ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಗೆಲ್ಲುವರೇ ಈ ಚಾಂಪಿಯನ್ನರು?

Last Updated 24 ಜುಲೈ 2020, 3:40 IST
ಅಕ್ಷರ ಗಾತ್ರ
ADVERTISEMENT
""

ಕೋವಿಡ್‌ ನಂತರದ ಕಾಲಘಟ್ಟದಲ್ಲಿ ಜಗತ್ತಿನ ಹೊಸ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲುನಡೆಯುವ ರೇಸ್‌ನಲ್ಲಿ ಭಾರತವೂ ಸ್ಪರ್ಧಿ‌. ಇದಕ್ಕಾಗಿ ದೇಶದ ಕೆಲವು ‘ಚಾಂಪಿಯನ್‌ ವಲಯ’ಗಳನ್ನು ಗುರುತಿಸಿರುವ ಸರ್ಕಾರ, ಈ ವಲಯಗಳಿಂದ ರಫ್ತು ಪ್ರಮಾಣ ಹೆಚ್ಚಿಸಲು ಉದ್ದೇಶಿಸಿದೆ.‘ಆತ್ಮ ನಿರ್ಭರ ಅಭಿಯಾನ’ದ ಆಶಯಈಡೇರಿಸುವ ಹೊಣೆ ಹೊತ್ತ ಆ ಕ್ಷೇತ್ರಗಳಸದ್ಯದ ಸ್ಥಿತಿಗತಿ ಹೀಗಿದೆ...

ಆಟೊಮೊಬೈಲ್ ಬಿಡಿಭಾಗ

ಭಾರತವು ಆಟೊಮೊಬೈಲ್‌ ಬಿಡಿಭಾಗಗಳಲ್ಲಿ ಕೆಲವನ್ನು ಮಾತ್ರ ಆಮದು ಮಾಡಿಕೊಳ್ಳುತ್ತದೆ. ಹೆಚ್ಚಿನ ಬಿಡಿಭಾಗಗಳು ದೇಶದಲ್ಲೇ ತಯಾರಾಗುತ್ತವೆ. ಅಂತಹ ಬಿಡಿಭಾಗಗಳು ಈಗಾಗಲೇ ರಫ್ತಾಗುತ್ತಿವೆ. ಯುರೋಪ್‌ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಈ ಬಿಡಿಭಾಗಗಳ ತಯಾರಿಕೆಗೆ ತಗಲುವ ವೆಚ್ಚಕ್ಕಿಂತ ಶೇ 20–35ರಷ್ಟು ಕಡಿಮೆ ವೆಚ್ಚ ಭಾರತದಲ್ಲಿ ತಗಲುತ್ತದೆ. ಭಾರತ ಟಿವಿಎಸ್‌ ಮತ್ತು ಭಾರತ್ ಫೋರ್ಜ್‌ ಬಿಡಿಭಾಗಗಳನ್ನು ರಫ್ತು ಮಾಡುವ ದೊಡ್ಡ ಕಂಪನಿಗಳಾಗಿವೆ.ಈ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಮತ್ತು ರಫ್ತು ಉತ್ತೇಜನಕ್ಕೆ ಹಲವು ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.

15 ಲಕ್ಷ - ಈ ಕ್ಷೇತ್ರದಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗಿಗಳ ಸಂಖ್ಯೆ

₹ 1.79 ಲಕ್ಷ ಕೋಟಿ - 2019ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಈ ವಲಯದ ವಹಿವಾಟು

₹ 51,397 ಕೋಟಿ - ಇದೇ ಅವಧಿಯಲ್ಲಿ ಈ ವಲಯದ ರಫ್ತು ವಹಿವಾಟಿನ ಮೊತ್ತ

* ಈ ಕ್ಷೇತ್ರದಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ

* ಈ ಕ್ಷೇತ್ರದ ಅಭಿವೃದ್ಧಿಗಾಗಿ ಯುಪಿಎ ಸರ್ಕಾರವು ಆಟೊಮೇಟಿವ್ ಮಿಷನ್ ಪ್ಲಾನ್ 2006–2016ರನ್ನು ರೂಪಿಸಿತ್ತು. ಎನ್‌ಡಿಎ ಸರ್ಕಾರವೂ ಈ ಯೋಜನೆಯನ್ನು 2016–2026ರವರೆಗೆ ವಿಸ್ತರಿಸಿದೆ

ಕಬ್ಬಿಣ ಮತ್ತು ಉಕ್ಕು

ಜಗತ್ತಿನಲ್ಲಿ ಹೆಚ್ಚು ಕಬ್ಬಿಣ ಮತ್ತು ಉಕ್ಕು ಉತ್ಪಾದನೆ ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಕಬ್ಬಿಣದ ಅದಿರು ಮತ್ತು ಕಡಿಮೆ ವೆಚ್ಚದಲ್ಲಿ ಕಾರ್ಮಿಕರ ಲಭ್ಯತೆಯು ಈ ವಲಯದ ಬೆಳವಣಿಗೆಗೆ ಕಾರಣವಾಗಿದೆ. ಈ ವಲಯದ ರಫ್ತು ಪ್ರಮಾಣವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಂಡಿದೆ

11.12 ಕೋಟಿ ಟನ್‌ - 2019–20ನೇ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಉತ್ಪಾದಿಸಲಾದ ಕಬ್ಬಿಣ ಮತ್ತು ಉಕ್ಕು

82.4 ಲಕ್ಷ ಟನ್‌ - ಇದೇ ವರ್ಷದಲ್ಲಿ ಕಬ್ಬಿಣ ಮತ್ತು ಉಕ್ಕಿನ ರಫ್ತು ಪ್ರಮಾಣ

30 ಕೋಟಿ ಟನ್‌ - 2030–31ನೇ ಆರ್ಥಿಕ ವರ್ಷದಲ್ಲಿ ಕಬ್ಬಿಣ ಮತ್ತು ಉಕ್ಕು ಉತ್ಪಾದನೆ ಗುರಿ

* ದೇಶಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಳಿಗೆ ಅದಿರು ಲಭ್ಯತೆಯನ್ನು ಖಾತರಿಪಡಿಸುವ ಉದ್ದೇಶದಿಂದ ಕಬ್ಬಿಣದ ಅದಿರಿನ ಮೇಲೆ ಶೇ 30ರಷ್ಟು ಲೆವಿ ವಿಧಿಸಲಾಗಿದೆ. ಇದು ಕಬ್ಬಿಣದ ಅದಿರು ಮಾತ್ರವಲ್ಲದೆ, ಕಬ್ಬಿಣ ಮತ್ತು ಉಕ್ಕಿನ ರಫ್ತನ್ನು ಹೆಚ್ಚಿಸಲು ನೆರವಾಗಿದೆ

* ಈ ವಲಯದಲ್ಲಿ ಆಮದನ್ನು ಕಡಿಮೆ ಮಾಡುವ ಉದ್ದೇಶದಿಂದ ‘ಕಬ್ಬಿಣ ಮರುಬಳಕೆ ನೀತಿ’ ರೂಪಿಸಲಾಗಿದೆ

ಎಲೆಕ್ಟ್ರಾನಿಕ್ಸ್‌ ಉಪಕರಣ

ಎಲೆಕ್ಟ್ರಾನಿಕ್ಸ್ ಉಪಕರಣಗಳು ಮತ್ತು ಬಿಡಿಭಾಗಗಳ ತಯಾರಿಕೆಯಲ್ಲಿ ಭಾರತವು ಆಮದನ್ನು ಅವಲಂಬಿಸಿದೆ. ಭಾರತ ಮಾತ್ರವಲ್ಲದೆ ಹಲವು ಪಾಶ್ಚಿಮಾತ್ಯ ದೇಶಗಳು ಇಂತಹ ಉಪಕರಣ ಮತ್ತು ಬಿಡಿಭಾಗಗಳಿಗಾಗಿ ಚೀನಾವನ್ನು ಅವಲಂಬಿಸಿವೆ. ಚೀನಾದಲ್ಲಿ ಕಚ್ಚಾ ವಸ್ತುಗಳು ಮತ್ತು ಕಡಿಮೆ ವೇತನಕ್ಕೆ ಕಾರ್ಮಿಕರ ಲಭ್ಯತೆಯ ಕಾರಣ ಈ ಬಿಡಿಭಾಗಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಲಾಗುತ್ತದೆ. ಭಾರತದಲ್ಲೂ ಇದೇ ಔದ್ಯಮಿಕ ಸ್ಥಿತಿ ನಿರ್ಮಿಸಿದರೆ, ಆಮದನ್ನು ಕಡಿಮೆ ಮಾಡಬಹುದು. ರಫ್ತನ್ನು ಹೆಚ್ಚಿಸಬಹುದು.

₹ 6.59 ಲಕ್ಷ ಕೋಟಿ 2018–19ನೇ ಸಾಲಿನಲ್ಲಿ ಭಾರತದ ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಆಮದು ಮೊತ್ತ

₹ 65,920 ಕೋಟಿ 2018–19ನೇ ಸಾಲಿನಲ್ಲಿ ಭಾರತದ ಎಲೆಕ್ಟ್ರಾನಿಕ್ಸ್ ಉಪಕರಣಗಳ ರಫ್ತು ಮೊತ್ತ

* ಈ ವಲಯದಲ್ಲಿ ಭಾರತ ಮೊದಲು ಸ್ವಾವಲಂಬನೆ ಸಾಧಿಸಬೇಕಿದೆ. ಭಾರತದಲ್ಲೇ ತಯಾರಿಸಿ ಅಭಿಯಾನವು ಈ ನಿಟ್ಟಿನಲ್ಲಿ ನೆರವಾಗುತ್ತಿದೆ

* ಚೀನಾ ಜತೆ ಗಡಿ ಸಂಘರ್ಷದ ನಂತರ ಈ ವಲಯದಲ್ಲಿ ಭಾರತದಲ್ಲೇ ತಯಾರಿಸಿ ಅಭಿಯಾನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ

ಕೈಗಾರಿಕಾ ಯಂತ್ರ

ಕೈಗಾರಿಕಾ ಯಂತ್ರಗಳು ಮತ್ತು ಬಿಡಿಭಾಗಗಳು ಹಾಗೂ ಎಂಜಿನಿಯರಿಂಗ್ ಉತ್ಪನ್ನಗಳಲ್ಲಿ ಭಾರತದ ರಫ್ತು ಮಾರುಕಟ್ಟೆ ಉತ್ತಮವಾಗಿದೆ. ಭಾರತವು, ದೊಡ್ಡ ಎಲೆಕ್ಟ್ರಿಕ್ ಮೋಟರ್‌ಗಳು, ಕೈಗಾರಿಕಾ ಕ್ರೇನ್‌ಗಳು, ಹೈಡ್ರಾಲಿಕ್ ಜಾಕ್‌ಗಳು, ಕಾಸ್ಟಿಂಗ್ ಮತ್ತು ಪೋರ್ಜಿಂಗ್‌ ಯಂತ್ರಗಳು, ಬಾಯ್ಲರ್‌ಗಳು, ರಿಯಾಕ್ಟರ್‌ಗಳನ್ನು ರಫ್ತು ಮಾಡುತ್ತದೆ. ಐರೋಪ್ಯ ರಾಷ್ಟ್ರಗಳು ಮತ್ತು ಅಮೆರಿಕ, ಭಾರತದ ಈ ಉತ್ಪನ್ನಗಳಿಗೆ ದೊಡ್ಡ ರಫ್ತು ಮಾರುಕಟ್ಟೆಗಳಾಗಿವೆ.

₹ 5.39 ಲಕ್ಷ ಕೋಟಿ - 2019–20ನೇ ಸಾಲಿನಲ್ಲಿ ಈ ವಲಯದ ವಹಿವಾಟಿನ ಮೊತ್ತ

30 % - ಈ ವಲಯದ ಒಟ್ಟು ವಹಿವಾಟಿನಲ್ಲಿ ರಫ್ತಿನ ಪ್ರಮಾಣ

* ಈ ವಲಯದಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶವಿದೆ

ಚರ್ಮೋದ್ಯಮ

ಭಾರತವು ಹದಮಾಡಿದ ಚರ್ಮ, ಚರ್ಮದ ಚಪ್ಪಲಿಗಳು ಮತ್ತು ಷೂಗಳು, ಚರ್ಮದ ಬ್ಯಾಗ್‌ಗಳು, ಬೆಲ್ಟ್‌ ಮತ್ತು ಜಾಕೆಟ್‌ಗಳನ್ನು ರಫ್ತು ಮಾಡುತ್ತದೆ. ಚರ್ಮೋದ್ಯಮಗಳ ರಫ್ತಿನಲ್ಲಿ ಈ ಉತ್ಪನ್ನಗಳ ಪ್ರಮಾಣ ಶೇ 77ರಷ್ಟಿದೆ. ಅಮೆರಿಕ, ಜರ್ಮನಿ, ಬ್ರಿಟನ್ ಮತ್ತು ಇಟಲಿ ಭಾರತದ ಚರ್ಮೋದ್ಯಮಕ್ಕೆ ದೊಡ್ಡ ರಫ್ತು ಮಾರುಕಟ್ಟೆಗಳಾಗಿವೆ. 2018–19ನೇ ಸಾಲಿಗೆ ಹೋಲಿಸಿದರೆ, 2019–20ರಲ್ಲಿ ಈ ಉದ್ಯಮದ ರಫ್ತಿನಲ್ಲಿ ಶೇ 10.62ರಷ್ಟು ಕುಸಿತವಾಗಿದೆ. ಕೋವಿಡ್‌ನ ಕಾರಣದಿಂದ 2020–21ನೇ ಸಾಲಿನಲ್ಲೂ ಕುಸಿತ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ನಂತರದ ವರ್ಷಗಳಲ್ಲಿ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ.

₹ 3.79 ಲಕ್ಷ ಕೋಟಿ 2019–20ನೇ ಸಾಲಿನಲ್ಲಿ ಈ ವಲಯದ ರಫ್ತು ವಹಿವಾಟಿನ ಮೊತ್ತ

₹ 4.26 ಲಕ್ಷ ಕೋಟಿ 2018–19ನೇ ಸಾಲಿನಲ್ಲಿ ಈ ವಲಯದ ರಫ್ತು ವಹಿವಾಟಿನ ಮೊತ್ತ

ಅಲ್ಯುಮಿನಿಯಂ

ಅಲ್ಯುಮಿನಿಯಂ ಮತ್ತು ತಾಮ್ರದ ರಫ್ತಿನ ಮಾರುಕಟ್ಟೆ ತೀರಾ ಚಿಕ್ಕದು. ಭಾರತದಲ್ಲಿ ಈ ನಿಕ್ಷೇಪಗಳು ಕಡಿಮೆ ಪ್ರಮಾಣದಲ್ಲಿ ಇರುವ ಕಾರಣ, ಭಾರಿ ಪ್ರಮಾಣದ ಬೆಳವಣಿಗೆ ಕಷ್ಟಸಾಧ್ಯ ಎಂದು ಹಲವು ವರದಿಗಳು ಹೇಳಿವೆ. ಆದರೆ, ಗುಜರಿಗೆ ಹಾಕಿರುವ ಅಲ್ಯುಮಿನಿಯಂ ಮತ್ತು ತಾಮ್ರವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನೀತಿಮಟ್ಟದಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಈ ಎರಡೂ ಲೋಹಗಳ ಸಂಸ್ಕರಣೆ ವಿಷಕಾರಿ ಮತ್ತು ಅಪಾಯಕಾರಿ ಪ್ರಕ್ರಿಯೆ ಆಗಿರುವುದರಿಂದ, ಈ ಕೈಗಾರಿಕೆಗಳ ಸ್ಥಾಪನೆಗೂ ತೊಡಕುಗಳು ಇವೆ.

₹ 136 ಕೋಟಿ - 2019–20ನೇ ಸಾಲಿನಲ್ಲಿ ಭಾರತ ರಫ್ತು ಮಾಡಿದ ಅಲ್ಯುಮಿನಿಯಂನ ಮೊತ್ತ

ಜವಳಿ ಉದ್ಯಮ

ಭಾರತದಲ್ಲಿ ಕೃಷಿ ಹೊರತುಪಡಿಸಿದರೆ, ಅತಿಹೆಚ್ಚು ಉದ್ಯೋಗ ನೀಡಿರುವುದು ಜವಳಿ ಉದ್ಯಮ. ಭಾರತವು ಜಗತ್ತಿನಲ್ಲಿ ಜವಳಿ ಉತ್ಪನ್ನ ರಫ್ತಿನಲ್ಲಿ 5ನೇ ಸ್ಥಾನದಲ್ಲಿದೆ. ಆದರೆ,ದೇಶದ ಜವಳಿ ಉದ್ಯಮ ಸದ್ಯದ ಮಟ್ಟಿಗೆ ಚೀನಾದ ಮೇಲೆ ಬಹುವಾಗಿ ಅವಲಂಬಿತವಾಗಿದೆ. ಕಚ್ಚಾವಸ್ತುಗಳಾದ ನೂಲು, ಹತ್ತಿ, ಪಾಲಿಸ್ಟರ್ ಬಟ್ಟೆಗಳನ್ನು ತಯಾರಿಸಲು ಬಳಸುವ ಟೆರಿಫ್ತಾಲಿಕ್ ಆಮ್ಲ (ಟಿಎಫ್‌ಎ) ಮೊದಲಾದವುಕಡಿಮೆ ದರದಲ್ಲಿ ಸಿಗುವುದರಿಂದ ಚೀನಾವನ್ನು ಆಶ್ರಯಿಸಲಾಗಿದೆ.

ಕೋವಿಡ್–19ನಿಂದ ದೇಶದ ಜವಳಿ ಉದ್ಯಮ ಭಾರಿ ನಷ್ಟ ಅನುಭವಿಸಿದೆ. ಕ್ಷೇತ್ರ ಸರಿದಾರಿಗೆ ಬರಲು ಕೆಲ ವರ್ಷಗಳು ಬೇಕು. ಇದೇ ಹೊತ್ತಿನಲ್ಲಿ ಅದು ಹೊಸ ಸ್ವರೂಪ ಪಡೆದಿದೆ. ಮಾಸ್ಕ್‌ ತಯಾರಿಕೆ ಉದ್ಯಮ ವಿಸ್ತರಿಸುತ್ತಿದ್ದು, ವಲಯಕ್ಕೆ ಕೊಂಚ ಚೈತನ್ಯ ನೀಡಿದೆ. ಮಾಸ್ಕ್ ರಫ್ತಿಗೆ ಸರ್ಕಾರ ಇತ್ತೀಚೆಗೆ ಅನುಮತಿ ನೀಡಿದೆ.

*ಜವಳಿ ಕ್ಷೇತ್ರದಲ್ಲಿ ಶೇ 100ರಷ್ಟು ಎಫ್‌ಡಿಐ ಹೂಡಿಕೆಗೆ ಅವಕಾಶವಿದೆ

*ಹೊಸಬರನ್ನು ಈ ಕ್ಷೇತ್ರಕ್ಕೆ ಸೆಳೆಯಲು ಹಾಗೂ ಉದ್ಯಮ ಬೆಳವಣಿಗೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ಸ್ ಪಾರ್ಕ್, ತಂತ್ರಜ್ಞಾನ ಮೇಲ್ದರ್ಜೆಗೇರಿಸುವ ಯೋಜನೆಗಳಡಿ ಸರ್ಕಾರ ಸಾಕಷ್ಟು ಹಣಕಾಸು ನೆರವು ನೀಡಿದೆ

* ನೂಲು, ಹತ್ತಿ, ಸೆಣಬು, ರೇಷ್ಮೆ ಮೊದಲಾದ ಕಚ್ಚಾವಸ್ತುಗಳು ಹೇರಳವಾಗಿ ದೇಶದಲ್ಲಿ ಲಭ್ಯವಿವೆ. ನುರಿತ ಕಾರ್ಮಿಕ ವರ್ಗವೂ ಉದ್ಯಮದ ಬೆನ್ನೆಲುಬಾಗಿದೆ

ಮಾರುಕಟ್ಟೆ ಗಾತ್ರ

2017; ₹11 ಲಕ್ಷ ಕೋಟಿ

2021; ₹16 ಲಕ್ಷ ಕೋಟಿ (ಅಂದಾಜು)

ಏರುತ್ತಿದೆ ಆಮದು ಪ್ರಮಾಣ

ಹಣಕಾಸು ವರ್ಷ; ರಫ್ತು; ಆಮದು

2016; ₹2.75 ಲಕ್ಷ ಕೋಟಿ; ₹43 ಸಾವಿರ ಕೋಟಿ

2017; ₹2.92 ಲಕ್ಷ ಕೋಟಿ; ₹47 ಸಾವಿರ ಕೋಟಿ

2018; ₹2.94 ಲಕ್ಷ ಕೋಟಿ; ₹54 ಸಾವಿರ ಕೋಟಿ

2019; ₹2.90 ಲಕ್ಷ ಕೋಟಿ; ₹56 ಸಾವಿರ ಕೋಟಿ

2020*: ₹1.72 ಲಕ್ಷ ಕೋಟಿ; ₹35 ಸಾವಿರ ಕೋಟಿ

(*ಏಪ್ರಿಲ್–ನವೆಂಬರ್ 2019)

ಆಹಾರ ಸಂಸ್ಕರಣೆ

ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತೀಯ ರೈತರನ್ನು ಗ್ರಾಹಕರೊಂದಿಗೆ ಜೋಡಿಸುವಲ್ಲಿ ಆಹಾರ ಸಂಸ್ಕರಣೆಗೆ ಪ್ರಮುಖ ಪಾತ್ರವಿದೆ. ಈ ಕ್ಷೇತ್ರದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಆಹಾರ ಸಂಸ್ಕರಣೆ ಮತ್ತು ಕೈಗಾರಿಕೆಗಳ ಸಚಿವಾಲಯ ಯತ್ನಿಸುತ್ತಿದೆ.ಧಾನ್ಯ, ಸಕ್ಕರೆ, ಖಾದ್ಯ ತೈಲ, ಪಾನೀಯ ಮತ್ತು ಡೈರಿ ಉತ್ಪನ್ನಗಳನ್ನು ಸಂಸ್ಕರಿಸಿ, ರಫ್ತು ಮಾಡುವ ಉದ್ಯಮ ಇತ್ತೀಚೆಗೆ ಚುರುಕು ಪಡೆಯುತ್ತಿದೆ.

* ಶೇ 100ರಷ್ಟು ಎಫ್‌ಡಿಐ ಹೂಡಿಕೆಗೆ ಅವಕಾಶ

ಮಾರುಕಟ್ಟೆ ಗಾತ್ರ

2016; ₹24 ಲಕ್ಷ ಕೋಟಿ

2020: ₹40 ಲಕ್ಷ ಕೋಟಿ (ನಿರೀಕ್ಷೆ)

8.5 ಲಕ್ಷ - ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಜನ

39,748 - ನೋಂದಾಯಿತ ಘಟಕಗಳು

ಸಾವಯವ ಕೃಷಿ

ದೇಶದಲ್ಲಿ ಸಾವಯುವ ಕೃಷಿ ವಿಸ್ತರಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಕ್ಷೇತ್ರದಲ್ಲಿ ತೊಡಗಿಸುತ್ತಿರುವ ಬಂಡವಾಳ ದ್ವಿಗುಣಗೊಳಿಸಲು ಮುಂದಾಗಿದೆ. ಹಲವು ಯೋಜನೆಗಳ ಮೂಲಕ ಕೇಂದ್ರ ಸರ್ಕಾರವು ಸಾವಯವ ಕೃಷಿ ಜನಪ್ರಿಯಗೊಳಿಸಲು ಯತ್ನಿಸುತ್ತಿದೆ.ರಾಸಾಯನಿಕ ಗೊಬ್ಬರ, ಕೀಟನಾಶಕ ಮತ್ತು ಕಳೆ ನಿಯಂತ್ರಕಗಳ ಬಳಕೆ ಕಡಿಮೆ ಮಾಡುವುದು ಈ ಪದ್ಧತಿಯ ವೈಶಿಷ್ಟ್ಯ.ಆದರೆ ಶೂನ್ಯ ಬಂಡವಾಳ ಕೃಷಿ ಪ್ರತಿಪಾದಿಸುವ ಸುಭಾಷ್ ಪಾಳೇಕರ್ ಅವರು ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ. ಇದೊಂದು ವಿದೇಶಿ ಪದ್ಧತಿಯಾಗಿದ್ದು, ಫಲವತ್ತಾದ ಜಮೀನುಗಳು ಹಾಳಾಗುತ್ತವೆ ಎಂದು ಎಚ್ಚರಿಸಿದ್ದಾರೆ.

*ದಿನ 5 ವರ್ಷಗಳಲ್ಲಿ ಹೆಚ್ಚುವರಿ 25 ಲಕ್ಷ ಹೆಕ್ಟೇರ್ ಜಮೀನನ್ನು ಈ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ

* ಸದ್ಯ 28 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಸಾವಯವ ಕೃಷಿ ನಡೆಯುತ್ತಿದೆ

*ಶೇ 100ರಷ್ಟು ಸಾಯಯವ ಕೃಷಿ ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಸಿಕ್ಕಿಂ ಎಂದು2016ರಲ್ಲಿ ಘೋಷಣೆ

2% -ಒಟ್ಟು ಕೃಷಿ ಭೂಮಿಯಲ್ಲಿ ಸಾವಯವ ಕೃಷಿಗೆ ಒಳಪಟ್ಟಿರುವ ಪ್ರದೇಶ

₹1,300 ಕೋಟಿ - ಈ ಕ್ಷೇತ್ರಕ್ಕೆ ವಾರ್ಷಿಕವಾಗಿ ಸರ್ಕಾರ ಹಂಚಿಕೆ ಮಾಡಲು ಉದ್ದೇಶಿಸಿರುವ ಹಣ

ಕೃಷಿ ರಾಸಾಯನಿಕ

ಜಾಗತಿಕವಾಗಿ ಅಮೆರಿಕ, ಜಪಾನ್, ಚೀನಾದ ಬಳಿಕ ಭಾರತ ಅತಿದೊಡ್ಡ ಕೃಷಿ ರಾಸಾಯನಿಕ ಉತ್ಪಾದಕ ದೇಶ ಎನಿಸಿಕೊಂಡಿದೆ. ಭಾರತದ ಆರ್ಥಿಕತೆಯಲ್ಲಿ ಈ ಕ್ಷೇತ್ರದ ಪಾತ್ರ ಮಹತ್ವದ್ದು. ಕೃಷಿ ರಾಸಾಯನಿಕ ಬಳಕೆ ಪ್ರಮಾಣದ ಜಾಗತಿಕವಾಗಿ ಹೋಲಿಸಿದರೆ ಭಾರತದಲ್ಲಿ ಸಾಕಷ್ಟು ಕಡಿಮೆ ಪ್ರಮಾಣದಲ್ಲಿದೆ. ಅಮೆರಿಕದಲ್ಲಿ ಹೆಕ್ಟೇರ್‌ಗೆ 4.5 ಕೆ.ಜಿ ಬಳಸಿದರೆ ಭಾರತದಲ್ಲಿ ಇದರ ಪ್ರಮಾಣ ಕೇವಲ 0.58 ಕೆ.ಜಿ ಇದೆ. ಭಾರತದಲ್ಲಿ ಹೆಚ್ಚಾಗಿ ಭತ್ತದ ಬೆಳೆಗೆ (ಶೇ 20) ರಾಸಾಯನಿಕಗಳ ಬಳಕೆ ಮಾಡಲಾಗುತ್ತದೆ. ಅಮೆರಿಕ–ಚೀನಾ ವ್ಯಾಪಾರ ಬಿಕ್ಕಟ್ಟಿನ ಲಾಭ ಭಾರತಕ್ಕೆ ಸಿಗುವ ಸಾಧ್ಯತೆಯಿದ್ದು, ಈ ಉದ್ಯಮ ಇನ್ನಷ್ಟು ಬೆಳವಣಿಗೆ ಕಾಣಲಿದೆ ಎಂದು ವಿಶ್ಲೇಷಿಸಲಾಗಿದೆ.

₹20 ಸಾವಿರ ಕೋಟಿ - ಭಾರತದಲ್ಲಿ ಕೀಟನಾಶಕಗಳ ದೇಶೀಯ ಬಳಕೆ ಮೌಲ್ಯ

₹17 ಸಾವಿರ ಕೋಟಿ - ಕೀಟನಾಶಕಗಳ ರಫ್ತು ಮೌಲ್ಯ

ಪೀಠೋಪಕರಣ ಉದ್ಯಮ

ಪೀಠೋಪಕರಣ ಮಾರುಕಟ್ಟೆಯಲ್ಲಿ ಸದ್ಯ ಚೀನಾ ಮುಂಚೂಣಿಯಲ್ಲಿದ್ದು ಜಾಗತಿಕವಾಗಿ ಶೇ 37.5ರಷ್ಟು ಪಾಲು ಹೊಂದಿದೆ. ಈ ಬಳಿಕ ಜರ್ಮನಿ, ಪೋಲಂಡ್, ಇಟಲಿ ಹಾಗೂ ಅಮೆರಿಕ ಇವೆ. 2020–2024ರ ಅವಧಿಯಲ್ಲಿ ಭಾರತದಲ್ಲಿ ಪೀಠೋಪಕರಣ ಉದ್ಯಮ ಶೇ 12.91ರಷ್ಟು ಬೆಳವಣಿಗೆ ದಾಖಲಿಸುವ ಸಾಧ್ಯತೆಯಿದೆ.ದೇಶದಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಈ ಉದ್ಯಮದ ಬೆಳವಣಿಗೆ ಆಗಬೇಕು. ಹೊಸ ತಂತ್ರಜ್ಞಾನ, ಬಂಡವಾಳ ಹೂಡಿಕೆ ಹಾಗೂ ಸ್ಥಳೀಯ ವಿನ್ಯಾಸವನ್ನು ಪ್ರೋತ್ಸಾಹಿಸುವುದರಿಂದ ಬೇಡಿಕೆ ಹೆಚ್ಚುತ್ತದೆಎಂದು ತಜ್ಞರು ಹೇಳುತ್ತಾರೆ. ಪೂರೈಕೆ ವ್ಯವಸ್ಥೆ ನಿರ್ವಹಣೆ, ವೆಚ್ಚ ಕಡಿಮೆಗೊಳಿಸುವಿಕೆ, ಬ್ರಾಂಡ್ ನಿರ್ವಹಣೆ, ಪೀಠೋಪಕರಣಗಳ ಮಾರುಕಟ್ಟೆ – ಇವು ದೇಶದ ಪೀಠೋಪಕರಣ ಕ್ಷೇತ್ರದ ಬೆಳವಣಿಗೆಗೆ ಪ್ರಮುಖ ಅಂಶಗಳಾಗಿವೆ. ಭಾರತದಲ್ಲಿ ಅಗತ್ಯ ಕಚ್ಚಾವಸ್ತು, ಕಾರ್ಮಿಕರು ಲಭ್ಯವಿದ್ದರೂ, ರಫ್ತಿಗಿಂತ ಹೆಚ್ಚು ಆಮದು ಹೆಚ್ಚಿದೆ.

₹82 ಲಕ್ಷ ಕೋಟಿ - ಜಾಗತಿಕ ಪೀಠೋಪಕರಣ ಮಾರುಕಟ್ಟೆಯ ಮೌಲ್ಯ

5% - ಜಾಗತಿಕ ಪೀಠೋಪಕರಣ ಮಾರುಕಟ್ಟೆಯಲ್ಲಿ ಭಾರತದ ಪಾಲು

20–25 ಲಕ್ಷ - ಈ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರ ಸಂಖ್ಯೆ-

ಆಧಾರ: ವಾಣಿಜ್ಯ ಸಚಿವಾಲಯ, ಪಿಟಿಐ, ಇಂಡಿಯಾ ಬ್ರ್ಯಾಂಡ್ ಈಕ್ವಿಟಿ ಫೌಂಡೇಷನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT