ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ–ಸುದ್ದಿ | ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಡವರು ಹೆಚ್ಚು

Last Updated 4 ಜನವರಿ 2022, 19:31 IST
ಅಕ್ಷರ ಗಾತ್ರ

ಹಿಂದಿ ಭಾಷಿಕ ರಾಜ್ಯಗಳಲ್ಲಿ ಶೇ 30ಕ್ಕಿಂತಲೂ ಹೆಚ್ಚು ಜನರು ಬಡವರು ಎನ್ನುತ್ತದೆ ಕೇಂದ್ರ ಸರ್ಕಾರದ ‘ಬಹು ಆಯಾಮದ ಬಡತನ ಸೂಚ್ಯಂಕ ವರದಿ’. ದಕ್ಷಿಣ ಮತ್ತು ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ, ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಡವರ ಪ್ರಮಾಣ ಅತ್ಯಂತ ಹೆಚ್ಚು. ಅಂದರಂತೆಯೇ ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ಬಡವರ ಪ್ರಮಾಣ ಶೇ 20ರಿಂದ ಶೇ 35ರವರೆಗೂ ಇದೆ.

ಪೌಷ್ಟಿಕ ಆಹಾರ, ಆರೋಗ್ಯ ಸೇವೆ ಲಭ್ಯತೆ, ಮರಣ ಪ್ರಮಾಣ, ಶುದ್ಧ ಕುಡಿಯುವ ನೀರಿನ ಲಭ್ಯತೆ, ಶೌಚಾಲಯ, ವಿದ್ಯುತ್ ಸಂಪರ್ಕ, ಮನೆ ಬಳಕೆ ವಸ್ತುಗಳು, ಶಿಕ್ಷಣ, ವಸತಿಯ ಸ್ವರೂಪ ಮತ್ತು ಬ್ಯಾಂಕ್‌ ಖಾತೆ ಹೊಂದಿರುವುದರ ಆಧಾರದಲ್ಲಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ ಇಲ್ಲಿ ಬಡತನವು, ಇಡೀ ರಾಜ್ಯವೇ ಹಿಂದುಳಿದಿರುವುದನ್ನು ಸೂಚಿಸುತ್ತದೆ.

ಕೇಂದ್ರ ಸರ್ಕಾರವು ಇದೇ ಮೊದಲ ಬಾರಿಗೆ ಈ ಸೂಚ್ಯಂಕವನ್ನು ಸಿದ್ಧಪಡಿಸಿದೆ. 2015–16ನೇ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–4ರ ವರದಿಯ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ಅಧ್ಯಯನ ಮಾಡಲಾಗಿದೆ. ಆ ದತ್ತಾಂಶಗಳನ್ನು 2019–20ನೇ ಸಾಲಿನರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರ ವರದಿಯ ದತ್ತಾಂಶಗಳಿಗೆ ಹೋಲಿಸಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ.

ಸುಧಾರಣೆ: 2015-16ಕ್ಕೆ ಹೋಲಿಸಿದರೆ, 2019–20ರ ಅವಧಿಯಲ್ಲಿ ಶಾಲೆ ವಂಚಿತರ ಪ್ರಮಾಣ ಕಡಿಮೆಯಾಗಿದೆ. ಬಿಹಾರದಲ್ಲಿ ಶೇ 9.8ರಷ್ಟು ಮತ್ತು ನಾಗಾಲ್ಯಾಂಡ್‌ನಲ್ಲಿ ಶೇ 5.40ರಷ್ಟು ಮಂದಿ ಶಾಲೆ ವಂಚಿತರಾಗಿದ್ದಾರೆ. ಬೇರೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲೆ ವಂಚಿತರ ಪ್ರಮಾಣವು ಶೇ 5ಕ್ಕಿಂತಲೂ ಕಡಿಮೆ ಇದೆ.

ಎಲ್‌ಪಿಜಿ ಸಂಪರ್ಕ: ತಾಳೆಯಾಗದ ಸರ್ಕಾರದ ಲೆಕ್ಕ

ದೇಶದಲ್ಲಿ ಎಲ್‌ಪಿಜಿ ಸಂಪರ್ಕ ಇರುವ ಕುಟುಂಬಗಳ ದತ್ತಾಂಶ ಮತ್ತು ಎಲ್‌ಪಿಜಿ ಸಂಪರ್ಕ ಇಲ್ಲದೇ ಇರುವ ಜನರಿಗೆ ಸಂಬಂಧಿಸಿದಂತೆ ಸರ್ಕಾರದ ಬೇರೆ ಬೇರೆ ವರದಿಗಳಲ್ಲಿ ನೀಡಲಾಗಿರುವ ದತ್ತಾಂಶದಲ್ಲಿ ಭಾರಿ ಅಂತರವಿದೆ.

ದೇಶದ ಎಲ್ಲಾ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕವನ್ನು ಒದಗಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಕೇಂದ್ರ ಸರ್ಕಾರವು 2016ರಲ್ಲಿ ಉಜ್ವಲ ಯೋಜನೆಯನ್ನು ಆರಂಭಿಸಿತ್ತು. ಮೊದಲ ಹಂತದ ಯೋಜನೆಯಲ್ಲಿ 8.05 ಕೋಟಿ ಹೊಸ ಎಲ್‌ಪಿಜಿ ಸಂಪರ್ಕವನ್ನು ಒದಗಿಸಲಾಗಿದೆ.

‘2021ರ ಜನವರಿ 1ರ ವೇಳೆಗೆ ದೇಶದ 28.90 ಕೋಟಿ ಕುಟುಂಬಗಳು ಎಲ್‌ಪಿಜಿ ಸಂಪರ್ಕ ಪಡೆದಿವೆ. ಅಲ್ಲದೆ, ಎಲ್‌ಪಿಜಿ ಸಂಪರ್ಕ ಹೊಂದಿರುವ ಕುಟುಂಬಗಳ ಪ್ರಮಾಣ ಶೇ 99.50ರಷ್ಟು’ ಎಂದು ಇಂಧನ ಸಚಿವಾಲಯವು 2021ರ ಫೆಬ್ರುವರಿ 3ರಂದು ರಾಜ್ಯಸಭೆಗೆ ಮಾಹಿತಿ ನೀಡಿತ್ತು.ಆದರೆ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರ ವರದಿಯನ್ನು ಆಧರಿಸಿ ಸಿದ್ಧಪಡಿಸಲಾಗಿರುವ ಬಹು ಆಯಾಮದ ಬಡತನ ಸೂಚ್ಯಂಕ ವರದಿಯು ಬೇರೆಯದೇ ಮಾಹಿತಿಯನ್ನು ನೀಡುತ್ತದೆ.

ಬಡತನ ಸೂಚ್ಯಂಕ ವರದಿಯ ಪ್ರಕಾರ, ದೇಶದ 13 ರಾಜ್ಯಗಳ ಶೇ 50ಕ್ಕಿಂತಲೂ ಹೆಚ್ಚು ಜನರು ಎಲ್‌ಪಿಜಿ ಸಂಪರ್ಕ ಹೊಂದಿಲ್ಲ.ಈ ವರದಿಯು2020ರ ಡಿಸೆಂಬರ್‌ ಅಂತ್ಯದವರೆಗೆ ಅನ್ವಯವಾಗುತ್ತದೆ. ಅಂದರೆ, ಇಂಧನ ಸಚಿವಾಲಯವು ರಾಜ್ಯಸಭೆಗೆ ನೀಡಿದ ದತ್ತಾಂಶದ ಅವಧಿಯ ಕೊನೆಯ ದಿನದ, ಹಿಂದಿನ ದಿನದವರೆಗಿನ ಮಾಹಿತಿಯನ್ನು ಬಡತನ ಸೂಚ್ಯಂಕ ವರದಿ ಹೊಂದಿದೆ.

ಈ ವರದಿಯ ಪ್ರಕಾರ ದೇಶದ ಯಾವ ರಾಜ್ಯದಲ್ಲೂ ಎಲ್‌ಪಿಜಿ ಸಂಪರ್ಕ ಹೊಂದಿರುವವರ ಪ್ರಮಾಣ ಶೇ 99ರಷ್ಟನ್ನು ಮುಟ್ಟಿಲ್ಲ.

ಎಲ್‌ಪಿಜಿ ಸಂಪರ್ಕ ವಂಚಿತರ ಪ್ರಮಾಣ ಅಧಿಕವಿರುವ ರಾಜ್ಯಗಳು

ರಾಜ್ಯ; ಎಲ್‌ಪಿಜಿ ಸಂಪರ್ಕ ವಂಚಿತರ ಪ್ರಮಾಣ

ಮೇಘಾಲಯ; 69.20 %

ಜಾರ್ಖಂಡ್‌; 68.10 %

ಛತ್ತೀಸಗಡ; 67 %

ಒಡಿಶಾ; 65.3 %

ಬಿಹಾರ; 63.2 %

ಪಶ್ಚಿಮ ಬಂಗಾಳ; 61.60 %

ಅಸ್ಸಾಂ; 60.50 %

ಮಧ್ಯಪ್ರದೇಶ; 59.90 %

ರಾಜಸ್ಥಾನ; 58.60 %

ನಾಗಾಲ್ಯಾಂಡ್‌; 56.90 %

ತ್ರಿಪುರಾ; 56.20 %

ಹಿಮಾಚಲ ಪ್ರದೇಶ; 53.10 %

ಉತ್ತರ ಪ್ರದೇಶ; 50.50 %

ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಡವರು

ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಡವರಿದ್ದಾರೆ ಎಂದು ನೀತಿ ಆಯೋಗದ ವರದಿಯ ದತ್ತಾಂಶಗಳು ತಿಳಿಸುತ್ತವೆ. ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಬಡವರ ಪ್ರಮಾಣ ಶೇ 19.42ರಿಂದ ಶೇ 41.67ರಷ್ಟಿದೆ. ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳು, ಕಿತ್ತೂರು ಕರ್ನಾಟಕದ ವಿಜಯಪುರ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಜನರು ಮೂಲಸೌಕರ್ಯಗಳ ಕೊರತೆಯಿಂದ ಬಡವರೆನಿಸಿಕೊಂಡಿದ್ದಾರೆ. ಈ ವರದಿಯು ಪ್ರಾದೇಶಿಕ ಅಸಮಾನತೆ ಹಾಗೂ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಎದುರಾಗಿರುವ ತಾರತಮ್ಯದತ್ತ ಬೊಟ್ಟು ಮಾಡಿದೆ.

*ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಪೈಕಿ ಅತ್ಯಂತ ಹೆಚ್ಚು ಬಡವರು ಕಂಡುಬಂದಿರುವುದು ಯಾದಗಿರಿ ಜಿಲ್ಲೆಯಲ್ಲಿ. ಇಲ್ಲಿ ಶೇ 41.67ರಷ್ಟು ಬಡವರಿದ್ದಾರೆ. ಮೂಲ ಸೌಕರ್ಯ ವಂಚಿತ ಜಿಲ್ಲೆಗಳಲ್ಲಿ ಯಾದಗಿರಿ ಮೊದಲ ಸ್ಥಾನದಲ್ಲಿದೆ.

*ಯಾದಗಿರಿಯ ನಂತರದ ಸ್ಥಾನದಲ್ಲಿರುವುದು ರಾಯಚೂರು ಜಿಲ್ಲೆ. ಜಿಲ್ಲೆಯ ಶೇ 32.19ರಷ್ಟು ಜನರು ಬಡವರು ಎಂದು ವರದಿ ಅಭಿಪ್ರಾಯಪಟ್ಟಿದೆ.

*ಶೇ 20ರಿಂದ ಶೇ 30ರಷ್ಟು ಬಡವರನ್ನು ಹೊಂದಿರುವ ಆರು ಜಿಲ್ಲೆಗಳಿವೆ. ಕೊಪ್ಪಳ, ಬಳ್ಳಾರಿ, ಕಲಬುರ್ಗಿ, ವಿಜಯಪುರ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳು ಈ ವರ್ಗದಲ್ಲಿವೆ.

*ರಾಜ್ಯದಲ್ಲಿ ಅತಿ ಕಡಿಮೆ ಬಡವರನ್ನು ಹೊಂದಿರುವ ಜಿಲ್ಲೆಗಳ ಸಾಲಿನಲ್ಲಿ ಬೆಂಗಳೂರು (ಶೇ 2.31) ಮೊದಲ ಸ್ಥಾನದಲ್ಲಿದೆ. ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಮೈಸೂರು, ಬೆಂಗಳೂರು ಗ್ರಾಮಾಂತರ, ಕೊಡಗು, ರಾಮನಗರ ಹಾಗೂ ಧಾರವಾಡ ಜಿಲ್ಲೆಗಲ್ಲಿ ಶೇ 10ಕ್ಕಿಂತ ಕಡಿಮೆ ಬಡವರಿದ್ದಾರೆ.

– ಜಯಸಿಂಹ ಆರ್. / ಅಮೃತ್ ಕಿರಣ್ ಬಿ.ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT