ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಭಾರತದ ಸುತ್ತ ಚೀನಾದ ‘ಮುತ್ತಿನ ಹಾರ’

Last Updated 18 ಜುಲೈ 2020, 3:35 IST
ಅಕ್ಷರ ಗಾತ್ರ
ADVERTISEMENT
""
""
""

ಭಾರತದ ಸುತ್ತ ಭೌಗೋಳಿಕ ರಾಜಕೀಯ ಪ್ರಭಾವ ಹೆಚ್ಚಿಸಿಕೊಳ್ಳುವಲ್ಲಿ ನಿರತವಾಗಿದೆ. ಭಾರತದ ಭೌಗೋಳಿಕ ಸರಹದ್ದಿನಲ್ಲಿರುವ ಮಿತ್ರ ರಾಷ್ಟ್ರಗಳನ್ನು ಒಂದೊಂದಾಗಿ ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದೆ. ಭಾರತದ ಸುತ್ತಲಿನ ಹಲವು ರಾಷ್ಟ್ರಗಳಲ್ಲಿ ಬಂದರನ್ನು ನಿರ್ಮಿಸುತ್ತಾ, ವ್ಯೂಹಾತ್ಮಕ ಮಾರ್ಗವನ್ನು ಸೃಷ್ಟಿಸಿಕೊಳ್ಳುವ ‘ಮುತ್ತಿನ ಹಾರ’ (string of pearls) ಯೋಜನೆಯನ್ನು ಜಾರಿಗೊಳಿಸಿರುವ ಆ ದೇಶ, ಬಡ ರಾಷ್ಟ್ರಗಳು ತನ್ನ ಪರವಾಗಿ ವಾಲುವಂತೆ ನೋಡಿಕೊಳ್ಳಲು ಸಾಲದ ಆಮಿಷವನ್ನೂ ಒಡ್ಡುತ್ತಿದೆ...

ಚೀನಾ ಹೆಣೆದ ಸಂಘರ್ಷದ ಬಲೆ
ತಣ್ಣನೆಯ ಹಿಮಾಲಯದ ಕಣಿವೆಗಳಿಂದ ಉಷ್ಣವಲಯದ ದ್ವೀಪಗಳವರೆಗೆ, ಅಕ್ಕಪಕ್ಕದ ರಾಷ್ಟ್ರಗಳಿಂದ ದೂರದಲ್ಲಿರುವ ಪಶ್ಚಿಮದ ರಾಜಧಾನಿಗಳವರೆಗೆ ಚೀನಾ ಪ್ರಪಂಚದಾದ್ಯಂತ ಹಲವು ಸಂಘರ್ಷಗಳಿಗೆ ಮುಖಾಮುಖಿ ಆಗುತ್ತಿದೆ. ಅತ್ತ ಅಮೆರಿಕವು ಅಷ್ಟಷ್ಟೇ ಹಿಂದೆ ಸರಿದಷ್ಟು ಇತ್ತ ಚೀನಾ ಅಷ್ಟೇ ದೃಢವಾದ ಹೆಜ್ಜೆಯೊಂದಿಗೆ ಮುನ್ನುಗ್ಗುತ್ತಿದೆ.

ಪಶ್ಚಿಮದ ದೇಶಗಳ ಕಟು ಟೀಕೆಗಳ ಹೊರತಾಗಿಯೂ ವಿವಾದಾತ್ಮಕ ಭದ್ರತಾ ಕಾನೂನನ್ನು ಹಾಂಗ್‌ಕಾಂಗ್‌ನಲ್ಲಿ ಜಾರಿಗೆ ತಂದಿರುವುದು, ಚೀನಾ ದೇಶವೀಗ ಜಾಗತಿಕ ‘ಸೂಪರ್‌ಪವರ್‌’ ಆಗಿ ಬೆಳೆಯುತ್ತಿರುವುದಕ್ಕೆ ಮತ್ತೊಂದು ಉದಾಹರಣೆ.

ಒಂದೊಮ್ಮೆ ದುರ್ಬಲವಾಗಿದ್ದ ಚೀನಾವನ್ನು ಮತ್ತೆ ವಿಶ್ವದ ಮುಂಚೂಣಿ ಸ್ಥಾನದಲ್ಲಿ ಪ್ರತಿಷ್ಠಾಪಿಸಲು ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ಕಾರ್ಯತಂತ್ರದ ಭಾಗವಾಗಿ ಈ ಘರ್ಷಣೆಗಳು ಕಂಡುಬರುತ್ತಿವೆ. ‘ಅಮೆರಿಕ ಫಸ್ಟ್‌’ ನೀತಿಯೊಂದಿಗೆ ಮಿತ್ರ ರಾಷ್ಟ್ರಗಳನ್ನೇ ದೂರ ಸರಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಚೀನಾದೊಂದಿಗೆ ವಾಣಿಜ್ಯ ಸಮರಕ್ಕೂ ಇಳಿದಿರುವ ಈ ಸನ್ನಿವೇಶದಲ್ಲಿ ಘರ್ಷಣೆಗಳು ತೀವ್ರ ಸ್ವರೂಪ ಪಡೆಯುತ್ತಿವೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ಸೃಷ್ಟಿಸುತ್ತಾ, ಅಲ್ಲಿ ಮಿಲಿಟರಿ ನೆಲೆಗಳನ್ನು ಸ್ಥಾಪಿಸುತ್ತಿರುವುದು ಚೀನಾ ಇತ್ತೀಚಿನ ವರ್ಷಗಳಲ್ಲಿ ತೋರಿದ ಹೊಸ ವರಸೆ. ಚೀನಾದ ನೌಕಾಪಡೆ ಪಾರೆಸೆಲ್ಸ್‌ ದ್ವೀಪಸಮೂಹದಲ್ಲಿ ಮಿಲಿಟರಿ ಕವಾಯತು ನಡೆಸಿದೆ. ವಿಯಟ್ನಾಂ ಮತ್ತು ತೈವಾನ್‌ ದೇಶಗಳು, ಈ ದ್ವೀಪ ಸಮೂಹವು ತಮ್ಮ ಸರಹದ್ದಿನಲ್ಲಿದೆ ಎಂದು ವಾದಿಸುತ್ತಿವೆ.

ಅತ್ತ ಪೂರ್ವ ಚೀನಾ ಸಮುದ್ರದಲ್ಲೂ ವಿವಾದದ ಸುಳಿಗಳು ಎದ್ದಿವೆ. ಚೀನಾದ ಬಾಂಬರ್‌ಗಳು ಅಲ್ಲಿನ ನಿರ್ಜನ ದ್ವೀಪಗಳಲ್ಲಿ ಹಾರಾಟ ನಡೆಸುತ್ತಿವೆ ಎಂದು ಜಪಾನ್‌ ದೂರಿದೆ. ಆ ದ್ವೀಪಗಳ ಮೇಲೆ ಎರಡೂ ದೇಶಗಳು ಹಕ್ಕು ಸ್ಥಾಪನೆಗಾಗಿ ಜಿದ್ದಿಗೆ ಬಿದ್ದಿವೆ.

ಪರಮಾಪ್ತ ದೇಶ ಪಾಕಿಸ್ತಾನ
ಚೀನಾ ಹಾಗೂ ಪಾಕಿಸ್ತಾನದ ರಾಜತಾಂತ್ರಿಕ ಸಂಬಂಧಗಳಿಗೆ ಏಳು ದಶಕಗಳ ದೀರ್ಘ ಇತಿಹಾಸವಿದೆ. ಈ ಕುರಿತು ಚೀನಾ ಸರ್ಕಾರದ ಪತ್ರಿಕೆ ಗ್ಲೋಬಲ್‌ ಟೈಮ್ಸ್‌ನಲ್ಲಿ ವಿಶೇಷ ಲೇಖನವನ್ನೂ ಪ್ರಕಟಿಸಲಾಗಿದೆ. ಎರಡೂ ದೇಶಗಳಿಗೆ ಏಷ್ಯಾದಲ್ಲಿ ಭಾರತವು ಪ್ರಬಲ ಶಕ್ತಿಯಾಗಿ ಬೆಳೆಯುವುದು ಬೇಡ. ಅವುಗಳ ಈ ಸಮಾನ ಬಯಕೆಯೇ ಎರಡನ್ನೂ ಅಷ್ಟೊಂದು ಹತ್ತಿರಕ್ಕೆ ತಂದಿವೆ. ಪಾಕಿಸ್ತಾನದ ಮಿಲಿಟರಿಗೆ ‘ಬಲ’ ತುಂಬಿರುವ ಚೀನಾ, ಧಾರಾಳವಾಗಿ ಸಾಲವನ್ನೂ ನೀಡಿದೆ. ಭಾರತದ ಗಡಿಯನ್ನು ಎರಡೂ ದೇಶಗಳು ಹಂಚಿಕೊಂಡಿರುವುದರಿಂದ ವ್ಯೂಹಾತ್ಮಕ ತಂತ್ರಗಳಿಗೆ ಒಂದಕ್ಕೊಂದು ನೆರವು ನೀಡುತ್ತಿವೆ.

ವ್ಯಾಪಾರ ವೃದ್ಧಿಯ ಜತೆಗೆ ರಕ್ಷಣಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸಿಲ್ಕ್‌ ರಸ್ತೆಯನ್ನೂ ಚೀನಾ ಅಭಿವೃದ್ಧಿಪಡಿಸಿದೆ. ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಎರಡು ದೇಶಗಳ ಹಾರ್ದಿಕ ಸಂಬಂಧಕ್ಕೆ ಸಾಕ್ಷಿಯಾಗಿದೆ. ಭಾರತದ ಗಡಿಗುಂಟ ಈ ಕಾರಿಡಾರ್‌ ಹಾದು ಹೋಗುತ್ತದೆ. ಜಾಗತಿಕ ವೇದಿಕೆಗಳಲ್ಲಿ ಚೀನಾ ಯಾವಾಗಲೂ ಪಾಕ್‌ನ ಬೆಂಬಲಕ್ಕೆ ನಿಲ್ಲುತ್ತದೆ. ಪಾಕಿಸ್ತಾನದಲ್ಲಿ ಕರಾಚಿ ಮತ್ತು ಗ್ವಾಡಾರ್ ಬಂದರನ್ನು ಚೀನಾ ಅಭಿವೃದ್ಧಿಪಡಿಸಿದೆ. ಅರಬ್ಬಿ ಸಮುದ್ರದಲ್ಲಿ ಚೀನಾದ ಅತ್ಯಂತ ಪ್ರಮುಖ ಬಂದರುಗಳು ಇವಾಗಿವೆ. ಭಾರತದ ಗುಜರಾತ್‌ಗೆ ಮತ್ತು ಇರಾನ್‌ನಲ್ಲಿ ಭಾರತ ಅಭಿವೃದ್ಧಿಪಡಿಸಿರುವ ಛಾಬಹಾರ್ ಬಂದರಿಗೆ ಈ ಎರಡೂ ಬಂದರುಗಳು ಕೆಲವೇ ನೂರು ಕಿ.ಮೀ.ಗಳಷ್ಟು ಹತ್ತಿರದಲ್ಲಿವೆ.

ಬಾಂಗ್ಲಾದೇಶ
ಪೀಪಲ್ಸ್‌‌ ಲಿಬರೇಷನ್‌ ಆರ್ಮಿಯು (ಪಿಎಲ್‌ಎ) ಇತ್ತ ಗಾಲ್ವನ್‌ ಗಡಿಯಲ್ಲಿ ಭಾರತದ ಸೇನೆಯೊಂದಿಗೆ ಮುಖಾಮುಖಿ ಆಗಿದ್ದ ಹೊತ್ತಿನಲ್ಲೇ ಅತ್ತ ಬಾಂಗ್ಲಾದೇಶದ 5,161 ಸರಕುಗಳ ಸುಂಕರಹಿತ ಆಮದಿಗೆ ಅವಕಾಶವನ್ನು ನೀಡಿದೆ ಚೀನಾ. ಬಾಂಗ್ಲಾದೇಶದ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಚೀನಾ ₹ 4.80 ಲಕ್ಷ ಕೋಟಿ ಸಾಲವನ್ನೂ ನೀಡಲು ಮುಂದಾಗಿದೆ. ಭಾರತವು 2010ರಿಂದ ಇದುವರೆಗೆ ಬಾಂಗ್ಲಾದೇಶಕ್ಕೆ ₹ 6 ಲಕ್ಷ ಕೋಟಿ ಸಾಲ ನೀಡಿದೆ. ಭಾರತ–ಬಾಂಗ್ಲಾ ನಡುವಿನ ವ್ಯಾಪಾರ ವಹಿವಾಟು ವಾರ್ಷಿಕ ₹ 7.50 ಲಕ್ಷ ಕೋಟಿಯಷ್ಟಿದ್ದರೆ, ಚೀನಾ–ಬಾಂಗ್ಲಾ ನಡುವಿನ ವಾರ್ಷಿಕ ವ್ಯಾಪಾರ ₹ 9.5 ಲಕ್ಷ ಕೋಟಿಗೆ ಹೆಚ್ಚಿದೆ.

ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿನಲ್ಲಿ ಕಂಟೇನರ್‌ ನಿರ್ವಹಣಾ ವ್ಯವಸ್ಥೆಯನ್ನು ಚೀನಾ ಅಭಿವೃದ್ಧಿಪಡಿಸಿದೆ. ಭಾರತಕ್ಕೆ ತೀರಾ ಹತ್ತಿರದಲ್ಲಿ ಇರುವ ಈ ಬಂದರನ್ನು ಚೀನಾ ತನ್ನ ಸೇನಾ ನೆಲೆಯಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂಬ ಕಳವಳ ವ್ಯಕ್ತವಾಗಿದೆ.

ಶ್ರೀಲಂಕಾ
ಕೊಲಂಬೊ ಬಂದರಿನ ಪೂರ್ವ ಭಾಗದಲ್ಲಿ ಕಂಟೇನರ್‌ ಟರ್ಮಿನಲ್‌ ಅಭಿವೃದ್ಧಿಪಡಿಸಲು ಭಾರತ ಹಾಗೂ ಜಪಾನ್‌ ಜತೆ 2019ರಲ್ಲಿ ಮಾಡಿಕೊಂಡಿದ್ದ ತ್ರಿಪಕ್ಷೀಯ ಒಪ್ಪಂದವನ್ನು ಮರುಪರಿಶೀಲಿಸಲು ಶ್ರೀಲಂಕಾ ನಿರ್ಧರಿಸಿದೆ. ಶ್ರೀಲಂಕಾದ ಈ ತೀರ್ಮಾನದ ಹಿಂದೆ ಚೀನಾದ ಕರಿನೆರಳನ್ನು ಭಾರತ ಕಂಡಿದೆ.

ಕೊಲಂಬೊ ಅಂತರರಾಷ್ಟ್ರೀಯ ಕಂಟೇನರ್ ಟರ್ಮಿನಲ್‌ನಲ್ಲಿ ಬಂಡವಾಳ ಹೂಡಿರುವ ಚೀನಾ, ಅಲ್ಲಿನ ಬಂದರಿನ ಕಾರ್ಮಿಕರನ್ನು ಭಾರತದ ವಿರುದ್ಧ ಎತ್ತಿಕಟ್ಟಿದೆ ಎಂದು ದೂರಲಾಗಿದೆ. ಹಂಬನ್‌ತೋಟಾ ಬಂದರನ್ನು ಶ್ರೀಲಂಕಾವು 99 ವರ್ಷಗಳ ಅವಧಿಗೆ ಚೀನಾಕ್ಕೆ ಗುತ್ತಿಗೆ ನೀಡಿದೆ. ಪಿಎಲ್‌ಎಯ ಅಣ್ವಸ್ತ್ರಸಹಿತ ಎರಡು ಸಬ್‌ಮರಿನ್‌ಗಳು ಕೊಲಂಬೊ ಬಂದರಿನಲ್ಲಿ ಬೀಡುಬಿಟ್ಟಿವೆ. ಹಿಂದೂ ಮಹಾಸಾಗರದ ಈ ಪುಟ್ಟ ದೇಶವಾದ ಶ್ರೀಲಂಕಾ ವ್ಯೂಹಾತ್ಮಕ ದೃಷ್ಟಿಕೋನದಿಂದ ಮಹತ್ವದ್ದಾಗಿದ್ದು, ಅದಕ್ಕೆ ಅಪಾರ ಪ್ರಮಾಣದ ಸಾಲವನ್ನು ನೀಡಿರುವ ಚೀನಾ, ತನ್ನ ಅನುಕೂಲಕ್ಕೆ ತಕ್ಕಂತೆ ಅದನ್ನು ಬಳಸಿಕೊಳ್ಳುತ್ತಿದೆ.

ಮಾಲ್ಡೀವ್ಸ್‌
ಆರೋಗ್ಯ, ಆಹಾರ ಧಾನ್ಯ, ಶಿಕ್ಷಣದ ಅಗತ್ಯಗಳಿಗೆ ಭಾರತವನ್ನೇ ಹೆಚ್ಚಾಗಿ ಆಶ್ರಯಿಸಿದ ದೇಶ ಮಾಲ್ಡೀವ್ಸ್‌. ಕೋವಿಡ್‌–19ರಿಂದ ಆ ದೇಶ ತೀವ್ರ ಬಾಧೆಗೆ ಭಾರತದಂತೆಯೇ ಆ ದೇಶ ಕೂಡ ಭಾರಿ ಪ್ರಮಾಣದ ಔಷಧಿ ಸಾಮಗ್ರಿಗಳನ್ನು ಮಾಲ್ಡೀವ್ಸ್‌ಗೆ ಕಳುಹಿಸಿಕೊಟ್ಟಿದೆ. ದೊಡ್ಡ ಪ್ರಮಾಣದ ಸಾಲವನ್ನೂ ಮಂಜೂರು ಮಾಡಿದೆ.

ಮಾಲ್ಡೀವ್ಸ್‌ನ ಮಾಲೆಯಲ್ಲಿ ಚೀನಾ ಬಂದರನ್ನೂ ಅಭಿವೃದ್ಧಿಪಡಿಸಿದೆ. ಭಾರತದ ಜತೆಗಿನ ಹಳೆಯ ಸ್ನೇಹಕ್ಕಿಂತ ಮಾಲ್ಡೀವ್ಸ್‌ ಈಗ ಚೀನಾ ಪ್ರಿಯವಾಗುತ್ತಿದೆ. ಬಂದರು ಅಭಿವೃದ್ಧಿಯ ಜತೆಗೆ, ತನ್ನ ನೆಲದಲ್ಲಿ ಐಷಾರಾಮಿ ಹೋಟೆಲ್‌ಗಳನ್ನು ಆರಂಭಿಸಲು ಚೀನಾಗೆ ಮಾಲ್ಡೀವ್ಸ್ ಅವಕಾಶ ಮಾಡಿಕೊಟ್ಟಿದೆ. ಚೀನಾದ ಲಕ್ಷಾಂತರ ಪ್ರವಾಸಿಗರು ಪ್ರತಿವರ್ಷ ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಮೂಲಕ ಹಿಂದೂ ಮಹಾಸಾಗರದ ದಕ್ಷಿಣದ ರಾಷ್ಟ್ರದಲ್ಲಿ ಚೀನಾ ಭದ್ರನೆಲೆ ಕಂಡುಕೊಂಡಿದೆ.

ದ್ವೀಪರಾಷ್ಟ್ರದ ಮರಾವ್ ಅಟಾಲ್‌ನಲ್ಲಿ ಸೇನಾನೆಲೆ ಇದೆ. ಇದನ್ನು ಚೀನಾ ಅಭಿವೃದ್ಧಿಪಡಿಸಿ, ಬಳಸಿಕೊಳ್ಳುತ್ತಿದೆ ಎಂಬ ವದಂತಿಗಳಿವೆ. ಆದರೆ ಇದು ಖಚಿತವಾಗಿಲ್ಲ.

ನೇಪಾಳ
ಚೀನಾದ ಸ್ಟ್ರಿಂಗ್‌ ಆಫ್‌ ಪರ್ಲ್ಸ್‌ಗೆ ಇತ್ತೀಚಿನ ಹೊಸ ಸೇರ್ಪಡೆಗಳಲ್ಲಿ ನೇಪಾಳ ಸಹ ಒಂದು. 2018ರಲ್ಲಿ ಟಿಬೆಟ್‌ನ ಲ್ಹಾಸಾದಿಂದ ನೇಪಾಳ ರಾಜಧಾನಿ ಕಠ್ಮಂಡುವರೆಗೆ ಚೀನಾ ಸರ್ವಋತು ಹೆದ್ದಾರಿ ನಿರ್ಮಿಸಿದೆ. ಅಲ್ಲದೆ, ತೈಲ ಕೊಳವೆಮಾರ್ಗ ನಿರ್ಮಿಸುತ್ತಿದೆ. ಇದು ಭಾರತದ ಮೇಲೆ ನೇಪಾಳದ ಅವಲಂಬನೆಯನ್ನು ಕಡಿಮೆ ಮಾಡಿದೆ. ಈ ಬೆಳವಣಿಗೆಯ ನಂತರ ಭಾರತದ ಸೇನೆಯ ಜತೆಗಿನ ಜಂಟಿ ಸಮರಾಭ್ಯಾಸವನ್ನು ನೇಪಾಳ ಸೇನೆ ಕೈಬಿಟ್ಟಿದೆ.

ಭಾರತದ ಮೂರು ಪ್ರದೇಶಗಳನ್ನು ಒಳಗೊಂಡಂತೆ ಭೌಗೋಳಿಕ ನಕ್ಷೆಯನ್ನು ಮಾರ್ಪಡಿಸುವ ಮೂಲಕ ನೇಪಾಳವು ತನ್ನ ‘ದೊಡ್ಡಣ್ಣ’ನನ್ನು ಕೆಣಕಿದೆ. ಈ ನಡೆಯ ಹಿಂದೆಯೂ ನವದೆಹಲಿ ಚೀನಾದ ಕೈವಾಡವನ್ನು ಕಂಡಿದೆ.

ಮ್ಯಾನ್ಮಾರ್‌
ಮ್ಯಾನ್ಮಾರ್‌ನ ಪಶ್ಚಿಮ ಕರಾವಳಿಯಲ್ಲಿರುವ ಕಯಾಕ್‌ಪಯು ಬಂದರನ್ನು ಚೀನಾ ಅಭಿವೃದ್ಧಿಪಡಿಸಿದೆ. ಚೀನಾದ ಮಹತ್ವಾಕಾಂಕ್ಷಿ ಬೆಲ್ಟ್‌ ಅಂಡ್ ರೋಡ್‌ ಇನಿಷಿಯೇಟಿವ್‌ನ ಭಾಗವಾಗಿ ಈ ಬಂದರನ್ನು ಅಭಿವೃದ್ಧಿಪಡಿಸಲಾಗಿದೆ. ಈ ಯೋಜನೆಯ ಒಟ್ಟು ವೆಚ್ಚದಲ್ಲಿ ಚೀನಾ ಶೇ 70ರಷ್ಟು ಮತ್ತು ಮ್ಯಾನ್ಮಾರ್ ಶೇ 30ರಷ್ಟು ಭರಿಸಿದೆ. ಅಲ್ಲದೆ ಮ್ಯಾನ್ಮಾರ್‌ನ ಪಶ್ಚಿಮ ಕರಾವಳಿಯ ಈ ಬಂದರಿನಿಂದ ಪೂರ್ವ ಕರಾವಳಿ ಗಡಿಯವರೆಗೆ ತೈಲಕೊಳವೆ ಮಾರ್ಗ–ರಸ್ತೆಮಾರ್ಗ ಮತ್ತು ರೈಲುಮಾರ್ಗವನ್ನು ಚೀನಾ ಅಭಿವೃದ್ಧಿಪಡಿಸುತ್ತಿದೆ. ಈ ಮಾರ್ಗವು ಆಗ್ನೇಯ ಚೀನಾದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಇರಾನ್‌
ಚೀನಾದಸ್ಟ್ರಿಂಗ್‌ ಆಫ್‌ ಪರ್ಲ್ಸ್‌ಗೆ ಇರಾನ್‌ ಸಹ ಹೊಸ ಸೇರ್ಪಡೆ. ಇರಾನ್ ಮತ್ತು ಚೀನಾ 25 ವರ್ಷಗಳ ಆರ್ಥಿಕ–ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ಒಪ್ಪಂದಕ್ಕೂ ಮುನ್ನ ಚೀನಾ ಈಗಾಗಲೇ ಇರಾನ್‌ಗೆ 400 ಬಿಲಿಯನ್ ಡಾಲರ್ (ಅಂದಾಜು ₹ 30 ಲಕ್ಷ ಕೋಟಿ) ನೆರವನ್ನು ನೀಡಿದೆ. ಇದಕ್ಕೆ ಪ್ರತಿಯಾಗಿ ಛಾಬಹಾರ್ ಬಂದರಿನಲ್ಲಿ ಚೀನಾದ ಸರಕುಗಳಿಗೆ ‘ಶೂನ್ಯ ಸುಂಕ’ದ ಸೌಲಭ್ಯ ನೀಡಲು, ಬಂದರಿನ ಸಮೀಪ ತೈಲಾಗಾರ ಅಭಿವೃದ್ಧಿಪಡಿಸಲು ಮತ್ತು ಮತ್ತೊಂದು ಕಿರು ಬಂದರು ಅಭಿವೃದ್ಧಿಪಡಿಸಲು ಎರಡೂ ದೇಶಗಳು ಒಪ್ಪಂದ ಮಾಡಿಕೊಳ್ಳಲು ಸಿದ್ಧತೆ ನಡೆಸಿವೆ.

ಛಾಬಹಾರ್ ಬಂದರನ್ನು ಭಾರತವು ₹ 3700 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿತ್ತು. ಈ ಬಂದರಿನಿಂದ ಅಫ್ಗಾನಿಸ್ತಾನದ ಗಡಿಯವರೆಗೆ ರೈಲುಮಾರ್ಗವನ್ನು ತನ್ನದೇ ಖರ್ಚಿನಲ್ಲಿ ನಿರ್ಮಿಸಲು ಭಾರತ ಒಪ್ಪಂದ ಮಾಡಿಕೊಂಡಿತ್ತು. ಮಧ್ಯ ಏಷ್ಯಾಗೆ ಮತ್ತು ಅಫ್ಗಾನಿಸ್ತಾನಕ್ಕೆ ಇರಾನ್‌ ಮೂಲಕ ಹಡಗು–ರೈಲು–ರಸ್ತೆ ಸಂಪರ್ಕ ನಿರ್ಮಿಸುವುದು ಭಾರತದ ಉದ್ದೇಶವಾಗಿತ್ತು. ಆದರೆ, ಇರಾನ್ ಕಳೆದ ವಾರವಷ್ಟೇ ರೈಲು ಮಾರ್ಗವನ್ನು ತಾನೇ ನಿರ್ಮಿಸುವುದಾಗಿ ಹೇಳಿದೆ.

ರೈಲ್ವೆ ಯೋಜನೆಗೆ ಹಣಕಾಸು ಒದಗಿಸಲು ಭಾರತ ವಿಳಂಬ ಧೋರಣೆ ಅನುಸರಿಸಿತು ಎಂಬುದು ಇರಾನ್ ವಾದ. ಆದರೆ, ಇರಾನ್‌ ಮೇಲೆ ಅಮೆರಿಕ ಆರ್ಥಿಕ ನಿರ್ಬಂಧ ಹೇರಿದ್ದನ್ನು ನೆನಪಿಸಿರುವ ಭಾರತ, ಇರಾನ್‌ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ವಾದಿಸಿದೆ. ಭಾರತವನ್ನು ಯೋಜನೆಯಿಂದ ಕೈಬಿಟ್ಟಿಲ್ಲ ಎಂದು ಇರಾನ್ ಸ್ಪಷ್ಟನೆ ನೀಡಿದೆ. ಅಮೆರಿಕದಿಂದ ಆರ್ಥಿಕ ದಿಗ್ಬಂಧನಕ್ಕೆ ಒಳಗಾಗಿದ್ದ ಇರಾನ್, ಕೇವಲ ರೈಲ್ವೆ ಯೋಜನೆಯೊಂದಕ್ಕೆ ಇಷ್ಟು ಹಣವನ್ನು ವೆಚ್ಚ ಮಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಚೀನಾ–ಇರಾನ್ ದೀರ್ಘಾವಧಿಯ ಆರ್ಥಿಕ–ಸೇನಾ ಸಹಭಾಗಿತ್ವವೇ ಇದಕ್ಕಿರುವ ಕಾರಣ ಎನ್ನಲಾಗುತ್ತಿದೆ. ಒಂದುವೇಳೆ ಈ ಒಪ್ಪಂದ ಕಾರ್ಯರೂಪಕ್ಕೆ ಬಂದರೆ,ಪಶ್ಚಿಮ ಏಷ್ಯಾ ಪ್ರದೇಶದ ಭೌಗೋಳಿಕ ರಾಜಕೀಯ ಮತ್ತು ಕಾರ್ಯತಂತ್ರದ ಚಿತ್ರಣವೇ ಸಂಪೂರ್ಣ ಬದಲಾಗಲಿದೆ.

ಭಾರತದ ವಜ್ರಗಳ ಕಂಠೀಹಾರ
ಚೀನಾದ ‘ಮುತ್ತಿನಹಾರ’ಕ್ಕೆ ಪ್ರತಿಯಾಗಿ ಭಾರತ ರೂಪಿಸಿದ ಯೋಜನೆಯೇ ವಜ್ರಗಳ ಕಂಠೀಹಾರ (Necklace of Diamonds). ಚೀನಾದ ಸುತ್ತಲಿನ ದೇಶಗಳ ಜತೆ ಮಿಲಿಟರಿ ಸಹಭಾಗಿತ್ವದ ಸಾಧಿಸಿದ ಜಾಲವಿದು. ಇರಾನ್‌, ಸಿಷೆಲ್ಸ್‌, ಇಂಡೋನೇಷ್ಯಾ, ಸಿಂಗಪುರ, ವಿಯಟ್ನಾಂ, ಜಪಾನ್‌, ಮಂಗೋಲಿಯಾದ ನೆರವು ಪಡೆದು ಈ ಜಾಲವನ್ನು ರೂಪಿಸಲಾಗಿದೆ. ಇರಾನ್‌ನಲ್ಲಿ ಬಂದರು ಅಭಿವೃದ್ಧಿಪಡಿಸಿದ್ದಲ್ಲದೆ, ಉಳಿದೆಡೆ ಮಿತ್ರರಾಷ್ಟ್ರಗಳ ಬಂದರು ಬಳಕೆಗೆ ಅವಕಾಶ ಮಾಡಿಕೊಳ್ಳಲಾಗಿದೆ.

Podcast: ಇದನ್ನು ಕೇಳಲು ಇಲ್ಲಿ ಕ್ಲಿಕ್‌ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT