ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ‘ಯುನಾನ್‌ ಗನ್‌’ ಸದ್ದಿನ ಜಾಡು ಹಿಡಿದು...

Last Updated 21 ಜುಲೈ 2020, 20:26 IST
ಅಕ್ಷರ ಗಾತ್ರ

ಚೀನಾದಲ್ಲಿ ತಯಾರಿಸಲಾದ ಮತ್ತು ಮ್ಯಾನ್ಮಾರ್‌ಗೆ ಕಳ್ಳಸಾಗಣೆ ಆಗುತ್ತಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಥಾಯ್ಲೆಂಡ್‌ ಸೇನೆಯು ಇತ್ತೀಚೆಗೆ ವಶಪಡಿಸಿಕೊಂಡಿದೆ. ಈ ಶಸ್ತ್ರಾಸ್ತ್ರಗಳನ್ನು ಮ್ಯಾನ್ಮಾರ್‌ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತೆ ಎಂಬ ವಿಷಯವಾಗಿ ವಿವರಗಳನ್ನು ಕಲೆ ಹಾಕಲಾಗುತ್ತಿದೆ. ಈಶಾನ್ಯ ಭಾರತದಲ್ಲಿ ಮತ್ತೆ ಗಲಭೆ ಸೃಷ್ಟಿಸಲು ಸಂಚು ನಡೆದಿರುವ ಕುರಿತೂ ಸಂಶಯ ವ್ಯಕ್ತವಾಗಿದೆ. ಹಾಗೆಯೇ ಕಳ್ಳಸಾಗಣೆಯ ಇದುವರೆಗಿನ ಕಥೆಗಳು ಸುರುಳಿ, ಸುರುಳಿಯಾಗಿ ಬಿಚ್ಚಿಕೊಳ್ಳುತ್ತಿವೆ...

ಹಿಮದಿಂದ ಆವೃತವಾದ ಪರ್ವತಗಳು, ಭತ್ತದ ತಾರಸಿಗಳು, ವಿಶಾಲವಾದ ಸರೋವರಗಳು, ಆಳವಾದ ಕಮರಿಗಳನ್ನು ಒಳಗೊಂಡ ಚೀನಾದ ವೈವಿಧ್ಯಮಯ ಪ್ರಾಂತ್ಯ ಯುನಾನ್‌. ಇದು ಆಲ್ಯುಮಿನಿಯಂ, ಸತು, ಸೀಸ, ತಾಮ್ರ, ನಿಕೆಲ್‌ ಮೊದಲಾದ ಲೋಹಗಳ ‘ಬಟ್ಟಲು’ ಕೂಡ ಹೌದು. ದೇವಾಲಯಗಳ ಸಂಖ್ಯೆಯೂ ಇಲ್ಲಿ ಅಧಿಕ. ಅಷ್ಟೇ ಏಕೆ, ಚೀನಾದ ಬಹುತೇಕ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗಳು ಸಹ ಬೀಡುಬಿಟ್ಟಿರುವುದು ಇಲ್ಲಿಯೇ. ಹೌದು, ಈ ಕಾರ್ಖಾನೆಗಳಿಂದ ಮ್ಯಾನ್ಮಾರ್‌ ಹಾಗೂ ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮೂಲಕ ಹೋದ ಶಸ್ತ್ರಾಸ್ತ್ರಗಳಿಗೆ ಲೆಕ್ಕವಿಲ್ಲ.

ಬಂಡುಕೋರರು, ಮಾವೋವಾದಿಗಳು, ಉಗ್ರರು ಹಾಗೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಕ್ರಿಮಿನಲ್‌ಗಳ ಕೈಗಳಲ್ಲಿ ಶಸ್ತ್ರಾಸ್ತ್ರಗಳು ಸಿಗುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಹಲವು ಪ್ರಕರಣಗಳ ಜಾಡನ್ನು ಹಿಡಿದು ಗುಪ್ತಚರ ತಂಡಗಳು ಹೋದಾಗ ಜಾಡಿನ ಮೂಲ ಇರುವುದು ಯುನಾನ್‌ ಪ್ರಾಂತ್ಯದಲ್ಲಿ ಎಂಬುದು ಪತ್ತೆಯಾಗಿದೆ. ಈಶಾನ್ಯ ರಾಜ್ಯಗಳ ಬಂಡುಕೋರರು ಬಳಸಿದ ಶಸ್ತ್ರಾಸ್ತ್ರಗಳ ಮೂಲವೂ ಅದೇ ಪ್ರಾಂತ್ಯ‌ ಎನ್ನುವುದು ತನಿಖೆಗಳಿಂದ ದೃಢಪಟ್ಟಿದೆ. ಭೌಗೋಳಿಕವಾಗಿ ಆಯಕಟ್ಟಿನ ಜಾಗದಲ್ಲಿರುವ ಹಿಮಾಲಯ ತಪ್ಪಲಿನ ಯುನಾನ್‌ ಪ್ರಾಂತ್ಯ, ಮ್ಯಾನ್ಮಾರ್‌, ಲಾವೊಸ್‌ ಮತ್ತು ವಿಯೆಟ್ನಾಂ ದೇಶಗಳ ಜತೆ ಗಡಿಯನ್ನು ಹಂಚಿಕೊಂಡಿದೆ.

ಅಫ್ಗಾನಿಸ್ತಾನ–ಪಾಕಿಸ್ತಾನ ಪ್ರದೇಶವನ್ನು ಪ್ರಪಂಚದ ಶಸ್ತ್ರಾಸ್ತ್ರ ಕಳ್ಳಸಾಗಣೆಯ ಪ್ರಧಾನ ಕೇಂದ್ರ ಎಂದೇ ಪರಿಗಣಿಸಲಾಗಿದೆ. ಜಗತ್ತಿನ ಅತಿದೊಡ್ಡ ಅಪೀಮು ಬೆಳೆಯುವ ಕಾರಿಡಾರ್‌ ಎನಿಸಿದ ‘ಗೋಲ್ಡನ್‌ ಟ್ರಯಾಂಗಲ್‌’ ಮತ್ತು ‘ಗೋಲ್ಡನ್‌ ಕ್ರೆಸೆಂಟ್‌’ ಪ್ರದೇಶಗಳು ಇದೇ ಭಾಗದಲ್ಲಿವೆ. ಜಮ್ಮು–ಕಾಶ್ಮೀರ ವಲಯದಲ್ಲಿ ಉಗ್ರರ ಕೈಗಳಿಗೆ ಶಸ್ತ್ರಾಸ್ತ್ರ ಸಿಗುತ್ತಿರುವುದು ಈ ಕಾರಿಡಾರ್‌ ಮೂಲಕವೇ ಎಂದು ಭಾರತೀಯ ಸೇನೆ ಹಿಂದಿನಿಂದಲೂ ದೂರುತ್ತಲೇ ಬಂದಿದೆ. ನೇಪಾಳದ ಮೂಲಕವೂ ದೇಶದೊಳಗೆ ಕಳ್ಳಸಾಗಣೆ ಮೂಲಕ ಶಸ್ತ್ರಾಸ್ತ್ರಗಳು ಬರುತ್ತಿರುವ ಮಾಹಿತಿ ಕೇವಲ ಊಹಾಪೋಹವೇನಲ್ಲ. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಗಡಿಯೊಳಗೆ ನುಸುಳಿಕೊಂಡು ಬರುತ್ತಿರುವುದು ಮಾತ್ರ ಯುನಾನ್‌ ಪ್ರಾಂತ್ಯದಿಂದ – ಅದೂ ಮ್ಯಾನ್ಮಾರ್‌ನ ಅರಣ್ಯ ಪ್ರದೇಶದ‌ ಮೂಲಕ! ಸುತ್ತಿ ಬಳಸಿಕೊಂಡು ಸಮುದ್ರದ ಮಾರ್ಗದಲ್ಲಿ ಬಾಂಗ್ಲಾದೇಶದ ಕಾಕ್ಸ್‌ ಬಜಾರ್‌ ಮತ್ತು ಚಿತ್ತಗಾಂಗ್‌ ಮೂಲಕವೂ ಭಾರತದ ಈಶಾನ್ಯ ರಾಜ್ಯಗಳಿಗೆ ಶಸ್ತ್ರಾಸ್ತ್ರಗಳು ತೂರಿಬರುತ್ತಿವೆ.

ಸ್ವಾತಂತ್ರ್ಯ ಸಿಕ್ಕ ಹೊಸತರಲ್ಲಿಯೇ, ಅಂದರೆ 1950ರ ದಶಕದಲ್ಲಿ, ಈಶಾನ್ಯ ಭಾರತದಲ್ಲಿ ಬಂಡುಕೋರರ ಹಾವಳಿಯೂ ಶುರುವಾಯಿತು. ದೇಶದ ವಿರುದ್ಧ ದಂಗೆ ಏಳಲು ಅವರಿಗೆ ಆಗ ಬೆಂಬಲ ಸಿಕ್ಕಿದ್ದು ಪಾಕಿಸ್ತಾನದ ಸೇನೆಯಿಂದ. ನಾಗಾ ಬಂಡುಕೋರರ ಕೈಗಳಿಗೆ ರೈಫಲ್‌ಗಳು, ಮೆಷಿನ್‌ ಗನ್‌ಗಳು, ಫಿರಂಗಿಗಳನ್ನು ಕೊಟ್ಟಿದ್ದಲ್ಲದೆ ಅವರಿಗೆ ಮಿಲಿಟರಿ ತರಬೇತಿಯನ್ನೂ ನೀಡಿತು ಪಾಕ್‌ ಸೇನೆ. ನಾಗಾ ಬಂಡುಕೋರರಿಗೆ ಸಿಕ್ಕ ಈ ಶಸ್ತ್ರಾಸ್ತ್ರಗಳು ಯುನಾನ್‌ನಿಂದ ಮ್ಯಾನ್ಮಾರ್‌ ಹಾಗೂ ಬಾಂಗ್ಲಾದೇಶದ ಮೂಲಕ ಈಶಾನ್ಯ ಭಾರತವನ್ನು ತಲುಪಿದ್ದವು ಎಂದು ರಕ್ಷಣಾ ಕ್ಷೇತ್ರದ ತಜ್ಞರು ವಿವರಿಸುತ್ತಾರೆ.

ಭಾರತವು ಮ್ಯಾನ್ಮಾರ್‌ನೊಂದಿಗೆ 1,600 ಕಿ.ಮೀ. ಹಾಗೂ ಬಾಂಗ್ಲಾದೇಶದ ಜತೆಗೆ 4,000 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿದೆ. ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌ ಮತ್ತು ತ್ರಿಪುರಾ ರಾಜ್ಯಗಳು ಈ ಗಡಿಗಳ ಗುಂಟ ಪಸರಿಸಿವೆ. ಕಡಿದಾದ ಪರ್ವತಗಳ ಶ್ರೇಣಿ, ದಟ್ಟ ಅರಣ್ಯ, ಹಲವೆಡೆ ಇಲ್ಲದ ಗಡಿಬೇಲಿ, ಹೆಚ್ಚಾಗಿದ್ದ ವಲಸೆ –ಇವೇ ಮೊದಲಾದ ಕಾರಣಗಳಿಂದ ಈ ಭಾಗದಲ್ಲಿ ಭದ್ರತಾ ವ್ಯವಸ್ಥೆ ಶಿಥಿಲವಾಗಿತ್ತು. ಕಳ್ಳಸಾಗಣೆಗೆ ಇದರಿಂದ ದಾರಿ ಸುಲಭವಾಗಿತ್ತು. ಗಡಿ ಭಾಗದ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸುವ ಕೆಲಸಗಳು ಕಳೆದ ದಶಕದಿಂದ ನಡೆಯುತ್ತಿವೆ.

ಕಳ್ಳಸಾಗಣೆ ಮಾಡುವವರು ಯಾರು?: ಮ್ಯಾನ್ಮಾರದ ಕೇರನ್‌ ನ್ಯಾಷನಲ್‌ ಯೂನಿಯನ್‌ (ಕೆಎನ್‌ಯು), ಕಚಿನ್‌ ಇಂಡಿಪೆಂಡೆನ್ಸ್‌ ಆರ್ಮಿ (ಕೆಐಎ), ಯುನೈಟೆಡ್‌ ವಾ ಸ್ಟೇಟ್‌ ಆರ್ಮಿ (ಯುಡಬ್ಲ್ಯುಎಸ್‌ಎ) ಹಾಗೂ ಪಾಕಿಸ್ತಾನದ ಐಎಸ್‌ಐ ಸಂಘಟನೆಗಳು ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡುವಲ್ಲಿ ನೆರವಾಗುತ್ತಿವೆ ಎಂದು ಹೇಳಲಾಗಿದೆ. ಭಾರತೀಯ ಸೇನೆ ಗಡಿ ಭಾಗದಲ್ಲಿ ವಶಪಡಿಸಿಕೊಂಡ ಬಹುತೇಕ ಅಕ್ರಮ ಶಸ್ತ್ರಾಸ್ತ್ರಗಳ ಮೂಲ ಚೀನಾ ಎಂಬುದು ಬೆಳಕಿಗೆ ಬಂದಿದೆ. ಯುನೈಟೆಡ್‌ ಲಿಬರೇಷನ್‌ ಫ್ರಂಟ್‌ ಆಫ್‌ ಅಸ್ಸಾಂ (ಉಲ್ಫಾ) ಬಂಡುಕೋರರು 2019ರಲ್ಲಿ ಮುಖ್ಯವಾಹಿನಿಗೆ ಬಂದಾಗ ಸರ್ಕಾರಕ್ಕೆ ಒಪ್ಪಿಸಿದ ಶಸ್ತ್ರಾಸ್ತ್ರಗಳ ಮೇಲೂ ಚೀನಾದ ಗುರುತು ಇರುವುದು ಪತ್ತೆಯಾಗಿದೆ.

‘ಚೀನಾ ಹಾಗೂ ಕಾಂಬೋಡಿಯಾ ಮೂಲಕ ಥಾಯ್ಲೆಂಡ್‌ ಬಂದರನ್ನು ಸೇರುತಿದ್ದ ಶಸ್ತ್ರಾಸ್ತ್ರಗಳು, ಅಲ್ಲಿಂದ ಬಾಂಗ್ಲಾದೇಶದ ಕಾಕ್ಸ್‌ ಬಜಾರ್‌ ಮತ್ತು ಚಿತ್ತಗಾಂಗ್‌ ನಗರಗಳ ಮೂಲಕ ಈಶಾನ್ಯ ಭಾರತಕ್ಕೆ ರವಾನೆ ಆಗುತ್ತಿದ್ದವು’ ಎಂದು ಹೇಳುತ್ತಾರೆ ಈಶಾನ್ಯ ರಾಜ್ಯಗಳ ಭದ್ರತಾ ವಿಷಯಗಳ ಮೇಲೆ ಸಂಶೋಧನೆ ನಡೆಸಿರುವ ರಾಜೀವ್‌ ಭಟ್ಟಾಚಾರ್ಯ.

ಶಸ್ತ್ರಾಸ್ತ್ರ ಕಳ್ಳಸಾಗಣೆ ವಿರುದ್ಧ ಭಾರತ–ಮ್ಯಾನ್ಮಾರ್‌ ಸೇನೆಗಳು 1995ರಲ್ಲಿ ‘ಗೋಲ್ಡನ್‌ ಬರ್ಡ್‌’ ಕಾರ್ಯಾಚರಣೆ ನಡೆಸುವವರೆಗೆ ತ್ರಿಪುರಾದ ಸೋನಾಮುರ, ಮೇಘಾಲಯದ ಗಾರೊ ಹಿಲ್ಸ್‌ ಮತ್ತು ಅಸ್ಸಾಂನ ಧುಬ್ರಿ ಪ್ರದೇಶಗಳು ಶಸ್ತ್ರಾಸ್ತ್ರಗಳನ್ನು ದೇಶದೊಳಗೆ ನುಗ್ಗಿಸುವ ಕೇಂದ್ರಗಳಾಗಿದ್ದವು.

ನಾಗಾಲ್ಯಾಂಡ್‌ನ ಫೆಕ್‌, ಚಾಂಡೇಲ್‌, ಮಣಿಪುರದ ಚುರಚಾನ್‌ಪುರ ಮತ್ತು ಮಿಜೋರಾಂನ ಚಂಪಾಯ್‌ ಮೂಲಕವೂ ರೈಫಲ್‌ಗಳು, ಮೆಷಿನ್‌ ಗನ್‌ಗಳು ಯಥೇಚ್ಛ ಪ್ರಮಾಣದಲ್ಲಿ ದೇಶದೊಳಗೆ ನುಗ್ಗಿವೆ. ‘ಗೋಲ್ಡನ್‌ ಟ್ರಯಾಂಗಲ್‌’ನಿಂದಮಾದಕ ವಸ್ತುಗಳು ಸಹ ಕಳ್ಳಸಾಗಣೆ ಮೂಲಕ ಬರುತ್ತಿವೆ. ಮಿಜೋರಾಂ, ದಕ್ಷಿಣ ಏಷ್ಯಾದ ಬಹುದೊಡ್ಡ ಬಂಗಾರ, ಬಂದೂಕು ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆ ಕೇಂದ್ರವಾಗಿದೆ. ಚೀನಾದ ವಲಸಿಗರು ಅಕ್ರಮವಾಗಿ ಇಲ್ಲಿ ನೆಲೆಯೂರಿದ್ದು, ಕಳ್ಳಸಾಗಣೆ ಜಾಲದಲ್ಲಿ ಸಕ್ರಿಯವಾಗಿದ್ದಾರೆ ಎಂದು ಗುಪ್ತಚರ ಮೂಲಗಳು ಹೇಳುತ್ತವೆ.

ಕೇಂದ್ರೀಯ ಕಂದಾಯ ಜಾಗೃತಿ ನಿರ್ದೇಶನಾಲಯವು 2018ರ ಮೇನಲ್ಲಿ ಅಸ್ಸಾಂ ರೈಫಲ್ಸ್‌ ಪಡೆಯೊಂದಿಗೆ ಮಿಜೋರಾಂನಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕಳ್ಳಸಾಗಣೆ ಜಾಲವೊಂದನ್ನು ಪತ್ತೆ ಮಾಡಿತ್ತು. ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿರುವ ಪಶ್ಚಿಮ ಬಂಗಾಳದಲ್ಲೂ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಕಳ್ಳಸಾಗಣೆಯನ್ನು ತಡೆಯಲು ಭಾರತ ಗಡಿ ಭಾಗದಲ್ಲಿ ಗಸ್ತು ಹೆಚ್ಚಿಸುವ ಜತೆಗೆ, ಮ್ಯಾನ್ಮಾರ್‌, ಥಾಯ್ಲೆಂಡ್‌ ದೇಶಗಳ ಸಹಭಾಗಿತ್ವದಲ್ಲಿ ಕಾರ್ಯಾಚರಣೆಯನ್ನೂ ನಡೆಸುತ್ತಿದೆ.

ಅಂಕಿಅಂಶಗಳು

74,877 – ಶಸ್ತ್ರಾಸ್ತ್ರಗಳನ್ನು 2018ರಲ್ಲಿ ವಶಪಡಿಸಿಕೊಳ್ಳಲಾಗಿದೆ

71,135 – ಶಸ್ತ್ರಾಸ್ತ್ರಗಳು ಎಲ್ಲಿ ತಯಾರಾಗಿದ್ದು ಎನ್ನುವುದು ಗೊತ್ತಾಗಿಲ್ಲ (ಕಳ್ಳಸಾಗಣೆ ಮೂಲಕ ಬಂದ ಶಸ್ತ್ರಾಸ್ತ್ರಗಳು ಇವಾಗಿವೆ ಎನ್ನುವುದು ಗುಪ್ತಚರ ದಳ ನೀಡುವ ಮಾಹಿತಿ)

ಚೀನಾ – ಅರಾಕನ್‌ ಆರ್ಮಿ ನಂಟು

ಮ್ಯಾನ್ಮಾರ್‌ನ ಉಗ್ರ ಸಂಘಟನೆ ಅರಾಕನ್‌ ಆರ್ಮಿಯನ್ನು ಪೋಷಣೆ ಮಾಡುತ್ತಿರುವುದು ಸಹ ಚೀನಾ. ಅದರ ಶೇ 95ರಷ್ಟು ವೆಚ್ಚವನ್ನು ಚೀನಾ ನಿಭಾಯಿಸುತ್ತಿದ್ದು, ಎಲ್ಲ ರೀತಿಯ ಆಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ. ಅರಾಕನ್‌ ಆರ್ಮಿ ಬಳಿ ಈಗ ಸುಮಾರು 50 ಖಂಡಾಂತರ ಕ್ಷಿಪಣಿಗಳಿವೆ. ಈ ಉಗ್ರ ಸಂಘಟನೆಯನ್ನು ಚೀನಾ ತನ್ನ ಭೌಗೋಳಿಕ ಸರಹದ್ದನ್ನು ವಿಸ್ತರಿಸಲುಮತ್ತು ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ.

ಅರಾಕನ್‌ ಆರ್ಮಿಯು ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ ಕಳ್ಳಸಾಗಣೆ ಮೂಲಕ ಶಸ್ತ್ರಾಸ್ತ್ರ ಸರಬರಾಜು ಮಾಡಲು ಚೀನಾಕ್ಕೆ ನೆರವು ನೀಡುತ್ತಿದೆ ಎಂದು ಹೇಳಲಾಗಿದೆ. ಈಶಾನ್ಯ ರಾಜ್ಯಗಳ ಬಂಡುಕೋರ ಸಂಘಟನೆಗಳ ಜತೆ ಸರ್ಕಾರ ಶಾಂತಿ ಮಾತುಕತೆ ನಡೆಸುತ್ತಿದ್ದು, ಉಲ್ಫಾ ಉಗ್ರರು ಈಗಾಗಲೇ ಶಸ್ತ್ರತ್ಯಾಗ ಮಾಡಿದ್ದಾರೆ. ಉಳಿದ ಸಂಘಟನೆಗಳನ್ನು ಮುಖ್ಯವಾಹಿನಿಗೆ ತರಲು ನಡೆದಿರುವ ಯತ್ನಗಳನ್ನು ಹಳಿ ತಪ್ಪಿಸುವ ಕೆಲಸ ಯುನಾನ್‌ ಪ್ರಾಂತ್ಯದ ಕಡೆಯಿಂದ ನಡೆಯುತ್ತಿದೆ ಎಂದು ದೂರಲಾಗಿದೆ.

ಆಪರೇಷನ್‌ ಗೋಲ್ಡನ್‌ ಬರ್ಡ್‌

ಭಾರತ–ಮ್ಯಾನ್ಮಾರ್‌ ಮಿಲಿಟರಿ ಪಡೆಗಳು ಜಂಟಿಯಾಗಿ 1995ರ ಏಪ್ರಿಲ್‌–ಮೇ ಅವಧಿಯಲ್ಲಿ ನಡೆಸಿದ ಕಾರ್ಯಾಚರಣೆಯೇ ‘ಆಪರೇಷನ್‌ ಗೋಲ್ಡನ್‌ ಬರ್ಡ್‌’. ಭಾರತದ 57ನೇ ಮೌಂಟನ್‌ ಡಿವಿಷನ್‌ ಪಡೆಯು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ವಯಾಕುಂಗ್‌ ಸಮುದ್ರ ತೀರದಲ್ಲಿ ಕಳ್ಳಸಾಗಣೆ ಮೂಲಕ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಜಮಾವಣೆ ಮಾಡಿ, ಅವುಗಳನ್ನು ಮಿಜೋರಾಂಗೆ ಸಾಗಿಸುವ ಹುನ್ನಾರ ನಡೆದಿತ್ತು. ಮ್ಯಾನ್ಮಾರ್‌–ಬಾಂಗ್ಲಾದೇಶ ಗಡಿಯಲ್ಲಿ ವಯಾಕುಂಗ್‌ ಪ್ರದೇಶವಿದ್ದು, ಚಿತ್ತಗಾಂಗ್‌ ಮತ್ತು ಕಾಕ್ಸ್‌ ಬಜಾರ್‌ ನಗರಗಳಿಗೆ ತುಂಬಾ ಹತ್ತಿರದಲ್ಲಿದೆ. ಅಲ್ಲಿ ಜಮಾವಣೆ ಮಾಡಿದ್ದ ಶಸ್ತ್ರಾಸ್ತ್ರಗಳನ್ನು ಅರಣ್ಯ ಪ್ರದೇಶಗಳ ಮೂಲಕ ಉಗ್ರರು ಮಿಜೋರಾಂಗೆ ಸಾಗಾಟ ಮಾಡುತ್ತಿದ್ದಾಗ ಈ ಕಾರ್ಯಾಚರಣೆ ನಡೆದಿತ್ತು. ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿದ್ದ ಉಗ್ರರನ್ನು ಸಂಪೂರ್ಣ ನಿರ್ನಾಮ ಮಾಡಲಾಗಿತ್ತು.

ಬಿಡಿಭಾಗಗಳ ರೂಪದಲ್ಲಿ ಶಸ್ತ್ರಾಸ್ತ್ರ

ಭಾರತಕ್ಕೆ ನೇರವಾಗಿ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಅಪಾಯ ಅರಿತ ವಂಚಕರು ಕೇವಲ ಬಿಡಿಭಾಗಗಳನ್ನು ಪೂರೈಕೆ ಮಾಡುತ್ತಿದ್ದಾರೆ. ರಾಜಸ್ಥಾನದ ಎರಡು ಕಡೆ ಈ ಬಿಡಿಭಾಗಗಳನ್ನು ಜೋಡಿಸಿ ಬಂದೂಕಿನ ಸ್ವರೂಪ ನೀಡಲಾಗುತ್ತದೆ. ಅಕ್ರಮದ ವಾಸನೆ ಬರದಿರಲಿ ಎಂದು ಡೀಲರ್‌ಗಳು ಅಂಗಡಿಯ ಬಿಲ್‌ ಸಮೇತವೇ ಮತ್ತೊಬ್ಬ ಡೀಲರ್‌ಗೆ ಪಾರ್ಸೆಲ್ ಕಳುಹಿಸುತ್ತಾರೆ. ಇಂಡಿಯನ್ ಆರ್ಮ್‌ ಫ್ಯಾಕ್ಟರಿಯಲ್ಲಿ ತಯಾರಾದ ಉತ್ಪನ್ನಗಳ ರೂಪದಲ್ಲಿ ಅವುಗಳನ್ನು ದೇಶೀ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಗನ್‌ಗಳ ಊರು ಮಂಗನ್‌

ಬಿಹಾರದ ಮಂಗನ್ ಎಂಬ ಗ್ರಾಮ ಪ್ರಸಿದ್ಧವಾಗಿರುವುದು ಶಸ್ತ್ರಾಸ್ತ್ರ ಮಾರುಕಟ್ಟೆಯಿಂದ. ಇಲ್ಲಿ ‘ಸ್ವದೇಶಿ’ ಪಿಸ್ತೂಲುಗಳು ಕಡಿಮೆ ಬೆಲೆಗೆ
ಲಭ್ಯವಾಗುತ್ತವೆ. ರೌಡಿಗಳು ಇವುಗಳನ್ನು ಕೊಂಡೊಯ್ಯುತ್ತಾರೆ. ಊರಿನಲ್ಲಿ ಆರ್ಮ್‌ ಡೀಲರ್‌ಗಳು ಹುಟ್ಟಿಕೊಂಡಿದ್ದಾರೆ. 2,000 ಮನೆಗಳಿರುವ ಈ ಊರಿನಲ್ಲಿ ಪಿಸ್ತೂಲ್ ತಯಾರಿಕೆ, ಬಿಡಿಭಾಗ ಜೋಡಿಸುವಿಕೆ, ರಿಪೇರಿ ಹಾಗೂ ಎಲ್ಲ ರೀತಿಯ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಕಳ್ಳಸಂತೆಯೇ ನಿರ್ಮಾಣವಾಗಿದೆ. ಪಂಜಾಬ್‌, ಉತ್ತರ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳದಲ್ಲೂ ಈ ಜಾಲ ವ್ಯಾಪಕವಾಗಿ ಹರಡಿದೆ ಎಂದು ಗುಪ್ತಚರ ಮೂಲಗಳು ಹೇಳುತ್ತವೆ.

ಬಾಡಿಗೆಗೆ ಸಿಗುತ್ತೆ ಪಿಸ್ತೂಲ್!

ನೆರೆಯ ಪಾಕಿಸ್ತಾನದಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ ಹೆಚ್ಚು ಎನ್ನಲಾಗಿದೆ. ಇಲ್ಲಿ ಪಿಸ್ತೂಲುಗಳನ್ನು ಬಾಡಿಗೆ ನೀಡಲಾಗುತ್ತದೆ. ಸುಮಾರು ₹20 ಸಾವಿರ ಬೆಲೆಬಾಳುವ ಪಿಸ್ತೂಲನ್ನು ಗಂಟೆಗೆ ₹150 ರಂತೆ ಬಾಡಿಗೆ ನೀಡುವ ವ್ಯವಸ್ಥೆಯೂ ಇದೆ ಎಂದು ಡೈಲಿ ಟೈಮ್ಸ್ ಉಲ್ಲೇಖಿಸಿ ವೈಕೆಎ ವೆಬ್‌ಸೈಟ್ ವರದಿ ಮಾಡಿದೆ. ಬಹುತೇಕರು ಮದುವೆಗೆ ಬಾಡಿಗೆಗೆ ಒಯ್ದು ಪ್ರತಿಷ್ಠೆಯ ಸಂಕೇತವಾಗಿ ಬಳಸುವುದು ರೂಢಿ. ಕೆಲವರು ದರೋಡೆಗೆ ಬಳಸುತ್ತಾರೆ.

ಶಸ್ತ್ರಾಸ್ತ್ರ ಅಷ್ಟೇ ಅಲ್ಲ ಬಂಗಾರವೂ ಬರುತ್ತೆ!

ಈಶಾನ್ಯ ರಾಜ್ಯಗಳ ಗಡಿಯಿಂದ ಶಸ್ತ್ರಾಸ್ತ್ರಗಳು ಮಾತ್ರವಲ್ಲ; ಚಿನ್ನ ಹಾಗೂ ಮಾದಕ ವಸ್ತುಗಳು ಸಹ ದೊಡ್ಡ ಪ್ರಮಾಣದಲ್ಲಿ ದೇಶದೊಳಕ್ಕೆ ಕಳ್ಳಸಾಗಣೆ ಆಗುತ್ತಿವೆ. ಪ್ರತಿವರ್ಷ ₹9 ಸಾವಿರ ಕೋಟಿ ಮೌಲ್ಯದ ಚಿನ್ನ ಈ ಗಡಿಯ ಮೂಲಕ ದೇಶವನ್ನು ಪ್ರವೇಶಿಸುತ್ತದೆ ಎಂದು ಅಂದಾಜು ಮಾಡಲಾಗಿದೆ.

- ಆಧಾರ: ನ್ಯಾಷನಲ್‌ ಕ್ರೈಮ್‌ ರೆಕಾರ್ಡ್ಸ್‌ ಬ್ಯುರೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT