆ ಹೇಳಿಲ್ಲ ‘ಚಿಂತಿ ಇಲ್ಲದವನಿಗಿ ಸಂತ್ಯಾಗ ನಿದ್ದಿ ಅಂತ. ಆದರೆ, ಇದಕ್ಕೆ ವಿರುದ್ಧವಾಗಿ ‘ಹೆಚ್ಚು ನಗುವ ವ್ಯಕ್ತಿ ಒಳಗೆ ಅತೀವ ದುಃಖಿ; ಹೆಚ್ಚು ಮಲಗುವ ವ್ಯಕ್ತಿ ಆಳದಲಿ ಒಬ್ಬಂಟಿ ಅಂತಲೂ ಒಂದು ವಾದವಿದೆ. ಜನರ ಜೊತೆ ಹೆಚ್ಚು ಬೆರೆಯುವುದನ್ನು ತಪ್ಪಿಸಲು ಅಂತರ್ಮುಖಿಗಳು ರಾತ್ರಿ ಎಚ್ಚರಿದ್ದು ಹಗಲು ಮಲಗಿರುತ್ತಾದ್ದರಿಂದ ಅವರು ಹೆಚ್ಚು ಮಲಗುವವರಂತೆ ಕಾಣಿಸುತ್ತಾರಷ್ಟೆ ಅಂತ ಸಂಶೋಧನೆಯೊಂದು ಹೇಳಿದೆ. ಹಗಲೋ ರಾತ್ರಿಯೋ, ಎಚ್ಚರಾದ ಮೇಲೂ ಮತ್ತಷ್ಟು ಮಲಗಬೇಕೆನ್ನುವ, ಒಟ್ಟಿನಲ್ಲಿ ನಿದ್ದೆ ಹೆಚ್ಚು ಮಾಡಬೇಕೆನ್ನುವ ಹಪಾಪಿತನಕ್ಕೆ ಕ್ಲಿನೋಮೇನಿಯಾ ಎನ್ನುತ್ತದೆ ವೈದ್ಯಲೋಕ.

ಮನೋವ್ಯಾಪಾರದ ಹಲವಾರು ಏರುಪೇರುಗಳಿಗಂತೂ ನಿದ್ರಾಹೀನತೆ ಒಂದು ಮುಖ್ಯ ಕಾರಣ. ಇನ್‌ಸೋಮ್ನಿಯಾ ಎಂಬ ನಿರ್ನಿದ್ರಾ ಕಾಯಿಲೆ ಎಷ್ಟೋ ಜನರನ್ನು ಡಿಪ್ರೆಶನ್‌ಗೆ ತಳ್ಳುತ್ತದೆ. ಹಾಗಾಗಿ, ಈ ಮಾನಸಿಕ ಕಾಯಿಲೆಗಳ ಚಿಕಿತ್ಸೆಯಲ್ಲಿ ನಿದ್ದೆಯನ್ನೊಂದು ಔಷಧಿಯಂತೆ ಬಳಸಲಾಗುತ್ತದೆ. ಅಷ್ಟೇಕೆ ಕ್ರೂರಪ್ರಾಣಿಗಳನ್ನು ಸೆರೆಹಿಡಿಯುವಲ್ಲಿ, ನಾರ್ಕೋಅನಾಲಿಸಿಸ್ ತಂತ್ರದ ಮೂಲಕ ಸುಳ್ಳನ್ನು ಪತ್ತೆಹಚ್ಚುವಲ್ಲಿ ಮತ್ತಿನ ಇಂಜೆಕ್ಷನ್ ನೀಡುವ ಮೂಲಕ ನಿದ್ದೆಯನ್ನು ಒಂದು ತಂತ್ರವಾಗಿ ಬಳಸಲಾಗುತ್ತದೆ.

ವಸುಧೇಂದ್ರರ ‘ಹರಿಚಿತ್ತ ಸತ್ಯ ಕಾದಂಬರಿಯಲ್ಲಿ ಒಂದು ಪಾತ್ರ ‘ನನಗ ನಿದ್ದಿ ಬರವಲ್ದೋ ಅಂತ ಗೋಳಾಡುವ ಚಿತ್ರ ಕರುಣಾಜನಕವಾಗಿ ಚಿತ್ರಿತವಾಗಿದೆ. ಹಿಂದೆ ಶತ್ರುಪಾಳೆಯದ ಗೂಢಚಾರರು ಸೆರೆಸಿಕ್ಕು ಯಾವುದಕ್ಕೂ ಬಾಯ್ಬಿಡದೆ ಇದ್ದಾಗ ಬಳಸಲಾಗುತ್ತಿದ್ದ ಬ್ರಹ್ಮಾಸ್ತ್ರವೆಂದರೆ ಅವರನ್ನು ನಿದ್ದೆ ಮಾಡಲು ಬಿಡದೆ ಕಾವಲು ಕಾಯುವುದಾಗಿತ್ತಂತೆ. ನೆನಸಿಕೊಂಡರೇ ಮೈಜುಮ್ಮೆನ್ನುತ್ತೆ. ನಿದ್ರೆ ಬರದವನ ಸಂಕಟದ ನರಳಾಟಕ್ಕಿಂತ ಒತ್ತಿಕೊಂಡು ಬರುತ್ತಿರುವ ನಿದ್ದೆಯನ್ನು ಮಾಡಗೊಡದಿರುವ ಈ ಶಿಕ್ಷೆಯಲ್ಲಡಗಿರುವ ಕ್ರೌರ್ಯ ಭೀಕರವಾಗಿದೆ.

ಯೋಗವಿಜ್ಞಾನದಲ್ಲಿ ನಿದ್ರಾಹೀನತೆಗೆ ಮಕರಾಸನ ಮದ್ದು ಎಂದು ಹೇಳಲಾಗಿದೆ. ರಾತ್ರಿಯ ಸುದೀರ್ಘ ನಡಿಗೆ, ಸುಖೋಷ್ಣ ನೀರಿನ ಸ್ನಾನ, ಟೆಕ್ಸ್ಟ್‌ಬುಕ್ಕಿನ(!) ಒಂದೆರಡು ಪುಟದ ಓದು, ನೂರರಿಂದ ಒಂದರವರೆಗೆ ಹಿಂಬರಿಕಿ ಎಣಿಕೆ ಎಲ್ಲ ಟ್ರಿಕ್‌ಗಳೂ ಕೈಕೊಟ್ಟ ಮೇಲೆ ಮಕರಾಸನ. ಅಲ್ಲಿಗೂ ಗಿಟ್ಟಲಿಲ್ಲವೆಂದರೆ ಅಲೋಪಥಿಯಿದೆಯಲ್ಲ ಸಹಾಯಕ್ಕೆ, ಒಂದು ನಿದ್ದೆ ಮಾತ್ರೆ ನುಂಗು, ಶವದಂತೆ ಮಲಗು. ನೋಡಿ ಮನುಷ್ಯನ ತಲುಪಿರುವ ದುರಂತ ಸ್ಥಿತಿ ಹೇಗಿದೆ- ಕಣ್ಮುಚ್ಚಿಕೊಂಡೇ, ಅದೂ ಮಲಗಿಕೊಂಡೇ ಮಾಡಿಮುಗಿಸಬಹುದಾದ ಏಕಮಾತ್ರ ಸುಲಭ ಕೆಲಸವಾದ ನಿದ್ದೆಗೆ ಈ ಗತಿ ಬಂದುಬಿಟ್ಟಿದೆ! ಯಾವ ಪ್ರಾಣಿ ಪಕ್ಷಿಗೂ ಇಲ್ಲದ ನಿದ್ರಾಹೀನತೆಯ ಕಾಯಿಲೆ ಬುದ್ಧಿವಂತ ಪ್ರಾಣಿಗೇ ತಗುಲಿಕೊಂಡುಬಿಟ್ಟಿದೆ!!

‘ಗುಡ್ ಲಾಫ್ ಅಂಡ್ ಸೌಂಡ್ ಸ್ಲೀಪ್ ಆರ್ ಬೆಸ್ಟ್ ಕ್ಯುರ‍್ಸ್ ಫಾರ್ ಎನಿಥಿಂಗ್ ಎಂಬ ಮಾತಿದೆ. ಕೆಲವರು ಇದನ್ನು ವಾಚ್ಯಾರ್ಥದಲ್ಲಿ ಗ್ರಹಿಸಿ ಜೋರಾಗಿ ಸೌಂಡ್ ಮಾಡುತ್ತ ಮಲಗುವುದೇ ಸೌಂಡ್ ಸ್ಲೀಪ್ ಎಂದುಕೊಂಡಿರುತ್ತಾರೆ. ಯಾವ ಸೈರನ್ನಿಗಿಂತಲೂ ಕಡಿಮೆಯಿಲ್ಲದಂತೆ ಬರುವ ಅವರ ಗೊರಕೆ ಸದ್ದಿಗೆ ಇತರರ ನಿದ್ದೆಗಳು ಹಾರಿಹೋಗುತ್ತವೆ. ಇವರಿಗಿಂತ ಮೊದಲು ನಿದ್ದೆ ಹತ್ತಿದವರೇನೋ ಪಾರಾಗಿಬಿಡ್ತಾರೆ, ಮಿಕ್ಕವರ ನಿದ್ದೆ ಕಥೆ ಆ ಕಾರ್ಖಾನೆ ಸದ್ದಿಗೆ ಹರೋಹರ ಆಗಿಬಿಡುತ್ತದೆ. ನಿದ್ದೆಯಲ್ಲಿ ಸದ್ದು ಮಾಡುವ ಗೊರಕಯ್ಯನವರ ಕಥೆ ಅಂತಿರಲಿ, ಇನ್ನೂ ಕೆಲವರಿಗೆ ನಿದ್ದೆಯಲ್ಲಿ ನಡೆಯುವ, ಮಾತನಾಡುವ ಅಭ್ಯಾಸಗಳಿರುತ್ತವೆ. ವಿದ್ಯಾರ್ಥಿ ದೆಸೆಯಲ್ಲಿದ್ದಾಗಿನ ಘಟನೆಯಿದು. ಎಲ್ಲರೂ ಪರೀಕ್ಷೆಗೆ ಓದುತ್ತಿರಬೇಕಾದರೆ ನಾನು ಮಧ್ಯಾಹ್ನದ ನಿದ್ದೆಯಲ್ಲಿ ಲೀನನಾಗಿದ್ದೇನೆ. ಕನವರಿಸಲು ಶುರು ಮಾಡಿದ್ದೇನೆ.

ನನ್ನ ಫ್ರೆಂಡ್ಸ್ ತಮಾಷೆಗೆಂದು ಹಾಗೆ ಮಾತಾಡಿಸಿದರೆ ನಾನು ‘ಈ ಎಕ್ಸಾಮಿನಲ್ಲಿ ಈಜಿಯಾಗಿ ಹೈಸ್ಕೋರ್ ಮಾಡೋದು ಹೆಂಗ ಅಂತ ಹೇಳಾಕತ್ತೀನಿ ಅಂದೆನಂತೆ! ಎದ್ದು ಓದುತ್ತ ಕೂತವರಿಗೆ ಬಿದ್ದು ಮಲಗಿಕೊಂಡವನ ಈ ಬಿಟ್ಟಿ ಉಪದೇಶ ಕೇಳಿ ನಖಶಿಖಾಂತ ಉರಿದುಹೋಗಿ ಮುಖಕ್ಕೆ ನೀರು ಹೊಡೆದು ಎಬ್ಬಿಸಿದರಂತೆ. ‘ಯಾಕ ಎಬ್ಬಿಸಿದ್ರ್ಯೋ; ಅಂತ ಕರುಣಾರ್ದ್ರವಾಗಿ ಕೇಳಿಕೊಂಡಾಗ ‘ಥೂ ನನ್ನ ಮಗನೇ ಎಂದು ಉಗಿದು ಈ ಇತಿವೃತ್ತಾಂತವನ್ನು ಹೇಳಿದರು. ನಿದ್ದೆಯನ್ನು ಧ್ಯಾನವಾಗಿ ಹೇಗೆ ಬಳಸಬೇಕೆಂಬ ಬಗ್ಗೆ ಓಶೊ ಹೇಳಿರುವ ‘ಯೋಗನಿದ್ರಾ ಪರಿಕಲ್ಪನೆಯಂತೂ ನಮಗೆ ಮುಸುಕಿರುವ ಪೊರೆಗಳ ಹರಿದು ಹೊಸ ಲೋಕ ತೋರುವಂತಿದೆ. ದಲಾಯಿ ಲಾಮಾ ಕೂಡ ಅದನ್ನೇ ಹೇಳಿದ್ದಾರೆ- ‘ಸ್ಲೀಪ್ ಈಸ್ ದ ಬೆಸ್ಟ್ ಫಾರ್ಮ್ ಆಫ್ ಮೆಡಿಟೇಶನ್. ಆದರೆ ಒಂದೊಳ್ಳೆ ಸಹಜವಾದ ಸುಖನಿದ್ದೆ ಮೈಮುರಿದು ದುಡಿಯದ ಯಾರಿಗೂ ಸುಖಾಸುಮ್ಮನೆ ಸಿಕ್ಕ ಹಾಗೆ ನಾನಂತೂ ಕಾಣೆ. ಅದಕ್ಕೇ ಓಶೋ, ಲಾಮಾ ಇಬ್ಬರೂ ‘ಮೈಮುರಿದು ದುಡಿದು; ಮೈಮರೆತು ಮಲಗುವ ನಮ್ಮ ಬಸವಣ್ಣನ ಕಾಯಕವೇ ಕೈಲಾಸದ ತತ್ವವನ್ನು ಮತ್ತೊಂದು ಬಗೆಯಲ್ಲಿ ಹೇಳುತ್ತಿದ್ದಾರೆ ಎನಿಸುತ್ತದೆ.

ಕುಳಿತಲ್ಲೆ ಹೊಡೆವ ಕುನುಕು ನಿದ್ದೆ, ಕ್ಷಿಪ್ರಕ್ರಾಂತಿಯಂಥ ಕೋಳಿನಿದ್ದೆ, ಭೂರೀಭೋಜನ ನಂತರದ ಗಡದ್ದು ನಿದ್ದೆ, ಪಾಂಗಿತ ಮೈಥುನ ನಂತರದ ಸೋಂಪು ನಿದ್ದೆ, ಬಸ್ಸಲ್ಲಿ ಊರು ಹತ್ತಿರ ಬಂದಾಗಲೇ ಆವರಿಸಿಕೊಳ್ಳುವ ತೂಕಡಿಕೆಯ ನಿದ್ದೆ, ಸುಡುಬಿಸಿಲ ಮಧ್ಯಾಹ್ನದ ಆಕಳಿಕೆ ನಿದ್ದೆ, ಬೆಳ್ಳಂಬೆಳಗಿನ ಸಕ್ಕರೆ ನಿದ್ದೆ, ಬೋರು ಭಾಷಣ ಅಥವಾ ಬೋಧನೆಯ ಕಾಲಕ್ಕೆ ತೂಗುವ ಜೋಗುಳ ನಿದ್ದೆ... ಯಾವುದು ಹೆಚ್ಚು ಯಾವುದು ಕಮ್ಮಿ ಎಂದು ಬೇಧಭಾವ ಮಾಡಲಾಗುವುದಿಲ್ಲ. ನಿದ್ದೆಯೆಂದರೆ ನಿದ್ದೆಯೇ. ಎತ್ತಲಿಂದ ಚೀಪಿದರೂ ಜೇನೊಸರುವ ಜೋನಿಬೆಲ್ಲದ ಮುದ್ದೆಯೇ! ಸಿಇಟಿಗಾಗಿ ನಾವು ಐದು ಜನ ರೂಮಲ್ಲಿ ಅದನ್ನೊಂದು ಜೀವನ್ಮರಣದ ಪ್ರಶ್ನೆ ಮಾಡಿಕೊಂಡು ಹಸಿವು ನಿದ್ದೆಗಳ ಹತ್ತಿಕ್ಕಿ ಅಭ್ಯಾಸ ಮಾಡುತ್ತಿದ್ದಾಗ, ನನಗೆ ಜೋರು ನಿದ್ದೆ ಬರುತ್ತಿತ್ತು. ನಾಲ್ಕು ಪುಟ ಸರಿಯಾಗಿ ಓದಿರುತ್ತಿದ್ದೆನೊ ಇಲ್ಲವೋ ಕಣ್ಣೆಳೆಯುತ್ತಿದ್ದವು.

ಹಗ್ಗ ಕಟ್ಟಿ ಎಳೆದಂತೆ ಮುಚ್ಚಿಕೊಳ್ಳುತ್ತಿದ್ದ ರೆಪ್ಪೆಗಳನ್ನು ಕಷ್ಟಪಟ್ಟು ಕಂಟ್ರೋಲ್ ಮಾಡುತ್ತ ಮತ್ತೆ ಓದಲು ಕೂರುತ್ತಿದ್ದೆ. ಮತ್ತೆ ನಿದ್ದೆ ಮುಚ್ಚುತ್ತಿತ್ತು. ತಿರುಗಿಮುರಿಗಿ ಮತ್ತೆಮತ್ತೆ ಅದೇ ಪ್ಯಾರಾದ ಅದೇ ಸಾಲಿನ ಅದೇ ಪದದ ಮೇಲೇ ನಿಲ್ಲುತ್ತಿದ್ದೆ. ಸುತ್ತ ಕುಂತ ಗೆಳೆಯರಿಗೆ ನನ್ನ ತೂಕಡಿಕೆ ಒಂದೊಳ್ಳೆ ತಮಾಷೆ ದೃಶ್ಯವಾಗಿ ರಂಜಿಸುತ್ತಿತ್ತು. ‘ಐದು ನಿಮಿಷ ಮಲಗಿಬಿಟ್ಟರೆ ಫ್ರೆಶ್ ಆಗುತ್ತೆ ಅಂದುಕೊಂಡು ಗೆಳೆಯರಿಗೆ ‘ಅರ್ಧಗಂಟೆ ನಂತರ ನಿರ್ದಾಕ್ಷಿಣ್ಯವಾಗಿ ಎಬ್ಬಿಸಿಬಿಡುವಂತೆ ಕೋರಿ ಹಂಗೇ ಉರುಳಿಕೊಂಡರೆ ಎಚ್ಚರಾಗುತ್ತಿದ್ದುದು ಮಧ್ಯಾಹ್ನದ ಊಟದ ಹೊತ್ತಿಗೆ! ಗಾಬರಿಬಿದ್ದು ಎದ್ದು ‘ಎಬ್ಬಿಸಲಿಲ್ಲ ಯಾಕಂತ ಸಿಟ್ಟು ಮಾಡಿಕೊಂಡರೆ ಅವರು ಅಭಿಮಾನದಿಂದ ನನ್ನನ್ನು ನೋಡುತ್ತ ‘ಅಲ್ಲಪ ನಮಗ ರಾತ್ರಿನೇ ಚೊಲೊತ್ನ್ಯಾಗಿ ನಿದ್ದಿ ಬರವಲ್ದು. ಅಂಥಾದ್ರಾಗ ನೀನು ಹಗಲು ಗೂಡ ಗೊರಕೆ ಹೊಡಕಂತ ಮಕ್ಕಳದು ನೋಡಿ ಹೊಟ್ಟೆಕಿಚ್ಚಾಗುತ್ತ. ಇಷ್ಟು ಛಂದ ಮಕ್ಕಂಡತಗ ಎಬಸಾಕ ಮನಸೇ ಬರಲಿಲ್ಲ ಅಂತಿದ್ರು. ಇನ್ನೂ ಆಶ್ಚರ್ಯ ಏನೆಂದರೆ ಪ್ರಾಣ ಪಣಕ್ಕಿಟ್ಟು ಹೋರಾಡಿದ ಗೆಳೆಯರು ಕ್ಷತಗಾತ್ರರಾಗಿ ಅಲ್ಲೇ ಉಳಿದರೆ, ನಿದ್ದೆಬಡುಕನಾದ ನನಗೆ ನಿದ್ರಾದೇವತೆಯಂತೆ ಅದೃಷ್ಟದೇವತೆಯೂ ಕೈಹಿಡಿದು ಆ ಬ್ಯಾಚಿಗೆ ನಾನೊಬ್ಬನೇ ಪಾರಾದೆ! ಉಳಿದವರು ನಂತರದ ಬ್ಯಾಚುಗಳಲ್ಲಿ ಸೇರಿಕೊಂಡರು.

ನೌಕರಿಗೆ ಸೇರಿದ ಮೇಲೆ ಈ ನಿದ್ದೆಯ ಜೈತ್ರಯಾತ್ರೆ ನಿರಾತಂಕವಾಗಿ ಮುಂದುವರಿಯಿತು. ಚಿತ್ತಾಪುರದಲ್ಲಿ ಸಿದ್ದಲಿಂಗ ಬೆಣ್ಣೂರ ನಾನು ಸೇರಿ ರೂಮು ಮಾಡಿದೆವು. ನಿದ್ದೆಯಲ್ಲಿ ನಾನು ಒದ್ದಾಡುವ ಪರಿಗೆ ಬೆಚ್ಚಿಬಿದ್ದ ಸೂಕ್ಷ್ಮಜೀವಿ ಸಿದ್ದಲಿಂಗ ಮಾಸ್ತರ ರೂಮು ತುಂಬ ನನಗೆ ಹಾಸಿಕೊಟ್ಟು ತಾನು ಮೂಲೆ ಸೇರಿಕೊಳ್ಳುತ್ತಿದ್ದ. ನನಗೆ ಅಷ್ಟೂ ಜಾಗ ಸಾಲಿಮಿ ಬಿದ್ದು ರಾತ್ರಿಯೆಲ್ಲ ಉರುಳಾಡಿ ಅಷ್ಟೂ ಹಾಸಿಗೆ ಬಿಟ್ಟು, ಬೆಳಿಗ್ಗೆ ಏಳುವ ಹೊತ್ತಿಗೆ ಬರಿನೆಲದ ಮೇಲೆ ಥಂಡಿ ಹಿಡಿಸಿಕೊಂಡು ನಡುಗುತ್ತ ಮಲಗಿರುತ್ತಿದ್ದುದನ್ನು ಕಂಡು ನಕ್ಕು ಕನಿಕರಪಟ್ಟು ಹೊದೆಸುತ್ತಿದ್ದ. ಈ ಒದ್ದಾಟದಿಂದಾಗಿಯೇ ಮಂಚದ ಮೇಲೆ ಮಲಗಲು ನನಗೆ ಭಯ. ನಮ್ಮಂಥವರಿಗೆ ಸುತ್ತ ಸಣ್ಣ ಹುಡುಗರಿಗೆ ಇಟ್ಟಂಗ ಬೀಳಲಾರದಂಗ ದಿಂಬಿಡಬೇಕು. ಮಂಚಕ್ಕೂ ಸುತ್ತ ಬೀಳದಂತೆ ಕುಂಬಿ ಕಟ್ಟಿಸಿದರಂತೂ ಇನ್ನೂ ನಿಶ್ಚಿಂತಿ! ಒಮ್ಮೆ ಹಿಂಗೆ ಗಂಗಾವತಿಗೆ ಹೋಗಿದ್ದಾಗ ಗೆಳೆಯ ಗುಂಡೂರು ಪವನ ಬೃಂದಾವನ ಲಾಜಲ್ಲಿ ಸಿಂಗಲ್ ರೂಮು ಮಾಡಿದ. ರಾತ್ರಿ ಮಾತು ಮುಗಿಯೋ ಹೊತ್ತಿಗೆ ಎರಡೋ ಮೂರೋ ಆಗಿತ್ತು. ಅವನೂ ಅಲ್ಲೇ ಉಳಿತೀನಂದ. ಇರುವ ಸಿಂಗಲ್ ಬೆಡ್ ಮೇಲೆ ಯಾರು ಮಲಗಬೇಕೆಂಬ ಮಿಲಿಯನ್ ಡಾಲರ್ ಪ್ರಶ್ನೆ ಉದ್ಭವವಾಯಿತು. ‘ನಾನು ಕೆಳಗೆ ಮಕ್ಕೊಂತೀನಿ’ ಅಂದೆ. ‘ಏ ನೀನು ಗೆಸ್ಟ್. ಮ್ಯಾಲೆ ಮಕ್ಕ’ ಅಂದ. ‘ಬ್ಯಾಡೋ ಪವನ’ ಅಂದೆ ಕೇಳ್ಳಿಲ್ಲ. ಬೆಳಿಗ್ಗೆ ದೊಪ್ ಅಂತ ಕೆಳಗೆ ಮಲಗಿದ್ದ ಪವನನ ಮೇಲೆ ಬಿದ್ದೆ. ‘ಏನೋ ಮಾರಾಯ, ನನ್ ಮ್ಯಾಲೆ ಬಿದ್ದೆ ಸರಿಯಾಯ್ತು, ನಾನಿದ್ದಿಲ್ಲಂದ್ರೆ ನೆಲದ ಮ್ಯಾಲೆ ಬಿದ್ದು ಮೂಗು ಒಡದುಹೋಗ್ತಿತ್ತಲ್ಲೋ’ ಅಂದ. ‘ಅದಕ್ಕೇ ನಾನು ಬ್ಯಾಡೋ ಅಂದ್ನೆಪ ನೀನು ಕೇಳ್ಳಿಲ್ಲ’ ಅಂದೆ. ಅವನು ನಾನು ಸಣ್ಣ ಹುಡುಗನಂತೆ ಮಂಚದಿಂದ ಬಿದ್ದಿದ್ದನ್ನು ನೆನೆದು ಕೊಕಾಸಿ ನಗುತ್ತ ಬೆನ್ನಿಗೊಂದು ಸರಿಯಾಗಿ ಬಾರಿಸಿದ. ಅದು ಬಹುಮಾನವೋ ಶಿಕ್ಷೆಯೋ ತಿಳಿಯದೆ ಗೊಂದಲಕ್ಕೀಡಾಗಿ ನಾನು ಪ್ಯಾಲಿಯಂತೆ ನಕ್ಕೆ.

ಇನ್ನೊಮ್ಮೆ ನಾನು ಮತ್ತು ಪಲ್ಲವ ವೆಂಕಟೇಶ್ ಅರ್ಜೆಂಟಾಗಿ ಬೆಂಗಳೂರಿಗೆ ಹೋಗಬೇಕಾಗಿ ಬಂತು. ಲಿಂಕ್ ಎಕ್ಸ್‌ಪ್ರೆಸ್‌ನ ಜನರಲ್ ಬೋಗಿಗೆ ತೂರಿಕೊಂಡು ಬಿಟ್ವಿ. ಕಾಲಿಡಲಿಕ್ಕೂ ಜಾಗವಿಲ್ಲ. ಗುಂತಕಲ್ಲು ಬಂದಾಗ ಹಾಗೇ ಕುಸಿದು ಕೂತವನು ಎರಡು ಸೀಟುಗಳ ನಡುವಿನ ಜಾಗದಲ್ಲಿ ನೆಲದ ಮೇಲೆ ಬೆನ್ನು ಚೆಲ್ಲಿ ಮಲಗಿಬಿಟ್ಟೆ. ಅಷ್ಟು ಹೊತ್ತಿಗಾಗಲೇ ಅಲ್ಲೊಬ್ಬಾತ ನಮ್ಮಂಥಾತನೇ ಇರಬೇಕು ಜಾಗ ನೋಡಿಕೊಂಡಿದ್ದ. ನಾನು ಹೇಳಿ ಕೇಳಿ ನಿದ್ರಾರಾಕ್ಷಸ! ಜನರಲ್ ಬೋಗಿಯಲ್ಲಿ ಲೈಟು ಆರಿಸುವುದಿಲ್ಲವಾದ್ದರಿಂದ ಮುಖಕ್ಕೆ ಕರ್ಚೀಪು ಹಾಕಿಕೊಂಡು ಗೊರಕೆ ಶುರು ಹಚ್ಚಿಕೊಂಡುಬಿಟ್ಟೆ. ಬೆಳಿಗ್ಗೆ ಹಿಂದುಪುರ ಬಂದಾಗ ಎದ್ದೆ. ಅಷ್ಟು ಹೊತ್ತಿಗೆ ಸ್ವಲ್ಪ ಸವುಡಾಗಿ ಕೂರಲು ಜಾಗವಾಗಿತ್ತು. ವೆಂಕಟೇಶ್ ನಿದ್ದೆ ಆಗದೆ ಕಿಡಿಗಣ್ಣಯ್ಯಸ್ವಾಮಿಯಾಗಿದ್ದ! ಅದೂ ಇದೂ ಮಾತಾಡ್ತಾ ನಿದ್ದೆಯಾಗದ್ದರ ಬಗ್ಗೆ ಸ್ವಾನುಕಂಪದ ದನಿಯಲ್ಲಿ ಹೇಳಿಕೊಳ್ಳುತ್ತಿರಬೇಕಾದರೆ, ಮಧ್ಯೆ ಬಾಯಿಹಾಕಿದ ನಾನು ‘ಹೌದೋ ಮಾರಾಯ. ನನಗೂ ಸರಿಯಾಗಿ ನಿದ್ದೇನೇ ಆಗ್ಲಿಲ್ಲ’ ಅಂದೆ! ದುರುಗುಟ್ಟಿಕೊಂಡು ನನ್ನನ್ನು ನೋಡಿ ‘ರಾತ್ರಿಯೆಲ್ಲ ಅತನ ಮುಖ ಮೂತಿ ಮೈ ಕೈ ನೋಡದೆ ಪೆಕ ಪೆಕ ಒದ್ದುಕೊಂತ ಮಕ್ಕಂಡು ಹಿಂಗಂತ್ಯಲ್ಲೋ’ ಅಂದ. ಇದೆಲ್ಲ ನನಗೆ ಗೊತ್ತೇ ಇಲ್ಲ. ನಾನು ಕ್ಷಮೆ ಯಾಚಿಸುವ ಭಾವದಲ್ಲಿ ಆ ಒದೆ ತಿಂದ ವ್ಯಕ್ತಿ ಕಡೆ ನೋಡಿದೆ. ಆತ ‘ಇರ್ಲಿ ಬುಡು ನಡೀತಿರ‍್ತಾವ ಅವೆಲ್ಲ. ಬಂಗ್ಲ್ಯಾಗ ಮಕ್ಕಂಬೋರೀಗಿ ಇಲ್ಲ ನಿದ್ದಿ. ನೀನು ಈ ಜಂಜಾಟದಾಗ ಹೊಡದ್ಯಪ. ಮುಖ್ಯ ಪಡಕಂಬಂದಿರಬೇಕು. ರೊಕ್ಕ ಕೊಟ್ಟು ಕೊಣಕಂಬದಲ್ಲಪ ನಿದ್ದಿ ಅಂದ್ರ. ಪ್ರಾಪ್ತಿ ಇರಬೇಕು ಅದಕ್ಕ’ ಅಂದ. ಈಗಲೂ ವೆಂಕಟೇಶ್ ನಾನು ‘ಪ್ರಾಪ್ತಿ’ ಪದ ನೆನೆಸಿಕೊಂಡು ನಗ್ತಿರ‍್ತೇವೆ.

ಒಮ್ಮೆ ನೀವು ಸೋಂಪಾದ ನಿದ್ದೆಯಲ್ಲಿರುವವನ ಮುಖಚಹರೆಯನ್ನು ಹತ್ತಿರದಿಂದ ನೋಡಿ. ಅದು ಶಿಶುಸಹಜ ಕಳೆಯಲ್ಲಿ ಹೊಳೆಯುತ್ತಿರುತ್ತದೆ. ಏಕೆಂದರೆ ಆ ಸ್ಥಿತಿಯಲ್ಲಿ ಅವನಿಗೆ ಲಿಂಗಪ್ರಜ್ಞೆ, ವರ್ಗಪ್ರಜ್ಞೆ, ಜಾತಿಪ್ರಜ್ಞೆ, ಧರ್ಮಪ್ರಜ್ಞೆ, ದೇಶಪ್ರಜ್ಞೆಗಳ ಸೋಂಕೇ ಇರುವುದಿಲ್ಲ. ನಿಜವೆಂದರೆ ನಿದ್ದೆಯೊಂದು ಸುಂದರ ಪಲಾಯನ, ಸಕಲ ಚರಾಚರಗಳ ಮರುಜೇವಣಿ, ತಾತ್ಕಾಲಿಕ ಲೋಕಸಂಕಟ ವಿಮೋಚಕ, ಚೈತನ್ಯ ಮರುಪೂರಕ, ಊಟ-ಕೂಟಗಳಂತೆ ಶಕ್ತಿಸಂಚಯದಾಯಕ, ಸ್ವಪ್ನಲೋಕ ಸ್ವೈರವಿಹಾರಕ! ಹಾ ನೆನಪಾಯಿತು, ನಿದ್ದೆಗೂ ಕನಸಿಗೂ ಆಜನ್ಮ ನಂಟು. ನಿದ್ದೆಯಲ್ಲೇ ನಮಗೆ ಕನಸುಗಳು ಬೀಳೋದು. ಎಷ್ಟೋ ಕನಸುಗಳು ನಮ್ಮನ್ನು ನಿದ್ದೆ ಮಾಡಗೊಡದೆ ಕಾಡೋದು. ಕನಸುಗಳು ನಮ್ಮ ಸುಪ್ತ ಬಯಕೆಯ, ಅತೃಪ್ತ ಕಾಮನೆಯ ಸಂಕೇತ ಅಂದಿದ್ದಾನೆ ಸಿಗ್ಮಂಡ್ ಫ್ರಾಯ್ಡ್. ಇರಬಹುದೇನೋ. ಒಮ್ಮೆ ನನ್ನ ಕನಸಲ್ಲಿ ಅಮ್ಮ ಗರಿಮುರಿಯಾದ ಸಿಹಿಸಿಹಿ ಗಾರಿಗಿಗಳನ್ನು ಕರಿಕರಿದು ತಮ್ಮನಿಗಷ್ಟೇ ಕೊಡುತ್ತಿದ್ದಾಳೆ.

ಮಹಾನ್ ತಿಂಡಿಪೋತನೂ ಆಸೆಬುರುಕನೂ ಆದ ನಾನು ‘ಅಮ್ಮಾ ನನಗಮ್ಮಾ ಅಂತ ಕೈಯನ್ನು ರೆಡಿ ಚಾಚಿಟ್ಟುಕೊಂಡು ಅಂಗಲಾಚುತ್ತಿದ್ದೇನೆ. ಅಮ್ಮ ಕೇರೇ ಮಾಡುತ್ತಿಲ್ಲ. ತಮ್ಮನೂ ನನ್ನೆಡೆಗೆ ಕನಿಷ್ಠ ಕನಿಕರದ ನೋಟವನ್ನಾದರೂ ಬೀರದೆ, ಕಡೆಗಣ್ಣಲ್ಲಾದರೂ ನೋಡದೆ ತನ್ಮಯನಾಗಿ ಗಾರಿಗೆಯನ್ನು ಚಪ್ಪರಿಸಿ ಬಾರಿಸುತ್ತಿದ್ದಾನೆ. ನನಗಿನ್ನು ದುಃಖ ತಾಳಲಾಗುತ್ತಿಲ್ಲ. ಮಲಗಿದಲ್ಲೇ ಓ ಎಂದು ದುಃಖಿಸಿ ದುಃಖಿಸಿ ಅಳುತ್ತ ಗಾರಿಗಿ ಬೇಕು ಅಂತ ಪ್ರಲಾಪಿಸತೊಡಗಿದ್ದೇನೆ. ಆಮೇಲೆ ಅದೊಂದು ಕನಸೆಂದು ಹೇಳಿ, ಗಾರಿಗೆ ಮಾಡಿದ ದಿನ ಮೊದಲು ನನಗೇ ಕೊಡುವುದೆಂದು ಹುಸಿ ವಾಗ್ದಾನದ ಬೂಸಿ ಬಿಟ್ಟು ಸಂತೈಸಿದ ಮೇಲೇ ಮತ್ತೆ ಮಲಗಿದ್ದು! ಒಬ್ಬೊಬ್ಬರ ಕನಸು ಒಂದೊಂದು ಬಗೆಯದು! ಕುವೆಂಪು ಇಡೀ ಕಲ್ಕಿ ಪದ್ಯವನ್ನು ಕನಸಿನಲ್ಲಿ ಬೆಳೆಸುತ್ತ ಕಡೆಗೆ ‘ಕನಸೊಡೆದೆದ್ದೆ ಇನ್ನೆಲ್ಲಿಯ ನಿದ್ದೆ? ಅಂತ ಮುಗಿಸುತ್ತಾರೆ. ಬೇಂದ್ರೆಯವರಂತೂ ತಮ್ಮ ಯುಗಾದಿ ಪದ್ಯದಲ್ಲಿ ‘ನಿದ್ದೆಗೊಮ್ಮೆ ನಿತ್ಯಮರಣ, ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ? ಎಂದು ಸನತ್ಕುಮಾರದೇವನೊಂದಿಗೆ ಸವಾಲ್-ಜವಾಬ್‌ಗೆ ಇಳಿಯುತ್ತಾರೆ.

ಶಿಶುನಾಳ ಷರೀಫರು ‘ನಿದ್ದಿಯೆಂಬ ನಿಜ ಹಾದರಗಿತ್ತಿ, ಬುದ್ಧಿಯಿಲ್ಲ ನಿನಗ’ ಅಂದಿದ್ದಾರೆ. ಬಹುಶಃ ಅವರಿಗೂ ಇನ್‌ಸೋಮ್ನಿಯಾ ಕಾಡಿರಬೇಕು. ಅವರಿಗೇ ಏನು, ಈ ಜಗದ ಬಹುಪಾಲು ಸೃಜನಶೀಲರಿಗೆ ಒಂದಿಲ್ಲ ಒಂದು ಹಂತದ ನಿದ್ರಾಹೀನತೆ ಕಾಡಿಯೇ ಕಾಡಿರುತ್ತದೆ. ಅದಕ್ಕಾಗೇ ಅವರಿಗದರ ಮಹತ್ವ ಚೆನ್ನಾಗಿ ಗೊತ್ತು. ರಾತ್ರಿಯ ಮೂರು ಗಂಟೆಯನ್ನು ಸೃಜನಶೀಲರ ಸಮಯ ಎಂದೇ ಕರೆಯಲಾಗುತ್ತದೆ. ಇತ್ತೀಚೆಗೆ ‘ತ್ರೀ ಎ.ಎಂ ಫ್ರೆಂಡ್‌ಶಿಪ್ ಅಂತ ಹೊಸದೊಂದು ಪರಿಭಾಷೆ ಚಾಲ್ತಿಗೆ ಬಂದಿದೆ. ರಾತ್ರಿಯ ಮೂರು ಗಂಟೆಗೆ ಫೋನು ಮಾಡಿದರೂ ನಡೀತದೆ ಎಂಬಷ್ಟು ಗಾಢವಾಗಿರುವ ಸ್ನೇಹಕ್ಕೆ ಈ ಹೆಸರು. ಎಷ್ಟು ಹುಡುಕಿದರೂ ಒಬ್ಬರ ಲೈಫಲ್ಲಿ ಇಂಥವರು ಬೆರಳೆಣಿಕೆಗಿಂತ ಹೆಚ್ಚಿಗೆ ಸಿಗಲಾರರು ಎಂಬುದು ಪರೋಕ್ಷವಾಗಿ ಮನುಷ್ಯ ಜೀವನದಲ್ಲಿ ನಿದ್ದೆಗಿರುವ ಮಹತ್ವವನ್ನು ಸಾರಿ ಹೇಳುತ್ತಿರುವಂತಿದೆ.

ಮೊನ್ನೆಮೊನ್ನೆ ನಾನು ಸದಸ್ಯನಾಗಿರುವ ‘ಟ್ರೆಡಿಷನಲ್ ಆಯುರ್ವೇದ ಎಂಬ ವಾಟ್ಸಪ್ ಗ್ರೂಪಿಗೆ ಒಂದು ವಿಡಿಯೊ ಮೆಸೇಜ್ ಬಂತು. ನೋಡಿದರೆ ಏನಿದೆ ಅಂತೀರಿ- ಸರಿಯಾಗಿ ನಿದ್ದೆ ಮಾಡದಿದ್ದರೆ ಏನೇನು ಸಮಸ್ಯೆಗಳಾಗುತ್ತವೆ, ನಿದ್ದೆಯ ಸರಿಯಾದ ಕ್ರಮಗಳೇನು ಇತ್ಯಾದಿಗಳ ಬಗ್ಗೆಯೇ ‘ವೈ ವಿ ಸ್ಲೀಪ್? ಎಂಬ ಸಂಶೋಧನಾ ಕೃತಿಯೊಂದನ್ನು ಪ್ರಕಟಿಸಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ನರವಿಜ್ಞಾನದ ಪ್ರಾಧ್ಯಾಪಕ ಮ್ಯಾಥ್ಯೂ ವಾಕರ್ ಮಾತಾಡುತ್ತಿದ್ದಾರೆ. ಅವರ ಪ್ರಕಾರ ನಿದ್ರಾಹೀನತೆ ಪ್ರಮಾಣ ಹೆಚ್ಚಾದಂತೆ ದೇಹದಲ್ಲಿ ಬೀಟಾ ಅಮಲಾಯ್ಡ್ ಎಂಬ ವಿಷಕಾರಿ ಪ್ರೋಟೀನಿನ ಪ್ರಮಾಣ ಹೆಚ್ಚಾಗಿ ಅಲ್‌ಝೈಮರ್ ಎಂಬ ಮರೆಗುಳಿತನದ ಕಾಯಿಲೆಗೆ ದಾರಿ ಮಾಡಿಕೊಡುತ್ತದೆ. ಇದಕ್ಕಿರುವ ಏಕಮಾತ್ರ ಮದ್ದೆಂದರೆ ಗಡದ್ದು ನಿದ್ದೆ ಅಂತಾರೆ ಅವರು. ನಿದ್ರಾಹೀನತೆಯಿಂದ ಸಂತಾನೋತ್ಪತ್ತಿ ಶಕ್ತಿ ಹಾಗೂ ರೋಗನಿರೋಧಕ ಶಕ್ತಿಗಳ ಮೇಲೂ ವ್ಯತಿರಿಕ್ತ ಪರಿಣಾಮವಾಗುತ್ತದೆಯಂತೆ. ಸೊಂಪಾದ ನಿದ್ದೆಯಿಂದ ಹೃದಯಸ್ನಾಯುಗಳ ವ್ಯವಸ್ಥೆ ರಿಬೂಟ್ ಆಗುತ್ತದೆ ಎನ್ನುತ್ತಾರವರು.

ಹಾಗೆ ನಿದ್ದೆಯಂಥ ಟ್ರಿಕ್ಕಿ ಫೆಲೋ ಕೂಡ ಮತ್ತೊಂದಿಲ್ಲ. ಹಾಸಿಗೆ, ಏಕಾಂತ, ಸಮಯ ಎಲ್ಲ ಇದ್ದಾಗಲೂ ಸಮೀಪಕ್ಕೂ ಸುಳಿಯದ ನಿದ್ದೆ, ಮಗ್ಗಲು ಬದಲಿಸಿ ಬದಲಿಸಿ ನಿಮ್ಮನ್ನು ಮುಗ್ಗಲಾಗುವಂತೆ ಮಾಡುತ್ತದೆ. ಹಾಸಿಗೆಯಿಲ್ಲ, ಏಕಾಂತವಿಲ್ಲ, ಸಮಯವಿಲ್ಲ ಎಂಬಂಥ ಪ್ರತಿಕೂಲ ಸಂದರ್ಭಗಳಲ್ಲಿ ಬೇಡಬೇಡವೆಂದು ಗೋಗರೆದು ಬೇಡಿಕೊಂಡರೂ ನಿಮ್ಮನ್ನು ಬಿಡುವುದಿಲ್ಲ. ಪರೀಕ್ಷೆಗೆ ಓದುವಾಗ ನಮ್ಮನ್ನು ಹೈರಾಣಾಗಿಸುವ ನಿದ್ದೆ, ಅದು ಮುಗಿದ ದಿನ ನಮ್ಮ ಹತ್ತಿರಕ್ಕೂ ಸುಳಿಯದಿರುವ ಸೋಜಿಗ ನೀವು ಅನುಭವಿಸದ್ದೇನಲ್ಲ. ಅಷ್ಟೇಕೆ ಲಕ್ಷಗಟ್ಟಲೆ ಜನ ಸೇರಿರುವ ಸಭೆಯ ವೇದಿಕೆಯಲ್ಲಿ, ಸಿಸಿಟೀವಿಗಳ ನಿಗಾದಲ್ಲಿ, ಮೀಡಿಯಾ ಕ್ಯಾಮೆರಾಗಳ ಕಣ್ಗಾವಲು ಪಡೆ ತಮ್ಮ ಮೇಲೇ ಕಣ್ಣು ಕೀಲಿಸಿಕೊಂಡಿರುವಂಥ ಕ್ಲಿಷ್ಟಮಯ ಸಂದರ್ಭಗಳಲ್ಲಿ ಕೂಡ ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿಯಂಥವರೇ ನಿದ್ದೆ ಮಾಡಿರುವ ಸಂಗತಿಗಳು ನಮ್ಮೆಲ್ಲರಿಗೆ ತಿಳಿದೇ ಇವೆ. ಅದಕ್ಕೇ ನಿದ್ದೆಯನ್ನು ಮಾಯೆ ಅಂತಾರೆ. ನಿದಿರಾದೇವಿ ಅಂತಾರೆ. ಈ ಮಾಯೆಯ ಮಾಟ ತಿಳಿಯಬೇಕಾದರೆ ನಸುಕಿನಲ್ಲಿ ನಡೆದ ರಸ್ತೆ ಅಪಘಾತಗಳನ್ನು ನೋಡಬೇಕು. ಅಷ್ಟೊಂದು ಜನರ ಪ್ರಾಣ ತನ್ನ ನಿರ್ನಿದ್ರೆಯಲ್ಲಿ ಅಡಗಿದೆ ಎಂದು ಗೊತ್ತಿದ್ದೂ ಡ್ರೈವರನು ತನಗರಿವಿಲ್ಲದೆ ನಿದ್ದೆಗೆ ‘ಜಾರಿಬಿಡುತ್ತಾನೆ. ನೋಡಿ, ನೋಡಿ ನಿದ್ದೆಗೆ ‘ಜಾರುತ್ತೇವೆ, ಪ್ರಾಣಗಳು ‘ಹಾರುತ್ತಾವೆ ಎಂಬ ಈ ಪದಗಳೇ ಅವುಗಳ ಸ್ವಭಾವಗಳನ್ನು ಸೂಚಿಸುತ್ತಿವೆ.

ಒಮ್ಮೆ ಹೀಗೇ ಮಾತಾಡ್ತಾ ಒಬ್ಬ ಡ್ರೈವರ್ ‘ನಿದ್ದಿ ಸಿಕ್ರ ನಮಗ ಬಂಗಾರ ಸಿಕ್ಕಂಗ್ರೀ ಸರ ಅಂದ. ರಾತ್ರಿ ನಿದ್ದೆಗೆಟ್ಟು ಕೆಲಸ ಮಾಡುವವರಿಗೇ ಗೊತ್ತು ಅದೆಂಥ ಬಂಗಾರವೆಂದು ಎಂದನ್ನಿಸಿ ನನ್ನ ಮೈ ಜುಮುಗರಿಸಿತು. ನಾನು ನನ್ನ ಗೆಳೆಯ ಒಮ್ಮೆ ಶಂಕರಘಟ್ಟದಿಂದ ಅಜ್ಜಂಪುರ ಹಾದು ಬೈಕಲ್ಲಿ ಬರುತ್ತಿದ್ದೆವು. ಹಿಂದಿನ ರಾತ್ರಿ ನಿದ್ದೆಗೆಟ್ಟು ಮಾತಾಡಿದ್ದೆವು. ನಸುಕಿನಲ್ಲಿ ಹೊರಟಿದ್ದೇವೆ. ಹೊಂಚಿ ಕೂತಿದ್ದ ನಿದ್ದೆ ಹದ್ದಿನಂತೆ ಬಂದೆರಗಿದ್ದೇ ಗೊತ್ತಾಗಿಲ್ಲ. ನಾನು ಬಾಯಲ್ಲಿಯ ಬೆಲ್ಲದಂತೆ, ಆ ನಿದ್ದೆಯಲ್ಲಿ ಕರಗಿಹೋಗಿದ್ದೇನೆ. ಬೈಕು ರಸ್ತೆ ಪಕ್ಕದ ಗದ್ದೆಯತ್ತ ಧಾವಿಸುತ್ತಿದೆ. ಹಿಂದಿನ ಸೀಟಲ್ಲಿದ್ದ ಗೆಳೆಯ ಅಬ್ಬರಿಸಿ ಬೊಬ್ಬಿರಿದ ದನಿಗೆ ನನ್ನ ಅಲ್ಫಾ ಸ್ಟೇಜಿನ ನಿದ್ದೆ ಕಿತ್ತೆಗರಿ ನಮ್ಮ ಪ್ರಾಣಗಳು ಕೂದಲೆಳೆಯಲ್ಲಿ ನಮ್ಮವೇ ಆಗಿ ಉಳಿದ ಘಟನೆ ನೆನೆದರೆ ಈಗಲೂ ಮೈ ಜುಮ್ಮೆನ್ನುತ್ತದೆ.

ನನ್ನ ಸುಖಸಿದ್ಧಾಂತಿ ಗೆಳೆಯನೊಬ್ಬ ತನ್ನ ಕನಸಿನ ಜೀವನದ ಟು ಪಾಯಿಂಟ್ ಪ್ರೋಗ್ರಾಮನ್ನು ‘ಹಸಿವಾಗೋಷ್ಟು ನಿದ್ದೆ ಮಾಡು; ನಿದ್ದೆ ಬರೋಷ್ಟು ಊಟ ಮಾಡು ಅಂತ ಸೂತ್ರೀಕರಿಸಿ ಹೇಳಿದ. ಇದು ಒಂದು ಕನಸೇ ಸರಿ. ಏಕೆಂದರೆ ನಾನೆಂಬ ಯಾರಿಗೂ ಅಗತ್ಯಕ್ಕಿಂತ ಹೆಚ್ಚಿಗೆ ನಿದ್ರಿಸಲಿಕ್ಕಾಗುವುದೇ ಇಲ್ಲ. ನಿದ್ದೆಯ ಗಮ್ಮತ್ತಿರುವುದೇ ಅಲ್ಲಿ. ಅದನ್ನು ಮಾಡದಿರಲೂ ಆಗುವುದಿಲ್ಲ. ಬೇಕೆಂದಾಗ ಮಾಡಲೂ ಆಗುವುದಿಲ್ಲ. ಕೋಟಾ ಮುಗಿದ ಮೇಲೆ ಇನ್ನೂ ಸಮಯವಿದೆ ಅಂತ ಮುಂದುವರೆಸಲಿಕ್ಕಾಗುವುದಿಲ್ಲ. ಸುಮ್ಮನೆ ಹಾಸಿಗೆಯಲ್ಲಿ ಆಚೀಚೆ ಉರುಳಾಡಬಹುದಷ್ಟೇ, ಅದು ನಿದ್ದೆಯೆನಿಸಿಕೊಳ್ಳುವುದಿಲ್ಲ.

ಯಾರಿಗೆಷ್ಟು ನಿದ್ದೆ ಬೇಕು ಎಂಬುದನ್ನು ನಿರ್ಧರಿಸುವುದು ಕೂಡ ಅವರವರಿಗೇ ವಿಶಿಷ್ಟವಾಗಿರುವ ಅವರೊಳಗಿನ ಜೈವಿಕ ಗಡಿಯಾರ. ನವಜಾತ ಶಿಶುಗಳಿಗೆ ಹತ್ತರಿಂದ ಹನ್ನೆರಡು ಗಂಟೆ, ವಯಸ್ಕರಿಗೆ ಆರರಿಂದ ಎಂಟು ಗಂಟೆ, ಮುದುಕರಿಗೆ ನಾಲ್ಕರಿಗೆ ಐದು ಗಂಟೆ ಬೇಕು/ಸಾಕು ಅಂತ ಹೇಳಲಾಗುತ್ತದೆ. ಆದರೆ ಇದನ್ನು ಇದಮಿತ್ಥಂ ಎಂದು ಹೇಳಲಾಗದು. ದಿನಕ್ಕೆ ನಾಲ್ಕು ಗಂಟೆ ಮಾತ್ರ ನಿದ್ರಿಸುತ್ತಿದ್ದ ಶಂಕರನಾಗ್‌ಗೆ ಅವರ ಮಿತ್ರ ಜಗದೀಶ್ ಮಲ್ನಾಡ್ ಹೆಚ್ಚು ನಿದ್ದೆ ಮಾಡುವಂತೆ ಸಲಹೆ ನೀಡಿದಾಗ ಶಂಕರನಾಗ್ ಕೊಟ್ಟರೆಂದು ಹೇಳಲಾಗುವ ಉತ್ತರ ಹೀಗಿದೆ- ಸತ್ತ ಮೇಲೆ ಮಲಗೋದು ಇದ್ದೇ ಇದೆಯಲ್ಲ. ನನ್ನನ್ನು ತುಂಬಾ ಕಾಡಿದ ಮಾತಿದು. ನಮ್ಮ ನಿದ್ದೆ ಒಂದು ತಾತ್ಕಾಲಿಕ ಸಾವಾದರೆ, ನಮ್ಮ ಸಾವು ಶಾಶ್ವತವಾದ ನಿದ್ದೆಯಾಗಿದೆ. ಅದಕ್ಕೇ ಇರಬೇಕು ಸಾವಿಗೆ ಚಿರನಿದ್ರೆ ಅಂತಲೂ ಕರೀತಾರೆ. ಹಾಗೆ ಈ ನಿದ್ದೆಯಲ್ಲಿರುವಾಗಲೇ ಸದ್ದಿಲ್ಲದೆ ಆ ನಿದ್ದೆಗೆ ಜಾರಿಕೊಳ್ಳುವುದಿದೆಯಲ್ಲ ಅದೇ ನಿಜವಾದ ಭಾಗ್ಯ. ಅಪ್ಪ ಸತ್ತಾಗ ನಾನು ಬೇರೆ ಊರಲ್ಲಿದ್ದೆ. ಫೋನ್ ಬಂತು. ಮಧ್ಯಾಹ್ನ ಗಂಜಿ ಕುಡಿದು ಮಲಗಿದ ಮಧ್ಯಾಹ್ನ ನಿದ್ದೆಯ ಕಡುಮೋಹಿ ಅಪ್ಪ ಮಧ್ಯಾಹ್ನದ ನಿದ್ದೆಯಿಂದಲೇ ಚಿರನಿದ್ದೆಗೆ ಜಾರಿಬಿಟ್ಟಿದ್ದ. ನನಗೀಗಲೂ ಅನಿಸೋದು ಇಚ್ಛಾಮರಣಕ್ಕಿಂತ ಇಂಥ ನಿದ್ರಾಮರಣವೇ ದೊಡ್ಡ ಭಾಗ್ಯ ಅಂತ. ಇಚ್ಛಾಮರಣ ಎಂದರೆ ಸಾವು ಕರೆದಾಗ ಬರುವುದು. ಕರೆಯಬೇಕೆಂದರೆ ಕರೆಯುವವ ಎಚ್ಚರದಲ್ಲಿರಬೇಕು. ಇದಕ್ಕಿಂತ ನಿದ್ರಾಮರಣ ಎಷ್ಟು ಚಂದ ಅಲ್ಲವೆ? ನನಗೀಗಲೂ ಅನಿಸುವುದು ಅಪ್ಪ ಇಲ್ಲೇ ಮಲಗಿದ್ದಾನೆ. ಮಲಗಿ ‘ಇದ್ದಾನೆ’.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !