ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ | ನಿಗಮ: ರಾಜಕೀಯ ಲಾಭದ ‘ಘಮ’

Last Updated 22 ನವೆಂಬರ್ 2020, 19:45 IST
ಅಕ್ಷರ ಗಾತ್ರ
ADVERTISEMENT
""
""
""

ಚುನಾವಣೆ ಗೆದ್ದು ತಮ್ಮ ಪಾರಮ್ಯ ಮೆರೆಯಲು, ಅಧಿಕಾರದ ಗದ್ದುಗೆಯನ್ನು ಇನ್ನಷ್ಟು ಗಟ್ಟಿಗೊಳಿಸಲು, ಅಲುಗಾಡುತ್ತಿರುವ ಕುರ್ಚಿಗೆ ಜಾತಿಯ ನಂಟು ಕಟ್ಟಿ ಅಧಿಕಾರದಲ್ಲಿ ಮುಂದುವರಿಯಲು ‘ನಿಗಮಾಸ್ತ್ರ’ ಬಳಕೆ ಚಾಲ್ತಿಗೆ ಬಂದಿದೆ. ಓಲೈಕೆ ರಾಜಕಾರಣ ಮಾಡಿ ರಾಜಕೀಯ ಲಾಭ ಗಿಟ್ಟಿಸುವ ಹಪಾಹಪಿ ನಿಗಮ ರಚನೆಯ ಹಿಂದಿನ ತಂತ್ರಗಾರಿಕೆ.

ಇತ್ತೀಚಿನ ವರ್ಷಗಳಲ್ಲಿ ಜಾತಿ ಬಲವನ್ನು ಬಳಸಿ ಅಧಿಕಾರದ ಬಲವನ್ನು ಬೆಳೆಸಿ, ಉಳಿಸಿಕೊಂಡು ಬರುತ್ತಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ತಿಂಗಳೊಪ್ಪತ್ತಿನಲ್ಲಿ ಮೂರು ನಿಗಮಗಳನ್ನು ಸ್ಥಾಪಿಸಲು ‘ಟಿಪ್ಪಣಿ ಆದೇಶ’ ಹೊರಡಿಸಿದ್ದಾರೆ. ರಾಜಕಾರಣಿಗಳು ತಮ್ಮ ಹಿತಾಸಕ್ತಿಗಾಗಿ ಯೋಜನೆ ಘೋಷಿಸುವುದು ಹೊಸತೇನಲ್ಲ. ಆದರೆ, ಅದಕ್ಕೊಂದು ರೀತಿ ರಿವಾಜು, ಮನವಿ–ಪ್ರಸ್ತಾವನೆ, ಬೇಡಿಕೆ–ಹೋರಾಟಗಳ ಅಲ್ಪಕಾಲೀನ ಚರಿತ್ರೆಯೊಂದು ಇರುತ್ತಿತ್ತು.

ಬಜೆಟ್‌ನಲ್ಲಿ ಇಂತಹದೊಂದು ಘೋಷಣೆ ಮಾಡಿ, ಅದಕ್ಕೆ ಬೇಕಾದ ಅನುದಾನವನ್ನು ಮೀಸಲಿಡಲಾಗುತ್ತಿತ್ತು. ಗಲಾಟೆಯೋ ವಿರೋಧವೋ ಇದ್ದರೂ ಒಟ್ಟಾರೆ ಬಜೆಟ್‌ಗೆ ವಿಧಾನಮಂಡಲದ ಉಭಯ ಸದನಗಳು ಅಂಗೀಕಾರದ ಮುದ್ರೆಯೊತ್ತಿದ ಬಳಿಕವೇ ಯೋಜನೆಗಳು ಅನುಷ್ಠಾನಕ್ಕೆ ಬರುತ್ತಿದ್ದವು. ಅಂದರೆ, ನಿಗಮ ರಚನೆಯ ಹಿಂದೆ ದೂರಗಾಮಿ ರಾಜಕೀಯ ಲಾಭದ ಹಿತಾಸಕ್ತಿ ಇದ್ದರೂ ಅದಕ್ಕೆ ಸಾಂವಿಧಾನಿಕ ಮಾನ್ಯತೆ ಕೊಟ್ಟು ಸ್ಥಾಪಿಸುವ ಪದ್ಧತಿ ರೂಢಿಯಲ್ಲಿತ್ತು.

ಯಡಿಯೂರಪ್ಪ ಘೋಷಿಸಿರುವ ಮೂರು ನಿಗಮಗಳು ಬಜೆಟ್‌ ಘೋಷಣೆಗಳಲ್ಲ. ಸಚಿವ ಸಂಪುಟದ ಮುಂದೆ ತಂದು ಅನುಮೋದಿಸಿದ ನಿರ್ಣಯವೂ ಅಲ್ಲ. ಯಡಿಯೂರಪ್ಪ ಅವರು ಇಲಾಖೆ ಮುಖ್ಯಸ್ಥರಿಗೆ ಟಿಪ್ಪಣಿ ರೂಪದಲ್ಲಿ ಸೂಚಿಸಿದ ‘ಆದೇಶ’ದ ಅನುಸಾರವೇ ಈ ನಿಗಮಗಳನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ. ಸಮುದಾಯಕ್ಕೆ ಆಮಿಷವೊಡ್ಡಿ ಉದ್ದೇಶಿತ ರಾಜಕೀಯ ಲಾಭ ಗಿಟ್ಟಿಸುವ ಪ್ರಯತ್ನ ಎದ್ದು ಕಾಣಿಸುತ್ತದೆ.

ಪೂರ್ವ ಚರಿತೆ: ಕರ್ನಾಟಕದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಜಾತಿಗಳ ಜನರಿಗೆ ಚೈತನ್ಯ ತುಂಬಿ, ಅವರನ್ನು ಮುಂಚೂಣಿಗೆ ಕರೆತರುವ ಸಂಕಲ್ಪ ಮಾಡಿದವರು ಹಿಂದುಳಿದವ ವರ್ಗಗಳ ನೇತಾರ ಡಿ. ದೇವರಾಜ ಅರಸು.

1975ರಲ್ಲಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, 1977ರಲ್ಲಿ ಹಿಂದುಳಿದವರ ಅಭಿವೃದ್ಧಿ ನಿಗಮವನ್ನು ಅರಸು ಸ್ಥಾಪಿಸಿದರು. ಪರಿಶಿಷ್ಟರು–ಹಿಂದುಳಿದವರಲ್ಲಿ ಹತ್ತಾರು ಜಾತಿಗಳಿದ್ದರೂ ಅವುಗಳಿಗೆ ಪ್ರತ್ಯೇಕ ನಿಗಮ ಸ್ಥಾಪಿಸಲು ಹೋಗದ ಅರಸರು, ವರ್ಗವಾರು ಗುರುತಿಸಿ, ಅವುಗಳಲ್ಲಿ ಒಗ್ಗಟ್ಟು ಮೂಡಿಸುವ ಯತ್ನ ಮಾಡಿದರು.

ನಂತರ ಅಧಿಕಾರಕ್ಕೆ ಬಂದವರು ಜಾತಿಗೊಂದು ನಿಗಮ ಸ್ಥಾಪಿಸುವ ಚಾಳಿ ಶುರು ಮಾಡಿದರು. ನಿಗಮ ಸ್ಥಾಪನೆ ಮಾಡುವುದಾಗಿ ಚುನಾವಣೆ ಪ್ರಣಾಳಿಕೆಯಲ್ಲೋ ಬಜೆಟ್‌ನಲ್ಲೋ ಘೋಷಿಸುವ ವಾಡಿಕೆಯೂ ಇತ್ತು.

ಧರ್ಮಸಿಂಗ್ ಮುಖ್ಯಮಂತ್ರಿ, ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ ನಿಗಮವನ್ನು ಅಂಬೇಡ್ಕರ್ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗದವರ ನಿಗಮವನ್ನು ದೇವರಾಜ ಅರಸು ಅಭಿವೃದ್ಧಿ ನಿಗಮ ಎಂದು ಬದಲಾಯಿಸಲಾಯಿತು. ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪರಿಶಿಷ್ಟ ಪಂಗಡದ ನಿಗಮಕ್ಕೆ ಮಹರ್ಷಿ ವಾಲ್ಮೀಕಿ ನಿಗಮ ಎಂದು ಮರುನಾಮಕರಣ ಮಾಡಲಾಯಿತು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಕೂಡಲೇ ವಿಶ್ವಕರ್ಮ ಅಭಿವೃದ್ಧಿ ನಿಗಮ ರಚಿಸಲಾಯಿತು. 2018ರ ವಿಧಾನಸಭೆ ಚುನಾವಣೆಗೆ ಮುನ್ನ ಅಂಬಿಗರ ಚೌಡಯ್ಯ, ಉಪ್ಪಾರ ಅಭಿವೃದ್ಧಿ ನಿಗಮವನ್ನು ಜಾತಿಯ ಹೆಸರಿನಲ್ಲೇ ರಚಿಸಲಾಯಿತು.

ಜಾತಿ ಹೆಸರಿನಲ್ಲಿ ನಿಗಮ ರಚಿಸುವಲ್ಲಿ ಅತಿ ಉತ್ಸಾಹದ ಮೇಲ್ಪಂಕ್ತಿ ಹಾಕಿದವರು ಎಚ್‌.ಡಿ. ಕುಮಾರಸ್ವಾಮಿ. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ರಚನೆಯ ಆದೇಶ2007ರಲ್ಲಿ ಹೊರಬಿದ್ದಿತ್ತು. 2009ರಲ್ಲಿ ಅದು ಅಸ್ತಿತ್ವಕ್ಕೆ ಬಂತು. ಸವಿತಾ ಸಮಾಜದ ಅಭಿವೃದ್ಧಿ ನಿಗಮ, ಬ್ರಾಹ್ಮಣ ಅಭಿವೃದ್ಧಿ ನಿಗಮ ಹಾಗೂ ಆರ್ಯವೈಶ್ಯ ಸಮುದಾಯದ ಅಭಿವೃದ್ಧಿ ನಿಗಮ ಕುಮಾರಸ್ವಾಮಿ ಕೂಸುಗಳೇ. ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮವನ್ನು ಕುಮಾರಸ್ವಾಮಿ ಘೋಷಿಸಿದ್ದರೂ ಅದು 2019ರ ಡಿಸೆಂಬರ್‌ನಲ್ಲಿ ಚಾಲನೆ ಪಡೆಯಿತು.

ಎಲ್ಲರ ಹಿಂದಿಕ್ಕಿದ ಬಿಎಸ್‌ವೈ
ಹಿಂದಿನ ಎಲ್ಲ ಮುಖ್ಯಮಂತ್ರಿಗಳು ಕಾಲಕಾಲಕ್ಕೆ, ಬಜೆಟ್‌ ಘೋಷಣೆ ಹಾಗೂ ಸಮುದಾಯದ ಬೇಡಿಕೆ–ಹೋರಾಟಕ್ಕೆ ಮಣಿದು ನಿಗಮ ಸ್ಥಾಪಿಸಿದ ಇತಿಹಾಸ ಇದೆ. ಒಂದು ಹೆಜ್ಜೆ ಮುಂದೆ ಹೋಗಿರುವ ಯಡಿಯೂರಪ್ಪ, ನಿಗಮದ ರಚನೆಗೆ ಚುನಾವಣೆಯ ನಂಟನ್ನು ಬೆರೆಸಿರುವುದು ಹೊಸ ವಿದ್ಯಮಾನ.

ಜಿಲ್ಲೆಯ ಶಿರಾ ವಿಧಾನಸಭೆ ಕ್ಷೇತ್ರದಲ್ಲಿ ಉಪ ಚುನಾವಣೆ ಘೋಷಣೆಯಾದಾಗ ಅಲ್ಲಿ ಅಸ್ತಿತ್ವದಲ್ಲಿಯೇ ಇಲ್ಲದ ಬಿಜೆಪಿಗೆ ನೆಲೆ ಕೊಡಿಸುವ ಯತ್ನಕ್ಕೆ ಯಡಿಯೂರಪ್ಪ ಮುಂದಡಿ ಇಟ್ಟರು. ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಚುನಾವಣೆ ಉಸ್ತುವಾರಿ ಹೊರಿಸಿ, ಗೆಲುವಿನ ಕಿರೀಟವನ್ನು ವಿಜಯೇಂದ್ರ ಮುಡಿಗೇರಿಸುವ ಸಂಕಲ್ಪ ಮಾಡಿದರು. ಈ ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರಾಗಿರುವ ಗೊಲ್ಲ ಹಾಗೂ ಕಾಡುಗೊಲ್ಲ ಸಮುದಾಯದವರಿಗೆ ನಿಗಮ ರಚಿಸುವುದಾಗಿ ಘೋಷಿಸಿದರು. ಮೊದಲು ಟಿಪ್ಪಣಿ ರೂಪದಲ್ಲಿ ಬಂದ ಆದೇಶ, ಗೊಲ್ಲ–ಕಾಡುಗೊಲ್ಲ ಗೊಂದಲ ನಿವಾರಣೆ ಕಾರಣಕ್ಕೆ ಸರ್ಕಾರಿ ಆದೇಶವಾಗಿ ಹೊರಬಿದ್ದಿತು. ಶಿರಾದಲ್ಲಿ ಒಕ್ಕಲಿಗ, ಗೊಲ್ಲ, ಲಿಂಗಾಯತ, ಕುರುಬ ಮತಗಳು ವಿಭಜನೆಯಾಗಿ ಬಿಜೆಪಿ ನಾಯಕರು ಊಹಿಸದ ರೀತಿಯಲ್ಲಿ ರಾಜೇಶ ಗೌಡ ಗೆದ್ದೇ ಬಿಟ್ಟರು.

ಮಸ್ಕಿ ಹಾಗೂ ಬಸವ ಕಲ್ಯಾಣ ವಿಧಾನಸಭೆ, ಬೆಳಗಾವಿ ಲೋಕಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಕೆ.ಆರ್.ಪೇಟೆ, ಶಿರಾ ‘ಮಾದರಿ’ ಚುನಾವಣೆ ನಡೆಸಿ ಯಶಸ್ವಿಯಾಗಿರುವ ವಿಜಯೇಂದ್ರ, ಯಡಿಯೂರಪ್ಪ ಉತ್ತರಾಧಿಕಾರಿ ಮಾತ್ರವಲ್ಲ; ಬಿಜೆಪಿಯ ಮುಂದಿನ ನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇದೇ ಹುರುಪಿನಲ್ಲಿ ವಿಜಯೇಂದ್ರ, ಬಸವಕಲ್ಯಾಣದಲ್ಲಿ ಚುನಾವಣೆ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡರು. ಅಲ್ಲಿ ಮರಾಠಾ ಸಮುದಾಯದ ಪ್ರಮುಖರ ಜತೆಗೂ ಸಭೆ ನಡೆಸಿದಾಗ, ನಿಗಮ ರಚಿಸುವುದಾಗಿ ಘೋಷಣೆ ಮಾಡಿದರು. ವಿಜಯೇಂದ್ರ ಬೆಂಗಳೂರು ತಲುಪುತ್ತಿದ್ದಂತೆ, ₹50 ಕೋಟಿ ಅನುದಾನವೂ ಸೇರಿದಂತೆ ಮರಾಠಾ ಅಭಿವೃದ್ಧಿ ನಿಗಮ ರಚನೆ ಕುರಿತಾಗಿ ಟಿಪ್ಪಣಿ ಆದೇಶವನ್ನು ತಮ್ಮ ತಂದೆಯವರಿಂದ ಹೊರಡಿಸಿಯೇ ಬಿಟ್ಟರು. ಬಸವ ಕಲ್ಯಾಣದ ಜತೆಗೆ, ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಮರಾಠಾ ಸಮುದಾಯದವರ ಮತ ಗಿಟ್ಟಿಸುವ ದೂರಗಾಮಿ ಲೆಕ್ಕಾಚಾರವೂ ಇದರ ಹಿಂದಿದೆ.

ಈ ಮಧ್ಯೆಯೇ, ಯಡಿಯೂರಪ್ಪ ಅವರ ನಾಯಕತ್ವ ಬದಲಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇಂತಹ ಹೊತ್ತಿನೊಳಗೆ, ಯಡಿಯೂರಪ್ಪ ಮತ್ತೊಂದು ದಾಳ ಉರುಳಿಸಿದರು. ಬಿಜೆಪಿಯಲ್ಲಿದ್ದಾಗಲೆಲ್ಲ ತಮ್ಮ ಬೆಂಬಲಕ್ಕೆ ನಿಂತಿರುವ (ಕೆಜೆಪಿ ಕಟ್ಟಿದಾಗ ಯಡಿಯೂರಪ್ಪ ಬೆನ್ನಿಗೆ ನಿಲ್ಲಲಿಲ್ಲ) ವೀರಶೈವ–ಲಿಂಗಾಯತರಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವ ಟಿಪ್ಪಣಿ ಆದೇಶ ಹೊರಡಿಸಿದರು.

ಜಾತಿಗೊಂದು ನಿಗಮ ಸ್ಥಾಪಿಸುವ ಮೂಲಕ ಯಡಿಯೂರಪ್ಪ ಅವರು, ಜಾತಿ–ಸಮುದಾಯದ ಬೆಂಬಲ ಗಳಿಸುವ ಹೆಜ್ಜೆ ಇಟ್ಟಿದ್ದಾರೆ. ಒಂದು ವೇಳೆ ತಮ್ಮ ಪದಚ್ಯುತಿಗೆ ಬಿಜೆಪಿ ವರಿಷ್ಠರು ಮುಂದಾದರೆ, ‘ಎಲ್ಲ ಸಮುದಾಯದವರಿಗೂನ್ಯಾಯ ಕೊಡಲು ಹೋದೆ; ಆದರೆ ತನ್ನನ್ನೇ ಬಲಿಕೊಟ್ಟರು’ ಎಂಬ ವಾದ ಮುಂದಿಟ್ಟು ಜನರ ವಿಶ್ವಾಸ ಗಳಿಸುವ ದಾರಿಯನ್ನು ಯಡಿಯೂರಪ್ಪ ಹುಡುಕಿದಂತಿದೆ. ಅದರಲ್ಲೂ ಲಿಂಗಾಯತ–ವೀರಶೈವ ನಿಗಮ ರಚನೆಯ ಹಿಂದೆ ತಮ್ಮ ಸುತ್ತ ಜಾತಿಯ ಕೋಟೆಯನ್ನು ಕಟ್ಟಿಕೊಳ್ಳುವ ಧಾವಂತ ಎದ್ದು ಕಾಣಿಸುತ್ತದೆ.

ಅಲಕ್ಷಿತ ಅಥವಾ ವೃತ್ತಿಪರ ಸಮುದಾಯಗಳಲ್ಲಿ ಕೌಶಲ ಬೆಳೆಸಿ, ಅವರಿಗಾಗಿ ಸ್ವಾವಲಂಬನೆಯ ಯೋಜನೆ ರೂಪಿಸಿ ಅವರನ್ನು ಮುಖ್ಯವಾಹಿನಿಗೆ ತರಲು ನಿಗಮ ರಚಿಸುವುದು ಸಾಮಾಜಿಕ ನ್ಯಾಯದ ಭಾಗವಾದೀತು. ಆದರೆ, ಬ್ರಾಹ್ಮಣ ಸೇರಿದಂತೆ ಮುಂದುವರಿದ ಜಾತಿಗಳಿಗೆ ನಿಗಮ ರಚಿಸುವುದು ಓಲೈಕೆ ರಾಜಕಾರಣದ ಮತ್ತೊಂದು ಮಜಲು ಅಲ್ಲದೇ ಬೇರೇನಲ್ಲ.

ಸಮುದಾಯಗಳ ಏಳಿಗೆ ಸರ್ಕಾರದ ಕರ್ತವ್ಯ
ರಾಜಕೀಯ ಪಕ್ಷಗಳು ಅಧಿಕಾರಲ್ಲಿದ್ದಾಗ ಒಂದು ರೀತಿ ಮತ್ತು ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಮತ್ತೊಂದು ರೀತಿ ಮಾತನಾಡುವುದು ಸರಿಯಲ್ಲ. ಕೆಲವು ಹಿಂದುಳಿದ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಡುವ ಉದ್ದೇಶದಿಂದ ಈ ಹಿಂದೆ ಹಲವು ಸರ್ಕಾರಗಳು ನಿಗಮಗಳನ್ನು ರಚನೆ ಮಾಡಿವೆ. ಈಗ ಬಿಜೆಪಿ ಸರ್ಕಾರವು ಮರಾಠಾ ಅಭಿವೃದ್ಧಿ ನಿಗಮ, ಕಾಡುಗೊಲ್ಲ ಅಭಿವೃದ್ಧಿ ನಿಗಮ, ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮಗಳನ್ನು ರಚಿಸಿದೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ–ಲಿಂಗಾಯತ ಸಮುದಾಯದ 102 ಉಪಜಾತಿಗಳನ್ನೂ ಒಳಗೊಂಡಂತೆ ಶೇ 30ರಷ್ಟು ಜನರು ಬಡತನದಲ್ಲಿದ್ದಾರೆ.

12ನೇ ಶತಮಾನದಲ್ಲಿ ಜಗತ್ತಿಗೆ ಸಮಾನತೆಯ ತತ್ವ ಬೋಧಿಸಿದ ಸಮುದಾಯ ಇಂದು ಮೀಸಲಾತಿಯ ಕಾರಣದಿಂದ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ. ಸಮುದಾಯವು 3ಬಿ ಪ್ರವರ್ಗದ ಅಡಿ ಬಂದರೂ ದೊಡ್ಡ ಸಮುದಾಯವಾಗಿರುವ ಕಾರಣ, ಮೀಸಲಾತಿಯು ಸಮುದಾಯದ ಎಲ್ಲರನ್ನೂ ತಲುಪುತ್ತಿಲ್ಲ.

ಜಾತಿಗೊಂದು ನಿಗಮ ರಚನೆ ಅಗತ್ಯವೇ ಎಂಬ ಚರ್ಚೆ ಶುರುವಾಗಿದೆ. ಈ ಬಗ್ಗೆ ಪಕ್ಷಾತೀತವಾಗಿ ಗಂಭೀರ ಚಿಂತನೆ ಅಗತ್ಯ. ಬಿಜೆಪಿಯವರು ಮಾಡಿದ್ದಾರೆ ಎಂಬ ಕಾರಣಕ್ಕೆ ವಿರೋಧಿಸುವುದು ಸರಿಯಲ್ಲ. ವಿರೋಧಪಕ್ಷದಲ್ಲಿರುವವರು ಅಧಿಕಾರಕ್ಕೆ ಬಂದಾಗ, ಅವರಿಗೂ ಈ ಬಿಕ್ಕಟ್ಟು ಎದುರಾಗಬಹುದು.


-ಈರಣ್ಣ ಕಡಾಡಿ,ಬಿಜೆಪಿ ರಾಜ್ಯಸಭಾ ಸದಸ್ಯ

ನಿಗಮ ರಚನೆ ಹಿಂದೆ ಚುನಾವಣೆಯ ವಾಸನೆ
ಕೆಲವು ನಿರ್ಲಕ್ಷಿತ ಸಮುದಾಯಗಳಲ್ಲಿ ಶಾಸಕರು, ಅಧಿಕಾರಿಗಳು, ಕೈಗಾರಿಕೋದ್ಯಮಿಗಳು, ವಿದ್ಯಾವಂತರು ಇಲ್ಲ. ಇಂತಹ ಸಮುದಾಯಗಳ ಅಭಿವೃದ್ಧಿ ಉದ್ದೇಶದಿಂದ ಮುಖ್ಯಮಂತ್ರಿ ದೇವರಾಜ ಅರಸು ಅವರು ನಿಗಮಗಳನ್ನು ಆರಂಭಿಸಿದ್ದರು. ಜಾತಿ ಅಧಾರಿತವಾಗಿರದೇ, ಇಡೀ ವರ್ಗದ ಅಸಮಾನತೆಯನ್ನು ಹೋಗಲಾಡಿಸುವುದು ಈ ನಿಗಮಗಳ ಉದ್ದೇಶವಾಗಿತ್ತು. ಆದರೆ ಚುನಾವಣೆ ಬಂದಾಗ ಜಾತಿ ನಿಗಮಗಳನ್ನು ರಚಿಸುವುದು ಜನರ ಮನಸ್ಸಿನಲ್ಲಿ ಅಸಮಾಧಾನ ಮೂಡಿಸುತ್ತದೆ. ರಾಜ್ಯದ ಎಲ್ಲ ಜಾತಿಗಳಿಗೂ ನಿಗಮ ರಚಿಸಲು ಸಾಧ್ಯವೇ ಎಂದು ಎಲ್ಲ ರಾಜಕೀಯ ಪಕ್ಷಗಳನ್ನು ಕೇಳಲು ಬಯಸುತ್ತೇನೆ. ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಿ, ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ನಿಗಮ ರಚಿಸುವುದಷ್ಟೇ ಅಲ್ಲ, ಅದಕ್ಕೆ ತಕ್ಕ ಮೂಲಸೌಕರ್ಯ, ಹಣಕಾಸು ಒದಗಿಸುವುದೂ ಅಷ್ಟೇ ಮುಖ್ಯ. ಸರ್ಕಾರದಲ್ಲಿ ಹಣವಿಲ್ಲ. ಜಿಎಸ್‌ಟಿ ಹಣ ಬಂದಿಲ್ಲ. ಈ ಹೊತ್ತಿನಲ್ಲಿ ನಿಗಮ ರಚನೆಯ ಔಚಿತ್ಯದ ಬಗ್ಗೆ ಚರ್ಚೆ ಆಗಬೇಕಿದೆ.

ಎಲ್ಲ ಜಾತಿಗಳಲ್ಲಿರುವ ಬಡವರ ಏಳಿಗೆ ಆಗಬೇಕು ಎಂಬುದು ನಿಜವಾದರೂ, ಕೆಲವು ಸಣ್ಣಪುಟ್ಟ ಜಾತಿಗಳಿಗೆ ಯಾವುದೇ ಪ್ರಾತಿನಿಧ್ಯ ಇರುವುದಿಲ್ಲ. ಅಂತಹ ಸಮುದಾಯಗಳಿಗೆ ನಿಗಮಗಳ ರಚನೆ ಅಗತ್ಯ. ರಾಜ್ಯದಲ್ಲಿ ಒಂದೆರಡು ಸಮುದಾಯಗಳನ್ನು ಹೊರತುಪಡಿಸಿದರೆ ಬಹುತೇಕ ಎಲ್ಲ ಜಾತಿಗಳೂ ಮೀಸಲಾತಿಯಡಿ ಬಂದಿವೆ. ಒಂದು ವೇಳೆ, ಸಮುದಾಯವೊಂದರ ಅಭಿವೃದ್ಧಿಯ ಉದ್ದೇಶವಿದ್ದರೆ ಬಜೆಟ್‌ನಲ್ಲೇ ಘೋಷಿಸಲು ಸಮಸ್ಯೆ ಏನಿದೆ. ಹಿಂದಿನ ಸರ್ಕಾರ ಮಾಡಿದೆ ಎಂಬ ವಾದ ಇಟ್ಟುಕೊಂಡು ಈಗಲೂ ಮಾಡುವುದರಲ್ಲಿ ಅರ್ಥವಿಲ್ಲ. ಉಪಚುನಾವಣೆ ಬಂದಾಗ ನಿಗಮ ರಚನೆ ಘೋಷಿಸುವುದರಲ್ಲಿ ರಾಜಕೀಯ ವಾಸನೆ ಇರುವುದನ್ನು ಜನರೇ ಗುರುತಿಸುತ್ತಾರೆ. ಸರ್ಕಾರ ಇದಕ್ಕೆ ಉತ್ತರಿಸಲೇಬೇಕು.

-ವಿ.ಆರ್.ಸುದರ್ಶನ್,ಕಾಂಗ್ರೆಸ್ ಮುಖಂಡ

ಹಸಿದವರಿಂದ ಕಸಿದು ಉಳ್ಳವರಿಗೆ ಕೊಟ್ಟಂತೆ
ಸಂಘಟನೆಯ ಅಗತ್ಯವಿರುವುದು ಜಿಂಕೆಗಳಿಗೆ. ಅದು ಅವುಗಳ ಜೀವ ರಕ್ಷಣೆಯ ಹಕ್ಕು. ಹುಲಿಗಳಿಗೆ ಸಂಘಟನೆಯ ಹಕ್ಕಾಗಲಿ, ಅಗತ್ಯವಾಗಲಿ ಇಲ್ಲ. ಅಷ್ಟಕ್ಕೂ ಅವು ಸಂಘಟಿತವಾದರೆ, ಸಾಧು ಪ್ರಾಣಿಗಳಿಗೆ ಉಳಿಗಾಲವಿಲ್ಲ ಎಂದು ಅರ್ಥ. ಈ ಉದಾಹರಣೆ ವರ್ತಮಾನದ ಸಂದರ್ಭದಲ್ಲಿ ಬಹಳಷ್ಟನ್ನು ವಿವರಿಸುತ್ತದೆ ಎಂದುಕೊಂಡಿದ್ದೇನೆ.

ನಿಗಮ, ಮಂಡಳಿಗಳ ರಚನೆಯ ಹಿಂದಿರುವುದು, ಹಿಂದುಳಿದ ವಲಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ. ಈ ಹಿಂದುಳಿಯುವಿಕೆ ನಿರ್ಧರಿಸಲ್ಪಡುವುದು ವರ್ಗಗಳು ಮತ್ತು ಜಾತಿಗಳ ನೆಲೆಯಲ್ಲಿ. ಭಾರತದಲ್ಲಿ ಹಿಂದುಳಿಯುವಿಕೆಗೆ ಜಾತಿ ಮತ್ತು ಧರ್ಮಗಳೇ ಪ್ರಧಾನ ಕಾರಣ. ಹೀಗೆ ಹಿಂದುಳಿದ ಜಾತಿ-ಧಾರ್ಮಿಕ ಸಮುದಾಯಗಳನ್ನು ವಿಶೇಷ ಆದ್ಯತೆ, ನೀತಿ-ಯೋಜನೆಗಳ ಮೂಲಕ ಮುಂದುವರಿಯಲು ಅವಕಾಶ ಒದಗಿಸಬೇಕು ಎಂಬ ಆಶಯ ಸಾಂವಿಧಾನಿಕವಾಗಿಯೇ ಇದೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಡಿರುವ ನಿಗಮ ರಚನೆಯ ಘೋಷಣೆಯು ಇಂತಹ ಆಶಯಗಳ ಅಪವ್ಯಾಖ್ಯಾನ ಮತ್ತು ದುರುಪಯೋಗ.

ಮರಾಠಾ ಸಮುದಾಯದ ಹಿತಕ್ಕಾಗಿ ನಿಗಮ ಎಂಬ ಸಮರ್ಥನೆ ನೀಡಲಾಗುತ್ತಿದೆ. ಇನ್ನೊಂದೆಡೆ, ಅದರ ದುರುದ್ದೇಶದ ಚರ್ಚೆಯನ್ನು ತಡೆಯುವ ತಂತ್ರವಾಗಿ ಇನ್ನೊಂದು ಜಾತಿಗೆ ಮತ್ತೊಂದು ನಿಗಮ ಎಂಬ ಹೇಳಿಕೆ ಹೊರಬಿದ್ದಿದೆ. ಇವೆರಡೂ ರಾಜಕೀಯ ತಂತ್ರ ಮತ್ತು ವಂಚಕ ನಿಲುವು ಎಂಬುದನ್ನು ಈ ಸಮುದಾಯಗಳು ಅರ್ಥಮಾಡಿಕೊಳ್ಳಬೇಕಿದೆ. ಖಚಿತವಾಗಿ, ಲಿಂಗಾಯತರ ಪ್ರತ್ಯೇಕ ಧರ್ಮದ ಬೇಡಿಕೆಯನ್ನು ಶಮನಗೊಳಿಸುವ ಉದ್ದೇಶ ಈ ನಿಗಮ ರಚನೆಯ ಹಿಂದಿನ ಕುತಂತ್ರ.

ಕನ್ನಡದ ಭಾಷೆ, ಸಂಸ್ಕೃತಿ, ಸಾಹಿತ್ಯದ ಹಿತಕ್ಕಾಗಿ ರಚಿಸಲಾದ ಅಕಾಡೆಮಿ ಪ್ರಾಧಿಕಾರಗಳಿಗೆ ನೀಡಲಾಗುತ್ತಿರುವುದುಐದಾರು ಕೋಟಿ ರೂಪಾಯಿ. ಆದರೆ ಮರಾಠಾ ಇತ್ಯಾದಿ ಹೊಸ ನಿಗಮಗಳಿಗೆ ಘೋಷಿಸಲಾಗಿರುವುದು ತಲಾ ₹50 ಕೋಟಿಗೂ ಹೆಚ್ಚು ಮೊತ್ತ. ಇದು ಒಟ್ಟಾರೆ ಕನ್ನಡನಾಡಿನ ದುರಂತ. ನಿಜಕ್ಕೂ ಅಭಿವೃದ್ಧಿಯಾಗಬೇಕಿರುವುದು ಕೊರಗ, ಕೊರಮ, ಅಲೆಮಾರಿ, ಆದಿವಾಸಿ ಬುಡಕಟ್ಟು ಸಮುದಾಯಗಳು. ಈ ಸಮುದಾಯಗಳು ಹಕ್ಕಿಗಾಗಿ ಕೂಗಲಾರದಷ್ಟು ದುರ್ಬಲವಾಗಿರುವಾಗ ಹಸಿದವರ ಕೈಯ ತುತ್ತನ್ನು ಕಸಿದು ಉಳ್ಳವರ ತಟ್ಟೆಯಲ್ಲಿಡುವುದು ನಿಜಕ್ಕೂ ಅಮಾನವೀಯಹಾಗೂ ಅಸಹ್ಯದ ನಡೆ.


-ಬಿ. ಪೀರ್‌ಬಾಷಾ,ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT