ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | FDI ಕಡಿವಾಣ, ಭಾರತದ ಮೇಲೆ ಚೀನಾ ಕೆಂಡ ಕಾರಲು ಇಲ್ಲಿದೆ ಕಾರಣ

Last Updated 21 ಏಪ್ರಿಲ್ 2020, 1:44 IST
ಅಕ್ಷರ ಗಾತ್ರ

ಜೈಷ್–ಎ– ಮೊಹಮ್ಮದ್‌ ಉಗ್ರ ಸಂಘಟನೆಯ ನಾಯಕ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತದ ಪ್ರಸ್ತಾವಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ತಡೆಯೊಡ್ಡಿದ್ದ ಬೆನ್ನಲ್ಲೇ ಆ ದೇಶದ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿತ್ತು. ಬಳಿಕ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವಂತೆ ಮಾಡುವಲ್ಲಿ ಭಾರತ ಯಶಸ್ವಿಯಾಗಿದ್ದೇನೋ ನಿಜ. ಆದರೆ, ಅದಕ್ಕೆ ತಡೆಯೊಡ್ಡಿದ್ದ ಚೀನಾ ವಿರುದ್ಧ ಭಾರತದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಭಾರತದಲ್ಲಿ ತಮ್ಮ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಅಭಿಯಾನ ಸಾಮಾಜಿಕ ಮಾಧ್ಯಮಗಳಲ್ಲಿ ಶುರುವಾಗಿದೆ ಎಂಬ ವಿಷಯ ತಿಳಿದ ಚೀನಾ ಆ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಅಂತಹ ಅಭಿಯಾನಗಳು ದ್ವಿಪಕ್ಷೀಯ ಬಾಂಧವ್ಯದ ಮೇಲೆ ಪರಿಣಾಮ ಬೀರುತ್ತವೆ, ಅವುಗಳನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಭಾರತದ ಮೇಲೆ ಒತ್ತಡವನ್ನೂ ಹೇರಿತ್ತು. ಯಾಕೆಂದರೆ ಚೀನಾ ಕಂಪನಿಗಳ ಉತ್ಪನ್ನಗಳಿಗೆ ಭಾರತವೇ ಅತಿ ದೊಡ್ಡ ಮಾರುಕಟ್ಟೆ.

ಅದೇ ರೀತಿ ಭಾರತದಲ್ಲಿ ಹೂಡಿಕೆ ಮಾಡುವ ವಿಚಾರದಲ್ಲಿಯೂ ಚೀನಾ ಮುಂದಿದೆ. ಇಲ್ಲಿನ ಅನೇಕ ಕಂಪನಿಗಳಲ್ಲಿ ಚೀನಾದ ಉದ್ಯಮಿಗಳು ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ನಿಯಮವನ್ನು ಭಾರತ ಬಿಗಿಗೊಳಿಸಿರುವುದು ಸಹಜವಾಗಿಯೇ ಚೀನಾದ ಕೆಂಗಣ್ಣಿಗೆ ಗುರಿಯಾಗಿದೆ.

ಅಸಮಾಧಾನ ವ್ಯಕ್ತಪಡಿಸಿದ ಚೀನಾ

ಭಾರತವು ಎಫ್‌ಡಿಐ ನಿಯಮಗಳನ್ನು ಬಿಗಿಗೊಳಿಸಿದ್ದು ವಿಶ್ವ ವ್ಯಾಪಾರ ಒಕ್ಕೂಟದ ತಾರತಮ್ಯ ರಹಿತ, ಮುಕ್ತ ಮತ್ತು ನ್ಯಾಯೋಚಿತ ವ್ಯಾಪಾರದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಚೀನಾ ಹೇಳಿದೆ. ಚೀನಾದ ಹೂಡಿಕೆದಾರರ ಮೇಲೆ ಭಾರತದ ಈ ನೀತಿ ಪರಿಣಾಮ ಬೀರುವುದು ಸ್ಪಷ್ಟ. ಭಾರತವು ಈ 'ತಾರತಮ್ಯದ ನಿಯಮಗಳನ್ನು' ಪರಿಷ್ಕರಿಸುವುದಾಗಿ ಆಶಿಸುತ್ತೇವೆ ಎಂದೂ ನೆರೆ ರಾಷ್ಟ್ರ ಹೇಳಿದೆ.

ಭಾರತ ಎಫ್‌ಡಿಐ ನಿಯಮ ಬಿಗಿಗೊಳಿಸಿದ್ದೇಕೆ?

2017ರಲ್ಲಿ ವಿದೇಶಿ ಬಂಡವಾಳ ಆಕರ್ಷಿಸಲು ಎಫ್‌ಡಿಐ ನಿಯಮ ಸರಳಗೊಳಿಸಲಾಗಿತ್ತು. ಈ ವ್ಯವಸ್ಥೆಯಡಿ ಎಫ್‌ಡಿಐಗೆ ಕೇಂದ್ರ ಸರ್ಕಾರ ಮತ್ತು ರಿಸರ್ವ್‌ ಬ್ಯಾಂಕ್ ಆಫ್‌ ಇಂಡಿಯಾದ (ಆರ್‌ಬಿಐ) ಪೂರ್ವಾನುಮತಿ ಬೇಕಾಗಿರಲಿಲ್ಲ. ಈಗ ಈ ನಿಯಮದಲ್ಲಿ ಬದಲಾವಣೆ ತಂದು, ಕೇಂದ್ರದ ಅನುಮತಿ ಕಡ್ಡಾಯಗೊಳಿಸಲಾಗಿದೆ.

ಕೊರೊನಾ ವೈರಸ್ (ಕೋವಿಡ್‌–19) ಸಾಂಕ್ರಾಮಿಕವು ಸೃಷ್ಟಿಸಿರುವ ಬಿಕ್ಕಟ್ಟಿನ ಸಂದರ್ಭದ ದುರ್ಲಾಭವನ್ನು ವಿದೇಶಿ ಕಂಪನಿಗಳು ಪಡೆಯದೇ ಇರಲಿ ಎಂಬ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಪರಿಣಾಮವಾಗಿ ಭಾರತದ ಜೊತೆ ಗಡಿ ಹಂಚಿಕೊಂಡಿರುವ ದೇಶಗಳ ಕಂಪನಿಗಳು, ಈ ಮೊದಲಿನಂತೆ ಸುಲಭವಾಗಿ ಬಂಡವಾಳ ಹೂಡಿಕೆ ಮಾಡಲು ಸಾಧ್ಯವಾಗಲಾರದು. ನೆರೆಯ ದೇಶಗಳ ಕಂಪನಿಗಳು ಪ್ರತ್ಯಕ್ಷ ಇಲ್ಲವೇ ಪರೋಕ್ಷ ರೀತಿಯಲ್ಲಿ ಬಂಡವಾಳ ತೊಡಗಿಸುವುದಕ್ಕೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಕಡ್ಡಾಯವಾಗಲಿದೆ.

ಇಷ್ಟೇ ಅಲ್ಲದೆ, ಭಾರತದ ಕಂಪನಿಯೊಂದರ ಮಾಲೀಕತ್ವವನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಎಫ್‌ಡಿಐ ಮೂಲಕ ಈಗ ಮತ್ತು ಭವಿಷ್ಯದಲ್ಲಿ ವರ್ಗಾವಣೆ ಮಾಡಲು ಸರ್ಕಾರದ ಅನುಮೋದನೆ ಪಡೆಯಲೇಬೇಕು. ಹೀಗಾಗಿ ಚೀನಾ ಸೇರಿದಂತೆ, ಭಾರತದ ಜೊತೆ ಗಡಿಗಳನ್ನು ಹಂಚಿಕೊಂಡಿರುವ ದೇಶಗಳ ಹೂಡಿಕೆದಾರರು ಭಾರತದ ಕಂಪನಿಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಸುಲಭಕ್ಕೆ ಸಾಧ್ಯವಾಗುವುದಿಲ್ಲ.

ಚೀನಾವನ್ನು ಗಮನದಲ್ಲಿಟ್ಟುಕೊಂಡೇ ಕ್ರಮ?

ಕೊರೊನಾದಿಂದಾಗಿ ದೇಶದ ಅರ್ಥವ್ಯವಸ್ಥೆಗೆ ಹೊಡೆತ ಬಿದ್ದಿದೆ. ಷೇರು ಮಾರುಕಟ್ಟೆಯೂ ಕುಸಿದಿದೆ. ಹಲವು ಕಂಪನಿಗಳ ಷೇರು ಮೌಲ್ಯದಲ್ಲಿ ಭಾರಿ ಇಳಿಕೆಯಾಗಿದೆ. ಇಂತಹ ಸಂದರ್ಭದಲ್ಲಿ, ಚೀನಾದ ಬಂಡವಾಳಗಾರರು ಭಾರತದ ಕಂಪನಿಗಳಲ್ಲಿ ಹೂಡಿಕೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಕೆಲವು ತಜ್ಞರು ವಿಶ್ಲೇಷಿಸಿದ್ದರು. ಚೀನಾವನ್ನು ಗಮನದಲ್ಲಿಟ್ಟುಕೊಂಡೇ ಎಫ್‌ಡಿಐ ನಿಯಮ ಬಿಗಿಗೊಳಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದು ಚೀನಾದ ಅಸಮಾಧಾನಕ್ಕೆ ಪ್ರಮುಖ ಕಾರಣ.

ಚೀನಾ ಹೂಡಿಕೆ ಬೆನ್ನಲ್ಲೇ ಕ್ರಮ

ಪೀಪಲ್ಸ್‌ ಬ್ಯಾಂಕ್‌ ಆಫ್‌ ಚೀನಾವು ಎಚ್‌ಡಿಎಫ್‌ಸಿಯಲ್ಲಿ ತನ್ನ ಪಾಲು ಬಂಡವಾಳವನ್ನು ಶೇ 0.8ರಿಂದ ಶೇ 1.01ಕ್ಕೆ ಇತ್ತೀಚೆಗೆ ಹೆಚ್ಚಿಸಿತ್ತು. ಇದರ ಬೆನ್ನಲ್ಲೇ ಭಾರತವು ಎಫ್‌ಡಿಐ ನಿಯಮ ಬಿಗಿಗೊಳಿಸಿದ್ದು ಚೀನಾಕ್ಕೆ ಅಸಹನೆಯುಂಟು ಮಾಡಿದೆ.

ಪರೋಕ್ಷವಾಗಿ ಚೀನಾವನ್ನು ಹೆಸರಿಸಿತ್ತೇ ಭಾರತ?

ಎಫ್‌ಡಿಐ ನಿಯಮಗಳನ್ನು ಬಿಗಿಗೊಳಿಸುವ ವೇಳೆ ಯಾವುದೇ ದೇಶದ ಹೆಸರನ್ನು ಭಾರತ ನೇರವಾಗಿ ಉಲ್ಲೇಖಿಸಿಲ್ಲ. ಆದಾಗ್ಯೂ, ‘ಅವಕಾಶವಾದಿ ಸ್ವಾಧೀನಪಡಿಸಿಕೊಳ್ಳುವಿಕೆ’ಯನ್ನು ನಿಯಂತ್ರಿಸುವ ಸಲುವಾಗಿ ಎಫ್‌ಡಿಐ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಹೇಳಿತ್ತು. ಎಚ್‌ಡಿಎಫ್‌ಸಿಯಲ್ಲಿ ಪೀಪಲ್ಸ್‌ ಬ್ಯಾಂಕ್‌ ಆಫ್‌ ಚೀನಾ ಹೂಡಿಕೆ ಹೆಚ್ಚಿಸಿದ ಬೆನ್ನಲ್ಲೇ ಭಾರತವು ನಿಯಮ ಬಿಗಿಗೊಳಿಸಿದ್ದು ಮತ್ತು ‘ಅವಕಾಶವಾದಿ ಸ್ವಾಧೀನಪಡಿಸಿಕೊಳ್ಳುವಿಕೆ’ ನಿಯಂತ್ರಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದು ಚೀನಾದ ಕೋಪಕ್ಕೆ ಕಾರಣವಾಗಿದೆ.

ಭಾರತದಲ್ಲಿ ಚೀನಾ ಹೂಡಿಕೆ

2014ರಿಂದ ಈಚೆಗೆ ದೇಶಿ ಉದ್ದಿಮೆಯಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಲೇ ಸಾಗಿದೆ. 2017ರಲ್ಲಿ ಎಫ್‌ಡಿಐ ನಿಯಮ ಸಡಿಲಿಸಿದ ಬಳಿಕ ಇದು ಮತ್ತೂ ಹೆಚ್ಚಾಗಿದೆ. ಭಾರತದ ಸ್ಟಾರ್ಟ್ಅಪ್‌ಗಳಲ್ಲಿ ಚೀನಾದ ಕಂಪನಿಗಳು ಈಗಾಗಲೇ ₹30 ಸಾವಿರ ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡಿವೆ. ವಾರ್ಷಿಕ ₹7,500 ಕೋಟಿ ವಹಿವಾಟು ನಡೆಸುವ ಭಾರತದ 30 ಸ್ಟಾರ್ಟ್ಅಪ್‌ಗಳ ಪೈಕಿ 18ರಲ್ಲಿ ಚೀನಾ ಕಂಪನಿಗಳ ಹೂಡಿಕೆ ಇದೆ. ಚೀನಾದ ಪ್ರಮುಖ ಕಂಪನಿಗಳಾದ ಅಲಿಬಾಬಾ ಮತ್ತು ಟೆನ್ಸೆಂಟ್‌ ಕೂಡ ಭಾರತದ 92 ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿವೆ. ಈಗ ಎಫ್‌ಡಿಐ ನಿಯಮ ಬಿಗಿಗೊಳಿಸಿರುವುದರಿಂದ ಇನ್ನು ಮುಂದೆ ಸುಲಭವಾಗಿ ಹೂಡಿಕೆ ಮಾಡಲು ಚೀನಾ ಕಂಪನಿಗಳಿಗೆ ಸಾಧ್ಯವಾಗದು.

ಚೀನಾ ವಿರುದ್ಧ ಹೆಚ್ಚುತ್ತಿರುವ ಜಾಗತಿಕ ಆಕ್ರೋಶ

ಕೊರೊನಾ ವೈರಸ್‌ ಸೋಂಕು ವಿಶ್ವವನ್ನೇ ತತ್ತರಿಸುವಂತೆ ಮಾಡಿರುವ ಈ ಸಂದರ್ಭದಲ್ಲಿ ಚೀನಾ ವಿರುದ್ಧ ಜಾಗತಿಕ ಆಕ್ರೋಶವೂ ಹೆಚ್ಚಾಗುತ್ತಿದೆ. ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಚೀನಾವು ಆರಂಭದಲ್ಲೇ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತೂ ಬಹಿರಂಗವಾಗಿಯೇ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಸ್‌ ಇತರ ದೇಶಗಳಿಗೆ ಹಬ್ಬುವಲ್ಲಿ ಚೀನಾದ ಪಾತ್ರ ಇದೆ ಎಂದಾದಲ್ಲಿ ಆ ದೇಶವು ತಕ್ಕ ಪರಿಣಾಮ ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಒಂದು ಹಂತದಲ್ಲಿ, ಕೊರೊನಾ ಕುರಿತಾದ ಅಮೆರಿಕದ ಆರೋಪಗಳಿಗೆ ತಿರುಗೇಟು ನೀಡಲು ಭಾರತದ ಸಹಾಯವನ್ನೂ ಚೀನಾ ಕೋರಿತ್ತು. ಆದರೆ, ಆ ವಿಚಾರವಾಗಿ ಭಾರತ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಜಿ20 ಶೃಂಗಸಭೆ ಸಂದರ್ಭದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಜತೆ ಮಾತುಕತೆ ನಡೆಸಿದ್ದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಈ ವಿಚಾರ ಪ್ರಸ್ತಾಪಿಸಿದ್ದರು. ಭಾರತ ಮಾತ್ರ ದ್ವಿಪಕ್ಷೀಯ ವಿಚಾರಗಳಿಗಷ್ಟೇ ಹೆಚ್ಚು ಒತ್ತು ನೀಡಿತ್ತು. ಈ ಎಲ್ಲ ಬೆಳವಣಿಗೆಗಳು ಭಾರತದ ಮೇಲಿನ ಚೀನಾದ ಕ್ರೋಧವನ್ನು ಹೆಚ್ಚಿಸಿರುವ ಸಾಧ್ಯತೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT