ಭಾನುವಾರ, ಆಗಸ್ಟ್ 1, 2021
27 °C
ವಿದೇಶಿ ಪತ್ರಕರ್ತರಿಗೆ ತರಬೇತಿ: ಚೀನಾ ಬಗ್ಗೆ ಒಲವು ಮೂಡಿಸಲು ಯತ್ನ

ಆಳ–ಅಗಲ | ಮಾಧ್ಯಮದ ಮೇಲೆ ‘ಷಿ’ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೀನಾದ ಸುದ್ದಿ ಪತ್ರಿಕೆಗಳು–ಸಂಗ್ರಹ ಚಿತ್ರ

ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು (ಸಿಸಿಪಿ) ದೇಶೀ ಮಾಧ್ಯಮಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುವುದು ಜಗತ್ತಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಆದರೆ ಜಗತ್ತಿನ ಪತ್ರಕರ್ತರ ಮೇಲೆಯೂ ತನ್ನ ಪ್ರಭಾವ ವಿಸ್ತರಿಸಲು ಚೀನಾ ಈಗ ಮುಂದಾಗಿದೆ. 

ಚೀನೀ ಮಾಧ್ಯಮಗಳು ಕಮ್ಯುನಿಸ್ಟ್ ಸರ್ಕಾರದ ಪ್ರಚಾರಕ್ಕಾಗಿಯೇ ಮೀಸಲಾಗಿವೆ. ಗ್ಲೋಬಲ್ ಟೈಮ್ಸ್, ಚೀನಾ ಡೈಲಿ ಮೊದಲಾದ ಬೃಹತ್ ಮಾಧ್ಯಮ ಸಂಸ್ಥೆಗಳ ಮೇಲೆ ಸರ್ಕಾರ ನಿಯಂತ್ರಣ ಸಾಧಿಸಿದೆ. ದಕ್ಷಿಣ ಚೀನಾ ಸಮುದ್ರ ವಿವಾದ, ದೋಕಲಾ ಹಾಗೂ ಕೊರೊನಾ ವೈರಸ್‌ನಂತಹ ಅತ್ಯಂತ ಪ್ರಮುಖ ಸುದ್ದಿಗಳನ್ನು ತನ್ನ ಮೂಗಿನ ನೇರಕ್ಕೆ ತಕ್ಕಂತೆ ಚೀನಾ ಬರೆಸಿಕೊಳ್ಳುತ್ತಿದೆ. ಇದು ದೇಶದೊಳಗಿನ ಮಾಧ್ಯಮಗಳಿಗೆ ಮಾತ್ರ ಸೀಮಿತವಾಗಿಲ್ಲ. ವಿದೇಶದ ಅತ್ಯುತ್ತಮ ಮಾಧ್ಯಮ ಸಂಸ್ಥೆಗಳನ್ನೂ ಚೀನಾ ತನ್ನ ಉದ್ದೇಶ ಈಡೇರಿಸಿಕೊಳ್ಳಲು ಖರೀದಿ ಮಾಡುತ್ತಿದೆ. 2018ರಲ್ಲಿ ಚೀನಾ ಸರ್ಕಾರ ಇದಕ್ಕಾಗಿ ₹45,000 ಕೋಟಿ ವೆಚ್ಚಮಾಡಿದೆ ಎಂದು ‘ದಿ ಪ್ರಿಂಟ್’ ವರದಿ ಮಾಡಿದೆ. 

ವಿದೇಶಿ ಮಾಧ್ಯಮಗಳು ತಮ್ಮ ಕಾರ್ಯಸೂಚಿಗೆ ಸಹಕಾರ ನೀಡಬೇಕು ಎಂಬುದು ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಬಯಕೆ. ಅದು ಅವರ ಜಾಗತಿಕ ಮಹತ್ವಾಕಾಂಕ್ಷೆಯ ಭಾಗವೂ ಹೌದು. ‘ವಿಯಾನ್’ ವರದಿಯ ಪ್ರಕಾರ, ಷಿ ಅವರ ನೀತಿಗಳು, ಸಿದ್ಧಾಂತಗಳನ್ನು ಜಗತ್ತಿನ ಜನರು ಹಾಗೂ ಪತ್ರಕರ್ತರಿಗೆ ಅರ್ಥಮಾಡಿಸುವ (ಬ್ರೈನ್‌ವಾಷ್) ಸಲುವಾಗಿ ‘ಸ್ಟಡಿ ದಿ ಪವರ್‌ಫುಲ್ ನೇಷನ್’ ಎಂಬ ಮೊಬೈಲ್ ಅಪ್ಲಿಕೇಷನ್ ಅನ್ನು ಚೀನಾ ಅಭಿವೃದ್ಧಿಪಡಿಸಿದೆ.

ಫೆಲೋಶಿಪ್ ಕಾರ್ಯಕ್ರಮ: ವಿವಿಧ ದೇಶಗಳಲ್ಲಿ ಚೀನಾ ಪರವಾದ ಬರಹಗಳು ಪ್ರಕಟವಾಗುವಂತೆ ನೋಡಿಕೊಳ್ಳುವುದಕ್ಕಾಗಿ ಏಷ್ಯಾ ಹಾಗೂ ಆಫ್ರಿಕಾದ ಪತ್ರಕರ್ತರಿಗೆ ಚೀನಾ ಫೆಲೋಶಿಪ್  ಕಾರ್ಯಕ್ರಮ ಹಮ್ಮಿಕೊಂಡಿದೆ. 2016ರಿಂದ ಪ್ರತಿವರ್ಷ ಕನಿಷ್ಠ 100 ಪತ್ರಕರ್ತರಿಗೆ ಚೀನಾ ತರಬೇತಿ ನೀಡುತ್ತಾ ಬಂದಿದೆ. ಫೆಲೋಶಿಪ್‌ಗೆ ಆಯ್ಕೆಯಾಗಿ ತರಬೇತಿ ಪಡೆಯುವ ಬಹುತೇಕ ಪತ್ರಕರ್ತರು ಏಷ್ಯಾ ಹಾಗೂ ಆಫ್ರಿಕಾ ಖಂಡದ ಬಡದೇಶಗಳಿಗೆ ಸೇರಿದ್ದಾರೆ ಎಂಬುದು ಆಸಕ್ತಿಕರ ವಿಚಾರ. ಚೀನಾದ ‘ಆರ್ಥಿಕ ವಸಾಹತು’ಗಳು ಎನಿಸಿಕೊಂಡ ದೇಶಗಳಲ್ಲಿ ಈ ಯತ್ನ ನಡೆಯುತ್ತಿದೆ. ಭವಿಷ್ಯದಲ್ಲಿ ಪಾಶ್ಚಿಮಾತ್ಯ ದೇಶಗಳಿಗೂ ಈ ಕಾರ್ಯಕ್ರಮ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.

ಭಾರತ, ಪಾಕಿಸ್ತಾನ, ಬಾಂಗ್ಲಾದೇಶದ ಪ್ರಭಾವಿ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು ಫೆಲೋಶಿಪ್‌ನಲ್ಲಿ ಭಾಗಿಯಾಗಿದ್ದಾರೆ. ಭಾರತದಿಂದ ಕೆಲವು ಮಾಧ್ಯಮ ಸಂಸ್ಥೆಗಳ ಪತ್ರಕರ್ತರು ಅಲ್ಲಿಗೆ ಹೋಗಿ ಬಂದಿದ್ದಾರೆ. 2018ರ ನವೆಂಬರ್‌ನಲ್ಲಿ ‘ಚೀನಾ ಡೈಲಿ’ ಪತ್ರಿಕೆಯ ಬೀಜಿಂಗ್‌ ಆನ್‌ಲೈನ್ ಆವೃತ್ತಿಯಲ್ಲಿ ಪ್ರಕಟವಾಗಿದ್ದ ‘ಪ್ರವಾಸಿ ಪತ್ರಕರ್ತರು ಪ್ರಜ್ವಲಿಸುವ ವರದಿಗಳನ್ನು ನೀಡುತ್ತಾರೆ’ ಎಂಬ ವರದಿಯೊಂದೇ ಇದನ್ನು ಸಮರ್ಥಿಸಲು ಸಾಕು.

ಮೊತ್ತಮೊದಲು ಆಫ್ರಿಕಾದ ಪತ್ರಕರ್ತರಿಗೆ ಈ ಕೋರ್ಸ್‌ ನಡೆಸಲಾಗಿತ್ತು. ಇದರ ಯಶಸ್ಸಿನ ಬಳಿಕ ಏಷ್ಯಾ ದೇಶಗಳ ಪತ್ರಕರ್ತರಿಗೆ ತನ್ನ ಮಾಧ್ಯಮ ನಿಯಂತ್ರಣ ಕಾರ್ಯಕ್ರಮವನ್ನು ಚೀನಾ ವಿಸ್ತರಿಸಿತು. ಪ್ರದೇಶವಾರು ಪತ್ರಕರ್ತರಿಗೆಂದೇ ಪ್ರತ್ಯೇಕ ಕೇಂದ್ರಗಳನ್ನು ತೆರೆಯಿತು. ಚೀನಾ ಆಫ್ರಿಕಾ ಮಾಧ್ಯಮಕೇಂದ್ರ, ಚೀನಾ ದಕ್ಷಿಣ ಏಷ್ಯಾ ಮಾಧ್ಯಮ ಕೇಂದ್ರ, ಚೀನಾ ಆಗ್ನೇಯ ಏಷ್ಯಾ ಮಾಧ್ಯಮ ಕೇಂದ್ರ – ಇವುಗಳಲ್ಲಿ ಕೆಲವು. ಈ ಎಲ್ಲ ಮಾಧ್ಯಮ ಕೇಂದ್ರಗಳನ್ನು ಚೀನಾದ ವಿದೇಶಾಂಗ ಸಚಿವಾಲಯ ಹಾಗೂ ಸಾರ್ವಜನಿಕ ರಾಜತಾಂತ್ರಿಕ ಸಂಘಟನೆ ನಿರ್ವಹಿಸುತ್ತವೆ.

ಇಲ್ಲಿದೆ ನಿದರ್ಶನ: ಹಲವು ದೇಶಗಳಲ್ಲಿ ಚೀನಾದಿಂದ ತರಬೇತಿ ಪಡೆದ ಪತ್ರಕರ್ತರ ಸಂಖ್ಯೆ ಹೆಚ್ಚುತ್ತಿದ್ದು, ವಿದೇಶಿ ಮಾಧ್ಯಮಗಳನ್ನು ನಿಯಂತ್ರಿಸುವ ತನ್ನ ದುರುದ್ದೇಶವನ್ನು ಅದು ಈಡೇರಿಸಿಕೊಂಡಂತೆ ತೋರುತ್ತಿದೆ. 2018ರಲ್ಲಿ ಇದಕ್ಕೊಂದು ನಿದರ್ಶನ ಸಿಕ್ಕಿತು. ಶ್ರೀಲಂಕಾದ ರಾಜಕೀಯದಲ್ಲಿ ಭಾರತದ ಗುಪ್ತಚರ ಸಂಸ್ಥೆ ‘ರಾ’ ಕೈಹಾಕುತ್ತಿದೆ ಎಂಬ ವರದಿಯು ಭಾರತದ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ವರದಿಯನ್ನು ಲಂಕಾ ಅಧ್ಯಕ್ಷರು ಸ್ಪಷ್ಟವಾಗಿ ತಳ್ಳಿಹಾಕಿದರೂ, ಭಾರತ–ಶ್ರೀಲಂಕಾ ಸಂಬಂಧಕ್ಕೆ ಭಾರಿ ಹಾನಿ ಉಂಟಾಯಿತು. ಅದರೆ ಇದರ ನೇರ ಲಾಭ ಪಡೆದಿದ್ದು ಮಾತ್ರ ಚೀನಾ.

ಭಾರತದ ನಾಯಕರು ಚೀನಾಗೆ ಭೇಟಿ ನೀಡಿದಾಗ, ಯಾವ ಮಾಧ್ಯಮ ಸಂಸ್ಥೆಗಳಿಗೆ ಪ್ರವೇಶ ನೀಡಬೇಕು ಎಂದು ಅಲ್ಲಿ ಭಾರತೀಯ ರಾಯಭಾರ ಕಚೇರಿ ನಿರ್ಧರಿಸುತ್ತದೆ. ಆದರೆ ಫೆಲೋಶಿಪ್‌ನಡಿ ಆಯ್ಕೆಯಾದ ಪತ್ರಕರ್ತರು ಚೀನಾ ವಿದೇಶಾಂಗ ಸಚಿವಾಲಯದ ಅನುಮತಿ ಮೇರೆಗೆ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ. ಭಾರತೀಯ ರಾಯಭಾರ ಕಚೇರಿಗೆ ಹಲವು ಬಾರಿ ಇಂತಹ ಅಚ್ಚರಿಗಳು ಎದುರಾಗಿವೆ. ಚೀನಾ ರಾಜತಾಂತ್ರಿಕ ಅಧಿಕಾರಿಯೊಬ್ಬರು ಫೆಲೋಶಿಪ್ ಕಾರ್ಯಕ್ರಮವನ್ನು‌ ಸಮರ್ಥಿಸಿಕೊಂಡಿದ್ದಾರೆ. ‘ಏಷ್ಯಾ ಹಾಗೂ ಆಫ್ರಿಕಾದ ಪತ್ರಕರ್ತರಿಗೆ ಬೆಲ್ಟ್ ಅಂಡ್ ರೋಡ್ ‌ನಂತಹ ಚೀನಾದ ಪ್ರಮುಖ ಯೋಜನೆಗಳ ಬಗ್ಗೆ ಸ್ಪಷ್ಟ ಅರಿವು ಮೂಡಿಸಲು ಇದು ನೆರವಾಗುತ್ತದೆ’ ಎಂಬುದು ಅವರ ಸಮರ್ಥನೆ.

ಐಷಾರಾಮಿ ಬಂಗಲೆವಾಸ, ಪ್ರವಾಸ ಯೋಗ:

ಫೆಲೋಶಿಪ್‌ನಡಿ ಚೀನಾಗೆ ಭೇಟಿ ನೀಡುವ ವಿದೇಶಿ ಪತ್ರಕರ್ತರಿಗೆ ಬೀಜಿಂಗ್‌ನ ‘ಜಿಯಾಂಗುಮೆನ್ ಡಿಪ್ಲೊಮ್ಯಾಟಿಕ್ ಕಾಂಪೌಂಡ್’ ಎಂಬಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್‌ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿ ಎರಡು ಬೆಡ್‌ರೂಮಿನ ಅಪಾರ್ಟ್‌ಮೆಂಟ್‌ನ ವೆಚ್ಚವೇ ₹2.4 ಲಕ್ಷ. ಪ್ರತೀ ಪತ್ರಕರ್ತರಿಗೆ ತಿಂಗಳಿಗೆ ₹50 ಸಾವಿರ ಸ್ಟೈಫಂಡ್ ನೀಡಲಾಗುತ್ತದೆ. ದೇಶದ ವಿವಿಧ ಪ್ರಾಂತ್ಯಗಳಿಗೆ ತಿಂಗಳಿಗೆ ಎರಡು ಬಾರಿ ಪ್ರವಾಸ ಮಾಡುವ ಸೌಲಭ್ಯ ಕಲ್ಪಿಸಲಾಗುತ್ತದೆ.

ಈ ಪತ್ರಕರ್ತರಿಗೆ ಭಾಷಾ ತರಗತಿಗಳನ್ನು ನಡೆಸಲಾಗುತ್ತದೆ. ಕೋರ್ಸ್‌ನ ಅಂತ್ಯದಲ್ಲಿ ಚೀನಾದ ವಿಶ್ವವಿದ್ಯಾಲಯಗಳಿಂದ ಅಂತರರಾಷ್ಟ್ರೀಯ ಸಂಬಂಧ ವಿಷಯದಲ್ಲಿ ಪದವಿ ಪ್ರಮಾಣಪತ್ರಗಳನ್ನು ಒದಗಿಸಲಾಗುತ್ತದೆ. ಈ ಪತ್ರಕರ್ತರಿಗೆ ಚೀನಾ ಸರ್ಕಾರದ ಅಧಿಕಾರಿಗಳು ಹಾಗೂ ಸಚಿವಾಲಯಗಳ ಸಂಪರ್ಕವನ್ನು ದೊರಕಿಸಲಾಗುತ್ತದೆ. ಆದರೆ ಚೀನಾದಲ್ಲಿ ನೆಲೆಸಿರುವ ವಿದೇಶದ ಯಾವೊಬ್ಬ ಪತ್ರಕರ್ತನಿಗೂ ಈ ಸೌಲಭ್ಯ ಸಿಗುವುದಿಲ್ಲ.

ಹಲವು ಪ್ರಶ್ನೆಗಳು

*ಬ್ರಿಟನ್, ಅಮೆರಿಕ ಕೂಡ ಚೀನಾ ರೀತಿಯಲ್ಲಿ ಫೆಲೋಶಿಪ್ ನೀಡುತ್ತಿವೆ. ಆದರೆ ಚೀನಾದ ಉದ್ದೇಶ ಪ್ರಶ್ನಾರ್ಹ

*ಪತ್ರಕರ್ತರ ಆಯ್ಕೆಗೆ ಸ್ಪಷ್ಟ ಪ್ರಕ್ರಿಯೆ ಇಲ್ಲ. ಚೀನಾ ರಾಯಭಾರ ಕಚೇರಿ ನೇರವಾಗಿ ಸಂಪರ್ಕಿಸುತ್ತದೆ

*ಫೆಲೋಶಿಪ್‌ನಲ್ಲಿ ಭಾಗವಹಿಸುವ ಪತ್ರಕರ್ತರು ಚೀನಾ ಸ್ಥಾಪಿತ ಪತ್ರಿಕಾ ಕೇಂದ್ರಗಳ ಮಾನ್ಯತೆ ಪಡೆದಿರುತ್ತಾರೆಯೇ ಹೊರತು ತಮ್ಮ ಮೂಲ ಮಾಧ್ಯಮ ಸಂಸ್ಥೆಯ ಮಾನ್ಯತೆ ಅಗತ್ಯ ಇಲ್ಲ

*ಚೀನಾದಲ್ಲಿ ಅವರು ಪ್ರಕಟಿಸಬೇಕಾದ ವರದಿಗಳು ಸೀಮಿತ ವ್ಯಾಪ್ತಿಯಲ್ಲಿರುತ್ತವೆ. 10 ತಿಂಗಳ ತರಬೇತಿ ಅವಧಿಯಲ್ಲಿ ಸ್ವಂತವಾಗಿ ಯಾವ ವರದಿಯನ್ನೂ ಮಾಡುವಂತಿಲ್ಲ

*ಸೂಕ್ಷ್ಮ ಎನಿಸುವ, ಮಾನವ ಹಕ್ಕುಗಳಿಗೆ ಸಂಬಂಧಿಸಿದ, ಟಿಬೆಟ್‌, ಕ್ಸಿನ್‌ಜಿಯಾಂಗ್‌ಗೆ ಸಂಬಂಧಿಸಿದ ಸುದ್ದಿ ಬರೆಯಲು ಅವಕಾಶವೇ ಇಲ್ಲ

*ಭಾರತದ ಹಲವು ಮಾಧ್ಯಮಗಳು ಚೀನಾದಲ್ಲಿ ತರಬೇತಿ ಪಡೆದ ತಮ್ಮ ಪತ್ರಕರ್ತರ ವರದಿಗಳನ್ನು ಪ್ರಕಟಿಸಿವೆಯಾದರೂ, ಚೀನಾ ಫೆಲೋಶಿಪ್ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ

ಪತ್ರಿಕಾ ಸ್ವಾತಂತ್ರ್ಯ: ಚೀನಾಗೆ 177ನೇ ಸ್ಥಾನ

‘ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌’ ಸಂಸ್ಥೆ ಸಿದ್ಧಪಡಿಸಿರುವ 2020ನೇ ಸಾಲಿನ 180 ರಾಷ್ಟ್ರಗಳ ‘ಜಾಗತಿಕ ಪತ್ರಿಕಾಸ್ವಾತಂತ್ರ್ಯ ಸೂಚ್ಯಂಕ’ದಲ್ಲಿ ಚೀನಾ 177ನೇ ಸ್ಥಾನದಲ್ಲಿದೆ.

ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ತಂತ್ರಜ್ಞಾನವನ್ನು ಗರಿಷ್ಠ ಬಳಕೆ ಮಾಡಿಕೊಂಡು ಜನರ ಹಾಗೂ ಮಾಧ್ಯಮಗಳ ಮೇಲೆ ಕಣ್ಗಾವಲಿಡುವ ಮೂಲಕ ಹಿಡಿತ ಸಾಧಿಸಿದ್ದಾರೆ. ಅಷ್ಟೇ ಅಲ್ಲ ಈ ದಬ್ಬಾಳಿಕೆಯ ‘ಚೀನಾ ಮಾದರಿ’ಯನ್ನು ಅವರು ಇತರ ರಾಷ್ಟ್ರಗಳಿಗೂ ರಫ್ತು ಮಾಡಲು ಮುಂದಾಗಿದ್ದಾರೆ ಎಂದು ಸೂಚ್ಯಂಕ ವರದಿ ಹೇಳಿದೆ.

ಚೀನಾದ ಖಾಸಗಿ ಮಾಧ್ಯಮ ಸಂಸ್ಥೆಗಳೀಗ ಕಮ್ಯುನಿಸ್ಟ್‌ ಪಕ್ಷದ ನಿಯಂತ್ರಣದಲ್ಲಿವೆ. ಚೀನಾಗೆ ಬರುವ ವಿದೇಶಿ ಪತ್ರಕರ್ತರು ಹಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. 100ಕ್ಕೂ ಹೆಚ್ಚು ಪತ್ರಕರ್ತರು ಹಾಗೂ ಬ್ಲಾಗರ್‌ಗಳನ್ನು ಬಂಧಿಸಲಾಗಿದೆ. ಅವರ ಜೀವಕ್ಕೇ ಅಪಾಯವಿದೆ. ನೊಬೆಲ್‌ ಪ್ರಶಸ್ತಿ ಹಾಗೂ ಆರ್‌ಎಸ್‌ಎಫ್‌ ಪತ್ರಿಕಾ ಸ್ವಾತಂತ್ರ್ಯ ಪುರಸ್ಕೃತ ಪತ್ರಕರ್ತ ಲಿಯು ಜಿಯಾಬೊ ಹಾಗೂ ಬ್ಲಾಗರ್‌ ಯಾಂಗ್‌ ತೊಂಗ್ಯಾನ್‌ ಕ್ಯಾನ್ಸರ್‌ಗೆ ಚಿಕಿತ್ಸೆ ಲಭಿಸದೆ ಬಂಧನದಲ್ಲಿದ್ದಾಗಲೇ ಮೃತಪಟ್ಟಿದ್ದಾರೆ (2017ರಲ್ಲಿ).

ಪತ್ರಿಕೆಗಳಲ್ಲಿ ಬಂದ ಸುದ್ದಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯೆ ನೀಡಿದವರನ್ನು ಜೈಲಿಗಟ್ಟ ಬಹುದಾದ ವ್ಯವಸ್ಥೆ ಚೀನಾದಲ್ಲಿ ಇದೆ ಎಂದು ಸಂಸ್ಥೆ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು