ಮೌಲ್ಯಮಾಪನವೂ ಮಂತ್ರದಂಡವೂ

7
‘ಅದೃಷ್ಟದ ಪರೀಕ್ಷೆ’ ಹಾಗೂ ಬೇತಾಳದಂತೆ ಕಾಡುವ ಪ್ರಶ್ನೆಗಳು

ಮೌಲ್ಯಮಾಪನವೂ ಮಂತ್ರದಂಡವೂ

Published:
Updated:
Prajavani

‘ವಾಸ್ತವವಾಗಿ ನಮ್ಮ ಪರೀಕ್ಷೆ ಜ್ಞಾನದ ಪರೀಕ್ಷೆಯಲ್ಲ. ಜ್ಞಾಪಕಶಕ್ತಿಯ ಮತ್ತು ಅದೃಷ್ಟದ ಪರೀಕ್ಷೆಯಾಗಿದೆ’– ಈ ಮಾತನ್ನು ಕುವೆಂಪು 1957ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಆಡಿದ್ದರು. ಅದಾಗಿ 60 ವರ್ಷಗಳೇ ಕಳೆದುಹೋಗಿವೆ. ಕರ್ನಾಟಕ ಜನಜೀವನದ ಸ್ವರೂಪ ಕ್ರಾಂತಿಕಾರಕವಾಗಿ ಬದಲಾಗಿದೆ. ಆದರೆ, ಉನ್ನತ ಶಿಕ್ಷಣ ವ್ಯವಸ್ಥೆಯ ಬಹುಮುಖ್ಯ ಆಯಾಮವಾದ ಪರೀಕ್ಷೆಯ ಸ್ವರೂಪ ಮಾತ್ರ ಬದಲಾಗದಿರುವುದು ಅಪಾಯದ ಸಂಗತಿಯಾಗಿದೆ.

ನಮ್ಮ ಔಪಚಾರಿಕ ಶಿಕ್ಷಣ ವ್ಯವಸ್ಥೆಗೆ ಸರಿಸುಮಾರು ಇನ್ನೂರು ವರ್ಷಗಳ ಚರಿತ್ರೆ ಇದೆ. ಮೆಕಾಲೆಯಿಂದ ಆರಂಭವಾದ ಆಧುನಿಕ ಶಿಕ್ಷಣ ಪ್ರಕ್ರಿಯೆಗಳು ಹಲವು ಅವಸ್ಥೆಗಳನ್ನು ದಾಟಿ ಬಂದಿವೆ. ದೇಶದ ಸಾರ್ವಜನಿಕ ಶಿಕ್ಷಣ ಪ್ರಯಾಣವು 19ನೇ ಶತಮಾನದಲ್ಲಿ ಶೇ 3ರಷ್ಟಿದ್ದ ರಾಷ್ಟ್ರೀಯ ಸಾಕ್ಷರತೆಯ ಪ್ರಮಾಣವನ್ನು ಈಗ ಶೇ 74ಕ್ಕೆ ತಲುಪಿಸಿದೆ.

ಇಂದು ನಮ್ಮ ರಾಷ್ಟ್ರದಲ್ಲಿ 800ಕ್ಕೂ ಮಿಗಿಲು ವಿಶ್ವವಿದ್ಯಾಲಯಗಳು, 40,000ಕ್ಕೂ ಅಧಿಕ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಈ ಎಲ್ಲಾ ಸಂಸ್ಥೆಗಳು ಪಠ್ಯಕ್ರಮ ಮತ್ತು ಕಲಿಕಾ ಪರಿಕರಗಳನ್ನು ಭಿನ್ನವಾಗಿ ರೂಪಿಸಿಕೊಂಡಿವೆ (ಕೆಲವು ಖಾಸಗಿ ವಿ.ವಿಗಳು ಮಾತ್ರ ಪರೀಕ್ಷೆಗಳ ಸ್ವರೂಪದಲ್ಲಿ ಬದಲಾವಣೆ ಮಾಡಿಕೊಂಡಿರುವುದು ನನ್ನ ಗಮನದಲ್ಲಿದೆ).

ಕಲಿಸುವವರ ಆಸಕ್ತಿ, ಮಾರುಕಟ್ಟೆಯ ಒತ್ತಾಯ ಮತ್ತು ಸ್ಥಳೀಯ ಅವಶ್ಯಕತೆಗಳನ್ನು ಆಧರಿಸಿ ಪಠ್ಯಕ್ರಮಗಳು ನಿರಂತರವಾಗಿ ಬದಲಾಗುತ್ತಾ ಬಂದಿವೆ. ಕಲಿಯುವವರ ಭವಿಷ್ಯ ಆಧರಿಸಿ ಈವರೆಗೆ ಶೈಕ್ಷಣಿಕ ಪರಿಕ್ರಮ ರೂಪುಗೊಂಡಿಲ್ಲ. ‘ಭಾರತದ ವಿಶ್ವವಿದ್ಯಾಲಯಗಳು ನಡೆಸುವ ಪರೀಕ್ಷಾ ಪದ್ಧತಿಗಳು ಭಾರತೀಯ ಸಮಾಜದ ಜಾತಿ ಪದ್ಧತಿಯನ್ನು ಪರೋಕ್ಷವಾಗಿ ಬಲಗೊಳಿಸುತ್ತಿವೆ’ ಎಂದು ಶಿಕ್ಷಣ ತಜ್ಞ ಕೆ.ವಿ. ನಾರಾಯಣ ಅವರು ದಶಕದ ಹಿಂದೆ ಹೇಳಿದ ಎಚ್ಚರಿಕೆಯ ಮಾತು ಪರೀಕ್ಷೆಗಳ ಅಪಾಯವನ್ನು ವಿವರಿಸುತ್ತದೆ. ವಿದ್ಯಾರ್ಥಿ ಸಮುದಾಯವನ್ನು ಅವರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಿನ್ನೆಲೆಗಳಿಂದ ಬೇರ್ಪಡಿಸಿ, ಶ್ರೇಣೀಕರಣಗೊಳಿಸಿ, ಕೆಲವರನ್ನು ಉತ್ತೀರ್ಣಗೊಳಿಸಿ, ಹಲವರನ್ನು ಹೊರಗುಳಿಸುವ ವಿಧಾನವು ಜಾತೀಯತೆ ಕಾರ್ಯಾಚರಣೆಯನ್ನು ಅನುಕರಿಸುವಂತೆ ತೋರುತ್ತದೆ.

ಇದು ಸಮಸ್ಯೆಯ ಒಂದು ಆಯಾಮವಾದರೆ, ಮೌಲ್ಯಮಾಪನ ಕೇಂದ್ರದಲ್ಲಿ ನಡೆಯುವ ವಿದ್ಯಮಾನಗಳು ಮತ್ತೂ ಚಿಂತೆಗೆ ಹಚ್ಚುವಂತಿವೆ. ನೂರಾರು ಮೌಲ್ಯಮಾಪಕರು ಯಾಂತ್ರಿಕವಾಗಿ ಸರಿ- ತಪ್ಪು ಸೂಚಿಸುವ ಸಂಕೇತಗಳನ್ನು ಗುರುತಿಸುವ, ಉತ್ತರ ಪತ್ರಿಕೆಗಳ ಪುಟಗಳನ್ನು ತಿರುಗಿಸುವ ವೇಗ ಮತ್ತು ಅಂಕಗಳನ್ನು ನೀಡುವ ನೋಟವು ಚಾರ್ಲಿ ಚಾಪ್ಲಿನ್‌ ಸಿನಿಮಾ ‘ಮಾಡರ್ನ್‌ ಟೈಮ್ಸ್‌’ನ ಕಾರ್ಖಾನೆಯ ದೃಶ್ಯದಂತೆ ಕಾಣುತ್ತದೆ. ಮೌಲ್ಯಮಾಪಕರು ದಿನವೊಂದಕ್ಕೆ 36 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಬೇಕಿದ್ದು, ಉತ್ತರಗಳನ್ನು ಓದುವ ಮೌಲ್ಯಮಾಪಕರನ್ನು ದುರ್ಬೀನು ಹಾಕಿ ಹುಡುಕಬೇಕಿದೆ. ಇಂಥ ಅಧ್ಯಾಪಕರನ್ನು ಕನಿಕರದಿಂದ ನೋಡುವುದು ಸಾಮಾನ್ಯ ಸಂಗತಿಯಾಗಿದೆ.

ಪದವಿ ಮೌಲ್ಯಮಾಪನದಲ್ಲಿ ಕನಿಷ್ಠಪಕ್ಷ ಉತ್ತರ ಪತ್ರಿಕೆಗಳ ಪುಟ ತಿರುಗಿಸುವಷ್ಟು ಸಮಯ ಮೌಲ್ಯಮಾಪಕರಿಗೆ ಸಿಗುತ್ತದೆ. ಆದರೆ, ಸ್ನಾತಕೋತ್ತರ ಪದವಿಗಳ ಮೌಲ್ಯಮಾಪನದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಆಂತರಿಕ ಹಾಗೂ ಬಾಹ್ಯ ಪರೀಕ್ಷಕರಿಂದ ಮೌಲ್ಯಮಾಪನ ನಡೆಸಲಾಗುತ್ತದೆ. ಆದರೆ ಈ ಕ್ರಿಯೆ ಜಾದೂಗಾರಿಕೆಯಿಂದ ಕೂಡಿರುತ್ತದೆ. ಅಂದರೆ ಬಹುತೇಕ ಸ್ನಾತಕೋತ್ತರ ಮೌಲ್ಯಮಾಪಕರು ‘ನಾಡಿ ಹಿಡಿದು ರೋಗ ಪತ್ತೆ ಹಚ್ಚುವ ವೈದ್ಯ’ರಂತೆ ಉತ್ತರ ಪತ್ರಿಕೆಯನ್ನು ನೋಡಿಯೇ ಅಂಕಗಳನ್ನು ನೀಡುವ ಮಾಂತ್ರಿಕ ಶಕ್ತಿಯನ್ನು ಪಡೆದವರಾಗಿದ್ದಾರೆ. ವಿ.ವಿಗಳಲ್ಲಿ ಅರ್ಹ ಮೌಲ್ಯಮಾಪಕರ ಕೊರತೆಯಿಂದ ದಿನವೊಂದಕ್ಕೆ ನೂರಿನ್ನೂರು ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಅಸಂಗತ ಕ್ರಿಯೆಯೂ ಚಾಲ್ತಿಯಲ್ಲಿದೆ.

ಕೆಲ ವರ್ಷಗಳ ಹಿಂದೆ ಬೆಂಗಳೂರು ವಿ.ವಿಯ ಪದವಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯ ನಡೆದಿತ್ತು. ಒಂದು ಉತ್ತರ ಪತ್ರಿಕೆಯ ನಿರೂಪಣೆ ನನ್ನನ್ನು ಹಿಡಿದು ನಿಲ್ಲಿಸಿತ್ತು. ಆ ವರ್ಷ ಭಾಷಾ ಪತ್ರಿಕೆಯ ಭಾಗವಾಗಿ ಸಂಸರ ‘ವಿಗಡ ವಿಕ್ರಮರಾಯ’ ನಾಟಕವನ್ನು ಅಧ್ಯಯನ ಮಾಡಬೇಕಿತ್ತು. ಎರಡನೇ ಬಿ.ಎ ಪ್ರಶ್ನೆಪತ್ರಿಕೆಯಲ್ಲಿ ಸಂಸನ ನಾಟಕದ ಕುರಿತು ಭಾವಾರ್ಥ ಬರೆಯುವ, ಯಾರು ಯಾರಿಗೆ ಹೇಳಿದರು ಎಂಬ ಸಂದರ್ಭವನ್ನು ಗುರುತಿಸುವ ಹಾಗೂ ವಿವರಣೆ ಬಯಸುವ ಪ್ರಶ್ನೆಗಳನ್ನು ಕೇಳಲಾಗಿತ್ತು.

‘ನಿನ್ನ ಕಣ್ಣು ಶವದ ಕಣ್ಣಿನಂತಿದೆ’ ಎಂಬ ಸಂದರ್ಭ ಸೂಚನೆಯ ಪ್ರಶ್ನೆಗೆ ಆ ವಿದ್ಯಾರ್ಥಿ ‘ಈ ಮಾತನ್ನು ರಾಜಮಾತೆಯು ಬೊಮ್ಮರಸ ಪಂಡಿತನ ಮುಖವನ್ನು ನೋಡಿ ಹೇಳಿದ್ದು’ ಎಂದು ಬರೆಯಬೇಕಿತ್ತು. ಆದರೆ ಆಕೆ\ಆತ ‘ಈ ಮಾತನ್ನು ರಾಜಮಾತೆಯು ಅರಮನೆಯ ಪಂಡಿತ ಬೊಮ್ಮರಸನನ್ನು ಕುರಿತು ಆಡಿದ್ದು ಎಂದು ನನಗೆ ಗೊತ್ತಿಲ್ಲ’ ಎಂದು ಬರೆದಿದ್ದರು. ಕೇವಲ ಒಂದಲ್ಲ, ಪ್ರತಿಯೊಂದು ಪ್ರಶ್ನೆಗೂ ಹೀಗೆಯೇ ಉತ್ತರಗಳನ್ನು ಬರೆದು ಕೊನೆಯಲ್ಲಿ, ‘ನೀವು ಹೇಗೆ ನನ್ನನ್ನು ಈ ಪರೀಕ್ಷೆಯಲ್ಲಿ ಪಾಸು ಮಾಡ್ತೀರೋ ನಾನೂ ನೋಡ್ತೀನಿ’ ಎಂದು ಸವಾಲು ಬೇರೆ ಒಡ್ಡಿದ್ದರು. ಈ ವಿದ್ಯಾರ್ಥಿ ಎತ್ತಿದ್ದ ತಕರಾರು, ಉತ್ತರ ನೀಡುವ ಧಾಟಿಗೆ ಸಂಬಂಧಿಸಿದ್ದಲ್ಲ, ಇದು ಪರೀಕ್ಷೆಯ ಅರ್ಥ ವ್ಯವಸ್ಥೆಯನ್ನು ತಮಾಷೆ ಮಾಡುತ್ತಿರುವಂತಿದೆ.

ಉತ್ತರ ಪತ್ರಿಕೆಗಳಲ್ಲಿ ನಾವು ವಿದ್ಯಾರ್ಥಿಗಳಿಂದ ಬಯಸುವುದೇನು ಎಂಬ ಪ್ರಶ್ನೆ ಸಂವೇದನಾಶೀಲರಾದ ಅಧ್ಯಾಪಕರನ್ನು ಬೇತಾಳದಂತೆ ಕಾಡುತ್ತಿದೆ. ಅಧ್ಯಾಪಕ ವರ್ಗಕ್ಕೆ ಪಾಪಪ್ರಜ್ಞೆ ಇಲ್ಲವಾಗಿರುವುದರ ಸೂಚನೆಯಾಗಿ, ವರ್ಷಕ್ಕೆ ಎರಡು ಬಾರಿ ಪರೀಕ್ಷಾ ಯಜ್ಞ ಆಹುತಿಯು ನಿರಂತರವಾಗಿ ನಡೆಯುತ್ತಿದೆ.

ಇಂಥ ಮೌಲ್ಯಮಾಪನ ವಿಧಾನವು ವಿದ್ಯಾರ್ಥಿಗಳ ಲೋಕಗ್ರಹಿಕೆ ಮತ್ತು ವಿಶ್ಲೇಷಣಾ ಕೌಶಲಗಳನ್ನು ಪರೀಕ್ಷಿಸುವ ಗುರಿ ಹೊಂದಿರ ಬೇಕಲ್ಲವೆ? ಅಲ್ಲದೆ, ಸಂಕೀರ್ಣವಾದ ಹಲವು ಮಜಲುಗಳಿರುವ ಕಲಿಕಾ ಸಾಮರ್ಥ್ಯವನ್ನು ಕೇವಲ ಬರವಣಿಗೆ ಎಂಬ ಒಂದು ಕೌಶಲವನ್ನು ಪರೀಕ್ಷಿಸುವುದರಿಂದ ಅಳೆಯಲು ಸಾಧ್ಯವೆ? ಅಧ್ಯಾಪಕರು ಮೌಲ್ಯಮಾಪನದಿಂದ ಪಡೆದುಕೊಂಡ ತಿಳಿವೇನು? ವಿದ್ಯಾರ್ಥಿಗಳು ಸಾಮಾನ್ಯವಾಗಿ ಎದುರಿಸುತ್ತಿರುವ ಸಮಸ್ಯೆಗಳ ಸ್ವರೂಪವೇನು? ಅನುತ್ತೀರ್ಣತೆಯು ವಿದ್ಯಾರ್ಥಿಯ ಅಸಮರ್ಥತೆಯೋ ಅಥವಾ ಶೈಕ್ಷಣಿಕ ವ್ಯವಸ್ಥೆಯ ವೈಫಲ್ಯವೋ ಎಂಬ ಮಹತ್ವದ ಪ್ರಶ್ನೆಗಳನ್ನು ಚರ್ಚಿಸಲು ನಮ್ಮ ಶಿಕ್ಷಣ ತಜ್ಞರು, ಆಡಳಿತಗಾರರು, ಅಧ್ಯಾಪಕ ಸಂಘಗಳು ಯಾಕೆ ಮುಂದಾಗುತ್ತಿಲ್ಲ ಎಂಬ ಸಂಗತಿ ಚಿದಂಬರ ರಹಸ್ಯವಾಗಿದೆ.

ಶಿಕ್ಷಣದಲ್ಲಿ ಗುಣಾತ್ಮಕತೆ ಪರೀಕ್ಷಿಸುವ ‘ನ್ಯಾಕ್’ ಸಂಸ್ಥೆ ರೂಪಿಸಿರುವ ಮಾನದಂಡಗಳಲ್ಲಿ ಪ್ರಧಾನವಾಗಿ ಪಾಠ ಕಲಿಕೆ ಮತ್ತು ಮೌಲ್ಯಮಾಪನ ಎಂಬ ವಿಭಾಗವಿದ್ದರೂ ಒತ್ತು ಮಾತ್ರ ನುರಿತ ಅಧ್ಯಾಪಕ-ವಿದ್ಯಾರ್ಥಿ ಅನುಪಾತಕ್ಕೆ ಸೀಮಿತವಾಗಿದೆ. ಮೂಲ ಸೌಕರ್ಯಗಳ ಪ್ರಮಾಣ-ಲಭ್ಯತೆಯನ್ನು ಪರಿಗಣಿಸುವುದೇ ಹೊರತು, ಪರೀಕ್ಷಾ ಪದ್ಧತಿ ಹಾಗೂ ಮೌಲ್ಯಮಾಪನ ವಿಧಾನಗಳನ್ನು ವಿಶ್ಲೇಷಿಸುವ ಗೋಜಿಗೆ ಹೋಗದೆ ಫಲಿತಾಂಶದ ಅಂಕಿ ಅಂಶಗಳಿಗೆ ಹಾಗೂ ವಿದ್ಯಾರ್ಥಿ ದಾಖಲಾತಿಗೆ ಮನ್ನಣೆ ನೀಡುತ್ತಾ ಬಂದಿದೆ.

ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತು ಮತ್ತು ಕಾಲೇಜು ಶಿಕ್ಷಣ ಇಲಾಖೆ ಕಲಿಕಾ ಸಂಸ್ಥೆಗಳನ್ನು ಆರಂಭಿಸುವ ಉತ್ಸಾಹ ತೋರುತ್ತಿವೆಯೇ ಹೊರತು, ಗುರುತರ ಸಮಸ್ಯೆಯಾದ ಮೌಲ್ಯಮಾಪನದ ಬಗ್ಗೆ ಚಿಂತಿಸಿದ ಉದಾಹರಣೆ ಇಲ್ಲ. ಮೌಲ್ಯಮಾಪನ ಕಾರ್ಯವಿಧಾನವು ಸಂವಿಧಾನದ ಮೂಲ ಆಶಯವಾದ ಸಾಮಾಜಿಕ ನ್ಯಾಯ, ವ್ಯಕ್ತಿ ಸ್ವಾತಂತ್ರ್ಯದ ತತ್ವಗಳಿಗೆ ತದ್ವಿರುದ್ಧವಾಗಿದೆ. ‘ನೀರಿನ ಜೋರಿಗೆ ತೇಲದು ಬಂಡೆ, ಅಂತೇ ನಾವೀ ತರಗತಿಗೆ, ಪರೀಕ್ಷೆ ಎಂದರೆ ಹೂವಿನ ಚಂಡೇ ಚಿಂತಿಸಬಾರದು ದುರ್ಗತಿಗೆ’ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಕವಿತೆಯ ಸಾಲು ವಿದ್ಯಾರ್ಥಿಗಳ ದುರ್ಗತಿಯನ್ನು, ಆಳುವವರ ಶೈಕ್ಷಣಿಕ ಅವಿವೇಕವನ್ನು ಧ್ವನಿಸುವಂತಿದೆ.


ಕೆ.ವೈ. ನಾರಾಯಣಸ್ವಾಮಿ

ಲೇಖಕ: ಕನ್ನಡ ಪ್ರಾಧ್ಯಾಪಕ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !